ಮುತ್ತು ಎಂಬ ಗಮ್ಮತ್ತು
ಪ್ರಕೃತಿಯ ಸಹಜ ವಿಸ್ಮಯ ಹಾಗೂ ಮಹಿಳೆಯರ ಸೌಂದರ್ಯಕ್ಕೆ ಮೆರುಗು ನೀಡುವ ಆಭರಣವಾಗಿ ಮುತ್ತು ಅಪಾರ ಜನಪ್ರಿಯತೆ ಗಳಿಸಿದೆ. ಸಮುದ್ರ ಜೀವಿಯ ಜೈವಿಕ ಕ್ರಿಯೆಯಿಂದ ರೂಪುಗೊಳ್ಳುವ ಈ ಧವಳ ಕಾಂತಿಯ ಮಣಿಗಳು ಅಲಂಕಾರಕ್ಕಷ್ಟೇ ಅಲ್ಲದೆ ಅನೇಕ ಕುಟುಂಬಗಳ ಜೀವನೋಪಾಯಕ್ಕೂ ದಾರಿಯಾಗಿವೆ.
ಎಸ್. ಸುರೇಶ್‌ವತ್ಸ
ಮುತ್ತು, ಅದರ ಸೊಬಗೇ ಬೇರೆ, ಅದರ ಚೆಂದ ನೋಡಲು ಬಲು ಆನಂದ. ಮುತ್ತು ಹೆಂಗಳೆಯರ ಪಾಲಿಗೆ ಅಚ್ಚುಮೆಚ್ಚು. ಅದರ ಸೆಳೆತಕ್ಕೆ ಬೆರಗಾಗದವರೇ ಇಲ್ಲ. ಅಂದಹಾಗೆ ನಾನು ಹೇಳ ಹೊರಟಿರುವುದು ಕೆನ್ನೆಗೆ ಕೊಡುವ ಮುತ್ತಿನ ಬಗ್ಗೆ ಅಲ್ಲ. ಮಹಿಳೆಯರ ಸೌಂದರ್ಯಕ್ಕೆ ಮೆರುಗು ನೀಡುವ ಮುತ್ತಿನ ಬಗ್ಗೆ. ನೀರೆಯರ ಕೊರಳಲ್ಲಿ ಮಿಂಚುವ ಮಣಿಗಳ ಬಗ್ಗೆ.
ಹೌದು, ಮುತ್ತು ಎಂಥವರಿಗೇ ಆದರೂ ಇಷ್ಟವಾಗುವಂಥ ವಸ್ತು. ಹಾಲಿನ ನೊರೆಯಂತೆ ಹೊಳೆಯುವ ಮುತ್ತು ಹೆಣ್ಣಿಗೆ ಬಲು ಇಷ್ಟ. ಅದನ್ನು ಧರಿಸಿದರೆ ಹೆಣ್ಣಿನ ಸೌಂದರ್ಯ ವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ಮೇಘಗಳ ಮಡಿಲಿನಿಂದ ಧುಮುಕುವ ಜಲವೈಭವ
ಇಂಥ ಮುತ್ತಿನ ಲೋಕವೊಂದಿದೆ. ಅದೊಂದು ಮೋಹಕ ಲೋಕ. ಹಾಗೆಂದು ಯಾವ ಮೋಹದ ಕಥೆಯೂ ಹೇಳುತ್ತಿಲ್ಲ. ಬದಲಿಗೆ ಅಲಂಕಾರಿಕವೂ, ಹೆಂಗೆಳೆಯರ ಶೋಭೆಗೆ ಪಳಪಳ ಹೊಳೆದು ರಂಗು ಬೀರುವ ಮುತ್ತಿನ ಲೋಕ ಅದು.

ಹೌದು, ಮುತ್ತು ಪ್ರಕೃತಿಯ ಸಹಜ ಸೃಷ್ಟಿಯಾದರೂ ಅದೊಂದು ವಿಸ್ಮಯವೇ ಸರಿ. ಈ ಮುತ್ತುಗಳ ಬಗ್ಗೆ ಹಲವು ನಾಣ್ಣುಡಿಗಳೇ ಇವೆ. ಮಾತು ಆಡಿದರೆ ಹೋಯಿತು, ಮುತ್ತು ಹೊಡೆದರೆ ಹೋಯಿತು, ಮಾತೇ ಮುತ್ತು ಹೀಗೆ ಹಲವು ರೀತಿಯಲ್ಲಿ ಮುತ್ತಿನ ಬಗ್ಗೆ ಹೋಲಿಸುವುದುಂಟು.
ಸ್ವಚ್ಛವಾಗಿ, ಬೆಳ್ಳಗೆ, ನಯವಾಗಿ, ಕಾಂತಿಯುತವಾಗಿ ಹೊಳೆಯುವ ಮುತ್ತು ಚಿಪ್ಪಿನೊಳಗೆ ಅದೆಷ್ಟು ಚೆಂದವಾಗಿ ಅಡಗಿಕೊಂಡಿರುತ್ತದೆ ಎಂದರೆ ಅದರ ನೋಟ ಕಣ್ತುಂಬಿಕೊಳ್ಳುವುದೇ ಒಂದು ಸೊಗಸು.
ಒಡಿಶಾ ಪ್ರವಾಸದಲ್ಲಿದ್ದಾಗ ಭುವನೇಶ್ವರದ ಚಿಲಿಕಾ ಸರೋವರದಲ್ಲಿ ಬೋಟ್‌ನಲ್ಲಿ ಕುಳಿತು ಒಂದಷ್ಟು ದೂರ ಸಾಗಿದೆವು. ಅಲ್ಲೊಂದು ತುದಿಯಲ್ಲಿ ಒಬ್ಬಾತ ಒಂದಷ್ಟು ದುಂಡಾದ ಚಿಪ್ಪುಗಳನ್ನು ಹಿಡಿದು ನಮ್ಮತ್ತ ಬಂದ. ಆ ಚಿಪ್ಪುಗಳನ್ನು ಒಂದೊಂದಾಗಿ ತೆರೆದಂತೆ ಸುಂದರ ಮುತ್ತುಗಳ ಲೋಕವೇ ಅನಾವರಣಗೊಂಡಿತು.
ಸಮುದ್ರದಲ್ಲಿ ಜಂತುವಿನ ಚಿಪ್ಪಿನೊಳಗೆ ಜೈವಿಕ ಕ್ರಿಯೆಯಿಂದ ಆಗುವ ಉತ್ಪತ್ತಿಯೇ ಈ ಮುತ್ತು.
ಒಯಿಸ್ಟರ್ ಎಂಬ ಸಮುದ್ರ ಜೀವಿಯ ಚಿಪ್ಪಿನೊಳಗಿನ ಜೈವಿಕ ಕ್ರಿಯೆಯಿಂದ ಮುತ್ತುಗಳು ದೊರೆಯುತ್ತವೆ. ಈ ಒಯಿಸ್ಟರ್ ಚಿಪ್ಪಿನಿಂದ ಹೊರಬರುವಾಗಲೇ ಪೂರ್ಣವಾಗಿ ಮುತ್ತಾಗಿರುತ್ತದೆ.
ಯಾವುದೇ ಕಟಿಂಗ್, ಪಾಲಿಷಿಂಗ್ ಅಗತ್ಯವಿಲ್ಲದೆ ಸಂಪೂರ್ಣ ಸಿದ್ಧವಾಗಿ ಬರುವ ಈ ಮುತ್ತುಗಳು ನಿಜಕ್ಕೂ ಪ್ರಕೃತಿಯ ಅದ್ಭುತ ಕೊಡುಗೆ.

ಸ್ಕಾಲ್ಲೋಪ್ಸ್, ಕ್ಲಾಮ್ಸ್, ಮುಸ್ಸೆಲ್ಸ್, ಸೀ ಸ್ನೈಲ್ಸ್ ಮುಂತಾದ ಜೀವಿಗಳ ಚಿಪ್ಪುಗಳಲ್ಲಿಯೂ ಮುತ್ತುಗಳು ಸಿಕ್ಕರೂ ಅವು ಬಹಳ ವಿರಳ. ಉಪ್ಪು ನೀರು ಹಾಗೂ ತಾಜಾ ನೀರಿನಲ್ಲಿ ಮುತ್ತುಗಳು ಹೆಚ್ಚಾಗಿ ದೊರೆಯುತ್ತವೆ.
ಈ ಒಯಿಸ್ಟರ್ ಜಂತುವಿನ ಆಕಾರ ಚಿಪ್ಪಿನಿಂದ ಕೂಡಿರುತ್ತದೆ. ಈ ಜೀವಿಗಳು ಬೆಳೆದಂತೆಲ್ಲಾ ಚಿಪ್ಪು ಕೂಡ ಹಿಗ್ಗುತ್ತಾ ಹೋಗುತ್ತದೆ. ಮುತ್ತಿನ ಚಿಪ್ಪಿನೊಳಗೆ ಆಕಸ್ಮಿಕವಾಗಿ ಸಣ್ಣ ಮರಳಿನ ಕಣಗಳೇನಾದರೂ ಸೇರಿದರೆ ಆ ಚಿಪ್ಪಿನೊಳಗಿನ ಜಂತುವಿಗೆ ಅನಾನುಕೂಲವಾಗುತ್ತದೆ. ಆಗ ಅದರ ಶರೀರದಿಂದ ನೆಕರ್ ಎನ್ನುವ ಕಾಂತಿಯುತ ದ್ರವ ಸ್ರವಿಸುತ್ತದೆ. ಇದನ್ನು ನ್ಯೂಕ್ಲಿಯಸ್ ಎನ್ನುತ್ತಾರೆ. ಈ ನ್ಯೂಕ್ಲಿಯಸ್ ಮೇಲೆ ನೆಕರ್ ಪೊರೆಪೊರೆಯಾಗಿ ಶೇಖರಣೆಯಾಗಿ ಕ್ರಮವಾಗಿ ರೂಪಗೊಳ್ಳುವುದೇ ಮುತ್ತು. ಇದನ್ನು ಪರ್ಲ್ ಎಂದು ಸಹ ಕರೆಯುತ್ತಾರೆ.
ಈ ನೆಕರ್‌ನ ಚಿಪ್ಪಿನಿಂದ ಆಭರಣಗಳನ್ನೂ ತಯಾರಿಸುತ್ತಾರೆ. ಜುವೆಲ್ಲರಿ ಅಂಗಡಿಗಳಲ್ಲಿ ನಮಗೆ ಕಾಣಸಿಗುವ ಹೆಚ್ಚಿನ ಮುತ್ತುಗಳೆಲ್ಲ ಗೋಲಾಕಾರವಾಗಿರುತ್ತವೆ. ಇವು ಉತ್ತಮ ಗುಣಮಟ್ಟದ ದುಬಾರಿ ಮುತ್ತುಗಳು.
ಆದರೆ ಚಿಪ್ಪಿನಲ್ಲಿ ಸಿಗುವ ಎಲ್ಲಾ ಮುತ್ತುಗಳೂ ಗೋಲಾಕಾರವಾಗಿರುವುದಿಲ್ಲ. ಕೆಲವು ಮುತ್ತುಗಳು ಚಿಪ್ಪಿನಲ್ಲಿ ಚೆನ್ನಾಗಿ ಮೂಡಿಬರುವುದಿಲ್ಲ.
ಕೆಲವೊಮ್ಮೆ ಗೋಲಾಕಾರವಾಗಿರದೆ ವಿಭಿನ್ನ ಆಕೃತಿಗಳಲ್ಲಿ ಮೂಡಿಬರುತ್ತವೆ. ಈ ಮುತ್ತುಗಳಿಗೆ ಬಾರೋಕ್ ಮುತ್ತುಗಳು ಎನ್ನುತ್ತಾರೆ. ಅಲ್ಲದೆ ಮುತ್ತುಗಳು ವಿವಿಧ ಬಣ್ಣಗಳಲ್ಲಿ ಅಂದರೆ ಬಿಳಿ, ಕಪ್ಪು, ಬೂದು, ಸ್ವರ್ಣ ಬಣ್ಣ, ತಿಳಿ ಗುಲಾಬಿ ಬಣ್ಣ, ನೀಲಿ, ಹಸಿರು ಸೇರಿದಂತೆ ಹಲವು ಬಣ್ಣಗಳಲ್ಲಿ ದೊರೆಯುತ್ತವೆ.
ಸ್ವಾಭಾವಿಕ - ಕೃತಕ
ಈ ಮುತ್ತುಗಳು ಸ್ವಾಭಾವಿಕವಾಗಿ ದೊರೆಯುವ ಕ್ರಿಯೆ ನಮಗೆ ತಿಳಿದಿದೆ. ಹಾಗೆಯೇ ಇದನ್ನು ಕೃತಕವಾಗಿಯೂ ಪಡೆಯಲಾಗುತ್ತದೆ. ಚಿಪ್ಪಿನೊಳಗೆ ನ್ಯೂಕ್ಲಿಯಸ್ ಅನ್ನು ಪ್ರತ್ಯೇಕವಾಗಿ ಪ್ರವೇಶಿಸುವಂತೆ ಮಾಡಿ ಕೃತಕ ಮುತ್ತನ್ನು ಸೃಷ್ಟಿಸುತ್ತಾರೆ. ಇದು ದೊಡ್ಡ ದೊಡ್ಡ ಪ್ರಯೋಗ ಶಾಲೆಗಳಿಂದ ಮಾತ್ರ ಸಾಧ್ಯವಾಗುತ್ತದೆ.

ಒಂದು ಮುತ್ತಿನ ಕಥೆ
ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ ಅಭಿನಯದ ಒಂದು ಮುತ್ತಿನ ಕಥೆ ಸಿನಿಮಾ ನೋಡಿದ್ದರೆ ಮುತ್ತಿನ ಮಹತ್ವ ತಿಳಿಯುತ್ತದೆ. ಅಲ್ಲಿ ರಾಜ್‌ಕುಮಾರ್ ಸುಂದರವಾದ ಮುತ್ತು ತರಲು ಸಮುದ್ರದ ಆಳಕ್ಕೆ ತೆರಳಿ ಅವುಗಳನ್ನು ಹೆಕ್ಕಿ ತರುವುದನ್ನು ನೋಡುತ್ತಿದ್ದರೆ ಮುತ್ತಿನ ಮಹತ್ವ ಎಂಥದ್ದು ಎಂಬುದು ತಿಳಿಯುತ್ತದೆ.
ಆದರೆ, ಇಲ್ಲಿನದ್ದು ಸಿನಿಮಾ ಕಥೆ ಅಲ್ಲ. ಒಡಿಶಾದ ಚಿಲಿಕಾ ಸರೋವರದಲ್ಲಿ ಮುತ್ತುಗಳನ್ನು ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಅವುಗಳನ್ನು ಮಾರಿ ಜೀವನ ನಡೆಸುವ ಎಷ್ಟೋ ಮಂದಿ ಇಲ್ಲಿದ್ದಾರೆ. ಸುಂದರವಾಗಿ ಹೊಳೆಯುವ ಮುತ್ತುಗಳು ಸೌಂದರ್ಯಕ್ಕೆ ಮೆರುಗು ನೀಡುವುದು ಒಂದೆಡೆಯಾದರೆ, ಕೆಲವರ ಪಾಲಿಗೆ ಜೀವನೋಪಾಯಕ್ಕೆ ದಾರಿಯಾಗಿರುವುದು ಮತ್ತೊಂದೆಡೆ.
ಆದರೆ, ಸಮುದ್ರದಲ್ಲಿ ಬೆಳೆಯುವ ಜೀವಿಯ ವಿಷಾದದ ಕಣ್ಣೀರೆ ಈ ಮುತ್ತುಗಳು ಎಂಬುದು ಕೊಂಚ ಬೇಸರದ ಸಂಗತಿ.