• ಹೊಸ್ಮನೆ ಮುತ್ತು

ಒಂದು ಪುಸ್ತಕವನ್ನು ಓದಿ ಮುಗಿಸಿದಾಗ ಅಲ್ಲಿನ ಪಾತ್ರಗಳು ಮತ್ತು ಘಟನೆಗಳು ಪುಸ್ತಕದ ಪುಟಗಳಿಂದ ಹೊರಬಂದು ನಿಮ್ಮ ಮನಸಿನ ಕದ ತಟ್ಟಿದ ಅನುಭವವಾಗಿದೆಯೇ? ಅಲ್ಲಿನ ಪಾತ್ರಗಳು ನಿಮ್ಮ ಕಣ್ಣೆದುರು ಜೀವಂತವಾಗಿ ಸುಳಿದಾಡುತ್ತಾ, ನಿಮ್ಮನ್ನು ತಮ್ಮ ಲೋಕಕ್ಕೆ ಸೆಳೆದುಕೊಂಡ ಕ್ಷಣಗಳಿರಬಹುದೇ? ಲೇಖಕನ ಕಲ್ಪನೆಯಲ್ಲಿ ಅರಳಿದ ಆ ಇಕ್ಕಟ್ಟಿನ ಗಲ್ಲಿಗಳು, ಮಂಜು ಮುಸುಕಿದ ಬೆಟ್ಟದ ಸಾಲುಗಳು, ಭವ್ಯ ಮಹಲುಗಳು, ಹಾಲ್ನೊರೆಯ ಜಲಪಾತಗಳು ಇವೆಲ್ಲವೂ ಕೇವಲ ಅಕ್ಷರಗಳ ಆಟವೋ ಅಥವಾ ಇವುಗಳ ನಿಜವಾದ ಬೇರುಗಳು ಈ ಭೂಮಿಯ ಮೇಲಿವೆಯೋ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದೆಯೇ!

ಕೃತಿಕಾರ ವಾಸವಿದ್ದು ಕೃತಿ ರಚಿಸಿದ ಆ ಸುಂದರ ಸ್ಥಳ ಹೇಗಿರಬಹುದು ಎಂಬ ಹಂಬಲ ನಿಮ್ಮನ್ನು ಕಾಡಿದೆಯೇ? ಈ ಕುತೂಹಲವೇ ಓದುಗನನ್ನು ಪುಸ್ತಕದ ಪುಟಗಳಿಂದ ಹೊರತಂದು, ಆ ನೈಜ ಸ್ಥಳಗಳತ್ತ ಹೆಜ್ಜೆ ಹಾಕುವಂತೆ ಮಾಡುತ್ತದೆ. ಹೀಗೆ ಪುಟಗಳ ನಡುವಿನ ಕಲ್ಪನಾ ಲೋಕವನ್ನು ಭೌಗೋಳಿಕವಾಗಿ ಸ್ಪರ್ಶಿಸುವ ಮತ್ತು ಅಕ್ಷರಗಳ ಹಿಂದಿನ ನೈಜ ನೆಲೆಗಳನ್ನು ಅರಸುವ ಅಪರೂಪದ ಯಾನವೇ ʼಸಾಹಿತ್ಯ ಪ್ರವಾಸೋದ್ಯಮʼ (Literary Tourism)

ಇದನ್ನೂ ಓದಿ: ಭೈರಪ್ಪನವರದ್ದು ಪ್ರವಾಸ ಸಾಹಿತ್ಯವಲ್ಲ ಸಾಹಿತ್ಯ ಪ್ರವಾಸ!

ಪ್ರವಾಸ ಮತ್ತು ಸಾಹಿತ್ಯ, ಈ ಎರಡೂ ಪ್ರಪಂಚಗಳು ಮಾನವನ ಅನುಭವವನ್ನು ಸಮೃದ್ಧಗೊಳಿಸುವ ಎರಡು ಪ್ರಮುಖ ಸಾಧನಗಳಾಗಿವೆ. ಒಂದು ನಮ್ಮನ್ನು ಭೌಗೋಳಿಕವಾಗಿ ಹೊಸ ನೆಲೆಗಳತ್ತ ಕರೆದೊಯ್ದರೆ, ಮತ್ತೊಂದು ಮನಸಿನಲ್ಲೇ ಹೊಸ ಲೋಕಗಳನ್ನು ಸೃಷ್ಟಿಸುತ್ತದೆ. ಈ ಎರಡೂ ನೆಲೆಗಳು ಒಂದಾಗುವ ಬಿಂದುವೇ ‘ಸಾಹಿತ್ಯ ಪ್ರವಾಸೋದ್ಯಮ’. ಬಹುಮುಖಿ ಆಯಾಮಗಳನ್ನು ಹೊಂದಿರುವ ಈ ಪರಿಕಲ್ಪನೆಯು ಲೇಖಕರ ಜೀವನ, ಅವರ ಕೃತಿಗಳ ಹಿನ್ನೆಲೆಯ ಸ್ಥಳಗಳು ಮತ್ತು ಸಾಹಿತ್ಯಿಕ ಘಟನೆಗಳನ್ನು ಆಧರಿಸಿದೆ. ಪ್ರಸಿದ್ಧ ಕವಿಗಳು ಅಥವಾ ಲೇಖಕರು ವಾಸವಿದ್ದ ಮನೆಗಳು, ಅವರು ತಮ್ಮ ಮೇರುಕೃತಿಗಳನ್ನು ರಚಿಸಿದ ತಾಣಗಳು ಹಾಗೂ ಅವರ ನೆನಪಿನ ಸ್ಮಾರಕ ಮತ್ತು ವಸ್ತುಸಂಗ್ರಹಾಲಯಗಳ ದರ್ಶನವನ್ನೂ ಒಳಗೊಂಡಿದೆ. ಅಷ್ಟೇ ಅಲ್ಲದೆ, ಕಾದಂಬರಿ, ಲೇಖನ, ಅಥವಾ ಕವನಗಳಲ್ಲಿ ಉಲ್ಲೇಖಿಸಲಾದ ಕಾಲ್ಪನಿಕ ತಾಣಗಳು ನೈಜ ಅಸ್ತಿತ್ವ ಹೊಂದಿದ್ದರೆ, ಅಂಥ ಸ್ಥಳಗಳನ್ನು ಅರಸಿ ಹೋಗುವುದು ಈ ಪ್ರವಾಸದ ಒಂದು ವಿಶೇಷ ಭಾಗವಾಗಿದೆ.

ಇಂದು ವಿಶ್ವಾದ್ಯಂತ ಆಯೋಜನೆಯಾಗುವ ಬೃಹತ್ ಸಾಹಿತ್ಯ ಉತ್ಸವಗಳು (Literature Festivals), ಪುಸ್ತಕ ಮೇಳಗಳು ಹಾಗೂ ಕವಿಗೋಷ್ಠಿಗಳಿಗೆ ಸಾಹಿತ್ಯಾಭಿಮಾನಿಯಾಗಿ ಭೇಟಿ ನೀಡುವುದು ಹಾಗೇ ಓದುಗರು ತಮ್ಮ ನೆಚ್ಚಿನ ಲೇಖಕರೊಡನೆ ಸಂವಾದ ನಡೆಸುವ, ಹೊಸ ಪುಸ್ತಕಗಳ ಪರಿಚಯ ಮಾಡಿಕೊಳ್ಳುವ ಆಸಕ್ತಿಯಿಂದ, ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಈ ಪ್ರವಾಸೋದ್ಯಮದ ಅತಿ ದೊಡ್ಡ ಸ್ವಾರಸ್ಯವಾಗಿದೆ.

New Project (55)

ಸಾಹಿತ್ಯ ಪ್ರವಾಸೋದ್ಯಮದ ಮಹತ್ವ

ಸಾಹಿತ್ಯ ಪ್ರವಾಸೋದ್ಯಮವು ಕೇವಲ ಪ್ರವಾಸವಲ್ಲ, ಅದು ನಮ್ಮ ಸಾಂಸ್ಕೃತಿಕ ಮತ್ತು ಭಾಷಾ ಪರಂಪರೆಯನ್ನು ಆಳವಾಗಿ ಅರಿಯುವ ಒಂದು ಶ್ರೇಷ್ಠ ಮಾಧ್ಯಮ. ಕೇವಲ ಪುಸ್ತಕಗಳ ಓದಿನಿಂದ ಲಭ್ಯವಾಗದ ಅಪೂರ್ವ ಅನುಭವಗಳನ್ನು ಇದು ನೀಡುತ್ತದೆ. ಕೃತಿಗಳ ಹುಟ್ಟಿನ ನೆಲಕ್ಕೆ ಭೇಟಿ ನೀಡುವುದರಿಂದ ಆ ಕೃತಿಗಳ ಒಳಾರ್ಥವು ನಮಗೆ ಗಾಢವಾಗಿ ಮನದಟ್ಟಾಗಿ, ಸಾಹಿತ್ಯದೊಂದಿಗೆ ಭಾವನಾತ್ಮಕ ಸಂಬಂಧ ಏರ್ಪಡುತ್ತದೆ. ಶಿಕ್ಷಣದ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಚೌಕಟ್ಟಿನಿಂದ ಹೊರಬಂದು ಕೃತಿಯನ್ನು ನೇರವಾಗಿ ಪರಿಚಯಿಸಿಕೊಳ್ಳುವುದರಿಂದ ಹಾಗೂ ಅಂದಿನ ಸಾಮಾಜಿಕ-ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಅರಿಯುವುದರಿಂದ ಅವರ ಕಲ್ಪನಾ ಶಕ್ತಿ ಬೆಳೆಯುತ್ತದೆ. ಇದು ಅವರ ಅಧ್ಯಯನವನ್ನು ಹೆಚ್ಚು ಅರ್ಥಪೂರ್ಣವಾಗಿಸುತ್ತದೆ.

ಆರ್ಥಿಕ ನೆಲೆಯಲ್ಲಿ ನೋಡುವುದಾದರೆ, ಈ ಸಾಹಿತ್ಯಿಕ ಆಸಕ್ತಿಯು ಕೇವಲ ಓದುಗರಿಗೆ ಮಾತ್ರವಲ್ಲದೆ, ಸ್ಥಳೀಯ ಆರ್ಥಿಕತೆಗೂ ಭಾರಿ ಕೊಡುಗೆ ನೀಡುತ್ತದೆ. ಕವಿಗಳ ಮನೆಗಳು, ಸಾಹಿತ್ಯ ಮೇಳಗಳು ಮತ್ತು ಮ್ಯೂಸಿಯಂಗಳು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿಗೊಂಡಾಗ ಸ್ಥಳೀಯರಿಗೆ ವ್ಯಾಪಕ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಅಷ್ಟೇ ಅಲ್ಲದೆ, ನಿರ್ಲಕ್ಷ್ಯಕ್ಕೊಳಗಾಗಿ ಪಾಳುಬೀಳುವ ಪುರಾತನ ಕಟ್ಟಡಗಳು ಮತ್ತು ಲೇಖಕರ ಹಳೆಯ ಮನೆಗಳು ಸಂರಕ್ಷಿಸಲ್ಪಡುವುದರಿಂದ ನಮ್ಮ ಅಮೂಲ್ಯವಾದ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸುಭದ್ರವಾಗಿ ವರ್ಗಾಯಿಸಲು ಸಹಕಾರಿಯಾಗುತ್ತದೆ.

ಇತಿಹಾಸ ಮತ್ತು ವಿಸ್ತಾರ

18ನೆಯ ಶತಮಾನದ ಯುರೋಪಿನಲ್ಲಿ ಮೊಳಕೆಯೊಡೆದ ಸಾಹಿತ್ಯ ಪ್ರವಾಸೋದ್ಯಮವು 19ನೆಯ ಶತಮಾನದ ‘ರೊಮ್ಯಾಂಟಿಕ್ ಚಳವಳಿ'ಯೊಂದಿಗೆ ಮತ್ತಷ್ಟು ವಿಸ್ತಾರಗೊಂಡಿತು. ವಿಲಿಯಂ ಷೇಕ್ಸ್‌ಪಿಯರ್ ಅವರ ಐತಿಹಾಸಿಕ ತಾಣಗಳು, ಹ್ಯಾರಿ ಪಾಟರ್ ಸರಣಿಯ ಪ್ಲಾಟ್‌ಫಾರ್ಮ್ 9 ¾, ಷರ್ಲಾಕ್ ಹೋಮ್ಸ್‌ನ ಬೇಕರ್ ಸ್ಟ್ರೀಟ್ ಹಾಗೂ ಯುನೆಸ್ಕೋ ಗುರುತಿಸಿದ ಮೊದಲ ಸಾಹಿತ್ಯ ನಗರಿ ಎಡಿನ್‌ಬರ್ಗ್ ಇಂದಿಗೂ ಪ್ರಮುಖ ಆಕರ್ಷಣೆಗಳಾಗಿವೆ. ಟಾಲ್‌ಸ್ಟಾಯ್ ಮತ್ತು ದೋಸ್ತೋಯೆವ್ಸ್ಕಿಯವರ ಕೃತಿಗಳಿಗೆ ಸಾಕ್ಷಿಯಾದ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ಸೇರಿದಂತೆ ಈ ಎಲ್ಲಾ ಸ್ಥಳಗಳು ಕೇವಲ ಭೌತಿಕ ತಾಣಗಳಾಗಿ ಉಳಿಯದೆ, ಲೇಖಕರ ಸೃಜನಶೀಲತೆಯ ಅಮೂಲ್ಯ ಸ್ಫೂರ್ತಿಧಾಮಗಳಾಗಿವೆ.

ಭಾರತವು ಸಾಹಿತ್ಯದ ಮಹಾಸಾಗರವಾಗಿದ್ದು, ಇಲ್ಲಿನ ಪ್ರತಿಯೊಂದು ಭಾಷೆಯೂ ತನ್ನದೇ ಆದ ಸಾಹಿತ್ಯಿಕ ಮಹತ್ವದ ತಾಣಗಳನ್ನು ಹೊಂದಿದೆ. ಕೋಲ್ಕತ್ತಾದಲ್ಲಿರುವ ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನವು ಕೇವಲ ಒಂದು ಶಿಕ್ಷಣ ಸಂಸ್ಥೆಯಲ್ಲ, ಅದು ಸಾಹಿತ್ಯ ಮತ್ತು ಕಲೆಗಳ ಗಂಗೋತ್ರಿ. ಬಂಕಿಮ್‌ಚಂದ್ರ ಚಟರ್ಜಿ ಅವರ ನಿವಾಸ ಬಂಗಾಳಿ ಸಾಹಿತ್ಯದ ವೈಭವವನ್ನುಸಾರಿದರೆ, ಮಧ್ಯಪ್ರದೇಶದ ಉಜ್ಜಯಿನಿಯು ಮಹಾಕವಿ ಕಾಳಿದಾಸನ ನೆನಪುಗಳನ್ನು ಹೊತ್ತು ಸಂಸ್ಕೃತ ಸಾಹಿತ್ಯಾಸಕ್ತರ ನೆಚ್ಚಿನ ತಾಣವೆನಿಸಿಕೊಂಡಿದೆ. ಹಾಗೆಯೇ ವಾರಣಾಸಿಯು ಕಬೀರ್, ತುಳಸೀದಾಸ ಮತ್ತು ಮುನ್ಷಿ ಪ್ರೇಮಚಂದರ ಬದುಕು-ಬರಹಗಳಿಗೆ ಸಾಕ್ಷಿಯಾದ ತಾಣಗಳು.

New Project (57)

ಸಾಹಿತ್ಯ ಪ್ರವಾಸೋದ್ಯಮದ ದೃಷ್ಟಿಯಿಂದ ಸಂಸ್ಕೃತಿಯ ನೆಲೆವೀಡಾದ ಕರ್ನಾಟಕದ ಹಿರಿಮೆಗೆ ಕುಪ್ಪಳಿಯು ಅತ್ಯುತ್ತಮ ನಿದರ್ಶನ. ಇಲ್ಲಿನ 'ಕವಿಮನೆ' ಮತ್ತು ದೈವಿಕ ಅನುಭೂತಿ ನೀಡುವ 'ಕವಿಶೈಲ'ವು ರಾಷ್ಟ್ರಕವಿ ಕುವೆಂಪು ಅವರ ಬದುಕು-ಬರಹ ಹಾಗೂ ಮಲೆನಾಡಿನ ನೈಸರ್ಗಿಕ ಸೌಂದರ್ಯವನ್ನು ಮನೋಜ್ಞವಾಗಿ ಪರಿಚಯಿಸುತ್ತವೆ. ಧಾರವಾಡದ ಸಾಧನಕೇರಿಯು ವರಕವಿ ದ.ರಾ. ಬೇಂದ್ರೆಯವರ ಕವಿತೆಗಳ ಮೂಲಕ ಸಾಹಿತ್ಯಾಸಕ್ತರ ಸ್ಫೂರ್ತಿಯ ಸೆಲೆಯಾಗಿದ್ದು, ಅಲ್ಲಿನ ಬೇಂದ್ರೆ ಭವನ ಹಾಗೂ ಸಾಹಿತ್ಯಿಕ ಪರಿಸರವು ಚನ್ನವೀರ ಕಣವಿಯಂಥ ದಿಗ್ಗಜರ ನೆನಪುಗಳನ್ನು ಮರುಕಳಿಸುತ್ತದೆ. ಇನ್ನು ಮೈಸೂರಿನಲ್ಲಿರುವ ಆರ್.ಕೆ. ನಾರಾಯಣ್ ಅವರ ನಿವಾಸವು 'ಮಾಲ್ಗುಡಿ'ಯ ಲೋಕವನ್ನು ಅನಾವರಣಗೊಳಿಸಿದರೆ, ಕೋಟದ 'ಕಾರಂತ ಬಾಲವನ'ವು ಶಿವರಾಮ ಕಾರಂತರ ಬಹುಮುಖಿ ಪ್ರತಿಭೆ ಮತ್ತು ಯಕ್ಷಗಾನ ಪ್ರೀತಿಯ ಸಂಕೇತವಾಗಿದೆ. ಇವುಗಳೊಂದಿಗೆ ಕುಮಾರವ್ಯಾಸರ ಕಾವ್ಯವೈಭವಕ್ಕೆ ಸಾಕ್ಷಿಯಾದ ಗದುಗಿನ ವೀರನಾರಾಯಣನ ಸನ್ನಿಧಿ ಮತ್ತು ದಕ್ಷಿಣ ಕನ್ನಡದ ಯಕ್ಷಗಾನ ಪರಂಪರೆಯು ಭಾರತದ ಸಾಹಿತ್ಯಿಕ ಭೂಪಟದಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಸ್ಥಾನವನ್ನು ತಂದುಕೊಟ್ಟಿವೆ.

ಯಾವುದೇ ಪ್ರದೇಶವು ಕೇವಲ ಕಲ್ಲು-ಮಣ್ಣುಗಳಲ್ಲ, ಅದು ಅಲ್ಲಿನವರ ನೆನಪು ಮತ್ತು ಭಾವನೆಗಳಿಂದ ಜೀವಂತವಾಗಿರುತ್ತದೆ. ಸಾಹಿತ್ಯ ಪ್ರವಾಸೋದ್ಯಮವು ಅಂತಹ ಜೀವಂತಿಕೆಯನ್ನು ಅನುಭವಿಸುವ ಅವಕಾಶ ನೀಡುತ್ತದೆ. ಉದಾಹರಣೆಗೆ ತೇಜಸ್ವಿಯವರ ಕೃತಿಗಳು ಪಶ್ಚಿಮ ಘಟ್ಟದ ಕಾಡನ್ನು ಕೇವಲ ಮರಗಳಾಗಿ ಉಳಿಸದೆ, ಒಂದು ಕೌತುಕದ ಲೋಕವಾಗಿ ಓದುಗರಿಗೆ ದರ್ಶಿಸುತ್ತವೆ. ಜೈಪುರ, ಧಾರವಾಡಗಳ ಸಾಹಿತ್ಯ ಉತ್ಸವಗಳು ಮತ್ತು ಬೆಂಗಳೂರಿನ ಲಿಟರೇಚರ್ ಫೆಸ್ಟ್’ನಂಥ ವೇದಿಕೆಗಳು ಇಂದು ಪ್ರವಾಸಿಗರನ್ನು ಸೆಳೆಯುವ ಮೂಲಕ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಿವೆ. ಈ ವೇದಿಕೆಗಳು ಕೇವಲ ಚರ್ಚೆಗಳಿಗೆ ಸೀಮಿತವಾಗದೆ, ಪುಸ್ತಕ ಮತ್ತು ಲೇಖಕರಿಗಾಗಿ ಊರಿನಿಂದ ಊರಿಗೆ ಸಂಚರಿಸುವ ಹೊಸ ಓದುಗ ಪೀಳಿಗೆಯನ್ನೇ ಸೃಷ್ಟಿಸಿವೆ.

ಪ್ರವಾಸ ಮಾಡುವುದು ಜ್ಞಾನವಿಕಾಸಕ್ಕೆ ಪೂರಕವಾದ ಒಂದು ಉತ್ತಮ ಹವ್ಯಾಸ. ನೇರವಾಗಿ ಪ್ರವಾಸ ಕೈಗೊಳ್ಳಲು ಸಾಧ್ಯವಾಗದಿದ್ದಾಗ, ಪ್ರವಾಸ ಸಾಹಿತ್ಯವನ್ನಾದರೂ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ, ಸಾಹಿತ್ಯ ಮತ್ತು ಪ್ರವಾಸ ಎರಡನ್ನೂ ಮೇಳೈಸುವ 'ಸಾಹಿತ್ಯ ಪ್ರವಾಸೋದ್ಯಮ'ವು ಓದುಗನಿಗೆ ಒಂದು ಸರ್ವಾಂಗೀಣ ಅನುಭವವನ್ನು ನೀಡುತ್ತದೆ. ಸಾಹಿತ್ಯ ಪ್ರಿಯರು ಕೇವಲ ಪುಸ್ತಕದ ಓದಿಗೆ ಸೀಮಿತವಾಗದೆ, ಆ ಅಕ್ಷರಗಳ ಉಗಮಸ್ಥಾನ ಅಥವಾ ಕೃತಿಯ ಹಿನ್ನೆಲೆಯನ್ನು ಅನ್ವೇಷಿಸುವ ಯಾತ್ರೆಯನ್ನು ಆರಂಭಿಸಬೇಕು. ಆಗ ಮಾತ್ರ ಸಾಹಿತ್ಯವು ಕೇವಲ ಪುಸ್ತಕದ ಪುಟಗಳಲ್ಲಿ ಉಳಿಯದೆ, ಜನರ ಬದುಕಿನಲ್ಲಿ ಜೀವಂತವಾಗಿ ನೆಲೆಸಲು ಸಾಧ್ಯವಾಗುತ್ತದೆ.