ಮೊನ್ನೆ ಚಿಕ್ಕಮಗಳೂರಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಮತ್ತು ಚಿಕ್ಕಮಗಳೂರು ರೆಸಾರ್ಟ್ ಮಾಲೀಕರ ಸಂಘ ಜಂಟಿಯಾಗಿ ಮೂರು ದಿನಗಳ ಕಾಲ `ಡಿಸ್ಕವರ್ ಚಿಕ್ಕಮಗಳೂರು’ ಎಂಬ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಚಿಕ್ಕಮಗಳೂರಿನ ಪ್ರವಾಸೋದ್ಯಮ, ಪ್ರಕೃತಿ ಸಂಪತ್ತು, ಕಾಫಿ ಸಂಸ್ಕೃತಿ ಹಾಗೂ ಆತಿಥ್ಯ ಕ್ಷೇತ್ರದ ಸಾಮರ್ಥ್ಯವನ್ನು ದೇಶದ ಮುಂದೆ ಪರಿಚಯಿಸುವುದು ಉದ್ದೇಶ. ಈ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡು ಆಶಯ ಭಾಷಣ ಮಾಡಿದೆ. ಚಿಕ್ಕಮಗಳೂರು ನಿಜಕ್ಕೂ ಕರ್ನಾಟಕದಲ್ಲಿ ಮಾತ್ರ ಅಲ್ಲ, ದಕ್ಷಿಣ ಭಾರತದಲ್ಲಿಯೇ ಒಂದು ಅಪರೂಪದ ಮತ್ತು ಪರಿಪೂರ್ಣ ಪ್ರವಾಸಿ ತಾಣಗಳನ್ನೊಳಗೊಂಡ ಜಿಲ್ಲೆ.

ಇದನ್ನೂ ಓದಿ: ಪ್ರಕೃತಿಯನ್ನು ಸಂರಕ್ಷಿಸಿ ಪ್ರವಾಸೋದ್ಯಮ ಬೆಳೆಸಿದ ಸೆಬು ಮಾಡೆಲ್

ಒಬ್ಬ ಪ್ರವಾಸ ಪ್ರೇಮಿಯಾಗಿ ಮತ್ತು ಈ ಮಣ್ಣಿನ ಹೆಮ್ಮೆಯ ನಾಗರಿಕನಾಗಿ ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ - ‘ಚಿಕ್ಕಮಗಳೂರು ಕೇವಲ ಕರ್ನಾಟಕದ ಹೆಮ್ಮೆಯಲ್ಲ, ಇಡೀ ದಕ್ಷಿಣ ಭಾರತದಲ್ಲೇ ಅತ್ಯಂತ ಅಪರೂಪದ ಮತ್ತು ಪರಿಪೂರ್ಣ ಪ್ರವಾಸಿ ತಾಣಗಳನ್ನೊಳಗೊಂಡ ಜಿಲ್ಲೆಗಳಲ್ಲೊಂದು. ಇಲ್ಲಿ ಪ್ರಕೃತಿಯು ತನ್ನೆಲ್ಲ ಸೌಂದರ್ಯ, ರಹಸ್ಯ ಮತ್ತು ಬೆರಗುಗಳನ್ನು ಧಾರೆ ಎರೆದಿದೆ. ಚಿಕ್ಕಮಗಳೂರು ಜಿಲ್ಲೆಯ ಭೌಗೋಳಿಕ ವಿನ್ಯಾಸವೇ ಒಂದು ನಿಸರ್ಗದ ಅದ್ಭುತ. ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಹೃದಯಭಾಗದಲ್ಲಿ ನೆಲೆಸಿರುವ ಈ ಜಿಲ್ಲೆಯು ಜಾಗತಿಕ ಮಟ್ಟದ ಜೀವವೈವಿಧ್ಯದ ತಾಣವಾಗಿದೆ. ನಾವು ಹಿಮದ ಸೌಂದರ್ಯವನ್ನು ಸವಿಯಲು ಉತ್ತರ ಭಾರತದ ಕಾಶ್ಮೀರ, ಶಿಮ್ಲಾ ಅಥವಾ ಹಿಮಾಚಲ ಪ್ರದೇಶಕ್ಕೆ ಹೋಗುತ್ತೇವೆ ನಿಜ. ಆದರೆ, ಹಿಮಪಾತ ಒಂದನ್ನು ಹೊರತುಪಡಿಸಿದರೆ, ಪ್ರಕೃತಿಯು ತನ್ನೆಲ್ಲ ರೌದ್ರ, ಶಾಂತ, ಸುಂದರ ಮತ್ತು ಅದ್ಭುತ ಆಯಾಮಗಳನ್ನು ಚಿಕ್ಕಮಗಳೂರಿನ ಈ ಮಣ್ಣಿನಲ್ಲಿ ಸೃಷ್ಟಿಸಿದೆ. ನಿತ್ಯಹರಿದ್ವರ್ಣದ ಕಾಡುಗಳು, ಮಂಜಿನ ಮುಸುಕು, ಎತ್ತರದ ಶಿಖರಗಳು ಮತ್ತು ಸದಾ ಹರಿಯುವ ನದಿಗಳು ಇಲ್ಲಿನ ಭೌಗೋಳಿಕ ವೈವಿಧ್ಯಕ್ಕೆ ಸಾಕ್ಷಿಯಾಗಿವೆ. ವರ್ಷವಿಡೀ ಆಹ್ಲಾದಕರ ವಾತಾವರಣ.

Untitled design (84)

ಚಿಕ್ಕಮಗಳೂರಿನ ಕಿರೀಟ ಪ್ರಾಯವಾಗಿ ನಿಂತಿರುವುದು ಇಲ್ಲಿನ ಆಕಾಶದೆತ್ತರದ ಗಿರಿಶ್ರೇಣಿಗಳು. ಪ್ರಕೃತಿಯ ಭವ್ಯತೆಯನ್ನು ಎತ್ತರದಿಂದ ನೋಡಬಯಸುವ ಚಾರಣಿಗರಿಗೆ ಮತ್ತು ಪ್ರವಾಸಿಗರಿಗೆ ಇದು ನೆಚ್ಚಿನ ತಾಣ. ಮುಳ್ಳಯ್ಯನಗಿರಿಯಂತೂ ಕರ್ನಾಟಕದ ಅತ್ಯಂತ ಎತ್ತರದ ಶಿಖರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಸಮುದ್ರ ಮಟ್ಟದಿಂದ 1930 ಮೀಟರ್ ಎತ್ತರದಲ್ಲಿದೆ. ಇಲ್ಲಿನ ತಂಗಾಳಿ ಮತ್ತು ಬೆಟ್ಟವನ್ನು ಮುಚ್ಚುವ ಮಂಜಿನ ಪದರಗಳು ಪ್ರವಾಸಿಗರಿಗೆ ಸ್ವರ್ಗದ ಅನುಭೂತಿ ನೀಡುತ್ತವೆ. ಅರ್ಧಚಂದ್ರಾಕಾರದಲ್ಲಿ ಹರಡಿರುವ ಬಾಬಾಬುಡನ್‌ಗಿರಿ (ಚಂದ್ರದ್ರೋಣ ಪರ್ವತ) ಗಿರಿಶ್ರೇಣಿಯು ಧಾರ್ಮಿಕ ಮತ್ತು ನೈಸರ್ಗಿಕ ಪ್ರಾಮುಖ್ಯವನ್ನು ಹೊಂದಿದೆ. ಇಲ್ಲಿನ ವಿಶಿಷ್ಟ ಹವಾಮಾನ ಮತ್ತು ಕಡಿದಾದ ರಸ್ತೆಗಳು ಸಾಹಸಿಗರನ್ನು ಆಕರ್ಷಿಸುತ್ತವೆ. ಕುದುರೆಯ ಮುಖದ ಆಕಾರವನ್ನು ಹೋಲುವ ಈ ರಾಷ್ಟ್ರೀಯ ಉದ್ಯಾನವನ ಪ್ರದೇಶವು ದಟ್ಟವಾದ ಶೋಲಾ ಅರಣ್ಯ ಮತ್ತು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ರಾಜಮನೆತನದ ಇತಿಹಾಸವಿರುವ ಕೆಮ್ಮಣ್ಣುಗುಂಡಿ ಗಿರಿಧಾಮವು ಸುಂದರವಾದ ಉದ್ಯಾನವನಗಳು, ಗುಲಾಬಿ ತೋಟಗಳು ಮತ್ತು ಸೂರ್ಯಾಸ್ತದ ಅದ್ಭುತ ದೃಶ್ಯಗಳಿಗೆ ಹೆಸರಾಗಿದೆ.

ದಟ್ಟವಾದ ಬೆಟ್ಟಗಳ ನಡುವಿನಿಂದ ಹಾಲಿನ ನೊರೆಯಂತೆ ಧುಮುಕುವ ಜಲಪಾತಗಳು ಚಿಕ್ಕಮಗಳೂರಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಪ್ರತಿಯೊಂದು ಜಲಪಾತವೂ ತನ್ನದೇ ಆದ ವಿಶಿಷ್ಟ ಹಿನ್ನೆಲೆ ಮತ್ತು ಸೌಂದರ್ಯವನ್ನು ಹೊಂದಿದೆ. ಕೆಮ್ಮಣ್ಣುಗುಂಡಿ ಬಳಿ ಇರುವ ಹೆಬ್ಬೆ ಜಲಪಾತವು ಎರಡು ಹಂತಗಳಲ್ಲಿ (250 ಅಡಿ) ಮತ್ತು (200 ಅಡಿ) ಧುಮುಕುತ್ತವೆ. ಇಲ್ಲಿನ ನೀರು ಗಿಡಮೂಲಿಕೆಗಳ ಗುಣವನ್ನು ಮತ್ತು ಔಷಧೀಯ ಶಕ್ತಿ ಹೊಂದಿದೆ ಎಂದು ನಂಬಲಾಗಿದೆ. ಬಾಬಾಬುಡನ್‌ಗಿರಿ ಬಳಿ ಇರುವ ಮಾಣಿಕ್ಯಧಾರಾ ಜಲಪಾತದ ನೀರು ಮುತ್ತಿನ ಹನಿಗಳಂತೆ ಬೀಳುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದೊಂದು ಪವಿತ್ರ ತಾಣವೂ ಹೌದು. ಕಲ್ಲಿನ ಕೆತ್ತನೆಗಳ ದೇವಸ್ಥಾನದ ಮೇಲಿಂದ ಹರಿಯುವ ಕಲ್ಹತ್ತಿಗಿರಿ ಜಲಪಾತ ಇತಿಹಾಸ ಮತ್ತು ಪ್ರಕೃತಿಯ ಸಂಗಮ. ಕೆಮ್ಮಣ್ಣುಗುಂಡಿಯ ಹಾದಿಯಲ್ಲಿ ಸಿಗುವ ಶಾಂತಿ ಜಲಪಾತ ಮನಸಿಗೆ ನೆಮ್ಮದಿ ನೀಡುತ್ತದೆ. ಶೃಂಗೇರಿಯ ಸಮೀಪವಿರುವ ಈ ಜಲಪಾತವು ಅತ್ಯಂತ ಸುರಕ್ಷಿತ ಮತ್ತು ಸುಲಭವಾಗಿ ತಲುಪಬಹುದಾದ ಸುಂದರ ಜಲಧಾರೆ.

ಚಿಕ್ಕಮಗಳೂರು ಕೇವಲ ಪ್ರವಾಸಿ ತಾಣವಲ್ಲ, ಇಡೀ ಕರ್ನಾಟಕ ಮತ್ತು ಆಂಧ್ರಪ್ರದೇಶದ ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸುವ ನದಿಗಳ ತಾಯಿ. ಕುದುರೆಮುಖದ ಗಂಗಾಮೂಲ ಎಂಬ ಪವಿತ್ರ ಸ್ಥಳದಲ್ಲಿ ತುಂಗಾ ಮತ್ತು ಭದ್ರಾ ನದಿಗಳು ಉಗಮಿಸುತ್ತವೆ. ಇವು ಪಶ್ಚಿಮ ಘಟ್ಟಗಳ ಹಸಿರು ಕಣಿವೆಗಳ ಮೂಲಕ ಹರಿದು, ಮುಂದೆ ಶಿವಮೊಗ್ಗದ ಹತ್ತಿರ 'ಕೂಡ್ಲಿ' ಎಂಬಲ್ಲಿ ಒಂದಾಗಿ 'ತುಂಗಭದ್ರಾ' ನದಿಯಾಗಿ ರೂಪಾಂತರಗೊಳ್ಳುತ್ತವೆ. ಈ ನದಿಗಳ ಜಲಾನಯನ ಪ್ರದೇಶವು ಜಿಲ್ಲೆಯಾದ್ಯಂತ ದಟ್ಟವಾದ ಕಾಡುಗಳು, ಅಪರೂಪದ ಸಸ್ಯಸಂಪತ್ತು ಮತ್ತು ವೈವಿಧ್ಯಮಯ ಪ್ರಾಣಿ ಸಂಕುಲವನ್ನು (ಭದ್ರಾ ವನ್ಯಜೀವಿ ಅಭಯಾರಣ್ಯ) ಪೋಷಿಸುತ್ತಿದೆ. ಈ ನದಿಗಳು ಹರಿಯುವ ಹಾದಿಯುದ್ದಕ್ಕೂ ಇರುವ ಹಸಿರು, ಜಿಲ್ಲೆಯನ್ನು ಸದಾ ಜೀವಂತವಾಗಿ ಮತ್ತು ತಂಪಾಗಿಟ್ಟಿದೆ. ಚಿಕ್ಕಮಗಳೂರಿನ ಭೌಗೋಳಿಕ ವಿನ್ಯಾಸವು ಪ್ರಕೃತಿ ಪ್ರೇಮಿಗಳಿಗೆ ಒಂದು ಸಂಪೂರ್ಣ ಪ್ಯಾಕೇಜ್. ಇಲ್ಲಿನ ಎತ್ತರದ ಶಿಖರಗಳು ಸಾಹಸವನ್ನೂ, ಜಲಪಾತಗಳು ತಂಪನ್ನೂ ಮತ್ತು ನದಿಗಳ ಉಗಮ ಸ್ಥಾನಗಳು ಆಧ್ಯಾತ್ಮಿಕ ಹಾಗೂ ನೈಸರ್ಗಿಕ ಶ್ರೀಮಂತಿಕೆಯನ್ನೂ ಒಟ್ಟಿಗೇ ನೀಡುತ್ತವೆ. ಪ್ರಕೃತಿಯ ಇಷ್ಟೆಲ್ಲ ಆಯಾಮಗಳು ಒಂದೇ ಜಿಲ್ಲೆಯಲ್ಲಿ ಸಿಗುವುದು ನಿಜಕ್ಕೂ ದಕ್ಷಿಣ ಭಾರತದ ಹೆಮ್ಮೆಯೇ.

ಯಾವುದೇ ಒಂದು ಪ್ರವಾಸಿ ತಾಣ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾದರೆ ಅಲ್ಲಿ ಕೇವಲ ಸುಂದರವಾದ ಬೆಟ್ಟ-ಗುಡ್ಡಗಳಿದ್ದರಷ್ಟೇ ಸಾಲದು. ಅದರ ಹಿಂದೆ ಜನರನ್ನು ಮಂತ್ರಮುಗ್ಧರನ್ನಾಗಿಸುವ, ಅವರ ಕಲ್ಪನಾ ಲೋಕವನ್ನು ಬಡಿದೆಬ್ಬಿಸುವ ಒಂದು ಸ್ವಾರಸ್ಯಕರ ಕಥೆಯಿರಬೇಕು. ಕಥೆ ಹೇಳುವ ಕಲೆಗೆ (Storytelling) ಜಗತ್ತಿನ ಯಾವುದೇ ತಾಣವನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿ ಬದಲಾಯಿಸುವ ಅದ್ಭುತ ಶಕ್ತಿಯಿದೆ. ಪ್ರವಾಸಿಗರು ಕೇವಲ ಸ್ಥಳಗಳನ್ನು ನೋಡುವುದಿಲ್ಲ, ಅವರು ಆ ಸ್ಥಳದ ಹಿಂದಿರುವ ಇತಿಹಾಸ ಮತ್ತು ಭಾವನೆಗಳನ್ನು ಅನುಭವಿಸಲು ಬಯಸುತ್ತಾರೆ. ಅಂಥ ಒಂದು ಜಗತ್ಪ್ರಸಿದ್ಧ, ರೋಮಾಂಚನಕಾರಿ ಮತ್ತು ಸ್ವಾರಸ್ಯಕರ ಕಥೆ ಚಿಕ್ಕಮಗಳೂರಿಗಿದೆ. ಅದುವೇ ‘ಭಾರತದ ಕಾಫಿ ಉಗಮದ ಕಥೆ’.

ಈ ಕಥೆ ಆರಂಭವಾಗುವುದು ಹದಿನೇಳನೆಯ ಶತಮಾನದಲ್ಲಿ (1670). ಆಗಿನ ಕಾಲದಲ್ಲಿ ಕಾಫಿ ಎಂಬುದು ಜಗತ್ತಿನ ಅತ್ಯಂತ ಅಮೂಲ್ಯ ಮತ್ತು ರಹಸ್ಯ ಪೇಯವಾಗಿತ್ತು. ಅರೇಬಿಯಾ ಮತ್ತು ಯೆಮೆನ್ ದೇಶಗಳು ಕಾಫಿ ಉದ್ಯಮದ ಮೇಲೆ ಸಂಪೂರ್ಣ ಏಕಸ್ವಾಮ್ಯ ಹೊಂದಿದ್ದವು. ಯಾವುದೇ ವ್ಯಕ್ತಿ ದೇಶದಿಂದ ಹೊರಗೆ ಹಸಿ ಕಾಫಿ ಬೀಜಗಳನ್ನು ಅಥವಾ ಸಸ್ಯಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಬ್ರಾಂಡಿಂಗ್ ಮತ್ತು ವ್ಯಾಪಾರದ ರಹಸ್ಯವನ್ನು ಕಾಪಾಡಿಕೊಳ್ಳಲು ಅವರು ಕೇವಲ ಹುರಿದ ಕಾಫಿ ಬೀಜಗಳನ್ನು ಮಾತ್ರ ರಫ್ತು ಮಾಡುತ್ತಿದ್ದರು. ಇಂಥ ಸಮಯದಲ್ಲಿ, ಭಾರತದ ಸೂಫಿ ಸಂತರಾದ ಬಾಬಾ ಬುಡನ್ ಅವರು ಮೆಕ್ಕಾಗೆ ಹಜ್ ಯಾತ್ರೆ ಕೈಗೊಂಡರು. ವಾಪಸ್ ಬರುವಾಗ ಯೆಮೆನ್‌ನ ‘ಮೊಖಾ’ ಎಂಬ ಬಂದರು ನಗರದ ಮೂಲಕ ಹಾದುಹೋಗುವಾಗ ಅವರಿಗೆ ಕಾಫಿ ಎಂಬ ವಿಶಿಷ್ಟ ಪೇಯದ ಪರಿಚಯವಾಯಿತು. ಅದರ ಸ್ವಾದ ಮತ್ತು ಉತ್ತೇಜನಕಾರಿ ಗುಣಕ್ಕೆ ಮಾರುಹೋದ ಅವರು, ಇದನ್ನು ತನ್ನ ದೇಶದ ಜನರಿಗೂ ಪರಿಚಯಿಸಬೇಕೆಂದು ಸಂಕಲ್ಪ ಮಾಡಿದರು. ಕಟ್ಟುನಿಟ್ಟಾದ ಭದ್ರತಾ ತಪಾಸಣೆಯ ನಡುವೆಯೂ, ಅವರು ಅರೇಬಿಯನ್ ಕಾವಲುಗಾರರ ಕಣ್ಣು ತಪ್ಪಿಸಿ ಏಳು ಹಸಿ ಕಾಫಿ ಬೀಜಗಳನ್ನು ತಮ್ಮ ಗಡ್ಡದಲ್ಲಿ ಮತ್ತು ಸೊಂಟದ ಪಟ್ಟಿಯಲ್ಲಿ ಬಚ್ಚಿಟ್ಟುಕೊಂಡು ಭಾರತಕ್ಕೆ ತಂದರು. ಸೂಫಿ ಸಂಸ್ಕೃತಿಯಲ್ಲಿ ‘ಏಳು’ ಎಂಬ ಸಂಖ್ಯೆಯನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಹೀಗೆ ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಬಂದ ಆ ಏಳು ಬೀಜಗಳನ್ನು ಬಾಬಾ ಬುಡನ್ ಅವರು ಚಿಕ್ಕಮಗಳೂರಿನ ಇಂದಿನ ಬಾಬಾಬುಡನ್‌ಗಿರಿ (ಅಂದಿನ ಚಂದ್ರದ್ರೋಣ ಪರ್ವತ ಶ್ರೇಣಿ)ಯ ತಮ್ಮ ಆಶ್ರಮದ ಮುಂಭಾಗದ ಮಣ್ಣಿನಲ್ಲಿ ಬಿತ್ತಿದರು.

ಬಾಬಾ ಬುಡನ್ ಬಿತ್ತಿದ ಆ ಏಳು ಬೀಜಗಳು ಚಿಕ್ಕಮಗಳೂರಿನ ಫಲವತ್ತಾದ ಮಣ್ಣು, ಪಶ್ಚಿಮ ಘಟ್ಟಗಳ ಹವಾಮಾನ ಮತ್ತು ನೆರಳಿನ ಆಶ್ರಯದಲ್ಲಿ ಅದ್ಭುತವಾಗಿ ಚಿಗುರಿದವು. ನಂತರ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇದು ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟು, ಇಂದು ಭಾರತವನ್ನು ಜಗತ್ತಿನ ಪ್ರಮುಖ ಕಾಫಿ ರಫ್ತು ದೇಶಗಳ ಸಾಲಿನಲ್ಲಿ ನಿಲ್ಲಿಸಿದೆ. ಇಂದು ಚಿಕ್ಕಮಗಳೂರಿನಲ್ಲಿ ಕಾಫಿ ಎಂಬುದು ಕೇವಲ ಒಂದು ಕೃಷಿ ಬೆಳೆಯಾಗಿ ಉಳಿದಿಲ್ಲ. ಅದು ಇಲ್ಲಿನ ಜನರ ರಕ್ತದಲ್ಲಿ ಹರಿಯುವ ಸಂಸ್ಕೃತಿ ಮತ್ತು ಜೀವನಶೈಲಿಯಾಗಿದೆ. ಇಲ್ಲಿ ಬೆಳಗು ಆರಂಭವಾಗುವುದೇ ಬಿಸಿಬಿಸಿ ಫಿಲ್ಟರ್ ಕಾಫಿಯ ಸುವಾಸನೆಯೊಂದಿಗೆ. ಒಂದು ಕಪ್ ಕಾಫಿ ಹೀರುವುದೆಂದರೆ, ಐನೂರು ವರ್ಷಗಳ ಇತಿಹಾಸ ಮತ್ತು ಭವ್ಯ ಪರಂಪರೆಯ ಬಿಸಿ ರುಚಿಯನ್ನು ಹೀರಿದಂತೆ. ತೋಟದ ಕಾರ್ಮಿಕರಿಂದ ಹಿಡಿದು ದೊಡ್ಡ ಎಸ್ಟೇಟ್ ಮಾಲೀಕರವರೆಗೆ ಎಲ್ಲರ ಬದುಕೂ ಕಾಫಿ ಗಿಡಗಳ ಸುತ್ತಲೇ ಹೆಣೆಯಲ್ಪಟ್ಟಿದೆ. ಬಾಬಾ ಬುಡನ್ ಅವರ ಈ ಕಥೆಯನ್ನೇ ಮುಖ್ಯವಾಗಿಸಿಕೊಂಡು ಇಂದು ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಹೊಸ ಎತ್ತರಕ್ಕೆ ಬೆಳೆದಿದೆ. ವಿಶಾಲವಾದ ಕಾಫಿ ತೋಟಗಳ ಮಧ್ಯೆ ಇರುವ ‘ಹೋಮ್‌ಸ್ಟೇ’ಗಳಲ್ಲಿ ಉಳಿದುಕೊಳ್ಳುವುದು, ಕಾಫಿ ಹೂ ಬಿಡುವ ಕಾಲದ ಸುಗಂಧ ಸವಿಯುವುದು ಮತ್ತು ಕಾಫಿ ಕಂಪು ಸವಿಯುತ್ತಾ ಹರಟೆ ಹೊಡೆಯುವುದು ಪ್ರವಾಸಿಗರಿಗೆ ಕೇವಲ ಪ್ರವಾಸವಲ್ಲ, ಅದೊಂದು ಜೀವನದ ಮರೆಯಲಾಗದ ಅನುಭವ.

ಯಾವಾಗ ಒಬ್ಬ ಗೈಡ್ ಅಥವಾ ಹೋಮ್‌ಸ್ಟೇ ಮಾಲೀಕ ಪ್ರವಾಸಿಗರಿಗೆ ಬಾಬಾ ಬುಡನ್ ಅವರ ಸಾಹಸಮಯ ಕಥೆಯನ್ನು ಹೇಳುತ್ತಾರೋ, ಆಗ ಪ್ರವಾಸಿಗರು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಅವರು ಕೇವಲ ಹಸಿರು ಗಿಡಗಳನ್ನು ನೋಡುವುದಿಲ್ಲ, ಆ ಗಿಡಗಳ ಹಿಂದೆ ಇರುವ ಐನೂರು ವರ್ಷಗಳ ಇತಿಹಾಸ ಮತ್ತು ಸಂತರೊಬ್ಬರ ದಿವ್ಯ ಸಂಕಲ್ಪವನ್ನು ಕಾಣುತ್ತಾರೆ. ಇದೇ ಕಥೆ ಹೇಳುವ ಕಲೆಯ ಶಕ್ತಿ. ಈ ಅಪೂರ್ವ ಕಥೆಯೇ ಚಿಕ್ಕಮಗಳೂರನ್ನು ಜಗತ್ತಿನ ಪ್ರವಾಸಿ ನಕಾಶೆಯಲ್ಲಿ ಸದಾ ಮಿನುಗುವಂತೆ ಮಾಡುತ್ತದೆ.

ಯಾವುದೇ ಒಂದು ಪ್ರವಾಸಿ ತಾಣ ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಬೇಕಾದರೆ ಅಲ್ಲಿನ ನಿಸರ್ಗ ಸೌಂದರ್ಯದಷ್ಟೇ ಪ್ರಮುಖ ಪಾತ್ರ ವಹಿಸುವುದು ಅಲ್ಲಿನ ಆತಿಥ್ಯ ಕ್ಷೇತ್ರ. ಚಿಕ್ಕಮಗಳೂರು ಇಂದು ದೇಶಾದ್ಯಂತ ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮಲು ಇಲ್ಲಿನ ಅತ್ಯುನ್ನತ ಮತ್ತು ಸಹೃದಯಿ ಆತಿಥ್ಯ ಸಂಸ್ಕೃತಿಯೇ ಮುಖ್ಯ ಕಾರಣ. ಚಿಕ್ಕಮಗಳೂರಿನ ಜನ ಸೌಮ್ಯ ಸ್ವಭಾವಕ್ಕೆ ಮತ್ತು ‘ಅತಿಥಿ ದೇವೋ ಭವ’ ಪರಂಪರೆಗೆ ಪ್ರಸಿದ್ಧರು.

ಬಜೆಟ್ ಸ್ನೇಹಿ ವಸತಿಗಳಿಂದ ಹಿಡಿದು ಪಂಚತಾರಾ ಸೌಲಭ್ಯದ ಅತ್ಯಾಧುನಿಕ ಐಷಾರಾಮಿ ರೆಸಾರ್ಟ್‌ಗಳವರೆಗೆ ಎಲ್ಲವೂ ಚಿಕ್ಕಮಗಳೂರಿನಲ್ಲಿ ಲಭ್ಯವಿವೆ. ಅದರಲ್ಲೂ ವಿಶೇಷವಾಗಿ, ವಿಶಾಲವಾದ ಕಾಫಿ ತೋಟಗಳ ಮಧ್ಯೆ ಇರುವ ಹಳೆಯ ಶೈಲಿಯ ಎಸ್ಟೇಟ್ ಮನೆಗಳಲ್ಲಿ ಉಳಿದುಕೊಳ್ಳುವುದು ಹಾಗೂ ಪ್ರಕೃತಿಯನ್ನು ಸವಿಯುವ ‘ಹೋಮ್‌ಸ್ಟೇ’ ಪರಿಕಲ್ಪನೆ ಇಲ್ಲಿ ಅತ್ಯಂತ ಯಶಸ್ವಿಯಾಗಿದೆ. ಇದು ಪ್ರವಾಸಿಗರಿಗೆ ಕೃಷಿ ಬದುಕಿನ ಹತ್ತಿರದ ಅನುಭವ ನೀಡುವುದಲ್ಲದೇ, ಸ್ಥಳೀಯ ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿಗೂ ಭಾರಿ ಕೊಡುಗೆ ನೀಡಿದೆ. ಇದಲ್ಲದೇ, ಸ್ಥಳೀಯ ರೆಸಾರ್ಟ್ ಮಾಲೀಕರ ಸಂಘವು ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳಲು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪ್ಲಾಸ್ಟಿಕ್ ಬಳಕೆ ಕಡಿತ, ತ್ಯಾಜ್ಯ ನಿರ್ವಹಣೆ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಪ್ರವಾಸೋದ್ಯಮವನ್ನು ಬೆಳೆಸುತ್ತಿರುವುದು ಚಿಕ್ಕಮಗಳೂರಿನ ಆತಿಥ್ಯ ಕ್ಷೇತ್ರವನ್ನು ದೇಶದಲ್ಲೇ ವಿಭಿನ್ನವಾಗಿಸಿದೆ.

ಜಿಲ್ಲೆಯು ಕೇವಲ ನಿಸರ್ಗ ಸೌಂದರ್ಯಕ್ಕೆ ಮಾತ್ರವಲ್ಲ, ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವಕ್ಕೂ ಅಷ್ಟೇ ಪ್ರಸಿದ್ಧಿಯಾಗಿದೆ. ಪ್ರಕೃತಿಯ ಒಡಲಿನಲ್ಲಿ ಅಡಗಿರುವ ಪ್ರಮುಖ ಸಾಂಸ್ಕೃತಿಕ ಆಯಾಮಗಳ ಆಕರ್ಷಣೆಯೇ ಇನ್ನೊಂದು. ಜಗದ್ಗುರು ಆದಿ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ಆಮ್ನಾಯ ಪೀಠಗಳಲ್ಲಿ ಮೊದಲನೆಯದು ಶೃಂಗೇರಿ. ಪವಿತ್ರ ತುಂಗಾ ನದಿಯ ದಂಡೆಯ ಮೇಲಿರುವ ಈ ಕ್ಷೇತ್ರವು ಭಕ್ತರಿಗೆ ದೊಡ್ಡ ಆಕರ್ಷಣೆ. ಇಲ್ಲಿನ ವಿದ್ಯಾಶಂಕರ ದೇವಾಲಯದ ಖಗೋಳಶಾಸ್ತ್ರ ಆಧಾರಿತ ಜ್ಯೋತಿರ್ಲಿಂಗ ಕಂಬಗಳು ಮತ್ತು ಅಮೋಘ ಶಿಲ್ಪಕಲೆ ವಾಸ್ತುಶಿಲ್ಪದ ಅದ್ಭುತವಾಗಿದೆ. ಇಡೀ ದಕ್ಷಿಣ ಭಾರತವನ್ನಾಳಿದ ಭವ್ಯ ಹೊಯ್ಸಳ ಸಾಮ್ರಾಜ್ಯದ ಉಗಮ ಸ್ಥಾನವಾದ 'ಸೊಸೆಯೂರು' (ಇಂದಿನ ಮೂಡಿಗೆರೆಯ ಅಂಗಡಿ ಗ್ರಾಮ) ಈ ಜಿಲ್ಲೆಯಲ್ಲಿದೆ. ಇನ್ನು ತರೀಕೆರೆ ತಾಲ್ಲೂಕಿನ ಅಮೃತಪುರದಲ್ಲಿರುವ ಅಮೃತೇಶ್ವರ ದೇವಾಲಯವು ಹೊಯ್ಸಳರ ಸೂಕ್ಷ್ಮ ಕೆತ್ತನೆ ಹಾಗೂ ಭವ್ಯ ವಾಸ್ತುಶಿಲ್ಪಕ್ಕೆ ಜೀವಂತ ಸಾಕ್ಷಿಯಾಗಿದೆ. ಇಲ್ಲಿನ ಬಾಬಾಬುಡನ್‌ಗಿರಿ ಅಥವಾ ದತ್ತಾತ್ರೇಯ ಪೀಠವು ಶತಮಾನಗಳಿಂದಲೂ ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮದವರ ಪವಿತ್ರ ಆರಾಧನಾ ಕೇಂದ್ರವಾಗಿದೆ. ಸೂಫಿ ಸಂತ ಬಾಬಾ ಬುಡನ್ ಮತ್ತು ಗುರು ದತ್ತಾತ್ರೇಯರ ಆರಾಧನೆಯ ಮೂಲಕ ಈ ಕ್ಷೇತ್ರವು ಭಾವೈಕ್ಯ ಹಾಗೂ ಕೋಮು ಸೌಹಾರ್ದದ ಪ್ರತೀಕವಾಗಿ ದೇಶಕ್ಕೆ ವಿಶಿಷ್ಟ ಸಂದೇಶ ಸಾರುತ್ತದೆ.

ಇನ್ನು ಚಿಕ್ಕಮಗಳೂರಿಗೆ ಬೆಂಗಳೂರಿನಿಂದ ಮತ್ತು ಮಂಗಳೂರಿನಿಂದ ಉತ್ತಮ ಕನೆಕ್ಟಿವಿಟಿಯಿದೆ. ಬೆಂಗಳೂರಿನಿಂದ ನಾಲ್ಕೂವರೆ ಗಂಟೆ ಪ್ರಯಾಣ. ಮಂಗಳೂರಿನಿಂದ ಚಿಕ್ಕಮಗಳೂರಿಗೂ ನಾಲ್ಕೂವರೆ ಗಂಟೆ ಪಯಣ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಳಿದು ಬಂದರೆ ಎರಡೂವರೆ ಗಂಟೆ ಪಯಣ. ಬೆಂಗಳೂರಿನಿಂದ ಬರುವಾಗ ವಿಶ್ವವಿಖ್ಯಾತ ಶ್ರವಣಬೆಳಗೊಳ, ಬೇಲೂರು, ಹಳೇಬೀಡನ್ನು ನೋಡಿಕೊಂಡು ಬರಬಹುದು. ಚಿಕ್ಕಮಗಳೂರಿಗೆ ತಾಕಿಕೊಂಡು ಹೊರನಾಡು, ಕಳಸ, ಧರ್ಮಸ್ಥಳ, ದೇವೀರಮ್ಮ, ಖಾಂಡ್ಯ ಮಾರ್ಕಂಡೇಶ್ವರ, ಯೋಗನರಸಿಂಹ, ಬೆಳವಾಡಿ, ಕೋದಂಡರಾಮಸ್ವಾಮಿ, ಹಿರೇನಲ್ಲೂರು ಮಲ್ಲಿಕಾರ್ಜುನ, ರಂಭಾಪುರಿ.. ಹೀಗೆ ಅನೇಕ ದೇವಸ್ಥಾನ ಮತ್ತು ಧಾರ್ಮಿಕ ಕ್ಷೇತ್ರಗಳಿಗೂ ಹೋಗಬಹುದು.

ವಿದೇಶಗಳಲ್ಲಿ ದಶಕಗಳಿಂದಲೂ ಭಾರಿ ಜನಪ್ರಿಯವಾಗಿರುವ ‘ವೈನ್ ಟೂರಿಸಂ’ ಮಾದರಿಯಲ್ಲೇ ಚಿಕ್ಕಮಗಳೂರಿನಲ್ಲಿ ‘ಕಾಫಿ ಟೂರಿಸಂ’ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಅಗಾಧ ಸಾಧ್ಯತೆಗಳಿವೆ. ವೈನ್ ಪ್ರಿಯರು ದ್ರಾಕ್ಷಿ ತೋಟಗಳಿಗೆ ಭೇಟಿ ನೀಡುವಂತೆ, ಕಾಫಿ ಪ್ರೇಮಿಗಳನ್ನು ಕಾಫಿ ನಾಡಿನತ್ತ ಸೆಳೆಯಬಹುದು. ಪ್ರವಾಸಿಗರು ಬೆಳಗಿನ ಮಂಜಿನ ಮುಸುಕಿನಲ್ಲಿ, ಹಕ್ಕಿಗಳ ಚಿಲಿಪಿಲಿಯ ನಡುವೆ ಕಾಫಿ ಕೊಯ್ಯುವ ಕ್ರಾಪ್ ಸೀಸನ್‌ನಲ್ಲಿ (Coffee Harvesting) ಪ್ರತ್ಯಕ್ಷವಾಗಿ ಭಾಗಿಯಾಗುವ ಅನುಭವವೇ ರೋಮಾಂಚನಕಾರಿ. ಸ್ಥಳೀಯ ಪ್ಲಾಂಟರುಗಳೊಂದಿಗೆ ಸಂವಾದ ನಡೆಸುತ್ತಾ, ತೋಟದ ಬದುಕನ್ನು ಹತ್ತಿರದಿಂದ ತಿಳಿಯುವುದು ಪ್ರವಾಸಕ್ಕೆ ಹೊಸ ಆಯಾಮ ನೀಡಬಲ್ಲುದು. ಜಗತ್ತಿನ ಶ್ರೇಷ್ಠ ತಳಿಗಳಾದ ‘ಅರೇಬಿಕಾ’ ಮತ್ತು ‘ರೋಬಸ್ಟಾ’ ಕಾಫಿ ಬೀಜಗಳನ್ನು ಒಣಗಿಸುವ, ಹುರಿಯುವ ಮತ್ತು ಹದವಾಗಿ ಪುಡಿ ಮಾಡುವ ಪ್ರಕ್ರಿಯೆಯನ್ನು ಕಣ್ಣಾರೆ ನೋಡುವುದು ಹಾಗೂ ಬಾಬಾ ಬುಡನ್ ತಂದ ಏಳು ಬೀಜಗಳ ಇತಿಹಾಸವನ್ನು ಅರಿಯುವುದು ವಿದೇಶಿ ಪ್ರವಾಸಿಗರಿಗೆ ವಿಶಿಷ್ಟ ಅನುಭೂತಿ ನೀಡುವುದರಲ್ಲಿ ಸಂದೇಹವಿಲ್ಲ. ಈ ರೀತಿಯ ‘ಲೈವ್ ಎಕ್ಸ್‌ಪೀರಿಯನ್ಸ್’ ಮಾದರಿಯನ್ನು ವ್ಯವಸ್ಥಿತವಾಗಿ ಮಾರ್ಕೆಟ್ ಮಾಡುವುದರಿಂದ ಚಿಕ್ಕಮಗಳೂರು ಅಂತಾರಾಷ್ಟ್ರೀಯ ಮಟ್ಟದ ಕೃಷಿ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಬಲ್ಲದು.

Untitled design (86)

'ಚಿಕ್ಕ'ಮಗಳೂರನ್ನು 'ದೊಡ್ಡ' ಮಟ್ಟದಲ್ಲಿ ಮಾರ್ಕೆಟ್ ಮಾಡುವ, ಶೋಕೇಸ್ ಮಾಡುವ ಅಗತ್ಯವಿದೆ. ಬೃಹತ್ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಹ್ವಾನಿಸಿದರೆ, ಅವರ ವಾಸ್ತವ್ಯದ ಬೇಡಿಕೆಗಳನ್ನು ಈಡೇರಿಸಲು ದೊಡ್ಡ ಸಂಖ್ಯೆಯಲ್ಲಿ ಹೊಟೇಲ್, ರೆಸಾರ್ಟ್, ಹೋಮ್‌ಸ್ಟೇಗಳಿವೆ. ಒಂದು ಜಿಲ್ಲೆಯಾಗಿ ಪ್ರವಾಸೋದ್ಯಮದ ಎಲ್ಲ ಅರ್ಹತೆಗಳನ್ನು ಹೊಂದಿರುವ ಚಿಕ್ಕಮಗಳೂರು, ಸಾಹಸ ಬಯಸುವವರಿಗೆ ಟ್ರೆಕ್ಕಿಂಗ್, ಶಾಂತಿ ಬಯಸುವವರಿಗೆ ಧಾರ್ಮಿಕ ಕ್ಷೇತ್ರ, ಪ್ರಕೃತಿ ಪ್ರೇಮಿಗಳಿಗೆ ದಟ್ಟ ಅರಣ್ಯ ಮತ್ತು ಭದ್ರಾ ಅಭಯಾರಣ್ಯ ಹಾಗೂ ದಣಿವು ಆರಿಸಿಕೊಳ್ಳಲು ಬಯಸುವವರಿಗೆ ಅತ್ಯುತ್ತಮ ರೆಸಾರ್ಟ್‌... ಹೀಗೆ ಪ್ರತಿಯೊಬ್ಬರ ಬೇಡಿಕೆಯನ್ನು ತಣಿಸುವ ಆಕರ್ಷಣೆಗಳನ್ನು ಹೊಂದಿದೆ. ಚಿಕ್ಕಮಗಳೂರನ್ನು ಕೇಂದ್ರವನ್ನಾಗಿಟ್ಟುಕೊಂಡು ಸುತ್ತಮುತ್ತಲ ತಾಣವನ್ನು ಸಹ ಅಭಿವೃದ್ಧಿಪಡಿಸಲು ವಿಫುಲ ಅವಕಾಶಗಳಿವೆ.

ಸಾಹಸ, ಆಧ್ಯಾತ್ಮ, ವನ್ಯಜೀವಿ ಸಂಪತ್ತು ಮತ್ತು ಅತ್ಯುನ್ನತ ಆತಿಥ್ಯ ಹೀಗೆ ಪ್ರತಿಯೊಬ್ಬ ಪ್ರವಾಸ ಪ್ರೇಮಿಯ ಕನಸನ್ನು ನನಸು ಮಾಡುವ ಎಲ್ಲ ಅರ್ಹತೆಗಳೂ ಈ ಒಂದೇ ಜಿಲ್ಲೆಯಲ್ಲಿವೆ. ಆದಾಗ್ಯೂ, ಜಾಗತಿಕ ಮಟ್ಟದಲ್ಲಿ ಇದನ್ನು ಸರಿಯಾಗಿ ಬಿಂಬಿಸದೇ ಇರುವುದನ್ನು ನೋಡಿದಾಗ 'ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕುತ್ತಿದ್ದೇವಾ' ಅನಿಸುವುದು ಸಹಜ. ನಮ್ಮದೇ ಮಣ್ಣಿನಲ್ಲಿ ವಿಶ್ವದರ್ಜೆಯ ಪ್ರವಾಸಿ ತಾಣವಿದ್ದರೂ, ನಾವು ವಿದೇಶಿ ಅಥವಾ ಹೊರರಾಜ್ಯದ ಗಿರಿಧಾಮಗಳ ಕಡೆಗೆ ಮುಖ ಮಾಡುತ್ತಿದ್ದೇವೆ. ಈಗಲಾದರೂ ನಾವು ಈ 'ಚಿಕ್ಕ'ಮಗಳೂರನ್ನು ಜಾಗತಿಕ ವೇದಿಕೆಯಲ್ಲಿ 'ದೊಡ್ಡ' ಮಟ್ಟದಲ್ಲಿ ಬ್ರಾಂಡ್ ಮತ್ತು ಮಾರ್ಕೆಟ್ ಮಾಡಬೇಕಿದೆ. ಡಿಜಿಟಲ್ ಮಾರ್ಕೆಟಿಂಗ್, ಅಂತಾರಾಷ್ಟ್ರೀಯ ಟ್ರಾವೆಲ್ ಮೇಳಗಳು ಮತ್ತು ಪರಿಸರ ಸ್ನೇಹಿ ಸುಸ್ಥಿರ ಪ್ರವಾಸೋದ್ಯಮದ ಮೂಲಕ ಚಿಕ್ಕಮಗಳೂರನ್ನು ದೇಶದ ನಂಬರ್ ಒನ್ ಪ್ರವಾಸಿ ತಾಣವಾಗಿ ಶೋಕೇಸ್ ಮಾಡಬೇಕಿದೆ.

ಯೋಚಿಸಬೇಕು.