ನನಗೆ ರೋಡ್ ಟ್ರಿಪ್ ಅಂದ್ರೆ ಪಂಚಪ್ರಾಣ. ಹೋಗುವ ಊರು ಯಾವುದೇ ಆಗಿರಬಹುದು, ಅದು ರೋಡ್ ಟ್ರಿಪ್ ಆಗಿದ್ದರೆ, ನಾನು ರೆಡಿ. ಇಲ್ಲಿ ಊರು ಮುಖ್ಯವೇ ಅಲ್ಲ. ರಸ್ತೆ ಪ್ರಯಾಣವೇ ನಿಜವಾದ ಅನುಭವ. ಕಿಟಕಿಯಿಂದ ಬೀಸುವ ತಂಪಾದ ಗಾಳಿ, ಕಿವಿಯಲ್ಲಿ ಗುನುಗುವ ಇಷ್ಟದ ಹಾಡು ಮತ್ತು ಕಣ್ಣಮುಂದೆ ಸರಿದು ಹೋಗುವ ನಿಸರ್ಗದ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗುವುದೇ ಒಂದು ಹಿತವಾದ ಭಾವ. ಅದು ಕಾರಾಗಿರಲಿ ಅಥವಾ ಬೈಕ್ ಆಗಿರಲಿ, ಸ್ಟೀರಿಂಗ್ ಹಿಡಿದು ಮೈಲಿಗಟ್ಟಲೆ ಸಾಗುವಾಗ ಸಿಗುವ ಸ್ವಾತಂತ್ರ್ಯ ಮತ್ತು ಖುಷಿ ಬೇರೆಲ್ಲೂ ಸಿಗುವುದಿಲ್ಲ. ದೈನಂದಿನ ಜಂಜಾಟಗಳನ್ನು ಮರೆತು, ಗುರಿ ತಲುಪುವ ತರಾತುರಿ ಇಲ್ಲದೇ, ಕ್ಷಣಕ್ಷಣವನ್ನೂ ಅನುಭವಿಸುತ್ತಾ ಸಾಗುವ ಈ ಪಯಣವೇ ರೋಡ್ ಟ್ರಿಪ್‌ನ ನಿಜವಾದ ಮಜಾ. ಮಾನವನ ನಾಗರೀಕತೆ ಬಚ್ಚಲುಮನೆಯಲ್ಲಿ ಆರಂಭವಾಯಿತು ಅಂತಾರೆ. ಆದರೆ ಅದು ಚಲಿಸಲಾರಂಭಿಸಿದ್ದು ಮಾತ್ರ ರಸ್ತೆಯ ಮೇಲೆಯೇ. ಹೀಗಾಗಿ ರಸ್ತೆ ನಮ್ಮ ನಾಗರೀಕತೆಯ ಚಲನಶೀಲತೆಯ ಪ್ರತೀಕ. ಅಂದರೆ ನಮ್ಮ ನಾಗರೀಕತೆ ಕ್ಷಣಕ್ಷಣಕ್ಕೂ ರಸ್ತೆ ಮೇಲೆ ಬೆಳೆಯುತ್ತಾ, ಚಲಿಸುತ್ತಾ, ಸಾಗುತ್ತಲೇ ಇರುತ್ತದೆ. ಪಯಣದಂತೆ, ರಸ್ತೆಗೆ ಕೊನೆ ಎಂಬುದು ಇಲ್ಲ. ಒಂದು ವೇಳೆ ಪಯಣ ಮುಗಿದರೂ ರಸ್ತೆ ಸಾಗುತ್ತಲೇ ಇರುತ್ತದೆ. ಬದುಕಿನಲ್ಲಿ ರಸ್ತೆಗಳೆಂದರೆ ಭರವಸೆಯಂತೆ. ರಸ್ತೆ ಇರುವವರೆಗೆ ಪಯಣವನ್ನು ಮುಂದುವರಿಸಬಹುದು.

ಹಾಗೆ ನೋಡಿದರೆ, ಮೊದಲು ರಸ್ತೆಗಳೇ ಇರಲಿಲ್ಲ. ಜನ ನಡೆಯಲಾರಂಭಿಸಿದಂತೆ, ರಸ್ತೆಗಳೂ ನಿಧಾನವಾಗಿ ಮೂಡಲಾರಂಭಿಸಿದವು. ಹೀಗಾಗಿ ರಸ್ತೆಗಳು ಮನುಷ್ಯನ ಹೆಜ್ಜೆಗಳ, ನಡಿಗೆಯ ಪಡಿಯಚ್ಚು ಸಹ ಹೌದು. 'ಮೆಟ್ಟಿ ಮೆಟ್ಟಿ ಮಣ್ಣ ಹಾದಿ ಸುಗಮ..' (ಇದನ್ನೇ ತುಂಟ ಕವಿಯೊಬ್ಬ ಮುಟ್ಟಿ ಮುಟ್ಟಿ ಮೈಯ ಹಾದಿ ಸುಗಮ ಎಂದು ಹೇಳಿದ್ದು ಬೇರೆ) ಎಂಬುದು ನಾಗರೀಕತೆಯೊಂದಿಗೆ ಮನುಷ್ಯ ಹೆಜ್ಜೆ ಹಾಕಿದ್ದರ ದ್ಯೋತಕ. ಎಲ್ಲ ಸೇತುವೆಗಳನ್ನು ದಾಟುವಂತೆ, ಎಲ್ಲ ರಸ್ತೆಗಳನ್ನು ಕ್ರಮಿಸಬಹುದು ಎಂಬುದು ಪ್ರಸಿದ್ಧ ಮಾತು. ಅಂದರೆ ಹೋಗಲಾಗದ ರಸ್ತೆ ಎಂಬುದು ಇಲ್ಲವೇ ಇಲ್ಲ. ನಿಮ್ಮ ಮುಂದೆ ರಸ್ತೆಯಿದೆ ಅಂದರೆ ನಿಮಗಿಂತ ಮುಂಚೆ ಹಲವರು ಅಲ್ಲಿ ನಡೆದು ಹೋಗಿದ್ದಾರೆ ಮತ್ತು ವಾಪಸ್ ಬಂದಿದ್ದಾರೆ, ಹೀಗಾಗಿ ನೀವು ಅದರ ಮೇಲೆ ಹೋಗಲು ಭಯಪಡಬೇಕಿಲ್ಲ ಎಂದರ್ಥ. ಅದಕ್ಕೇ ಹೇಳಿದ್ದು ರಸ್ತೆಗಳು ಭರವಸೆಯ ಪ್ರತೀಕ.

Good roads

ಈ ಮಾತು ಹೇಳುವ ಸಂದರ್ಭದಲ್ಲಿ ನನಗೆ, ರವಾಂಡಾದ ಕಾಡಿನಲ್ಲಿ ಹೆಜ್ಜೆ ಹಾಕುವಾಗ, ಗೊರಿಲ್ಲಾ ಭಾಷೆಗಳನ್ನು ಅನುಕರಿಸುವ, ಗೊರಿಲ್ಲಾ ಚಾರಣ ತಂಡದ ಮಾರ್ಗದರ್ಶಿ ಹೇಳಿದ ಮಾತುಗಳು ನೆನಪಾಗುತ್ತವೆ. ಅದೋ ನಾನೂರು, ಐನೂರು ವರ್ಷಗಳ ಮರಗಳುಳ್ಳ ದಟ್ಟ ಕತ್ತಲೆಯ ಕಾಡು. ನರ ಮಾನವನ ಕುರುಹೂ ಸಹ ಸಿಗದ ದಟ್ಟಾರಣ್ಯ. ಜತೆಗೆ ಭೀತಿ ಹುಟ್ಟಿಸುವ ಮೌನ. ನಮ್ಮ ಚಾರಣ ತಂಡದಲ್ಲಿದ್ದವ ಮಾರ್ಗದರ್ಶಿಯನ್ನು ಕೇಳಿದ - 'ಒಂದು ವೇಳೆ ನಮ್ಮ ಮೇಲೆ ಗೊರಿಲ್ಲಾಗಳು ದಾಳಿ ಮಾಡಿದವು ಅನ್ನಿ. ಆಗ ನಾವೆಲ್ಲಾ ದಿಕ್ಕಾ ಪಾಲಾಗಿ ಓಡಲಾರಂಭಿಸುತ್ತೇವೆ. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡಿ ದಾರಿ ತಪ್ಪಿಸಿಕೊಂಡು ಚದುರಿ ಹೋದರೆ ಏನು ಮಾಡುವುದು?'

ಆಗ ಗೊರಿಲ್ಲಾ ಚಾರಣ ತಂಡದ ನಾಯಕ ಹೇಳಿದ್ದ - 'ಸಿಂಪಲ್, ಕಾಡಿನಲ್ಲಿ ಎಲ್ಲಿ ಕಾಲುದಾರಿ ಇದೆಯೋ, ಅದನ್ನು ಅನುಸರಿಸಿ. ಆ ಕಾಲು ರಸ್ತೆ ನಿಮ್ಮನ್ನು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂಬುದು ನಿಮಗೆ ಗೊತ್ತಿಲ್ಲದಿರಬಹುದು, ಆದರೆ ಅದು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ನಿಮಗಿಂತ ಮೊದಲು ಯಾರೋ ಅಲ್ಲಿ ನಡೆದು ಹೋಗಿದ್ದಾರೆ. ಹೀಗಾಗಿ ನೀವು ಭಯಪಡಬೇಕಿಲ್ಲ. ಆ ಕಾಲು ರಸ್ತೆಯಗುಂಟ ನಿಮಗೆ ಯಾರೋ ಸಿಗುತ್ತಾರೆ. ಅಂತೂ ಕಾಲುರಸ್ತೆಯ ಮೇಲಿರುವ ತನಕ ನೀವು ಕಳೆದುಹೋಗಿಲ್ಲ ಎಂದರ್ಥ.'

ಅದು ಅಪ್ಪಟ ನಿಜ ಕೂಡ. ಆ ಕಾಲುರಸ್ತೆಯನ್ನು ಅನುಸರಿಸಿ ಹೋದದ್ದೇ ಆದರೆ ಕಾಡಿನ ಹೊರಗೆ ಬಂದಿರುತ್ತೇವೆ ಅಥವಾ ಇನ್ನೊಂದು ತುದಿ ತಲುಪಿರುತ್ತೇವೆ. ಇದು ಒಂಥರಾ ವಿಮಾನ, ಸಂಪರ್ಕ ಕ್ಷೇತ್ರದ ಪರಿಧಿಯಲ್ಲಿ ಇದ್ದ ಹಾಗೆ. 'ವಿಮಾನ ಹಠಾತ್ ಸಂಪರ್ಕ ಕಡಿದುಕೊಂಡರೆ ಅದು ಅಪಘಾತಕ್ಕೀಡಾಗಿದೆ’ ಎಂದು ಹೇಳುತ್ತಾರಲ್ಲ, ಹಾಗೆ. 'ಕಾಲು ದಾರಿಯ ಮೇಲಿರುವ ತನಕ ನೀವು ಕಳೆದು ಹೋಗಿಲ್ಲ ಎಂದರ್ಥ ಮತ್ತು ಈ ಕಾಡಿನಲ್ಲಿ ಅಂಥ ಅನೇಕ ಕಾಲುದಾರಿಗಳಿವೆ' ಎಂಬ ಆತನ ಮಾತುಗಳು ನನ್ನಲ್ಲಿ ಹೊಸ ಭರವಸೆ ಮತ್ತು ಧೈರ್ಯವನ್ನು ಮೂಡಿಸಿದ್ದವು.

ರಸ್ತೆ ನಮ್ಮಲ್ಲಿ ಚಿಗುರಿಸುವ ಭರವಸೆ, ವಿಶ್ವಾಸ ಅಂಥದ್ದು. ಇಂಗ್ಲಿಷಿನಲ್ಲಿ ಒಂದು ಪ್ರಸಿದ್ಧ ಮಾತಿದೆ - There are no wrong roads to anywhere. ರಸ್ತೆಯ ಮೇಲಿರುವ ತನಕ ನೀವು ಹಾದಿ ತಪ್ಪಿಲ್ಲ ಎಂದೇ ಅರ್ಥ. ಈ ಮಾತು ಹಡಗಿಗೂ ಅನ್ವಯ. ಅದಕ್ಕೆ ನೀರೇ ರಸ್ತೆ. ಅದು ಎಲ್ಲಿಯ ತನಕ ನೀರ ಮೇಲಿರುವುದೋ, ಅದು ದಾರಿ ತಪ್ಪಿಲ್ಲ ಎಂದರ್ಥ. ದಾರಿ ತಪ್ಪಿ ಹೋದೆವು ಅಂತ ಹೇಳುತ್ತೇವೆ. ನಿಜ, ದಾರಿ ತಪ್ಪಿ ಬೇರೆ ಊರಿಗೆ ಹೋಗಬಹುದು. ಆದರೆ ಹೋದ ದಾರಿಯಲ್ಲಿ ವಾಪಸ್ ಬರುವ ಆಯ್ಕೆಯಂತೂ ಇದ್ದೇ ಇರುತ್ತದೆ. ಅದಕ್ಕೇ ಹೇಳಿದ್ದು ನಾವು ರಸ್ತೆಯ ಮೇಲಿರುವ ತನಕ ಕಳೆದು ಹೋಗಲು ಸಾಧ್ಯವಿಲ್ಲ ಎಂದು. ರಸ್ತೆಯ ಮೇಲಿದ್ದಷ್ಟು ಹೊತ್ತು ಯಾರಾದರೂ ಬರುವ ಭರವಸೆಯಂತೂ ಇದ್ದೇ ಇರುತ್ತದೆ. ಹೀಗಾಗಿ ರಸ್ತೆಯ ಮೇಲಿದ್ದಾಗ ನೀವು ಒಬ್ಬರೇ ಇದ್ದರೂ, ಒಂಟಿ ಅಲ್ಲ.

ಎರಡು ವರ್ಷಗಳ ಹಿಂದೆ, ದುಬೈನಿಂದ ಒಮಾನ್ ರಾಜಧಾನಿ ಮಸ್ಕತ್‌ಗೆ ರಸ್ತೆ ಮೂಲಕ ಆ ಮರುಭೂಮಿಯಲ್ಲಿ ಪಯಣ ಮಾಡಿದನ್ನು ಮರೆಯುವಂತಿಲ್ಲ. ಆನಂತರ ಮಸ್ಕತ್‌ನಿಂದ ಸುಮಾರು ಸಾವಿರದ ಎರಡು ನೂರು ಕಿಮೀ ದೂರದಲ್ಲಿರುವ ಸಲಲಾಹ್‌ಕ್ಕೆ ಹೋಗಿದ್ದನ್ನೂ. ಜತೆಗೆ ಯಾರಿದ್ದರೂ ಮರುಭೂಮಿಯ ಪಯಣ ಏಕಾಂಗಿತನವನ್ನು ಬರಿಸುತ್ತದೆ. ಕಣ್ಣೆವೆ ಹಾಯುವ ತನಕ ಅಂಗಾತ ಬಿದ್ದುಕೊಂಡ ರಸ್ತೆಗಳು. ಎಷ್ಟೇ ವೇಗವಾಗಿ ಚಲಿಸಿದರೂ ಕ್ರಮಿಸದ ಹಾದಿ. ನೂರಾರು ಕಿಮೀ ಕ್ರಮಿಸಿದರೂ ಎಲ್ಲೂ ಜನ ಕಾಣುವುದಿಲ್ಲ. ಆಗೊಮ್ಮೆ, ಈಗೊಮ್ಮೆ ಹಾದು ಹೋಗುವ ವಾಹನಗಳು. ಎಲ್ಲೂ ಕಾಣದ ರಸ್ತೆ ಬದಿ ಅಂಗಡಿಗಳು. ಎಲ್ಲಿ ನೋಡಿದರೂ ಒಂದು ಕುರುಚಲು ಸಸ್ಯ ಸಹ ಇಲ್ಲ. ಮನೆ ಇಲ್ಲ, ಮಠ ಇಲ್ಲ. ಮರೀಚಿಕೆಗಳೇ ಜಲಾಶಯಗಳು. ಇಡೀ ರಸ್ತೆಯುದ್ದಕ್ಕೂ ನಾವೊಂದೇ ಹೋಗುತ್ತಿದ್ದೇವೆ ಎಂಬ ಭಾವ. ಮರಳಿನ ಹಳದಿ ಮತ್ತು ಆಗಸದ ನೀಲಿಯ ಹೊರತಾಗಿ ಬೇರೆ ಬಣ್ಣಗಳೂ ಕಾಣುವುದಿಲ್ಲ. ಮುನ್ನೂರು ಕಿಮೀ ಅಂತರದಲ್ಲಿ ಪೆಟ್ರೋಲ್ ಬಂಕ್, ಅಲ್ಲಿಯೇ ಸಣ್ಣ ಕೆಫೆಟೇರಿಯ. ಮಾರ್ಗ ಮಧ್ಯದಲ್ಲಿ ವಾಹನ ಕೆಟ್ಟು ನಿಂತರೆ ಹರೋ ಹರ.

ಆ ರಸ್ತೆಯಲ್ಲಿ ಸಾವಿರಾರು ಕಿಮೀ ಸಂಚರಿಸುವಾಗ ನನಗೆ ಇಂಗ್ಲಿಷ್ ಪಯಣಿಗನೊಬ್ಬ ಹೇಳಿದ ’Travel makes one modest. You see what a tiny place you occupy in the world’ ಎಂಬ ಮಾತು ಎಷ್ಟು ನಿಜ ಎಂದು ಅನಿಸುತ್ತಿತ್ತು. ಹಾಗೆ, 'ಸಾವಿರ ಸಲ ಅದರ ಬಗ್ಗೆ ಕೇಳುವುದಕ್ಕಿಂತ, ಓದುವುದಕ್ಕಿಂತ, ಒಂದು ಸಲ ಕಣ್ಣಾರೆ ನೋಡುವುದು ಮಿಗಿಲು' ಎಂಬ ಮಾತು. ಸುತ್ತಲೂ ಕಣ್ಣು ಹಾಯಿಸಿದಾಗ ಯಾರೂ ಕಾಣಿಸದಿದ್ದಾಗ ತುಸು ಒಳ ಮನಸಿನ ಹಿತ್ತಲಲ್ಲಿ ಅಳುಕು ಆವರಿಸಿಕೊಂಡರೂ, ರಸ್ತೆಯ ಮೇಲಿದ್ದಷ್ಟು ಹೊತ್ತು ಸುರಕ್ಷಿತ ಎಂಬ ನಂಬಿಕೆಯೇ ಧೈರ್ಯ.

Dubai road network

ಮೂರು ವರ್ಷಗಳ ಹಿಂದೆ ನಾನು ಸೌದಿ ಅರೇಬಿಯಾದಲ್ಲಿ ನಾಲ್ಕು ಸಾವಿರ ಕಿಮೀ ರೋಡ್ ಟ್ರಿಪ್ ಮಾಡಿದ್ದೆ. ಅಲ್ಲಿನ ರಸ್ತೆಗಳನ್ನು ಕೆನ್ನೆಗಳಿಗೆ ಹೋಲಿಸಿದರೆ ಹೇಮಾಮಾಲಿನಿ ಸಹ ನಾಚಬಹುದು, ಅಷ್ಟೊಂದು ನುಣುಪು, ಮೋಹಕ. ಆ ಮರುಭೂಮಿಯಲ್ಲಿ ಅರಬಿಗಳು ಕಟ್ಟಿದ ರಸ್ತೆ ಈ ಕಾಲಘಟ್ಟದ ಅದ್ಭುತ ಸೃಷ್ಟಿ. ರಸ್ತೆಗಳನ್ನು ನಿರ್ಮಿಸಲು ಯಾವ ತಂತ್ರಜ್ಞಾನವೂ ಬೇಕಾಗಿಲ್ಲ. ಅದೇನು ರಾಕೆಟ್ ಸೈನ್ಸ್ ಅಲ್ಲ. ಉಪಗ್ರಹ ಹಾರಿಸುವುದಕ್ಕಿಂತ ಸುಲಭ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸುಂದರವಾದ ರಸ್ತೆಗಳನ್ನು ಕಟ್ಟದೇ ದೇಶವನ್ನು ಕಟ್ಟಲಾಗುವುದಿಲ್ಲ, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲೂ ಸಾಧ್ಯವೂ ಇಲ್ಲ. ಇದನ್ನು ಅವರನ್ನು ನೋಡಿ ಕಲಿಯಬೇಕು.

ನಾವು ಯಾವುದೇ ದೇಶವನ್ನಾದರೂ ಅಲ್ಲಿನ ರಸ್ತೆಗಳ ಮೂಲಕವೇ ನೋಡುತ್ತೇವೆ. ವಿದೇಶದಿಂದ ಬಂದವರು ಆ ದೇಶವನ್ನು ಬಣ್ಣಿಸುವುದು ರಸ್ತೆಗಳ ಮೂಲಕವೇ. ಅವರ ಮೊದಲ ಉದ್ಗಾರ 'ಅಲ್ಲಿನ ರಸ್ತೆಗಳನ್ನು ನೋಡಬೇಕು, ಅಬ್ಬಾ ಎಷ್ಟು ಸುಂದರವಾಗಿವೆ ಗೊತ್ತಾ?' ಎಂದೇ ಆರಂಭವಾಗುತ್ತವೆ. ರಸ್ತೆಗಳಷ್ಟು ಬೇರೆ ಯಾವುವೂ ಅಷ್ಟು ಬೇಗನೆ ಆಕರ್ಷಿಸುವುದಿಲ್ಲ. ರಸ್ತೆ ಚೆನ್ನಾಗಿದ್ದರೆ ಆ ದೇಶ ಚೆನ್ನಾಗಿದೆ ಎಂಬ ಅಭಿಪ್ರಾಯಕ್ಕೆ ಬರುತ್ತೇವೆ. ಅಮೆರಿಕ, ಸಿಂಗಾಪುರ, ಲಂಡನ್, ಪ್ಯಾರಿಸ್ ಸೇರಿದಂತೆ ಹೊರದೇಶಗಳು ನಮ್ಮನ್ನು ಆಕರ್ಷಿಸಲು ಅಲ್ಲಿನ ವಿಶಾಲ, ನುಣುಪು ರಸ್ತೆಗಳು ಕಾರಣ. ರಸ್ತೆಗಳು ಹೊಂಡಮುಕ್ತವಾಗಿದ್ದರೆ, ಅಲ್ಲಿನ ಸರಕಾರ ಚೆನ್ನಾಗಿದೆ, ಆಡಳಿತ ದಕ್ಷವಾಗಿದೆ, ಕಂಟ್ರಾಕ್ಟರುಗಳು ಧನದಾಹಿಗಳಲ್ಲ ಎಂಬ ಷರಾ ಬರೆಯುತ್ತೇವೆ. ಒಂದು ದೇಶ, ಸರಕಾರ, ಸಮಾಜ ಹೇಗಿದೆ ಎಂಬುದನ್ನು ತಿಳಿಯಲು ಅಲ್ಲಿನ ರಸ್ತೆಗಳು ಸಾಕು. ಅಂದರೆ ರಸ್ತೆಗಳೇ ಒಂದು ದೇಶದ ಹಣೆಬರಹ.

Chopman's peak drive

ಒಳ್ಳೆಯ ರಸ್ತೆಗಳನ್ನು ನಿರ್ಮಿಸದೇ ಸಮೃದ್ಧ ದೇಶ ನಿರ್ಮಿಸಲು ಸಾಧ್ಯವೇ ಇಲ್ಲ. ಪ್ರವಾಸೋದ್ಯಮವನ್ನು ಉತ್ತಮಪಡಿಸಲು ಸಾಧ್ಯವಿಲ್ಲ. ಈ ಮಾತನ್ನು ಸಾಕ್ಷಾತ್ ನೋಡಬೇಕೆಂದರೆ ದಕ್ಷಿಣ ಆಫ್ರಿಕಾವನ್ನು ನೋಡಬೇಕು. ಅದು ಮೂವತ್ತು ವರ್ಷಗಳ ಹಿಂದೆ, ಭಾರತಕ್ಕಿಂತ ಹಿಂದುಳಿದ ದೇಶವಾಗಿತ್ತು. ಅಲ್ಲಿನ ಅದ್ಭುತ ರಸ್ತೆಗಳು ನಮ್ಮ ದೇಶವನ್ನು ಹಿಂದಕ್ಕೆ ಹಾಕಿವೆ. ಇಂದು ಅಭಿವೃದ್ಧಿಯ ರಸ್ತೆಯಲ್ಲಿ ದಕ್ಷಿಣ ಆಫ್ರಿಕಾ ಭಾರತಕ್ಕಿಂತ ಕನಿಷ್ಠ ಹತ್ತು ವರ್ಷ ಮುಂದಿದೆ. ಕೇಪ್ ಟೌನ್‌ನಿಂದ ಗುಡ್ ಹೋಪ್ ಭೂಶಿರಕ್ಕೆ ಹೋಗುವ ಹಾದಿಯಲ್ಲಿ ಸಿಗುವ ಚಾಪ್ ಮನ್ ಪೀಕ್ ಡ್ರೈವ್ ರಸ್ತೆಯನ್ನು ಆ ದೇಶ ಅಭಿವೃದ್ಧಿಪಡಿಸಿದ ರೀತಿ ಎಲ್ಲ ದೇಶಗಳಿಗೂ ಮಾದರಿ. ಅದು ರಸ್ತೆ ಪ್ರವಾಸೋದ್ಯಮಕ್ಕೆ ಅತ್ಯುತ್ತಮ ನಿದರ್ಶನ. ಚಾಪ್ ಮನ್ ಡ್ರೈವ್ ರಸ್ತೆಯಲ್ಲಿ ಪಯಣಿಸುವುದಕ್ಕಾಗಿಯೇ ಜನ ವಿದೇಶಗಳಿಂದ ಆಗಮಿಸುತ್ತಾರೆ. ನೂರಾರು ಹಾಲಿವುಡ್ ಚಿತ್ರಗಳಿಗೆ ಆ ಐವತ್ತು ಕಿಮೀ ದೂರದ ರಸ್ತೆಯೇ ಶೂಟಿಂಗ್ ಸ್ಪಾಟ್. ಆ ರಸ್ತೆಯೇ ಒಂದು ಪ್ರೇಕ್ಷಣೀಯ ತಾಣ. ಅದೇ ಒಂದು ಆಕರ್ಷಣೆ. ರಸ್ತೆ ತೋರಿಸಿ ಹಣ ಮಾಡುವುದನ್ನು ನೋಡಲು ಅಲ್ಲಿಗೆ ಹೋಗಬೇಕು.

ನಾನು ಐದಾರು ವರ್ಷಗಳ ಹಿಂದೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೈವೇ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ದಿಲ್ಲಿಯಲ್ಲಿರುವ ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದೆ. ಅವರ ಕಚೇರಿಗೆ ಯಾರೇ ಹೋದರೂ, ಕಣ್ಣಿಗೆ ಕಾಣುವಂತೆ ಒಂದು ವಾಕ್ಯವನ್ನು ಫ್ರೇಮ್ ಕಟ್ಟಿಸಿ ತೂಗು ಹಾಕಿದ್ದಾರೆ. ಅದರಲ್ಲಿ American roads are not good because America is rich. But America is rich because American roads are good (ಅಮೆರಿಕ ಶ್ರೀಮಂತವಾಗಿರುವುದರಿಂದ ರಸ್ತೆಗಳು ಉತ್ತಮವಾಗಿಲ್ಲ. ಆದರೆ ಅಮೆರಿಕದ ರಸ್ತೆಗಳು ಉತ್ತಮವಾಗಿರುವುದರಿಂದ ಅಮೆರಿಕ ಶ್ರೀಮಂತವಾಗಿದೆ) ಎಂದು ಬರೆದಿದೆ. ಈ ಮಾತನ್ನು ಹೇಳಿದವರು ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್.ಕೆನಡಿ. ಎಂಥ ಅದ್ಭುತವಾದ ಮಾತು! ಅಮೆರಿಕ ಶ್ರೀಮಂತವಾಗಿರುವುದಕ್ಕೆ ಆ ದೇಶದ ಅಧ್ಯಕ್ಷನೇ ಬಿಚ್ಚಿಟ್ಟ ರಹಸ್ಯವೆಂದರೆ ಅಲ್ಲಿನ ಉತ್ತಮ ರಸ್ತೆಗಳು! ನಾನು ಕೆಲಹೊತ್ತು ಆ ವಾಕ್ಯವನ್ನೇ ನೋಡುತ್ತಾ ಕುಳಿತಿದ್ದೆ. ಅಲ್ಲಿಂದ ಬಂದ ನಂತರ, ಉತ್ತಮ ರಸ್ತೆಗಳನ್ನು ನಿರ್ಮಿಸದೇ ಅಭಿವೃದ್ಧಿ ಹೊಂದಿದ ದೇಶಗಳಿವೆಯಾ ಎಂದು ಬಹಳ ಹುಡುಕಿದೆ. ಒಂದು ದೇಶವೂ ಇಲ್ಲ. ಇಂಥ ಸರಳ ಸತ್ಯ ಅರಿವಾಗಲು ನಮಗೆ ಇಷ್ಟು ವರ್ಷಗಳು ಬೇಕಾದವು.

'ಒಳ್ಳೆಯ ರಸ್ತೆಗಳನ್ನು ನಿರ್ಮಿಸುವ ತನಕ ಅಭಿವೃದ್ಧಿಯ ಪೈಪೋಟಿಯಲ್ಲಿ ಓಡಲು ಆಗುವುದಿಲ್ಲ' ಎಂಬುದು ಚೀನಾದಲ್ಲಿ ಪ್ರಚಲಿತವಾಗಿರುವ ಮಾತು. ಆ ದೇಶದ ಪ್ರಗತಿಗೂ ಅಲ್ಲಿನ ರಸ್ತೆಗಳೇ ಕಾರಣ. ಇಂದು ಜಗತ್ತಿನಲ್ಲಿಯೇ ಬೆರಗು ಹುಟ್ಟಿಸುವ ಅದ್ಭುತ ಸೇತುವೆಗಳನ್ನು ಚೀನಾ ನಿರ್ಮಿಸಿದೆ. ಚೀನಾದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದ್ದೂ ಅಲ್ಲಿನ ರಸ್ತೆಗಳೇ. 'ನಮಗೆ ಉತ್ತಮ ರಸ್ತೆಗಳ ನಿರ್ಮಾಣ ಒಂದು ರೀತಿಯ ಹುಚ್ಚು. ಅದು ಒಂಥರಾ obsession ಎಂದು ಚೀನಾದ ಹಿಂದಿನ ಅಧ್ಯಕ್ಷ ಹೂ ಜಿಂಟಾವೋ ಹೇಳಿದ್ದ. ಇಂದು ಆ ದೇಶ ಭೂಮಿಯ ಮೇಲಲ್ಲ, ಗಾಳಿಯಲ್ಲಿ, ನೀರಿನಲ್ಲಿ ರಸ್ತೆ ನಿರ್ಮಿಸುತ್ತಾ ಹೊರಟಿದೆ.

ರಸ್ತೆಯ ಬಗ್ಗೆ ನಮ್ಮ ಧೋರಣೆ ಇನ್ನೂ ಬದಲಾಗಿಲ್ಲ. ನಮಗಿನ್ನೂ ಒಳ್ಳೆಯ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಪ್ರತಿ ವರ್ಷ ಮತ್ತು ವರ್ಷದಲ್ಲಿ ಎರಡು ಸಲ ಕಟ್ಟಿದ ರಸ್ತೆಯನ್ನೇ ಕಟ್ಟುತ್ತಿರುತ್ತೇವೆ. ರಾಜಕಾರಣಿಗಳಿಗೆ, ಗುತ್ತಿಗೆದಾರರಿಗೆ ರಸ್ತೆಯೆಂದರೆ ಬಹಳ ಪ್ರೀತಿ. ಅವರು ಹಣದ ಜತೆಗೆ ರಸ್ತೆಯನ್ನೂ ತಿಂದುಬಿಡುತ್ತಾರೆ. ಅಶೋಕನ ಕಾಲದಲ್ಲಿಯೇ ಬೃಹದ್ಭವ್ಯ ರಸ್ತೆಯ ಕನಸನ್ನು ಕಂಡ ದೇಶವಿದು. ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ಅಫಘಾನಿಸ್ತಾನವನ್ನು ಸೇರಿಸುವ ಗ್ರಾಂಡ್ ಟ್ರಂಕ್ ರಸ್ತೆ ನಿರ್ಮಾಣ ಅಂದೇ ಸಾಕಾರವಾಗಿತ್ತು. 3700 ಕಿಮಿ ಉದ್ದದ ಈ ರಸ್ತೆಯ ಕನಸನ್ನು ಆನಂತರ ಬಂದ (ಇಲ್ಲಿ ಶೇರ್ ಶಾಹ್ ಸೂರಿಯನ್ನು ನೆನಪಿಸಿಕೊಳ್ಳಬೇಕು ) ಹಲವು ರಾಜರು ಸಾಕಾರಗೊಳಿಸಿದರು. ಅದೇ ರಸ್ತೆಯಲ್ಲಿ ನಾವು ಚಲಿಸಿದ್ದೇ ಆಗಿದ್ದರೆ ಭಾರತದ ಚಿತ್ರಣವೇ ಬದಲಾಗುತ್ತಿತ್ತು. (ನಮಗಿನ್ನೂ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ರಸ್ತೆ ಸಮಸ್ಯೆಗೆ ಉತ್ತರ ಕಂಡುಹಿಡಿಯುವುದು ಸಾಧ್ಯವಾಗಿಲ್ಲ.) ವಾಜಪೇಯಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ನಿರ್ಮಿಸಿದ ಸುವರ್ಣ ಚತುಷ್ಪಥ ರಸ್ತೆ ಭಾರತದ ಭವಿಷ್ಯ ಬದಲಿಸಿದ ಪಥ.

'ಕೆಲವರು ರಸ್ತೆಗಳಿದ್ದ ಹಾಗೆ. ಅವರು ನಿಮ್ಮ ಜತೆ ಇರದಿದ್ದರೂ ನೀವು ಊರು ತಲುಪಲು ಸಂಗಾತಿಗಳಾಗಿರುತ್ತಾರೆ' ಎಂಬ ಮಾತು ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ. ಇಂಗ್ಲಿಷ್ ಕವಿಯೊಬ್ಬ ರಸ್ತೆಯಲ್ಲಿ ಜೀವಿಸುವ ಆನಂದದ ಬಗ್ಗೆ When you live on the road, going home is a place to escape and just be with your family to unwind ಎಂದು ಹೇಳಿದ್ದಾನೆ. ಅಂಥ ಸಾಂತ್ವನವನ್ನು ರಸ್ತೆಗಳೂ ಕೊಡಬಹುದು. ನಿಮ್ಮ ಮುಂದೆ ರಸ್ತೆ ಇದ್ದರೆ ಭವಿಷ್ಯವಿದೆ ಅನ್ನೋದಂತೂ ಸತ್ಯ. ಉತ್ತಮ ರಸ್ತೆ ಉತ್ತಮ ಪ್ರವಾಸೋದ್ಯಮಕ್ಕೆ ರಹದಾರಿ!