ಬರಬೇಡ..ಬರಬೇಡ..ನನಗೆ ಪ್ರವಾಸಿಗರು ಬೇಕಿಲ್ಲ...!
1991ರಲ್ಲಿ ಸೋವಿಯತ್ ಒಕ್ಕೂಟ ಛಿದ್ರಗೊಂಡಾಗ ಈ ದೇಶ ಸ್ವತಂತ್ರವಾಯಿತು. ನಂತರ ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು. ವಿಶ್ವಸಂಸ್ಥೆಯಿಂದ ʼಶಾಶ್ವತ ತಟಸ್ಥ ರಾಷ್ಟ್ರʼ ಎಂಬ ಬಿರುದನ್ನು ಪಡೆದಿದೆ. ವಿಶ್ವಸಂಸ್ಥೆಯ ಕಚೇರಿಯೇ ಇಲ್ಲಿದ್ದರೂ ಹೊರಜಗತ್ತಿನ ಪ್ರಭಾವ, ವಿದೇಶಿ ಮಾಧ್ಯಮ, ಸ್ವತಂತ್ರ ಪ್ರವಾಸಿ ಎಲ್ಲವನ್ನೂ ಹೊರಗಿಟ್ಟಿದೆ ಇಲ್ಲಿನ ಅಣಕು ಪ್ರಜಾಪ್ರಭುತ್ವ. ಪ್ರವಾಸದ ಕನಸುಗಳು ಮುರಿದು ಬೀಳುವ ತುರ್ಕಮೆನಿಸ್ತಾನ್ ದೇಶದಲ್ಲಿ ಪ್ರವಾಸೋದ್ಯಮವನ್ನು ಲಿಖಿತವಾಗಿ ನಿಷೇಧಿಸಿಲ್ಲ. ಇನ್ನೂ ಕ್ರೂರವಾಗಿ ಪ್ರವಾಸವನ್ನು ಅಸಾಧ್ಯವಾಗಿಸಿದೆ.
- ಅಂಜಲಿ ರಾಮಣ್ಣ
ಈ ಡಿಜಿಟಲ್ ಜ಼ಮಾನ ಎಲ್ಲಾ ಸಾಧ್ಯತೆಗಳ ಬಗ್ಗೆ ಎಲ್ಲರಿಗೂ ತಿಳಿಸಿಕೊಟ್ಟಿದೆ. ಈ ಸಮಯದಲ್ಲಿ ಪ್ರವಾಸಕ್ಕಾಗಿ ಪ್ರತಿಯೊಬ್ಬರೂ ಹಾತೊರೆಯುತ್ತಿರುತ್ತಾರೆ. ಸರಕಾರಗಳೋ ತಮ್ಮನ್ನು ಸಂಪೂರ್ಣ ಪ್ರದರ್ಶನಕ್ಕಿಟ್ಟು ಪ್ರವಾಸಿಗಳಿಂದ ಬೊಕ್ಕಸ ತುಂಬಿಸಿಕೊಳ್ಳುವುದನ್ನು ಕಾಯಕವಾಗಿಸಿಕೊಂಡಿವೆ. ಹೀಗಿರುವಾಗ ಇಲ್ಲೊಂದು ದೇಶ ʼಬೇಡ ಬೇಡ ಬರಬೇಡ; ನನ್ನ ದೇಶಕೆ ಬರಬೇಡʼ ಎನ್ನುತ್ತಾ ಪ್ರವಾಸಿಗೆ ಬಾಗಿಲನ್ನು ಬಂದ್ ಮಾಡಿಬಿಟ್ಟಿದೆ. ಓಹ್ ಹಾಗಾದರೆ ಇದು ಉತ್ತರ ಕೊರಿಯಾದಂತೆ ʼಸನ್ಯಾಸಿ ದೇಶʼ (Hermit Nation) ಇರಬೇಕು ಎಂದುಕೊಂಡರೆ, ಉಹೂಂ! ಈ ದೇಶ ದಾಖಲೆಗಳಲ್ಲಿ ತನ್ನನ್ನು ಪ್ರಜಾಪ್ರಭುತ್ವ ಎಂದೇ ಘೋಷಿಸಿಕೊಂಡಿದೆ. ಅಂದಹಾಗೆ, ಸನ್ಯಾಸಿ ದೇಶ ಎಂದರೆ ದೇಶವೊಂದು ತನ್ನ ಎಲ್ಲಾ ಗಡಿಗಳನ್ನು ಹೊರಗಿನ ಜನರಿಗೆ ಮುಚ್ಚಿ, ಅವರೊಂದಿಗೆ ಯಾವುದೇ ವ್ಯವಹಾರ, ಸಂಪರ್ಕ ಮತ್ತು ಸೌಹಾರ್ದತೆಯನ್ನು ಇಟ್ಟುಕೊಳ್ಳದೆಯೇ ತಾನು ರೂಪಿಸಿದ ನಿಯಮಗಳಿಗೆ ಅನುಗುಣವಾಗಿ ಪ್ರಜೆಗಳನ್ನು ಬಗ್ಗಿಸಿಕೊಂಡು ಆಡಳಿತ ನಡೆಸುವುದು.
ಇದನ್ನೂ ಓದಿ:ಎಚ್ಚರ... ಪ್ರವಾಸ ನಿಮ್ಮ ವಯಸ್ಸನ್ನು ಹಿಡಿದು ನಿಲ್ಲಿಸುತ್ತದೆ
ಚೇತನವನ್ನು ಅನಿಕೇತನಗೊಳಿಸಿಕೊಳ್ಳುವತ್ತ ಜಗತ್ತು ಗಡಿಗಳನ್ನು ತೆರೆಯುತ್ತಿರುವಾಗ, ತುರ್ಕಮೆನಿಸ್ತಾನ್ ತನ್ನ ಗಡಿಯನ್ನು ’ಕಾವಲು ಗೋಪುರ’ವನ್ನಾಗಿ ಪರಿವರ್ತಿಸಿದೆ. ರೇಷ್ಮೆ ಮಾರ್ಗದ (Silk Route) ಮಧ್ಯೆ, ಕಾರಕುಮ್ ಮರುಭೂಮಿಯ ಹೃದಯದಲ್ಲಿ ನೆಲೆಸಿರುವ ಈ ದೇಶವು ಪ್ರವಾಸಿಗರನ್ನು ಆಹ್ವಾನಿಸುವುದಿಲ್ಲ, ಪರೀಕ್ಷಿಸುತ್ತದೆ. ಇಲ್ಲಿ ವೀಸಾ ಎಂಬುದು ಕೇವಲ ದಾಖಲೆಯಲ್ಲ, ಅದು ರಾಜ್ಯದ ಅನುಮತಿಯ ಮೊಹರು. ನಿಯಮ ಉಲ್ಲಂಘಿಸಿದರೆ ಎಚ್ಚರಿಕೆಯ ಬದಲು ಬಂಧನ, ದಂಡದ ಬದಲು ಗಡಿಪಾರು. ಏಕೆಂದರೆ ತುರ್ಕಮೆನಿಸ್ತಾನ್‌ಗೆ ಪ್ರವಾಸಿ ಬೇಕಿಲ್ಲ, ತನ್ನದೇ ನಿಯಂತ್ರಿತ ಕಥೆ ಬೇಕು. ಆ ಕಥೆಯಲ್ಲಿ ಪ್ರವಾಸಿ ಒಂದು ಪಾತ್ರವಲ್ಲ, ವೀಕ್ಷಕನೂ ಅಲ್ಲ. ಪ್ರವಾಸಿ ಒಂದು ಅಪಾಯ.

ನಕ್ಷೆಯ ಮೇಲೆ ಎಲ್ಲಿದೆ ತುರ್ಕಮೆನಿಸ್ತಾನ್? ಮಧ್ಯ ಏಷ್ಯಾದ ಮಡಿಲಲ್ಲಿ, ಕ್ಯಾಸ್ಪಿಯನ್ ಸಮುದ್ರದ ಪೂರ್ವ ತೀರದಲ್ಲಿ ವಾಯುವ್ಯಕ್ಕೆ ಕಜಕಿಸ್ತಾನ್, ಉತ್ತರ-ಪೂರ್ವಕ್ಕೆ ಉಜ್ಬೇಕಿಸ್ತಾನ್, ಆಗ್ನೇಯಕ್ಕೆ ಅಫ್ಘಾನಿಸ್ತಾನ್, ದಕ್ಷಿಣಕ್ಕೆ ಇರಾನ್, ಪಶ್ಚಿಮಕ್ಕೆ ವಿಶಾಲ ಕ್ಯಾಸ್ಪಿಯನ್. ಕ್ಯಾಲಿಫೋರ್ನಿಯಾದಷ್ಟೇ ವಿಸ್ತೀರ್ಣವಿರುವ ತುರ್ಕಮೆನಿಸ್ತಾನ್ ದೇಶದ ಶೇ.80ರಷ್ಟು ಭಾಗವನ್ನು ಕಾರಕುಮ್ ʼಕಪ್ಪು ಮರಳುʼ ಮರುಭೂಮಿ ಆವರಿಸಿದೆ. ಕೇವಲ 65 ಲಕ್ಷ ಜನಸಂಖ್ಯೆ ಇರುವ ಇದೊಂದು ಮುಚ್ಚಿದ ಬಾಗಿಲುಗಳ ʼಮೌನದ ಮರುಭೂಮಿʼ.
1991ರಲ್ಲಿ ಸೋವಿಯತ್ ಒಕ್ಕೂಟ ಛಿದ್ರಗೊಂಡಾಗ ಈ ದೇಶ ಸ್ವತಂತ್ರವಾಯಿತು. ನಂತರ ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು. ವಿಶ್ವಸಂಸ್ಥೆಯಿಂದ ʼಶಾಶ್ವತ ತಟಸ್ಥ ರಾಷ್ಟ್ರʼ ಎಂಬ ಬಿರುದನ್ನು ಪಡೆದಿದೆ. ವಿಶ್ವಸಂಸ್ಥೆಯ ಕಚೇರಿಯೇ ಇಲ್ಲಿದ್ದರೂ ಹೊರಜಗತ್ತಿನ ಪ್ರಭಾವ, ವಿದೇಶಿ ಮಾಧ್ಯಮ, ಸ್ವತಂತ್ರ ಪ್ರವಾಸಿ ಎಲ್ಲವನ್ನೂ ಹೊರಗಿಟ್ಟಿದೆ ಇಲ್ಲಿನ ಅಣಕು ಪ್ರಜಾಪ್ರಭುತ್ವ. ಪ್ರವಾಸದ ಕನಸುಗಳು ಮುರಿದು ಬೀಳುವ ತುರ್ಕಮೆನಿಸ್ತಾನ್ ದೇಶದಲ್ಲಿ ಪ್ರವಾಸೋದ್ಯಮವನ್ನು ಲಿಖಿತವಾಗಿ ನಿಷೇಧಿಸಿಲ್ಲ. ಇನ್ನೂ ಕ್ರೂರವಾಗಿ ಪ್ರವಾಸವನ್ನು ಅಸಾಧ್ಯವಾಗಿಸಿದೆ.
ಅಲ್ಲಿನ ಸರಕಾರದಿಂದ ಪರವಾನಗಿ ಪಡೆದ ಏಜೆನ್ಸಿಯಿಂದ LOI (ಲೆಟರ್ ಆಫ್ ಇನ್ವೈಟ್) ಇಲ್ಲದೆ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವೇ ಇಲ್ಲ. ಆಹ್ವಾನ ಸಿಕ್ಕರೂ ವೀಸಾ ಖಾತ್ರಿಯಿರುವುದಿಲ್ಲ. 99% ವೀಸಾ ಅರ್ಜಿಗಳನ್ನು ಕಾರಣ ನೀಡದೆಯೇ ತಿರಸ್ಕರಿಸಲಾಗುತ್ತದೆ. ಪತ್ರಕರ್ತರು, ಎನ್‌ಜಿಒ ಕಾರ್ಯಕರ್ತರು, ಇಸ್ರೇಲ್‌ಗೆ ಹೋಗಿರುವವರು, ಸೇನೆಯಲ್ಲಿ ಕೆಲಸ ಮಾಡಿದವರು ಇವರುಗಳಿಗೆ ಈ ದೇಶದ ಬಾಗಿಲು ಸ್ವಯಂಚಾಲಿತವಾಗಿ ಮುಚ್ಚುತ್ತದೆ.

ವೀಸಾ ಸಿಕ್ಕಿದರೂ ಪ್ರವಾಸಿಯ ಗುದ್ದಾಟ ಮುಂದುವರಿಯುತ್ತದೆ. ಅಲ್ಲಿನ ಸರಕಾರಿ ಗೈಡ್ ಇಲ್ಲದೆ ಒಂದು ಹೆಜ್ಜೆಯನ್ನೂ ಇಡುವಂತಿಲ್ಲ. ಅವರು ಟೂರ್ ಗೈಡ್‌ಗಳಲ್ಲ, ಪ್ರವಾಸಿಯ ಛಾಯೆಯಂತೆ, ಅವರ ಮೇಲೆ ಕಣ್ಗಾವಲು ಇಡುವ ಒಂದು ಯಂತ್ರದಂತೆ ಇರುತ್ತಾರೆ. Sorry ಎನ್ನುವ ಭಾವಕ್ಕೆ, ಪದಕ್ಕೆ ಅಸ್ತಿತ್ವವೇ ಇಲ್ಲದ ಈ ನೆಲದಲ್ಲಿ ಪ್ರವಾಸಿ ಎನ್ನುವ ರಿಯಾಯಿತಿಯೂ ಇಲ್ಲದೆ ಎಲ್ಲದಕ್ಕೂ ಶಿಕ್ಷೆ ವಿಧಿಸಲಾಗುತ್ತದೆ. ಒಮ್ಮೆ ಒಂದು ಹೊಟೇಲಿನಲ್ಲಿ ಉಳಿದುಕೊಂಡರೆ ಯಾವುದೇ ಕಾರಣಕ್ಕೂ ಬದಲಾಯಿಸುವ ಹಾಗಿಲ್ಲ. ಗೈಡ್ ಹೇಳುವ ಸ್ಥಳ ಬಿಟ್ಟು ಬೇರೆ ಕಡೆ ಫೊಟೋ ತೆಗೆದರೆ, ಕೂಡಲೇ ಕ್ಯಾಮೆರಾದಿಂದ ಫೊಟೋ ಅಳಿಸಲಾಗುತ್ತದೆ. ಜೈಲು ಶಿಕ್ಷೆಯಾದ ಘಟನೆಗಳೂ ಇವೆ.
2018ರಲ್ಲಿ ಬ್ರಿಟಿಷ್ ಪ್ರವಾಸಿಯೊಬ್ಬ ಡ್ರೋನ್ ಹಾರಿಸಿದಾಗ ತಕ್ಷಣವೇ ಆತನನ್ನು ಬಂಧಿಸಿ ವಿಚಾರಣೆಯೂ ಇಲ್ಲದೆ ಮೂರು ತಿಂಗಳ ಕಾಲ ಜೈಲಿನಲ್ಲಿ ಇರಿಸಿ ನಂತರ ಗಡಿಪಾರು ಮಾಡಲಾಗಿತ್ತು. ಅಲ್ಲಿನ ಅಧ್ಯಕ್ಷರ ಬಗ್ಗೆ ತಮಾಷೆ ಮಾಡಿದ ಕೆನಡಾ ಪ್ರವಾಸಿಯೊಬ್ಬನನ್ನು ಸೆರೆಮನೆಯ ಕತ್ತಲೆ ಕೋಣೆಯಲ್ಲಿ ಒಂದಷ್ಟು ದಿನಗಳು ಇಡಲಾಗಿತ್ತು. ಹೊಟೇಲಿನ ರೂಮಿನಲ್ಲಿ ಧಾರ್ಮಿಕ ಪುಸ್ತಕ ಇಟ್ಟಿದ್ದ ಅಮೆರಿಕನ್ ಪ್ರವಾಸಿಯೊಬ್ಬನನ್ನು 12 ಗಂಟೆಗಳ ವಿಚಾರಣೆಯ ನಂತರ ಗಡಿಪಾರು ಮಾಡಲಾಗಿತ್ತು.
ಫೇಸ್‌ಬುಕ್, ಯೂಟ್ಯೂಬ್, ವಾಟ್ಸಾಪ್ ಮತ್ತು ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ಇಲ್ಲಿ ನಿಷೇಧಿಸಲಾಗಿದೆ. ಇಂಟರ್‌ನೆಟ್ ಇಲ್ಲದ ಈ ದೇಶದಲ್ಲಿ, ಐಫೋನ್ ಹಿಡಿದ ಪ್ರವಾಸಿ ಅತಿಥಿಯಲ್ಲ, ಆತ ಭದ್ರತೆಗೆ ಅಪಾಯ. ಅಷ್ಟೇ ಅಲ್ಲ, ಯಾರೂ ಆ ದೇಶದಲ್ಲಿನ ತಮ್ಮ ಪ್ರವಾಸದ ಅನುಭವದ ಬಗ್ಗೆ ಬರೆದು ಪ್ರಕಟಿಸುವ ಹಾಗೂ ಇಲ್ಲ. ಯಾಕಿಷ್ಟು ಕಟ್ಟುಪಾಡು? ಇದು ಆಡಳಿತಕ್ಕೆ ಇರುವ ಭಯವೇ?

ತುರ್ಕಮೆನಿಸ್ತಾನ್ ವಿಶ್ವದ 4ನೆಯ ಅತಿದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪ ಹೊಂದಿದೆ. ಚೀನಾಕ್ಕೆ ಮಾಡುತ್ತಿರುವ ಅನಿಲದ ರಫ್ತಿನಿಂದ ಸರಕಾರದ ಆದಾಯದ ಶೇ.80ರಷ್ಟು ಪೂರ್ತಿಗೊಳ್ಳುತ್ತಿದೆ. ಒಂದು ಲಕ್ಷ ಪ್ರವಾಸಿಗರು ಒಂದು ವಾರದ ಅನಿಲ ಮಾರಾಟಕ್ಕಿಂತ ಕಡಿಮೆ ಗಳಿಕೆ ತರುತ್ತಾರೆ. ಆದ್ದರಿಂದ ʼಪ್ರವಾಸೋದ್ಯಮ ಬೇಕಿಲ್ಲʼ ಎಂಬ ನಿರ್ಧಾರ ಕೈಗೊಂಡಿದೆ ಇಲ್ಲಿನ ಸರಕಾರ.
ತುರ್ಕಮೆನಿಸ್ತಾನ್ ದೇಶದ ಅಧ್ಯಕ್ಷ ತುರ್ಕ್‌ಮೆನ್ ಬಾಶಿಯು , 75 ಅಡಿ ಎತ್ತರದ ತನ್ನ ಚಿನ್ನದ ಪ್ರತಿಮೆಯನ್ನು ನಿರ್ಮಿಸಿ ಅದು ಸೂರ್ಯನ ಚಲನೆಯೊಂದಿಗೇ ನಿಂತಕಡೆಯೇ ಚಲಿಸುವಂತೆ ಮಾಡಿದ್ದಾನೆ. ಇದು ಪ್ರವಾಸಿಗರನ್ನು ಅತಿಯಾಗಿ ಆಕರ್ಷಿಸುತ್ತಿರುವ ವಸ್ತು. ʼನಾಯಕನೇ ರಾಜ್ಯ, ರಾಜ್ಯವೇ ನಾಯಕʼ ಎಂಬಂತಿರುವ ಈ ದೇಶಕ್ಕೆ ಇಷ್ಟೊಂದು ಕಟ್ಟುಪಾಡಿನ ನಡುವೆ ನಿರ್ಬಂಧಗಳ, ಆತಂಕದ ಜತೆಗೆ ಪ್ರವಾಸಿ ಹೋಗಲು ಬಯಸುತ್ತಿರುವುದಾದರೂ ಯಾಕೆ? ಏಕೆಂದರೆ ಇಲ್ಲಿ ನಿಷೇಧದ ನೆರಳಿನಲ್ಲೂ ಹೊಳೆಯುವ ಸ್ಥಳಗಳಿವೆ. ಜಗತ್ತಿನ ಎಲ್ಲಾ ದೇಶಗಳಿಗೂ ಭೇಟಿ ನೀಡಬೇಕೆನ್ನುವ ಆಸೆ ಇಟ್ಟುಕೊಂಡಿರುವ ಪ್ರವಾಸಿಗಳು, ಡಾರ್ಕ್ ಟೂರಿಸಂ ಪ್ರಿಯರು, ರೇಷ್ಮೆ ಮಾರ್ಗದ ಸಂಶೋಧಕರು ತುರ್ಕಮೆನಿಸ್ತಾನ್‍ಗೆ ಭೇಟಿ ಕೊಡಲು ಉತ್ಸುಕರಾಗಿರುತ್ತಾರೆ.
ಇರಾನ್ ಜತೆಗೆ ಗಡಿಯನ್ನು ಹಂಚಿಕೊಂಡಿರುವ ಇಲ್ಲಿನ ರಾಜಧಾನಿ ಅಶ್ಗಾಬಾತ್ ಜಗತ್ತಿನಲ್ಲೇ ಅತಿ ಹೆಚ್ಚು ಬಿಳಿ ಅಮೃತಶಿಲೆಯ ಕಟ್ಟಡ ಹೊಂದಿರುವ ನಗರ ಎಂಬ ಗಿನ್ನೆಸ್ ದಾಖಲೆ ಹೊಂದಿದೆ. ಕಾರಕುಮ್ ಮರುಭೂಮಿಯಲ್ಲಿ ಉರಿಯುತ್ತಿರುವ ಜ್ವಾಲೆಗಳು ರಾತ್ರಿಯಲ್ಲಿ ಮರುಭೂಮಿಯನ್ನು ರಕ್ತದ ಬಣ್ಣದಲ್ಲಿ ಬೆಳಗಿಸುತ್ತವೆ. ಈ ’ನರಕದ ಬಾಗಿಲು’ (ಡಾರ್ವಾಜಾ ಕುಳಿ)ಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಪಂಚದಲ್ಲಿ ಸಾವಿರಾರು ಜನರು ಕಾಯುತ್ತಿದ್ದಾರೆ. ಒಂದು ಕಾಲದಲ್ಲಿ ಇಸ್ಲಾಮಿಕ್ ಜಗತ್ತಿನ ಅತಿದೊಡ್ಡ ನಗರ ಎನ್ನುವ ಖ್ಯಾತಿ ಪಡೆದು ಈಗ ಯುನೆಸ್ಕೋ ತಾಣ ಎಂದು ಗುರುತಿಸಿಕೊಂಡಿರುವ ಮೆರ್ವ್ ನಗರವನ್ನು ನೋಡುವುದು ಬಹಳಷ್ಟು ಪ್ರವಾಸಿಗರ ಕನಸು. ಮರಳಿನ ದಿಬ್ಬಗಳಿಂದ ಎದ್ದು ನಿಂತಿರುವ 12ನೆಯ ಶತಮಾನದ ಕೊನ್ಯೆ-ಉರ್ಗೆಂಚ್ ಮಿನಾರ್‌ಗಳು, ಮಧ್ಯ ಏಷ್ಯಾದ ಗ್ರ್ಯಾಂಡ್ ಕ್ಯಾನ್ಯನ್ ಎನಿಸಿಕೊಂಡಿರುವ ಗುಲಾಬಿ, ಬಿಳಿ, ಹಳದಿ ಬಣ್ಣದ ಬಂಡೆಗಳ ಯಾಂಗಿಕಾಲಾ ಕಣಿವೆಗಳು ಸೌಂದರ್ಯಕ್ಕೆ ಪರ್ಯಾಯ ಪದಗಳೇ ಆಗಿ ಪ್ರವಾಸಿಗರನ್ನು ಬಿಸಿಯುಸಿರಿನಲ್ಲಿ ಕರೆಯುತ್ತಿವೆ. ಆದರೆ ಈ ಸೌಂದರ್ಯವನ್ನು ನೋಡಲು, ಪ್ರತಿಯೊಂದು ಹೆಜ್ಜೆಗೂ ಅನುಮತಿ ಬೇಕು.
ಪ್ರವಾಸಿಗೆ ಮಾತ್ರವಲ್ಲ ತುರ್ಕಮೆನ್ ನಾಗರೀಕರಿಗೂ ದೇಶದಿಂದ ಹೊರಗೆ ಹೋಗಿ ಮತ್ತೆ ಹಿಂದಿರುಗಲು ಹಾಗೂ ಅದೇ ದೇಶದ ರಾಜಧಾನಿಯನ್ನು ಪ್ರವೇಶಿಸಲೂ ʼನಿರ್ಗಮನ ವೀಸಾʼ ಬೇಕು. ತುರ್ಕಮೆನಿಸ್ತಾನ್ ಮುಚ್ಚಿಲ್ಲ. ಅದಕ್ಕೆ ಬೀಗ ಹಾಕಲ್ಪಟ್ಟಿದೆ. ಆ ಬೀಗದ ಕೀಲಿಕೈ ಎಂದರೆ ಭಯ ಮತ್ತು ಆತಂಕ. ಇಲ್ಲಿ ಪ್ರವಾಸ ಎಂದರೆ ಸಾಹಸ ಮಾತ್ರವಲ್ಲ, ಸಹನೆ ಕೂಡ. ಫೋಟೋ ಎಂದರೆ ನೆನಪಲ್ಲ, ಅಪರಾಧ ಮತ್ತು ಪ್ರವಾಸಿ ಎಂದರೆ ಅತಿಥಿಯಲ್ಲ, ಅನುಮಾನ. ಬ್ಯಾಕ್‌ಪ್ಯಾಕರ್‌ಗಳು, ಕುಟುಂಬಗಳು, ಲಕ್ಸುರಿ ಪ್ರವಾಸಿಗರು ಇಲ್ಲಿ ಕಾಣಿಸುವುದಿಲ್ಲ. ಸ್ವತಂತ್ರ ಪ್ರಯಾಣ ಸಾಧ್ಯವಿಲ್ಲ , ಖಾಸಗಿ ತಂಗುದಾಣಗಳಿಲ್ಲ ಹಾಗೂ ಇಂಟರ್‌ನೆಟ್ ಇಲ್ಲದಿದ್ದರೂ ಇಲ್ಲಿಗೆ ವರ್ಷಕ್ಕೆ 6,000 ದಿಂದ 10,000 ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಪ್ರವಾಸ ಎನ್ನುವುದು ಮನುಷ್ಯನ ಮೂಲಭೂತ ವಾಂಛೆ ಎನ್ನುವುದನ್ನು ಪ್ರಮಾಣೀಕರಿಸುತ್ತದೆ. ಹಾಂ, ಈ ದೇಶಕ್ಕೆ ನಾನು ಇನ್ನೂ ಭೇಟಿ ಕೊಟ್ಟಿಲ್ಲ.