Saturday, July 18, 2026
Saturday, July 18, 2026

ಸ್ವಾತಂತ್ರ್ಯ ನಾಯಕನ ಹೆಜ್ಜೆಗುರುತುಗಳ ಹುಡುಕಾಟದಲಿ…

ನೆಲ್ಸನ್ ಮಂಡೇಲಾ ದಿನದ ಅರ್ಥ ಹೇಳುವ ಪ್ರವಾಸ… ಜುಲೈ 18 ಕೇವಲ ಜನ್ಮದಿನವಾಗಿಯಲ್ಲ ಅದು ಮಾನವೀಯತೆ, ಸ್ವಾತಂತ್ರ್ಯ ಮತ್ತು ಸಮಾನತೆಯ ಮೌಲ್ಯಗಳನ್ನು ಸ್ಮರಿಸುವ ದಿನ!

- ನಂದಿನಿ ಪಟೇಲ್‌

‘ಕೆಲವು ಪ್ರವಾಸಗಳು ಹೊಸ ಸ್ಥಳಗಳನ್ನು ಪರಿಚಯಿಸುತ್ತವೆ ಹಾಗೆಯೆ ಇನ್ನೂ ಕೆಲವು ಪ್ರವಾಸಗಳು ಬದುಕಿನ ಮೌಲ್ಯಗಳ ಬಗ್ಗೆ ಅರಿವು ಮೂಡಿಸುತ್ತವೆ. ಆದರೆ ನೆಲ್ಸನ್ ಮಂಡೇಲಾ ಅವರ ಜೀವನ ಪಯಣವು ಕೇವಲ ಒಂದು ಪ್ರಯಾಣವಾಗಿ ಮಾತ್ರ ಉಳಿದಿಲ್ಲ. ಅದು ಸ್ವಾತಂತ್ರ್ಯ, ಸಹನೆ, ಕ್ಷಮೆ ಮತ್ತು ಮಾನವೀಯತೆಯ ನಿಜವಾದ ಅರ್ಥವನ್ನು ಕಲಿಸುವ ಅಪರೂಪದ ಅನುಭವವಾಗಿದೆ.’

ಪ್ರಯಾಣವೆಂದರೆ ಕೇವಲ ಹೊಸ ಸ್ಥಳಗಳನ್ನು ನೋಡುವುದಲ್ಲ, ಹೊಸ ಆಲೋಚನೆಗಳನ್ನು ಅರಿತು, ಹೊಸ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅನುಭವವೂ ಹೌದು. ಕೆಲವು ತಾಣಗಳು ಕಣ್ಣಿಗೆ ಸೌಂದರ್ಯವನ್ನು ಉಣಬಡಿಸಿದರೆ, ಇನ್ನೂ ಕೆಲವು ನಮಗೆ ಜೀವನದ ಪಾಠಗಳನ್ನು ಕಲಿಸುತ್ತವೆ. ಅಂಥ ನೆನಪುಗಳನ್ನು ಮರುಕಳಿಸುವ ದಿನವೇ ಪ್ರತಿವರ್ಷ ಜುಲೈ 18ರಂದು ಆಚರಿಸಲಾಗುವ ನೆಲ್ಸನ್ ಮಂಡೇಲಾ ದಿನ.

ಇದನ್ನೂ ಓದಿ: ಮೈಸೂರಿನ ಹತ್ತಿರ ಸೋಮನಾಥಪುರ…

ಈ ದಿನವು ಕೇವಲ ದಕ್ಷಿಣ ಆಫ್ರಿಕದ ಮಹಾನ್ ನಾಯಕನನ್ನು ಸ್ಮರಿಸುವ ದಿನವಾಗಿ ಉಳಿಯದೆ, ಮಾನವೀಯತೆ, ಸ್ವಾತಂತ್ರ್ಯ, ಸಮಾನತೆ ಮತ್ತು ಕ್ಷಮೆಯಂಥ ಸಾರ್ವತ್ರಿಕ ಮೌಲ್ಯಗಳನ್ನು ನೆನಪಿಸಿಕೊಳ್ಳುವ ಮಹತ್ವದ ದಿನವೂ ಆಗಿದೆ.

Untitled design - 2026-07-18T125035.219

ದಕ್ಷಿಣ ಆಫ್ರಿಕದ ಮಾಜಿ ರಾಷ್ಟ್ರಪತಿ ಹಾಗೂ ವಿಶ್ವದ ಶಾಂತಿಯ ಪ್ರತೀಕವಾದ ನೆಲ್ಸನ್ ಮಂಡೇಲಾ, ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಮಹಾನ್ ನಾಯಕ. ತಮ್ಮ ಜೀವನದ 27 ವರ್ಷಗಳನ್ನು ಜೈಲಿನಲ್ಲಿ ಕಳೆದರೂ, ಪ್ರತೀಕಾರದ ಬದಲು ಕ್ಷಮೆ, ಸಾಮರಸ್ಯ ಮತ್ತು ಪ್ರಜಾಪ್ರಭುತ್ವದ ಸಂದೇಶವನ್ನು ಜಗತ್ತಿಗೆ ನೀಡಿದರು. ಅವರ ಜನ್ಮದಿನವಾದ ಜುಲೈ 18 ಅನ್ನು ವಿಶ್ವಸಂಸ್ಥೆ ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ ಎಂದು ಘೋಷಿಸಿದೆ. ಈ ದಿನ ಪ್ರತಿಯೊಬ್ಬರೂ ಕನಿಷ್ಠ 67 ನಿಮಿಷಗಳನ್ನು ಸಮಾಜಸೇವೆಗೆ ಮೀಸಲಿಡಬೇಕು ಎಂಬ ಸಂದೇಶ ನೀಡಲಾಗುತ್ತದೆ. ಇದು ಅವರು ಸಾರ್ವಜನಿಕ ಸೇವೆಗೆ ಸಮರ್ಪಿಸಿದ 67 ವರ್ಷಗಳ ಸಂಕೇತವಾಗಿದೆ.

ಆದರೆ, ಮಂಡೇಲಾ ಅವರ ಬದುಕನ್ನು ಅರಿಯಲು ಪುಸ್ತಕಗಳನ್ನು ಓದುವುದಷ್ಟೇ ಸಾಕಾಗುವುದಿಲ್ಲ. ಅವರು ನಡೆದಾಡಿದ ನೆಲವನ್ನು, ಅವರು ಹೋರಾಡಿದ ಸ್ಥಳಗಳನ್ನು ಕಣ್ತುಂಬಿಕೊಳ್ಳುವ ಪ್ರವಾಸ ಜೀವನದ ಮೌಲ್ಯಗಳನ್ನು ಮತ್ತಷ್ಟು ಆಳವಾಗಿ ಅರ್ಥಮಾಡಿಸುತ್ತದೆ.

ಈ ನೆಲ್ಸನ್ ಮಂಡೇಲಾ ದಿನದಂದು, ಪ್ರವಾಸವನ್ನು ಕೇವಲ ಮನೋರಂಜನೆಯಾಗಿ ಅಲ್ಲ, ಬದುಕನ್ನು ರೂಪಿಸುವ ಅನುಭವವಾಗಿ ನೋಡಬೇಕು. ಏಕೆಂದರೆ ಜಗತ್ತಿನಲ್ಲಿ ಕೆಲವು ತಾಣಗಳು ಕಣ್ಣಿಗೆ ಮಾತ್ರ ಕಾಣುವುದಿಲ್ಲ, ಅವು ಮನಸಿನೊಳಗೆ ಶಾಶ್ವತವಾಗಿ ನೆಲೆಸುತ್ತವೆ. ನೆಲ್ಸನ್ ಮಂಡೇಲಾ ನಡೆದ ದಾರಿಗಳೂ ಅಂಥವೇ. ಪ್ರತಿ ಹೆಜ್ಜೆಯೂ ಸ್ವಾತಂತ್ರ್ಯದ ಪಾಠ, ಪ್ರತಿ ನೆನಪೂ ಮಾನವೀಯತೆಯ ಸಂದೇಶ ಸಾರುವಂಥವೇ ಆಗಿವೆ.

ನೆಲ್ಸನ್ ಮಂಡೇಲಾ ಪರಂಪರೆಯ ಪ್ರವಾಸ ಪಥ

1.ಮಂಡೇಲಾ ಹೌಸ್: ಸೊವೆಟೊ, ಜೋಹಾನ್ಸ್‌ಬರ್ಗ್

-ಮಂಡೇಲಾ ಅವರು, ಅವರ ಕುಟುಂಬದೊಂದಿಗೆ ವಾಸಿಸಿದ್ದ ಮನೆ ಐತಿಹಾಸಿಕ ನಿವಾಸವಾಗಿದ್ದು, ಇಂದು ಸಂಗ್ರಹಾಲಯವಾಗಿದೆ. ಅವರ ವೈಯಕ್ತಿಕ ವಸ್ತುಗಳು, ಛಾಯಾಚಿತ್ರಗಳು ಮತ್ತು ಹೋರಾಟದ ನೆನಪುಗಳು ಇಲ್ಲಿವೆ. ಅವರ ಹೋರಾಟದ ನೆನಪುಗಳನ್ನು ಜೀವಂತವಾಗಿ ಪರಿಚಯಿಸುತ್ತವೆ.

2.ಅಪಾರ್ಥೈಡ್ ಮ್ಯೂಸಿಯಂ: ಜೋಹಾನ್ಸ್‌ಬರ್ಗ್

- ದಕ್ಷಿಣ ಆಫ್ರಿಕದ ವರ್ಣಭೇದದ ಕರಾಳ ಇತಿಹಾಸವನ್ನು ಜೀವಂತವಾಗಿ ಪರಿಚಯಿಸುವ ವಿಶ್ವದ ಪ್ರಮುಖ ಸಂಗ್ರಹಾಲಯಗಳಲ್ಲಿ ಇದೂ ಒಂದು. ಛಾಯಾಚಿತ್ರಗಳು, ದಾಖಲೆಗಳು ಮತ್ತು ಪ್ರದರ್ಶನಗಳ ಮೂಲಕ ಸ್ವಾತಂತ್ರ್ಯದ ಹೋರಾಟದ ಕಥೆಯನ್ನು ಅನಾವರಣಗೊಳಿಸುತ್ತಿದ್ದು, ಇಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ಸಮಾನತೆ ಮತ್ತು ಮಾನವ ಹಕ್ಕುಗಳ ಮಹತ್ವವನ್ನು ನೆನಪಿಸುತ್ತದೆ.

  1. ರಾಬೆನ್ ದ್ವೀಪ: ಕೆಪ್ ಟೌನ್

- ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಈ ದ್ವೀಪದಲ್ಲೇ ನೆಲ್ಸನ್ ಮಂಡೇಲಾ ಸುಮಾರು 18 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು. ಅವರ ಪುಟ್ಟ ಸೆರೆಮನೆ ಇಂದಿಗೂ ಸ್ವಾತಂತ್ರ್ಯದ ಹೋರಾಟದ ಸಂಕೇತವಾಗಿ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

4.ಕಾನ್ಸ್ಟಿಟ್ಯೂಷನ್ ಹಿಲ್: ಜೋಹಾನ್ಸ್‌ಬರ್ಗ್

- ಒಮ್ಮೆ ರಾಜಕೀಯ ಕೈದಿಗಳ ಸೆರೆಮನೆಯಾಗಿದ್ದ ಈ ಐತಿಹಾಸಿಕ ತಾಣ, ಇಂದು ದಕ್ಷಿಣ ಆಫ್ರಿಕದ ಸಂವಿಧಾನ ನ್ಯಾಯಾಲಯದ ಕೇಂದ್ರವಾಗಿದೆ. ದಮನದಿಂದ ಪ್ರಜಾಪ್ರಭುತ್ವದತ್ತ ಸಾಗಿದ ದೇಶದ ಪಯಣವನ್ನು ಇದು ಸಶಕ್ತವಾಗಿ ಪ್ರತಿಬಿಂಬಿಸುತ್ತದೆ.

Untitled design - 2026-07-18T125047.155

67 ನಿಮಿಷಗಳ ಸೇವೆ

ನೆಲ್ಸನ್ ಮಂಡೇಲಾ ದಿನದ ವಿಶೇಷ ಸಂದೇಶವೇ ‘67 Minutes for Change.’ ಜುಲೈ 18ರಂದು ಕೇವಲ 67 ನಿಮಿಷಗಳನ್ನು ಸಮಾಜದ ಒಳಿತಿಗಾಗಿ ಮೀಸಲಿಡುವುದು ಈ ದಿನದ ಉದ್ದೇಶವಾಗಿದೆ. ಉದಾಹರಣೆಗೆ, ಒಂದು ಗಿಡ ನೆಡುವುದು, ಸಾರ್ವಜನಿಕ ಸ್ಥಳವನ್ನು ಸ್ವಚ್ಛಗೊಳಿಸುವುದು, ಅನಾಥಾಶ್ರಮ ಅಥವಾ ವೃದ್ಧಾಶ್ರಮದಲ್ಲಿ ಸಮಯ ಕಳೆಯುವುದು, ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡುವುದು, ರಕ್ತದಾನ ಅಥವಾ ಪುಸ್ತಕದಾನ ಮಾಡುವುದು, ಅಗತ್ಯವಿರುವವರಿಗೆ ಆಹಾರ ಅಥವಾ ಬಟ್ಟೆ ನೀಡುವುದು. ಈ ಚಿಕ್ಕ ಪ್ರಯತ್ನಗಳು ಸಮಾಜದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂಬುದೇ ಮಂಡೇಲಾ ಅವರ ಸಂದೇಶವಾಗಿದೆ.

ಪ್ರವಾಸ ಹೇಳುವ ಬದುಕಿನ ಪಾಠ

ಮಂಡೇಲಾ ಅವರ ಜೀವನ ನಮಗೆ ಹೇಳಿಕೊಡುವ ಅತಿ ದೊಡ್ಡ ಸತ್ಯವೆಂದರೆ, ನಿಜವಾದ ನಾಯಕತ್ವ ಅಧಿಕಾರದಲ್ಲಲ್ಲ, ಮಾನವೀಯತೆಯಲ್ಲಿದೆ. ಅವರ ಹಾದಿಯನ್ನು ಅನುಸರಿಸುವ ಪ್ರವಾಸ ಕೇವಲ ಐತಿಹಾಸಿಕ ಸುತ್ತಾಟವಲ್ಲ. ಅದು ಸ್ವಾತಂತ್ರ್ಯ, ಸಮಾನತೆ, ಕ್ಷಮೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಅನುಭವಿಸುವ ಅವಕಾಶ. ಈ ಜುಲೈ 18ರಂದು ನೀವು ಹೊಸ ಪ್ರವಾಸದ ಕನಸು ಕಾಣುತ್ತಿದ್ದರೆ, ದಕ್ಷಿಣ ಆಫ್ರಿಕದಲ್ಲಿ ಮಂಡೇಲಾ ಅವರ ಹೆಜ್ಜೆಗುರುತುಗಳನ್ನೂ ಒಮ್ಮೆ ಅನುಸರಿಸಿ. ಏಕೆಂದರೆ ಕೆಲವು ಪ್ರವಾಸಗಳು ಕೇವಲ ಹೊಸ ದೇಶಗಳನ್ನು ಪರಿಚಯಿಸುವುದಿಲ್ಲ, ಅವು ನಮ್ಮೊಳಗಿನ ಉತ್ತಮ ಮನುಷ್ಯರನ್ನು ಎಚ್ಚರಿ ನಮ್ಮ ಮನುಷ್ಯತ್ವದ ಗುಣವನ್ನು ಹೆಚ್ಚಿಸುತ್ತವೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!