Friday, July 10, 2026
Friday, July 10, 2026

ಎಚ್ಚರ... ಪ್ರವಾಸ ನಿಮ್ಮ ವಯಸ್ಸನ್ನು ಹಿಡಿದು ನಿಲ್ಲಿಸುತ್ತದೆ

ಈವರೆಗೆ ಪ್ರವಾಸ ಎಂದರೆ, ಜೀವನದ ಉಬ್ಬು-ತಗ್ಗುಗಳಲ್ಲಿ ಇಳಿದು-ಹತ್ತಿದ ಆಯಾಸ ಮರೆಯುವುದು, ಆಫಿಸ್‌ ಕೆಲಸಗಳಿಂದ ವಿಮುಕ್ತಿ ಪಡೆದು ಬೀಚ್‌- ಬಾಟಲಿಗಳ ಜತೆಯಾಗುವುದು, ಬೆಟ್ಟಗಳ ಮಾರ್ಗ ಹಿಡಿಯುವುದು, ಸಂತೋಷವನ್ನು ಕಂಡುಕೊಳ್ಳುವುದು ಎಂಬುದು ನನ್ನ ಕಲ್ಪನೆಯಾಗಿತ್ತು. ಆದರೆ ತಿಳಿದೋ ತಿಳಿಯದೆಯೋ ಪ್ರವಾಸ ಮುಗಿದ ನಂತರ ಒಂದು ಸುಂದರ ನಗುವಿನೊಂದಿಗೆ ಮರುದಿನ ಆಫಿಸ್‌ ಕೆಲಸಕ್ಕೆ ಹಾಜರಾಗುತ್ತಿದ್ದೆ. ಇದಕ್ಕೆಲ್ಲ ಕಾರಣ ಪ್ರವಾಸವೆಂಬ ಔಷಧ ಎಂಬುದು ಆ ಸಂಶೋಧನಾ ಪ್ರಬಂದ ಓದಿದ ನಂತರ ಅರಿವಿಗೆ ಬಂದಿದೆ.

ಅಲೋಪತಿ ಅಥವಾ ಹೋಮಿಯೋಪತಿ ಔಷಧಗಳ ಜತೆಗೂಡಿ ಡಿಪ್ರೆಷನ್‌, ಸ್ಟ್ರೆಸ್‌, ಆಂಕ್ಸೈಟಿಯನ್ನೂ ಹತೋಟಿಯಲ್ಲಿಡುವ ತಾಕತ್ತನ್ನು ಒಂದು ಉತ್ತಮ ಪ್ರವಾಸ ಹೊಂದಿದೆ. ಒಂದೇ ವಿಷಯವನ್ನು ಪದೇ ಪದೆ ಮಾಡುವುದರಿಂದ ಮನಸು, ಆ ಮೂಲಕ ದೇಹವೂ ಸುಸ್ತನ್ನು ಅನುಭವಿಸುತ್ತದೆ. ಹಾಗಾಗಿ ಮಧ್ಯೆ ಒಂದು ಬ್ರೇಕ್‌ನಂತೆ ಒಂದು ಪ್ರವಾಸ ಮಾಡುವುದು ಉತ್ತಮ. ಈ ವೇಳೆ ಪ್ರವಾಸಿ ಹೊಸ ನೋಟಗಳು, ಹೊಸ ವಿಷಯಗಳು ಮತ್ತು ಹೊಸ ಅನುಭವಗಳನ್ನು ಪಡೆಯುತ್ತಾನೆ. ಹೊಸ ಮುಖಗಳನ್ನು ಪರಿಚಯ ಮಾಡಿಕೊಳ್ಳುತ್ತಾನೆ. ಯಾರೊಂದಿಗಾದರೂ ಆತ ತನ್ನ ದುಖಃಗಳನ್ನು ತೋಡಿಕೊಳ್ಳುತ್ತಾನೆ. ಹಗುರಾಗುವ ತನಕ ಅಳುತ್ತಾನೆ. ಈ ವಿಷಯಗಳು ಮೇಲ್ನೋಟಕ್ಕೆ ಸಾಮಾನ್ಯವಾಗಿ ಕಂಡರೂ, ಮನುಷ್ಯನ ದೇಹ ಮತ್ತು ಮನಸಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ. ಈ ಕುರಿತು ಸಂಶೋದಕರು ಅರಿತುಕೊಂಡ ಅದ್ಭುತ ಅಂಶವೆಂದರೆ, ಒಂದು ಉತ್ತಮ ವಾರದ ಪ್ರವಾಸ ಕೆಲವು ವ್ಯಕ್ತಿಗಳಲ್ಲಿ ಐದಾರು ವಾರಗಳವರೆಗೆ ಪಾಸಿಟಿವ್‌ ಇಂಪ್ಯಾಕ್ಟನ್ನು ಉಳಿಸುತ್ತವೆ ಎಂಬುದು.

ಇದನ್ನೂ ಓದಿ:ಪ್ರವಾಸಿಗನೇ ಪ್ರವಾಸೋದ್ಯಮಕ್ಕೆ ಶತ್ರು!

ಇದನ್ನು ಅರಿತ ಸಂದರ್ಭ ನಾನು ಪ್ರವಾಸಕ್ಕೆ ಅಣಿಯಾಗಲು ಕಾರಣ ಹುಡುಕಿ ಕೊಟ್ಟಿತು. ಮಿತ್ರ ನಾರಾಯಣ ಪ್ರವಾಸಪ್ರಿಯ. ನಾನೂ ಸಹ. ಅವನೊಂದಿಗೆ ಒಂದು ಸಂಜೆ ಕಾಲಕಳೆಯಲು ಜತೆಯಾಗಿ ಸುತ್ತಾಡುತ್ತಿದ್ದೆ. ಕಾಲೆಳೆಯಲು ನಾನು ಆತನಿಗೆ ಪ್ರವಾಸದಿಂದ ಏನು ಸಿಕ್ಕಿತೋ ನಾಣಿ? ಎಂದು ಕೇಳಿದೆ. ಅದಕ್ಕಾತ ಕೊಂಚ ವಯಸ್ಸನ್ನು ಕಡಿಮೆ ಮಾಡಿಕೊಂಡಿದ್ದೇನೆ ಎಂದ. ಬಾಯಿ ಮಾತಿಗೆ ಏನೋ ಹೇಳುತ್ತಿದ್ದೀಯ ಎನ್ನುವ ಹೊತ್ತಿಗೆ, ತನ್ನ ಜೇಬಿಂದ ಮೊಬೈಲ್‌ ಹೊರಗೆ ತೆಗೆದ. ಜರ್ನಲ್‌ ಆಫ್‌ ಟ್ರಾವೆಲ್‌ ರಿಸರ್ಚ್‌ನಲ್ಲಿ ಪ್ರಕಟವಾಗಿದ್ದ ಒಂದು ಸಂಶೋಧನಾ ಪ್ರಬಂದವನ್ನು ನನಗೆ ತೋರಿಸಿದ. ಕುತೂಹಲ ಕೆರಳಿ ಅದನ್ನು ಶೇರ್‌ ಮಾಡಿಕೊಂಡು ಮರುದಿನ ಸಂಜೆ ಓದಿದೆ.

Untitled design (19)

ಈವರೆಗೆ ಪ್ರವಾಸ ಎಂದರೆ, ಜೀವನದ ಉಬ್ಬು-ತಗ್ಗುಗಳಲ್ಲಿ ಇಳಿದು-ಹತ್ತಿದ ಆಯಾಸ ಮರೆಯುವುದು, ಆಫಿಸ್‌ ಕೆಲಸಗಳಿಂದ ವಿಮುಕ್ತಿ ಪಡೆದು ಬೀಚ್‌- ಬಾಟಲಿಗಳ ಜತೆಯಾಗುವುದು, ಬೆಟ್ಟಗಳ ಮಾರ್ಗ ಹಿಡಿಯುವುದು, ಸಂತೋಷವನ್ನು ಕಂಡುಕೊಳ್ಳುವುದು ಎಂಬುದು ನನ್ನ ಕಲ್ಪನೆಯಾಗಿತ್ತು. ಆದರೆ ತಿಳಿದೋ ತಿಳಿಯದೆಯೋ ಪ್ರವಾಸ ಮುಗಿದ ನಂತರ ಒಂದು ಸುಂದರ ನಗುವಿನೊಂದಿಗೆ ಮರುದಿನ ಆಫಿಸ್‌ ಕೆಲಸಕ್ಕೆ ಹಾಜರಾಗುತ್ತಿದ್ದೆ. ಇದಕ್ಕೆಲ್ಲ ಕಾರಣ ಪ್ರವಾಸವೆಂಬ ಔಷಧ ಎಂಬುದು ಆ ಸಂಶೋಧನಾ ಪ್ರಬಂದ ಓದಿದ ನಂತರ ಅರಿವಿಗೆ ಬಂದಿದೆ.

ಕಣ್ಣಿನ ಸಮಸ್ಯೆ ಇದ್ದಾಗ ಡಾಕ್ಟರ್‌ಗಳು ಗಿಡ-ಮರಗಳ ಹಸಿರು ನೋಡಿ, ಸಮುದ್ರದ ನೀಲಿ ನೋಡಿ, ಮೊಬೈಲ್‌-ಕಂಪ್ಯೂಟರ್‌ ಬಳಕೆ ಕಡಿಮೆ ಮಾಡಿ ಎನ್ನುತ್ತಿದ್ದರು. ಒಂದರ್ಥದಲ್ಲಿ ಇಲ್ಲೂ ಅವರು ಒಂದು ಸುಂದರ ಪ್ರವಾಸ ಮಾಡಲು ಉತ್ತೇಜಿಸುತ್ತಿದ್ದರು ಎನ್ನುವುದು ವರದಿ ಓದಿದ ನಂತರದ ನನ್ನ ಅನಿಸಿಕೆಯಾಗಿತ್ತು.

ಪ್ರವಾಸ ಮನುಷ್ಯನ ವಯಸ್ಸಾಗುವಿಕೆಯನ್ನು ಹೇಗೆ ನಿಧಾನವಾಗಿಸುತ್ತದೆ? ಈ ಪ್ರಶ್ನೆ ಮೂಡುವುದು ಸಹಜ. ಇದೇ ʻThe Principle of Entropy Increase: A Novel View of How Tourism Influences Human Healthʼ ಪ್ರಬಂಧದ ಸಂಶೋಧನಾ ವಿಷಯ. ಒಂದರ್ಥದಲ್ಲಿ ಅದರ ಜೀವಾಳ. ಇದೊಂದು ಅಪ್ಲೈಡ್‌ ಟೈಪ್‌ ಆಫ್‌ ರಿಸರ್ಚ್‌. ಪ್ರವಾಸ ಮನುಷ್ಯನ ದೇಹದ ವಯಸ್ಸಾಗುವಿಕೆಯನ್ನು ಹೇಗೆ ನಿಧಾನಗೊಳಿಸುತ್ತದೆ ಎಂಬುದರ ಸವಿಸ್ಥಾರ ವರದಿ ನೀಡಿದೆ. ಅದರ ಪ್ರಕಾರ ಎಂಟ್ರೋಪಿ ಅಂಶವು ಮನುಷ್ಯನ ದೇಹದ ವಯಸ್ಸಾಗುವಿಕೆಯನ್ನು ನಿಯಂತ್ರಿಸುತ್ತದೆ. ನಮ್ಮ ದೇಹದಲ್ಲಿ ಈ ಎಂಟ್ರೋಪಿ ಹೆಚ್ಚಾದರೆ, ದೇಹದ ವಯಸ್ಸಾಗುವಿಕೆ ವೇಗ ಪಡೆಯುತ್ತದೆ. ಹಾಗೇ ಕಡಿಮೆಯಾದರೆ ವಯಸ್ಸಾಗುವಿಕೆಯೂ ನಿಧಾನವಾಗುತ್ತದೆ. ಇಲ್ಲಿ ಗಮನವಿಡಬೇಕಾದ ಅಂಶ ವಯಸ್ಸು ಹೆಚ್ಚೂಕಮ್ಮಿಯಾಗುವಿಕೆ ಎಂದರೆ ದೇಹದ ಆಂತರಿಕ ಸಮತೋಲನ ಸಂಬಂಧಿತ ಪ್ರಕ್ರಿಯೆ.

ಮನುಷ್ಯನ ದೇಹದಲ್ಲಿ ಎಂಟ್ರೋಪಿ ಹೆಚ್ಚಾಗಲು ಸಾಕಷ್ಟು ಕಾರಣಗಳು ಇವೆ. ಆ ಕಾರಣಗಳು ಯಾವುವು? ಎಂಟ್ರೋಪಿ ಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಮತ್ತು ಕಡಿಮೆಯಾಗಿಸಲು ಪ್ರವಾಸ ಹೇಗೆ ಸಹಾಯವಾಗುತ್ತದೆ? ಈ ಪ್ರಶ್ನೆಗಳಿಗೆ ಆಸ್ಟ್ರೇಲಿಯಾದ ಎಡಿತ್ ಕೋವನ್ ವಿಶ್ವವಿದ್ಯಾಲಯದ (ECU) ವಿಜ್ಞಾನಿಗಳ ತಂಡ ನಡೆಸಿದ ಈ ಸಂಶೋದನೆ ಉತ್ತರ ಕಂಡುಕೊಂಡಿದೆ. ಅವುಗಳಲ್ಲಿ ಸೇವಿಸಿದ ಆಹಾರಗಳ ಚಯಾಪಚಯ ಪ್ರಕ್ರಿಯೆ, ಅವುಗಳಿಂದ ದೇಹ ಉತ್ಪಾದಿಸುವ ಶಕ್ತಿ, ದೇಹ ಮತ್ತು ವಾತಾವರಣದ ತಾಪಮಾನದಂಥ ದೈಹಿಕ ಮತ್ತು ಡಿಪ್ರೆಷನ್‌, ಸ್ಟ್ರೆಸ್‌, ಆಂಕ್ಸೈಟಿಯಂಥ ಮಾನಸಿಕ ಕಾರಣಗಳು ಪ್ರಮುಖವಾದವುಗಳು.

Untitled design (21)

ಒಂದು ಉತ್ತಮ ಪ್ರವಾಸದಲ್ಲಿ ಪ್ರವಾಸಿ ಮುಕ್ತ ಮನಸ್ಕನಾಗಿ ಹರ್ಷದಿಂದ ಸಮಯ ಕಳೆಯುತ್ತಾನೆ. ಪ್ರತಿದಿನಕ್ಕಿಂತ ಹೆಚ್ಚು ವಾಕ್‌ ಮಾಡುತ್ತಾನೆ. ನಗುತ್ತಾನೆ- ಅಳುತ್ತಾನೆ. ಹಸಿರನ್ನು ನೋಡುತ್ತಾನೆ. ಚಾರಣ ಮಾಡುತ್ತಾನೆ. ಅಪರಿಚಿತರಲ್ಲಿ ನೋವುಗಳನ್ನು ತೋಡಿಕೊಂಡು ತನ್ನ ಹಳೆಯ ಒತ್ತಡಗಳಿಂದ ಮುಕ್ತನಾಗುತ್ತಾನೆ. ಪ್ರತಿನಿತ್ಯದ ಬದುಕಿಗಿಂತ ಇಂಥ ಹೊಸ ಮತ್ತು ಚೇತೋಹಾರಿ ವಿಷಯಗಳು ದೇಹ ಮತ್ತು ಮನಸಿನ ಜಂಜಡಗಳನ್ನು ದೂರ ಮಾಡುತ್ತವೆ. ಮೇಲಾಗಿ ಇವುಗಳಿಂದ ಎಂಟ್ರೋಪಿ ಸ್ಥಿತಿ ನಿಯಂತ್ರಣದಲ್ಲಿರುತ್ತದೆ ಅಥವಾ ಕಡಿಮೆಯಾಗುತ್ತದೆ. ದೇಹ ಮತ್ತು ಮನಸು ಹಗುರಾಗುತ್ತವೆ. ಸದೃಢವಾಗುತ್ತವೆ. ಇದರ ಪರಿಣಾಮವಾಗಿ ಪ್ರವಾಸಿಯ ದೇಹದ ವಯಸ್ಸಾಗುವಿಕೆಯ ಗತಿಯೂ ನಿಧಾನವಾಗುತ್ತದೆ.

ಹಾಗಾಗಿ ಪ್ರವಾಸ ನಿಜಕ್ಕೂ ಆರೋಗ್ಯಕರ ಜೀವನಕ್ಕೆ ಔಷಧ. ಆದರೆ ಅಂಥ ಪ್ರವಾಸವನ್ನು ನೀವು ಎಂಜಾಯ್‌ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಾಗಲಿ, ಆಟೋಟ ಸ್ಪರ್ಧೆಗಳಾಗಲಿ, ನಡಿಗೆ- ಚಾರಣಗಳಾಗಲಿ ಅವುಗಳಲ್ಲಿ ಪಾಲ್ಗೊಂಡು, ಹೊಸತನ್ನು ಅನುಭವಿಸಬೇಕು. ಈ ವಿಷಯಗಳು ಉಲ್ಟಾ ಹೊಡೆದರೆ ಪರಿಣಾಮವೂ ಉಲ್ಟಾ ಆಗಿರುತ್ತದೆ. ಒತ್ತಡ, ಮಾನಸಿಕ ಭಾದೆ, ಭಯದ ವಾತಾವರಣ, ಅಸುರಕ್ಷತೆ ಮೊದಲಾದ ನಕಾರಾತ್ಮಕ ಭಾವನೆಗಳೇ ಪ್ರವಾಸದಲ್ಲೂ ಸಿಕ್ಕರೆ, ದೇಹ ಮತ್ತು ಮನಸುಗಳು ಮೊದಲಿಗಿಂತಲೂ ಹೆಚ್ಚು ಕುಗ್ಗುತ್ತವೆ. ದೇಹದಲ್ಲಿ ಎಂಟ್ರೋಪಿ ಸ್ಥಿತಿ ಹೆಚ್ಚುತ್ತದೆ.

ಇಲ್ಲಿ ನಾವು ಮಾಡುವ ಅಯ-ವ್ಯಯಗಳು ಆರೋಗ್ಯವನ್ನು ಕಾಪಾಡಿಕೊಳ್ಳುವ ಸುಂದರ ಮಾರ್ಗಗಳು ಎಂಬುದನ್ನು ತಲೆಯಲ್ಲಿಟ್ಟುಕೊಳ್ಳಬೇಕು. ಇಲ್ಲಿ ಚುಚ್ಚು ಮದ್ದುಗಳಿಲ್ಲ. ಡಾಕ್ಟರ್‌ಗಳ ಅಪಾಯಿಂಟ್‌ಗೆ ದುಡ್ಡು ಸುರಿಯಬೇಕಿಲ್ಲ. ಇಷ್ಟವಿಲ್ಲದಿದ್ದರೂ ಔಷಧಿಗಳನ್ನು ನುಂಗುವ ಅವಶ್ಯಕತೆ ಇಲ್ಲ. ಅವುಗಳಿಗಾಗಿ ಸಮಯವನ್ನೂ ವ್ಯಯಿಸಬೇಕಿಲ್ಲ. ಬದಲಿಗೆ ಅದಕ್ಕೆ ತಗುಲುವಷ್ಟು ಹಣದಲ್ಲಿ ಒಂದು ಪ್ರವಾಸ ಮಾಡಬೇಕು. ಅದರಲ್ಲೇ ನಗುವುದನ್ನು ಕಲಿಯಬೇಕು. ನಾಲ್ಕಾರು ಜನರೊಂದಿಗೆ ಬೆರೆಯಬೇಕು. ಒತ್ತಡಗಳನ್ನು ಮರೆಯಬೇಕು. ಅಡ್ಡಾಡಬೇಕು. ಜೀವನರಸ ತುಂತುಂಬಿ ಕುಡಿಯಬೇಕು. ಹಾಗಾಗಿ ನಿತ್ಯಕರ್ಮಗಳಿಂದ ದೂರಾಗಿ ಅವಕಾಶ ಸಿಕ್ಕಾಗ ಒಂದು ಉತ್ತಮ ಪ್ರವಾಸ ಮಾಡಲೇಬೇಕು.

ಇಂಥ ಅದೆಷ್ಟೋ ಲಾಭಗಳನ್ನು ಪ್ರವಾಸ ನಮಗೆ ನೀಡುತ್ತದೆ. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪ್ರವಾಸ ಪೂರ್ಣ ಪರಿಹಾರವಲ್ಲದಿದ್ದರೂ, ಅದು ಸಹಕಾರಿ. ವಿಶ್ವದ ಅತ್ಯಂತ ಸುದೀರ್ಘ ಮತ್ತು ಪ್ರಸಿದ್ಧ ವೈದ್ಯಕೀಯ ಅಧ್ಯಯನಗಳಲ್ಲಿ ಒಂದಾದ 'ಫ್ರೇಮಿಂಗ್ಹ್ಯಾಮ್ ಹಾರ್ಟ್ ಸ್ಟಡಿ'ಯ ಪ್ರಕಾರ, ವರ್ಷಕ್ಕೆ ಕನಿಷ್ಠ ಎರಡು ಬಾರಿ ಪ್ರವಾಸಕ್ಕೆ ಹೋಗುವ ಮಹಿಳೆಯರಿಗೆ ಹೋಲಿಸಿದರೆ, ಆರು ವರ್ಷಕ್ಕೊಮ್ಮೆ ಅಥವಾ ಅದಕ್ಕಿಂತ ಕಡಿಮೆ ಬಾರಿ ಪ್ರವಾಸ ಮಾಡುವ ಮಹಿಳೆಯರಲ್ಲಿ ಹೃದಯ ಕಾಯಿಲೆ ಅಥವಾ ಹೃದಯಾಘಾತದ ಸಾಧ್ಯತೆ ಸುಮಾರು 2 ಪಟ್ಟು ಹೆಚ್ಚಿರುತ್ತದೆ ಎಂದು ತಿಳಿದುಬಂದಿದೆ.

ಇಲ್ಲಿ ದೀರ್ಘ ಕಾಲದ ಮಾನಸಿಕ ಒತ್ತಡಗಳಿಂದ ದೇಹದಲ್ಲಿ 'ಕಾರ್ಟಿಸೋಲ್' ಹಾರ್ಮೋನ್‌ ಪ್ರಮಾಣ ಹೆಚ್ಚುತ್ತದೆ. ಅದರಿಂದ ರಕ್ತದೊತ್ತಡ ಹೆಚ್ಚಾಗಿ, ಹೃದಯ ಸಂಬಂಧಿ ಕಾಯಿಲೆ ಸೃಷ್ಟಿಯಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಪ್ರವಾಸದಿಂದ ದೇಹ ಮತ್ತು ಮನಸು ಹಗುರಾಗುತ್ತವೆ. ಧೀರ್ಘ ಕಾಲದ ಒತ್ತಡಗಳಿಂದ ಒಂದು ವಿರಾಮ ದೊರೆಯುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರಲು ಮತ್ತು ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ವರದಿಯಿಂದ ತಿಳಿದು ಬಂದಿದೆ. ಇವಿಷ್ಟು ನನ್ನನ್ನು ಯಾರಾದರು ಪ್ರವಾಸ ಯಾಕೆ ಎಂದು ಕೇಳಿದರೆ ಹೇಳಲು ಸಿಕ್ಕ ಸೈದ್ಧಾಂತಿಕ ಸಂಗತಿಗಳು. ಇಷ್ಟೇ ಅಲ್ಲ, ಪ್ರವಾಸದಿಂದ ಆಗುವ ಲಾಭಗಳು ಇನ್ನೂ ಸಾಕಷ್ಟಿವೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?