Thursday, July 9, 2026
Thursday, July 9, 2026

ಪ್ರವಾಸಿಗನೇ ಪ್ರವಾಸೋದ್ಯಮಕ್ಕೆ ಶತ್ರು!

ಪ್ರವಾಸೋದ್ಯಮಕ್ಕೆ ಶತ್ರುಗಳು ಹೊರಗಿನಿಂದ ಬರುವುದಿಲ್ಲ. ಅವು ನಮ್ಮೊಳಗೇ ಹುಟ್ಟುತ್ತಾರ. ಒಂದು ಸುಂದರ ಬೆಟ್ಟದ ಮೇಲಕ್ಕೆ ಹೋಗಿ ಪ್ಲಾಸ್ಟಿಕ್ ಬಾಟಲಿ ಎಸೆದು ಬರುವವರು, ರಾತ್ರಿ ಪೂರ್ತಿ ಗದ್ದಲ ಮಾಡಿ ಸ್ಥಳೀಯರ ನಿದ್ದೆ ಹಾಳು ಮಾಡುವವರು, ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಲು ರಸ್ತೆಯ ಮಧ್ಯದಲ್ಲಿ ವಾಹನ ನಿಲ್ಲಿಸುವವರು, ವನ್ಯಜೀವಿ ಪ್ರದೇಶದಲ್ಲಿ ಸಾಹಸ ಪ್ರದರ್ಶಿಸುವವರು – ಇವರೆಲ್ಲರೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾಣದ ವೈರಸ್‌ಗಳಂತೆ ಕೆಲಸ ಮಾಡುತ್ತಿದ್ದಾರೆ.

ಭಾರತದ ಪ್ರವಾಸೋದ್ಯಮ ಇಂದು ಹೊಸ ಎತ್ತರಗಳನ್ನು ಮುಟ್ಟುತ್ತಿದೆ. ದೇಶದ ಆರ್ಥಿಕತೆಗೆ ಸುಮಾರು 22 ಲಕ್ಷ ಕೋಟಿ ರು. ಕೊಡುಗೆ ನೀಡುವ ಕ್ಷೇತ್ರವಾಗಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಲಕ್ಷಾಂತರ ಜನರ ಬದುಕು, ಉದ್ಯೋಗ, ವ್ಯಾಪಾರ ಈ ಉದ್ಯಮದ ಮೇಲೆ ನಿಂತಿದೆ. ಕೇಂದ್ರ ಸರಕಾರ ಹೊಸ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುತ್ತಿದೆ. ರಾಜ್ಯಗಳು ರಸ್ತೆ, ಮೂಲಸೌಕರ್ಯ, ಹೊಟೇಲ್, ಹೋಮ್ ಸ್ಟೇ, ಟ್ರೆಕ್ಕಿಂಗ್ ಮಾರ್ಗಗಳಿಗೆ ಹೂಡಿಕೆ ಮಾಡುತ್ತಿವೆ. ಆದರೆ ಈ ಎಲ್ಲ ಪ್ರಯತ್ನಗಳಿಗೆ ಅತಿದೊಡ್ಡ ಅಡ್ಡಿಯಾಗುತ್ತಿರುವುದು ಯಾರು ಗೊತ್ತೇ? ಕೆಲ ಜವಾಬ್ದಾರಿಯಿಲ್ಲದ ಪ್ರವಾಸಿಗರು.

ಪ್ರವಾಸೋದ್ಯಮಕ್ಕೆ ಶತ್ರುಗಳು ಹೊರಗಿನಿಂದ ಬರುವುದಿಲ್ಲ. ಅವು ನಮ್ಮೊಳಗೇ ಹುಟ್ಟುತ್ತಾರ. ಒಂದು ಸುಂದರ ಬೆಟ್ಟದ ಮೇಲಕ್ಕೆ ಹೋಗಿ ಪ್ಲಾಸ್ಟಿಕ್ ಬಾಟಲಿ ಎಸೆದು ಬರುವವರು, ರಾತ್ರಿ ಪೂರ್ತಿ ಗದ್ದಲ ಮಾಡಿ ಸ್ಥಳೀಯರ ನಿದ್ದೆ ಹಾಳು ಮಾಡುವವರು, ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಲು ರಸ್ತೆಯ ಮಧ್ಯದಲ್ಲಿ ವಾಹನ ನಿಲ್ಲಿಸುವವರು, ವನ್ಯಜೀವಿ ಪ್ರದೇಶದಲ್ಲಿ ಸಾಹಸ ಪ್ರದರ್ಶಿಸುವವರು – ಇವರೆಲ್ಲರೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾಣದ ವೈರಸ್‌ಗಳಂತೆ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಶಾಪವಾದ ಸುರಕ್ಷತೆಯ ಕ್ರಮಗಳು!

ಇತ್ತೀಚಿನ ವರ್ಷಗಳಲ್ಲಿ ಹಿಮಾಚಲ ಪ್ರದೇಶ, ಗೋವಾ, ಸಿಕ್ಕಿಂ, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪ್ರವಾಸಿಗರ ವರ್ತನೆ ದೊಡ್ಡ ಚರ್ಚೆಯ ವಿಷಯವಾಗಿದೆ. ಲಾಹೌಲ್-ಸ್ಪಿತಿಯ ಸಿಸ್ಸು ಗ್ರಾಮ ಪಂಚಾಯಿತಿ ಸ್ಥಳೀಯ ಹಬ್ಬದ ಅವಧಿಯಲ್ಲಿ 40 ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕಾದ ಪರಿಸ್ಥಿತಿ ಎದುರಾಯಿತು. ಕಾರಣ – ಕಸ, ಗದ್ದಲ ಮತ್ತು ಸ್ಥಳೀಯ ಸಂಸ್ಕೃತಿಗೆ ಅವಮಾನ. ಗೋವಾದಲ್ಲಿ ವಿದೇಶಿ ಮಹಿಳೆಯರನ್ನು ಕಾಡುವ ಪ್ರವಾಸಿಗರ ವಿರುದ್ಧ ನೇರ ಕ್ರಮ ತೆಗೆದುಕೊಳ್ಳುವಂತಾಯ್ತು. ಸಿಕ್ಕಿಂನಲ್ಲಿ ವಾಹನಗಳಲ್ಲಿ ಕಡ್ಡಾಯವಾಗಿ ಕಸದ ಚೀಲ ಇರಬೇಕು ಎಂಬ ನಿಯಮ ಜಾರಿಯಾಯಿತು. ಹಿಮಾಚಲದಲ್ಲಿ ಪ್ರವಾಸಿಗರ ವರ್ತನೆ ಮೇಲೆ ನಿಗಾ ಇಡಲು ಕ್ಯಾಮೆರಾಗಳನ್ನು ಅಳವಡಿಸಲಾಯಿತು.

ಈ ಘಟನೆಗಳನ್ನು ನೋಡಿದಾಗ ಒಂದು ಪ್ರಶ್ನೆ ಮೂಡುತ್ತದೆ. ನಾವು ಪ್ರವಾಸಕ್ಕೆ ಹೋಗುತ್ತಿದ್ದೇವೆಯೋ ಅಥವಾ ಒಂದು ಪ್ರದೇಶದ ಮೇಲೆ ದಾಳಿ ಮಾಡಲು ಹೋಗುತ್ತಿದ್ದೇವೆಯೋ?

Untitled design (84)

ಪ್ರವಾಸ ಎಂದರೆ ಕೇವಲ ಫೊಟೋ ತೆಗೆದುಕೊಳ್ಳುವುದು ಅಲ್ಲ. ಅದು ಒಂದು ಸಂಸ್ಕೃತಿಯನ್ನು ಅನುಭವಿಸುವುದು. ಒಂದು ಪ್ರದೇಶದ ಜೀವನ ಶೈಲಿಯನ್ನು ಗೌರವಿಸುವುದು. ಪ್ರಕೃತಿಯೊಂದಿಗೆ ಸಹಜವಾಗಿ ಬೆರೆಯುವುದು. ಆದರೆ ಇಂದಿನ ಕೆಲವು ಪ್ರವಾಸಿಗರಿಗೆ ಪ್ರವಾಸ ಎಂದರೆ ಇನ್‌ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ವ್ಲಾಗ್ ಅಥವಾ ಸಾಮಾಜಿಕ ಜಾಲತಾಣದ ಪ್ರದರ್ಶನ ವಸ್ತು. ಫೊಟೋ ತೆಗೆಯುವಂತಿಲ್ಲ ಎಂಬ ಬೋರ್ಡ್ ಎದುರಲ್ಲೇ ಫೊಟೋ ತೆಗೆಸಿಕೊಳ್ಳುವ ರೀಲ್ಸ್ ಮಾಡುವ ಕೆಟ್ಟ ಹಟ-ಚಟ.

ಇದರಿಂದ ನಷ್ಟವಾಗುವುದು ಕೇವಲ ಪ್ರಕೃತಿಗೆ ಮಾತ್ರವಲ್ಲ. ಸ್ಥಳೀಯ ಸಮುದಾಯಕ್ಕೂ ಆಗುತ್ತದೆ. ಒಂದು ಹಳ್ಳಿಯ ಶಾಂತಿ ಕದಡುತ್ತದೆ. ಕಸದ ಸಮಸ್ಯೆ ಹೆಚ್ಚಾಗುತ್ತದೆ. ನೀರಿನ ಕೊರತೆ ಉಂಟಾಗುತ್ತದೆ. ರಸ್ತೆ ಸಂಚಾರ ಅಸ್ತವ್ಯಸ್ತವಾಗುತ್ತದೆ. ಕೊನೆಗೆ ಸ್ಥಳೀಯರಲ್ಲಿ ’ಪ್ರವಾಸಿಗರು ಬೇಡ’ ಎನ್ನುವ ಮನೋಭಾವ ಬೆಳೆಯುತ್ತದೆ. ಆಗ ಹಾನಿಯಾಗುವುದು ಸಂಪೂರ್ಣ ಪ್ರವಾಸೋದ್ಯಮ ಕ್ಷೇತ್ರಕ್ಕೆ.

ದುರದೃಷ್ಟವಶಾತ್, ಈ ಸಮಸ್ಯೆ ಭಾರತದ ಗಡಿಗಳೊಳಗೆ ಮಾತ್ರ ಸೀಮಿತವಾಗಿಲ್ಲ. ವಿದೇಶಗಳಲ್ಲಿಯೂ ಭಾರತೀಯ ಪ್ರವಾಸಿಗರ ವರ್ತನೆ ಚರ್ಚೆಗೆ ಕಾರಣವಾಗುತ್ತಿದೆ. ಕೆಲ ವೈರಲ್ ಘಟನೆಗಳು ಕೋಟ್ಯಂತರ ಭಾರತೀಯರ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತವೆ. ಒಬ್ಬರ ತಪ್ಪು ನಡವಳಿಕೆ ಇಡೀ ದೇಶದ ಚಿತ್ರಣಕ್ಕೆ ಧಕ್ಕೆ ತರುತ್ತದೆ. ಇಂದು ಪ್ರವಾಸೋದ್ಯಮದ ಪ್ರಚಾರಕ್ಕಿಂತ ಹೆಚ್ಚು ವೇಗವಾಗಿ ಹರಡುವುದು ವೈರಲ್ ವಿಡಿಯೋಗಳೇ. ಒಂದು ಜವಾಬ್ದಾರಿಯಿಲ್ಲದ ಕೃತ್ಯ ಲಕ್ಷಾಂತರ ರೂಪಾಯಿಗಳ ಪ್ರವಾಸೋದ್ಯಮ ಜಾಹೀರಾತಿಗಿಂತ ಹೆಚ್ಚು ಹಾನಿ ಮಾಡಬಲ್ಲದು.

ಆದರೆ ಸಮಸ್ಯೆಗೆ ಪರಿಹಾರ ಕೇವಲ ದಂಡವಲ್ಲ. ಎಲ್ಲೆಡೆ ಕ್ಯಾಮೆರಾ ಹಾಕುವುದೂ ಅಲ್ಲ. ನಿಜವಾದ ಪರಿಹಾರ ನಾಗರಿಕ ಪ್ರಜ್ಞೆ. ಶಾಲೆಯಲ್ಲಿ ಕಲಿಸುವ ಪರಿಸರ ಪಾಠವನ್ನು ಪ್ರವಾಸದಲ್ಲೂ ಅನುಸರಿಸುವುದು. ನಾವು ಹೋಗುವ ಸ್ಥಳ ನಮ್ಮ ಮನೆ ಅಲ್ಲ, ಆದರೆ ಅದು ಯಾರದೋ ಮನೆ ಎಂಬ ಅರಿವು ಮೂಡಿಸಿಕೊಳ್ಳುವುದು. ಪ್ರವಾಸವನ್ನು ಹಕ್ಕು ಎಂದು ಅಲ್ಲ, ಜವಾಬ್ದಾರಿ ಎಂದು ನೋಡುವುದು. ಅನೇಕ ಬಾರಿ ಹೇಳಿದ್ದನ್ನೇ ಮತ್ತೆ ಹೇಳಬೇಕಾಗಿದೆ. ಭಾರತದ ಪ್ರವಾಸೋದ್ಯಮದ ಭವಿಷ್ಯವನ್ನು ಸರಕಾರ ಮಾತ್ರ ರೂಪಿಸಲಾರದು. ರಸ್ತೆಗಳು, ವಿಮಾನ ನಿಲ್ದಾಣಗಳು, ಹೊಟೇಲ್‌ಗಳು, ಟ್ರೆಕ್ಕಿಂಗ್ ಮಾರ್ಗಗಳು ಇವೆಲ್ಲವನ್ನೂ ಸರಕಾರ ನಿರ್ಮಿಸಬಹುದು. ಆದರೆ ಒಳ್ಳೆಯ ಪ್ರವಾಸಿಗರನ್ನು ನಿರ್ಮಿಸಲು ಸರಕಾರಕ್ಕೆ ಸಾಧ್ಯವಿಲ್ಲ. ಅದು ಸಮಾಜದ ಕೆಲಸ. ಕುಟುಂಬದ ಕೆಲಸ. ಶಿಕ್ಷಣದ ಕೆಲಸ. ಮುಖ್ಯವಾಗಿ ಪ್ರತಿಯೊಬ್ಬ ಪ್ರವಾಸಿಗನ ವೈಯಕ್ತಿಕ ಜವಾಬ್ದಾರಿ.

ಪ್ರವಾಸ ಎಂದರೆ ಸ್ವಾತಂತ್ರ್ಯ. ಆದರೆ ಆ ಸ್ವಾತಂತ್ರ್ಯ ಮತ್ತೊಬ್ಬರ ಶಾಂತಿಯನ್ನು ಕದಡಬಾರದು. ಪ್ರವಾಸ ಎಂದರೆ ಪ್ರಕೃತಿಯನ್ನು ಅನುಭವಿಸುವುದು; ಅದನ್ನು ಹಾಳುಮಾಡುವುದು ಅಲ್ಲ. ಪ್ರವಾಸ ಎಂದರೆ ನೆನಪುಗಳನ್ನು ಕೊಂಡೊಯ್ಯುವುದು; ಕಸವನ್ನು ಬಿಟ್ಟುಬರುವುದು ಅಲ್ಲ ಎಂಬುದನ್ನು ಬೇಗ ಅರ್ಥಮಾಡಿಕೊಳ್ಳುವಂತಾಗಲಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!