ಗೋವಾ(Goa) ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳ. ಆಬಾಲ ವೃದ್ಧರಿಗೂ ಗೋವಾ ನಶೆ ಏರಿಸುತ್ತದೆ. ಅಲ್ಲಿನ ವಾತಾವರಣ, ಮನಸೂರೆಗೊಳಿಸುವ ತಾಣಗಳು ಒಂದು ತಣ್ಣನೆಯ ಅನುಭವವನ್ನು ನೀಡುತ್ತದೆ. ಅದರಲ್ಲೂ ಗೋವಾದಲ್ಲಿನ ಹತ್ತಾರು ಬೀಚ್‌ಗಳು ಪ್ರವಾಸಿಗರಲ್ಲಿ ಥ್ರಿಲ್‌ ತರುತ್ತದೆ. ಬೀಚ್‌ನ ಪ್ರಶಾಂತತೆ, ಕಣ್ಣು ನೆಟ್ಟಷ್ಟು ದೂರಕ್ಕೆ ಕಾಣುವ ಸುಂದರವಾದ ದೃಶ್ಯ ವ್ಹಾವ್‌! ಬಣ್ಣಿಸಲು ಅಸದಳ. ಅದೊಂದು ದೂರ ತೀರ ಯಾನ. ಅಲ್ಲಿ ಮೌನವೂ ಮಾತನಾಡುತ್ತದೆ. ಅಂದಹಾಗೆ ನೀವು ಗೋವಾ ಪ್ರವಾಸ ಕೈಗೊಂಡರೆ ಈ ಬೀಚ್‌ಗಳಿಗೆ ಹೋಗದೆ ಇರಬೇಡಿ. ನಿಮ್ಮ ಮನಸ್ಸಿನ ವಿಪ್ಲವಕ್ಕೆ ಅಲ್ಲಿ ದಿವ್ಯೌಷಧ ಸಿಗುತ್ತದೆ. ಹಾಗಿದ್ದರೆ ಆ ಬೀಚ್‌ಗಳ ಸುತ್ತ ನಡೆದಾಡಿ ಬರೋಣ ಬನ್ನಿ.

ಗಲ್ಗಿಬಾಗಾ ಬೀಚ್

ಗೋವಾದ ಸುಪ್ರಸಿದ್ಧ ಗಲ್ಗಿಬಾಗ(Galgibaga) ಬೀಚ್ ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ ಆಮೆಗಳಿಗೆ ಅಭಯಾರಣ್ಯವಾಗಿದೆ . ಟರ್ಟಲ್ ಬೀಚ್ ಎಂದೂ ಕರೆಯಲ್ಪಡುವ ಇದು ಅಗೊಂಡಾ ಬೀಚ್ ಮತ್ತು ಮೊರ್ಜಿಮ್ ಬೀಚ್ ಜೊತೆಗೆ ಗೋವಾದ ಮೂರು ಬೀಚ್‌ಗಳಲ್ಲಿ ಒಂದಾಗಿದೆ. ಈ ಮನೋಹರವಾದ ಬೀಚ್‌ನ ಸಂಪೂರ್ಣ ಉತ್ತರ ಭಾಗವು ಈ ಆಮೆಗಳಿಗೆ ಗೂಡುಕಟ್ಟುವ ಸ್ಥಳವಾಗಿದೆ. ಪ್ರಶಾಂತ ಸ್ಥಳದಲ್ಲಿ ಸುಂದರವಾದ ಹೊರಾಂಗಣವಿದೆ.ಅಲ್ಲಿ ಕೆಲವು ಗಂಟೆಗಳು ಕಾಲು ಚಾಚಿಕೊಂಡು ಶಾಂತವಾಗಿ ಕುಳಿತು ಕಾಲ ಕಳೆಯಲು ಸೂಕ್ತವಾಗಿದೆ. ಮೃದುವಾದ ಮರಳಿನ ಮೇಲೆ ಬಿಸಿಲಿನಲ್ಲಿ ಮೈಯೊಡ್ಡಿ ಕುಳಿತುಕೊಳ್ಳಬಹುದು. ಸಮುದ್ರದ ತಂಪಾದ ನೀರಿನಲ್ಲಿ ಈಜಬಹುದು. ತೀರದಲ್ಲಿ ಸುಮ್ಮನೆ ಹೆಜ್ಜೆ ಹಾಕುತ್ತಾ ಹೋದರೆ ಹಿತಾನುಭವ ಸಿಗುತ್ತದೆ.

Galgibaga Beach

ಅಲ್ಲಿಗೆ ಹೇಗೆ ತಲುಪುವುದು?: ಗಲ್ಗಿಬಾಗಾ ಬೀಚ್ ದಕ್ಷಿಣ ಗೋವಾದ ಕ್ಯಾನಕೋನಾ ಬಳಿಯ ಗಲ್ಗಿಬಾಗಾ ನದಿಯ ದಡದಲ್ಲಿದೆ. ಇದು ಮಡ್ಗಾಂವ್ ರೈಲ್ವೆ ನಿಲ್ದಾಣದಿಂದ ಸುಮಾರು 40 ಕಿ.ಮೀ ಮತ್ತು ಮಾರ್ಗಾವೊ ಬಸ್ ಟರ್ಮಿನಲ್ ನಿಂದ ಸುಮಾರು 44 ಕಿ.ಮೀ ದೂರದಲ್ಲಿದೆ.

ಕೋಲಾ ಬೀಚ್

ಮಾರ್ಗೋವಾದಿಂದ ದಕ್ಷಿಣಕ್ಕೆ ಸುಮಾರು 30 ಕಿ.ಮೀ ದೂರದಲ್ಲಿರುವ ಕೋಲಾ(Cola) ಬೀಚ್ ಸದಾ ಪ್ರವಾಸಿಗರನ್ನು ಆಕರ್ಷಿಸುತ್ತದೆ. ತೆಂಗಿನಕಾಯಿಗಳಿಂದ ಸುತ್ತುವರೆದಿರುವ ಈ ಲಗೂನ್ ಪಕ್ಷಿ ವೀಕ್ಷಣೆಗೂ ಪ್ರಮುಖ ಸ್ಥಳವಾಗಿದೆ. ಬೀಚ್ ಬಳಿ ಯಾವುದೇ ಐಷಾರಾಮಿ ರೆಸಾರ್ಟ್‌ಗಳಿಲ್ಲ. ಆದರೆ ಆಕರ್ಷಕ ಬಂಗಲೆಗಳು ಮತ್ತು ಡೇರೆಗಳಿವೆ. ಅದು ಬೇರೆಯದ್ದೇ ಅನುಭವವನ್ನು ನೀಡುತ್ತದೆ.

Cola Beach

ಅಲ್ಲಿಗೆ ಹೇಗೆ ತಲುಪುವುದು?: ಕೋಲಾ ಬೀಚ್ ಕ್ಯಾನಕೋನಾದಿಂದ ಸುಮಾರು 18 ಕಿ.ಮೀ ದೂರದಲ್ಲಿದೆ. ಬೀಚ್‌ಗೆ ನೇರ ಬಸ್‌ಗಳಿಲ್ಲದಿದ್ದರೂ, ಕ್ಯಾಬ್, ಬೈಕು ಬಾಡಿಗೆಗೆ ಪಡೆದು ಪ್ರಯಾಣಿಸಬಹುದು. ದಾರಿ ಮಾರ್ಗದಲ್ಲೂ ಚಲಿಸಬಹುದು.