ಕಳೆದವಾರ ಗೋಲ್ಡನ್ ಚಾರಿಯಟ್‌ನ ಪಯಣ ಅದ್ದೂರಿಯಾಗಿ ಪುನಾರಂಭಗೊಂಡಿತು. ಈ ರೈಲು ರೈಲ್ವೇ ಇಲಾಖೆ ಮತ್ತು ಕೆಎಸ್‌ಟಿಡಿಸಿಯ ಜಂಟಿ ಹೆಮ್ಮೆ. ಇದು ಭಾರತೀಯ ಪ್ರವಾಸೋದ್ಯಮಕ್ಕೊಂದು ಮೆರುಗು. ಈ ಐಷಾರಾಮಿ ರೈಲು ಸದಾ ಸಕ್ರಿಯವಾಗಿರಬೇಕು ಹಾಗೂ ಜನರಿಗೆ ಲಭ್ಯವಿರಬೇಕು ಎಂಬುದು ಪ್ರವಾಸಿಗರ ಆಶಯ. ಈ ಹೊತ್ತಿನಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕೂಡ ಅದೇ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಈ ಅಭಿಪ್ರಾಯವನ್ನು ಹಲವಾರು ದೃಷ್ಟಿಕೋನದಿಂದ ವಿಶ್ಲೇಷಿಸುವುದು ಅಗತ್ಯ. ಆಫ್-ಸೀಸನ್‌ನಲ್ಲಿ ಕೂಡ ಗೋಲ್ಡನ್ ಚಾರಿಯಟ್ ಸಂಚರಿಸಲಿ. ಪ್ರಯಾಣ ದರ ಕಡಿಮೆ ಮಾಡುವ ಮೂಲಕ ಪ್ರಯಾಣಿಕರನ್ನು ಸೆಳೆಯೋಣ ಎಂಬ ಮುಖ್ಯಮಂತ್ರಿಗಳ ಮಾತು ಸ್ವಾಗತಾರ್ಹವೇ. ಆದರೆ ಇದರ ಏಕಾಏಕಿ ಅನುಷ್ಠಾನಕ್ಕಿಂತ ಕೊಂಚ ಸಾಧಕ ಭಾದಕಗಳನ್ನು ಗಮನಿಸುವುದು ಒಳಿತು.

ಇದನ್ನೂ ಓದಿ: ರಾಜ್ಯ ಪ್ರವಾಸೋದ್ಯಮವನ್ನು ರಿಚಾರ್ಜ್ ಮಾಡಿದ ಜಾರ್ಜ್

ರೈಲನ್ನು ನಿಲ್ಲಿಸುವುದಕ್ಕಿಂತ ಅಥವಾ ರೈಲು ಖಾಲಿ ಓಡುವುದಕ್ಕಿಂತ ಕಡಿಮೆ ದರದಲ್ಲಿ ತುಂಬಿದ ರೈಲು ಓಡುವುದು ಉತ್ತಮ. ಒಪ್ಪುವ ಮಾತು. ರೈಲಿನ ಹಳಿ, ಬೋಗಿ, ಸಿಬ್ಬಂದಿ ವರ್ಷವಿಡೀ ಇದ್ದರೂ ಆದಾಯ ಬರುವುದು ಸೀಸನ್‌ನಲ್ಲಿ ಮಾತ್ರ. ಹೀಗಾದಾಗ ನಷ್ಟ ಸಹಜ. ಈ ಐಷಾರಾಮಿ ರೈಲಿನಲ್ಲಿ ಸುಮಾರು 80 ಪ್ರಯಾಣಿಕರಿಗೆ ಸ್ಥಳವಿದ್ದು, ಸುಮಾರು 60 ಸಿಬ್ಬಂದಿ ಸೇವೆ ನೀಡುತ್ತಾರೆ. ವರ್ಷವಿಡೀ ಈ ರೈಲು ಓಡುವುದರಿಂದ ಈ ಸಿಬ್ಬಂದಿಗೆ ಸ್ಥಿರ ಉದ್ಯೋಗ ಸಿಗುತ್ತದೆ. ಜತೆಗೆ ಹೊಟೇಲ್‌ಗಳು, ಗೈಡ್‌ಗಳು, ಇತರ ಸಾರಿಗೆ ಸೇವೆಗಳಿಗೂ ಆಫ್-ಸೀಸನ್‌ನಲ್ಲಿ ಆದಾಯ ಸಿಗುತ್ತದೆ. ಈ ರೈಲಿನ ಮೂಲಕ ನಮ್ಮ ಪ್ರವಾಸಿ ತಾಣಗಳನ್ನು ಭೇಟಿ ಕೊಡುವಂತಾದರೆ ಅದು ಪ್ರವಾಸಿತಾಣಗಳಿಗೆ ಲಾಭ ಎಂಬುದೂ ನಿಜ.

Untitled Design (2)

ಆದರೆ ಆಫ್ ಸೀಸನ್ ಕಡಿಮೆ ಟಿಕೆಟ್ ದರದಲ್ಲಿ ಓಡಿಸಿದರೆ ಅದು ನಿಗಮಕ್ಕೆ ಲಾಭವೋ ನಷ್ಟವೋ ಎಂದು ಸರಿಯಾಗಿ ಲೆಕ್ಕ ಹಾಕಬೇಕಾಗುತ್ತದೆ. ಗೋಲ್ಡನ್ ಚಾರಿಯಟ್‌ನ ಡೀಲಕ್ಸ್ ಕ್ಯಾಬಿನ್ ದರ ಒಬ್ಬರಿಗೆ 2,65,440ರಿಂದ 3,98,160 ರು. ರವರೆಗೆ ಇದೆ. ಇದನ್ನು ಅರ್ಧಕ್ಕೆ ಇಳಿಸಿದರೂ ಸಾಮಾನ್ಯ ಕುಟುಂಬಕ್ಕೆ ಅದು ದೊಡ್ಡ ಮೊತ್ತವೇ. ಹೀಗಾಗಿ ಇದರಲ್ಲಿ ಬಡವರು ಮಧ್ಯಮ ವರ್ಗದವರು ಪ್ರಯಾಣಿಸೋದು ದೂರದ ಮಾತು. ಅದರ ಬದಲಿಗೆ ಈಗಾಗಲೇ ಸಾಮರ್ಥ್ಯವುಳ್ಳವರಿಗೇ ಅರ್ಥಾತ್ ಶ್ರೀಮಂತರಿಗೇ ನಾವು ಆಫರ್ ಕೊಟ್ಟ ಹಾಗಾಗುತ್ತದೆ. ಸೀಸನ್‌ನಲ್ಲಿ ಪೂರ್ಣ ದರ ಕೊಡಬಲ್ಲವರು ಕಾಯ್ದು ಆಫ್-ಸೀಸನ್‌ನಲ್ಲಿ ಹೋಗತೊಡಗಿದರೆ ಒಟ್ಟು ಆದಾಯವೇ ಕುಸಿಯಬಹುದು. ಅಷ್ಟೇ ಅಲ್ಲ, ಆಫ್-ಸೀಸನ್‌ಗೆ ಅದರದೇ ಕಾರಣಗಳಿವೆ. ಮಳೆ, ಬಿಸಿಲು, ಪ್ರವಾಸಿಗರ ಕೊರತೆ. ಇತ್ಯಾದಿ ಇತ್ಯಾದಿ. ಬೇಸಗೆ ಸಮಯದಲ್ಲಿ ಈ ಹಿಂದೆ ದರ ಕಡಿತ ಮಾಡಿದ್ದರೂ ಪ್ರವಾಸಿಗರು ರೈಲು ಹತ್ತಿರಲಿಲ್ಲ. ಜತೆಗೆ ಕಳಪೆ ವಿಮರ್ಶೆಗಳಿಂದಾಗಿ ಜನ ಈ ರೈಲಿನಿಂದ ದೂರ ಉಳಿದಿದ್ದರು. ಇದರರ್ಥ ಇಷ್ಟೇ; ರಿಯಾಯಿತಿ ನೀಡುವುದರಿಂದ ಡಿಮ್ಯಾಂಡ್ ಹೆಚ್ಚಾಗುವುದಿಲ್ಲ.

ಲಾಭ ಬೇಕಿಲ್ಲ, ಆದರೆ ನಷ್ಟವಾಗಬಾರದು ಎಂಬುದು ಮುಖ್ಯಮಂತ್ರಿಯವರ ನಿಲುವು. ಹೌದು ಯಾವುದೇ ವ್ಯವಹಾರಕ್ಕೆ(ಅದು ಸೇವಾ ಕ್ಷೇತ್ರವೇ ಆದರೂ) ನಷ್ಟ ಆಗಬಾರದು ಎಂಬುದೇ ಸರಿಯಾದ ಮಾನದಂಡ. ನಿಗದಿತ ವೆಚ್ಚ (ಇಂಧನ, ಸಂಬಳ, ನಿರ್ವಹಣೆ) ಮೀರಿ ಪ್ರತಿ ಹೆಚ್ಚುವರಿ ಪ್ರಯಾಣಿಕನಿಂದ ಬರುವ ಆದಾಯವನ್ನು ಲೆಕ್ಕ ಹಾಕಿ ದರ ನಿಗದಿಪಡಿಸಬೇಕು. ಇದಕ್ಕೆ ರೈಲ್ವೇ ಇಲಾಖೆಯೊಂದಿಗೆ ಶುಲ್ಕ ಮಾತುಕತೆಯೂ ಮುಖ್ಯ.

ಇನ್ನು ಮುಖ್ಯವಿಷಯ ಅಂದರೆ, ಕೊಡುವುದೇ ಆದರೆ ರಿಯಾಯಿತಿ ಎಷ್ಟು ಕೊಡಬೇಕು, ರಿಯಾಯಿತಿ ಯಾರಿಗೆ ಕೊಡಬೇಕು ಎಂಬುದು ಇನ್ನೂ ಸ್ಪಷ್ಟವಿಲ್ಲ. ಕರ್ನಾಟಕದ ನಿವಾಸಿಗಳಿಗೆ ಮಾತ್ರ ಮೀಸಲಾದ ಕಡಿಮೆ ದರದ ಕೆಲವು ಪ್ರಯಾಣಗಳು, ಸಣ್ಣ ಅವಧಿಯ ಪ್ಯಾಕೇಜ್‌ಗಳು, ಶಿಕ್ಷಕರು, ಹಿರಿಯ ನಾಗರಿಕರು ಅಥವಾ ಕುಟುಂಬ ಗುಂಪುಗಳಿಗೆ ವಿಶೇಷ ದರಗಳು ಒಂದು ಮಾರ್ಗ. ಮೊದಲು ಪ್ರಾಯೋಗಿಕವಾಗಿ ಜಾರಿಗೊಳಿಸಿ, ಭರ್ತಿ ಪ್ರಮಾಣ ಮತ್ತು ಆದಾಯ ನೋಡಿ ವಿಸ್ತರಿಸುವುದು ವಿವೇಕ ಎನಿಸಿಕೊಳ್ಳುತ್ತದೆ.

Untitled Design

ಗೋಲ್ಡನ್ ಚಾರಿಯಟ್ ಕೇವಲ ಶ್ರೀಮಂತರ ಆಟಿಕೆಯಾಗದೆ ನಾಡಿನ ಹೆಮ್ಮೆಯಾಗಬೇಕು.ಹೌದು. ಆದರೆ ಆ ಹೆಮ್ಮೆ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದಂತೆ ಲೆಕ್ಕಾಚಾರದ ಹಳಿಯ ಮೇಲೆಯೇ ಓಡಬೇಕು. ರಿಯಾಯಿತಿ ಕೊಡುವ ಭರದಲ್ಲಿ ಒಂದು ಅದ್ಭುತ ವ್ಯವಸ್ಥೆ ನಷ್ಟದ ಭಾರಕ್ಕೆ ಮುಳುಗಿಹೋಗಬಾರದು. ಎಲ್ಲ ದೃಷ್ಟಿಕೋನಗಳಿಂದ ಆಲೋಚಿಸಿದರೆ ಅನಿಸುವುದಿಷ್ಟು; ಗೋಲ್ಡನ್ ಚಾರಿಯಟ್ ಶ್ರೀಮಂತರ ರೈಲಾಗಿಯೇ ಇರಲಿ. ಬೇಕಿದ್ದಲ್ಲಿ, ಆಫ್ ಸೀಸನ್ ಇರುವಾಗ ಅದನ್ನು ಇತರರಿಗೆ ನೋಡುವ ಸಲುವಾಗಿ ಪ್ರದರ್ಶನಕ್ಕೆ ಇಡುವಂತಾಗಲಿ. ಅದಕ್ಕೆ ಒಂದು ನಿಲುಕುವ ದರ ನಿಗದಿಗೊಳಿಸಲಿ. ಅದರಲ್ಲಿ ಪ್ರಯಾಣಿಸುವುದಕ್ಕೆ ಬಸ್ ಭಾಗ್ಯ ಕೊಟ್ಟಂತೆ ಉಚಿತವೋ, ಅಗ್ಗದ ದರವೋ ಮಾಡಿದಲ್ಲಿ, ಅದರಲ್ಲಿ ಅಪಾತ್ರರು ಪ್ರಯಾಣಿಸುವಂತಾಗಿ,ಅದು ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆಯೂ ಆಗಬಹುದು.