Saturday, November 7, 2026
Saturday, November 7, 2026

ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿರುವ ಡಾರ್ಕ್ ಟೂರಿಸಂ

ಡಾರ್ಕ್ ಟೂರಿಸಂನ ಇನ್ನೊಂದು ಪ್ರಮುಖ ತಾಣವು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿಯೇ ಇದೆ. ಈ ನಗರದಲ್ಲಿದ್ದ ಎತ್ತರದ ಜೋಡಿ ಟವರ್‌ಗಳಿಗೆ 2000 ಇಸವಿಯ ಸೆಪ್ಟೆಂಬರ್ 11ರಂದು ಆತಂಕವಾದಿಗಳು ವಿಮಾನಗಳನ್ನು ಗುದ್ದಿಸಿ ಎರಡೂ ಟವರ್‌ಗಳನ್ನು ನಿರ್ನಾಮ ಮಾಡಿದರು. ಆಗ ಆ ಟವರ್‌ಗಳಲ್ಲಿ ಕೆಲಸಮಾಡುತ್ತಿದ್ದ ಮತ್ತು ಆಸುಪಾಸಿನಲ್ಲಿದ್ದ ಸಾವಿರಾರು ಅಮಾಯಕರು ಸಾವಿಗೆ ತುತ್ತಾದರು. ಅಮೆರಿಕ ಸರಕಾರವು ಅವಳಿ ಟವರ್‌ಗಳಿದ್ದ ಜಾಗವನ್ನು ‘ಗ್ರೌಂಡ್ ಜೀರೋ’ ಎಂದು ಕರೆಯುವ ಸ್ಮಾರಕವನ್ನಾಗಿ ಪರಿವರ್ತಿಸಿದೆ. ಇದು ಈಗ ಹೆಸರಾಂತ ಪ್ರವಾಸಿತಾಣವಾಗಿದೆ.

  • ಡಾ. ಡಿ. ವಿ. ಗುರುಪ್ರಸಾದ್

ಡಿಸೆಂಬರ್ 3, 1984. ಬೆಳ್ಳಂಬೆಳಗ್ಗೆ ಭೂಪಾಲ್ ನಗರದ ನಾಗರಿಕರಿಗೆ ಗಾಳಿಯಲ್ಲಿ ಯಾವುದೋ ಘಾಟಿನ ವಾಸನೆ ಬಂದು ಕೆಮ್ಮು ಬರತೊಡಗಿ ಉಸಿರು ಕಟ್ಟುವಂತಾಯಿತು. ಕೆಲವರು ಪ್ರಜ್ಞೆ ತಪ್ಪಿ ಬಿದ್ದರು. ಏನಾಯಿತು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಅದೇ ನಗರದಲ್ಲಿದ್ದ ಕೀಟನಾಶಕಗಳನ್ನು ತಯಾರಿಸುವ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮವಾಗಿ ಅಲ್ಲಿ ಕೂಡಿಟ್ಟಿದ್ದ ವಿಷಾನಿಲವು ಇಡೀ ನಗರದ ತುಂಬಾ ಹರಡಿದೆಯೆಂದು ತಿಳಿಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಆಸ್ಪತ್ರೆಗೆ ಸೇರಿಕೊಂಡರು. ಚಿಕಿತ್ಸೆ ಫಲಿಸದೆ ಸುಮಾರು 8000 ಜನರು ಮೃತಪಟ್ಟರು. ಐದು ಲಕ್ಷಕ್ಕೂ ಹೆಚ್ಚು ಜನರಿಗೆ ವಿವಿಧ ಬಗೆಯ ತಾತ್ಕಾಲಿಕ ಮತ್ತು ಶಾಶ್ವತ ದೈಹಿಕ ತೊಂದರೆಗಳುಂಟಾದವು.

ಇದನ್ನೂ ಓದಿ: ಜವಾಬ್ದಾರಿಯುತ ಪ್ರವಾಸೋದ್ಯಮವೇ ಭಾರತದ ಗೌರವ

ಭಾರತ ಕಂಡ ಅತಿ ಭೀಕರ ದುರಂತವಾದ ಇದರಲ್ಲಿ ನೊಂದವರ ನೆನಪಿಗಾಗಿ ಮುಚ್ಚಿರುವ ಕಾರ್ಬೈಡ್ ಫ್ಯಾಕ್ಟರಿಯ ಆವರಣದಲ್ಲಿ ಸರಕಾರವು ಶೀಘ್ರದಲ್ಲಿಯೇ ಸ್ಮಾರಕವೊಂದನ್ನು ಸ್ಥಾಪಿಸುತ್ತದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕೆಲವು ತಿಂಗಳುಗಳ ಹಿಂದೆ ಘೋಷಿಸಿದರು. ಈ ಸ್ಮಾರಕವು ನಿರ್ಮಾಣಗೊಂಡ ನಂತರ ಖಂಡಿತವಾಗಿಯೂ ಭೋಪಾಲ್ ನಗರಕ್ಕೆ ದೇಶವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ ಎಂದು ಕೆಲವರು ವಿಶ್ಲೇಷಿಸಿದರು. ಆಗ ದುರಂತಕ್ಕೂ ಪ್ರವಾಸಕ್ಕೂ ಏನು ಸಂಬಂಧ ಎಂದು ಹಲವರು ಪ್ರಶ್ನಿಸಿದರು. ಆದರೆ ಸಂಬಂಧ ಇರುವುದು ನಿಜ. ಮಾನವನಿಗೆ ಸಾವುನೋವುಗಳುಂಟಾದ ಜಾಗಗಳನ್ನು ನೋಡಲು ಸಹಜವಾದ ಕುತೂಹಲವಿದೆ. ಹೀಗಾಗಿ ಬಹಳ ಪ್ರವಾಸಿಗರು ದುರಂತಗಳು ಹಾಗೂ ಯುದ್ಧಗಳು ನಡೆದ ಸ್ಥಳಗಳು, ಜೈಲುಗಳು, ವಧಾಸ್ಥಾನಗಳು ಮತ್ತು ಸಮಾಧಿ ಸ್ಥಳಗಳನ್ನು ನೋಡಲು ಆಸಕ್ತಿಯಿಂದ ಹೋಗುತ್ತಾರೆ. ಇಂಥ ಆಸಕ್ತಿಯನ್ನು ತಣಿಸಲು ಹುಟ್ಟಿಕೊಂಡಿರುವ ಪ್ರವಾಸವೇ ಡಾರ್ಕ್ ಟೂರಿಸಂ. ಇದನ್ನು ಬ್ಲಾಕ್ ಟೂರಿಸಂ, ಥಾನಾ ಟೂರಿಸಂ ಇಲ್ಲವೇ ದುಃಖದ ಟೂರಿಸಂ ಎಂದೂ ಕರೆಯಲಾಗುತ್ತದೆ.

Untitled Design - 2026-11-06T153907.228

1990ರಿಂದಲೇ ತೀವ್ರ ಬೆಳವಣಿಗೆಯನ್ನು ಕಂಡಿರುವ ಡಾರ್ಕ್ ಟೂರಿಸಂ ಸದ್ಯ ವಿಶ್ವದಾದ್ಯಂತ ಪ್ರತಿವರ್ಷವೂ ಅರ್ಧ ಕೋಟಿಗಿಂತ ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಇಂಥ ತಾಣಗಳಲ್ಲಿ ಅತಿ ಹೆಚ್ಚು ಜನರನ್ನು ಆಕರ್ಷಿಸುವ ಜಾಗವೆಂದರೆ ಉಕ್ರೇನಿನ ಚೆರ್ನೊಬಿಲ್. ಆ ಸಮಯದಲ್ಲಿ ರಷ್ಯಾ ದೇಶದಲ್ಲಿದ್ದ ಚೆರ್ನೊಬಿಲ್‌ನಲ್ಲಿ ಒಂದು ಅಣು ಸ್ಥಾವರವಿತ್ತು. 1980ರ ಏಪ್ರಿಲ್ 26ರಂದು ಈ ಅಣುಸ್ಥಾವರದ ನಾಲ್ಕನೆಯ ರಿಯಾಕ್ಟರ್ ಏಕಾಎಕಿ ಸ್ಫೋಟಗೊಂಡಿತು. ತತ್ಪರಿಣಾಮವಾಗಿ ಅಲ್ಲಿ ಕೆಲಸಮಾಡುತ್ತಿದ್ದ ಹತ್ತಾರು ಕಾರ್ಮಿಕರು ಸ್ಥಳದಲ್ಲಿಯೇ ಅಸುನೀಗಿದರು. ಈ ಸ್ಫೋಟದಿಂದ ಉಂಟಾದ ಅಣುವಿಕಿರಣವು ಸುತ್ತಮುತ್ತಲ ಜಾಗಗಳಲ್ಲಿ ಹರಡಿತು. ಅಣುಸ್ಥಾವರದಲ್ಲಿಯೇ ಕೆಲಸಮಾಡುತ್ತಿದ್ದ ಎರಡು ನೂರಕ್ಕೂ ಹೆಚ್ಚು ಕಾರ್ಮಿಕರು ಈ ವಿಕಿರಣಕದ ಫಲವಾಗಿ ಆಸ್ಪತ್ರೆ ಸೇರಿದರು. ಅಣು ಸ್ಥಾವರದ ಬಳಿಯೇ ಇದ್ದ ಪ್ರಿಪ್ಯಾತ್ ನಗರದ ಎಲ್ಲ ನಾಗರಿಕರನ್ನೂ ಸುರಕ್ಷತೆಯ ದೃಷ್ಟಿಯಿಂದ ಸರಕಾರ ಬೇರೆಡೆಗೆ ತುರ್ತಾಗಿ ಸ್ಥಳಾಂತರಿಸಿತು. ಆದರೂ ಬಹುಪಾಲು ಜನರು ವಿಕಿರಣಕ್ಕೆ ತುತ್ತಾಗಿ ಸುಮಾರು 60,000 ಜನರು ಈ ದುರಂತದಲ್ಲಿ ಹಾನಿಗೀಡಾದರು.

ರಷ್ಯಾದಿಂದ ಉಕ್ರೇನ್ ಪ್ರತ್ಯೇಕಗೊಂಡ ನಂತರ ಚೆರ್ನೊಬಿಲ್‌ನ ನ್ಯೂಕ್ಲಿಯರ್ ಘಟಕ ಮತ್ತು ಸಂಪೂರ್ಣವಾಗಿ ಪಾಳುಬಿದ್ದಿರುವ ಪ್ರಿಪ್ಯಾತ್ ನಗರವನ್ನು ನೋಡಲು ವಿಶ್ವದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರತೊಡಗಿದರು. ಕೋವಿಡ್ ಮಹಾಮಾರಿ ಆವರಿಸುವ ವೇಳೆಗೆ ಇಲ್ಲಿಗೆ ಪ್ರತಿ ವರ್ಷವೂ ಹತ್ತು ಲಕ್ಷ ಜನರು ಬರುತ್ತಿದ್ದರು. 2022ರಿಂದ ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮವಾಗಿ ಇಲ್ಲಿಗೆ ಈಗ ಪ್ರವಾಸಿಗರು ಬರುತ್ತಿಲ್ಲ.

Untitled Design - 2026-11-06T154527.036

ಪೋಲೆಂಡಿನಲ್ಲಿರುವ ಆಸ್ಕ್ವಿಟ್ಸ್ ಮತ್ತು ಬರ್ಕೆನೂ ಯಹೂದಿ ಯಾತನಾ ಶಿಬಿರಗಳು ಡಾರ್ಕ್ ಟೂರಿಸಂನ ಇನ್ನೊಂದು ಪ್ರಮುಖ ತಾಣ. ಇಲ್ಲಿಗೆ ಪ್ರತಿ ವರ್ಷವೂ ಹತ್ತು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಾರೆ. ತಾನು ಬಂಧಿಸುವ ಕೈದಿಗಳಿಗೆಂದು ಈ ಶಿಬಿರಗಳನ್ನು 1940ರಲ್ಲಿ ಜರ್ಮನಿ ದೇಶವು 175 ಹೆಕ್ಟೇರ್ ಪ್ರದೇಶದಲ್ಲಿ ಸ್ಥಾಪಿಸಿತು. ಆ ಸಮಯದಲ್ಲಾಗಲೇ ಎರಡನೆಯ ವಿಶ್ವ ಮಹಾಯುದ್ಧವು ಆರಂಭವಾಗಿತ್ತು. ಮುಂದಿನ ಐದು ವರ್ಷಗಳ ಕಾಲ ಈ ಶಿಬಿರಗಳಲ್ಲಿ ಲಕ್ಷಾನುಗಟ್ಟಲೆ ಯಹೂದಿಗಳನ್ನು ಜರ್ಮನರು ಬಂಧಿಗಳನ್ನಾಗಿಟ್ಟು ಅವರ ಮೇಲೆ ನಾನಾ ವಿಧದ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳನ್ನೆಸಗಿದರು. ವೃದ್ಧರು, ಮಹಿಳೆಯರು, ಹಸುಗೂಸುಗಳೆಂಬ ಭೇದಭಾವವಿಲ್ಲದೆ ಸುಮಾರು 11 ಲಕ್ಷ ಜನರನ್ನು ಇಲ್ಲಿ ವಿವಿಧ ರೀತಿಗಳಲ್ಲಿ ಕೊಂದರು. ಅದರಲ್ಲಿ ಮುಖ್ಯವಾದ ವಿಧವೆಂದರೆ ಎಲ್ಲರನ್ನೂ ಗ್ಯಾಸ್ ಚೇಂಬರ್‌ನಲ್ಲಿ ನಿಲ್ಲಿಸಿ ಅದರ ತಾರಸಿಯಿಂದ ವಿಷಾನಿಲವನ್ನು ಬಿಡುವುದು. ಕೈದಿಗಳ ಮರಣದ ನಂತರ ಅವರ ಕೂದಲುಗಳನ್ನೂ ಕತ್ತರಿಸಿ ಆ ನಂತರ ದೇಹಗಳನ್ನು ದೊಡ್ಡ ದೊಡ್ಡ ಕುಲುಮೆಗಳಲ್ಲಿ ಸುಡಲಾಗುತ್ತಿತ್ತು. ಅಸ್ತಿ ಭಾಗಗಳು ಮತ್ತು ಬೂದಿಯನ್ನು ಹತ್ತಿರದಲ್ಲಿಯೇ ಇದ್ದ ಮೈದಾನದಲ್ಲಿ ಹುಗಿಯಲಾಗುತ್ತಿತ್ತು. ಆಸ್ಕ್ವಿಟ್ಸ್‌ಗೆ ಹೋಗುವುದೊಂದು ಹೃದಯವಿದ್ರಾವಕ ಅನುಭವವಾದರೂ ಇಲ್ಲಿಗೆ ಬರುವ ಪ್ರವಾಸಗರ ಸಂಖ್ಯೆ ಏರುತ್ತಲೇ ಇದೆ.

ದಕ್ಷಿಣ ಆಫ್ರಿಕದ ಕೇಪ್‌ಟೌನಿಗೆ ಭೇಟಿ ನೀಡುವ ಬಹಳ ಪ್ರವಾಸಿಗರು ಹತ್ತಿರದಲ್ಲಿರುವ ಚಾರಿತ್ರಿಕ ರೋಬೆನ್ ದ್ವೀಪಕ್ಕೆ ತಪ್ಪದೇ ಹೋಗುತ್ತಾರೆ. ಈ ದ್ವೀಪದಲ್ಲಿರುವ ಕಾರಾಗೃಹದಲ್ಲಿ ಮಾನವ ಹಕ್ಕುಗಳ ಹೋರಾಟಗಾರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಹಾಗೂ ಮುಂದೆ ದೇಶದ ಅಧ್ಯಕ್ಷರಾದ ನೆಲ್ಸನ್ ಮಂಡೇಲಾರನ್ನು 17 ವರ್ಷಗಳ ಕಾಲ ಬಂಧನದಲ್ಲಿಡಲಾಗಿತ್ತು. ಸುಮಾರು 6 ಚದರ ಕಿಮೀ. ವಿಸ್ತೀರ್ಣದ ಈ ದ್ವೀಪದಲ್ಲಿರುವ ಕಾರಾಗೃಹಕ್ಕೆ ಅಂದಿನ ಸರಕಾರ ತನಗೆ ವಿರುದ್ಧವಾಗಿದ್ದ ಸಾವಿರಾರು ಜನರನ್ನು 17ನೆಯ ಶತಮಾನದಿಂದಲೇ ಬಂಧಿಗಳನ್ನಾಗಿ ಕಳಿಸುತ್ತಿತ್ತು. ಈ ಕಾರಾಗೃಹ ಮತ್ತು ಅದರ ಸಮೀಪದಲ್ಲಿರುವ ಮ್ಯೂಸಿಯಂ ನೋಡಲು ಅಸಂಖ್ಯಾತ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದೇ ರೀತಿಯೇ ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರು ರಾಜಕೀಯ ಕೈದಿಗಳನ್ನು ಕಳುಹಿಸುತ್ತಿದ್ದ ಕಾಲಾಪಾನಿ ಎಂದು ಕರೆಯುವ ಅಂಡಮಾನಿನ ಸೆಲ್ಯುಲಾರ್ ಕಾರಾಗೃಹವನ್ನು ವೀಕ್ಷಿಸಲು ಅಂಡಮಾನಿಗೆ ಪ್ರವಾಸಕ್ಕೆ ಹೋಗುವ ಎಲ್ಲರೂ ಹೋಗುತ್ತಾರೆ. ಹಾಗೆಯೇ 1964ರಲ್ಲಿ ನಿರ್ಮಿಸಿದ ಸುಭಾಶ್ ಚಂದ್ರ ಬೋಸ್ ಹಾಗೂ ಶ್ರೀ ಅರೋಬಿಂದರು ಬಂಧಿಗಳಾಗಿದ್ದ ಕೊಲ್ಕತ್ತಾದ ಚಾರಿತ್ರಿಕ ಅಲಿಪುರ ಜೈಲನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು, ಇಲ್ಲಿಗೆ ಪ್ರತಿವರ್ಷವೂ ಸಾವಿರಾರು ಪ್ರವಾಸಿಗರು ಬರುತ್ತಾರೆ.

Untitled Design - 2026-11-06T154406.079

ಡಾರ್ಕ್ ಟೂರಿಸಂನ ಇನ್ನೊಂದು ಪ್ರಮುಖ ತಾಣವು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿಯೇ ಇದೆ. ಈ ನಗರದಲ್ಲಿದ್ದ ಎತ್ತರದ ಜೋಡಿ ಟವರ್‌ಗಳಿಗೆ 2000 ಇಸವಿಯ ಸೆಪ್ಟೆಂಬರ್ 11ರಂದು ಆತಂಕವಾದಿಗಳು ವಿಮಾನಗಳನ್ನು ಗುದ್ದಿಸಿ ಎರಡೂ ಟವರ್‌ಗಳನ್ನು ನಿರ್ನಾಮ ಮಾಡಿದರು. ಆಗ ಆ ಟವರ್‌ಗಳಲ್ಲಿ ಕೆಲಸಮಾಡುತ್ತಿದ್ದ ಮತ್ತು ಆಸುಪಾಸಿನಲ್ಲಿದ್ದ ಸಾವಿರಾರು ಅಮಾಯಕರು ಸಾವಿಗೆ ತುತ್ತಾದರು. ಅಮೆರಿಕ ಸರಕಾರವು ಅವಳಿ ಟವರ್‌ಗಳಿದ್ದ ಜಾಗವನ್ನು ‘ಗ್ರೌಂಡ್ ಜೀರೋ’ ಎಂದು ಕರೆಯುವ ಸ್ಮಾರಕವನ್ನಾಗಿ ಪರಿವರ್ತಿಸಿದೆ. ಇದು ಈಗ ಹೆಸರಾಂತ ಪ್ರವಾಸಿತಾಣವಾಗಿದೆ.

ನ್ಯೂಕ್ಲಿಯರ್ ದುರಂತಕ್ಕೀಡಾದ ಇನ್ನೊಂದು ಪ್ರಮುಖ ಸ್ಥಳವೇ ಜಪಾನ್‌ನ ಫುಕುಷಿಮಾ ಅಣುಸ್ಥಾವರ. 2011ರ ಮಾರ್ಚ್ 11ರಂದು ಭೂಕಂಪ ಮತ್ತು ಸುನಾಮಿಯ ಪ್ರಭಾವದಿಂದ ಈ ಅಣುಸ್ಥಾವರದಲ್ಲಿ ಚೆರ್ನೊಬಿಲ್‌ನಂಥ ಭಾರಿ ದುರಂತವು ಸಂಭವಿಸಿತು. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಚೆರ್ನೊಬಿಲ್‌ಗಿಂತ ಕಡಿಮೆಯಾದರೂ ವಿಕಿರಣದ ಪ್ರಭಾವದಿಂದ ಸಾವಿರಾರು ಜನರಿಗೆ ಆರೋಗ್ಯ ಸಮಸ್ಯೆಗಳು ಉಂಟಾದವು. ಈ ಅಣುಸ್ಥಾವರದ ಸುತ್ತಮುತ್ತಲಿನ ನಗರಗಳಲ್ಲಿ ವಾಸಿಸುತ್ತಿದ್ದ 1,64,000 ಜನರನ್ನು ಸ್ಥಳಾಂತರಿಸಲಾಯಿತು. ಈ ಜಾಗವನ್ನು ನೋಡಲು ಪ್ರತಿವರ್ಷವೂ ಬರುವ ಸಾವಿರಾರು ಪ್ರವಾಸಿಗರಿಗೆ ಸ್ಥಳೀಯ ಪ್ರವಾಸಿ ಸಂಸ್ಥೆಯೊಂದು ಗೈಡೆಡ್ ಟೂರ್ ಮೂಲಕ ಸಂಬಂಧಿಸಿದ ಸ್ಥಳಗಳಿಗೆ ಕರೆದೊಯ್ಯುತ್ತದೆ.

Untitled Design - 2026-11-06T153812.716

ಕಾಂಬೋಡಿಯಾದ ವಿವಿಧ ಭಾಗಗಳಲ್ಲಿ ‘ಕಿಲ್ಲಿಂಗ್ ಫೀಲ್ಡ್’ಎಂದು ಕರೆಯುವ 300 ಮೈದಾನಗಳಿವೆ. 1975ರಿಂದ 1979ರವರೆಗೆ ಆ ದೇಶದಲ್ಲಿ ಕಮ್ಯುನಿಸ್ಟ್ ಪಕ್ಷದ ಖ್ಮೇರ್ ರೂಜ್ ಆಡಳಿತವಿದ್ದಾಗ ಸರಕಾರವನ್ನು ವಿರೋಧಿಸುತ್ತಿದ್ದ ಸುಮಾರು ಇಪ್ಪತ್ತು ಲಕ್ಷ ಜನರನ್ನು ಚಿತ್ರಹಿಂಸೆ ಕೊಟ್ಟು ಹತ್ಯೆಮಾಡಿ ಅವರ ದೇಹಗಳನ್ನು ವಿವಿಧ ಮೈದಾನಗಳಲ್ಲಿ ಹುಗಿಯಲಾಯಿತು. ಇವುಗಳಲ್ಲಿ ರಾಜಧಾನಿ ನಾಮ್ ಪೆನ್ ಬಳಿ ಇರುವ ‘ಚಿಯುಂಗ್ ಏಕ್ ಕಿಲ್ಲಿಂಗ್ ಫೀಲ್ಡ್’ ಡಾರ್ಕ್ ಟೂರಿಸಂನ ಒಂದು ಮುಖ್ಯ ತಾಣವಾಗಿದೆ. ಇಲ್ಲಿರುವ ಮ್ಯೂಸಿಯಂನಲ್ಲಿ ಮೃತರ ತಲೆಬುರುಡೆಗಳನ್ನು ಪ್ರದರ್ಶನಕ್ಕಿಡಲಾಗಿದೆ.

ನೂರಾರು ಜನರು ಹತ್ಯೆಗೊಂಡ ಜಲಿಯನ್‌ವಾಲಾಬಾಗ್ ಮೈದಾನವನ್ನು ನಮ್ಮ ದೇಶದಲ್ಲಿನ ಡಾರ್ಕ್ ಟೂರಿಸಂನ ಒಂದು ತಾಣ ಎಂದೇ ಪರಿಗಣಿಸಬಹುದಾಗಿದೆ. ಅದೇ ರೀತಿಯೇ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ನೂರಾರು ಬ್ರಿಟಿಷ್ ಸ್ತ್ರೀಯರು ಮತ್ತು ಮಕ್ಕಳು ಹತ್ಯೆಗೊಂಡ ಕಾನ್ಪುರದ ನಾನಾ ಪಾರ್ಕನ್ನೂ ಪರಿಗಣಿಸಬಹುದು.

ಡಾರ್ಕ್ ಟೂರಿಸಂ ಪ್ರವಾಸಿಗಳನ್ನು ಆಕರ್ಷಿಸುತ್ತಿರುವ ಮುಖ್ಯ ಕಾರಣವೆಂದರೆ ಅದಕ್ಕಿರುವ ಶೈಕ್ಷಣಿಕ ಮೌಲ್ಯ. ಈ ಬಗೆಯ ಪ್ರವಾಸವನ್ನು ಮಾಡುವುದರಿಂದ ನಾವು ಚರಿತ್ರೆಯ ಪಾಠಗಳನ್ನು ಕಲಿಯಬಹುದಲ್ಲದೆ ವಿವಿಧ ಸನ್ನಿವೇಶಗಳಲ್ಲಿ ಮಾನವ ಹೇಗೆ ವರ್ತಿಸುತ್ತಾನೆ ಎನ್ನುವುದನ್ನು ತಿಳಿಯಬಹುದು. ವಿವಿಧ ದೇಶಗಳ ಪರಂಪರೆಗಳನ್ನು ಅರಿಯಬಹುದು. ಅಷ್ಟೇ ಅಲ್ಲದೆ ದುರಂತಗಳಲ್ಲಿ ಮಡಿದವರಿಗೆ ನಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಬಹುದು. ಇವೇ ಗುರಿಯಿಂದ ಇಂಥ ತಾಣಗಳನ್ನು ಅಭಿವೃದ್ಧಿಪಡಿಸಬೇಕೇ ಹೊರತು ವಾಣಿಜ್ಯದ ದೃಷ್ಟಿಯಿಂದಲ್ಲ ಹಾಗೂ ದುರಂತವನ್ನು ವೈಭವೀಕರಿಸುವ ದೃಷ್ಟಿಯಿಂದಲೂ ಅಲ್ಲ. ಇಂಥ ಜಾಗಗಳಿಗೆ ಹೋಗುವ ಪ್ರವಾಸಿಗರು ಅಲ್ಲಿನ ಗಾಂಭೀರ್ಯವನ್ನು ಅರಿತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದದ್ದು ಅತಿ ಅವಶ್ಯ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?