ಪಾಸ್ ಪೋರ್ಟ್ ಪ್ರಬಲ, ಪ್ರಯಾಣ ವಿರಳ
ಅಮೆರಿಕ ಅಥವಾ ಯುರೋಪ್ ಪ್ರವಾಸದ ಕನಸು ಕಾಣುತ್ತಿದ್ದ ಮಧ್ಯಮ ವರ್ಗದ ಕುಟುಂಬವೊಂದು, ಈಗ ದುರ್ಬಲ ಯೆನ್‌ನಿಂದಾಗಿ ತಮ್ಮ ಬಜೆಟ್‌ಗಿಂತ ಎರಡು ಪಟ್ಟು ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಅನೇಕರನ್ನು ತಮ್ಮ ವಿದೇಶ ಪ್ರಯಾಣದ ಯೋಜನೆಗಳನ್ನು ಮುಂದೂಡಲು ಅಥವಾ ಸಂಪೂರ್ಣವಾಗಿ ಕೈಬಿಡಲು ಪ್ರೇರೇಪಿಸಿದೆ.
ಜಗತ್ತಿನ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಜಪಾನ್‌ಗೆ ಸತತ ಅಗ್ರಸ್ಥಾನ. 2024ರ ಅಂತ್ಯದ ವೇಳೆಗೆ, ಜಪಾನಿನ ಪಾಸ್ ಪೋರ್ಟ್ ಜಾಗತಿಕವಾಗಿ ಎರಡನೇ ಅತ್ಯಂತ ಪ್ರಬಲ ಎಂದು ಪರಿಗಣಿತವಾಗಿದೆ. ಆ ನಾಗರಿಕರು ವೀಸಾ ಇಲ್ಲದೇ ಅಥವಾ ‘ವೀಸಾ-ಆನ್-ಅರೈವಲ್’ ಸೌಲಭ್ಯದೊಂದಿಗೆ ವಿಶ್ವದ ಹಲವಾರು ದೇಶಗಳಿಗೆ ಪ್ರಯಾಣಿಸಬಹುದು.
ಆದರೆ, ಈ ವಿಶೇಷ ಸೌಲಭ್ಯದ ಹೊರತಾಗಿಯೂ, ಜಪಾನಿನ ಕೇವಲ ಶೇ.17ರಷ್ಟು ನಾಗರಿಕರು ಮಾತ್ರ ಮಾನ್ಯವಾದ ಪಾಸ್‌ಪೋರ್ಟ್ ಹೊಂದಿದ್ದಾರೆ ಎಂಬುದು ಆಶ್ಚರ್ಯಕರವಾದರೂ ಸತ್ಯ. ಇದು ಇತರ ಮುಂದುವರಿದ ಆರ್ಥಿಕತೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣವಾಗಿದೆ.
2013ರಲ್ಲಿ ಸುಮಾರು ಶೇ.24ರಷ್ಟಿದ್ದ ಈ ಪ್ರಮಾಣವು ಕಳೆದ ದಶಕದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಜಗತ್ತನ್ನು ನೋಡುವ ಅಪಾರ ಅವಕಾಶಗಳಿದ್ದರೂ, ಜಪಾನಿಯರು ವಿದೇಶ ಪ್ರಯಾಣಕ್ಕೆ ಏಕೆ ಹಿಂದೇಟು ಹಾಕುತ್ತಿದ್ದಾರೆ? ಇದರ ಹಿಂದೆ ಕೇವಲ ಆರ್ಥಿಕ ಕಾರಣಗಳಿವೆಯೇ ಅಥವಾ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳೂ ಅಡಗಿವೆಯೇ? ಜಪಾನಿಯರ ವಿದೇಶಿ ಪ್ರಯಾಣದ ಆಸಕ್ತಿ ಕಡಿಮೆಯಾಗಲು ಪ್ರಮುಖ ಮತ್ತು ತಕ್ಷಣದ ಕಾರಣವೆಂದರೆ ಆರ್ಥಿಕ ಸಂಕಷ್ಟ. ಜಪಾನಿನ ಕರೆನ್ಸಿಯಾದ ‘ಯೆನ್’ ಕಳೆದ ಕೆಲವು ವರ್ಷಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ವಿಶೇಷವಾಗಿ ಅಮೆರಿಕದ ಡಾಲರ್ ಎದುರು ತೀವ್ರವಾಗಿ ಕುಸಿದಿದೆ.
ಇದನ್ನೂ ಓದಿ: ಆಕಾಶದಲ್ಲಿ ಟ್ರಾಫಿಕ್ ಜಾಮ್
ಇದು ಜಪಾನಿನ ನಾಗರಿಕರಿಗೆ ವಿದೇಶ ಪ್ರಯಾಣವನ್ನು ದುಬಾರಿಯನ್ನಾಗಿ ಮಾಡಿದೆ. ಹಿಂದೆ ಹತ್ತು ಸಾವಿರ ಯೆನ್‌ಗೆ ಉತ್ತಮ ಮೌಲ್ಯ ಸಿಗುತ್ತಿದ್ದ ದೇಶಗಳಲ್ಲಿ ಈಗ ಅದೇ ಹಣಕ್ಕೆ ಕಡಿಮೆ ಸೇವೆ ಅಥವಾ ವಸ್ತುಗಳು ಲಭ್ಯವಾಗುತ್ತಿವೆ. ವಿಮಾನಯಾನ, ಹೋಟೆಲ್, ಆಹಾರ ಮತ್ತು ಇತರ ಪ್ರವಾಸಿ ಚಟುವಟಿಕೆಗಳ ವೆಚ್ಚಗಳು ಗಗನಕ್ಕೇರಿವೆ.
ಉದಾಹರಣೆಗೆ, ಅಮೆರಿಕ ಅಥವಾ ಯುರೋಪ್ ಪ್ರವಾಸದ ಕನಸು ಕಾಣುತ್ತಿದ್ದ ಮಧ್ಯಮ ವರ್ಗದ ಕುಟುಂಬವೊಂದು, ಈಗ ದುರ್ಬಲ ಯೆನ್‌ನಿಂದಾಗಿ ತಮ್ಮ ಬಜೆಟ್‌ಗಿಂತ ಎರಡು ಪಟ್ಟು ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಅನೇಕರನ್ನು ತಮ್ಮ ವಿದೇಶ ಪ್ರಯಾಣದ ಯೋಜನೆಗಳನ್ನು ಮುಂದೂಡಲು ಅಥವಾ ಸಂಪೂರ್ಣವಾಗಿ ಕೈಬಿಡಲು ಪ್ರೇರೇಪಿಸಿದೆ.
ಇದಲ್ಲದೇ ಜಾಗತಿಕ ಹಣದುಬ್ಬರ ಮತ್ತು ಇಂಧನ ಬೆಲೆ ಏರಿಕೆಯು ವಿಮಾನಯಾನದ ಟಿಕೆಟ್ ದರಗಳನ್ನು ಇನ್ನಷ್ಟು ಹೆಚ್ಚಿಸಿದ್ದು, ಸಾಮಾನ್ಯ ಜಪಾನಿ ಪ್ರಜೆಗಳಿಗೆ ವಿದೇಶ ಪ್ರಯಾಣವು ಕೈಗೆಟುಕದಾಗಿದೆ. ಜಪಾನಿನ ಪಾಸ್‌ಪೋರ್ಟ್ ಹೊಂದುವವರ ಸಂಖ್ಯೆ ಇಳಿಮುಖವಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ಯುವಪೀಳಿಗೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣ ಮತ್ತು ವಿದೇಶಿ ಶಿಕ್ಷಣದ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದು.

ಹಿಂದಿನ ತಲೆಮಾರಿನ ಯುವಕರಲ್ಲಿ ವಿದೇಶಕ್ಕೆ ಹೋಗಿ ಕಲಿಯುವುದು, ಹೊಸ ಸಂಸ್ಕೃತಿಗಳನ್ನು ಅನ್ವೇಷಿಸುವುದು ಒಂದು ದೊಡ್ಡ ಕನಸಾಗಿತ್ತು. ಆದರೆ ಇಂದಿನ ಯುವಕರು ಹೆಚ್ಚು ‘ಒಳಮುಖಿ’ (inward-looking) ಧೋರಣೆಯನ್ನು ಹೊಂದಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ, ಜಪಾನ್‌ನಲ್ಲಿಯೇ ಅತ್ಯುತ್ತ ಮವಾದ ಜೀವನಶೈಲಿ, ಮನರಂಜನೆ ಮತ್ತು ತಂತ್ರಜ್ಞಾನ ಲಭ್ಯವಿವೆ.
ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜಗತ್ತಿನ ಯಾವುದೇ ಮೂಲೆಯ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾದ್ದರಿಂದ, ಭೌತಿಕವಾಗಿ ಅಲ್ಲಿಗೆ ಹೋಗಬೇಕೆಂಬ ಹಂಬಲ ಕಡಿಮೆಯಾಗಿದೆ. ಎರಡನೆಯದಾಗಿ, ವಿದೇಶಗಳಲ್ಲಿನ ಭಾಷೆಯ ತೊಡಕು, ಸುರಕ್ಷತೆಯ ಬಗ್ಗೆ ಇರುವ ಆತಂಕ ಮತ್ತು ಅನಿಶ್ಚಿತತೆಯ ಭಾವನೆಗಳು ಯುವಕರನ್ನು ತಮ್ಮ ‘ಕಂಫರ್ಟ್ ಜೋನ್’ ಬಿಟ್ಟು ಹೊರಬರಲು ಹಿಂಜರಿಯುವಂತೆ ಮಾಡಿವೆ.
ವಿದೇಶಿ ವ್ಯಾಸಂಗಕ್ಕೆ ಸಂಬಂಧಿಸಿದಂತೆ, ಅದರ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಜತೆಗೆ, ಜಪಾನ್ ನಲ್ಲಿಯೇ ಉತ್ತಮ ಉದ್ಯೋಗಾವಕಾಶಗಳು ಲಭ್ಯವಿರುವಾಗ, ವಿದೇಶಕ್ಕೆ ಹೋಗಿ ಕಷ್ಟಪಟ್ಟು ಕಲಿಯುವ ಅಗತ್ಯವಿಲ್ಲ ಎಂಬ ಮನೋಭಾವವೂ ಯುವಕರಲ್ಲಿ ಬೆಳೆಯುತ್ತಿದೆ. ಈ ಹಿಂದೆ ಅಮೆರಿಕ ಮತ್ತು ಯುರೋಪಿಯನ್ ವಿಶ್ವವಿದ್ಯಾಲಯಗಳಿಗೆ ಹೋಗುತ್ತಿದ್ದ ಜಪಾನಿ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಕುಸಿದಿದೆ.
ಜಪಾನಿನ ವಿಶಿಷ್ಟ ಕೆಲಸದ ಸಂಸ್ಕೃತಿಯು ವಿದೇಶಿ ಪ್ರಯಾಣಕ್ಕೆ ಒಂದು ದೊಡ್ಡ ಅಡ್ಡಿಯಾಗಿದೆ. ಜಪಾನಿನ ಕಂಪನಿಗಳಲ್ಲಿ ದೀರ್ಘಕಾಲದ ಕೆಲಸದ ಅವಧಿಗಳು ಸಾಮಾನ್ಯ. ನೌಕರರು ತಮ್ಮ ಕಂಪನಿಗೆ ನಿಷ್ಠೆ ಮತ್ತು ಸಮರ್ಪಣೆಯನ್ನು ತೋರಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಾರ್ಷಿಕವಾಗಿ ರಜೆಗಳು ಲಭ್ಯವಿದ್ದರೂ, ದೀರ್ಘಕಾಲದ ರಜೆ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ.
ಸಹೋದ್ಯೋಗಿಗಳಿಗೆ ತೊಂದರೆಯಾಗುತ್ತದೆ ಅಥವಾ ಕಂಪನಿಯ ಕೆಲಸದ ಮೇಲೆ ಪರಿಣಾಮ ಬೀರಬಹುದು ಎಂಬ ಭಾವನೆಯಿಂದ ಅನೇಕರು ದೀರ್ಘ ರಜೆಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ.