Thursday, October 16, 2025
Thursday, October 16, 2025

ಭೈರಪ್ಪನವರದ್ದು ಪ್ರವಾಸ ಸಾಹಿತ್ಯವಲ್ಲ ಸಾಹಿತ್ಯ ಪ್ರವಾಸ!

ಎಸ್‌ ಎಲ್‌ ಭೈರಪ್ಪ ಕನ್ನಡದ ಜನಮನ್ನಣೆಯ ಲೇಖಕ. ಮೇರು ಕಾದಂಬರಿಕಾರ. ಅವರು ಒಂದಿಡೀ ತಲೆಮಾರಿನ ಓದುಗರನ್ನು ಪ್ರಭಾವಿಸಿದವರು. ಭೈರಪ್ಪ ಗದ್ಯ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಗೊಟ್ಟವರು. ಅವರು ಬರೆದ ಮಹತ್ವದ ಕಾದಂಬರಿಗಳು ಜಾಗತಿಕಮಟ್ಟದಲ್ಲಿ ಖ್ಯಾತಿಗಳಿಸಿವೆ. ನಲವತ್ತಕ್ಕೂ ಹೆಚ್ಚು ಭಾಷೆ ಮತ್ತು ಉಪ ಭಾಷೆಗಳಿಗೆ ಅವರ ಕೃತಿಗಳು ಅನುವಾದಗೊಂಡಿವೆ. ಎಸ್‌.ಎಲ್.ಬಿ ಪ್ಯಾನ್‌ ಇಂಡಿಯಾ ಕಾದಂಬರಿಕಾರ ಅಷ್ಟೇ ಅಲ್ಲ. ಗ್ಲೋಬಲ್ ಸ್ಟಾರ್‌ ಕಾದಂಬರಿಕಾರ. ಭೈರಪ್ಪ ಅವರ ಪ್ರತಿ ಕಾದಂಬರಿ ರಚನೆಯ ಹಿಂದೆ ಹಲವು ವರ್ಷಗಳ ಗಂಭೀರ ಅಧ್ಯಯನ ಮತ್ತು ಸುತ್ತಾಟವಿದೆ.

ಎಸ್‌ ಎಲ್‌ ಭೈರಪ್ಪ ಕನ್ನಡದ ಜನಮನ್ನಣೆಯ ಲೇಖಕ. ಮೇರು ಕಾದಂಬರಿಕಾರ. ಅವರು ಒಂದಿಡೀ ತಲೆಮಾರಿನ ಓದುಗರನ್ನು ಪ್ರಭಾವಿಸಿದವರು. ಭೈರಪ್ಪ ಗದ್ಯ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಗೊಟ್ಟವರು. ಅವರು ಬರೆದ ಮಹತ್ವದ ಕಾದಂಬರಿಗಳು ಜಾಗತಿಕಮಟ್ಟದಲ್ಲಿ ಖ್ಯಾತಿಗಳಿಸಿವೆ. ನಲವತ್ತಕ್ಕೂ ಹೆಚ್ಚು ಭಾಷೆ ಮತ್ತು ಉಪ ಭಾಷೆಗಳಿಗೆ ಅವರ ಕೃತಿಗಳು ಅನುವಾದಗೊಂಡಿವೆ. ಎಸ್‌.ಎಲ್.ಬಿ ಪ್ಯಾನ್‌ ಇಂಡಿಯಾ ಕಾದಂಬರಿಕಾರ ಅಷ್ಟೇ ಅಲ್ಲ. ಗ್ಲೋಬಲ್ ಸ್ಟಾರ್‌ ಕಾದಂಬರಿಕಾರ. ಭೈರಪ್ಪ ಅವರ ಪ್ರತಿ ಕಾದಂಬರಿ ರಚನೆಯ ಹಿಂದೆ ಹಲವು ವರ್ಷಗಳ ಗಂಭೀರ ಅಧ್ಯಯನ ಮತ್ತು ಸುತ್ತಾಟವಿದೆ. ಅವರು ಪ್ರವಾಸ ಮಾಡದೆ ಏನನ್ನೂ ಬರೆದವರಲ್ಲ. ಭೈರಪ್ಪ ಕಾದಂಬರಿ ಬರೆಯುವ ಸಲುವಾಗಿಯೇ ದೇಶ-ವಿದೇಶ ಸುತ್ತಾಡಿದವರು. ಅವರು ಅಂಟಾರ್ಕ್ಟಿಕಗೂ ಹೋಗಿ ಬಂದವರು. ಅಂದರೆ ಅವರ ಪ್ರಯಾಣ ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೂ ಸಾಗಿತ್ತು.

ಎಸ್‌ ಎಲ್‌ ಭೈರಪ್ಪ ಅವರು ತೀರಾ ಅಪರೂಪದ ದೇಶಗಳಿಗೆ ಭೇಟಿಕೊಟ್ಟವರು. ಅವರು ಬರೆಯುವ ಸಲುವಾಗಿಯೇ ಪ್ರವಾಸ ಮಾಡಿದ ಅಪರೂಪದ ಲೇಖಕ. ಭೈರಪ್ಪ ʼಸುತ್ತಾಡದೆ ಮತ್ತು ಆಯಾ ದೇಶಗಳ ಚಿತ್ರಣವನ್ನು ಅನುಭವಕ್ಕೆ ತೆಗೆದುಕೊಳ್ಳದೆ ಬರೆಯಬಾರದುʼ ಎಂದವರು. ಶ್ರೇಷ್ಠ ಕಾದಂಬರಿಕಾರ ಮತ್ತು ನಿಜ ಅರ್ಥದಲ್ಲಿ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿದ್ದ ಭೈರಪ್ಪ ಅವರಿಗೆ ಪ್ರವಾಸಿ ಪ್ರಪಂಚ ಪತ್ರಿಕೆಯು ನುಡಿ ನಮನ ಸಲ್ಲಿಸುತ್ತಿದೆ. ಕಾದಂಬರಿ ರಚನೆಗಾಗಿ ಅವರು ಕೈಗೊಂಡ ಪ್ರವಾಸ ಮತ್ತು ಅವರ ಪ್ರವಾಸದ ಸುತ್ತಲಿನ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ಇಲ್ಲಿ ದಾಖಲಿಸಿದ್ದೇವೆ.

ʼಬರೆಯಲು ಶಕ್ತಿಯಿದೆ. ಆದರೆ ಈ ವಯಸ್ಸಿನಲ್ಲಿ ಸುತ್ತಾಟ ಸಾಧ್ಯವಿಲ್ಲ. ಹಾಗಾಗಿ ನನ್ನಿಂದ ಇನ್ನು ಏನನ್ನೂ ಬರೆಯಲು ಸಾಧ್ಯವಿಲ್ಲ. ಕೃತಿ ರಚನೆಗೆ ಅಧ್ಯಯನ ಒಂದೇ ಸಾಲದು. ಸುತ್ತಾಟವೂ ಬೇಕು. ನಾನು ಪರ್ವ ಬರೆಯುವ ಮೊದಲು ದೇಶದ ಮೂಲೆ ಮೂಲೆಗೂ ಹೋಗಿ ಬಂದಿದ್ದೇನೆ. ತಿಂಗಳುಗಟ್ಟಲೆ ವಿದೇಶಗಳಲ್ಲಿ ಅಡ್ಡಾಡಿದ್ದೇನೆ. ಹೆಚ್ಚು ಪ್ರವಾಸ ಮಾಡಿದ ಕಾರಣಕ್ಕಾಗಿಯೇ ಪರ್ವ ಆಮಟ್ಟಿಗೆ ಜನಪ್ರಿಯವಾಯಿತು. ನನ್ನಲ್ಲಿ ಮತ್ತೊಂದು ಪರ್ವ ಬರೆಯುವಷ್ಟು ಸರಕಿದೆ. ಅದರೆ ಸುತ್ತಾಡದೆ ಬರೆಯಲಾರೆ. ನನ್ನ ಓದುಗರಿಗೆ ಮೋಸ ಮಾಡಲಾರೆʼ ಇದು ಎಸ್. ಎಲ್‌ ಭೈರಪ್ಪ ಅವರ ಮಾತುಗಳು. ಹತ್ತಾರು ಸಂದರ್ಶನಗಳಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ʼಸರ್‌ ಮತ್ತೇನಾದರೂ ಬರೆಯುತ್ತೀರಾ?ʼ ಎಂದು ಕೇಳುವ ಓದುಗರಿಗೂ ಅವರದ್ದು ಅದೇ ಉತ್ತರ. ಎಸ್‌ ಎಲ್‌ ಭೈರಪ್ಪ ನಾಲ್ಕು ಗೋಡೆಗಳ ಮಧ್ಯೆ ಕೂತು ಬರೆದ ಲೇಖಕರಲ್ಲ. ಅವರು ಕಲ್ಪನೆಯ ಲೋಕದಲ್ಲಿ ವಿಹರಿಸಿದವರೂ ಅಲ್ಲ. ಅವರು ತಮ್ಮ ಕೃತಿಗಳಿಗೆ ಪುರಾಣ ಕತೆಗಳನ್ನು ಆಧಾರವಾಗಿ ಇಟ್ಟುಕೊಂಡರೂ ಅಲ್ಲಿ ಅವರ ಅಧ್ಯಯನ ಮತ್ತು ಸುತ್ತಾಟದ ಪ್ರಭಾವ ಢಾಳಾಗಿ ಕಾಣುತ್ತದೆ. ಪರ್ವ ಮತ್ತು ಉತ್ತರಕಾಂಡದಂಥ ಕೃತಿಗಳ ರಚನೆಗೆ ಅವರು ಹತ್ತಾರು ವರ್ಷಗಳು ಸುತ್ತಾಡಿದ್ದರು. ʼಪರ್ವ ಬರೆದದ್ದುʼ ಮತ್ತು ʼನಾನೇಕೆ ಬರೆಯುತ್ತೇನೆ?ʼ ಕೃತಿಗಳನ್ನು ಓದಿದರೆ ಭೈರಪ್ಪ ಅವರ ಪ್ರವಾಸದ ಬಗ್ಗೆ ತಿಳಿಯುತ್ತದೆ.

Bhyrappa (1)

ಭೈರಪ್ಪ ಅವರು ತಮ್ಮ ಪ್ರವಾಸದ ಇಡಿ ಅನುಭವಗಳನ್ನೇ ಒಂದು ಕಡೆ ದಾಖಲಿಸುತ್ತಾ ಹೋಗಿದ್ದರೆ ಅದು ಕನ್ನಡದ ಮಹತ್ವದ ಪ್ರವಾಸ ಕಥನಗಳಾಗುತ್ತಿದ್ದವು. ಆದರೆ ಭೈರಪ್ಪ ಅವರಿಗೆ ಪ್ರವಾಸಕಥನ ಬರೆಯುವ ಇಚ್ಛೆಯಿರಲಿಲ್ಲ. ಪ್ರವಾಸ ಅನುಭವಗಳ ಬಗ್ಗೆ ಮಾತನಾಡಿ ಎಂದರೂ ಅವರು ಒಪ್ಪುತ್ತಿರಲಿಲ್ಲ. ʼನನ್ನ ಅನುಭವಕ್ಕೆ ಬಾರದ ಎಷ್ಟೋ ವಿಷಯಗಳಿರುತ್ತವೆ. ನನಗೆ ತೋಚಿದ್ದನ್ನು ಹೇಳುವುದು ಸರಿಯಲ್ಲ. ನನ್ನ ಪ್ರವಾಸವೇನಿದ್ದರೂ ನನ್ನ ಕಾದಂಬರಿಗಳ ರಚನೆಯ ಸಲುವಾಗಿ. ನಾನು ಎಂದೂ ಖಾಲಿ ಪ್ರವಾಸ ಮಾಡಿದವನಲ್ಲ. ಅಧ್ಯಯನದ ಸಲುವಾಗಿಯೇ ತಿಂಗಳುಗಟ್ಟಲೆ ಮನೆ ಮತ್ತು ಸಂಸಾರ ಬಿಟ್ಟು ಸುತ್ತಿದವನು ನಾನು. ಸುತ್ತಾಡದೆ ಹೋಗಿದ್ದರೆ ಪರ್ವ, ಉತ್ತರಕಾಂಡ, ಕವಲು, ಮಂದ್ರ, ಜಲಪಾತ ಮತ್ತು ತಬ್ಬಲಿಯು ನೀನಾದೆ ಮಗನೆ ಕೃತಿಗಳು ಹುಟ್ಟುತ್ತಿರಲಿಲ್ಲ. ನೀವು ಒಂದನ್ನು ಅರ್ಥಮಾಡಿಕೊಳ್ಳಬೇಕು. ಕಲ್ಪನೆಯಿಂದ ಬರೆದ ಕೃತಿಗಳಿಗಿಂತ ವಾಸ್ತವದ ಚಿತ್ರಣ ಅರಿತು, ಗಂಭೀರವಾಗಿ ಅಧ್ಯಯನ ಮಾಡಿ ಪ್ರವಾಸ ಕೈಗೊಂಡು ಬರೆದ ಕೃತಿಗಳಿಗೆ ಆಯುಷ್ಯ ಜಾಸ್ತಿʼ ಇದೂ ಭೈರಪ್ಪ ಅವರದ್ದೇ ಮಾತುಗಳು.

ಪರ್ವ-ಪ್ರವಾಸ ಮತ್ತು ಭೈರಪ್ಪ

ಮನುಷ್ಯರಾದ ನಮಗೆ ಇರುವುದೊಂದೇ ಬದುಕು. ಸೀಮಿತವಾದ ಪರಿಯಲ್ಲಿ ಬರುವ ಅನುಭವ ಪಡೆಯುತ್ತ, ಕೆಲವನ್ನು ತಿರಸ್ಕರಿಸುತ್ತ ತಂತಮ್ಮ ಬದುಕು ಇರುವಷ್ಟು ದಿನ ಸಾಗುತ್ತದೆ. ಇದರ ಹೊರತಾಗಿ ಅನ್ಯರ ಅನುಭವ ಮತ್ತು ಭಾವ ಲೋಕವನ್ನು ಪ್ರವೇಶಿಸಲು ಪ್ರವಾಸ ಅಗತ್ಯ. ಅನ್ಯರ ಬದುಕು, ಪುರಾಣ ಕತೆ ಮತ್ತು ವ್ಯಕ್ತಿಗಳ ಭಾವಲೋಕವನ್ನು ಪ್ರವೇಶಿಸಿ ಬರೆದ ಲೇಖಕರೆಂದರೆ ಭೈರಪ್ಪ. ಇವೆಲ್ಲವೂ ಮಿಳಿತಗೊಂಡಾಗಲೇ ʼಕಾದಂಬರಿ ಓದುʼ ಸಾರ್ಥಕತೆ ಎಂದು ಅವರು ಭಾವಿಸಿದವರು. ಅಧ್ಯಯನ ಮತ್ತು ಸುತ್ತಾಟ ಜನಿತ ಕೃತಿಗಳು ಗೆಲ್ಲುತ್ತವೆ. ಅದಕ್ಕೆ ಸಮದರ್ಶಿತ ದೃಷ್ಟಾಂತಗಳೆಂದರೆ ಡಾ. ಎಸ್ ಎಲ್ ಭೈರಪ್ಪನವರ ಕಾದಂಬರಿಗಳು. ಭೈರಪ್ಪನವರ ಅನೇಕ ಕಾದಂಬರಿಗಳಿಗೆ ಅವರು ಕೈಗೊಂಡ ಪ್ರವಾಸವೇ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರೇರಣೆ ಎಂಬುದು ನಿರ್ವಿವಾದ.

'ಪರ್ವ ಬರೆದದ್ದು' ಬರಹದಲ್ಲಿ, ಸ್ವತಃ ಭೈರಪ್ಪನವರೇ ಹೇಳಿದ ಮಾತುಗಳಿವು. ಅವರ ಮಾತುಗಳಲ್ಲಿ ಪರ್ವ ಕಾದಂಬರಿ ರಚನೆಯ ಹಿಂದಿನ ವರ್ಷಗಟ್ಟಲೆಯ ಸುತ್ತಾಟದಲ್ಲಿ ಅವರು ಕಂಡುಕೊಂಡ ದಟ್ಟ ಅನುಭವ ನಮಗೆ ಕಾಣಿಸುತ್ತದೆ. ʼಗಡವಾಲ್ ಭಾಗದ ಕಿರುಹಳ್ಳಿಯೊಂದರಲ್ಲಿ ಬಹುಪತ್ನಿತ್ವದ ಪದ್ಧತಿಯನ್ನು ನೋಡಿ ಈ ಕುಟುಂಬ ವ್ಯವಸ್ಥೆಯ ಒಳಗನ್ನು, ಭಾವನೆಗಳ ವ್ಯತ್ಯಾಸವನ್ನು ವಿಚಾರಿಸುತ್ತ ಅಲ್ಲಿ ನಿಂತೆ. ನಂತರ ಬದರಿ ಮತ್ತು ಜ್ಯೋತಿರ್ಮಠದ ಪರ್ವತಗಳ ನಡುವಿನ ತಪ್ಪಲಿನಲ್ಲಿರುವ ಪಾಂಡುಕೇಶ್ವರಕ್ಕೆ ಹೋದಾಗ ಪಾಂಡುರಾಜ, ಕುಂತಿ, ಮಾದ್ರಿಯರ ಚಿತ್ರಗಳು ಮನಸ್ಸನ್ನು ತುಂಬಿಬಿಟ್ಟವು. ನಾನು ಗಾಢವಾಗಿ ಪ್ರೀತಿಸುವ ಹಿಮಾಲಯದ ಏರು ಇಳಿವುಗಳಲ್ಲಿ ಸಂಚರಿಸುವಾಗ ಮಹಾಭಾರತದ ಪಾತ್ರಗಳು ಒಳಗಿನಿಂದಲೇ ಒದೆಯಲು ಪ್ರಾರಂಭ ಮಾಡಿದವು. ಉತ್ತರ ಭಾರತದ ಜನರ ರೂಪ, ಆಕಾರ, ಸಾಮಾಜಿಕ ಪದ್ಧತಿಗಳು, ಮನೋಧರ್ಮದ ವ್ಯತ್ಯಾಸಗಳನ್ನು ಗಮನಿಸುತ್ತಿದ್ದಂತೆ ಒಂದು ಥರದಲ್ಲಿ ಇವರು ನೇರವಾಗಿ ಮಹಾಭಾರತಕ್ಕೆ ಸಂಬಂಧಿಸಿದವರು ಎಂಬ ಗ್ರಹಿಕೆ ಸ್ಫುಟವಾಯಿತು. ನಾನು ಉತ್ತರ ಭಾರತದ ಜೀವನವನ್ನು ಗ್ರಹಿಸಿಕೊಳ್ಳುವ ರೀತಿ ಒಂದು ಅರ್ಥದಲ್ಲಿ ನನ್ನ ಇಡೀ ಜೀವನದಲ್ಲಿ ಕಾಡುತ್ತಿದ್ದ ಹಲವು ಸಮಸ್ಯೆಗಳ ಮೂಲವನ್ನು ಗುರುತಿಸಿಕೊಳ್ಳುವ ಸಾಧನವೆನಿಸಿತು. ಹೀಗಾಗಿ ಮಹಾಭಾರತವನ್ನು ಅಭ್ಯಾಸ ಮಾಡುವ ಒತ್ತಡ ಒಳಗಿನಿಂದ ಶುರುವಾಯಿತು. ಈ ದೇಶದ ಸಂಸ್ಕೃತಿಯು ಒಂದು ರೂಪ ತಾಳಿ ಬೇರೊಂದು ರೂಪದ ಸ್ಥಿತ್ಯಂತರದಲ್ಲಿದ್ದ ಕಾಲದ ಸ್ಪಷ್ಟ ಚಿತ್ರವಾಗಿ ಮಹಾಭಾರತವನ್ನು ಓದಬೇಕೆನಿಸಿತುʼ ಭೈರಪ್ಪನವರ ಪರ್ವವನ್ನು ಭೌಗೋಳಿಕ ಆಯಾಮದಲ್ಲಿ ನೋಡುವಾಗ ಮಹಾಭಾರತದ ಕಥೆಯು ನಡೆದ ಸಮಯದ ಉತ್ತರಭಾರತದ ಭೂಪ್ರದೇಶಗಳ ವಿವರಗಳು ಪರ್ವದಲ್ಲಿ ಸ್ಪಷ್ಟ ಅಧಿಕೃತತೆಯಿಂದ ಮೂಡಿವೆ.

parva writer s l bhyrappa

ಪರ್ವವನ್ನು ಬರೆಯುವ ಮೊದಲು ಭೈರಪ್ಪನವರು ಕೈಗೊಂಡ ವ್ಯಾಪಕ ಪ್ರವಾಸವೇ ಇದಕ್ಕೆ ಆಧಾರ. ಹಸ್ತಿನಾಪುರದ ಸೀಮಿತವಲಯದಲ್ಲಿ ಆರಂಭವಾಗುವ ಕಥೆಗೆ ಯುದ್ಧದ ಸಮಯದಲ್ಲಿ ಈ ವಿಶಾಲವಾದ ಭೌಗೋಳಿಕ ಆಯಾಮ ದೊರೆತುಬಿಡುತ್ತದೆ. ಪಶ್ಚಿಮದ ಯಾದವರ, ಆಗ್ನೇಯದ ಕಳಿಂಗರು, ವಾಯವ್ಯದ ಮದ್ರದ ಯೋಧರು, ಉತ್ತರದಲ್ಲಿ ಕೇಕಯ ಬಾಹ್ಲಿಕರಿಂದ ಈ ಯುದ್ಧದ ಹರಹು ಸಂಪೂರ್ಣ ಉತ್ತರಭಾರತವನ್ನೇ ಅಲ್ಲದೆ ವಿಂಧ್ಯಪರ್ವತ ಸ್ವಲ್ಪ ಕೆಳಗಿನವರೆಗೂ ವ್ಯಾಪಿಸಿಕೊಂಡಿತ್ತು ಎಂದು ತಿಳಿಯುತ್ತದೆ. ಗುಡ್ಡಗಳಿಂದ ಆವೃತವಾದ ವಿರಾಟಪುರದಲ್ಲಿ ಗೋಗ್ರಹಣದ ಸಮಯದಲ್ಲಿ ಯುದ್ಧವಾಗಿರುವುದು ಸಾಧ್ಯವೇ ಇಲ್ಲವೆಂದು ಭೈರಪ್ಪನವರು ಅಭಿಪ್ರಾಯಪಡುತ್ತಾರೆ. ಯುದ್ಧವೆಂದ ಮೇಲೆ ರಥ, ಆನೆ, ಕುದುರೆಗಳು ಇಲ್ಲದಿದ್ದರಾದೀತೇ ಎಂದು ವ್ಯಾಸರ ಲೆಕ್ಕಾಚಾರ. ಕುಮಾರವ್ಯಾಸರಿಬ್ಬರೂ ವಿರಾಟಪುರದ ಯುದ್ಧಕ್ಕೆ ರಥಗಳನ್ನು ಕಳುಹಿಸಿದರೆಂದು ಅವರ ಅನಿಸಿಕೆ. ಪಶ್ಚಿಮದ ದ್ವಾರಕೆ, ಪೂರ್ವದ ಮಗಧಗಳನ್ನು ನೋಡಿದಾಗ ಸಂಚಾರ ಸೌಲಭ್ಯಗಳಿಲ್ಲದ ಆಗಿನ ಕಾಲದಲ್ಲಿ ಕೃಷ್ಣಾರ್ಜುನರು ಕೈಗೊಂಡ ದೀರ್ಘ ಪ್ರವಾಸಗಳನ್ನು ಕುರಿತು ಮೆಚ್ಚುಗೆಯೆನಿಸುತ್ತದೆ. ತೀರಾ ವಾಯವ್ಯದಲ್ಲಿ ಗಾಂಧಾರ ದೇಶವಿದೆ. ಗಾಂಧಾರಿ ಶಕುನಿಯರ ಊರು ಗುಡ್ಡ ಬೆಟ್ಟ ನದಿ ತೊರೆಗಳಿಂದ ಕೂಡಿದ ಸುಂದರ ನಾಡೆಂದು ಗಾಂಧಾರಿ ನೆನಪಿಸಿಕೊಳ್ಳುತ್ತಾಳೆ. ಇದು ಈಗಿನ ಅಫ್ಘಾನಿಸ್ತಾನ. ಅಲ್ಲಿಂದ ಸ್ವಲ್ಪ ಕೆಳಗೆ ಶಲ್ಯನ ಮದ್ರರಾಜ್ಯ ಭೀಷ್ಮ ಪಾಂಡುವಿಗಾಗಿ ಮಾದ್ರಿಯನ್ನು ತಂದಿದ್ದು ಇಲ್ಲಿಂದಲೇ, ವಾಯವ್ಯ ದಿಕ್ಕಿನಲ್ಲಿಯೇ ಮತ್ತೂ ಕೆಳಗೆ ಬಂದಾಗ ಹಸ್ತಿನಾಪುರ ಹತ್ತಿರದಲ್ಲಿಯೇ ಇಂದಪ್ರಸ್ಥವಿದೆ. ಕೃಷ್ಣನ ನೇತೃತ್ವದಲ್ಲಿ ಖಾಂಡವ ವನವನ್ನು ದಹಿಸಿ ಪಾಂಡವರು ಕಟ್ಟಿದ ಊರು. ವಿರಾಟನ ಮತ್ತ್ವದೇಶವೂ ಇಂದ್ರಪ್ರಸ್ಥದಿಂದ ದೂರವೇನಿಲ್ಲ. ಇಂದ್ರಪ್ರಸ್ಥ, ವಿರಾಟ ನಗರಗಳು ಹಸ್ತಿನಾಪುರದ ಎಡ ಮಗ್ಗುಲಿಗಿದ್ದರೆ ಬಲಬದಿಯಲ್ಲಿ ಸ್ವಲ್ಪ ಕೆಳಗಿನತನಕವೂ ಹಬ್ಬಿರುವ ಪಾಂಚಾಲ ರಾಜ್ಯವಿದೆ. ದ್ರುಪದನ ಪಾಂಚಾಲದ ಉತ್ತರಭಾಗವು ಅಹಿಚ್ಛತ್ರವನ್ನೊಳಗೊಂಡಿದ್ದರೆ ದಕ್ಷಿಣದಲ್ಲಿ ಕಾಂಪಿಲ್ಯವಿದೆ. ಕಾಂಪಿಲ್ಯಕ್ಕೆ ಬಲು ಸಮೀಪದಲ್ಲಿಯೇ ಎಡಭಾಗದಲ್ಲಿ ಮಥುರೆ. ಇನ್ನೂ ಕೆಳಗೆ ಬಂದು ತೀರಾ ಪೂರ್ವಕ್ಕೆ ಹೋದರೆ ಜರಾಸಂಧನ ಮಗಧವಿದೆ. ಮಗಧಕ್ಕೆ ಮೇಲು ಭಾಗದಲ್ಲಿ ಕರ್ಣನಿಗೆ ದುರ್ಯೋಧನನು ನೀಡಿದ್ದ ಅಂಗರಾಜ್ಯ. ಭರತವರ್ಷದ ಮಧ್ಯದ ಗೆರೆಯಂತಿರುವ ವಿಂಧ್ಯದ ಕೆಳಗೆ ಆಗ್ನೇಯ ದಿಕ್ಕಿನಲ್ಲಿ ಕಳಿಂಗ, ವಿಂಧ್ಯಶ್ರೇಣಿಯ ಪಶ್ಚಿಮದ ಸಮುದ್ರತೀರದಲ್ಲೇ ಕೃಷ್ಣನು ಕಟ್ಟಿದ ದ್ವಾರಕೆ, ದ್ವಾರಕೆಯ ಪೂರ್ವಕ್ಕೆ ಹೆಚ್ಚು ಕಡಿಮೆ ಹಸ್ತಿನಾವತಿಗೆ ನೇರವಾಗಿ ದಕ್ಷಿಣದಲ್ಲೆಂಬಂತೆ ಭೀಷ್ಮಕನ ಕುಂಡಿನಪುರ. ಇಲ್ಲಿಂದಲೇ ರುಕ್ಮಿಣಿಯನ್ನು ಹೊತ್ತೊಯ್ದು ಕೃಷ್ಣನು ತನ್ನ ಪಟ್ಟದರಾಣಿಯನ್ನಾಗಿ ಮಾಡಿಕೊಂಡದ್ದು, ವಾಯವ್ಯದಲ್ಲಿ ಗಾಂಧಾರದೇಶದ ಎಡಗಡೆಯಲ್ಲಿ ಸಿಂಧುರಾಜ್ಯ. ಪಾಂಡುವಿನ ಸಾವನ್ನು ವ್ಯಾಸಸೃಷ್ಠಿ ಮುನಿಶಾಪಕ್ಕಿಂತ ವಿಭಿನ್ನವಾಗಿ ಹಿಮಾಲಯದಂಥ ಎತ್ತರ ಪ್ರದೇಶದಲ್ಲಿನ ಲೈಂಗಿಕಕ್ರಿಯೆಗೆ ಏರುಬ್ಬಸ ಕಾರಣ ಎಂದು ಸಹಜ ನೆಲೆಗಟ್ಟಿನಲ್ಲಿ ನಿರೂಪಿಸಿದ್ದಾರೆ. ಭೈರಪ್ಪ ಅವರು ಆ ಪಾಟಿ ಸುತ್ತಾಡದೆ ಹೋಗಿದ್ದರೆ, ಸುತ್ತಾಟದಲ್ಲಿ ದಕ್ಕಿದ್ದನ್ನು ಸರಿಯಾಗಿ ಗ್ರಹಿಸಿ ಅನುಭವವನ್ನು ಸಾಂದ್ರಗೊಳಿಸಿ ಅಕ್ಷರರೂಪಕ್ಕೆ ಇಳಿಸದೆ ಹೋಗಿದ್ದರೆ ಪರ್ವ ಹುಟ್ಟುತ್ತಿರಲಿಲ್ಲ ಎಂಬುದು ಸರ್ವಸಮ್ಮತ ಅಭಿಪ್ರಾಯ.

ಭೈರಪ್ಪ ಪ್ರವಾಸ ಕುತೂಹಲ

ಎಸ್‌ ಎಲ್‌ ಭೈರಪ್ಪ ತಮ್ಮ ಆರಂಭಿಕ ಕೃತಿಗಳ ರಚನೆಯಿಂದಲೂ ಪ್ರವಾಸದ ಕುರಿತು ಆಸಕ್ತಿಯನ್ನು ಬೆಳೆಸಿಕೊಂಡಿದ್ದವರು. ಕೆಲವು ಸಲ ಕಾದಂಬರಿ ರಚನೆಯ ಸಲುವಾಗಿಯೇ ಅವರು ಪ್ರವಾಸ ಕೈಗೊಂಡರೆ, ಮತ್ತೂ ಕೆಲವು ಸಲ ಪ್ರವಾಸದ ಜಾಗಗಳಲ್ಲಿ ಅವರ ಕಾದಂಬರಿಯ ವಸ್ತು ಹುಟ್ಟುತ್ತಿತ್ತು. ಹೀಗೊಂದಿಷ್ಟು ಮಾಹಿತಿ; ಗುಜರಾತಿನಲ್ಲಿರುವಾಗ ಅಮುಲ್ ಡೈರಿಯನ್ನು ಸಂದರ್ಶಿಸುವ ಅವಕಾಶವು ಭೈರಪ್ಪನವರಿಗೆ ಒದಗಿತು. ಕ್ಷೀರಕ್ರಾಂತಿಯ ಹೆಸರಿನಲ್ಲಿ ಹಸುಗಳ ಮೇಲೆ ನಡೆಯುವ ಕ್ರೂರ ದಬ್ಬಾಳಿಕೆಯನ್ನು ನೋಡಿ ಅವರ ಮನಸ್ಸು ಕಲಕಿತು. ಈ ಭಾವನೆಯೇ ಅವರಿಗೆ 'ತಬ್ಬಲಿಯು ನೀನಾದೆ ಮಗನೆ' ಕಾದಂಬರಿಯನ್ನು ಬರೆಯುವಂತೆ ಪ್ರಚೋದಿಸಿತು. ಮುಂಬೈ ಜೀವನದ ಕುರಿತಾಗಿ ಭೈರಪ್ಪನವರು ' ಜಲಪಾತ', 'ನಿರಾಕರಣ' ಮತ್ತು 'ಮಂದ್ರ'ಗಳಲ್ಲಿ ಯಥೇಚ್ಛವಾಗಿ ನಿರೂಪಿಸಿದ್ದಾರೆ. 'ನಿರಾಕರಣ'ದ ರಾಮಕೃಷ್ಣ, 'ಜಲಪಾತ'ದ ಶ್ರೀಪತಿ ಮತ್ತು 'ಮಂದ್ರ'ದ ಮೋಹನಲಾಲನ ಮೂಲಕ ಭೈರಪ್ಪನವರು ಕನಸಿನ ನಗರಿ ಮುಂಬೈ ತೊಳಲಾಟ, ಹಪಾಹಪಿ ಮತ್ತು ನಿವಾಸಿಗಳ ಹಳಹಳಿಯನ್ನು ದಾಖಲಿಸಿದ್ದಾರೆ. 'ಆವರಣ'ಕ್ಕೆ ಭೈರಪ್ಪನವರು ಸಾಕಷ್ಟು ಅಧ್ಯಯನ ನಡೆಸಿದರೂ ಅವರ ಹಂಪಿಯ, ಕಾಶಿ ಮತ್ತು ಮಥುರಾದ ನಿರೂಪಣೆಗಳು ಪ್ರವಾಸಜನಿತ ಅನುಭಾವ.

94 ವರ್ಷಗಳ ತುಂಬು ಜೀವನ ನಡೆಸಿದ ಭೈರಪ್ಪನವರು ಸಾಕಷ್ಟು ವಿದೇಶ ಪ್ರವಾಸ ಕೈಗೊಂಡಿದ್ದರು. ಅವರ ಅಮೆರಿಕ, ಬ್ರಿಟನ್, ರಷ್ಯಾ ಇನ್ನಿತರ ದೇಶದ ಅನುಭವಗಳು 'ಮಂದ್ರ' ದ ಮೋಹನಲಾಲ ಮತ್ತು ಮಧುಮಿತಾ, 'ಕವಲು'ವಿನ ನಚಿಕೇತ ಮತ್ತು ಜಯಕುಮಾರರ ಮೂಲಕ ಹೊಸದೇ ಲೋಕವಾಗಿ ಕನ್ನಡಿಗರ ಮನಸೆಳೆದಿವೆ.

ಮುಖ್ಯವಾಗಿ ಅವರ ಪುಣ್ಯಕ್ಷೇತ್ರ ದರ್ಶನಗಳು ಅವರ ಧರ್ಮಶ್ರೀಯಿಂದ, ವಂಶವೃಕ್ಷ, ಜಲಪಾತ, ನಿರಾಕರಣ, ಅಂಚು, ಸಾರ್ಥ, ಮಂದ್ರ, ಆವರಣ, ಯಾನ, ಉತ್ತರಕಾಂಡದವರೆಗೂ ಮೈಚಾಚಿವೆ. ನಿರಾಕರಣದ ರಾಮಕೃಷ್ಣನ ಮೂಲಕ ಉತ್ತರ ಭಾರತದ ಬಹುತೇಕ ದೇವಾಲಯದ ಹಾಗೆಯೇ ಹಿಮಾಲಯದ ಅದ್ಭುತ ಅನುಭವವನ್ನು ನಮ್ಮದಾಗಿಸಿದ್ದಾರೆ.

ಈಜಿಪ್ಟ್‌, ಸಿಂಗಾಪುರ, ಅಂಟಾರ್ಕ್ಟಿಕ ಹೀಗೆ ಬೇಕೆಂದೆಡೆಗೆ ಭೈರಪ್ಪ ಸುತ್ತಾಡಿದ್ದರು. ಅವರು ತಮ್ಮ ಇಳಿ ವಯಸ್ಸಿನಲ್ಲೂ ಐಸ್‌ಲ್ಯಾಂಡ್‌ಗೆ ಹೋಗಿ ಬಂದಿದ್ದರು. ಭೈರಪ್ಪ ಅವರು ಮನಸ್ಸು ಮಾಡಿ ತಮ್ಮ ಪ್ರವಾಸ ಅನುಭವಗಳನ್ನು ದಾಖಲಿಸಬೇಕಿತ್ತು ಎನಿಸುತ್ತದೆ. ಅವರ ಪ್ರವಾಸ ಅನುಭವಗಳು ಕನ್ನಡ ಸಾಹಿತ್ಯಕ್ಕೆ ಸಿಗದೇ ಹೋಗಿದ್ದು ದುರದೃಷ್ಟ ಎನ್ನಬಹುದು. ಬರೋಬ್ಬರಿ ಐವತ್ತು-ಅರವತ್ತು ವರ್ಷಗಳ ತಮ್ಮ ಪ್ರವಾಸ ಅನುಭವವನ್ನು ಎಸ್‌ ಎಲ್‌ ಭೈರಪ್ಪ ಕೃತಿಯಲ್ಲಿ ದಾಖಲಿಸಿದ್ದರೆ ಕನ್ನಡದ ಪ್ರವಾಸಕಥನ ಸಾಹಿತ್ಯ ಪ್ರಕಾರಕ್ಕಿರುವ ಕೆಲವೊಂದಿಷ್ಟು ಕೊರತೆಗಳು ನೀಗುತ್ತಿದ್ದವು ಎಂಬುದನ್ನು ಇಲ್ಲಿ ಬಲವಾಗಿ ಪ್ರಸ್ತಾಪಿಸುತ್ತೇನೆ. ಅದೇನೇ ಇರಲಿ. ಭೈರಪ್ಪ ಅವರ ಹಾಗೆ ಬರೆದ, ಗಂಭೀರವಾಗಿ ಅಧ್ಯಯನ ಮಾಡಿದ ಮತ್ತು ಸುತ್ತಾಡಿದ ಮತ್ತೊಬ್ಬ ಕನ್ನಡದ ಲೇಖಕನಿಲ್ಲ. ಸಿಗಲಿಕ್ಕೂ ಇಲ್ಲ. ಅಪಾರ ಓದುಗ ವರ್ಗವನ್ನು ಅಗಲಿದ ಎಸ್‌ ಎಲ್ ಭೈರಪ್ಪ ಅವರಿಗೆ‌ ಗೌರವದ ನಮನ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!