• ಬಡೆಕ್ಕಿಲ ಪ್ರದೀಪ

ಟ್ರಾವೆಲ್‌ ಮಾಡುವುದು ಅಂದರೆ, ಅದೊಂದು ಸುಂದರ ಅನುಭೂತಿ. ಅದರ 25 ವಿಭಿನ್ನ ಆಯಾಮಗಳನ್ನು ಇಲ್ಲಿ ನೋಡೋಣ!

ಭೌಗೋಳಿಕ

ಒಂದು: ಹೊಸದನ್ನು ಹುಡುಕಲು ಸಾವಿರ ಕಿಲೋಮೀಟರ್‌ ಹೋಗದೇ, ನಿಮ್ಮದೇ ಸಿಟಿಯಲ್ಲಿ, ಹಾಗೇ random ಆಗಿ ಒಂದು ದಿಕ್ಕಿನಲ್ಲಿ ಒಂದು ಕಿಲೋಮೀಟರ್‌ ಹೋಗಿ ನೋಡಿ.
ಎರಡು: ಹೋದ ಸ್ಥಳದಲ್ಲಿ, ಅದು ಯಾವುದೇ ಇರಲಿ, ಮೊದಲ ಒಂದು ಗಂಟೆ ಯಾವುದೇ ಫೊಟೋ, ವಿಡಿಯೋ ಬೇಡ, ಸ್ಥಳದ ವಿಶೇಷತೆಯನ್ನು ಅನುಭವಿಸುವಲ್ಲಿ ಸಂಪೂರ್ಣ ಮಗ್ನರಾಗಿ.
ಮೂರು: ಹೋದ ಯಾವುದೇ ಸ್ಪೆಷಲ್‌ ಜಾಗದ ಸುತ್ತಲಿನ ಹೊಟೇಲ್‌ಗಳಲ್ಲಿ ಎಲ್ಲ ಕಮರ್ಷಿಯಲ್ ಆಗಿರುತ್ತದೆ, ಹಾಗಾಗಿ ಒಂದಷ್ಟು ದೂರದ ಜಾಗದ ರೆಸ್ಟೋರೆಂಟ್‌ ಅಥವಾ ಖಾನಾವಳಿಗೆ ಕಾಲಿಡಿ.
ನಾಲ್ಕು: ಒಂದಾದಮೇಲೊಂದು ಜಾಗಕ್ಕೆ ಧಾವಿಸುವ ಗಡಿಬಿಡಿ ಆಗುವ ಫೀಲ್‌ ಬಂದರೆ, ಹೋಗಲು ಪ್ಲಾನ್‌ ಮಾಡಿದ ಪಟ್ಟಿಯಿಂದ ಒಂದೆರಡು ಜಾಗಗಳನ್ನು ಕೈಬಿಡಿ. ಹೋಗುವ ಜಾಗವನ್ನು ಸಂಪೂರ್ಣ ಆಸ್ವಾದಿಸಿ.
ಐದು: ಹೋದ ಟ್ರಿಪ್‌ನಲ್ಲಿ ಒಂದು ಹೊತ್ತು ಮ್ಯಾಪ್‌ ಬದಿಗಿಡಿ, ಹೋದ ಜಾಗವನ್ನು ಹಾಗೇ ಸುತ್ತಾಡಿ ಬನ್ನಿ, ಅದರ ಮಜಾ ಅನುಭವಿಸಿ.

ಇದನ್ನೂ ಓದಿ: TLR ಅನಲಾಗ್‌ ಕ್ಯಾಮೆರಾಗಳು

ಪಂಚೇಂದ್ರಿಯಗಳು

ಆರು: ಪ್ರತಿ ಊರಿನ ಧ್ವನಿ ಬೇರೇನೇ, ಅದನ್ನು ಅನುಭವಿಸಿ ನೋಡಿ. ಇದು ನಿಮ್ಮ ಟ್ರಾವೆಲ್‌ ಅನುಭವವನ್ನು ಬೇರೇ ಸ್ತರಕ್ಕೆ ಕೊಂಡೊಯ್ಯದಿದ್ದರೆ ಮತ್ತೆ ಕೇಳಿ.
ಏಳು: ಒಂದೂರಿನ ರುಚಿ, ಆ ಊರಿನ ನೀರಿನಲ್ಲಿ ಅನುಭವಿಸಬಹುದು, ಹಾಗಂತ ಆರೋಗ್ಯದ ಕಡೆಗೂ ಗಮನ ಇರಲಿ! ಲೋಕಲ್‌ ಟೀ ಸ್ಟಾಲ್‌ನಲ್ಲಿ ಮಾಡಿದ ಟೀ- ಕಾಫಿ ಕುಡಿದು ನೋಡಿ!
ಎಂಟು: ಹೋದ ಊರಿನ ಮಾರ್ಕೆಟ್‌ನ ಹತ್ತಿರ ಹಾಗೇ ಸ್ವಲ್ಪ ಹೊತ್ತು ಕುಳಿತು ನೋಡಿ, ಅಲ್ಲಿನ ಎಲ್ಲದನ್ನೂ ಕೂತು ಅನುಭವಿಸುವ ಮಜಾ ಹೇಗೆ ಅಂತ ಹೇಳಿ.
ಒಂಬತ್ತು: ಯಾವುದೋ ಕಲಾತ್ಮಕ ಸೌಂದರ್ಯವನ್ನು ನೋಡುವುದಷ್ಟೇ ಅಲ್ಲ (ಅವಕಾಶ ಇದ್ದರೆ) ಮುಟ್ಟಿ ಅನುಭವಿಸಿ.
ಹತ್ತು: ಮೂಗಿಗೆ ಬಡಿಯುವ ಊರ ಅನುಭೂತಿಯನ್ನು ಆನಂದಿಸಿ. ಮಲ್ಪೆ ಬೀಚ್‌ನ ಅಲೆಗಳು ಮಾತ್ರ ಅಲ್ಲ, ಅಲ್ಲಿನ ಉಪ್ಪು ತುಂಬಿದ ಗಾಳಿಯ ಪರಿಮಳ ಬೇರೆಯದೇ ಬಿಡಿ.

ಜನ ಮತ್ತು ಸಂಸ್ಕೃತಿ

ಹನ್ನೊಂದು: ಆಪ್‌ ನೋಡಿ ಜಾಗ ಹುಡುಕಬೇಡಿ, ಆಟೋ ಡ್ರೈವರ್‌ಗಿಂತ ಒಳ್ಳೆ ಗೈಡ್‌ ನಿಮ್ಮ ಕೈಗೆ ಯಾರೂ ಸಿಗೋದಿಲ್ಲ. ಹಾಗಂತ ಬಾಯಿಗೆ ಬಂದ ಹಾಗೆ ಚಾರ್ಜ್‌ ಮಾಡದೇ ಇರುವುದನ್ನು ಖಾತರಿಪಡಿಸಿಕೊಳ್ಳಿ.
ಹನ್ನೆರಡು: ಹೊಸ ಊರು ಅಂದರೆ ಹೊಸ ಭಾಷೆ, ಅದರಲ್ಲಿ ಒಂದಷ್ಟು ಪದಗಳನ್ನು ಕಲಿಯುವುದಕ್ಕೆ ನೋಡಿ.
ಹದಿಮೂರು: ಒಂದೋ ಅಲ್ಲಿಗೆ ನಾವು ಹೊಂದಿಕೊಳ್ಳಬೇಕು, ಇಲ್ಲ ಅಲ್ಲಿಗೆ ಹೋಗಲೇಬಾರದು. ಬೆಂಗಳೂರಿನ ಸ್ಪೀಡನ್ನು ಧಾರವಾಡ- ಮೈಸೂರಲ್ಲಿ ನಿರೀಕ್ಷಿಸಬೇಡಿ. ಅಲ್ಲಿನ ವೇಗಕ್ಕೆ ನಿಮ್ಮನ್ನು ಒಗ್ಗಿಸಿಕೊಳ್ಳಿ.
ಹದಿನಾಲ್ಕು: ಒಂದೂರಿನ ಸಂಸ್ಕೃತಿಗೆ ಅಲ್ಲಿನ ಹಿರಿಯರು ಕೈಗನ್ನಡಿ. ದಶಕಗಳ ಅನುಭವ ನಿಮ್ಮನ್ನು ಆ ಊರಿಗೆ ಹೊಂದಿಕೊಳ್ಳುವಂತೆ ಮಾಡುವುದು ಖಂಡಿತಾ.

ಊರ ಹಿರಿಯರ ಜತೆ ಕಾಲ ಕಳೆಯಿರಿ.

ಹದಿನೈದು: ಊರಿನ ಏನಾದರೂ ಸ್ಪೆಷಲ್‌ ನಿಮ್ಮ ಬ್ಯಾಗನಲ್ಲಿ ನಿಮ್ಮ ಜತೆ ಬರಲಿ. ಆ ಊರ ಒಂದು ತುಣುಕನ್ನು ನಿಮ್ಮ ಮನೆಗೆ ಕರೆತನ್ನಿ.

ಒಂದು ವೈಯಕ್ತಿಕ ಅನುಭವ

ಹದಿನಾರು: ಪ್ರಯಾಣ ಒಬ್ಬರಾಗಿ ಮಾಡುತ್ತೀರೋ ಗುಂಪಿನಲ್ಲಿ ಹೋಗುತ್ತೀರೋ, ನಿಮ್ಮ ಅನುಭವ ನಿಮ್ಮದು, ಎಲ್ಲವನ್ನೂ ಪೋಸ್ಟ್‌ ಮಾಡಬೇಕಿಲ್ಲ ಅನ್ನುವುದನ್ನು ನೆನಪಿಡೋಣ.
ಹದಿನೇಳು: ನಿಮ್ಮ ಸ್ಟೇಟಸ್‌ ಅಪ್‌ಡೇಟ್‌ ಎಷ್ಟೇ ಇರಲಿ, ಆ ಊರಿನ ಪೋಸ್ಟ್‌ ಕಾರ್ಡ್‌ ಒಂದು ನಿಮ್ಮ ಮನೆಯಲ್ಲಿ ಮನೆ ಮಾಡಿದರೆ, ಅದರ ಭಾವವೇ ಬೇರೆ ಬಿಡಿ.
ಹದಿನೆಂಟು: ಲೈವ್‌ ಸ್ಟ್ರೀಮ್‌ ಬೇಕೇಬೇಕು ಅಂತಿಲ್ಲ. ನೀವು ಹೋದದ್ದೆಲ್ಲಾ ಊರಿನ ಜನರಿಗೆ ಹಂಚಿಕೊಳ್ಳಲು ಬೇರೆ ದಾರಿಗಳಿದೆ, ಹೋದ ಅನುಭವವನ್ನು ವೈಯಕ್ತಿಕವಾಗಿಟ್ಟರೆ ಅದರ ಫೀಲಿಂಗೇ ಬೇರೆ.
ಹತ್ತೊಂಬತ್ತು: ಈಗ ಯಾವ ಊರಿಗೆ ಹೋದರೂ I LOVE… ಉಡುಪಿ, ಮೈಸೂರು, ಕೂರ್ಗ್‌ ಅನ್ನೋ ಬೋರ್ಡ್‌ಗಳು ನಮ್ಮನ್ನು ಸೆಳೆಯುತ್ತವೆ, ಅದರ ಮುಂದೆ ಫೊಟೋ ತೆಗೆದರೆ ಮಾತ್ರವೇ ನಿಮ್ಮ ಟ್ರಿಪ್‌ ಪೂರ್ತಿ ಆಗಿದೆ ಅಂತಲ್ಲ ಅನ್ನೋದನ್ನು ನೆನಪಿಡಿ.
ಇಪ್ಪತ್ತು: ಇನ್ನೊಬ್ಬರಿಗೆ ಹೊಟ್ಟೆ ಕಿಚ್ಚು ಬರಲಿ ಅನ್ನೋದಕ್ಕೆ ಒಂದಿಷ್ಟು ಸ್ಪೆಷಲ್‌ ಸೆಲ್ಫೀಗಳನ್ನು ತೆಗೆಯುವ ಧಾವಂತ ಬೇಡವೇ ಬೇಡ. ನಿಮ್ಮ ಅನುಭವ ಸ್ಪೆಷಲ್‌ ಆಗಿರಲಿ. ಅದನ್ನು ಹಂಚಲೇಬೇಕು ಅಂತೇನಿಲ್ಲ.

ತಿರುಗಿ ಬಂದ ಮೇಲೆ

ಇಪ್ಪತ್ತೊಂದು: ಒಂದೊಳ್ಳೆ ಟ್ರಿಪ್‌ ಮುಗಿದರೆ ಅದರ ಬೇಸರಕ್ಕಿಂತ, ಅದನ್ನು ಅನುಭವಿಸುತ್ತಾ ಖುಷಿ ಪಡುವುದರ ಬಗ್ಗೆ ಗಮನ ಕೊಡಿ. ಒಂದು ವಾರದ ಟ್ರಿಪ್‌ನ ಕೊನೆಯ ದಿನ ಗಡಿಬಿಡಿ ಮಾಡದೇ ಇಡೀ ವಾರದ ಟ್ರಿಪ್‌ ಅನ್ನು ಮೆಲುಕು ಹಾಕುತ್ತಾ ಸ್ವಲ್ಪ ಸಮಯ ಕಳೆಯಿರಿ.
ಇಪ್ಪತ್ತೆರಡು: ಪ್ಯಾಕಿಂಗ್‌ ಮಾಡುವಾಗ ಹೇಗೆ ಪ್ಲಾನ್‌ ಮಾಡಿ ಮಾಡುತ್ತೀರೋ, ಅನ್‌ಪ್ಯಾಕ್‌ ಮಾಡುವಾಗ ಯಾವ ಗಡಿಬಿಡಿಯೂ ಬೇಡ. ಇದೂ ಕೂಡ ನಿಮ್ಮ ಟ್ರಿಪ್‌ನ ಅನುಭವವನ್ನು ಮೆಲುಕು ಹಾಕುವ ಅವಕಾಶವಾಗಲಿ.
ಇಪ್ಪತ್ಮೂರು: ಮತ್ತೆ, ಟ್ರಿಪ್‌ನ ವೇಳೆ ಕೂಡ ದಿನವೂ ಒಂದಿಷ್ಟು ಸಮಯ ಏನನ್ನೂ ಪ್ಲಾನ್‌ ಮಾಡದೇ ಇರುವ ಹಾಗೆ ನೋಡಿಕೊಳ್ಳಿ. ಇದರಿಂದ ನಿಮ್ಮ ಟ್ರಿಪ್‌ನಲ್ಲಿ ಯಾವುದೇ ಒತ್ತಡ ಇಲ್ಲದೇ ಇರುವ ಹಾಗೆ ನೋಡಿಕೊಳ್ಳಬಹುದು.
ಇಪ್ಪತ್ನಾಲ್ಕು: ನಿಮ್ಮ ಟ್ರಿಪ್‌ನಲ್ಲಿ ನಿಮಗಿದ್ದ ಕುತೂಹಲದ ಕಣ್ಣನ್ನು ಅಲ್ಲೇ ಬಿಟ್ಟು ಬರಬೇಡಿ. ನಿಮ್ಮೂರಿನ ಬೀದಿಯಲ್ಲೂ ಅದೇ ಕುತೂಹಲದೊಂದಿಗೆ ಓಡಾಡಿ.
ಇಪ್ಪತ್ತೈದು: ಹೋಗಿ ಬಂದ ಜಾಗಗಳ ಪಟ್ಟಿ ದೊಡ್ಡದು ಮಾಡುವುದು ಮಾತ್ರ ನಿಮ್ಮ ಟ್ರಿಪ್‌ನಲ್ಲಿ ಪಡೆದಿರುವುದಲ್ಲ ಅನ್ನುವುದು ನೆನಪಿರಲಿ. ಬರುವಾಗ ಒಂದಿಷ್ಟು ಅನುಭವ, ತಾಳ್ಮೆ, ಹೀಗೆ ನಿಮ್ಮನ್ನು ನೀವು ಹೊಸತನದೊಂದಿಗೆ ಮತ್ತೆ ಮನೆಗೆ ಸ್ವಾಗತಿಸಿಕೊಳ್ಳಿ.

ಟ್ರಾವೆಲ್‌ ಡೀಪ್‌ ಸರಣಿಯಲ್ಲಿ ಕಳೆದ ಇಪ್ಪತ್ತೈದು ವಾರಗಳಿಂದ ಹೇಳಿರುವ, ಹೇಳಿರದ ವಿಚಾರಗಳೆಲ್ಲವೂ ಮೇಲೆ ಹೇಳಿರುವ ರೀತಿಯ ವಿಚಾರಗಳೇ ಆಗಿವೆ. ಇವು ನನ್ನ-ನಿಮ್ಮ ಪ್ರಯಾಣದ ಅನುಭವಕ್ಕೆ ಹೊಸ ಮಗ್ಗಲನ್ನು ನೀಡಿದೆ ಅನ್ನುವ ಆಶಯ ನನ್ನದು. ಮತ್ತೆ ಮುಂದಿನ ಅಂಕಣದಲ್ಲಿ, ಪ್ರಯಾಣದ ಮತ್ತೊಂದು ಅಂಗಣ ತೆರೆದುಕೊಳ್ಳುತ್ತದೆ.