ರೈಲು-ವಿಮಾನ ಇಲ್ಲ ಆದರೂ ಪ್ರವಾಸೋದ್ಯಮದಲ್ಲಿ ವಯನಾಡಿನ ವಿಶಿಷ್ಟ ಛಾಪು!
ವಯನಾಡಿನ ವಿಶೇಷತೆಯೆಂದರೆ ಇಲ್ಲಿ ಪ್ರವಾಸಿಗರು ಕೇವಲ ಪ್ರವಾಸಿ ತಾಣಗಳನ್ನು ನೋಡುವುದಿಲ್ಲ, ಪ್ರಕೃತಿ, ಸಂಸ್ಕೃತಿ ಮತ್ತು ಸ್ಥಳೀಯ ಜನಜೀವನವನ್ನು ಅನುಭವಿಸುತ್ತಾರೆ. ವಯನಾಡಿನಲ್ಲಿ ನೇರ ರೈಲು ಹಾಗೂ ವಿಮಾನ ಸಂಪರ್ಕವಿಲ್ಲದಿರುವುದರಿಂದ ರಸ್ತೆ ಸಾರಿಗೆಯೇ ಪ್ರವಾಸೋದ್ಯಮದ ಜೀವನಾಡಿಯಾಗಿದೆ.
- ಕೆ. ರಾಧಾಕೃಷ್ಣ ಹೊಳ್ಳ, ಅಧ್ಯಕ್ಷರು. ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘ (ರಿ)
ಪ್ರವಾಸೋದ್ಯಮ ಅಭಿವೃದ್ಧಿಗೆ ವಿಮಾನ ನಿಲ್ದಾಣ, ರೈಲು ಸಂಪರ್ಕ ಮತ್ತು ಬೃಹತ್ ಮೂಲಸೌಕರ್ಯಗಳೇ ಮುಖ್ಯ ಎಂಬ ಸಾಮಾನ್ಯ ಅಭಿಪ್ರಾಯಕ್ಕೆ ಕೇರಳದ ವಯನಾಡು ಒಂದು ವಿಭಿನ್ನ ಉದಾಹರಣೆ. ನೇರ ರೈಲು ಹಾಗೂ ವಿಮಾನ ಸಂಪರ್ಕವಿಲ್ಲದಿದ್ದರೂ ರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ತನ್ನದೇ ಆದ ಗುರುತು ಮೂಡಿಸಿರುವ ಈ ಪ್ರದೇಶ ಪ್ರವಾಸೋದ್ಯಮದ ನಿಜವಾದ ಶಕ್ತಿ ಏನೆಂಬುದನ್ನು ತೋರಿಸುತ್ತದೆ.
ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಪ್ರವಾಸೋದ್ಯಮವೇ ವೈರಿ ಆದಾಗ...!
ಈ ಪ್ರದೇಶ ಕರ್ನಾಟಕದ ಇತರ ಪ್ರವಾಸೋದ್ಯಮ ಅಭಿವೃದ್ಧಿ ಹೊಂದದ ಪ್ರದೇಶಗಳಿಗೆ ಮಾದರಿಯಂತಿದೆ. ಕರ್ನಾಟಕ–ಕೇರಳ ಗಡಿಯ ಗುಂಡ್ಲುಪೇಟೆ, ಬಂಡೀಪುರ, ಮುತ್ತಂಗ ಮತ್ತು ಸುಲ್ತಾನ್ ಬತ್ತೇರಿ ಮಾರ್ಗವು ಪ್ರಕೃತಿ ಸೌಂದರ್ಯ, ವನ್ಯಜೀವಿ ಸಂಪತ್ತು, ಆಧ್ಯಾತ್ಮಿಕ ಪರಂಪರೆ ಹಾಗೂ ರಸ್ತೆ ಪ್ರವಾಸೋದ್ಯಮದ ಅಪೂರ್ವ ಸಂಗಮವಾಗಿದೆ.
ಮಂಜಿನಿಂದ ಆವೃತವಾದ ಬೆಟ್ಟಗಳು, ಹಸಿರು ಕಣಿವೆಗಳು, ಕಾಫಿ ಮತ್ತು ಮಸಾಲೆ ತೋಟಗಳು, ದಟ್ಟ ಅರಣ್ಯಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಬಂಡೀಪುರ–ಮುತ್ತಂಗ ಅರಣ್ಯ ಪ್ರದೇಶದ ಕಾಡಾನೆಗಳು, ಜಿಂಕೆಗಳು, ಕೋತಿಗಳು, ಲಂಗೂರುಗಳು ಹಾಗೂ ವೈವಿಧ್ಯಮಯ ವನ್ಯಜೀವಿಗಳು ಈ ಪ್ರವಾಸಿ ಮಾರ್ಗಕ್ಕೆ ವಿಶೇಷ ಆಕರ್ಷಣೆ ನೀಡಿವೆ.

ಸುಲ್ತಾನ್ ಬತ್ತೇರಿಯ ಐತಿಹಾಸಿಕ ಜೈನ ದೇವಾಲಯ, ಎಡಕ್ಕಲ್ ಗುಹೆಗಳ ಪ್ರಾಚೀನ ಶಿಲಾಚಿತ್ರಗಳು, ರಾಮಾಯಣದ ಪರಂಪರೆಯೊಂದಿಗೆ ಗುರುತಿಸಿಕೊಂಡಿರುವ ಪುಲ್ಪಳ್ಳಿಯ ಸೀತಾದೇವಿ ದೇವಾಲಯ, ತಿರುನೆಲ್ಲಿ ಮಹಾವಿಷ್ಣು ಕ್ಷೇತ್ರ ಹಾಗೂ ಕರ್ನಾಟಕದ ಹಿಮವದ್ ಗೋಪಾಲಸ್ವಾಮಿ ಬೆಟ್ಟಗಳು ಈ ಪ್ರವಾಸಿ ವಲಯದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೆಚ್ಚಿಸಿವೆ.
ವಯನಾಡಿನ ವಿಶೇಷತೆಯೆಂದರೆ ಇಲ್ಲಿ ಪ್ರವಾಸಿಗರು ಕೇವಲ ಪ್ರವಾಸಿ ತಾಣಗಳನ್ನು ನೋಡುವುದಿಲ್ಲ, ಪ್ರಕೃತಿ, ಸಂಸ್ಕೃತಿ ಮತ್ತು ಸ್ಥಳೀಯ ಜನಜೀವನವನ್ನು ಅನುಭವಿಸುತ್ತಾರೆ. ವಯನಾಡಿನಲ್ಲಿ ನೇರ ರೈಲು ಹಾಗೂ ವಿಮಾನ ಸಂಪರ್ಕವಿಲ್ಲದಿರುವುದರಿಂದ ರಸ್ತೆ ಸಾರಿಗೆಯೇ ಪ್ರವಾಸೋದ್ಯಮದ ಜೀವನಾಡಿಯಾಗಿದೆ. ಪ್ರವಾಸಿ ವಾಹನಗಳು, ಟ್ಯಾಕ್ಸಿಗಳು, ಬಸ್ಸುಗಳು, ಹೋಂಸ್ಟೇಗಳು, ಹೊಟೇಲ್ಗಳು ಮತ್ತು ಸ್ಥಳೀಯ ಉದ್ಯಮಿಗಳು ಈ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಕರ್ನಾಟಕ ಮತ್ತು ಕೇರಳ ಸರಕಾರಗಳು ಮೈಸೂರು–ಗುಂಡ್ಲುಪೇಟೆ, ಬಂಡೀಪುರ, ಮುತ್ತಂಗ, ಸುಲ್ತಾನ್ ಬತ್ತೇರಿಯಿಂದ ವಯನಾಡು ಮಾರ್ಗವನ್ನು ಸಮಗ್ರ ಅಂತಾರಾಜ್ಯ ಪ್ರವಾಸೋದ್ಯಮ ವಲಯವಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಪ್ರವಾಸಿಗರಿಗೆ ಉತ್ತಮ ರಸ್ತೆ ಸುರಕ್ಷತೆ, ಸ್ವಚ್ಛತೆ, ಮಾಹಿತಿ ಕೇಂದ್ರಗಳು, ವಾಹನ ನಿಲುಗಡೆ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದರೊಂದಿಗೆ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು.
ಪ್ರವಾಸೋದ್ಯಮವೆಂದರೆ ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಪಂಚತಾರಾ ಹೊಟೇಲ್ಗಳ ನಿರ್ಮಾಣ ಮಾತ್ರವಲ್ಲ. ಪ್ರಕೃತಿ ಸಂಪತ್ತಿನ ಸಂರಕ್ಷಣೆ, ಸ್ಥಳೀಯ ಜನರ ಆತಿಥ್ಯ, ಸುರಕ್ಷಿತ ರಸ್ತೆ ಸಾರಿಗೆ ಮತ್ತು ಪ್ರವಾಸಿಗರಿಗೆ ದೊರೆಯುವ ಉತ್ತಮ ಅನುಭವವೂ ಅಷ್ಟೇ ಮುಖ್ಯ. ವಯನಾಡು ನಮಗೆ ಕಲಿಸುವ ಪಾಠ ಸ್ಪಷ್ಟ. ರೈಲು ಇಲ್ಲದಿದ್ದರೂ ಪ್ರವಾಸೋದ್ಯಮ ಬೆಳೆಯಬಹುದು. ವಿಮಾನ ನಿಲ್ದಾಣವಿಲ್ಲದಿದ್ದರೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು. ಪ್ರವಾಸೋದ್ಯಮಕ್ಕೆ ಸಂಪರ್ಕ ವ್ಯವಸ್ಥೆ ಅಗತ್ಯ, ಆದರೆ ಪ್ರವಾಸಿಗರ ಮನಸನ್ನು ಗೆಲ್ಲುವ ಪ್ರಕೃತಿ, ಸಂಸ್ಕೃತಿ ಮತ್ತು ಆತಿಥ್ಯವೇ ಅದರ ನಿಜವಾದ ಬಂಡವಾಳ.