ಹಿಮಾಚಲದಲ್ಲಿ ಗುರುತು ಮೂಡಿಸಲಿದೆ ’ಅವಳ’ ಹೆಜ್ಜೆ...!
ಜಗತ್ತಿನಲ್ಲಿಯೇ ಅತ್ಯಂತ ಸುರಕ್ಷಿತ ಪ್ರವಾಸಿತಾಣಗಳು ಎನ್ನುವ ಖ್ಯಾತಿ ಪಡೆದಿರುವ ಜಪಾನ್, ಯುನೈಟೆಡ್ ಅರಬ್ ದೇಶಗಳು, ಐಸ್‍ಲ್ಯಾಂಡ್, ನ್ಯೂಜಿಲೆಂಡ್ ದೇಶಗಳು ಕೂಡ ಈ ನಿಟ್ಟಿನಲ್ಲಿ ಯೋಚಿಸಿಲ್ಲ. ಅದೇ ಕಾರಣಕ್ಕೆ ಹಿಮಾಚಲ ಪ್ರದೇಶದ She Travel Policy ಈಗ ವಿಶ್ವದ ಗಮನ ಸೆಳೆದಿದೆ. ಯಶಸ್ವಿ ಆದಲ್ಲಿ ಈ ಮಾದರಿಯ ಅಧ್ಯಯನಕ್ಕಾಗಿ ಈಗಾಗಲೇ ವಿದೇಶಗಳಿಂದ ತಂಡಗಳು ಬರಲು ಕಾಯುತ್ತಿವೆ.
- ಅಂಜಲಿ ರಾಮಣ್ಣ
ಮನಃಶಾಸ್ತ್ರಜ್ಞರ ಪ್ರಕಾರ ಹಲವಾರು ಕಾರಣಗಳಿಂದಾಗಿ ಅಭದ್ರತಾ ಭಾವ ಮಹಿಳೆಯರನ್ನು ಹೆಚ್ಚು ಕಾಡುತ್ತದೆಯಂತೆ. ಜೀವನದಲ್ಲಿ ಅಭದ್ರತೆ ಕಾಡುವಾಗ ಹೊರಟುಬಿಡಬೇಕು ಸುತ್ತಾಟಕ್ಕೆ ಎನ್ನುವುದು ಸ್ವಾನುಭವ. ಪಕ್ಕದ ಹಳ್ಳಿ, ಅದರಾಚೆಯ ಪಟ್ಟಣ, ದೂರದ ಶಹರ, ಸಾಗರದಾಚೆಯ ನೆಲ ಹೀಗೆ ಎಲ್ಲಿಗಾದರೂ ಸರಿ ಹೋಗಬೇಕು ಸುತ್ತಬೇಕು. ‘ನೋಟ ಕಲಿವೆ ಒಳನೋಟ ತಿಳಿವೆ; ನಾ ಕಲಿವೆ ಊರ್ಧ್ವ ಗಮನ ಓ ಅಗಾಧ ಗಗನ’ ಎಂದು ಮನಸು ಹಾಡಾಗುವಾಗ ಬದುಕಿನೊಡನೆ ಮತ್ತೊಮ್ಮೆ ಪ್ರೀತಿಗೆ ಬೀಳುತ್ತೇವೆ. ಅದರಲ್ಲೂ ಒಬ್ಬಂಟಿಯಾಗಿ ಮಾಡುವ ಪ್ರವಾಸ ಎಂದರೆ ಚಲನೆ ಮಾತ್ರವಲ್ಲ ಅದೊಂದು ಅಂತರಂಗದ ಪಲ್ಲಟ.
ಇದನ್ನೂ ಓದಿ: ಪ್ರವಾಸಕ್ಕೊಂದು ಕಾಮನಬಿಲ್ಲನ್ನು ಮೂಡಿಸುವ ಹೊಸ ಫಿಲಾಟಲಿ ಪಾಸ್‌ಪೋರ್ಟ್!
ಆದರೆ ಮಹಿಳೆಯರು ಒಬ್ಬೊಬ್ಬರೇ ಪ್ರಯಾಣ ಮಾಡುವಾಗ ಕಾಡುವ ಮೊದಲ ಅಭದ್ರತೆ ಸುರಕ್ಷತೆಯದ್ದು. ಅಂದೊಮ್ಮೆ Solo ಪ್ರಯಾಣ ಮಾಡಬೇಕೆನ್ನುವ ನನ್ನ ಅದಮ್ಯ ಆಸೆ ತಂದು ನಿಲ್ಲಿಸಿತ್ತು ಅಸ್ಸಾಂನ ಲಖೀಂಪುರ ಜಿಲ್ಲೆಯ ರಸ್ತೆಯಲ್ಲಿ. ಆಗ ಅಲ್ಲೆಲ್ಲಾ ಭಯೋತ್ಪಾದನೆಯ ಭಯವಿತ್ತು. ಸಂಜೆ ನಾಲ್ಕೈದು ಗಂಟೆಯ ನಂತರ ಪ್ರಯಾಣ ಮಾಡುವಂತಿಲ್ಲ ಎಂದು ನಿಯಮವಿತ್ತು. ಅರುಣಾಚಲಪ್ರದೇಶದ ಜಿರೋ ಎನ್ನುವ ಊರಿಗೆ ಹೋಗಬೇಕಿದ್ದ ಪ್ರಯಾಣವನ್ನು ಅನಿವಾರ್ಯವಾಗಿ ಬೆಳಗಿಗೆ ಮುಂದೂಡಬೇಕಾಯಿತು. ಉಳಿಯುವುದು ಎಲ್ಲಿ? ಕಾರಿನಲ್ಲಿ ತಂಗಲು ಪೊಲೀಸರು ಬಿಡುವುದಿಲ್ಲ. ಅಲ್ಲೊಂದು ತಂಗುದಾಣ ಎನ್ನುವ ಬೋರ್ಡ್ ಕಂಡು ಅಲ್ಲಿಗೆ ಹೋಗಿದ್ದಾಯ್ತು. ಆ ಕತ್ತಲೆಯಲ್ಲಿ ಆ ಜಾಗ ಸುರಕ್ಷಿತವೇ ಏನೊಂದೂ ತಿಳಿಯುತ್ತಿರಲಿಲ್ಲ.
ಗಲ್ಲಾಪೆಟ್ಟಿಗೆಯ ಹಿಂದಿದ್ದ ನಿದ್ರಾಗಣ್ಣಿನ ನನಗೆ ತಿಳಿದ ಯಾವ ಭಾಷೆಯೂ ಬರದ ಧಡೂತಿ ಮನುಷ್ಯನೊಬ್ಬ ಬೆರಳಿನಲ್ಲಿ ತೋರಿಸಿದ ಕೋಣೆಯೊಳಗೆ ಕಾಲಿಟ್ಟೆ. ನಾಲ್ಕು ತಗಡುಗಳನ್ನೇ ಗೋಡೆಯಾಗಿಸಿದ್ದ ಒಂದು ಕೋಣೆಯಾಗಿತ್ತು ಅದು. ಅದರೊಳಗೆ ಮೂರೂವರೆ ಕಾಲಿನ ಒಂದು ಮಂಚ. ರೆಪ್ಪೆಗೆ ತಗುಲುವಷ್ಟು ಜೇಡರ ಬಲೆ. ಕೆಲವೇ ನಿಮಿಷಗಳಲ್ಲಿ ಅರಿವಿಗೆ ಬಂತು ಅದು ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಲಾರಿ ಚಾಲಕರು ತಮ್ಮ ಎಲ್ಲಾ ರೀತಿಯ ದಣಿವು ತೀರಿಸಿಕೊಳ್ಳಲು ಬರುವ ಜಾಗ ಅಂತ, ಆದರೆ ನನಗೆ ಅನಿವಾರ್ಯ. ಭಯಾನಕ ನಿಶ್ಶಬ್ದ, ಶೂ ಸಾಕ್ಸ್ ಕೂಡ ಬಿಚ್ಚದೆ ಮಂಚದ ತುದಿಯಲ್ಲಿ ಕುಳಿತು ಬೆಳಕಿನ ದಾರಿ ಕಾದಿದ್ದಾಗಿತ್ತು. ಏನೂ ಅವಘಡವಾಗದೆ ಆ ರಾತ್ರಿ ಕಳೆದಾಗಿತ್ತು. ಅದಕ್ಕೇ ಒಂಟಿ ಪ್ರಯಾಣ ಮಾಡುವಾಗಲೆಲ್ಲಾ ಗಮನದಲ್ಲಿ ಇರಲೇಬೇಕು ಪ್ರಜ್ಞಾಪೂರ್ವಕವಾಗಿ ತೆಗೆದುಕೊಳ್ಳಲು ಅಡ್ಡಿಯಿಲ್ಲದ ರಿಸ್ಕ್ ನ ಪ್ರಮಾಣದ ಅರಿವು.

ಇಂಥ ಹಲವಾರು ಘಟನೆಗಳು ಎದುರಾಗುವ ಅರಿವಿದ್ದರೂ ಈಗ ಮಹಿಳೆಯರು ಹೆಚ್ಚು ಹೆಚ್ಚು ಸೋಲೋ ಟ್ರಾವೆಲ್ ಮಾಡುತ್ತಿದ್ದಾರೆ. ಅದನ್ನು ಉತ್ತೇಜಿಸಲು ಹಲವಾರು ಪ್ರಾದೇಶಿಕ ಭಾಷೆಗಳಲ್ಲಿ ಕಥೆಗಳನ್ನು ಹೊಸೆದು ಸಿನಿಮಾಗಳನ್ನೂ ಮಾಡಲಾಗುತ್ತಿದೆ. ಯುವತಿಯರು ವ್ಲಾಗ್ ಮಾಡುತ್ತಿದ್ದಾರೆ. ಮಹಿಳೆಯರು ಮಾಡುವ ಒಬ್ಬಂಟಿ ಪ್ರವಾಸವು ಬದುಕ ಬದಲಿಸುವ ಮಾಯ್ಕಾರ ಎನ್ನುವುದಾಗಿ ಬಿಂಬಿಸಲಾಗುತ್ತಿದೆ. ಅದು ನಿಜವೂ ಹೌದು. ವ್ಯಕ್ತಿತ್ವವನ್ನು ಕೆತ್ತುವ ಪ್ರವಾಸ ಎನ್ನುವ ಶಿಲ್ಪಿಯೊಡನೆ ಹೆಣ್ಣೊಬ್ಬಳು ಅನುಸಂಧಾನದಲ್ಲಿ ತೊಡಗಿಕೊಳ್ಳುವಾಗ ಅವಳ ಅವಶ್ಯಕತೆಗಳ ಬಗ್ಗೆ ರಕ್ಷಣೆಯ ಕಡೆಗೆ ಸಮಗ್ರವಾಗಿ ಬೆಂಬಲಕ್ಕೆ ನಿಲ್ಲುವ ಒಂದು ವ್ಯವಸ್ಥೆ ಇದ್ದರೆ ಅದೆಷ್ಟು ಚೆನ್ನ ಎಂದುಕೊಳ್ಳುವಾಗಲೇ ಇಡೀ ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಹಿಮಾಚಲ ಪ್ರದೇಶ ರಾಜ್ಯವು ತನ್ನ 2026ನೆಯ ಸಾಲಿನ ಬಜೆಟ್‍ನಲ್ಲಿ ಘೋಷಿಸಿದೆ She Travel Policy.
ಪ್ರಸ್ತುತ ಆ ರಾಜ್ಯಕ್ಕೆ ಭೇಟಿ ಕೊಡುತ್ತಿರುವ ಪ್ರವಾಸಿಗಳಲ್ಲಿ ಶೇಕಡಾ 18ರಷ್ಟು ಒಂಟಿಯಾಗಿ ಪ್ರವಾಸ ಮಾಡುವ ಮಹಿಳೆಯರು ಎನ್ನುವ ಸಮೀಕ್ಷೆಯ ಫಲಿತಾಂಶವನ್ನು ಮುಂದಿಟ್ಟುಕೊಂಡು ಯಾಕಾಗಿ ಒಂಟಿ ಮಹಿಳಾ ಪ್ರವಾಸಿಗಳದ್ದೇ ಒಂದು ಪ್ರವಾಸೋದ್ಯವನ್ನು ಸೃಷ್ಟಿಸಿಕೊಳ್ಳಬಾರದು ಎನ್ನುವ ಆಲೋಚನೆ ಸರ್ಕಾರಕ್ಕೆ ಬಂದಕೂಡಲೇ ಸಾರಿದ ಯೋಜನೆ She Travel Policy. ನಮ್ಮ ದೇಶದ ಮತ್ತ್ಯಾವುದೇ ರಾಜ್ಯ ಹಾಗೂ ಇನ್ನ್ಯಾವುದೇ ದೇಶ ಹೊಂದಿರದ ಪಾಲಿಸಿ ಇದು. ಸದ್ಯಕ್ಕೆ Women Tourism Fund ಎನ್ನುವ ವರ್ಗದಲ್ಲಿ 50 ಕೋಟಿ ರುಪಾಯಿಗಳನ್ನು ಮೀಸಲಾಗಿರಿಸಿದೆ. ಹಿಮಾಚಲ ಪ್ರದೇಶದ GDPಯನ್ನು ಈ ಯೋಜನೆಯ ಮೂಲಕ ಹೆಚ್ಚಿಸುವ ಉದ್ದೇಶ ಮತ್ತು ಪರಿಸರ ಸ್ನೇಹಿ ಮಹಿಳಾ ಪ್ರವಾಸ ಏರ್ಪಡಿಸಿ ಅದರ ಮೂಲಕ ಪ್ರಸ್ತುತ ಶೇಕಡಾ 29.5ರಷ್ಟು ಇರುವ ಹಸಿರು ಭೂಮಿಯನ್ನು 2030ನೆಯ ಇಸವಿಯ ವೇಳೆಗೆ ಶೇಕಡಾ 32ಕ್ಕೆ ಏರಿಸುವ ದೂರಾಲೋಚನೆಯನ್ನು ಹೊಂದಿದೆ She Travel Policy.
ವಿಶ್ವಸಂಸ್ಥೆಯ ಮಹಿಳಾ ವಿಭಾಗದೊಡನೆ ಜಂಟಿಯಾಗಿ ಮಧ್ಯಪ್ರದೇಶ ಸರ್ಕಾರವು ಮಹಿಳಾ ಪ್ರವಾಸ ಎನ್ನುವ ಯೋಜನೆಯನ್ನು ಇಟ್ಟುಕೊಂಡಿದ್ದರೂ ಇದರ ವಿಸ್ತಾರ ಸೀಮಿತವಾಗಿದೆ. ಆಯವ್ಯಯದಲ್ಲಿ ಯಾವುದೇ ರೀತಿಯ ಹಣವನ್ನು ನಿಗದಿಪಡಿಸಿಲ್ಲ ಮತ್ತು ವಿಶೇಷವಾದ ಆಲೋಚನೆಗಳನ್ನೇನೂ ಈ ಯೋಜನೆ ಹೊಂದಿಲ್ಲ. 2022ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಕೇರಳ ರಾಜ್ಯವು Gender Inclusive Tourism Policy ಒಂದನ್ನು ಜಾರಿಗೆ ತಂದಿದ್ದರೂ ಅದು ಮಹಿಳಾ ಪ್ರವಾಸಿಗಳಿಗೆ ಮಾತ್ರ ಮೀಸಲಿಟ್ಟ ಯೋಜನೆ ಆಗಿಲ್ಲದಿರುವುದರಿಂದ ಅವಳಿಗೆ ಅಷ್ಟೇನೂ ಅನುಕೂಲ ತಂದುಕೊಡಲಿಲ್ಲ. ಇಂಥ ಮಿತಿಗಳನ್ನು ಮೀರುವ ಸಲುವಾಗಿ ಹಿಮಾಚಲ ಪ್ರದೇಶದ ಸರ್ಕಾರವು ಒಂಟಿ ಮಹಿಳಾ ಪ್ರವಾಸಿಗಳಿಗಾಗಿ She Shield Appಅನ್ನು ರಚಿಸಿದೆ. ಇದರಲ್ಲಿ ರಸ್ತೆಗಳ ಭೂಪಟ, ಸ್ಥಳದ ವಿವರ, ಉಳಿದುಕೊಳ್ಳಲು ಇರುವ ಜಾಗಗಳು, ಮಹಿಳಾ ಪ್ರವಾಸಿ ಗೈಡ್‍ಗಳ ಮಾಹಿತಿ, ಸ್ಥಳೀಯ ಪೋಲೀಸರ ವಿಷಯ, ಬ್ಯಾಂಕ್ ಲಭ್ಯತೆ, ಅಂದಾಜು ಖರ್ಚು, ಮಾಡಬಹುದಾದ ಕೆಲಸಗಳು, ನೋಡಬೇಕಾದ ಜಾಗಗಳು, ಊಟ ರುಚಿಯ ಬಗೆಗಿನ ಅರಿವು ಹೀಗೆ ಎಲ್ಲಾ ವಿಷಯಗಳ ಬಗ್ಗೆ ವಿವರಣೆ ನೀಡಲಾಗಿದೆ.
ಮಹಿಳಾ ಪ್ರವಾಸಿಗರಿಗಾಗಿಯೇ ಹೋಮ್ ಸ್ಟೇಗಳನ್ನು ನಡೆಸುವವರು ಇನ್ನು ಮುಂದೆ ಸರ್ಕಾರದ ಪರಿಶೀಲನೆಗೆ ಒಳಗಾಗಿ ಸೆರ್ಟಿಫಿಕೇಟ್ ಪಡೆದುಕೊಳ್ಳಬೇಕಿರುತ್ತದೆ ಅಲ್ಲಿ. ಒಂಟಿ ಮಹಿಳೆಯ ಪ್ರವಾಸವನ್ನು ಕೇಂದ್ರವಾಗಿರಿಸಿಕೊಂಡು ಪೊಲೀಸರಿಗೆ ಮತ್ತು ಮಾರ್ಗದರ್ಶಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮಹಿಳಾ ಪ್ರವಾಸೋದ್ಯಮದಲ್ಲಿ ಬ್ಯುಸಿನೆಸ್ ಮಾಡುವ ಉದ್ದೇಶ ಇರುವವರಿಗೆ Women Tourism Fund ಮೂಲಕ ಧನ ಸಹಾಯ ಮಾಡಲು ನಿರ್ಧರಿಸಲಾಗಿದೆ. ಚಾರಣ ಮತ್ತಿತರ ಕ್ರೀಡೆಗಳನ್ನು ಒದಗಿಸುವ ವ್ಯವಸ್ಥೆಗಳು ಮಹಿಳೆಯರನ್ನು ಹೆಚ್ಚು ಸುರಕ್ಷಿತವಾಗಿ ನೋಡಿಕೊಳ್ಳಲು ಅಲ್ಲಿನ ಸರ್ಕಾರ ನಿಯಮಗಳನ್ನು ರೂಪಿಸಿದೆ. ಅದಕ್ಕಾಗಿ ಪ್ರತ್ಯೇಕ ಲೈಸೆನ್ಸ್ ಪಡೆದುಕೊಳ್ಳ ಬೇಕಿರುತ್ತದೆ.

ಒಂದಷ್ಟು ಖಾಸಗಿ ಸೇವಾದಾರರು ಮಹಿಳೆಯರಿಗೆ ಮಾತ್ರ ಎನ್ನುವ ಪ್ರವಾಸವನ್ನು ಆಯೋಜಿಸುತ್ತಿದ್ದಾರೆ. ಆದರೆ ಯಾವುದೇ ಸರಕಾರದ ನಡೆ ಈ ದಿಕ್ಕಿನಲ್ಲಿ ಇಲ್ಲ. ಜಗತ್ತಿನಲ್ಲಿಯೇ ಅತ್ಯಂತ ಸುರಕ್ಷಿತ ಪ್ರವಾಸಿತಾಣಗಳು ಎನ್ನುವ ಖ್ಯಾತಿ ಪಡೆದಿರುವ ಜಪಾನ್, ಯುನೈಟೆಡ್ ಅರಬ್ ದೇಶಗಳು, ಐಸ್‍ಲ್ಯಾಂಡ್, ನ್ಯೂಜಿಲೆಂಡ್ ದೇಶಗಳು ಕೂಡ ಈ ನಿಟ್ಟಿನಲ್ಲಿ ಯೋಚಿಸಿಲ್ಲ. ಅದೇ ಕಾರಣಕ್ಕೆ ಹಿಮಾಚಲ ಪ್ರದೇಶದ She Travel Policy ಈಗ ವಿಶ್ವದ ಗಮನ ಸೆಳೆದಿದೆ. ಯಶಸ್ವಿ ಆದಲ್ಲಿ ಈ ಮಾದರಿಯ ಅಧ್ಯಯನಕ್ಕಾಗಿ ಈಗಾಗಲೇ ವಿದೇಶಗಳಿಂದ ತಂಡಗಳು ಬರಲು ಕಾಯುತ್ತಿವೆ.
ಇನ್ನೊಮ್ಮೆ ಸಿಕ್ಕಿಂ ರಾಜ್ಯದ ಅಂಚಿನಲ್ಲಿರುವ ಚೀನಾ ದೇಶದ ಪ್ರದೇಶಕ್ಕೆ ಪರ್ಮಿಟ್ ತೆಗೆದುಕೊಂಡೇ ಪಯಣಿಸಿದ್ದೆ. ತುದಿಯನ್ನು ತಲುಪಲು ಸ್ವಲ್ಪ ದೂರವಿರುವಾಗ ಅಲ್ಲೊಂದು ಪೆಟ್ಟಿ ಅಂಗಡಿಯಲ್ಲಿ ಚಹಾ ಕುಡಿದ್ದದ್ದಾಯ್ತು. ಮುಂದುವರಿದು ಗಮ್ಯ ತಲುಪಿ ಚಮರೀಮೃಗಗಳು, ಸೇನಾ ಅಟ್ಟಣಿಗೆಗಳು, ಹಿಮಾಲಯ ಮತ್ತು ನಾನು ಎನ್ನುವ ಆಸ್ವಾದದಲ್ಲಿ ಸಮಯ ಸರಿದದ್ದೇ ತಿಳಿಯಲಿಲ್ಲ. ಅದೆಲ್ಲಿದ್ದನೋ ಚುರುಕು ಕಣ್ಣಿನ ಖಡಕ್ ದೇಹದ ಸೈನಿಕನೊಬ್ಬ ಧುತ್ತನೆ ಬಂದು ಏರುಧ್ವನಿಯಲ್ಲಿ ಬಯ್ಯಲಾರಂಭಿಸಿದ. ಇಬ್ಬರಿಗೂ ಹಿಂದಿ ಭಾಷೆ ತಿಳಿದಿದ್ದಾದರೂ ನನ್ನ ದಾಖಲೆಯನ್ನು ತೋರಿಸಬೇಕಿತ್ತು. ಆಗ ಅರಿವಿಗೆ ಬಂದಿತು ನನ್ನ ಬ್ಯಾಗ್ ಅನ್ನು ಚಹಾ ಅಂಗಡಿಯಲ್ಲಿಯೇ ಮರೆತು ಬಂದಿದ್ದೆ ಅಂತ. ಆತನೇ ಸಿಟ್ಟಿನಿಂದ ನನ್ನನ್ನು ಆ ಅಂಗಡಿಗೆ ಕರೆದುಕೊಂಡು ಹೋದಾಗ ಅದು ಬಾಗಿಲು ಹಾಕಿಕೊಂಡಿತ್ತು. ಕೊನೆಗೂ ಕರುಣೆಯಿಂದ ಆತ ತನ್ನ ವೈರ್ ಲೆಸ್ ಸಾಧನದಿಂದ ಯಾರ್ಯಾರಿಗೋ ಹೇಳಿ ಗೂಡಂಗಡಿಯ ಬಾಗಿಲು ತೆರೆಸಿ ನನ್ನ ಚೀಲವನ್ನು ಕೊಡಿಸಿ, ದಾಖಲೆಗಳನ್ನು ಪರಿಶೀಲಿಸಿ ಸೇನಾ ವಾಹನದಲ್ಲಿಯೇ ಊರು ಸೇರಿಸಿಕೊಟ್ಟ ಪುಣ್ಯಾತ್ಮನಾದ. ಇಂಥ ಅಪಸವ್ಯಗಳು ತಪ್ಪಿ ನಿಜಾರ್ಥದಲ್ಲಿ ’ರೆಕ್ಕೆ ಇದ್ದರೆ ಸಾಕೇ- ಹಕ್ಕಿಗೆ ಬೇಕು ಬಾನು ಬಯಲಲಿ ತೇಲುತ ತಾನು ಮೇಲೆ ಹಾರೋಕೆ…’ ಎನ್ನುವ ಸತ್ಯಾವತಾರ ಹೆಣ್ಣಾಗಿ ಜಗತ್ತನ್ನು ಚಲನೆಯಲ್ಲಿ ಇಡಲು ಎಲ್ಲಾ ರಾಜ್ಯಗಳೂ ಜಾರಿಗೆ ತರಬೇಕು She Travel Policy.
*****