ದಟ್ಟ ಕಾನನದ ನಟ್ಟ ನಡುವೆ ಇಹಳು ʻಕರಿಕಾನ ಪರಮೇಶ್ವರಿʼ
ಬೆಟ್ಟದ ತುದಿಯಲ್ಲಿನ ಮನೆಯೊಂದರ ಗೋವು, ಪ್ರತಿದಿನ ಈ ಸ್ಥಳಕ್ಕೆ ಬಂದು, ತನ್ನಷ್ಟಕ್ಕೆ ತಾನು ಹಾಲು ಕರೆದು ಹೋಗುತ್ತಿತ್ತು ಎನ್ನಲಾಗಿದೆ. ಈ ಕಾಯಕ ಬಹಳ ದಿನಗಳವರೆಗೆ ಗೌಪ್ಯವಾಗಿಯೇ ಉಳಿದಿತ್ತು. ಆದರೆ, ಹಸುವಿನ ಮಾಲಿಕ ಒಂದು ದಿನ ಹಸುವನ್ನು ಹಿಂಬಾಲಿಸಿದಾಗ, ಈ ವಿಷಯ ಅವನ ಗಮನಕ್ಕೆ ಬಂದಿತು. ಅಂದಿನಿಂದ ಆ ಬಂಡೆಕಲ್ಲು ದೇವಿಯ ರೂಪದಲ್ಲಿ ಕಾಣಲಾರಂಭಿಸಿತು. ಆ ಬಂಡೆಯೂ ಬೆಳೆಯುತ್ತಾ ದೇವಿಯ ಆಕಾರ ಪಡೆಯಿತು…
- ಶಂಕರನಾರಾಯಣ ಭಟ್
ನಮ್ಮ ಪ್ರಧಾನಿ ಮೋದಿ ದೇಶವಾಸಿಗಳಿಗೆ ಕೊಟ್ಟ ಸಂದೇಶದಲ್ಲಿ, ವಿದೇಶಿ ಪ್ರಯಾಣ ಕಡಿಮೆ ಮಾಡಿ ಎಂಬುದೂ ಇದೆ. ಹೌದಲ್ಲವೆ? ನಮ್ಮ ದೇಶದಲ್ಲೇ, ನಮ್ಮೂರಿನ ಸುತ್ತಮುತ್ತಲೇ ಅತ್ಯಂತ ರಮಣೀಯ, ಪ್ರೇಕ್ಷಣೀಯ ಸ್ಥಳಗಳು ಸಾಕಷ್ಟಿವೆ. ಹೀಗಿರುವಾಗ ಪ್ರವಾಸದ ಹೆಸರಿನಲ್ಲಿ ಎಲ್ಲೆಲ್ಲೋ ಪಯಣ ಬೆಳೆಸುವುದೇಕೆ? ಈಗ ನಾನು ಹೇಳಲು ಹೊರಟಿರುವ ಸ್ಥಳವೂ ಇದಕ್ಕೆ ಪೂರಕವಾಗಿದೆ. ಅದೇ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯ.
ಇದನ್ನೂ ಓದಿ:ಅರಣ್ಯದ ಮೌನದಲ್ಲಿ ಅರಳಿದ ದೈವತ್ವ!
ಇದು ದೇವಾಲಯ. ಆದರ ಜತೆಗೆ ಇಲ್ಲಿನ ಸ್ಥಳ ಮಾತ್ರ ಪ್ರಕೃತಿ ಸೌಂದರ್ಯದ ಬೀಡು. ದಟ್ಟ ಕಾಡಿನ ಮಧ್ಯೆ ವಿರಾಜಮಾನವಾದ ದೇವಿ ಆಕಾರದ ಒಂದು ಬಂಡೆಕಲ್ಲು! ಕೇಳಲು ಸರಳ ಅನಿಸಿದರೂ ಇದರ ಹಿಂದಿರುವ ವಾಸ್ತವ ನಿಜಕ್ಕೂ ದಂಗು ಬಡಿಸುವಂಥದ್ದು.

ಇತಿಹಾಸ
ಈ ಬೆಟ್ಟದ ತುದಿಯಲ್ಲಿನ ಮನೆಯೊಂದರ ಗೋವು, ಪ್ರತಿದಿನ ಈ ಸ್ಥಳಕ್ಕೆ ಬಂದು, ತನ್ನಷ್ಟಕ್ಕೆ ತಾನು ಹಾಲು ಕರೆದು ಹೋಗುತ್ತಿತ್ತು ಎನ್ನಲಾಗಿದೆ. ಈ ಕಾಯಕ ಬಹಳ ದಿನಗಳವರೆಗೆ ಗೌಪ್ಯವಾಗಿಯೇ ಉಳಿದಿತ್ತು. ಆದರೆ, ಹಸುವಿನ ಮಾಲಿಕ ಒಂದು ದಿನ ಹಸುವನ್ನು ಹಿಂಬಾಲಿಸಿದಾಗ, ಈ ವಿಷಯ ಅವನ ಗಮನಕ್ಕೆ ಬಂದಿತು. ಅಂದಿನಿಂದ ಆ ಬಂಡೆಕಲ್ಲು ದೇವಿಯ ರೂಪದಲ್ಲಿ ಕಾಣಲಾರಂಭಿಸಿತು. ಆ ಬಂಡೆಯೂ ಬೆಳೆಯುತ್ತಾ ದೇವಿಯ ಆಕಾರ ಪಡೆಯಿತು ಎನ್ನಲಾಗಿದೆ. ಇಲ್ಲಿ ಮೂರ್ತಿಯೂ ಇಲ್ಲ, ಕೆತ್ತನೆಯೂ ಇಲ್ಲ. ತನ್ನಷ್ಟಕ್ಕೆ ಬೆಳೆದು ನಿಂತ ದೇವಿಯ ಆಕಾರದ ಬಂಡೆಯಿದೆ.
ಪ್ರತಿವರ್ಷ ಇಲ್ಲಿ 'ಅಹೋರಾತ್ರಿ ಸಂಗೀತೋತ್ಸವ' ನಡೆಯುತ್ತಿದೆ. ಈ ಸಮಯದಲ್ಲಿ ಪ್ರೇಕ್ಷಕರಿಗೆ ಕಲ್ಲಿನ ಬಂಡೆಯೇ ಆಸನ. ಇರುವ ಸಪಾಟ ಜಾಗವೇ ವೇದಿಕೆ! ಆದರೂ ದೇಶದ ಹೆಸರಾಂತ ಕಲಾವಿದರು ಅಂದು ಬಂದು ತಮ್ಮ ಕಲಾ ಸೇವೆ ಪೂರೈಸುತ್ತಾರೆ. ಚಿಕ್ಕ ಸಭಾ ಭವನವನ್ನು ಇಲ್ಲಿ ನಿರ್ಮಿಸಲಾಗಿದೆ. ತಾಳಮದ್ದಳೆಯಂಥ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಗ್ಗಾಗ್ಗೆ ನಡೆಸಲಾಗುತ್ತಿದೆ.
ಇಲ್ಲಿ ಯಾವುದೇ ಆಡಂಬರ, ಅದ್ದೂರಿ ಜಾತ್ರೆಗಳಿಲ್ಲ. ನವರಾತ್ರಿಯ ದಿನಗಳಂದು ವಿಶೇಷ ಪೂಜೆ ಇರುತ್ತದೆ. ಇತ್ತೀಚೆಗೆ ಈ ತಾಣಕ್ಕೆ ಭೇಟಿ ನೀಡುತ್ತಿರುವ ಭಕ್ತಾದಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರವಾಸಿ ತಾಣವಾಗುವ ಎಲ್ಲ ಗುಣಗಳಿದ್ದರೂ, ಪ್ರವಾಸೋದ್ಯಮ ಇಲಾಖೆ ಇನ್ನೂ ಇತ್ತ ಗಮನ ನೀಡಿಲ್ಲ. ಸದ್ಯ, ಅಲ್ಲಿ ಯಾವ ಮೂಲಭೂತ ಸೌಕರ್ಯಗಳೂ ಇಲ್ಲ. ಅಭಿವೃದ್ಧಿ ಕಾರ್ಯಗಳಾದರೆ ಕರಿಕಾನ ಪರಮೇಶ್ವರಿ ದೇವಾಲಯ ಅತ್ಯುತ್ತಮ ಪ್ರವಾಸಿ ಕೇಂದ್ರವಾಗಬಲ್ಲದು.

ಇಲ್ಲಿನ ವಿಶೇಷಗಳು
ಉತ್ತರ ಕನ್ನಡ ಜಿಲ್ಲೆಯಲ್ಲಿನ ತಾಣ ಇದಾಗಿರುವುದರಿಂದ ಇಲ್ಲಿ ಹತ್ತಾರು ಪ್ರವಾಸಿ ಆಕರ್ಷಣೆಯ ಅಂಶಗಳಿವೆ. ಕಲ್ಲು ಬಂಡೆಗಳ ಮಧ್ಯೆ ಹರಿಯುವ ಝರಿಗಳು. ದಟ್ಟ ಕಾನನದ ಹಚ್ಚ ಹಸಿರು ಪರಿಸರ, ಬೇಸಿಗೆಯ ಉರಿಯಲ್ಲೂ ತಂಪೆರೆಯುವ ವಾತಾವರಣ, ಮಂದ ಗಾಳಿ, ಚಳಿಗಾಲದಲ್ಲಿ ಮಂಜಿನಿಂದ ಸುತ್ತುವರೆಯುವ ಬೆಟ್ಟದ ದೃಶ್ಯ, ಇನ್ನು ಮಳೆಗಾಲದ ರಮಣೀಯ ದೃಶ್ಯ ಎಲ್ಲವೂ ಸುಂದರವಾಗಿತ್ತವೆ. ಸೂರ್ಯೋದಯ ಮತ್ತು ಸೂರ್ಯಾಸ್ತ ನೋಟಕ್ಕೂ ಈ ತಾಣ ಪ್ರಸಿದ್ಧವಾಗಿದೆ.
ದಾರಿ ಹೇಗೆ?
ಈ ಕ್ಷೇತ್ರ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಕೇವಲ 10 ಕಿಮಿ ಅಂತರದಲ್ಲಿದೆ. ಕಾಡಿನ ಮಧ್ಯದ ಈ ದೇವಾಲಯದವರೆಗೂ ರಸ್ತೆ ಸಂಪರ್ಕವಿದೆ. ಆದರೂ ಮಳೆಗಾಲದಲ್ಲಿ ಸ್ವಲ್ಪ ಎಚ್ಚರ ವಹಿಸುವುದು ಅಗತ್ಯ.