ನಾವು ಮಧ್ಯಪ್ರಾಚ್ಯ ಅಥವಾ ಅರಬ್ ರಾಷ್ಟ್ರಗಳ ಬಗ್ಗೆ ಯೋಚಿಸಿದ ತಕ್ಷಣ, ನಮ್ಮ ಕಣ್ಣ ಮುಂದೆ ಬರುವುದು ಗಗನಚುಂಬಿ ಕಟ್ಟಡಗಳು, ಕಣ್ಣು ಕೋರೈಸುವ ಕೃತಕ ದ್ವೀಪಗಳು ಮತ್ತು ಮನುಷ್ಯ ನಿರ್ಮಿಸಿದ ಅದ್ಭುತಗಳು. ದುಬೈನಲ್ಲಿ ಸಮುದ್ರದ ಒಡಲಿಗೆ ಟನ್ ಗಟ್ಟಲೆ ಮಣ್ಣು ಮತ್ತು ಬಂಡೆಗಳನ್ನು ಸುರಿದು, ಪ್ರಕೃತಿಯ ನಿಯಮವನ್ನೇ ಮೀರಿ 'ಪಾಮ್ ಜುಮೇರಾ'ದಂಥ ಕೃತಕ ದ್ವೀಪಗಳನ್ನು ಸೃಷ್ಟಿಸಿರುವುದನ್ನು ಜಗತ್ತು ಬೆರಗುಗಣ್ಣಿನಿಂದ ನೋಡುತ್ತಿದೆ. ಅಭಿವೃದ್ಧಿಯ ಅಂಥ ಮಾದರಿಯನ್ನು 'ಯಶಸ್ಸು' ಎಂದು ಕರೆಯಲಾಗುತ್ತಿದೆ. ಸಮುದ್ರವನ್ನು ಹುಗಿದು ಐಷಾರಾಮಿ ಬಡಾವಣೆಯನ್ನೇ ನಿರ್ಮಿಸಲಾಗಿದೆ. ಆದರೆ, ಇವೆಲ್ಲದರ ನಡುವೆ, ಒಮಾನ್ ಮಾತ್ರ ಅತ್ಯಂತ ಭಿನ್ನವಾಗಿ, ಮೌನವಾಗಿ ಮತ್ತು ಘನತೆಯಿಂದ ಎದ್ದು ನಿಲ್ಲುತ್ತದೆ.

ಒಮಾನ್ ದೇಶವು ಒಂದು ದಿಟ್ಟ ನಿರ್ಧಾರವನ್ನು ಕೈಗೊಂಡಿದೆ - 'ನಾವು ಪ್ರಕೃತಿಯನ್ನು ತಿದ್ದಲು ಹೋಗುವುದಿಲ್ಲ, ಪ್ರಕೃತಿ ಹೇಗಿದೆಯೋ ಹಾಗೆಯೇ ಅದನ್ನು ಪ್ರೀತಿಸುತ್ತೇವೆ.'

ಒಮಾನ್‌ನ ಪರಿಸರ ಪ್ರೇಮಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ 'ರಾಸ್ ಅಲ್ ಜಿನ್ಜ್' ಆಮೆ ಸಂರಕ್ಷಣೆ ಕೇಂದ್ರ. ಇದು ಅರೇಬಿಯನ್ ಸಮುದ್ರದ ತೀರದಲ್ಲಿರುವ ಒಂದು ಸುಂದರವಾದ ಬೀಚ್. ಪ್ರತಿ ವರ್ಷ ಸಾವಿರಾರು ಮೈಲಿ ದೂರದಿಂದ 'ಆಮೆಗಳು' ಬಂದು ಮೊಟ್ಟೆ ಇಡುವುದು ಇಲ್ಲೇ.

ಜಗತ್ತಿನ ಬೇರೆ ಯಾವುದೇ ದೇಶವಾಗಿದ್ದರೆ, ಇಂಥ ಸುಂದರವಾದ ಬೀಚ್‌ನಲ್ಲಿ ಬೃಹತ್ ಪಂಚತಾರಾ ಹೋಟೆಲ್‌ಗಳನ್ನು ಕಟ್ಟಿ, ರೆಸಾರ್ಟ್‌ಗಳನ್ನು ನಿರ್ಮಿಸಿ, ಪ್ರವಾಸಿಗರಿಂದ ಕೋಟ್ಯಂತರ ರುಪಾಯಿ ಹಣ ಬಾಚಿಕೊಳ್ಳುತ್ತಿತ್ತು. ಸಮುದ್ರ ತೀರದಲ್ಲಿ ಮೋಜು ಮಸ್ತಿ, ರಾತ್ರಿಯಿಡೀ ಬೆಳಗುವ ನಿಯಾನ್ ಲೈಟ್‌ಗಳು ಇರುತ್ತಿದ್ದವು. ಆದರೆ, ಒಮಾನ್ ಸರಕಾರ ಇಲ್ಲಿ ಅಭಿವೃದ್ಧಿಗೆ ಕಟ್ಟುನಿಟ್ಟಾದ 'ನೋ' ಹೇಳಿದೆ.

turtles

ಯಾಕೆಂದರೆ, ರಾತ್ರಿ ಹೊತ್ತು ಕೃತಕ ದೀಪಗಳಿದ್ದರೆ ಆಮೆಗಳಿಗೆ ದಿಕ್ಕು ತಪ್ಪುತ್ತದೆ. ಮೊಟ್ಟೆಯಿಂದ ಹೊರಬರುವ ಪುಟ್ಟ ಆಮೆ ಮರಿಗಳು ಸಮುದ್ರದ ಕಡೆಗೆ ಹೋಗುವ ಬದಲು, ದೀಪದ ಬೆಳಕಿನ ಕಡೆಗೆ ಬಂದು ಸಾವನ್ನಪ್ಪುತ್ತವೆ. ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡ ಒಮಾನ್, ಅಲ್ಲಿ ದೊಡ್ಡ ಹೋಟೆಲ್‌ಗಳನ್ನು ನಿಷೇಧಿಸಿದೆ. ಅಲ್ಲಿಗೆ ಹೋಗುವ ಪ್ರವಾಸಿಗರು ಟಾರ್ಚ್ ಬಳಸುವಂತಿಲ್ಲ, ಜೋರಾಗಿ ಮಾತನಾಡುವಂತಿಲ್ಲ, ಫ್ಲ್ಯಾಶ್ ಹಾಕಿ ಫೋಟೋ ತೆಗೆಯುವಂತಿಲ್ಲ. 'ನಮಗೆ ಪ್ರವಾಸಿಗರ ಹಣಕ್ಕಿಂತ, ಆ ಮೂಕ ಪ್ರಾಣಿಗಳ ಜೀವ ಮುಖ್ಯ' ಎಂದು ಸಾರುವ ಈ ನಿಲುವು, ಆಧುನಿಕ ಜಗತ್ತಿಗೆ ಒಂದು ದೊಡ್ಡ ಪಾಠ.

ಒಮಾನ್‌ನ ಮತ್ತೊಂದು ನೈಸರ್ಗಿಕ ವಿಸ್ಮಯವೆಂದರೆ 'ವಾಡಿ'ಗಳು. ಇವು ಒಣಗಿದ ಪರ್ವತಗಳ ನಡುವೆ ಇರುವ ನೈಸರ್ಗಿಕ ನೀರಿನ ಹೊಂಡಗಳು. ಉದಾಹರಣೆಗೆ 'ವಾಡಿ ಶಬ್' ಅಥವಾ 'ವಾಡಿ ಬಾನಿ ಖಾಲಿದ್'. ಸುಡು ಬಿಸಿಲಿನ ಮರುಭೂಮಿಯ ಪರ್ವತಗಳ ಮಧ್ಯೆ, ಎಲ್ಲಿಂದಲೋ ಬರುವ ಸಿಹಿನೀರು ಸಂಗ್ರಹವಾಗಿ, ಪಚ್ಚೆ ಹಸಿರು ಬಣ್ಣದ ಈಜುಕೊಳಗಳಾಗಿ ಮಾರ್ಪಟ್ಟಿವೆ.

ಇಲ್ಲಿಯೂ ಒಮಾನ್ ಕೃತಕತೆಯನ್ನು ತಂದಿಲ್ಲ. ಈ ವಾಡಿಗಳಿಗೆ ಹೋಗಲು ಸುಸಜ್ಜಿತ ರಸ್ತೆಗಳಿಲ್ಲ, ಲಿಫ್ಟ್‌ಗಳಿಲ್ಲ. ನೀವು ಕಲ್ಲು ಬಂಡೆಗಳ ಮೇಲೆ ಹತ್ತಿ, ಇಳಿದು, ನಿಸರ್ಗದ ಜತೆ ಸೆಣಸಾಡಿಯೇ ಅಲ್ಲಿಗೆ ತಲುಪಬೇಕು. ಈಜಾಡಲು ಕೃತಕ ಟೈಲ್ಸ್ ಹಾಕಿದ ಸ್ವಿಮ್ಮಿಂಗ್ ಪೂಲ್‌ಗಳ ಬದಲು, ಮೀನುಗಳು ಓಡಾಡುವ ನೈಸರ್ಗಿಕ ಹೊಂಡಗಳನ್ನೇ ಉಳಿಸಿಕೊಳ್ಳಲಾಗಿದೆ. ಪ್ರಕೃತಿಯ ಸ್ಪರ್ಶವನ್ನು ಹಾಗೆಯೇ ಉಳಿಸಿಕೊಂಡಿರುವುದರಿಂದಲೇ ಇಲ್ಲಿ ಸಿಗುವ ಅನುಭವ ದೈವಿಕ ಹಾಗೂ ಅನನ್ಯ.

ಮಸ್ಕತ್ ನಗರವನ್ನೊಮ್ಮೆ ಗಮನಿಸಿ. ಅಲ್ಲಿ ಎತ್ತರದ ಪರ್ವತಗಳಿವೆ. ಅಭಿವೃದ್ಧಿಯ ಹೆಸರಿನಲ್ಲಿ ಆ ಪರ್ವತಗಳನ್ನು ಸಿಡಿಸಿ, ನೆಲಸಮ ಮಾಡಿ, ಫ್ಲಾಟ್ ಆಗಿ ಪರಿವರ್ತಿಸಿ ಟೌನ್‌ಶಿಪ್‌ಗಳನ್ನು ಕಟ್ಟಬಹುದಿತ್ತು. ಆದರೆ ಒಮಾನ್ ಹಾಗೆ ಮಾಡಿಲ್ಲ. ಅವರು ಪರ್ವತಗಳಿಗೆ ಗೌರವ ಕೊಟ್ಟು, ಪರ್ವತಗಳ ಆಕಾರಕ್ಕೆ ತಕ್ಕಂತೆ ರಸ್ತೆಗಳನ್ನು ಮತ್ತು ಮನೆಗಳನ್ನು ನಿರ್ಮಿಸಿದ್ದಾರೆ. ಬಿಳಿ ಬಣ್ಣದ ಮನೆಗಳು ಕಂದು ಬಣ್ಣದ ಪರ್ವತಗಳ ಮಡಿಲಲ್ಲಿ ಕುಳಿತಂತೆ ಕಾಣುತ್ತವೆಯೇ ಹೊರತು, ಪರ್ವತವನ್ನು ಆಕ್ರಮಿಸಿದಂತೆ ಕಾಣುವುದಿಲ್ಲ.

ಇನ್ನೂ ಓದಿ: ಒಂದು ಫೊಟೋ ಹುಟ್ಟಿಸಿದ ಭೀತಿ

ಉತ್ತರದ 'ಮುಸಂದಮ್' ಪ್ರದೇಶದಲ್ಲಿ ಸಮುದ್ರವು ಪರ್ವತಗಳ ಒಳಗೆ ನುಗ್ಗಿ ಸೃಷ್ಟಿಸಿರುವ ಕೊಲ್ಲಿಗಳು (Fjords) ನಾರ್ವೆ ದೇಶವನ್ನು ನೆನಪಿಸುತ್ತವೆ. ಈ ಪ್ರದೇಶವು ಭೌಗೋಳಿಕ ವಿಸ್ಮಯವಾಗಿದೆ. ಸುಣ್ಣದ ಕಲ್ಲಿನ ಎತ್ತರದ ಪರ್ವತಗಳು ನೇರವಾಗಿ ಸಮುದ್ರಕ್ಕೆ ಇಳಿಯುವ ದೃಶ್ಯ ರೋಮಾಂಚಕ. ಇಲ್ಲಿ ಡಾಲ್ಫಿನ್‌ಗಳು ರಾಜಾರೋಷವಾಗಿ ಅಡ್ಡಾಡುತ್ತವೆ. ಸಮುದ್ರದ ನೀರನ್ನು ಕಲುಷಿತಗೊಳಿಸದಂತೆ ಇಲ್ಲಿನ ಮೀನುಗಾರರಿಗೆ ಮತ್ತು ಬೋಟ್ ಮಾಲೀಕರಿಗೆ ಕಠಿಣ ನಿಯಮಗಳಿವೆ. ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಇದನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಸಮುದ್ರ ಜೀವಿಗಳಿಗೆ ತೊಂದರೆಯಾಗದಂತೆ, ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳುವುದು ಇಲ್ಲಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ 'ಪ್ಲಾಸ್ಟಿಕ್ ಮುಕ್ತ' ಪರಿಸರವೇ ಇಲ್ಲಿನ ಡಾಲ್ಫಿನ್ ಮತ್ತು ಇತರೆ ಜಲಚರಗಳ ಸ್ವಚ್ಛಂದ ಜೀವನಕ್ಕೆ ಕಾರಣವಾಗಿದೆ.

ಒಮಾನ್‌ನಲ್ಲಿ ನೀವು ಗಮನಿಸಬಹುದಾದ ಇನ್ನೊಂದು ಸಂಗತಿ ಎಂದರೆ ಅಲ್ಲಿನ ಮೌನ. ದುಬೈ ನಗರಗಳಲ್ಲಿ ಯಂತ್ರಗಳ, ವಾಹನಗಳ ಸದ್ದು ಅಬ್ಬರಿಸುತ್ತಿದ್ದರೆ, ಒಮಾನ್‌ನ ಮರುಭೂಮಿಗಳಲ್ಲಿ ಮತ್ತು ಬೀಚ್‌ಗಳಲ್ಲಿ ನೀರವ ಮೌನವಿದೆ. 'ವಾಹಿಬಾ ಸ್ಯಾಂಡ್ಸ್' ಮರುಭೂಮಿಯಲ್ಲಿ ರಾತ್ರಿ ಮಲಗಿದರೆ, ಹುಲ್ಲುಕಡ್ಡಿ ಅಲುಗಾಡಿದ್ದರ ಸದ್ದು ಕೇಳಿಸುವಷ್ಟು ಶಾಂತಿ ಇರುತ್ತದೆ. ಈ ಶಾಂತಿಯೇ ಒಮಾನ್‌ನ ಆಸ್ತಿ. ಮೈಲುಗಟ್ಟಲೆ ಹಬ್ಬಿರುವ ಬಂಗಾರದ ಬಣ್ಣದ ಮರಳು ದಿಬ್ಬಗಳು ಹಗಲಿನಲ್ಲಿ ಎಷ್ಟು ಸುಂದರವೋ, ರಾತ್ರಿ ಅಷ್ಟೇ ನಿಗೂಢ ಮತ್ತು ಶಾಂತ.

ಒಮಾನ್ ಜಗತ್ತಿಗೆ ಕಲಿಸುತ್ತಿರುವ ಪಾಠವಿಷ್ಟೇ. ಹಣ ಸಂಪಾದಿಸಲು ಅಡ್ಡದಾರಿಗಳಿವೆ, ಪ್ರಕೃತಿಯನ್ನು ದೋಚಬಹುದು, ಕೃತಕ ದ್ವೀಪಗಳನ್ನು ಕಟ್ಟಬಹುದು. ಆದರೆ, ಒಮ್ಮೆ ಕಳೆದುಕೊಂಡ ನಿಸರ್ಗವನ್ನು ಮತ್ತೆ ಸೃಷ್ಟಿಸಲು ಯಾರಿಂದಲೂ ಸಾಧ್ಯವಿಲ್ಲ.

ಆಮೆಗಳು ಬಂದು ಮೊಟ್ಟೆ ಇಡುವ ಆ ದೃಶ್ಯ, ವಾಡಿಗಳ ತಣ್ಣನೆಯ ನೀರು, ಮತ್ತು ಮಲಿನವಾಗದ ಗಾಳಿ - ಇವುಗಳಿಗೆ ಯಾವ ಕ್ರೆಡಿಟ್ ಕಾರ್ಡ್‌ನಿಂದಲೂ ಬೆಲೆ ಕಟ್ಟಲಾಗದು. ಅಭಿವೃದ್ಧಿ ಎಂದರೆ ಕಾಂಕ್ರೀಟ್ ಕಾಡು ನಿರ್ಮಿಸುವುದಲ್ಲ, ಪ್ರಕೃತಿಯ ಮಡಿಲಲ್ಲಿ ಮಗುವಿನಂತೆ ಬದುಕುವುದು ಎಂಬುದನ್ನು ಒಮಾನ್ ತೋರಿಸಿಕೊಟ್ಟಿದೆ. ಅಲ್ಲಿ ಪ್ರಕೃತಿಯೇ ನಿಜವಾದ ದೇವರು, ಮತ್ತು ಆ ದೇವರನ್ನು ಅವರು ಅತ್ಯಂತ ಭಕ್ತಿಯಿಂದ ಕಾಪಾಡಿಕೊಳ್ಳುತ್ತಿದ್ದಾರೆ.