• ಬಡೆಕ್ಕಿಲ ಪ್ರದೀಪ

ನಮ್‌ ಲೈಫೇ ಅಲ್ಗೊರಿದಂನ ಸುತ್ತ ಸುತ್ತುತ್ತಿದೆ. ತಮಾಷೆ ಅಂದ್ರೆ ಅದು ನಮಗೆ ಗೊತ್ತೂ ಆಗುತ್ತಿಲ್ಲ. ಆದರೂ, ಅದರ (ವಿಷ) ವರ್ತುಲದಲ್ಲಿ ನಾವು ಪಯಣಿಸುತ್ತಿದ್ದೇವೆ. ಇದು ನಮ್ಮೊಳಗಿನ ಪಯಣಿಗನನ್ನು, ಅವನ ಕುತೂಹಲಗಳನ್ನು ಬಳಸುತ್ತಿರುವ ಪಾಡು, ಅದರ ಜಾಡು, ತುಂಬಾ ಗಾಢ.

ಇನ್‌ಸ್ಟಾಗ್ರಾಂ ರೀಲ್ಸ್‌, ಯೂಟ್ಯೂಬ್‌ ವಿಡಿಯೋಗಳು, ವಾಟ್ಸಾಪ್‌ ಫಾರ್ವರ್ಡ್‌ಗಳು, ಇತರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳು ನಮ್ಮನ್ನು ಆ ಊರಿಗೆ, ಈ ಊರಿಗೆ, ಕೈಬೀಸಿ ಕರೆಯುತ್ತಲೇ ಇರುತ್ತವೆ. ನಾವು ಗುಂಪು ಗುಂಪಾಗಿ ಅಲ್ಲಿಗೆ ಹೋಗುತ್ತಲೂ ಇರುತ್ತೇವೆ.

ಹೀಗೆ ಹೋಗಿ ಹೋಗಿ, ಮೊದಲು ನೂರೋ ಇನ್ನೂರೋ ಜನ ಇರುತ್ತಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಲಕ್ಷಗಟ್ಟಲೆ ಮಂದಿ ತುಂಬಿಕೊಳ್ಳುತ್ತಿದ್ದಾರೆ. ಒಮ್ಮೆ ಫೇಮಸ್ಸಾದ ಜಾಗಕ್ಕೆ ಜನರ ದಂಡೇ ನುಗ್ಗಿ ಬರುತ್ತಿದೆ. ಕೆಲವೊಂದು ಪ್ರೇಕ್ಷಣೀಯ ಸ್ಥಳಗಳಲ್ಲಂತೂ ವೀಕೆಂಡ್‌ ಬಂದರೆ ಕಾಲಿಡಲು ಜಾಗವೇ ಇರದಷ್ಟು ಜನ ತುಂಬಿರುತ್ತಾರೆ.

ಇದರಿಂದ ಕೆಲವೊಂದು ಜಾಗಗಳಲ್ಲಿ ಬ್ಯುಸಿನೆಸ್‌ ಏನೋ ಗಡದ್ದಾಗಿ ನಡೆಯುತ್ತಿದೆ. ಆದರೆ ಈ ಸ್ಥಳಗಳನ್ನು ನಾವು ಸರಿಯಾಗಿ ಮೇಂಟೇನ್‌ ಮಾಡದೇ ಇರುವುದರಿಂದ ಹಾಗೂ ಕಸಗಳನ್ನು ಅಲ್ಲಲ್ಲೇ ಎಸೆಯುತ್ತಿರುವುದರಿಂದ, ಅಲ್ಲಿ ಗಲೀಜಿನ ವಾತಾವರಣ ನಿರ್ಮಾಣವಾಗುತ್ತಿದೆ.

Untitled design (78)

ಹುಡುಕಿದರೆ ಸಿಗುತ್ತದೆ

ಅದೆಲ್ಲಾ ಒತ್ತಟ್ಟಿಗಿರಲಿ, ಒಂದು ಜಾಗ ನಿಮ್ಮ ರೀಲ್ಸ್‌ನಲ್ಲಿ ಬಂತು ಅಂದ ತಕ್ಷಣ, ಅವರು ಅದನ್ನು ಅದ್ಭುತ ಅಂದ ತಕ್ಷಣ ಅದು ನಿಜಕ್ಕೂ ಹಾಗೇ ಇರುವುದೆ ಎನ್ನುವುದಕ್ಕೆ ಗ್ಯಾರೆಂಟಿ ಏನು. ಇನ್ನು ಲಕ್ಷ ಲಕ್ಷ ಜನ ಹೋದ ಜಾಗಕ್ಕೆ ಹೋಗಿ, ನಿಮ್ಮ ಪ್ರಯಾಣದ ಮಜವನ್ನು ಅನುಭವಿಸುವುದು ಹೇಗೆ ಸಾಧ್ಯ ಹೇಳಿ.

ಸರ್ಚ್‌ ಎಂಜಿನ್‌ ಆಪ್ಟಿಮೈಸೇಷನ್‌ ಮೂಲಕ ಸರ್ಚ್‌ ಎಂಜಿನ್‌ನಲ್ಲಿ ನಿಮ್ಮ ವೆಬ್‌ಸೈಟ್‌ ಅನ್ನು ಮೇಲಕ್ಕೆ ತರಿಸಬಹುದು. ನಿಮ್ಮ ಮಾಹಿತಿ ಏನೇ ಇದ್ದರೂ ಸರಿಯಾದ ಕೀ ವರ್ಡ್‌ ಹಾಕಿದರೆ ʼಅದೇ ಚೆಂದʼ ಅಂತ ಅದು ತಿಳಿದು ಅದನ್ನು ಟಾಪ್‌ಗೆ ತರುತ್ತದೆ. ಆದರೆ ಅದೇನೇ ಇದ್ದರೂ ನೀವು ಅದಕ್ಕೆ ತಕ್ಕ ರಿಸರ್ಚ್‌ ಮಾಡಬೇಕು. ತಮ್ಮ ಹೊಟೇಲ್‌ ಅಥವಾ ರೆಸಾರ್ಟ್‌ಗೆ ಜನ ಬರಬೇಕು ಎಂಬ ಯೋಚನೆಯಲ್ಲಿ ಪ್ರತಿಯೊಂದು ಸಂಸ್ಥೆಯೂ ಈಗ ಆನ್‌ಲೈನ್‌ನಲ್ಲಿ ತನ್ನ ಅಸ್ತಿತ್ವವನ್ನು ಮೂಡಿಸಿದೆ. ಅದರ ರೀಚ್‌ ಹೆಚ್ಚಾಗುವುದಕ್ಕೆ ಅವರ ಬಜೆಟ್ಟಿಗೆ ತಕ್ಕ ಹಾಗೆ ಅವರು ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಆ ಜಾಗಗಳು ನಿಮ್ಮ ಗಮನಕ್ಕೆ ಬರುವುದು ಗ್ಯಾರಂಟಿ. ಜತೆಗೆ ಇನ್‌ಫ್ಲುಯೆನ್ಸರ್‌ ಅನ್ನು ಕರೆಸಿ ತಮ್ಮ ಸ್ಥಳದ ಬಗ್ಗೆ ಹೊಟ್ಟೆ ತುಂಬಾ ಹೊಗಳಿಸಿ, ಅವರ ಹೊಟ್ಟೆ ತುಂಬಿಸಿ ಕಳುಹಿಸಿರುವ ಸಾಧ್ಯತೆ ಇರುತ್ತದೆ. ಹಾಗಂತ ಅವೆಲ್ಲಾ ನಿಜ ಆಗಿರಬೇಕಿಲ್ಲ ಅಲ್ವಾ? ಹಾಗಾಗಿ ನೀವು ಏಕಾಂತ ಬಯಸುವವರಾದರೆ, ಯಾರೂ ನೋಡದ ಜಾಗ ನೋಡಬಯಸುವವರಾದರೆ ಇವುಗಳನ್ನು ಸ್ವಲ್ಪ ಜಾಗ್ರತೆಯಿಂದಲೇ ನೋಡಿ ಆಯ್ಕೆ ಮಾಡಿ.

Untitled design (77)

ಆಯ್ಕೆ ಹೇಗೆ ಹಾಗಿದ್ರೆ?

ನಿಮ್ಮ ಸರ್ಚ್‌ ಬಾಕ್ಸ್‌ನಲ್ಲಿ ಬೆಸ್ಟ್‌ ಜಾಗದ ಹೆಸರು ಹೇಳು ಅಂದರೆ ಅದು ಕೊಡುವ ಟಾಪ್‌ ಐದೋ ಹತ್ತೋ ಜಾಗಗಳು ಸಹಜವಾಗಿಯೇ ಹೆಚ್ಚು ಜನರ ಗಮನ ಸೆಳೆಯುತ್ತದೆ. ಯಾರೂ ಹೆಚ್ಚು ಹೋಗದೇ ಇರುವ ಸ್ಥಳಗಳನ್ನು ಹುಡುಕಬೇಕಂದರೆ ಸರಕಾರಿ ರೆಸ್ಟ್‌ ಹೌಸ್‌ಗಳು, ಅಥವಾ ಹತ್ತೋ ಹದಿನೈದೋ ವರ್ಷ ಹಿಂದೆ ಯಾವುದೋ ಆನ್‌ಲೈನ್‌ ಫೋರಂನಲ್ಲಿ ನಡೆದ ಚರ್ಚೆಯನ್ನು ಆಧರಿಸಿ ನಿಮ್ಮ ಪ್ರಯಾಣ ಪ್ಲ್ಯಾನ್‌ ಮಾಡಬಹುದು.

ಒಬ್ಬ ಇನ್‌ಫ್ಲುಯೆನ್ಸರ್‌ ಒಂದೂರನ್ನು ತನ್ನ ರೀಲ್‌ನಲ್ಲಿ ತೋರಿಸುವುದಕ್ಕೂ ಮೊದಲು, ಅಬ್ಬಬ್ಬಾ ಅಂದ್ರೆ ಒಂದೆರಡು ದಿನ ಅಲ್ಲಿ ಕಳೆದಿರಬಹುದು. ಅದೇ ಆ ಊರಿನ ಪೋಸ್ಟ್‌ಮ್ಯಾನ್‌, ಬಸ್‌ ಡ್ರೈವರ್‌, ಅಥವಾ ಟೀ ಸ್ಟಾಲ್‌ನವರ ಬಳಿ ಕೇಳಿದರೆ, ಅವರಿಗೆ ಆ ಊರಿನ ಇಪ್ಪತ್ತೋ ಮೂವತ್ತೋ ವರ್ಷಗಳ ಪಯಣದ ಐಡಿಯಾ ಇರುತ್ತದೆ. ಅವರನ್ನು ಕೇಳಿ, ಅಥವಾ ನಿಮಗೆ ಗೊತ್ತಿರುವವರು ಯಾರಾದರೂ ಇದ್ದರೆ ಅವರ ಬಳಿ, ʼಹೇ, ಹೆಚ್ಚು ಜನಜಂಗುಳಿ ಇಲ್ಲದ ಜಾಗ ಯಾವುದಾದ್ರೂ ಇದ್ರೆ ಹೇಳು ಮಾರಾಯಾʼ ಅಂತ ಕೇಳಿ. ಅವರು ನಿಮಗೆ ಖಂಡಿತ ಸಹಾಯ ಮಾಡಬಹುದು.

ಹುಡುಕಿ ಹೋಗಬೇಡಿ, ಹೋಗಿ ಹುಡುಕಿ

ಆನ್‌ಲೈನ್‌ನಲ್ಲಿ ಹುಡುಕಿ, ಯಾವುದೋ ಜಾಗವನ್ನು ನೋಡುವುದಕ್ಕಿಂತ ಯಾವುದೋ ಜಾಗಕ್ಕೆ ಹೋಗಿ ಹುಡುಕುವ ಮಜವೇ ಬೇರೆ! ಹತ್ತಾರು ವರ್ಷಗಳ ಹಿಂದೆ ಹೇಗೆ ನಾವು ಯಾವುದೇ ಜಾಗಕ್ಕೆ ಹೋಗಬೇಕಾದರೂ ನಮ್ಮ ಯೋಚನೆಗಳ ಮೂಸೆಯಿಂದ, ತಿಳಿದವರ ಮಾತಿನಿಂದ ಪ್ರಭಾವಿತರಾಗಿ, ಯಾವುದೇ ಮ್ಯಾಪ್‌, ಗೈಡ್‌ ಇಲ್ಲದೇ ಹೋಗುತ್ತಿದ್ದೆವೋ ಅದನ್ನೇ ಮತ್ತೆ ಮಾಡುವ ಪ್ರಯತ್ನ ಹೇಗಿರುತ್ತದೆ?

ನಮ್ಮೆಲ್ಲರ ಬದುಕೇ ಹಾಗೆ, ಇನ್ನೊಬ್ಬರು ಹೇಳುವುದರ ಸುತ್ತ ಸಾಗುತ್ತಾ ಇರುತ್ತದೆ. ಇದು ತಪ್ಪಲ್ಲ, ಸಹಜ. ಆದರೆ ಇನ್ನೊಬ್ಬರಿಂದ ಪ್ರಭಾವಿತರಾಗುವುದರ ನಡುವೆ, ನಾವು ಏನನ್ನು ಅನುಭವಿಸಿ, ಆಸ್ವಾದಿಸಿ ಬರಬೇಕು ಅಂದುಕೊಳ್ಳುತ್ತೇವೋ ಅದನ್ನು ಸಾಧಿಸಲು ಸಾಧ್ಯವಾಗದಿದ್ದರೆ, ಆ ಪ್ರಯತ್ನಕ್ಕೆ ಬೆಲೆ ಎಲ್ಲಿ ಹೇಳಿ?

ಪಂಚ್‌-ರ್‌ ಶಾಪ್‌

ಯಾರೂ ಕಾಣದ ಅದ್ಭುತ ಜಾಗವೊಂದಿದೆ ಅಂತ ಇನ್‌ಫ್ಲುಯೆನ್ಸರ್‌ ಮಾಡಿದ ಪೋಸ್ಟ್‌ಗೆ ಮಿಲಿಯನ್‌ ವೀವ್ಸ್‌ ಇದೆ ಅಂತ ಹೋಗಿ ನೋಡಿದರೆ, ಆ ವೀಕೆಂಡಲ್ಲಿ ಬೆಂಗಳೂರನ್ನೇ ಮೀರಿಸೋ ಜನಜಂಗುಳಿ, ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಾಕ್ಕೊಂಡ್ರೆ ಅದು ಯಾರ ತಪ್ಪು ಹೇಳಿ?