Thursday, March 5, 2026
Thursday, March 5, 2026

ಕೇದಾರ ಯಾತ್ರೆ ರದ್ದಾಯಿತು ಬದರಿ ಯಾತ್ರೆ ಶುರುವಾಯಿತು

ಒಂದು ವಾಹನ ಚಲಿಸುವಷ್ಟೇ ರಸ್ತೆ, ಎದುರಿನಲ್ಲಿ ಇನ್ನೊಂದು ವಾಹನ ಬಂದರೆ ಪೇಚಾಟವಷ್ಟೆ. ಆದರೂ ಸುತ್ತಲಿನ ರಮಣೀಯ ನೋಟ ನಾಕದ ಭಾವವನ್ನು ಕೊಡುತ್ತದೆ. ಸ್ವಲ್ಪ ಸಮಯದಲ್ಲೇ ಜೋಶಿಮಠ ತಲುಪಿದೆವು. ನಂತರ ಬದರಿ ತಲುಪಿದಾಗ ನಮ್ಮಲ್ಲಿದ್ದದ್ದು ಧನ್ಯತಾ ಭಾವ ಮಾತ್ರ. ತ್ರೇತಾಯುಗದಲ್ಲಿ ಇಲ್ಲಿ ನಾರಾಯಣನು ಸಶರೀರಿಯಾಗಿ ನೆಲೆಸಿದ್ದನು ಎನ್ನಲಾಗಿದೆ. ಈಗ ನರ-ನಾರಾಯಣ ಬೆಟ್ಟದಲ್ಲಿರುವ ದೇಗುಲದಲ್ಲಿ ಧ್ಯಾನ ಭಂಗಿಯಲ್ಲಿ ಕುಳಿತಿರುವ ನಾರಾಯಣನ ಮೂರ್ತಿ ಇದೆ. ನಾವು ಹೋದಾಗ ಅಲ್ಲಿ - 8 ಡಿಗ್ರಿ ತಾಪಮಾನ!

  • ಶೋಭಾ ಪುರೋಹಿತ್

ಉತ್ತರ ಭಾರತ ಯಾತ್ರೆಯಲ್ಲಿದ್ದಾಗ ಬದರಿ ನಾರಾಯಣನ ದರ್ಶನ ಪಡೆಯುವ ಸುಯೋಗ ನನಗೆ ಒದಗಿ ಬಂದಿತ್ತು. ಬದರಿಗೆ ಹೋಗಲು ಹೃಷಿಕೇಶದಲ್ಲಿ ನಮ್ಮ ಆಧಾರ್ ಕಾರ್ಡ್ ತೋರಿಸಿ ಪಾಸ್ ಪಡೆಯಬೇಕು. ಹಿಂತಿರುಗುವವರೆಗೂ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಬದರಿಯಲ್ಲಿ ಸಾಮಾನ್ಯವಾಗಿ ಮಳೆ ಇದ್ದೇ ಇರುತ್ತದೆ. ಹಾಗಾಗಿ ಅಲ್ಲೇ ಮಾರುತ್ತಿದ್ದ ಪ್ಲಾಸ್ಟಿಕ್ ರೈನ್‌ ಕೋಟ್‌ ಕೊಂಡು ನಮ್ಮ ಬ್ಯಾಗಲ್ಲಿ ಇರಿಸಿಕೊಂಡು ಬಸ್ ಹತ್ತಿದೆವು.

ಇದನ್ನೂ ಓದಿ: ಒಬ್ಬಂಟಿಗರಿಗೂ ಇಷ್ಟವಾಗುವ ಶಿವನ ಯಾಗಂಟಿ ಪುಣ್ಯಕ್ಷೇತ್ರ! ಇಲ್ಲಿ ಶಿವಲಿಂಗವಿಲ್ಲ-ನಂದಿ ವಿಗ್ರಹ ಬೆಳೆಯುತ್ತಲೇ ಇದೆ..

ರಾತ್ರಿ ವೇಳೆಗೆ ಪೀಪಲ್ ಕೋಟ್‌ಗೆ ತಲುಪಿದೆವು. ಅಲ್ಲಿ ಕೊಠಡಿ ಪಡೆದು, ತಿಂಡಿ ತಿಂದು ವಿಶ್ರಮಿಸಿದೆವು. ಪ್ರವಾಸ ಆರಂಭಕ್ಕೂ ಮೊದಲು ಕೇದಾರಕ್ಕೆ ನಂತರ ಬದರಿಗೆ ಹೋಗಿ ಬರುವುದು ಎಂದು ನಿಗದಿಯಾಗಿತ್ತು. ಹಾಗಾಗಿ ನಾವೂ ತಲಾ 12500 ರುಪಾಯಿ ಕೊಟ್ಟು ಹೆಲಿಕಾಪ್ಟರ್ ಬುಕ್ ಮಾಡಿದ್ದೆವು. ಹೈಲಿಕಾಪ್ಟರ್ ಪಯಣ ಖುಷಿಯ ಜತೆಗೆ ಒಂಚೂರು ಭಯವನ್ನೂ ತಂದಿತ್ತು. ಕೇದಾರದಲ್ಲಿ ಅತಿಯಾದ ಹಿಮಪಾತದಿಂದ ನಮ್ಮ ಕಾರ್ಯಕ್ರಮದಲ್ಲಿ ಬದಲಾವಣೆ ಆಯಿತು. ಬದರಿಯಿಂದ ಹಿಂತಿರುಗುವಾಗ ಕೇದಾರಕ್ಕೆ ಭೇಟಿ ಕೊಡುವುದು ಅಂತ ಮಾರನೇ ದಿನ ಬದರಿ ಕಡೆಗೆ ಪ್ರಯಾಣ ಹೊರಟೆವು. ನಂತರವೂ ಹಿಮಪಾತ ಕಡಿಮೆ ಆಗದೇ, ನಮ್ಮ ಕೇದಾರ ಯಾತ್ರೆ ರದ್ದಾಯಿತು. ನಮ್ಮ ಯಾತ್ರೆಯ ಆಯೋಜಕರು ಸಾರಿಗೆ, ಅಡಿಗೆಯವರು, ಲಗೇಜ್‌ ಹೊರಲು ಕೂಲಿಯವರನ್ನು ಜತೆಗೆ ಕರೆ ತಂದಿದ್ದರು. ಹಾಗಾಗಿ ಎಲ್ಲೂ ಏನೂ ಸಮಸ್ಯೆ ಇರಲಿಲ್ಲ.

Untitled design - 2026-03-05T102004.377

ಬೆಟ್ಟವನ್ನೇ ಕೊರೆದು ಮಾಡಿದ ಬದರಿಗೆ ಹೋಗುವ ರಸ್ತೆಯಲ್ಲಿ ಪ್ರಯಾಣಿಸುವಾಗ ಒಮ್ಮೊಮ್ಮೆ ಜೀವ ಬಾಯಿಗೆ ಬಂದಂತಾಗುತ್ತದೆ. ಒಂದೆಡೆ ಎತ್ತರೆತ್ತರ ಪರ್ವತ ಶ್ರೇಣಿ, ಇನ್ನೊಂದೆಡೆ ಕಡಿದಾದ ಕಣಿವೆ, ಆಳದಲ್ಲಿ ಪಯಣಿಸುತ್ತಿರುವ ನದಿಗಳ ಸಂಗಮ ನೋಡಲು ಸಿಗುತ್ತದೆ. ಸೋನ್ ಪ್ರಯಾಗ, ರುದ್ರ ಪ್ರಯಾಗ, ಕರ್ಣಪ್ರಯಾಗ, ಮಂದಾಕಿನಿ, ಅಲಕನಂದಾ ನದಿಗಳು ಇವೆ.

ಒಂದು ವಾಹನ ಚಲಿಸುವಷ್ಟೇ ರಸ್ತೆ, ಎದುರಿನಲ್ಲಿ ಇನ್ನೊಂದು ವಾಹನ ಬಂದರೆ ಪೇಚಾಟವಷ್ಟೆ. ಆದರೂ ಸುತ್ತಲಿನ ರಮಣೀಯ ನೋಟ ನಾಕದ ಭಾವವನ್ನು ಕೊಡುತ್ತದೆ. ಸ್ವಲ್ಪ ಸಮಯದಲ್ಲೇ ಜೋಶಿಮಠ ತಲುಪಿದೆವು. ನಂತರ ಬದರಿ ತಲುಪಿದಾಗ ನಮ್ಮಲ್ಲಿದ್ದದ್ದು ಧನ್ಯತಾ ಭಾವ ಮಾತ್ರ. ತ್ರೇತಾಯುಗದಲ್ಲಿ ಇಲ್ಲಿ ನಾರಾಯಣನು ಸಶರೀರಿಯಾಗಿ ನೆಲೆಸಿದ್ದನು ಎನ್ನಲಾಗಿದೆ. ಈಗ ನರ-ನಾರಾಯಣ ಬೆಟ್ಟದಲ್ಲಿರುವ ದೇಗುಲದಲ್ಲಿ ಧ್ಯಾನ ಭಂಗಿಯಲ್ಲಿ ಕುಳಿತಿರುವ ನಾರಾಯಣನ ಮೂರ್ತಿ ಇದೆ.

ನಾವು ಹೋದಾಗ ಅಲ್ಲಿ - 8 ಡಿಗ್ರಿ ತಾಪಮಾನ. ಎರಡೆರಡು ಸ್ವೆಟರ್, ಸ್ಕಾರ್ಫ್, ಕೈಗವಸು, ಕಾಲಿಗೆ ಸಾಕ್ಸ್ 24 ಗಂಟೆಯೂ ಇರಲೇಬೇಕು. ಬಹಿರ್ದೆಸೆಗೆ ಕೂಡ ದುಡ್ಡು ಕೊಟ್ಟು ಬಿಸಿನೀರು ಕೊಳ್ಳಬೇಕು. ಅದರಲ್ಲೂ ನಮಗೆ ಸೆಲ್ಲರ್‌ನಲ್ಲಿ ಕೋಣೆ, ಹೀಟರ್ ಸಿಗದೇ ಒಂದು ರಾತ್ರಿ ಕಳೆಯುವುದೇ ದುಸ್ತರವಾಯ್ತು.

ಕೋಣೆಯಲ್ಲಿ ಲಗೇಜು ಇರಿಸಿ ನದಿ ಸ್ನಾನಕ್ಕೆ ಹೊರಟೆವು. ನದಿ ನೀರು ಹಿಮದಂತೆ ಕೊರೆಯುತ್ತೆ, ಸ್ನಾನಕ್ಕೆ ಬಿಸಿನೀರಿನ ಹೊಂಡಗಳಿವೆ ಅಂತ ಹೇಳಿದರು. ಹೊರಗಡೆ ಗಂಡಸರಿಗೆ, ಒಳಕೋಣೆಯಲ್ಲಿ ಹೆಂಗಸರಿಗೆ ಸ್ನಾನಕ್ಕೆ ಅವಕಾಶವಿತ್ತು. ನದಿ ನೀರು ಹಿಮ್ಮುಖವಾಗಿ ಹರಿಯುವುದಿಲ್ಲ ಅನ್ನೋದು ಗೊತ್ತಿರುವ ವಿಚಾರ. ಆದರೆ, ಇಲ್ಲಿ ನದಿ ಹರಿಯುವ ರಭಸಕ್ಕೆ ಮುಂದೆ ಹರಿದ ನೀರು ಮತ್ತೆ ಹಿಮ್ಮುಖವಾಗಿ ಹರಿದು ಮುಂದೆ ಚಲಿಸುತ್ತದೆ. ಅಲ್ಲಿಂದ ಸ್ವಲ್ಪ ಮೇಲೆ ಹತ್ತಿ ಬ್ರಹ್ಮ ಕಪಾಲ, ಬ್ರಹ್ಮನ ಕಮಂಡಲ ದರ್ಶನ ಪಡೆದೆವು.

ಮರಳಿ ನಮ್ಮ ರೂಮ್‌ಗಳಿಗೆ ತಲುಪಿ ಆಗಲೇ ತಯಾರಾಗಿದ್ದ ಊಟ ಸವಿದು, ಸ್ವೆಟ್ಟರ್‌ ಸಮೇತ ದಪ್ಪದ ಹಾಸಿಗೆ ಹೊದ್ದು ಮಲಗಿದೆವು. ಬೆಳಗ್ಗೆ ನಾಲ್ಕು ಗಂಟೆಗೆ ದರ್ಶನಕ್ಕೆ ಹೊರಟೆವು. ಅಲ್ಲಿ ಅಂಗಡಿಯಲ್ಲಿ ಸಿಗುವ, ಬೆಂಡು, ಬತ್ತಾಸು, ಹುರಗಡಲೆ, ಕುಸುರೆಳ್ಳು ಕೊಂಡೆವು. ಇವೇ ಇಲ್ಲಿ ಪ್ರಸಾದ! ದೇವರಿಗೆ ಮುಟ್ಟಿಸಿ ಕೊಡುತ್ತಾರೆ. ಸರದಿಯಲ್ಲಿ ಹೋಗಿ ದರ್ಶನ ಪಡೆದೆವು. ಸಮಾಧಾನವಾಗಲಿಲ್ಲ. ಆಚೆ ಗರ್ಭಗುಡಿ ಕಾಣುವಂತೆ ಕಿಟಕಿ ಇದ್ದು, ಮೆಟ್ಟಿಲು ಮೂಲಕ ಹತ್ತಿ ಪುನಃ ಅಲ್ಲಿಂದ ದರ್ಶನ ಪಡೆದು, ಆಚೆ ಬಂದು ಬಿಸಿ ಕಾಫಿ ಕುಡಿದು ರೂಮು ಸೇರಿದೆವು. ಹಿಂದಿರುಗುವಾಗ ಮಳೆ ಶುರುವಾಗಿ, ನಾವು ತಂದ ಪ್ಲಾಸ್ಟಿಕ್ ರೇನ್ ಕೋಟ್ ಉಪಯೋಗ ಆಯ್ತು.

ಬೆಳಗ್ಗೆ ಆರು ಗಂಟೆಗೆ ಮರುಪ್ರಯಾಣ ಶುರುವಾಯಿತು. ಬಸ್ಸು ಹತ್ತಿ ನಾರಾಯಣನಿಗೆ ಜೈ ಕಾರ ಹಾಕಿ ಹೊರಟಾಗ ಮನಸು ಭಾರವಾಗಿತ್ತು. ಬೆಳಗಿನ ಸಮಯ ಆಗಿದ್ದರಿಂದ, ಬೆಟ್ಟಗಳು ಹಿಮದಿಂದ ಆವೃತವಾಗಿ ಹಿತವಾದ ಅನುಭವ ನೀಡುತ್ತಿತ್ತು. ದಾರಿ ಸ್ವಲ್ಪ ಇಳಿಜಾರಾಗಿದ್ದು, ಬಸ್ಸಿನ ವೇಗ ತುಸು ಹೆಚ್ಚೇ ಅನಿಸಿತು.

Untitled design - 2026-03-05T101954.370

ಮುಂದೆ ಗರುಡಗಂಗಾ ಎಂಬಲ್ಲಿ ಗಾಡಿ ನಿಲ್ಲಿಸಲಾಯಿತು. ಇದು ತಿಳಿನೀರಿನ ನದಿ. ಒಂದಷ್ಟು ಮೆಟ್ಟಿಲು ಇಳಿದು ಹೋಗಿ ಸ್ನಾನ ಮಾಡಿದೆವು. ನದಿಯಲ್ಲಿ ಆಲಿಕಲ್ಲಿನಂಥ ಕಲ್ಲುಗಳಿದ್ದವು. ಇವುಗಳನ್ನು ತಂದು ಮನೆಯಲ್ಲಿಟ್ಟರೆ, ಹಾವು ಬರುವುದಿಲ್ಲ ಎಂಬುದು ಹಲವರ ನಂಬಿಕೆ.

ಗರುಡಗಂಗಾ ಎಂದು ಹೆಸರು ಬರಲು ಒಂದು ಕಥೆಯಿದೆ. ಗರುಡ ವಾಸುಕಿಯನ್ನು ಕಚ್ಚಿ ಹಿಡಿಯುತ್ತಾನೆ. ಎಷ್ಟು ಕೇಳಿದರೂ ಬಿಡುವುದಿಲ್ಲ. ಆಗ ಶಿವನು ನಾರಾಯಣನ ಮೊರೆ ಹೋಗುತ್ತಾನೆ. ಆಗಲೂ ಗರುಡ ʻನಿನ್ನನ್ನು ಹೊರಲು ನನಗೆ ಶಕ್ತಿ ಬೇಡವೇ?ʼ ಎಂದು ಹೇಳುತ್ತಾನೆ. ʻಸರಿ ನನ್ನ ಭಾರವನ್ನು ಹೊತ್ತುಕೊʼ ಎಂದು ನಾರಾಯಣ ತನ್ನ ಬೆರಳನ್ನು ಅವನ ಬೆನ್ನ ಮೇಲಿಡಲು, ಭಾರದಿಂದ ಕುಸಿದು ಗರುಡ, ತಪ್ಪನ್ನು ಮನ್ನಿಸುವಂತೆ ಕೇಳಿ ಎಂದು ವಾಸುಕಿಯನ್ನು ಬಿಡುಗಡೆ ಮಾಡುತ್ತಾನೆ.

ʻನೀನು ಇಲ್ಲಿಯೇ ಇದ್ದು ನನ್ನ ಕುರಿತು ತಪಸ್ಸು ಮಾಡುʼ ಎಂಬ ನಾರಾಯಣನ ಆದೇಶದಂತೆ ಗರುಡ ಇಲ್ಲಿ ತಪಸ್ಸು ಆಚರಿಸುತ್ತಾನೆ. ತನ್ನ ಕೊಕ್ಕಿನಿಂದ ಬಗೆದು, ಅಲ್ಲಿ ನದಿ ಉಂಟಾದ್ದರಿಂದ ಇದಕ್ಕೆ ಗರುಡಗಂಗಾ ಎಂದು ಹೆಸರು ಬಂದಿದೆ.

ಎಲ್ಲವನ್ನು ನೋಡಿ ಬಂದು ನಮ್ಮ ಪ್ರವಾಸವೇನೋ ಮುಗಿದಿದೆ. ಆದರೆ, ಅಂದಿನ ನೆನಪುಗಳು ಮಾತ್ರ ಹಾಗೇ ಉಳಿದಿವೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ