- ಕೆ. ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘ (ರಿ)

ಕ್ರಿಸ್‌ಮಸ್ ಮತ್ತು ಹೊಸವರ್ಷದ ರಜೆಗಳು ಕೇವಲ ಸಂಭ್ರಮದ ದಿನಗಳಲ್ಲ; ಕರ್ನಾಟಕದ ಪ್ರವಾಸೋದ್ಯಮಕ್ಕೆ ಇದು ವರ್ಷದಲ್ಲೇ ಅತ್ಯಂತ ಮಹತ್ವದ ಅವಕಾಶದ ಕಾಲಘಟ್ಟ. ದೇಶದ ವಿವಿಧ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರು ಈ ಅವಧಿಯಲ್ಲಿ ರಾಜ್ಯಕ್ಕೆ ಆಗಮಿಸುತ್ತಾರೆ. ಈ ಸಂದರ್ಭವನ್ನು ಸರಿಯಾದ ಯೋಜನೆ ಮತ್ತು ಸಿದ್ಧತೆಯೊಂದಿಗೆ ಬಳಸಿಕೊಂಡರೆ, ಹೊಸವರ್ಷವು ಪ್ರವಾಸೋದ್ಯಮಕ್ಕೆ ಹೊಸ ಉಸಿರು ತುಂಬುವ ಹಬ್ಬವಾಗಬಹುದು.

ಈ ಹಿನ್ನಲೆಯಲ್ಲಿ, ಕರ್ನಾಟಕ ರಾಜ್ಯ ಸರಕಾರ ಹೊಸವರ್ಷದ ಆಚರಣೆಯನ್ನು ನಗರಕೇಂದ್ರಿತ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸದೆ, ರಾಜ್ಯದ ವಿವಿಧ ಜಿಲ್ಲೆಗಳತ್ತ ವಿಸ್ತರಿಸುವ ದೃಷ್ಟಿಕೋನ ಅಳವಡಿಸಬೇಕಿದೆ. ಬೆಂಗಳೂರು ಹೊರಭಾಗದ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಪ್ರವಾಸಿ ತಾಣಗಳಲ್ಲಿ, ಪಾರಂಪರಿಕತಾಣಗಳಲ್ಲಿ ವಿಶೇಷ ಹೊಸವರ್ಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಸ್ಥಳೀಯರಿಗೂ ಪ್ರವಾಸೋದ್ಯಮವನ್ನು ಪರಿಣಾಮಕಾರಿಯಾಗಿ ಬಾಗಿಯಾಗುವ ಅವಕಾಶ ಕೊಡಬಹುದು.

ಕೈಯಾಕಿಂಗ್

ಕೈಯಾಕಿಂಗ್, ಬೋಟಿಂಗ್, ಪಾರಾಗ್ಲೈಡಿಂಗ್ ಸೇರಿದಂತೆ ಸಾಹಸ ಕ್ರೀಡೆಗಳು, ಜತೆಗೆ ಸ್ಥಳೀಯ ಸಾಂಸ್ಕೃತಿಕ ಉತ್ಸವಗಳು, ಜನಪದ ಕಲೆಗಳು ಮತ್ತು ಆಹಾರ ಮೇಳಗಳನ್ನು ಆಯೋಜಿಸಿದರೆ ಯುವ ಪ್ರವಾಸಿಗರು, ಕುಟುಂಬಗಳು ಹಾಗೂ ವಿದೇಶಿ ಪ್ರವಾಸಿಗರನ್ನು ಸಮಾನವಾಗಿ ಆಕರ್ಷಿಸಬಹುದು. ಇಂಥ ಚಟುವಟಿಕೆಗಳು ಪ್ರವಾಸೋದ್ಯಮದ ಲಾಭವನ್ನು ನಗರಗಳಿಗೆ ಮಾತ್ರ ಸೀಮಿತಗೊಳಿಸದೆ, ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಿಗೂ ವಿಸ್ತರಿಸುತ್ತವೆ.

ಇದಕ್ಕೆ ಪೂರಕವಾಗಿ, ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಕರ್ನಾಟಕದಲ್ಲಿರುವ ಅನುಕೂಲಕರ ಹವಾಮಾನ ಹಾಗೂ ಹಬ್ಬಗಳ ರಜೆಗಳನ್ನು, ಪ್ರವಾಸಿ ಟ್ರಾವೆಲ್ಸ್ ಉದ್ಯಮಿಗಳು ಸೂಕ್ತವಾಗಿ ಬಳಸಿಕೊಳ್ಳಬೇಕು. ಈ ಅವಧಿಯನ್ನು tailor-made tour packages ಆಗಿ ರೂಪಿಸಿ, ವಿಭಿನ್ನ ವರ್ಗದ ಪ್ರವಾಸಿಗರ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸುವುದು ಇಂದಿನ ಅಗತ್ಯ. ಉತ್ತಮ ಸೇವೆ, ಸಮಯಪಾಲನೆ ಮತ್ತು ಪಾರದರ್ಶಕ ದರಗಳ ಮೂಲಕ ಇನ್ನಷ್ಟು ಗ್ರಾಹಕರಿಗೆ ಸೇವೆ ನೀಡಲು ಇದು ಅಪೂರ್ವ ಅವಕಾಶವಾಗಿದೆ.

ಪ್ರಚಾರದ ವಿಷಯದಲ್ಲಿ ಖಾಸಗಿ ಮಾಧ್ಯಮಗಳ ಜತೆಗೆ, ದೂರದರ್ಶನ ಮತ್ತು ಆಕಾಶವಾಣಿ ಎಂಬ ಸರ್ಕಾರಿ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ರಾಜ್ಯದ ವಿವಿಧ ಪ್ರವಾಸಿ ತಾಣಗಳು, ಹಬ್ಬಗಳು, ಸಾಹಸ ಕ್ರೀಡೆಗಳು ಹಾಗೂ ಹೊಸ ಪ್ರವಾಸಿ ಮಾರ್ಗಗಳ ಕುರಿತು ವಿಶೇಷ ಸ್ಥಳ ಪರಿಚಯಿಸುವ ಕಾರ್ಯಕ್ರಮಗಳು, ಸಂದರ್ಶನಗಳು ಮತ್ತು ಡಾಕ್ಯುಮೆಂಟರಿ ಪ್ರಸಾರಗಳ ಮೂಲಕ ದೂರದ ಮತ್ತು ಕಡಿಮೆ ಪರಿಚಿತ ಪ್ರವಾಸಿ ಭಾಗಗಳನ್ನು ಜನರಿಗೆ ಪರಿಚಯಿಸುವಲ್ಲಿ ಈ ಮಾಧ್ಯಮಗಳು ಮಹತ್ವದ ಪಾತ್ರ ವಹಿಸಬಹುದು.

ಪ್ರವಾಸಿಗರ ನಿರೀಕ್ಷೆ ಸುರಕ್ಷತೆ, ಸೌಲಭ್ಯ ಮತ್ತು ಸ್ಮರಣೀಯ ಅನುಭವ. ಆದ್ದರಿಂದ ಸರಕಾರವು ಅಗತ್ಯ ಸುರಕ್ಷತಾ ವ್ಯವಸ್ಥೆ, ತರಬೇತಿ ಪಡೆದ ಸಿಬ್ಬಂದಿ, ಸುಗಮ ಸಾರಿಗೆ ಹಾಗೂ ಮೂಲಸೌಕರ್ಯ ಒದಗಿಸುವಲ್ಲಿ ಮುನ್ನಡೆ ವಹಿಸಬೇಕು. ಜತೆಗೆ ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಯೋಜಿತ ಜಾಹೀರಾತು ಮತ್ತು ಪ್ರಚಾರ ತಂತ್ರ ಅಳವಡಿಸಿದರೆ, ಕರ್ನಾಟಕವನ್ನು ಹೊಸವರ್ಷದ ಪ್ರಮುಖ ಪ್ರವಾಸಿ ಗಮ್ಯಸ್ಥಾನವಾಗಿ ಪರಿಚಯಿಸಲು ಸಾಧ್ಯ.

ಹೊಸವರ್ಷದ ಸಂಭ್ರಮ ಕ್ಷಣಿಕವಾದರೂ, ಅದಕ್ಕಾಗಿ ಕೈಗೊಳ್ಳುವ ಸಿದ್ಧತೆ ಶಾಶ್ವತವಾಗಬೇಕು. ಹೊಸವರ್ಷವನ್ನು ಕೇವಲ ಆಚರಣೆಯಾಗಿ ಅಲ್ಲ, ಉದ್ಯೋಗ ಸೃಷ್ಟಿ, ಸ್ಥಳೀಯ ಆರ್ಥಿಕ ಅಭಿವೃದ್ಧಿ ಮತ್ತು ಕರ್ನಾಟಕದ ಪ್ರವಾಸೋದ್ಯಮ ಭವಿಷ್ಯವನ್ನು ಬಲಪಡಿಸುವ ಅವಕಾಶವಾಗಿ ಬಳಸಿಕೊಳ್ಳಬೇಕಾಗಿದೆ.