- ವಿಂಗ್ ಕಮಾಂಡರ್ ಸುದರ್ಶನ್


ವಿಮಾನಯಾನದ ಅನುಭವದಲ್ಲಿ ಲ್ಯಾಂಡಿಂಗ್..ಭೂಸ್ಪರ್ಶ ಒಂದು ಪ್ರಮುಖ ಹಂತ. ವಿಮಾನ ಚಲಾಯಿಸುತ್ತಿರುವ ವೈಮಾನಿಕನಿಗೂ ಮತ್ತು ಹಿಂದೆ ಕೂತಿರುವ ಪ್ರಯಾಣಿಕರಿಗೂ ವಿಮಾನಯಾನ ಅನುಭವದ ಕೊನೆಯ ಹಂತ, ನೈಸಾಗಿ ಗೊತ್ತೇ ಆಗದಂತೆ Kisser landing….ಭೂಸ್ಪರ್ಶ ಮಾಡಿದರೆ ಆತಂಕಗೊಂಡು ಉಸಿರು ಬಿಗಿಹಿಡಿದು ಕೂತಿದ್ದ ಪ್ರಯಾಣಿಕರು ನಿರಾಳವಾಗಿ ಉಸಿರಾಡುತ್ತಾರೆ. "Nice Landing Captain…" ಎಂದು ವೈಮಾನಿಕನನ್ನು ಹೊಗಳಿ ವಿಮಾನದಿಂದ ಇಳಿಯುತ್ತಾರೆ. ವೈಮಾನಿಕರೂ ಸಂತೋಷಪಡುತ್ತಾರೆ. ಪ್ರತಿಸಲವೂ ಹೀಗೇ ಆಗುತ್ತದಾ? ಬಹುತೇಕ ಹಾಗಾಗಿರುವುದಿಲ್ಲ, ಕೆಲವೊಮ್ಮೆ ಧಡ್ ಅಂತಾ ಬೆನ್ನುಮೂಳೆ ಮುರಿಯಿತೇನೋ ಎನ್ನುವಷ್ಟು ಜೋರಾಗಿ ಭೂಸ್ಪರ್ಷ ಆಗಿಬಿಡುತ್ತದೆ, ಪ್ರಯಾಣಿಕರು ಆತಂಕದಿಂದ ಗಾಬರಿಗೊಳ್ಳುವ ಪರಿಸ್ಥಿತಿಯೂ ಇರುತ್ತದೆ. ಯಾಕೆ ಕೆಲವೊಮ್ಮೆ ಹೀಗಾಗುತ್ತದೆ ಎಂದು ತಿಳಿಯುವ ಮೊದಲು ಒಂದಿಷ್ಟು ವೈಮಾನಿಕ ಜ್ಞಾನದ ಹಿನ್ನೆಲೆಯನ್ನು ತಿಳಿಯೋಣ.

take off plane

ಟೇಕಾಫ್ ಸಮಯದಲ್ಲಿ ಎಂಜಿನ್ನಿನ ಸಹಾಯದಿಂದ ವಿಮಾನ ರನ್‌ವೇ ಮೇಲೆ ದೌಡಾಯಿಸುತ್ತದೆ. ಒಂದು ಗತಿ ತಲುಪಿದ ಮೇಲೆ ಅದು ತಾನಾಗಿಯೇ ನೆಲದಿಂದ ಮೇಲೇರಲು ಪ್ರಾರಂಭಿಸುತ್ತದೆ. ಆಗ ಪೈಲಟ್ ಅದನ್ನು ಸುರಕ್ಷಿತವಾಗಿ ನಿಯಂತ್ರಿಸುತ್ತಾರೆ ಅಷ್ಟೆ. ಹೀಗೆ ಯಾಕೆ ಆಗುತ್ತದೆ ಎಂದರೆ ಅದು ವಿಮಾನದ ರೆಕ್ಕೆಯ ವಿನ್ಯಾಸದಿಂದಾಗಿ. ವಿಮಾನದ ನೆಲದ ಮೇಲಿನ ಓಟದಲ್ಲಿ ವೇಗ ಹೆಚ್ಚಾಗುತ್ತಿದ್ದಂತೆಯೇ ರೆಕ್ಕೆಯ ಮೇಲ್ಭಾಗದ ವಾಯು ಒತ್ತಡ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಅದಕ್ಕೆ ತದ್ವಿರುದ್ಧವಾಗಿ ರೆಕ್ಕೆಯ ಕೆಳಭಾಗದ ಒತ್ತಡ ಹೆಚ್ಚಾಗುತ್ತಾ ಹೋಗಿ ಒಂದು ನಿರ್ದಿಷ್ಟ ವೇಗ ತಲುಪಿದ ನಂತರ ವಿಮಾನ ಮೇಲಕ್ಕೆ ಹಾರಲೇ ಬೇಕು. ಇನ್ನು ಆಕಾಶದಲ್ಲಿ ಕನಿಷ್ಟ ಇಷ್ಟು ವೇಗದಲ್ಲಿ ಅಥವಾ ಇದಕ್ಕಿಂತ ಹೆಚ್ಚಿನ ವೇಗದಲ್ಲಿ ಹಾರಲೇ ಬೇಕು ಇಲ್ಲದಿದ್ದರೆ ಧೊಪ್ಪೆಂದು…ಇಲ್ಲ ಇಲ್ಲ ಹಾಗೇನೂ ಆಗಲ್ಲಾ, ಅದನ್ನೂ ನಿಯಂತ್ರಿಸಬಹುದು ಆದರೆ ಹೇಳುವ ಅರ್ಥ ಇಷ್ಟೇ ಪ್ರತಿಯೊಂದು ವಿಮಾನಕ್ಕೂ ಕನಿಷ್ಟ ಇಷ್ಟು ಅಂತ ವೇಗವಿರುತ್ತದೆ. ಅದಕ್ಕಿಂತ ಕಡಿಮೆಯಾದರೆ ಅದಕ್ಕೆ ಆಕಾಶದಲ್ಲಿ ಹಾರಾಡುವ ಶಕ್ತಿ ಇರುವುದಿಲ್ಲ ಹಾಗಾಗಿ ಅದು ಕೆಳಗಿಳಿಯಲು ಪ್ರಾರಂಭಿಸುತ್ತದೆ. ಈ ವೇಗವನ್ನು stalling speed ಎನ್ನುತ್ತಾರೆ. ನೆಲದ ಹತ್ತಿರಕ್ಕೆ ಬಂದು ಈ ವೇಗವನ್ನು ನಿಯಂತ್ರಿತವಾಗಿ ಕಡಿಮೆ ಮಾಡುತ್ತಾ stalling speed ತಲುಪಿದಾಗ ಭೂಸ್ಪರ್ಶವಾಗುತ್ತದೆ. ಲ್ಯಾಂಡಿಂಗ್ ಅಂದರೆ ಇಷ್ಟು ಸರಳವೇ? ಖಂಡಿತ ಇಲ್ಲ. ಅದಕ್ಕೆ ತುಂಬಾ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ.

“Cabin crew, prepare for landing.”

ಪೈಲಟ್ಟಿನ ಆದೇಶ ಬರುತ್ತಲೇ ಪ್ರಯಾಣಿಕರ ಕಕ್ಷೆಯಲ್ಲಿ ಗಗನಸಖಿಯರೂ ಮತ್ತು ಕಾಕ್‌ಪಿಟ್‌ನಲ್ಲಿ ಪೈಲಟ್ಟುಗಳು ಲ್ಯಾಂಡಿಂಗಿಗೆ ತಯಾರಿ ನಡೆಸುತ್ತಾರೆ. ಭೂಸ್ಪರ್ಶದ ಸಿದ್ಧತೆ ಹಲವಾರು ನಿಮಿಷಗಳ ಮೊದಲೇ ನಡೆಯಬೇಕು. ಇದರ ಮೊದಲ ಹಂತದಲ್ಲಿ ವೈಮಾನಿಕರು ಆ ವಾಯುನೆಲೆಯ ಹವಾಮಾನ ವರದಿ ಪಡೆಯುತ್ತಾರೆ. ಯಾವಾಗಲೂ ಗಾಳಿ ಎದುರಿನಿಂದ ಬರುವ ದಿಕ್ಕಿನಲ್ಲಿಯೇ ವಿಮಾನಗಳು ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡುವುದು. ಹೀಗೆ ಮಾಡುವುದರಿಂದ ವಿಮಾನ ನಿಯಂತ್ರಣ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಗಾಳಿಯ ರಭಸ ಹೆಚ್ಚಾಗಿದ್ದರೆ ಅದರಂತೆ ವಿಮಾನದ ವೇಗವನ್ನು ಸ್ವಲ್ಪ ಹೆಚ್ಚಿಸಬೇಕಾಗುತ್ತದೆ. ಗಾಳಿಯ ದಿಕ್ಕು ಎಡದಿಂದ ಅಥವಾ ಬಲದಿಂದ ಬೀಸುತ್ತಿದ್ದರೆ ಅದಕ್ಕೂ ಪ್ರತ್ಯೇಕ ತಾಂತ್ರಿಕತೆ ಇರುತ್ತದೆ. ಇನ್ನು ಮಳೆಗಾಲದಲ್ಲಿ ಬಹುತೇಕ ರನ್‌ವೇಗಳು ಒದ್ದೆಯಾಗಿರುತ್ತವೆ. ಅಥವಾ ಜೋರಾಗಿ ಮಳೆ ಬರುವ ಸಮಯದಲ್ಲಿ ರನ್‌ವೇ ಸರಿಯಾಗಿ ಕಾಣಿಸುವುದಿಲ್ಲ, ಆಗ ಬಹು ಎಚ್ಚರಿಕೆಯಿಂದ ಲ್ಯಾಂಡ್ ಮಾಡಬೇಕಾಗುತ್ತದೆ. ನೀರು ನಿಂತ ರನ್‌ವೇಯ ಮೇಲೆ ಲ್ಯಾಂಡ್ ಮಾಡುವಾಗ ವಿಮಾನ ಪಕ್ಕಕ್ಕೆ ಜಾರುವ ಅಪಾಯವೂ ಇರುತ್ತದೆ ಹಾಗೂ ಬ್ರೇಕ್ ಅಷ್ಟು ಪರಿಣಾಮಕಾರಿಯಾಗಿ ಹಿಡಿಯುವುದಿಲ್ಲ. ಕೆಲವು ರನ್‌ವೇಗಳು ಚಿಕ್ಕವು ಇರುತ್ತದೆ ಅಥವಾ ಬೆಟ್ಟಗುಡ್ಡಗಳ ಮೇಲಿರುತ್ತವೆ ಹಾಗಾಗಿ ಭೂಸ್ಪರ್ಶದ ಮೊದಲೇ ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಂಡು ಮುಂದುವರೆಯಬೇಕಿರುತ್ತದೆ.

aeroplane pic

ರನ್‌ವೇಯ ಮೇಲೆ ಒಂದು Touch down point ಎಂದು ಒಂದು ನಿರ್ದಿಷ್ಟ ಆಯತಾಕಾರದ ಬಿಳಿಬಣ್ಣದ ಜಾಗದಲ್ಲಿ ಭೂಸ್ಪರ್ಶ ಮಾಡತಕ್ಕದ್ದು. ಹಾಗಾಗಿ ರನ್‌ವೇಯಿಂದ ಸುಮಾರು ಏಳು ಎಂಟು ಕಿಲೋಮೀಟರ್ ದೂರದಿಂದಲೇ ಈ ಜಾಗದ ಮೇಲೆ ಗುರಿ ಇಟ್ಟು ವಿಮಾನವನ್ನು ಒಂದು ನಿಗದಿತ ಗತಿಯಲ್ಲಿ ಕೆಳಗಿಳಿಸಲಾಗುತ್ತದೆ. ಹಾಗೆ ಕೆಳಗಿಳಿಸುವಾಗ ವಿಮಾನದ ವೇಗವನ್ನು ಹೆಚ್ಚಿಸದಂತೆ ಇಂಜನ್ನಿನ ಸಾಮರ್ಥ್ಯವನ್ನು ನಿಧಾನವಾಗಿ ಕಡಿಮೆ ಮಾಡಲಾಗುತ್ತದೆ. ವಿಮಾನವನ್ನು ಪ್ರತಿ ನಿಮಿಷ ಸುಮಾರು 600 ರಿಂದ 700 ಅಡಿಗಳಷ್ಟು ಗತಿಯಲ್ಲಿ ಕೆಳಗೆ ಇಳಿಸುತ್ತಾ ನೆಲದಿಂದ 50-30 ಅಡಿ ಇದ್ದಾಗ ವಿಮಾನವನ್ನು ಭೂಮಿಗೆ ಸಮಾನಾಂತರವಾಗಿ ಹಾರಿಸಿ ಆ ವಿಮಾನದ stalling speed ತಲುಪಿದ ಕೆಲವು ಸೆಕೆಂಡುಗಳಲ್ಲಿ ಭೂಸ್ಪರ್ಶವಾಗುತ್ತದೆ.

ದುರದೃಷ್ಟಕರ ಸಂಗತಿ ಏನೆಂದರೆ ವೈಮಾನಿಕ ದುರ್ಘಟನೆಗಳಲ್ಲಿ ಅತಿ ಹೆಚ್ಚು ಆಕ್ಸಿಡೆಂಟ್ ಸಂಭವಿಸುವುದು ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ ಈ ಹಂತದಲ್ಲಿ ವೇಗ ಕಡಿಮೆ ಇರುತ್ತದೆ ಹಾಗಾಗಿ ವಿಮಾನಗಳ ನಿಯಂತ್ರಣ ಬಹುಬೇಗನೆ ಕೈತಪ್ಪಿ ಹೋಗುತ್ತದೆ. ಎರಡನೆಯದು ಭೂಮಿಗೆ ಸಮೀಪವಾಗಿರುವುದರಿಂದ ಸುರಕ್ಷಿತವಾಗಿ ಮರುನಿಯಂತ್ರಣ ಪಡೆಯಲು ಅವಕಾಶ ಇರುವುದಿಲ್ಲ. ಭೂಸ್ಪರ್ಶದ ಸಮಯದ ಅಪಘಾತಗಳಲ್ಲಿ ಇನ್ನೊಂದು ಮಾನಸಿಕ ಕೋನ ಎದ್ದು ಕಾಣುತ್ತದೆ ಅದೇನೆಂದರೆ ಇನ್ನೇನು ಮನೆ ತಲುಪಿದೆ, ಇದೊಂದು ಲ್ಯಾಂಡಿಂಗ್ ಆದರೆ ಸಾಕು ಕೆಲಸ ಮುಗಿದಂತೆ ಎನ್ನುವ ಮಾನವಸಹಜ ಮನೋಭಾವ ವೈಮಾನಿಕರಲ್ಲೂ ಮೂಡುತ್ತದೆ. ಕೆಲವು ವರ್ಷಗಳ ಹಿಂದೆ ನಡೆದ ಮಂಗಳೂರಿನ ಅಪಘಾತ ಮತ್ತು ಕಳೆದ ವರ್ಷ ನಡೆದ ಕಲ್ಲಿಕೋಟೆಯ ಅಪಘಾತ ಇದರ ನಿದರ್ಶನಗಳು. ಎರಡೂ ವಿಮಾನಗಳು ಸುಮಾರು ನಾಲ್ಕು ಗಂಟೆಗಳ ಯಾನವನ್ನು ಮುಗಿಸಿಕೊಂಡು ಮರಳಿ ಬಂದಿದ್ದವು, ಪ್ರತಿಕೂಲ ಹವಾಮಾನವಿದ್ದರೂ ಅಥವಾ ನಿದ್ದೆಯ ಮಂಪರಿನಲ್ಲಿದ್ದರೂ ತಾನು ಲ್ಯಾಂಡಿಂಗ್ ಮಾಡಿಯೇ ತೀರುತ್ತೇನೆ ಎನ್ನುವ ಅತಿಯಾದ ಆತ್ಮವಿಶ್ವಾಸ ಅಥವಾ ಛಲ, ಹಟ ಇಂಥ ಅಪಘಾತಗಳಿಗೆ ಕಾರಣವಾಗುತ್ತದೆ.

ನನ್ನ ಮೂರು ದಶಕಗಳ ವೈಮಾನಿಕ ಅನುಭವದಲ್ಲಿ ನೂರಕ್ಕೂ ಹೆಚ್ಚು ವಿವಿಧ ವಿಮಾನ ನಿಲ್ದಾಣಗಳಲ್ಲಿ ಹಲವಾರು ವಿಭಿನ್ನ ವಿಮಾನಗಳ ಭೂಸ್ಪರ್ಶದ ಅನುಭವವಿದೆ. ಸರಳವಾಗಿ ಹೇಳುವುದಾದರೆ ಒಂದು ಲ್ಯಾಂಡಿಂಗ್ ಇನ್ನೊಂದು ಲ್ಯಾಂಡಿಂಗ್ ಥರಾ ಇರುವುದಿಲ್ಲ. ಹಾಗಾಗಿ ಒಬ್ಬ ಅನುಭವಿ ಪೈಲಟ್ ಕೂಡ ತಾನು ಭೂಸ್ಪರ್ಶದ ಕಲೆಯನ್ನು ಪರಿಪಕ್ವಗೊಳಿಸಿಕೊಂಡಿದ್ದೇನೆ ಎಂದು ಬೀಗುವುದಿಲ್ಲ, ಬೀಗಬಾರದು. ಆದರೆ ಪ್ರತಿಯೊಂದು ಹೊಸ ಏರ್ ಪೋರ್ಟಿನ ವಾಯುಪಟ್ಟಿಯಲ್ಲಿ ಭೂಸ್ಪರ್ಶದ ಅನುಭವ ಇದೆಯಲ್ಲ, ಅದೊಂದು ಅವರ್ಣನೀಯ ಆನಂದದ ಅನುಭವ. ಆ ಏರ್‌ಪೋರ್ಟನ್ನು ಗೆದ್ದ ಭಾವನೆ. ವಾಯುಸೇನೆಯ ಬಹುತೇಕ ವಾಯುನೆಲೆಗಳಲ್ಲಿ, ನಾಗರಿಕ ವಾಯುನಿಲ್ದಾಣಗಳಲ್ಲಿ, ಹಲವಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಭೂಸ್ಪರ್ಶದ ಅನುಭವವಿದೆ. ಬೆಂಗಳೂರಿನಲ್ಲಿ ಮತ್ತು ಆಸುಪಾಸಿನಲ್ಲಿರುವ ಎಲ್ಲಾ ರನ್‌ವೇಗಳ ಮೇಲೆ ಭೂಸ್ಪರ್ಶದ ಅನುಭವ ನನಗೆ ಇದೆ ಎನ್ನುವುದು ಹೆಮ್ಮೆಯ ವಿಷಯ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡೂ ರನ್‌ವೇಗಳ, ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ, ಯಲಹಂಕದಲ್ಲಿ, ಪಕ್ಕದ ಜಕ್ಕೂರಿನಲ್ಲಿ, ಹೊರವಲಯದ ಹೊಸೂರಿನಲ್ಲಿ..ಈ ಎಲ್ಲಾ ವಿಮಾನ ಪಟ್ಟಿಗಳ ಮೇಲೆ ಭೂಸ್ಪರ್ಶ ಮಾಡಿರುವ ಹೆಮ್ಮೆ ಇದೆ.

Auto-land ಎನ್ನುವ ಅದ್ಭುತ ಅನುಭವ

ವಾಯುಸೇನೆಯ ಅನುಭವದಲ್ಲಿ ನಾವು ಕಲಿತಿದ್ದೇನೆಂದರೆ ಯಂತ್ರಕ್ಕಿಂತ ಅದನ್ನು ಹಿಂದಿನಿಂದ ಚಲಾಯಿಸುವ ಮಾನವನೇ ಶ್ರೇಷ್ಠ..It is the Man behind the Machine who matters ಎಂದು. ಇದು ಬಹುತೇಕ ಸರಿಯೇ. ಆದರೆ ವಿಮಾನಗಳ ಆಧುನಿಕ ಅವಿಷ್ಕಾರ ಮುಂದುವರಿದಂತೆ ಏರ್ ಬಸ್ ವಿಮಾನದಂಥ ಅತ್ಯಾಧುನಿಕ ವಿಮಾನದ ನಿರ್ಮಾಣ ಹೇಗಿದೆ ಎಂದರೆ ಹೊರಗೆ ದಟ್ಟವಾಗಿ ಮಂಜುಕವಿದು ಏನೇನೂ ಗೋಚರಿಸದಿದ್ದ ಸಮಯದಲ್ಲಿ ಈ ವಿಮಾನ ಸ್ವಯಂಚಾಲಿತ ಭೂಸ್ಪರ್ಶವನ್ನು ಮಾಡುತ್ತದೆ. ಇದನ್ನು Auto-land ಎನ್ನುತ್ತಾರೆ. ಇಂಥ ಒಂದು ಪ್ರಕ್ರಿಯೆ ನಡೆಸಲು ಪೈಲಟ್ಟುಗಳಿಗೆ ವಿಮಾನದ ಯಾಂತ್ರಿಕತೆಯ ಬಗ್ಗೆ ಸಂಪೂರ್ಣ ವಿಶ್ವಾಸವಿರುವುದು ಅತ್ಯವಶ್ಯಕ ಮತ್ತು ಇದಕ್ಕೆ ತಕ್ಕಂತೆ ಪೈಲಟ್ಟುಗಳಿಗೆ ಸೂಕ್ತವಾದ ತರಬೇತಿಯನ್ನೂ ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವೈಮಾನಿಕ ತುಂಬಾ ಎಚ್ಚರಿಕೆಯಿಂದ ನಿಗಾವಹಿಸಿ ಎಲ್ಲಾ ಸರಿಯಾಗಿ ನಡೆಯುತ್ತಿದೆಯೇ ಎಂದು ಗಮನಿಸುತ್ತಿರಬೇಕು ಮತ್ತು ಏನಾದರೂ ಎಡವಟ್ಟಾದರೆ ಕ್ಷಣಾರ್ಧದಲ್ಲಿ ನಿಯಂತ್ರಿಸಲು ತಯಾರಿರಬೇಕು.

ಉತ್ತರ ಭಾರತದ ಚಳಿಗಾಲದ ಬಗ್ಗೆ ನಿಮಗೆ ತಿಳಿದಿರಬಹುದು. ಅಲ್ಲಿ ಮಂಜು ಎಷ್ಟು ದಟ್ಟವಾಗಿ ಕವಿದಿರುತ್ತದೆ ಎಂದರೆ, ನಿಮ್ಮ ಪಕ್ಕದಲ್ಲಿ ನಿಂತು ಮಾತನಾಡುವವರೇ ನಿಮಗೆ ಕಾಣಿಸುವುದಿಲ್ಲ! ಅಂಥದರಲ್ಲಿ 180 ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿರುವ ಸುಮಾರು ಅರವತ್ತು ಸಾವಿರ ಕೆಜಿ ತೂಕದ ವಿಮಾನ ಸುಮಾರು 240-250 ಕಿಮೀ ವೇಗದಲ್ಲಿ ತನ್ನಷ್ಟಕ್ಕೇ ತಾನೇ ಭೂಸ್ಪರ್ಶ ಮಾಡುತ್ತದೆ! ಇದು ಅದ್ಭುತ ವೈಮಾನಿಕ ಅವಿಷ್ಕಾರ. ಮುಂದೊಂದು ದಿನ ಪ್ರಯಾಣಿಸುವಾಗ ಪೈಲಟ್ …This landing was done without any input from the pilot …ಎನ್ನುವ ಅನೌನ್ಸ್ ಮೆಂಟ್ ಕೇಳಬಹುದು.

Happy Landings...!