Saturday, November 7, 2026
Saturday, November 7, 2026

ಮನೆಯಂಗಳವೇ ಕೆಫೆ, ಆತಿಥ್ಯವೇ ಉತ್ಸವ!

ಮನೆಯಂಗಳವನ್ನೇ ಕೆಫೆಯನ್ನಾಗಿಸಿ, ಅಪರಿಚಿತರನ್ನು ಆತ್ಮೀಯ ಅತಿಥಿಗಳನ್ನಾಗಿ ಸ್ವಾಗತಿಸುವ ವಿಶಿಷ್ಟ ಸಂಪ್ರದಾಯ ಎಸ್ಟೋನಿಯಾದಲ್ಲಿದೆ. ‘ಹೋಮ್ ಕೆಫೆ ಡೇಸ್‌’ ಉತ್ಸವದಲ್ಲಿ ಖಾಸಗಿ ಮನೆಗಳೇ ಆಹಾರ, ಸಂಸ್ಕೃತಿ ಮತ್ತು ಮಾನವೀಯ ಸಂಬಂಧಗಳ ಬೆಸುಗೆಯ ತಾಣಗಳಾಗುತ್ತವೆ. ವ್ಯಾಪಾರಕ್ಕಿಂತ ಆತಿಥ್ಯಕ್ಕೆ ಮಹತ್ವ ನೀಡುವ ಈ ಆಚರಣೆ, ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನೇ ನೀಡಿದೆ.

  • ಅಂಜಲಿ ರಾಮಣ್ಣ

ಉತ್ತರ ಯೂರೋಪಿನಲ್ಲಿ ರಷ್ಯಾ ಮತ್ತು ಫಿನ್‍ಲ್ಯಾಂಡ್‌ನ ಜತೆ ಗಡಿ ಹಂಚಿಕೊಂಡಿರುವ ಪುಟ್ಟ ದೇಶ ಎಸ್ಟೋನಿಯಾ. ಪ್ರತಿ ಬೇಸಗೆಯಲ್ಲಿ ಎಸ್ಟೋನಿಯಾದಾದ್ಯಂತ ಒಂದು ದಿನದ ಮಟ್ಟಿಗೆ ಸಾರ್ವಜನಿಕ ಮತ್ತು ಖಾಸಗಿ ಎನ್ನುವುದರ ನಡುವಿನ ಗೆರೆ ಮರೆಯಾಗುತ್ತದೆ. ಮನೆಯ ತೋಟಗಳು ಊಟದ ಕೊಠಡಿಗಳಾಗುತ್ತವೆ. ಗ್ಯಾರೇಜುಗಳು ಅಡುಗೆಮನೆಗಳಾಗುತ್ತವೆ. ಮೂರನೆಯ ಮಹಡಿಯ ಮಲಗುವ ಕೋಣೆಯ ಕಿಟಕಿಯಿಂದಲೂ ಐಸ್‌ಕ್ರೀಮ್‌ ಬಕೆಟ್‌ಗಳು ಇಳಿಯುತ್ತವೆ. ಸಣ್ಣ ಪಟ್ಟಣಗಳ ದೊಡ್ಡ ಟೆಂಟ್‌ಗಳ ಕೆಳಗೆ ಅಪರಿಚಿತರು ಸಾಲುಗಟ್ಟಿ ಸೂಪ್‌ಗಾಗಿ ಕಾಯುತ್ತಾರೆ. ಅಂಗಳಗಳಲ್ಲಿ ಮಕ್ಕಳು ಪೆಪ್ಪರ್‌ಮಿಂಟ್‌ ಮಾರಾಟ ಮಾಡುತ್ತಾರೆ. 24 ಗಂಟೆಗಳ ಕಾಲ ಈ ದೇಶವು Kodukohvikute Päev (Home Cafe Days) ಆಚರಿಸುತ್ತದೆ. ಈ ದಿನ ನಿವಾಸಿಗಳು ತಮ್ಮ ಖಾಸಗಿ ಸ್ಥಳಗಳನ್ನು ತೆರೆದು ಬಂದವರಿಗೆಲ್ಲ ಆಹಾರ ಬಡಿಸುತ್ತಾರೆ. ಕೆಲವು ಗಂಟೆಗಳ ಕಾಲ ಖಾಸಗಿಯು ಸಾರ್ವಜನಿಕವಾಗುತ್ತದೆ, ಅಪರಿಚಿತನು ಅತಿಥಿಯಾಗುತ್ತಾನೆ, ಮೌನಿ ಜನಾಂಗವು ಆಹಾರದ ಮೂಲಕ ಮಾತಾಡುತ್ತದೆ.

ಇದನ್ನೂ ಓದಿ: ಪ್ರವಾಸವೆಂದರೆ ನೋಡುವುದೊಂದೇ ಅಲ್ಲ, ತಿನ್ನುವುದೂ ಹೌದು !

Untitled Design - 2026-11-06T163730.895

ಜೂನ್‍ನಿಂದ ಆಗಸ್ಟ್‌ವರೆಗೂ ಇಂಥ 150ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯುತ್ತವೆ. ಕೆಲವು ಬಾಡಿಗೆ ಮೇಜು ಕುರ್ಚಿ, ಮೆನುಗಳೊಂದಿಗೆ ಊರಿಗೆ ಊರೇ ಸಾಲಂಕೃತಗೊಳ್ಳುತ್ತದೆ. ಎಲ್ಲರನ್ನೂ ಒಂದುಗೂಡಿಸುವುದು ವ್ಯಾಪಾರವಲ್ಲ, ಆಹ್ವಾನ. Home Cafe Days ಇಲ್ಲಿನ ರಾಷ್ಟ್ರೀಯ ಪರಂಪರೆಯಾಗಿದೆ. ಇದು ಪ್ರದರ್ಶನವಿಲ್ಲದ ಪ್ರವಾಸೋದ್ಯಮ, ವಹಿವಾಟಿಲ್ಲದ ಆತಿಥ್ಯ. ಎಸ್ಟೋನಿಯನ್ನರು ಅಷ್ಟೇನೂ ಮಾತುಗಾರರಲ್ಲ ಎಂದೇ ಎಲ್ಲರೂ ಹೇಳುವುದು ಆದರೆ ಹಾಗಿದ್ದರೂ ವರ್ಷಕ್ಕೊಮ್ಮೆ ತಮ್ಮ ಅತ್ಯಂತ ಖಾಸಗಿ ಸ್ಥಳಗಳನ್ನು ಜನರಿಗೆ ತೆರೆಯಲು ಅವರು ಮುಂದಾಗಿ ಬಿಡುತ್ತಾರೆ. ಯಾಕೆಂದರೆ ಅವರಿಗೂ ಇದೆ ತಮ್ಮ ಇತಿಹಾಸ, ಸಮುದಾಯ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಮತ್ತು ಜಗತ್ತು "ನನ್ನನ್ನು ಗುರುತಿಸಲಿ" ಎಂಬ ಆಸೆ.

Untitled Design - 2026-11-06T163758.814

ಮೂರು ತಿಂಗಳುಗಳ ಹೊರತಾಗಿ ವಿಪರೀತ ಚಳಿ ಇರುವ ಎಸ್ಟೋನಿಯಾದ ಎರಡೆಯ ದೊಡ್ಡ ದ್ವೀಪವಾದ Hiiumaa ಪ್ರವಾಸೋದ್ಯಮ ಆಡಳಿತವು ಪ್ರವಾಸಿಗರನ್ನು ಆಕರ್ಷಿಸುವ ಮಾರ್ಗವನ್ನು ಹುಡುಕುತ್ತಿತ್ತು. ಅವರ ದೃಷ್ಟಿ ದ್ವೀಪದ ರಾಜಧಾನಿ Kärdla ಕಡೆಗೆ ಹರಿಯಿತು. 19ನೇ ಶತಮಾನದ ಮಧ್ಯದಲ್ಲಿ ಬಾಲ್ಟಿಕ್ ಜರ್ಮನ್ ಬ್ಯಾರನ್‌ನ ಬ್ರಾಡ್‌ಕ್ಲಾತ್ ಕಾರ್ಖಾನೆಯಲ್ಲಿ ಮಧ್ಯ ಯುರೋಪಿನ ಕಾರ್ಮಿಕರು ಕಾಫಿ ಕುಡಿಯುತ್ತಿದ್ದರು. ಸ್ಥಳೀಯ ಎಸ್ಟೋನಿಯನ್ನರು ಅದನ್ನು ಅಳವಡಿಸಿಕೊಂಡರು. Kärdla ಜನರಿಗೆ kohvilähkrid ಅಂದರೆ "ಕಾಫಿ ಫ್ಲಾಸ್ಕ್" ಎಂಬ ಅಡ್ಡಹೆಸರು ಬಂತು. ಈ ಅಭ್ಯಾಸವೇ Home Cafe Days ಉತ್ಸವಕ್ಕೆ ಪ್ರೇರಣೆಯಾಯಿತು. 2007ರಲ್ಲಿ 15 ಮನೆಗಳು ತಾತ್ಕಾಲಿಕ ಕೆಫೆಗಳಾದವು. ಅದು ಯಶಸ್ವಿಯಾಯಿತು. ಇಂದು ಆಗಸ್ಟ್‌ನ ಮೊದಲ ವಾರದಲ್ಲಿ ಅಲ್ಲಿ ನಡೆಯುವ ಮೂರು ದಿನಗಳ Home Cafe Days ಸಂಭ್ರಮಕ್ಕೆ ಸಾವಿರಾರು ಪ್ರವಾಸಿಗರು ಸಾಕ್ಷಿಯಾಗುತ್ತಾರೆ. ದ್ವೀಪದಿಂದ ಶುರುವಾದ ಈ ಉತ್ಸವ ನಂತರ ಆ ದೇಶದ ಎಲ್ಲ ಪಟ್ಟಣಗಳಿಗೂ ಹರಡಿತು. ದಿನಾಂಕಗಳು ಪಟ್ಟಣದಿಂದ ಪಟ್ಟಣಕ್ಕೆ ಬದಲಾದರೂ ‘ಪ್ರವಾಸಿಗರಿಗೆ ಬಾಗಿಲು ತೆರೆಯುವ ಕ್ರಿಯೆ’ ಮಾತ್ರ ಒಂದೇ ತೆರನಾದದ್ದು. ತಮ್ಮತಮ್ಮ ಮನೆಯ ಹಿತ್ತಲಿನ ಸೇಬಿನ ಮರದ ಕೆಳಗೆ ಮೇಜು ಹಾಕಿ, ham ಮತ್ತು smoked sausage, seljanka ಸೂಪ್, ರೈ ಧಾನ್ಯದಿಂದ ಮಾಡಿದ ಬ್ರೆಡ್ ಮತ್ತು ಮನೆಯಲ್ಲೇ ಮಾಡಿದ ಉಪ್ಪಿನಕಾಯಿಯ ತಿನಿಸು ಪಟ್ಟಿ ಸಿದ್ಧವಾಗಿರುತ್ತದೆ. ರೈ ಬ್ರೆಡ್‍ಅನ್ನು ಎಸ್ಟೋನಿಯಾದಲ್ಲಿ Leib ಎನ್ನುತ್ತಾರೆ. ಇದು ಅವರ ರಾಷ್ಟ್ರೀಯ ಆಹಾರ. ‘Jätku leiba!’ ಅಂದರೆ ‘ನಿಮಗೆ ಯಾವಾಗಲೂ ಬ್ರೆಡ್ ಸಿಗಲಿ’ ಅರ್ಥಾತ್ ‘ನಿಮಗೆ ಹಸಿವಾಗದಿರಲಿ’ ಎಂದು ಹಾರೈಸುವುದು ಅಲ್ಲಿನ ಪದ್ಧತಿ. ಸೋವಿಯತ್ ಕಾಲದ ಅಪಾರ್ಟ್‌ಮೆಂಟ್ ಹಿಂದಿನ ಗ್ಯಾರೇಜನ್ನು ಕೆಫೆಯನ್ನಾಗಿ ಪರಿವರ್ತಿಸಿ ಖುಷಿ ಪಡುತ್ತಾರೆ.

ಎಸ್ಟೋನಿಯಾದ ಗ್ರಾಮೀಣ ಜೀವನದ ಆತ್ಮ talgud ಅಂದರೆ ಸಾಮುದಾಯಿಕ ಕೆಲಸದ ದಿನಗಳು ಎಂದರ್ಥ. ಹಿಂದೆ ಹುಲ್ಲು ಕಡಿಯಲು, ಕೊಟ್ಟಿಗೆ ಕಟ್ಟಲು ನೆರೆಹೊರೆಯವರು ಒಟ್ಟುಗೂಡುತ್ತಿದ್ದರು. ಆದರೆ, ಆಧುನಿಕತೆಯ ಇಂದು talgud ಎಂದರೆ ಸಮುದಾ?ವೆಲ್ಲಾ ಸೇರಿ ಊರಿನ ಸ್ವಚ್ಛತಾ ಕಾರ್ಯ ಮತ್ತು Home cafe days ಉತ್ಸವದಲ್ಲಿ ಒಟ್ಟಾಗಿ ಸೇರಿ, ಒಟ್ಟಾಗಿ ದುಡಿದು, ಫಲವನ್ನು ಹಂಚಿಕೊಳ್ಳುವುದು. ಕೆಲಸದ ಜತೆಗೆ ಆಹಾರವು ‘ನಾವು ಒಂದೇ’ ಎನ್ನುವ ಭಾವವನ್ನು ಬಲಪಡಿಸುತ್ತದೆ ಎನ್ನುತ್ತಾರೆ ಅಲ್ಲಿನವರು. ಈ ಉತ್ಸವದ ಸಂಘಟಕಿ Katrin Aedma ಹೇಳುತ್ತಾರೆ, ‘ನಮ್ಮ ಅಂಗಳಗಳನ್ನು ವಿಪರೀತ ಚಳಿ ಹವಾಮಾನದಿಂದಾಗಿ ಬೇರೆಯವರು ನೋಡುವ ಹೆಚ್ಚಾಗಿ ಸಿಗುವುದಿಲ್ಲ. ಅವು ಯಾವಾಗಲೂ ಮುಚ್ಚಿರುತ್ತವೆ. ಆದರೆ, Home cafe days ಸಮಯದಲ್ಲಿ ಮಾತ್ರ ನಮ್ಮ ಜನರು ತಮ್ಮ ಹೃದಯ ಮತ್ತು ಗೇಟ್ ಎರಡನ್ನೂ ತೆರೆಯುತ್ತಾರೆ.’ ‘Introverts ದ್ವೀಪ’ ಎಂದು ಕರೆಯಲ್ಪಡು ಇಲ್ಲಿನ ಬಹುಪಾಲು ದ್ವೀಪಗಳಲ್ಲೂ ಈ ಸಂಪ್ರದಾಯವಿದೆ. Home cafe days ಮೂಲಕ ಎಸ್ಟೋನಿಯನ್ನರು ತಾವು ಏನು ಮಾಡುತ್ತಾರೆ, ಏನು ಬೆಳೆಯುತ್ತಾರೆ, ಹೇಗೆ ಬದುಕುತ್ತಾರೆ ಎಂಬುದನ್ನು ಪ್ರವಾಸಿಗೆ ತೋರಿಸುತ್ತಾರೆ. Seto ಜನರ ಅನನ್ಯ ಸಂಸ್ಕೃತಿಗೆ ಇದು ವೇದಿಕೆಯಾಗಿದೆ. ಕೆಲವು cafes ಒಂದು ದಿನದಲ್ಲಿ 1000 ಜನರನ್ನು ಆಕರ್ಷಿಸುತ್ತವೆ.

Untitled Design - 2026-11-06T164335.402

ಆತಿಥೇಯರಿಗೆ ಇದು ಲಾಭದ ಉದ್ಯಮವಲ್ಲ, ಜೀವನಾಧಾರವೂ ಅಲ್ಲ ತಮ್ಮ ಅಭಿರುಚಿಗಳನ್ನು ಹೊರಗಿನವರಿಗೆ ಉಣಬಡಿಸುವುದು ಮಾತ್ರ ಈ ಉತ್ಸವದ ಉದ್ದೇಶ. ಅದಕ್ಕೆ ಆತಿಥೇಯರು ಆದಾಯ ಹೆಚ್ಚಿಸಲು ಪ್ರಯತ್ನಿಸುತ್ತಿಲ್ಲ. ಇದರ ಮೂಲಕ ಸ್ಥಳೀಯರು ಮತ್ತು ಜಗತ್ತು ಸಂಪರ್ಕದ ಕೊಂಡಿಯಲ್ಲಿ ಉಳಿಯಲು ಪ್ರಯತ್ನಿಸುತ್ತಿದ್ದಾರೆ. ಭಾರಿ ಗಾತ್ರದ ಯಂತ್ರ. ತಾಂತ್ರಿಕತೆ ಏನೂ ಇಲ್ಲದೆ ಮನೆಯಲ್ಲಿಯೇ ಮಾಡಿದ ಖಾದ್ಯಗಳನ್ನು ಮಲಗುವ ಕೋಣೆಯ ಕಿಟಕಿಯಿಂದ ನಡೆಸುವ cafeಯಲ್ಲಿ ಮಾರಾಟ ಮಾಡುತ್ತಾರೆ. ಮೆನುಗಳು ಬದಲಾಗುತ್ತವೆ ಮತ್ತು ಅದೇ ಆಕರ್ಷಣೆ. ಕೆಫೆಯ ಒಳಗೆ ಹೋದಮೇಲಷ್ಟೇ ಏನಿದೆ ಎಂದು ತಿಳಿಯುತ್ತದೆ. ಆ ಅನಿರೀಕ್ಷಿತತೆಯೇ ಪ್ರತಿಯೊಂದು cafeಗೆ ವೈಯಕ್ತಿಕ ಸ್ಪರ್ಶ ನೀಡುತ್ತದೆ. ಪ್ರವಾಸಿಗೆ home cafe days ರೆಸ್ಟೋರೆಂಟ್ ಅಥವಾ food festival ಕೊಡಲಾಗದ್ದನ್ನು ನೀಡುತ್ತದೆ. ಇವು ಸಾಂಪ್ರದಾಯಿಕ ಕೆಫೆಗಳಲ್ಲ. ತಾತ್ಕಾಲಿಕವಾಗಿ ಸಾರ್ವಜನಿಕವಾಗುವ ಖಾಸಗಿ ಸ್ಥಳಗಳು. ಅದಕ್ಕಾಗಿಯೇ ಅವು ಹೊರಗಿನವರಿಗೆ ʼವಿಶೇಷ ಗುಟ್ಟಿನ ಆಚರಣೆʼಯಂತೆ ಕಾಣುತ್ತದೆ. Tere (ನಮಸ್ಕಾರ), palun (ದಯವಿಟ್ಟು) ಮತ್ತು aitäh (ಧನ್ಯವಾದ) ಈ ಮೂರು ಪದಗಳನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ಬಳಸಿದರೆ ಸಾಕು home cafe days ಉತ್ಸವವು ಯಾವ ಪ್ರವಾಸಿಗೂ ಅಪ್ಯಾಯವಾಗಿಡುತ್ತದೆ.

ಬಾಲ್ಟಿಕ್ ದೇಶಗಳಾದ ಎಸ್ಟೋನಿಯಾ, ಲ್ಯಾಟ್ವಿಯಾ ಮತ್ತು ಲಿಥುವೇನಿಯಾ ಇವುಗಳ ಒಟ್ಟೂ ಪ್ರವಾಸೋದ್ಯಮದ ಆದಾಯದಲ್ಲಿ ಎಸ್ಟೋನಿಯಾದ ಗ್ರಾಮೀಣ ಪ್ರವಾಸೋದ್ಯಮ ಈಗ ಒಟ್ಟು ಪ್ರವಾಸೋದ್ಯಮದ ಕಾಲು ಭಾಗದಷ್ಟಿದೆ. ಅದರ ಬೆಳವಣಿಗೆಗೆ Home Cafe Days ನಂಥ ಉತ್ಸವಗಳು ದೊಡ್ಡ ಕೊಡುಗೆ ನೀಡುತ್ತಿವೆ ಎಂದು ಅಲ್ಲಿನ ಪ್ರವಾಸೋದ್ಯಮ ಮಂಡಳಿ ಹೇಳುತ್ತದೆ. ಕೇವಲ ಎರಡೇ ದಶಕಗಳ ಹಿಂದೆ ಆರಂಭವಾಗಿ ಈಗ ಪ್ರವಾಸೋದ್ಯಮದ ದೊಡ್ಡ ಲಾಭವಾಗಿ ಬದಲಾಗಿರುವ ಈ ವ್ಯಾಪಾರಿ ಆಕರ್ಷಣೆಯು ಭಾರತದಲ್ಲಿ ಚಿಕ್ಕ ಮನೆಯಲ್ಲಿ ವಾಸಿಸುವ ಒಂಟಿ ಜೀವಗಳಿಗೆ ಬದುಕಲು ಹೊಸ ಉಪಾಯವನ್ನು ಕೊಟ್ಟರೂ ಸಾಕು. ಜಪಾನ್ ದೇಶದ Journal of Epidemiology & Community Health ಇದರಲ್ಲಿ ಅಚ್ಚಾಗಿರುವಂತೆ ಅಡುಗೆ ಮಾಡುವುದು ಮರೆವಿನ ಖಾಯಿಲೆಯಿಂದ ಶೇ.27ರಷ್ಟು ಅಪಾಯವನ್ನು ತಪ್ಪಿಸುತ್ತದೆಯಂತೆ. ಹಾಗಾದರೆ ಮುಂದಿನ ದಿನಗಳಲ್ಲಿ ಮನೆಮನೆಯಲ್ಲೂ ಕೆಫೆಗಳು ಆರಂಭವಾಗಿ ಭಾರತ ಬೇರೆಯಲ್ಲ ಎಸ್ಟೋನಿಯಾ ಪರಕೀಯವಲ್ಲ ಎನಿಸಬಹುದು. ಜಗತ್ತಿಗೆ ಒಂದು ದೇಶವನ್ನು ತೆರೆಯುವ ಅತ್ಯಂತ ಸರಳ ದಾರಿ ಎಂದರೆ ಒಬ್ಬರ ಸ್ವಂತ ಗೇಟ್ ತೆರೆಯುವುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...