ಪ್ರವಾಸೋದ್ಯಮ ಅಂದ್ರೆ ನೋಡುವುದಷ್ಟೇ ಅಲ್ಲ, ತೋರಿಸುವ ಕಲೆ!
ಜಪಾನ್ 'ಮ್ಯಾನ್‌ಹೋಲ್ ಮುಚ್ಚಳ'ವನ್ನೂ ಒಂದು ಕಲಾಕೃತಿಯನ್ನಾಗಿ ಮಾಡಿ ಪ್ರವಾಸಿಗರನ್ನು ಸೆಳೆಯುತ್ತಿದ್ದರೆ, ಭಾರತವು ತನ್ನಲ್ಲಿರುವ ಅಗಾಧವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪತ್ತನ್ನು ಪ್ರದರ್ಶಿಸುವಲ್ಲಿ ಎಲ್ಲೋ ಒಂದು ಕಡೆ ಸೋಲುತ್ತಿದೆ. ಇಲ್ಲಿನ ಪ್ರತಿ ಕಲ್ಲಿನಲ್ಲೂ ಒಂದೊಂದು ಕಥೆಯಿದೆ, ಪ್ರತಿ ಮಣ್ಣಿನ ಕಣದಲ್ಲೂ ಇತಿಹಾಸದ ರಕ್ತದ ವಾಸನೆಯಿದೆ. ನಮ್ಮಲ್ಲಿ ಹಂಪಿಯಿದೆ, ಅಜಂತಾ-ಎಲ್ಲೋರಾದ ಕಲಾ ವೈಭವವಿದೆ, ಪಟ್ಟದಕಲ್ಲು-ಬಾದಾಮಿಯಂಥ ಕಲ್ಲಿನ ಕವನಗಳಿವೆ. ಆದರೇನು ಬಂತು? ನಮಗೆ ಈ ಸಂಪತ್ತನ್ನು ಜಗತ್ತಿನ ಮುಂದೆ, 'ಇದು ನೋಡಿ, ನಮ್ಮ ಗತ್ತು' ಎಂದು ತೋರಿಸುವ ಕಲೆ ಇವತ್ತಿಗೂ ಸಿದ್ಧಿಸಿಲ್ಲ.
ಪ್ರವಾಸೋದ್ಯಮ ಅಂದರೆ ಕೇವಲ ಎತ್ತರದ ಗೋಪುರಗಳನ್ನೋ, ಹಸಿರು ಕಣಿವೆಗಳನ್ನೋ, ಐತಿಹಾಸಿಕ ತಾಣಗಳನ್ನೋ ನೋಡುವುದಷ್ಟೇ ಅಲ್ಲ. ಅದು ಆ ಸ್ಥಳಗಳನ್ನು ತೋರಿಸುವ 'ಕಲೆ'. ಅದೊಂದು ಶಿಸ್ತುಬದ್ಧ 'ಪ್ಯಾಕೇಜಿಂಗ್' ಕಲೆ. ಎದುರಿಗಿರುವ ಪ್ರವಾಸಿಗನ ಜೇಬಿನಿಂದ ಹಣ ಕಸಿದುಕೊಳ್ಳುವುದಲ್ಲ, ಅವನ ಹೃದಯದಲ್ಲಿ ಒಂದು ಶಾಶ್ವತ ನೆನಪನ್ನು ಬಿತ್ತುವುದು. ಈ ವಿಷಯದಲ್ಲಿ ಜಪಾನ್‌ನಂಥ ದೇಶಗಳನ್ನು ನೋಡಿ ಕಲಿಯಬೇಕು. ಅಲ್ಲಿನ ರಸ್ತೆಯ ಮೇಲೆ ಯಾರೂ ಗಮನಿಸದ, ಮಲಮೂತ್ರದ ಗುಂಡಿಯನ್ನು ಮುಚ್ಚುವ ಸವಕಲು 'ಮ್ಯಾನ್‌ಹೋಲ್ ಮುಚ್ಚಳ'ವನ್ನೂ ಅವರು ಒಂದು ಅದ್ಭುತ ಕಲಾಕೃತಿಯನ್ನಾಗಿ ಬದಲಿಸಿದ್ದಾರೆ. ಆ ಮುಚ್ಚಳದ ಮೇಲೆ ಆಯಾ ಊರಿನ ಇತಿಹಾಸ, ಅಲ್ಲಿನ ಹೂವುಗಳು, ಸಂಸ್ಕೃತಿಯನ್ನು ಎಷ್ಟು ಅಚ್ಚುಕಟ್ಟಾಗಿ ಕೆತ್ತಿದ್ದಾರೆಂದರೆ, ವಿದೇಶಿ ಪ್ರವಾಸಿಗರು ಅದನ್ನು ನೋಡಲೆಂದೇ ಬರುತ್ತಾರೆ. ಒಬ್ಬ ಪ್ರವಾಸಿಗೆ ಅಲ್ಲಿನ ಗಟಾರವೂ ಗ್ಲಾಮರ್ ಆಗಿ ಕಾಣುತ್ತದೆ ಎಂದರೆ, ಅದು ಆ ದೇಶದ ಪ್ರವಾಸೋದ್ಯಮ ಜಾಣ್ಮೆ!
ಇದನ್ನೂ ಓದಿ: ಗೂಗಲ್ ಮ್ಯಾಪ್‌ಗೆ ಸಿಗದ ರಹಸ್ಯ ತಾಣಗಳು: ಇತಿಹಾಸದ ಮೌನ ಸಾಕ್ಷಿಗಳು
ಜಪಾನ್ 'ಮ್ಯಾನ್‌ಹೋಲ್ ಮುಚ್ಚಳ'ವನ್ನೂ ಒಂದು ಕಲಾಕೃತಿಯನ್ನಾಗಿ ಮಾಡಿ ಪ್ರವಾಸಿಗರನ್ನು ಸೆಳೆಯುತ್ತಿದ್ದರೆ, ಭಾರತವು ತನ್ನಲ್ಲಿರುವ ಅಗಾಧವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪತ್ತನ್ನು ಪ್ರದರ್ಶಿಸುವಲ್ಲಿ ಎಲ್ಲೋ ಒಂದು ಕಡೆ ಸೋಲುತ್ತಿದೆ. ಇಲ್ಲಿನ ಪ್ರತಿ ಕಲ್ಲಿನಲ್ಲೂ ಒಂದೊಂದು ಕಥೆಯಿದೆ, ಪ್ರತಿ ಮಣ್ಣಿನ ಕಣದಲ್ಲೂ ಇತಿಹಾಸದ ರಕ್ತದ ವಾಸನೆಯಿದೆ. ನಮ್ಮಲ್ಲಿ ಹಂಪಿಯಿದೆ, ಅಜಂತಾ-ಎಲ್ಲೋರಾದ ಕಲಾ ವೈಭವವಿದೆ, ಪಟ್ಟದಕಲ್ಲು-ಬಾದಾಮಿಯಂಥ ಕಲ್ಲಿನ ಕವನಗಳಿವೆ. ಆದರೇನು ಬಂತು? ನಮಗೆ ಈ ಸಂಪತ್ತನ್ನು ಜಗತ್ತಿನ ಮುಂದೆ, 'ಇದು ನೋಡಿ, ನಮ್ಮ ಗತ್ತು' ಎಂದು ತೋರಿಸುವ ಕಲೆ ಇವತ್ತಿಗೂ ಸಿದ್ಧಿಸಿಲ್ಲ. ಹಂಪಿಯ ವಿರೂಪಾಕ್ಷನ ಎದುರು ನಿಂತರೆ ಭಕ್ತಿಗಿಂತ ಹೆಚ್ಚಾಗಿ ಅಲ್ಲಿನ ಧೂಳು, ಹರಿದಾಡುವ ಹಂದಿಗಳು ಮತ್ತು ಅವ್ಯವಸ್ಥೆ ನಮ್ಮ ಕಣ್ಣು ಚುಚ್ಚುತ್ತವೆ. ನಮ್ಮಲ್ಲಿ 'ಸರಕು' ಅಮೋಘವಾಗಿದೆ, ಆದರೆ ಆ ಸರಕನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿ 'ಮಾರುವ' ವ್ಯಾಪಾರಿ ಬುದ್ಧಿವಂತಿಕೆ, ಕಲಾತ್ಮಕ ಬುದ್ಧಿ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಜಪಾನ್‌ನವರು ಶೂನ್ಯದಿಂದ ಸೌಂದರ್ಯವನ್ನು ಸೃಷ್ಟಿಸುತ್ತಾರೆ. ಅವರು ತಮ್ಮ ಸಣ್ಣ ತಪ್ಪುಗಳನ್ನೂ 'ಮಾರ್ಕೆಟಿಂಗ್' ತಂತ್ರವಾಗಿ ಬಳಸಿಕೊಳ್ಳುತ್ತಾರೆ. ಆದರೆ ನಾವು? ಕೋಟಿ ಬೆಲೆಯ ವಜ್ರವನ್ನು ಕೈಯಲ್ಲಿ ಹಿಡಿದುಕೊಂಡು, ಅದರ ಮೇಲೆ ಕುಳಿತಿರುವ ಧೂಳನ್ನು ಒರೆಸುವ ತಾಳ್ಮೆಯಿಲ್ಲದೇ, 'ನೋಡಿ ನಮ್ಮ ಹತ್ತಿರ ವಜ್ರವಿದೆ' ಎಂದು ಕಿರುಚುತ್ತಿದ್ದೇವೆ. ಪ್ರವಾಸಿಗನಿಗೆ ಬೇಕಾಗಿರುವುದು ವಜ್ರದ ಹೊಳಪೇ ಹೊರತು, ಅದರ ಮೇಲಿರುವ ಇತಿಹಾಸದ ಕಸವಲ್ಲ. ಒಂದು ಸ್ಮಾರಕದ ಮುಂದೆ ನಿಂತಾಗ ಅಲ್ಲಿನ ಇತಿಹಾಸ ನಮ್ಮ ಕಿವಿಯಲ್ಲಿ ಪಿಸುಗುಟ್ಟಬೇಕು, ಅಲ್ಲಿನ ಪರಿಸರ ನಮ್ಮನ್ನು ಅಪ್ಪಿಕೊಳ್ಳಬೇಕು. ಆದರೆ ನಮ್ಮಲ್ಲಿ ಗೈಡ್‌ಗಳು ಹೇಳುವ ಸುಳ್ಳು ಪುರಾಣಗಳು ಮತ್ತು ಸ್ಮಾರಕದ ಮೇಲೆ ಪ್ರೇಮಿಗಳು ಕೆತ್ತಿದ ಹೆಸರುಗಳೇ ನಮಗೆ ಸ್ವಾಗತ ಕೋರುತ್ತವೆ.
ಜಪಾನ್ ದೇಶವು ಪ್ರವಾಸೋದ್ಯಮವನ್ನು ಹೇಗೆ ಒಂದು 'ಅನುಭವ'ವನ್ನಾಗಿ ಬದಲಿಸಿದೆ ಎಂಬುದಕ್ಕೆ ಮ್ಯಾನ್‌ಹೋಲ್ ಮುಚ್ಚಳಗಳೇ ಅತ್ಯುತ್ತಮ ಉದಾಹರಣೆ. ರಸ್ತೆಯ ಮಧ್ಯೆ ಇರುವ ಕೊಳಚೆ ನೀರಿನ ಗುಂಡಿಯ ಮುಚ್ಚಳವನ್ನು ಯಾರಾದರೂ ಪ್ರವಾಸಿ ಆಕರ್ಷಣೆ ಎಂದು ಭಾವಿಸಲು ಸಾಧ್ಯವೇ? ಆದರೆ ಜಪಾನ್ ಅದನ್ನು ಸಾಧಿಸಿದೆ. ಜಪಾನ್‌ನ ಪ್ರತಿಯೊಂದು ನಗರವೂ ತನ್ನ ಇತಿಹಾಸ, ಸಂಸ್ಕೃತಿ ಅಥವಾ ಅಲ್ಲಿನ ಪ್ರಸಿದ್ಧ ಹೂವುಗಳನ್ನು ಬಿಂಬಿಸುವ ಬಣ್ಣ ಬಣ್ಣದ ಕಲಾತ್ಮಕ ಮ್ಯಾನ್‌ಹೋಲ್ ಮುಚ್ಚಳಗಳನ್ನು ಹೊಂದಿದೆ. ಪ್ರವಾಸಿಗರಿಗೆ ಇವುಗಳನ್ನು ಹುಡುಕುತ್ತಾ ಹೋಗುವುದೇ ಒಂದು ಹವ್ಯಾಸವಾಗಿದೆ. 'ಮ್ಯಾನ್‌ಹೋಲ್ ಕಾರ್ಡ್'ಗಳನ್ನು ಸಂಗ್ರಹಿಸುವ ಹುಚ್ಚು ಪ್ರವಾಸಿಗರಲ್ಲಿ ಮನೆಮಾಡಿದೆ. ಇದು ಕೇವಲ ಕಲೆಯಲ್ಲ, ಆ ದೇಶದ 'ಸ್ವಚ್ಛತೆ' ಮತ್ತು 'ಸೌಂದರ್ಯ ಪ್ರಜ್ಞೆ'ಯನ್ನು ಜಗತ್ತಿಗೆ ಸಾರುವ ತಂತ್ರ. 'ನಮ್ಮ ರಸ್ತೆಯ ಗುಂಡಿ ಮುಚ್ಚಳವೇ ಇಷ್ಟು ಸುಂದರವಾಗಿದ್ದರೆ, ನಮ್ಮ ನಗರ ಇನ್ನೆಷ್ಟು ಸುಂದರವಾಗಿರಬೇಡ?' ಎಂಬ ಪರೋಕ್ಷ ಸಂದೇಶ ಇಲ್ಲಿ ಅಡಗಿದೆ.
ನಮ್ಮಲ್ಲಿ ಸಂಪತ್ತಿಗೆ ಕೊರತೆಯಿಲ್ಲ, ಅದನ್ನು ಪ್ರೀತಿಸುವ ಸಂಸ್ಕಾರ ಮತ್ತು ಪ್ರದರ್ಶಿಸುವ ಚಾಕಚಕ್ಯತೆಗೆ ಮಾತ್ರ ಬರವಿದೆ. ಜಪಾನ್‌ನ ಮ್ಯಾನ್‌ಹೋಲ್ ಮುಚ್ಚಳದ ಮುಂದೆ ನಿಂತು ಫೊಟೋ ತೆಗೆಯುವ ಪ್ರವಾಸಿಗ, ಹಂಪಿಯ ಕಲ್ಲಿನ ರಥದ ಮುಂದೆ ನಿಂತು ಮೌನವಾಗಬೇಕು. ಅಂಥ ವಾತಾವರಣವನ್ನು ನಿರ್ಮಿಸುವಲ್ಲಿ ನಾವು ಸೋಲುತ್ತಿದ್ದೇವೆ. ಎಲ್ಲಿಯವರೆಗೆ ನಾವು ನಮ್ಮ ಇತಿಹಾಸಕ್ಕೆ ಕೇವಲ ಸುಣ್ಣ ಬಳಿಯುವುದನ್ನು ಬಿಟ್ಟು, ಅದಕ್ಕೊಂದು 'ಗ್ಲಾಮರ್' ನೀಡುವ ಪ್ಯಾಕೇಜಿಂಗ್ ಕಲೆಯನ್ನು ಕಲಿಯುವುದಿಲ್ಲವೋ, ಅಲ್ಲಿಯವರೆಗೆ ಜಗತ್ತಿನ ಪ್ರವಾಸಿಗರ ಪಾಲಿಗೆ ಭಾರತ ಒಂದು 'ಅವ್ಯವಸ್ಥೆಯ ಅನ್ವೇಷಣೆ'ಯಾಗಿಯೇ ಉಳಿಯುತ್ತದೆ ಹೊರತು 'ಜೀವಮಾನದ ಅನುಭವ'ವಾಗಲು ಸಾಧ್ಯವಿಲ್ಲ.
ದೃಷ್ಟಿಕೋನದ ಬದಲಾವಣೆಯೇ ಯಶಸ್ಸು. ಸಾಮಾನ್ಯವಾಗಿ ಒಂದು ದೇಶದ ಪ್ರವಾಸೋದ್ಯಮ ಎಂದರೆ ಅಲ್ಲಿನ ಸಮೃದ್ಧಿ, ಹಸಿರು ಅಥವಾ ಐಷಾರಾಮಿ ಸೌಲಭ್ಯಗಳನ್ನು ತೋರಿಸುವುದು ಎಂದು ನಾವು ಭಾವಿಸುತ್ತೇವೆ. ಆದರೆ ಜಗತ್ತಿನ ಕೆಲವು ದೇಶಗಳು ಈ ಪದ್ಧತಿಯನ್ನು ಸಂಪೂರ್ಣವಾಗಿ ಬದಲಿಸಿವೆ. ತಮ್ಮಲ್ಲಿ ಏನಿಲ್ಲವೋ ಅಥವಾ ಯಾವುದನ್ನು ಜಗತ್ತು 'ಕೊರತೆ' ಎಂದು ಭಾವಿಸುತ್ತದೆಯೋ, ಅದನ್ನೇ ಒಂದು 'ಅದ್ಭುತ'ವನ್ನಾಗಿ ಪ್ಯಾಕೇಜ್ ಮಾಡಿ ಮಾರಾಟ ಮಾಡುವ ಕಲೆಯನ್ನು ಅವು ಸಿದ್ಧಿಸಿಕೊಂಡಿವೆ. ಐಸ್‌ಲ್ಯಾಂಡ್ ಮತ್ತು ಭೂತಾನ್ ದೇಶಗಳು ಈ 'ಪರ್ಸ್ಪೆಕ್ಟಿವ್ ಟೂರಿಸಂ'ಗೆ ಜಗತ್ತಿನಲ್ಲೇ ಅತ್ಯುತ್ತಮ ಉದಾಹರಣೆಗಳು.

ಐಸ್‌ಲ್ಯಾಂಡ್ ಎನ್ನುವುದು ಮೂಲಭೂತವಾಗಿ ಮನುಷ್ಯ ವಾಸಕ್ಕೆ ಯೋಗ್ಯವಲ್ಲದ ಕಠಿಣ ಪರಿಸ್ಥಿತಿಯ ಭೂಮಿ. ಅಲ್ಲಿ ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯಿಲ್ಲ, ದಟ್ಟವಾದ ಕಾಡುಗಳಿಲ್ಲ, ವರ್ಷದ ಕೆಲದಿನ ಸೂರ್ಯನೇ ಕಾಣಿಸದ ಕಗ್ಗತ್ತಲೆ. ಇನ್ನುಳಿದಂತೆ ಹಗಲೋ ಹಗಲು. ಜಗತ್ತು ಇದನ್ನು 'ಬಂಜರು ಭೂಮಿ' ಎಂದು ಕರೆಯಬಹುದಾಗಿತ್ತು. ಆದರೆ ಐಸ್‌ಲ್ಯಾಂಡ್ ಮಾಡಿದ ಜಾಣ್ಮೆಯೆಂದರೆ - ತನ್ನ ಈ ಬಂಜರುತನವನ್ನೇ 'ಅನ್ವೇಷಣೆ' ಎಂದು ಬ್ರ್ಯಾಂಡ್ ಮಾಡಿದ್ದು. ತಮ್ಮಲ್ಲಿರುವ ಜ್ವಾಲಾಮುಖಿಗಳನ್ನು ಮತ್ತು ಕೊರೆಯುವ ಮಂಜುಗಡ್ಡೆಯನ್ನು ಅವರು 'ಬೆಂಕಿ ಮತ್ತು ಮಂಜಿನ ನಾಡು' ಎಂದು ಲೇಬಲ್ ಹಚ್ಚಿ ಶೋಕೇಸ್ ಮಾಡಿದರು. ಪ್ರವಾಸಿಗರಿಗೆ ಇದೊಂದು 'ಬೇರೆ ಜಗತ್ತಿನ' (Other-worldly) ಅನುಭವ ಎಂದು ಬಿಂಬಿಸಲಾಯಿತು.
ಮರಗಿಡಗಳಿಲ್ಲದ ವಿಶಾಲವಾದ ಲಾವಾ ಭೂಮಿಯನ್ನು ಅವರು 'ಚಂದಿರನ ಮೇಲೆ ನಡೆದಂಥ ಅನುಭವ' ಎಂದು ಪ್ರಚಾರ ಮಾಡಿದರು. ಅಮೆರಿಕದ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಇಳಿಯುವ ಮುನ್ನ ತರಬೇತಿ ಪಡೆದದ್ದು ಇಲ್ಲಿ ಎನ್ನುವ ಕಥೆಯನ್ನು ಅವರು ಜಗತ್ತಿಗೆ ಅದೆಷ್ಟು ಪರಿಣಾಮಕಾರಿಯಾಗಿ ಮಾರಾಟ ಮಾಡಿದರು ಎಂದರೆ, ಇಂದು ಪ್ರತಿಯೊಬ್ಬ ಸಾಹಸಪ್ರಿಯ ಪ್ರವಾಸಿಯೂ ಅಲ್ಲಿಗೆ ಹೋಗಿ ಆ 'ಖಾಲಿತನ'ವನ್ನು ಅನುಭವಿಸಲು ಹಾತೊರೆಯುತ್ತಾನೆ. ಜ್ವಾಲಾಮುಖಿ ಸ್ಫೋಟವಾದಾಗ ಇತರರು ಹೆದರಿ ಓಡಿದರೆ, ಇವರು ಅದರ ಲಾವಾ ಹರಿಯುವ ದೃಶ್ಯವನ್ನು ನೋಡಲು ಪ್ರವಾಸಿಗರಿಗೆ ವಿಶೇಷ ವ್ಯವಸ್ಥೆ ಮಾಡಿ ಹಣ ಮಾಡುತ್ತಾರೆ. ಇದು ಕೊರತೆಯನ್ನು ಬಂಡವಾಳವಾಗಿಸಿಕೊಳ್ಳುವ ಅತ್ಯುನ್ನತ ಕಲೆ.
ಭೂತಾನ್ ಒಂದು ಪುಟ್ಟ ದೇಶ. ಭಾರತ ಮತ್ತು ಚೀನಾದಂಥ ಬಲಿಷ್ಠ ರಾಷ್ಟ್ರಗಳ ನಡುವೆ ಇರುವ ಈ ದೇಶಕ್ಕೆ ದೊಡ್ಡ ಸೇನೆ ಇಲ್ಲ, ಕೈಗಾರಿಕೆಗಳಿಲ್ಲ, ಸಮುದ್ರ ತೀರವಿಲ್ಲ. ಇಡೀ ಜಗತ್ತು ಜಿಡಿಪಿ (Gross Domestic Product) ಎನ್ನುವ ಅಂಕಿ-ಅಂಶಗಳ ಹಿಂದೆ ಬಿದ್ದು ದೇಶದ ಆರ್ಥಿಕತೆಯನ್ನು ಅಳೆಯುತ್ತಿರುವಾಗ, ಭೂತಾನ್ ಅತ್ಯಂತ ಧೈರ್ಯದಿಂದ ಒಂದು ಮಾತು ಹೇಳಿತು - 'ನಮಗೆ ಜಿಡಿಪಿ ಬೇಡ, ನಮಗೆ ಜಿಎನ್ಎಚ್ (Gross National Happiness) ಬೇಕು.' 'ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ' ಎಂದು ತನ್ನನ್ನು ತಾನು ಬಿಂಬಿಸಿಕೊಂಡ ಭೂತಾನ್, ಆಧುನಿಕತೆಯಿಂದ ಬೆಂಡಾಗಿರುವ ಪಾಶ್ಚಾತ್ಯ ಪ್ರವಾಸಿಗರಿಗೆ 'ಮನಶ್ಶಾಂತಿ' ಎನ್ನುವ ಪದವನ್ನೇ ಪ್ರವಾಸಿ ಉತ್ಪನ್ನವನ್ನಾಗಿ ಮಾರಾಟ ಮಾಡಿತು. ಎಲ್ಲರನ್ನೂ ಬರಮಾಡಿಕೊಂಡು ದೇಶವನ್ನು ಗಬ್ಬು ಮಾಡಿಕೊಳ್ಳುವ ಬದಲು, ಭೂತಾನ್ ಒಂದು ಕಠಿಣ ನಿಯಮ ಜಾರಿಗೆ ತಂದಿತು. ಇಲ್ಲಿಗೆ ಬರುವ ಪ್ರವಾಸಿಗ ದಿನಕ್ಕೆ ಹೆಚ್ಚಿನ ಹಣವನ್ನು ಸುಸ್ಥಿರ ಅಭಿವೃದ್ಧಿ ಶುಲ್ಕ (Sustainable Development Fee) ವಾಗಿ ಸರಕಾರಕ್ಕೆ ಪಾವತಿಸಬೇಕು. ಇದು ಬಡ ದೇಶವಾದರೂ, 'ನಾವು ಎಲ್ಲರಿಗೂ ಸಿಗುವವರಲ್ಲ' ಎನ್ನುವ 'ಎಕ್ಸ್‌ಕ್ಲೂಸಿವಿಟಿ'ಯನ್ನು ಸೃಷ್ಟಿಸಿತು. ಅಲ್ಲಿ ಇಂದಿಗೂ ಪ್ಲಾಸ್ಟಿಕ್ ಇಲ್ಲ, ಅತಿಯಾದ ಟ್ರಾಫಿಕ್ ಇಲ್ಲ. ತಮಗೆ ಆಧುನಿಕ ಮೂಲಸೌಕರ್ಯಗಳ ಕೊರತೆಯಿದೆ ಎಂದು ಕೊರಗುವ ಬದಲು, 'ನಮ್ಮಲ್ಲಿ ಆಧುನಿಕತೆಯ ಮಾಲಿನ್ಯವಿಲ್ಲ' ಎಂದು ಅವರು ತಮ್ಮ ಮಿತಿಯನ್ನೇ ಸದ್ಗುಣವನ್ನಾಗಿ ಬದಲಿಸಿಕೊಂಡರು.
ನಮ್ಮ ಭಾರತದ ಸಂದರ್ಭದಲ್ಲಿ ನಾವು ಯಾವಾಗಲೂ 'ನಮ್ಮಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲ' ಎಂದು ಕೊರಗುತ್ತೇವೆ. ಆದರೆ ನಮಗೆ ನಮ್ಮ 'ಕೊರತೆ'ಗಳನ್ನೇ 'ವಿಶೇಷ'ವನ್ನಾಗಿ ತೋರಿಸಲು ಬರುತ್ತಿಲ್ಲ. ಭಾರತದ ನಗರಗಳ ಗದ್ದಲವನ್ನು ನಾವು 'ಕಿರಿಕಿರಿ' ಎನ್ನುತ್ತೇವೆ. ಆದರೆ ವಿದೇಶಿ ಪ್ರವಾಸಿಗನಿಗೆ ಇದೊಂದು 'ಸಂಘಟಿತ ಅವ್ಯವಸ್ಥೆ' (Organized Chaos). ಅದನ್ನು ನಾವು ಸರಿಯಾದ ರೀತಿಯಲ್ಲಿ ತೋರಿಸಿದರೆ, ಅವರಿಗೆ ನಮ್ಮ ಹಳೇ ಬಜಾರುಗಳ ಗದ್ದಲವೇ ಒಂದು ಅದ್ಭುತ ಅನುಭವವಾಗಬಲ್ಲದು. ಮಣ್ಣಿನ ಮನೆಯಲ್ಲಿರುವುದು ನಮ್ಮ ಪಾಲಿಗೆ ಬಡತನವಿರಬಹುದು, ಆದರೆ ನ್ಯೂಯಾರ್ಕ್‌ನ ಎಪ್ಪತ್ತನೇ ಮಹಡಿಯಲ್ಲಿರುವವನಿಗೆ ಆ ಮಣ್ಣಿನ ವಾಸನೆಯೇ ಒಂದು ಐಷಾರಾಮಿ ಅನುಭವ. ಭೂತಾನ್‌ನಂತೆ ನಾವು ನಮ್ಮ ಗ್ರಾಮೀಣ ಬದುಕನ್ನು ಅದರ ಸಹಜತೆಯಲ್ಲಿಯೇ ಪ್ರದರ್ಶಿಸಬೇಕಿದೆ.
ಪ್ರವಾಸೋದ್ಯಮದಲ್ಲಿ ಜಯಶಾಲಿಗಳಾಗುವವರು ಯಾರು ಅಂದರೆ, ಯಾರು ಕಥೆಗಳನ್ನು ಚೆನ್ನಾಗಿ ಹೇಳುತ್ತಾರೋ ಅವರು. ಐಸ್‌ಲ್ಯಾಂಡ್ ಬರೀ ಕಲ್ಲುಗಳನ್ನು ತೋರಿಸಲಿಲ್ಲ, ಆ ಕಲ್ಲುಗಳ ನಡುವೆ ಇರುವ 'ಮೌನ'ವನ್ನು ಮಾರಾಟ ಮಾಡಿತು. ಭೂತಾನ್ ಕೇವಲ ಗುಡ್ಡಗಳನ್ನು ತೋರಿಸಲಿಲ್ಲ, ಆ ಗುಡ್ಡಗಳ ಮೇಲೆ ವಾಸಿಸುವ ಜನರ 'ನಗೆ'ಯನ್ನು ಮಾರಾಟ ಮಾಡಿತು. ಒಂದು ದೇಶಕ್ಕೆ ತನ್ನಲ್ಲಿರುವ ಸಂಪನ್ಮೂಲಗಳಿಗಿಂತಲೂ ಮುಖ್ಯವಾಗಿ ತನ್ನಲ್ಲಿರುವ 'ಕೊರತೆ'ಯನ್ನು ಹೇಗೆ ಅದ್ಭುತವಾಗಿ ಚಿತ್ರಿಸಬೇಕು ಎಂಬುದು ಗೊತ್ತಾದರೆ, ಆ ದೇಶವು ಪ್ರವಾಸೋದ್ಯಮದ ನಕ್ಷೆಯಲ್ಲಿ ಅಜೇಯವಾಗಿ ಉಳಿಯುತ್ತದೆ.
ಜಗತ್ತು ಇಂದು ಕಾಂಕ್ರೀಟ್ ಕಾಡುಗಳಿಂದ ಬೇಸತ್ತಿದೆ. ಪ್ರವಾಸಿಗರು ಇಂದು ಸುಂದರವಾದ ಹೊಟೇಲ್‌ಗಳಿಗಿಂತ ಹೆಚ್ಚಾಗಿ 'ಅಥೆಂಟಿಕ್' ಅನುಭವಗಳನ್ನು ಹುಡುಕುತ್ತಿದ್ದಾರೆ. ಐಸ್‌ಲ್ಯಾಂಡ್ ತನ್ನ ಚಳಿಯನ್ನು ಮತ್ತು ಭೂತಾನ್ ತನ್ನ ಸರಳತೆಯನ್ನು ಬ್ರ್ಯಾಂಡ್ ಮಾಡಿದಂತೆ, ನಾವು ನಮ್ಮ ವೈವಿಧ್ಯವನ್ನು ಮತ್ತು ನಮ್ಮ ದೈನಂದಿನ ಬದುಕಿನ ಜೈವಿಕ ಶಕ್ತಿಯನ್ನು ಜಗತ್ತಿಗೆ ಸರಿಯಾದ ರೀತಿಯಲ್ಲಿ 'ಪ್ಯಾಕೇಜ್' ಮಾಡಬೇಕಿದೆ. ಪ್ರವಾಸೋದ್ಯಮ ಎಂಬುದು ಕೇವಲ ಕಣ್ಣಿಗೆ ಕಾಣುವ ದೃಶ್ಯವಲ್ಲ, ಅದು ಪ್ರವಾಸಿಗನ ಮನಸ್ಸಿನಲ್ಲಿ ಸೃಷ್ಟಿಸುವ ಒಂದು ಸುಂದರ ಕಲ್ಪನೆ, ಆಪ್ತ ಭ್ರಮೆ ಅಥವಾ ಅನೂಹ್ಯ ಅನುಭವ.
ಪ್ರವಾಸೋದ್ಯಮ ಎನ್ನುವುದು ಕೇವಲ ಭೂಪಟದಲ್ಲಿರುವ ಒಂದು ಬಿಂದುವಿಗೆ ಜನರನ್ನು ಕರೆತರುವುದಲ್ಲ. ಅದು ಆ ಜಾಗದ ಸುತ್ತ ಒಂದು ಮಾಂತ್ರಿಕ ಕಥೆಯನ್ನು ಹೆಣೆಯುವುದು. ಜಗತ್ತಿನ ಎಷ್ಟೋ ದೇಶಗಳ ಬಳಿ ಅದ್ಭುತವಾದ ನೈಸರ್ಗಿಕ ಸಂಪತ್ತಿದೆ, ಆದರೆ ಜಯಶಾಲಿಗಳಾಗುತ್ತಿರುವುದು ಕೇವಲ ಆ ಸಂಪತ್ತನ್ನು 'ಕಥೆ'ಯನ್ನಾಗಿ ಬದಲಿಸಿ ಮಾರಾಟ ಮಾಡುವ ಕಲೆ ತಿಳಿದವರು ಮಾತ್ರ. ಪ್ರವಾಸಿಗ ಇವತ್ತು ಒಂದು ಜಾಗವನ್ನು ನೋಡಿ ಮರೆಯಲು ಹೋಗುವುದಿಲ್ಲ, ಅವನು ಆ ಜಾಗದ ಕಥೆಯ ಭಾಗವಾಗಲು ಬಯಸುತ್ತಾನೆ.
ಪ್ರವಾಸೋದ್ಯಮದಲ್ಲಿ ಮಾರುಕಟ್ಟೆ ಎನ್ನುವುದು ಒಂದು ದೊಡ್ಡ ನಾಟಕದ ರಂಗಭೂಮಿಯಿದ್ದಂತೆ. ಇಲ್ಲಿ ಪ್ರೇಕ್ಷಕರನ್ನು (ಪ್ರವಾಸಿಗರನ್ನು) ಸೆಳೆಯುವುದು ಸುಂದರವಾದ ಪರದೆಯಲ್ಲ (ಜಾಗ), ಬದಲಿಗೆ ಆ ಪರದೆಯ ಹಿಂದೆ ನಡೆಯುವ ನಾಟಕ (ಕಥೆ). ಪ್ಯಾರಿಸ್ ಅನ್ನು ಒಂದು ನಗರ ಎಂದು ಯಾರೂ ನೋಡುವುದಿಲ್ಲ, ಅದೊಂದು 'ಪ್ರೇಮ ಕಥೆ'. ಸ್ವಿಟ್ಜರ್ ಲ್ಯಾಂಡ್ ಅನ್ನು ಕೇವಲ 'ಬೆಟ್ಟ' ಎಂದು ನೋಡುವುದಿಲ್ಲ, ಅದೊಂದು 'ಕನಸಿನ ಲೋಕದ ಕಥೆ'. ನಮ್ಮ ಪ್ರವಾಸಿ ತಾಣಗಳನ್ನು ಜಗತ್ತಿಗೆ ತೋರಿಸುವಾಗ ನಾವು ಮೊದಲು ಆ ಜಾಗದ ಸುತ್ತ ಒಂದು ಆಕರ್ಷಕ ಕಥೆಯನ್ನು ನಿರ್ಮಿಸಬೇಕು. ಆ ಕಥೆ ಎಷ್ಟು ಪ್ರಬಲವಾಗಿರಬೇಕು ಎಂದರೆ, ಪ್ರವಾಸಿಗ ಅಲ್ಲಿಗೆ ಹೋಗುವ ಮೊದಲೇ ಆ ಜಾಗದ ಜತೆ ಮಾನಸಿಕವಾಗಿ ಕನೆಕ್ಟ್ ಆಗಿರಬೇಕು.

ಜಗತ್ತಿನಲ್ಲಿ ನೋಡಲು ಸಾವಿರಾರು ಸುಂದರ ಜಾಗಗಳಿವೆ. ಆದರೆ ಜನ ನೆನಪಿಟ್ಟುಕೊಳ್ಳುವುದು ಕೇವಲ ಆ ಸುಂದರ ಕಥೆಗಳನ್ನು ಮಾತ್ರ. ಐಸ್‌ಲ್ಯಾಂಡ್‌ನ ಕಲ್ಲಿನ ಮೌನ ಮತ್ತು ಭೂತಾನ್‌ನ ಜನರ ನಗೆ ನಮಗೆ ಒಂದು ದೊಡ್ಡ ಪಾಠವನ್ನು ಹೇಳುತ್ತವೆ - 'ನಿಮ್ಮ ಬಳಿ ಇರುವುದು ಏನಾದರೂ ಆಗಿರಲಿ, ಅದನ್ನು ನೀವು ಎಷ್ಟು ರೋಚಕವಾಗಿ ಜಗತ್ತಿಗೆ ವಿವರಿಸುತ್ತೀರಿ ಎಂಬುದರ ಮೇಲೆ ನಿಮ್ಮ ಗೆಲುವು ನಿರ್ಧಾರವಾಗುತ್ತದೆ.' ಪ್ರವಾಸೋದ್ಯಮದ ಭವಿಷ್ಯ ಅಡಗಿರುವುದು ಸುಂದರವಾದ ರಸ್ತೆಗಳಲ್ಲಲ್ಲ, ಬದಲಿಗೆ ಆ ರಸ್ತೆಗಳು ಕರೆದೊಯ್ಯುವ ಮನುಷ್ಯನ ಮನಸ್ಸನ್ನು ತಟ್ಟುವ ಕಥೆಗಳಲ್ಲಿ.
ಹಾಗಾದರೆ ನಾವು ಏನು ಮಾಡಬೇಕು? - ಜಪಾನ್‌ನಿಂದ ಕಲಿಯಬೇಕಾದ ಪಾಠಗಳು
ನಾವು ಮೈಕ್ರೋ-ಟೂರಿಸಂ ಗೆ ಹೆಚ್ಚು ಒತ್ತು ನೀಡಬೇಕು. ನಾವು ಕೇವಲ ಹಂಪಿ, ತಾಜ್‌ಮಹಲ್ ಅಥವಾ ಕುತುಬ್ ಮಿನಾರ್ ತೋರಿಸುವುದನ್ನೇ ನಿಲ್ಲಿಸಬೇಕು. ನಮ್ಮ ಹಳ್ಳಿಗಳ ಸಂಸ್ಕೃತಿ, ನಮ್ಮ ಅಡುಗೆ ಪದ್ಧತಿ ಅಥವಾ ನಮ್ಮ ಸಾಂಪ್ರದಾಯಿಕ ಕಲೆಗಳನ್ನು (ಉದಾಹರಣೆಗೆ ಯಕ್ಷಗಾನ, ತಾಳಮದ್ದಲೆ, ಬಯಲಾಟ) ಜಗತ್ತಿಗೆ ಸರಿಯಾದ ರೀತಿಯಲ್ಲಿ ತಲುಪಿಸಬೇಕು. ಜಪಾನ್ ಹೇಗೆ ಹಸಿರು ಚಹಾದ (ಗ್ರೀನ್ ಟೀ) ಸುತ್ತ ಒಂದು ದೊಡ್ಡ ಪ್ರವಾಸೋದ್ಯಮವನ್ನು ಬೆಳೆಸಿದೆಯೋ, ಹಾಗೆಯೇ ನಾವು ನಮ್ಮ 'ಮಸಾಲೆ ಚಹಾ' ಅಥವಾ 'ಜೋಳದ ರೊಟ್ಟಿ'ಯನ್ನು ಬ್ರ್ಯಾಂಡ್ ಮಾಡಬೇಕು. ಜಪಾನ್‌ನ ಮ್ಯಾನ್‌ಹೋಲ್ ಮುಚ್ಚಳಗಳು ಯಾಕೆ ಅಷ್ಟು ಆಕರ್ಷಕವಾಗಿವೆ ಎಂದರೆ, ಅಲ್ಲಿನ ರಸ್ತೆಗಳು ಕನ್ನಡಿಯಂತೆ ಹೊಳೆಯುತ್ತವೆ. ಭಾರತದ ಸ್ಮಾರಕಗಳ ಸುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಪ್ರವಾಸಿಗರು ಅಲ್ಲಿ ಫೊಟೋ ತೆಗೆಸಿಕೊಳ್ಳಲು ಮತ್ತು ಸಮಯ ಕಳೆಯಲು ಇಷ್ಟಪಡುತ್ತಾರೆ.
ಇದನ್ನೂ ಓದಿ: ರಕ್ತ, ಶೃಂಗಾರ, ಅಧಿಕಾರ ವ್ಯಾಮೋಹದ ಅರಮನೆಯ ಅಂತರಂಗ
ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿದರೆ ಆ ಸ್ಮಾರಕದ ಇತಿಹಾಸ ಆಡಿಯೋ ಮತ್ತು ವಿಡಿಯೋ ರೂಪದಲ್ಲಿ ಪ್ರವಾಸಿಗನಿಗೆ ಸಿಗುವಂತಾಗಬೇಕು. ಇದು ವಂಚಕ ಗೈಡ್‌ಗಳ ಕಾಟದಿಂದ ಪ್ರವಾಸಿಗರನ್ನು ಮುಕ್ತಗೊಳಿಸುತ್ತದೆ. ಜಪಾನ್ ಪ್ರತಿಯೊಂದು ಸಣ್ಣ ವಸ್ತುವಿನ ಹಿಂದೆ ಒಂದು ಕಥೆ ಇಡುತ್ತದೆ. ನಮ್ಮಲ್ಲಿರುವ ಲಕ್ಷಾಂತರ ಪುರಾಣ ಕಥೆಗಳನ್ನು, ಐತಿಹಾಸಿಕ ಘಟನೆಗಳನ್ನು ಅನಿಮೇಷನ್ ಅಥವಾ ವರ್ಚುವಲ್ ರಿಯಾಲಿಟಿ (VR) ಮೂಲಕ ಪ್ರವಾಸಿಗರಿಗೆ ತೋರಿಸಿದರೆ ಅವರು ಮಂತ್ರಮುಗ್ಧರಾಗುತ್ತಾರೆ. ಭಾರತವು ಪ್ರವಾಸೋದ್ಯಮದ 'ಬೆಲೆಕಟ್ಟಲಾಗದ ವಜ್ರ'ವಿದ್ದಂತೆ. ಆದರೆ ಆ ವಜ್ರದ ಮೇಲೆ ಧೂಳು ಕುಳಿತಿದೆ. ಜಪಾನ್ ದೇಶವು ಒಂದು ಸಾಮಾನ್ಯ ಗಾಜಿನ ತುಂಡನ್ನು ಹೇಗೆ ವಜ್ರದಂತೆ ಮಿನುಗಿಸಬೇಕು ಎಂಬ ಕಲೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.
ನಾವು ಜಪಾನ್‌ನಿಂದ ಕಲಿಯಬೇಕಾದದ್ದು ಅವರ ರಸ್ತೆಯನ್ನಲ್ಲ, ಅವರ 'ದೃಷ್ಟಿಕೋನ'ವನ್ನು. ನಮ್ಮಲ್ಲಿರುವ ಪ್ರತಿಯೊಂದು ಮ್ಯಾನ್‌ಹೋಲ್ ಮುಚ್ಚಳವೂ ಇತಿಹಾಸ ಹೇಳಬೇಕಿಲ್ಲ, ಆದರೆ ಇತಿಹಾಸ ಹೇಳುವ ಪ್ರತಿ ಸ್ಮಾರಕವೂ ಕನಿಷ್ಠ ಆ ಮ್ಯಾನ್‌ಹೋಲ್ ಮುಚ್ಚಳದಷ್ಟಾದರೂ ಸುಂದರವಾಗಿ ಮತ್ತು ಗೌರವಯುತವಾಗಿ ಕಾಣುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ.