ಈ ರಾಕೀಸ್ ಹಿಮ ಪರ್ವತಗಳ ರಾಕ್‌ಲೈನ್
ಅತಬಾಸ್ಕಾ ಗ್ಲೇಷಿಯರ್ನ ಕಡಿದಾದ ಮತ್ತು ಒರಟಾದ ಪ್ರದೇಶಗಳ ಮೇಲೆ ಸಂಚರಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ `ಐಸ್ ಎಕ್ಸ್ ಪ್ಲೋರರ್’ ವಾಹನದಲ್ಲಿ ಸಂಚರಿಸುವುದು ಒಂದು ಅಪೂರ್ವ ಅನುಭವ. ವಾಹನದೊಳಗೆ ಕುಳಿತು ಹೆಚ್ಚು ಕಮ್ಮಿ ಲಂಬವಾಗಿ ಮೇಲೆ ಹತ್ತುವಾಗ ಎಂಥವರಿಗೂ ಮೈ ಜಮ್ ಎನಿಸುತ್ತದೆ. ಹಾಗೆಯೇ ಇಳಿಯುವಾಗಲೂ ಸಹ!
- ಜ್ಯೋತಿ ಪ್ರಸಾದ್
ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ಹಬ್ಬಿರುವ ಹಿರಿದಾದ ಪರ್ವತಶ್ರೇಣಿಯ ಭಾಗವಾಗಿರುವ ಕೆನಡಾದ `ರಾಕೀಸ್’ ಪರ್ವತವು, ಬ್ರಿಟಿಷ್ ಕೊಲಂಬಿಯಾ ಮತ್ತು ಅಲ್ಬರ್ಟಾ ಪ್ರಾಂತ್ಯಗಳ ಗಡಿಯುದ್ದಕ್ಕೂ ಹರಡಿದ್ದು, ಭವ್ಯವಾದ ಪ್ರಕೃತಿ ಸೌಂದರ್ಯ, ವಿಶಿಷ್ಟ ಪರಿಸರ ಮತ್ತು ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಈ ಪರ್ವತಗಳು ಪ್ರಕೃತಿ ಪ್ರಿಯರು, ಪರ್ವತಾರೋಹಿಗಳು ಮತ್ತು ಸಾಹಸಿಗಳ ಸ್ವರ್ಗ. ಇಲ್ಲಿನ ಹಿಮಾಚ್ಛಾದಿತ ಪರ್ವತಗಳು, ಬಣ್ಣ ಬಣ್ಣದ ಸರೋವರಗಳು, ಹಸಿರು ಕಾಡುಗಳು ಭೂಲೋಕದ ಸ್ವರ್ಗವನ್ನೇ ಸೃಷ್ಟಿಸಿವೆ.
ಈ ಪರ್ವತ ಶ್ರೇಣಿಯ ಪ್ರಮುಖ ಆಕರ್ಷಣೆಯೆಂದರೆ ಜಾಸ್ಪರ್, ಬ್ಯಾನ್ಫ್, ಕೂಟ್ನೀ, ಮತ್ತು ಯೋಹೋ ರಾಷ್ಟ್ರೀಯ ಉದ್ಯಾನಗಳು. ಇವುಗಳನ್ನು ʼಯುನೆಸ್ಕೋ ವಿಶ್ವ ಪರಂಪರೆಯ ತಾಣ’ ಎಂದು ಗುರುತಿಸಲಾಗಿದ್ದು, ಹಿಮಾವೃತ ಪರ್ವತ ಶಿಖರಗಳು, ಹಚ್ಚ ಹಸಿರಿನ ಕಣಿವೆಗಳು, ನೀಲಿ ಮಿಶ್ರಿತ ಹಸಿರು ಬಣ್ಣದ ಸರೋವರಗಳು ಮತ್ತು ಜಲಪಾತಗಳಿಂದ ತುಂಬಿರುವ ಬಾನ್ಫ್ ಮತ್ತು ಜಾಸ್ಪರ್ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಾಗಿವೆ.

ಬಾನ್ಫ್
ಬ್ಯಾನ್ಫ್ ಕೆನಡಾದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನ. ಇಲ್ಲಿ ಪ್ರಕೃತಿಮಾತೆ ಎಲ್ಲೆಲ್ಲೂ ಹಸಿರನ್ನು ಹೊದ್ದು ರಮಣೀಯವಾಗಿ ಕಂಗೊಳಿಸುತ್ತಾಳೆ. ಜತೆಗೆ ಹಸಿರು ಮಿಶ್ರಿತ ನೀಲಿ ಬಣ್ಣದ ಅನೇಕ ಸರೋವರಗಳು ಇಲ್ಲಿ ಹರಿಯುತ್ತವೆ. ಅವುಗಳಲ್ಲಿ ಪ್ರವಾಸಿಗಳು ವಿಶೇಷವಾಗಿ ನೋಡಲೇಬೇಕಾದ ಸರೋವರಗಳೆಂದರೆ ಲೇಕ್ ಲೂಯಿ,ಪೈಟೋ ಲೇಕ್,ಮೊರೇನ್ ಲೇಕ್ ಮತ್ತು ಬೋ ಲೇಕ್.
ಹಿಮನದಿಗಳು ಕರಗಿ ನೀರಾಗಿ ಹರಿಯುತ್ತಾ, ಖನಿಜಗಳು, ಬೆಳಕಿನ ಚದುರುವಿಕೆಯಿಂದ ಸರೋವರಗಳ ನೀರು ವಿಶಿಷ್ಟ ಬಣ್ಣವನ್ನು ಪಡೆದುಕೊಳ್ಳುತ್ತವೆ. ಸುತ್ತಲಿನ ಪರ್ವತಗಳ ನಡುವೆ ನಯನ ಮನೋಹರವಾದ ಈ ಸರೋವರಗಳು, ಸುಂದರ ಛಾಯಾಚಿತ್ರಗಳಿಗೆ ಹೆಸರುವಾಸಿಯಾಗಿವೆ.
ಸರೋವರಗಳ ತೀರದಲ್ಲಿ ಕಾಲ್ನಡಿಗೆ (Hiking), ದೋಣಿ ವಿಹಾರಗಳ ಜತೆಗೆ ಸರೋವರದ ಸೌಂದರ್ಯವನ್ನು ಆಸ್ವಾದಿಸಲು
ಅಲ್ಲಲ್ಲಿ ವೀಕ್ಷಣಾ ಸ್ಥಳಗಳಿವೆ. ಚಳಿಗಾಲದಲ್ಲಿ ಈ ಸರೋವರಗಳು ಹೆಪ್ಪುಗಟ್ಟುವುದರಿಂದ ಸ್ಕೀಯಿಂಗ್, ಐಸ್ ಸ್ಕೇಟಿಂಗ್ ಮತ್ತು ಸ್ನೋ ಬೋರ್ಡಿಂಗ್‌ನಂಥ ಕ್ರೀಡೆಗಳ ತಾಣವಾಗುತ್ತವೆ.
ಇನ್ನು ನೀವು ಬಾನ್ಫ್ `ಗೋಂಡೊಲಾ’ ರೈಡ್‌ಗಳಲ್ಲಿ ಕುಳಿತು ಸಲ್ಫರ್ ಪರ್ವತದ ತುತ್ತ ತುದಿಯಿಂದ, ಸುತ್ತಲೂ ರಾಕೀಸ್ ಪರ್ವತ, ಬೋ ನದಿ ಮತ್ತು ಬಾನ್ಫ್ ನಗರದ ವಿಹಂಗಮ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

ಜಾಸ್ಪರ್
ಜಾಸ್ಪರ್ ಕೆನಡಾದ ರಾಕೀಸ್‌ನಲ್ಲಿ ಅತಿ ವಿಶಾಲ ಮತ್ತು ಮನಮೋಹಕ ರಾಷ್ಟ್ರೀಯ ಉದ್ಯಾನ. ಇಲ್ಲಿನ ಕೋಲಂಬಿಯಾ ಐಸ್ ಫೀಲ್ಡ್ ಪ್ರಪಂಚದ ಅತಿ ದೊಡ್ಡ ಹಿಮಗಡ್ಡೆಗಳಲ್ಲಿ ಒಂದಾಗಿದ್ದು, ಪ್ರಕೃತಿಯ ಅದ್ಭುತ ವಿಸ್ಮಯ ತಾಣವಾಗಿದೆ. ಇಲ್ಲಿನ ಮೆಲಿಗ್ನೆ, ಹಾರ್ಸ್ ಶೂ, ಪಿರಮಿಡ್ ಸರೋವರಗಳ ಜತೆಗೆ `ಅತಬಾಸ್ಕಾ ಗ್ಲೇಷಿಯರ್’ ಪ್ರವಾಸಿಗರು ನೋಡಲೇಬೇಕಾದ ತಾಣಗಳು.
ಇದು ʼಕೊಲಂಬಿಯಾ ಐಸ್ ಫೀಲ್ಡ್’ನಿಂದ ಹರಿಯುವ ಆರು ಪ್ರಮುಖ ಹಿಮನದಿಗಳಲ್ಲಿ ಒಂದಾಗಿದ್ದು ಸುಲಭವಾಗಿ ಪ್ರವಾಸಿಗಳು ನೋಡಬಹುದಾದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಮೇ – ಅಕ್ಟೋಬರ್‌ವರೆಗೆ ಈ ಪ್ರವಾಸವು ಲಭ್ಯವಿರುತ್ತದೆ.
ಅತಬಾಸ್ಕಾ
ಅತಬಾಸ್ಕಾ ಗ್ಲೇಷಿಯರ್ನ ಕಡಿದಾದ ಮತ್ತು ಒರಟಾದ ಪ್ರದೇಶಗಳ ಮೇಲೆ ಸಂಚರಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ `ಐಸ್ ಎಕ್ಸ್ ಪ್ಲೋರರ್’ ವಾಹನದಲ್ಲಿ ಸಂಚರಿಸುವುದು ಒಂದು ಅಪೂರ್ವ ಅನುಭವ. ವಾಹನದೊಳಗೆ ಕುಳಿತು ಹೆಚ್ಚು ಕಮ್ಮಿ ಲಂಬವಾಗಿ ಮೇಲೆ ಹತ್ತುವಾಗ ಎಂಥವರಿಗೂ ಮೈ ಜಮ್ ಎನಿಸುತ್ತದೆ. ಹಾಗೆಯೇ ಇಳಿಯುವಾಗಲೂ ಸಹ!
ಸನ್ವಾಪ್ಟಾ ಕಣಿವೆಯಿಂದ ಸುಮಾರು 300 ಮೀಟರ್‌ಗಳ ಎತ್ತರದಲ್ಲಿ ಗಾಜಿನ ಸೇತುವೆಯ ಮೇಲೆ ನಡೆದಾಡುತ್ತಾ (Skywalk) ಕಣಿವೆ ಮತ್ತು ಪರ್ವತಗಳ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ಎಲ್ಲಾ ಸೌಂದರ್ಯಕ್ಕೆ ಹಾದಿಯಾಗಿ, ಬಾನ್ಫ್ ಮತ್ತು ಜಾಸ್ಪರ್ಗ್‌ಗಳನ್ನು ಸಂಪರ್ಕಿಸುವ ಹೆದ್ದಾರಿ ಐಸ್‌ಫೀಲ್ಡ್ ಪಾರ್ಕ ವೇ ವಿಶ್ವ ವಿಖ್ಯಾತ scenic drive ಎಂದು ಪ್ರಸಿದ್ಧಿಗಳಿಸಿದೆ.
ಇಷ್ಟೇ ಅಲ್ಲದೇ ಈ ಪರ್ವತ ಶ್ರೇಣಿಯು ಹಲವಾರು ವಿಶಿಷ್ಟ ವನ್ಯಜೀವಿಗಳ ನೆಲೆಯಾಗಿದೆ. Grizzly bear- ಕಂದು ಕರಡಿ ಇಲ್ಲಿನ ವಿಶೇಷ ವನ್ಯಜೀವಿ. ಹಾಗೆಯೇ ಎಲ್ಕ್ ಜಿಂಕೆಗಳು, ಮೂಸ್, ಬೀವರ್, ಪರ್ವತ ಮೇಕೆಗಳನ್ನು ಇಲ್ಲಿ ಕಾಣಬಹುದು. ಪ್ರಕೃತಿಯ ಶಾಂತ ವಾತಾವರಣದಲ್ಲಿ ಈ ವನ್ಯಜೀವಿಗಳನ್ನು ಹತ್ತಿರದಿಂದ ನೋಡುವುದು ಅದ್ಭುತ ಅನುಭವ. ಪ್ರಾಣಿ ಮತ್ತು ಪ್ರವಾಸಿಗಳ ಹಿತ ದೃಷ್ಟಿಯಿಂದ ನಿರ್ದಿಷ್ಟ ಜಾಗಗಳಲ್ಲಿ ಪ್ರವಾಸಿಗಳು ಅವುಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಕೆಲವು ಪ್ರಾಣಿಗಳು ಹಾಗೇ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಓಡಾಡಿಕೊಂಡಿರುವುದನ್ನೂ ಕಾಣಬಹುದು. ಇವಿಷ್ಟೂ ಕೆನಡಾದ ರಾಕೀಸ್ ಪ್ರವಾಸದ ಪಕ್ಷಿನೋಟವೆನ್ನಬಹುದು. ಪ್ರವಾಸಿಗನೊಬ್ಬನು ಕಡಿಮೆ ಸಮಯದಲ್ಲಿ ತಪ್ಪದೇ ನೋಡಲೇಬೇಕಾದ ಆಕರ್ಷಣೆಗಳು ಇವು.

ಇನ್ನು ಏನೇನಿದೆ?
ಸಾಹಸ ಪ್ರಿಯರಿಗೆ ಕೆನಡಾದ ರಾಕೀಸ್ ಒಂದು ಅದ್ಭುತ ತಾಣ. ಇಲ್ಲಿ ಹಲವಾರು ಪರ್ವತಾರೋಹಣ ತಾಣಗಳು ಮತ್ತು ಶಿಬಿರಗಳು ಇವೆ. ಚಾರಣ ಪ್ರಿಯರಿಗೆ ಅತಿ ಸುಲಭ, ಮಧ್ಯಮ ಮತ್ತು ಕ್ಲಿಷ್ಟಕರ ಚಾರಣ ಮಾರ್ಗದ ಆಯ್ಕೆಗಳಿವೆ.
ಜಾಸ್ಪರ್ ಮತ್ತು ಬ್ಯಾನ್ಫ್ ರಾಷ್ಟ್ರೀಯ ಉದ್ಯಾನಗಳಲ್ಲಿ ಇರುವ ಟ್ರೇಲ್‌ಗಳು ಉತ್ತಮವಾಗಿ ನಿರ್ವಹಿಸಲ್ಪಟ್ಟಿದ್ದು, ಪ್ರವಾಸಿಗರಿಗೆ ಸುರಕ್ಷಿತ ಅನುಭವವನ್ನು ನೀಡುತ್ತವೆ.
ವೆಂಕೂವರ್, ನಗರ ಪ್ರವಾಸ ಪ್ರಿಯರ ಇನ್ನೊಂದು ಸುಂದರ ಸ್ವರ್ಗ. ನಾವು ಅಲ್ಲಿ ಇದ್ದುದರಿಂದ ಮಾರ್ಗದುದ್ದಕ್ಕೂ ಸುಂದರ ಪ್ರಾಂತ ಬ್ರಿಟೀಷ್ ಕೊಲಂಬಿಯಾದ ನಿಸರ್ಗ ಸೊಬಗನ್ನು ಆಸ್ವಾದಿಸುತ್ತ ಸ್ವಂತ ವಾಹನದಲ್ಲಿ ಪ್ರವಾಸ ಮಾಡಿದೆವು. ಅದು ಬೇಸಿಗೆಯ ಆರಂಭದ ದಿನಗಳಾದ್ದರಿಂದ, ಆ ಸಮಯಕ್ಕೆ ರಾಕೀಸ್‌ನ ಕೆಲವು ಸರೋವರಗಳು ಹೆಪ್ಪಗಟ್ಟಿದ್ದವು. ಮಂಜುಗಡ್ಡೆ ಸರೋವರದ ಮೇಲೆ ನಡೆದದ್ದು ಅವಿಸ್ಮರಣೀಯವಾಗಿದೆ.
ಬೇಸಿಗೆಯಲ್ಲಿ ಹಿತವಾದ ಹವಾಗುಣವಿದ್ದು, ಪರ್ವತಾರೋಹಣ, ಚಾರಣ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಬೇಸಿಗೆಯ ಸಂಜೆಯ ಸಮಯದಲ್ಲಿ ಹೊಳೆಯುವ ಸಂಧ್ಯಾ ಸೌಂದರ್ಯ ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡಿಬಿಡುತ್ತದೆ.
ಚಳಿಗಾಲ ಸಾಹಸ ಕ್ರೀಡೆಗಳಿಗೆ ಸೂಕ್ತವಾಗಿದೆ. ವಸಂತ ಕಾಲದಲ್ಲಿ ಎಲ್ಲೆಲ್ಲೂ ಹರಿದ್ವರ್ಣವಾದರೆ ಶರತ್ಕಾಲದ ಸಮಯದಲ್ಲಿ ಗಿಡಮರಗಳು ಕಂದು, ಹಳದಿ, ಕಿತ್ತಳೆ, ಕೆಂಪು ಬಣ್ಣಗಳನ್ನು ತೊಟ್ಟು ಕಂಗೊಳಿಸುತ್ತವೆ.
ಒಟ್ಟಾರೆ, `ಕೆನಡಾದ ರಾಕೀಸ್’ ಕೇವಲ ಒಂದು ಪರ್ವತ ಶ್ರೇಣಿಯಲ್ಲ. ನಿಸರ್ಗ ರಸಿಕರಿಗೆ ಭೂಸ್ವರ್ಗ. ಇಲ್ಲಿನ ನಿಸರ್ಗ ಸೌಂದರ್ಯವನ್ನು ಆಸ್ವಾದಿಸುತ್ತಾ, ಪ್ರಕೃತಿಯೊಳಗೆ ಒಂದಾಗುತ್ತಾ ನಾವು ಕವಿಯಾಗಬೇಕು ಎನಿಸುತ್ತದೆ.
ನಿಸರ್ಗ ಸೊಬಗಿನ ಚಿತ್ತಾರ, ಅಗಾಧವಾದ ಹಿಮನದಿಗಳು, ಶುದ್ಧ ಸ್ಫಟಿಕ ಸರೋವರಗಳು ಮತ್ತು ಸಮೃದ್ಧ ವನ್ಯ ಸಂಪತ್ತು ಇಷ್ಟೆಲ್ಲಾ ಸೊಬಗನ್ನು ಮೈಗೂಡಿಸಿಕೊಂಡು `ಕೆನೇಡಿಯನ್ ರಾಕೀಸ್’ ಕೆನಡಾ ದೇಶದ ಒಂದು ಅಸ್ಮಿತೆಯಾಗಿ ಮತ್ತು ಅದ್ಭುತ ಜಾಗತಿಕ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದೆ.
ದಾರಿ ಹೇಗೆ?
ಈ ಸ್ಥಳಗಳನ್ನು ತಲುಪಲು ಕ್ಯಾಲಗರಿ, ವೆಂಕೂವರ್ ಮತ್ತು ಎಡ್ಮನ್ಟನ್ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು. ಅಲ್ಲಿಂದ ಮುಂದಿನ ಪ್ರಯಾಣಕ್ಕೆ ನಮ್ಮದೇ ವಾಹನಗಳಿದ್ದರೆ ಉತ್ತಮ. ಆದರೆ, ರಾಕೀಸ್ ಪ್ರವಾಸಕ್ಕೆ ವಿಮಾನ ನಿಲ್ದಾಣದಿಂದ ರೈಲು ಮತ್ತು ಬಸ್ಸುಗಳ ಸೌಲಭ್ಯವೂ ಇದೆ.