ಜಪಾನ್ ಸೇತುವೆಗಳ ಹಿಂದಿರುವ ಸಾಂಸ್ಕೃತಿಕ ಪರಂಪರೆ
ಜಪಾನಿನಲ್ಲಿ ʻಚಂದಿರ ದಾಟುವ ಸೇತುವೆ’ ಮಾತ್ರವಲ್ಲ ʻಕಾಮನಬಿಲ್ಲು’ ʻಜಗತ್ತಿನಿಂದ ಜಗತ್ತಿಗೆ’ ʻಅಮರತ್ವಕ್ಕೆ ದಾರಿ’ ಹೀಗೆ ವಿಶೇಷವಾದ ಹೆಸರುಗಳನ್ನು ಇಟ್ಟುಕೊಂಡಿರುವ ಸೇತುವೆಗಳದ್ದೇ ಪರಂಪರೆ ಇದೆ. ಆಧುನಿಕ ಸೇತುವೆಗಳಲ್ಲದೆ ಈ ರೀತಿಯ ಚರಿತ್ರೆ ಹೇಳುವ ಒಟ್ಟು 27 ಸೇತುವೆಗಳನ್ನು ಗುರುತಿಸಿ ಅವುಗಳ ಮೂಲ ರೂಪವನ್ನು ಕಾಪಿಟ್ಟುಕೊಂಡಿದೆ ಜಪಾನ್ ಸರಕಾರ.
- ಅಂಜಲಿ ರಾಮಣ್ಣ
ಜಪಾನಿನ ಅತ್ಯಂತ ಪುರಾತನ ಕ್ಯೋಟೋ ನಗರದಲ್ಲಿ `ಕರಸುಮ ಕ್ಯೋಟೋ’ ಎನ್ನುವ ಹೊಟೇಲಿನಲ್ಲಿ ವಾಸ್ತವ್ಯವನ್ನು ಕಾದಿರಿಸಿಕೊಂಡಿದ್ದೆ. ಮೈಯಾಡದಂತೆ, ಕಣ್ಗೂಡದಂತೆ ಮೃದುವಾಗಿ ಅಷ್ಟೇ ಮೋಹಕವಾಗಿ ಬುಲೆಟ್ ರೈಲು ಟೋಕಿಯೋದಿಂದ ಕ್ಯೋಟೋಗೆ ತಂದು ಬಿಟ್ಟಿತ್ತು. ಅಬ್ಬಾ, ಕ್ಯೋಟೋ ರೈಲು ನಿಲ್ದಾಣ ವಿಪರೀತ ದೊಡ್ಡ ನಿಲ್ದಾಣ. ಜನರೆಲ್ಲ ಬುಳುಬುಳು ಹರಿದಾಡುತ್ತಿದ್ದರು. ಸೀದಾ ಅಲ್ಲಿನ ಪ್ರವಾಸಿ ಮಾಹಿತಿ ಕೇಂದ್ರಕ್ಕೆ ಹೋದೆ. ಕೆಂಪು ಸ್ಕರ್ಟ್, ಬಿಳಿ ಶರ್ಟ್ ಹಾಕಿಕೊಂಡಿದ್ದ ಮುದ್ದಾದ ಯುವತಿ ಜಪಾನಿ ಭಾಷೆಯ ಉಚ್ಛಾರಣಾ ಶೈಲಿಯಲ್ಲಿ ಇಂಗ್ಲಿಷ್‌ನಲ್ಲಿ ಕ್ಯೋಟೋ ನಗರದಲ್ಲಿ ನೋಡಬಹುದಾದ ಜಾಗಗಳ ವಿವರಣೆ, ತಲುಪಲು ರೈಲು ಮಾರ್ಗಗಳಿದ್ದ ಮ್ಯಾಪ್ ಎಲ್ಲವನ್ನೂ ಕೈಗಿತ್ತು ಎಂದಿನ ನಗು ಮುಖದಲ್ಲಿ ಬೀಳ್ಕೊಟ್ಟಳು.
ಇದನ್ನೂ ಓದಿ: ಬರಬೇಡ..ಬರಬೇಡ..ನನಗೆ ಪ್ರವಾಸಿಗರು ಬೇಕಿಲ್ಲ...!
ಇದರ ನಡುವೆ ಭಾರತ ಎಷ್ಟು ದೊಡ್ಡ ದೇಶ, ಮೋದಿ ಎಂಥ ಪ್ರಧಾನಿ, ಕರೆನ್ಸಿ ದರ ಎಷ್ಟು, ಬೆಂಗಳೂರು ಮತ್ತು ಕನ್ನಡ ಇವುಗಳ ಬಗ್ಗೆ ಎರಡೆರಡು ಸಾಲುಗಳ ಮಾತೂ ಬಂದಿತು. ನನ್ನ ಕತ್ತಿನಲ್ಲಿ ನೇತಾಡುತ್ತಿದ್ದ ಬಟ್ಟೆ ಮತ್ತು ಕಾಗದದಿಂದ ಮಾಡಿದ್ದ ದೊಡ್ಡ ಪದಕವಿದ್ದ ನೀಲಿ ಬಣ್ಣದ ಸರದ ಬಗ್ಗೆಯೂ ನಾಲ್ಕು ಪದಗಳು ಇಬ್ಬರ ನಡುವೆ ಓಡಾಡಿತು. ಜಪಾನ್ ಪ್ರವಾಸದಲ್ಲಿ ಮಾತಿಗೆ ಸಿಕ್ಕಿದ್ದ ಅಷ್ಟೂ ಜಪಾನೀಯರು ತಮ್ಮ ದೇಶ, ರಾಜಕೀಯ, ತೊಟ್ಟಿರುವ ವೇಷಭೂಷಣಗಳ ಬಗ್ಗೆ ಮಾತು ಆಡಿದ್ದೇ ಇಲ್ಲ. ಯಾವ ವಿಷಯಕ್ಕೆ ಮಾತು ಶುರುವಾಗಿರುತ್ತಿತ್ತೋ ಅದಷ್ಟನ್ನು ಮಾತ್ರ ಕೇಂದ್ರೀಕರಿಸಿಕೊಂಡ ಸಂಭಾಷಣೆಗಳು ಇರುತ್ತಿತ್ತು. ತಮ್ಮ ಸಂಸ್ಕೃತಿ ಪರಿಸ್ಥಿತಿಗಳ ಬಗ್ಗೆ ಮಾತನಾಡುವಾಗಲೂ ಎಲ್ಲೂ ಅವರುಗಳು ತಾವೇ ಉತ್ತಮ ಎನ್ನುವ ಭಾವವನ್ನು ಹೊರಗೆ ಹಾಕುತ್ತಿರಲಿಲ್ಲ ಹಾಗೂ ಮತ್ತೊಬ್ಬರು ಕಳಪೆ ಎನ್ನುವ ಆಲೋಚನೆಯ ಸುಳಿವೂ ಅವರಲ್ಲಿ ಇರುತ್ತಿರಲಿಲ್ಲ. ನನಗೆ ಮಾತಿಗೆ ಸಿಕ್ಕ ಅಷ್ಟೂ ಜನ ಗರ್ವವಿಲ್ಲದವರೇ ಆಗಿದ್ದರು.

ಅವರ ನಗುಮುಖದಲ್ಲೂ ಉತ್ಸಾಹದಲ್ಲಿ ಇರುವವರಂತೆ ಕಂಡು ಬರುತ್ತಿರಲಿಲ್ಲ. ಆದರೆ ಕ್ಯೋಟೋ ರೈಲು ನಿಲ್ದಾಣದ ಪ್ರವಾಸಿ ಮಾಹಿತಿ ಕೇಂದ್ರದ ಯುವತಿ ಇಷ್ಟು ಮಾತನಾಡಿದ್ದು ಆಶ್ಚರ್ಯ ಎನಿಸಿತು. ಸಾಮಾನ್ಯವಾಗಿ ಯುರೋಪ್‌ನಲ್ಲಿ ಮಾತಿಗೆ ಸಿಗುವವರು ವಿಷಯದಿಂದಾಚೆಗೂ ಕುತೂಹಲ ತೋರಿಸುತ್ತಾರೆ ಎನ್ನುವ ಅನುಭವ ಇತ್ತು ಈಗ ಇದೂ ಜತೆಯಾಯಿತು. ವಿಭಿನ್ನ ಸ್ವಭಾವಗಳು ಭಾಷೆಯಲ್ಲಿನ ಛಂದಸ್ಸಿನಂತೆ, ಎಷ್ಟು ಬೇಕೋ ಅಷ್ಟಿರಬೇಕು ಚಂದಕ್ಕೆ.
ಮೆಟ್ರೋ ರೈಲಿನಲ್ಲಿ ಹೊಟೇಲಿಗೆ ಬಂದಾಗ ಇನ್ನೂ ರೂಮು ತೆಗೆದುಕೊಳ್ಳುವ ಅಥವಾ ಅವರು ಕೊಡುವ ಸಮಯ ಆಗಿರಲಿಲ್ಲ. ಹೊರ ದೇಶಗಳಲ್ಲಿ ಸಾಮಾನ್ಯವಾಗಿ ಕಾಯ್ದಿರಿಸಿಕೊಂಡಿದ್ದರೂ ರೂಮಿನ ಒಳಗೆ ಹೋಗಲು ಅವರು ಸಮಯ ನಿಗದಿ ಮಾಡಿರುತ್ತಾರೆ. ಅದಕ್ಕಿಂತ ಮೊದಲು ಒಳಗೆ ಬಿಡುವುದಿಲ್ಲ. ಬ್ಯಾಗುಗಳನ್ನು ನಿರ್ಧಿಷ್ಟ ಜಾಗದಲ್ಲಿ ಇಟ್ಟು ಹೊಟೇಲಿನಿಂದ ಹತ್ತು ಹೆಜ್ಜೆಯ ಹತ್ತಿರದಲ್ಲಿ ಇದ್ದ ನಿಲ್ದಾಣದಲ್ಲಿ ರೈಲು ಹಿಡಿದು ಅರಾಶಿಮಾಯ ಸ್ಟೇಷನ್‍ಗೆ ರೈಲು ಹತ್ತಿದೆ.
ಇಳಿದು ಹೊರ ಬಂದೊಡನೆ ಸುತ್ತಲೂ ಹಸಿರು ಬೆಟ್ಟ ನಡುವೆ ಪುಟ್ಟ ಗೋಲಾಕಾರದ ಗುಡ್ಡ ಅದರ ಮೇಲೆ ಅರಾಶಿಮಾಯ ಎಂದು ಜಪಾನೀ ಭಾಷೆಯಲ್ಲಿ ಬರೆದಿದ್ದ ಫಲಕ, ಅದರ ಪಕ್ಕದಲ್ಲಿ ಸ್ಥಳಗಳನ್ನು ತೋರಿಸುವ ಬೋರ್ಡ್. ತಕ್ಷಣಕ್ಕೆ ಜರ್ಮನ್ನರ ಜಾನಪದ ಕಥೆಗಳಲ್ಲಿ ಬರುವ ಹಳ್ಳಿಯ ವರ್ಣನೆಯಂತೆನಿಸಿತು. ನಡೆಯುತ್ತಾ ಹೋದಂತೆ ಕಂಡಿದ್ದು ಹರಿಯುವ ತೊರೆ ಅದನ್ನೇ ಹಿಂಬಾಲಿಸಿದಾಗ ಅತ್ತಲಿಂದ ಬಂದ ನದಿ ಮತ್ತೆಲ್ಲಿಂದಲೋ ಹರಿದು ಬಂದ ನದಿಯೊಡನೆ ಸಂಗಮವಾಗುತ್ತಿದ್ದದ್ದು ಕಂಡಿತು. ಅವೆರಡರ ಹರಿವು ಕೂಡ ಜಪಾನೀಯರಂತೆಯೇ ಸದ್ದಿಲ್ಲದ, ಜೋರಾಗದ ನಗುಮುಖದ ದನಿಯ ಚಲನೆಯಂತೆ ಕಂಡಿತು. ಒಂದರ ಹೆಸರು Katsura River ಮತ್ತೊಂದು Hozu River. ಇಲ್ಲಿನ ನದಿಗಳು ಹೆಣ್ಣೋ ಗಂಡೋ ಗೊತ್ತಾಗಲಿಲ್ಲ. ಆದರೆ ಅವರಿಬ್ಬರೂ ಕೂಡುತ್ತಿದ್ದ ತಿರುವಿನ ಮೇಲೆ ಇದ್ದದ್ದು, ನಾನು ನಿಂತ್ತಿದ್ದದ್ದು Togetsukyo ಸೇತುವೆ ಅಂತ ತಿಳಿಯಿತು.

Katsura ನದಿಯ ಮೇಲೆ 155 ಮೀಟರ್‌ಗಳಷ್ಟು ಉದ್ದದ ಸೇತುವೆಯ ಹೆಸರು Togetsu. ಹಾಗೆಂದರೆ ’ಚಂದಿರನು ದಾಟುವ’ ಎಂದು ಅರ್ಥ. ಕ್ರಿ.ಶ 836ರಲ್ಲಿ Dochou ಎನ್ನುವ ಬೌದ್ಧ ಸನ್ಯಾಸಿ Katsura ನದಿಯನ್ನು ದಾಟಲು ಮರದಿಂದ ಮಾಡಿದ ಸೇತುವೆಯನ್ನು ಕಟ್ಟಿಸಿದ್ದರಂತೆ. Kamakura ಆಳ್ವಿಕೆಯ ಅವಧಿಯ ಚಕ್ರವರ್ತಿ Kameyama ಒಂದು ಹುಣ್ಣಿಮೆಯ ಸಾಯಂಕಾಲ ಈ ನದಿಯ ತೀರದ ಸ್ನೇಹಕೂಟದಲ್ಲಿ ಕಾಲ ಕಳೆಯುವಾಗ ಕೇಸರಿ ಬಣ್ಣದ ಈ ಸೇತುವೆಯ ಮೇಲೆ ಕಾಣುತ್ತಿದ್ದ ಚಂದಿರನ ಚಲನೆ, ಅವನು ಸೇತುವೆಯನ್ನು ದಾಟುತ್ತಿದ್ದಾನೆ ಎನ್ನುವಂತೆ ಭಾಸವಾಗಿ, ಕೂಡಲೇ ಚಕ್ರವರ್ತಿ ಹೆಸರಿಲ್ಲದ ಆ ಸೇತುವೆಗೆ Togetsu ಎಂದು ನಾಮಕರಣ ಮಾಡುತ್ತಾನೆ. ಇಂದಿಗೂ ʻMoon crossing bridge’ ಎಂತಲೇ ಪ್ರಸಿದ್ಧವಾಗಿರುವ ಈ ಸೇತುವೆಯನ್ನು ಆಗಿಂದಾಗ್ಗೆ ಜೀರ್ಣೋದ್ಧಾರಗೊಳಿಸಲಾಗಿದೆ. ಇಂದು ಕಾಣುವ ಸೇತುವೆ ಕೊನೆಯದಾಗಿ 1934ರಲ್ಲಿ ಜೀರ್ಣೋದ್ಧಾರ ಕಂಡಿದೆ. ಈ ಸೇತುವೆಯ ಮೇಲೆ ಅತ್ತಿಂದಿತ್ತ ಓಡಾಡುವುದೇ ಇಲ್ಲಿನ ಮುಖ್ಯ ಆಕರ್ಷಣೆ. ಸೇತುವೆಯ ಎರಡೂ ಬದಿಗಳಲ್ಲಿ ಅಂಗಡಿ ಮುಗ್ಗಟ್ಟುಗಳು, ತರಹೇವಾರಿ ತಿನಿಸಿನ ಹೊಟೇಲುಗಳು, ಸ್ಥಳೀಯ ವಸ್ತುಗಳನ್ನು ಮಾರಲಾಗುತ್ತದೆ.
ಜಪಾನಿನಲ್ಲಿ ʻಚಂದಿರ ದಾಟುವ ಸೇತುವೆ’ ಮಾತ್ರವಲ್ಲ ʻಕಾಮನಬಿಲ್ಲು’ ʻಜಗತ್ತಿನಿಂದ ಜಗತ್ತಿಗೆ’ ʻಅಮರತ್ವಕ್ಕೆ ದಾರಿ’ ಹೀಗೆ ವಿಶೇಷವಾದ ಹೆಸರುಗಳನ್ನು ಇಟ್ಟುಕೊಂಡಿರುವ ಸೇತುವೆಗಳದ್ದೇ ಪರಂಪರೆ ಇದೆ. ಆಧುನಿಕ ಸೇತುವೆಗಳಲ್ಲದೆ ಈ ರೀತಿಯ ಚರಿತ್ರೆ ಹೇಳುವ ಒಟ್ಟು 27 ಸೇತುವೆಗಳನ್ನು ಗುರುತಿಸಿ ಅವುಗಳ ಮೂಲ ರೂಪವನ್ನು ಕಾಪಿಟ್ಟುಕೊಂಡಿದೆ ಜಪಾನ್ ಸರಕಾರ. ಹಿಂದೆಲ್ಲಾ ರಾಜಮನೆತನದವರು ಮತ್ತು ಸಿರಿವಂತರು ತೆಪ್ಪದಲ್ಲಿನ ಯಾನ, ದೋಣಿ ಪಯಣ, ಸೇತುವೆಗಳಲ್ಲಿನ ಔತಣಕೂಟ, ಅಕ್ಕಪಕ್ಕದ ಉದ್ಯಾನಗಳಲ್ಲಿ ವಿನೋದಕೂಟ ಇವುಗಳನ್ನು ಅವರುಗಳ ಮನೋರಂಜನೆಯ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದರು.
ಲೆಕ್ಕವಿಲ್ಲದಷ್ಟು ಕಥೆ ಹೇಳುವ ಅಸಂಖ್ಯ ಸೇತುವೆಗಳಲ್ಲಿ ಇನ್ನೊಂದು ರಮ್ಯವಾದ ಕಥೆ ಇರುವ ಸೇತುವೆ Shinkyo. ಬೌದ್ಧ ಸನ್ಯಾಸಿ Shodo ಒಮ್ಮೆ ಉಕ್ಕಿ ಹರಿಯುತ್ತಿದ್ದ Daiya ನದಿಯನ್ನು ದಾಟಲಾರದೆ ದೇವರನ್ನು ಪ್ರಾರ್ಥಿಸಿದಾಗ ದೇವಲೋಕದಿಂದ ಎರಡು ಸರ್ಪಗಳು ಒಂದಕ್ಕೊಂದು ಸುರುಳಿ ಹಾಕಿಕೊಂಡು ಭೂಮಿಗೆ ಇಳಿದುಬಂದು ಈ ಸೇತುವೆಯನ್ನು ನಿರ್ಮಾಣ ಮಾಡಿದವು ಎನ್ನುವ ನಂಬಿಕೆ.
ಮೊದಲೆಲ್ಲಾ ಸಾಧಾರಣವಾಗಿ ಸೇತುವೆಗಳನ್ನು ಕಲ್ಲಿನಿಂದ, ಅಪರೂಪಕ್ಕೆ ಮರದಿಂದ ಕಟ್ಟಲಾಗುತ್ತಿತ್ತಂತೆ. ಅದನ್ನು ʻಇಶಿಬಾಶಿ’ ಎನ್ನುತ್ತಾರೆ. ನದಿಗಳಿಗೆ ಕಟ್ಟಿದ್ದ ಸೇತುವೆ ಮತ್ತು ಉದ್ಯಾನವನಗಳಲ್ಲಿ ಕಟ್ಟಿದ್ದ ಸೇತುವೆಗಳಿಗೆ ಬೇರೆ ಬೇರೆ ಅರ್ಥ ಮತ್ತು ಉದ್ದೇಶವಿರುತ್ತಿತ್ತು. ಅವುಗಳಿಗೆ ಆಕರ್ಷಣೀಯ ಹೆಸರುಗಳೂ ಇಡಲಾಗುತ್ತಿತ್ತು. ಅಂದಿನಿಂದ ಇಂದಿನವರೆಗೂ ಜಪಾನೀಯರು ಸೇತುವೆ ಮೇಲಿನ ನಡಿಗೆಯನ್ನು ಜೀವನ ತತ್ವಕ್ಕೆ ಥಳುಕು ಹಾಕಿ ಪಾಲಿಸಿಕೊಂಡು ಬಂದಿದ್ದಾರೆ.
ಸೇತುವೆಯ ಮೇಲೆ ನಾವು ಹೆಜ್ಜೆ ಹಾಕುವಾಗ ನಮಗೆ ಇರುವ ಆಯ್ಕೆಗಳ ಅರಿವಾಗುತ್ತದೆ. ಒಂದು ನಾವು ಸೇತುವೆಯನ್ನು ದಾಟುತ್ತೇವೆ, ಇನ್ನೊಂದು ಸಮಯ ತೆಗೆದುಕೊಂಡಾದರೂ ದಾಟುತ್ತೇವೆ ಅಥವಾ ನಾವು ಹಿಂತಿರುಗುತ್ತೇವೆ. ಬದುಕಿನ ಸಂಘರ್ಷಗಳನ್ನು ಎದುರಿಸಲು ʻಇಶಿಬಾಶಿ’ಗಳು ನಮ್ಮನ್ನು ಸಜ್ಜುಗೊಳಿಸುತ್ತವೆ ಎನ್ನುತ್ತಾರೆ ಅಲ್ಲಿನ ಜನ. ಇಶಿಬಾಶಿಗಳು ನಮಗೆ ಕೊಡುವ ಆಯ್ಕೆಗಳು ಬದುಕಿನೆಡೆಗಿನ ಭರವಸೆಯೇ ಆಗಿವೆ.