ನ್ಯೂಯಾರ್ಕ್ ಸಿಟಿ ನಿದ್ದೆ ಮಾಡಲ್ಲ ಅಂತ ಜಗತ್ತೇ ಕೊಚ್ಚಿಕೊಳ್ಳುತ್ತದೆ. ಆದರೆ ನನ್ನ ಪ್ರಕಾರ, ಆ ಬಿರುದಿಗೆ ನಿಜವಾದ ಹಕ್ಕುದಾರ ಅಂದ್ರೆ ಅದು ಟೆಲ್ ಅವಿವ್ ಮಾತ್ರ! ಈ ಊರಿಗೆ ಸೂರ್ಯ ಮುಳುಗಿದ ಮೇಲೆ ಬರುವ ಕಳೆ ಇದೆಯಲ್ಲ, ಅದು ಹಗಲಿನಲ್ಲಿ ಸಿಗಲ್ಲ. ಇಲ್ಲಿ ರಾತ್ರಿ ಹನ್ನೊಂದು ಗಂಟೆ ಅಂದರೆ ದೀಪ ಆರಿಸಿ ಮಲಗುವ ಹೊತ್ತಲ್ಲ; ಅದು ಟೈ ಕಳಚಿ, ಮೇಕಪ್ ಏರಿಸಿ, ಪರ್ಫ್ಯೂಮ್ ಹೊಡೆದುಕೊಂಡು ಮನೆಯಿಂದ ಹೊರಬೀಳುವ ಹೊತ್ತು. ಇವರ ಪಾಲಿಗೆ ಸಂಜೆ ಶುರುವಾಗುವುದೇ ಮಧ್ಯರಾತ್ರಿಯ ಹೊತ್ತಿಗೆ!

ನಂಬಿದರೆ ನಂಬಿ, ಬಿಟ್ಟರೆ ಬಿಡಿ, ರಾತ್ರಿ ಎರಡು ಗಂಟೆಗೆ ರಾಥ್‌ಚೈಲ್ಡ್ ಬೌಲೆವಾರ್ಡ್ ರಸ್ತೆಯಲ್ಲಿ ನಿಂತರೆ ನಿಮಗೆ ಟ್ರಾಫಿಕ್ ಜಾಮ್ ಸಿಗುತ್ತದೆ ಹೌದು, ನಡುರಾತ್ರಿಯಲ್ಲಿ ಕಾರುಗಳ ಸಾಲು, ಹಾರ್ನ್ ಶಬ್ದ ಮತ್ತು ಫುಟ್‌ಪಾತ್‌ಗಳಲ್ಲಿ ಇರುವೆಗಳಂತೆ ಉಕ್ಕಿ ಹರಿಯುವ ಜನಸಾಗರ. ಇದೇನು ಆಫೀಸಿಗೆ ಹೋಗುವ ಗಡಿಬಿಡಿಯಲ್ಲ, ಇದು ಜೀವನವನ್ನು ಅನುಭವಿಸಲು ಹೊರಟವರ ದಂಡು. ರಸ್ತೆ ಬದಿಯ ಪಬ್‌ಗಳಲ್ಲಿ, ಕೆಫೆಗಳಲ್ಲಿ ಕಾಲಿಡಲು ಜಾಗವಿರುವುದಿಲ್ಲ. ಬೀಟ್ಸ್‌ಗೆ ತಕ್ಕಂತೆ ಕುಣಿಯುವ ಯುವಕ ಯುವತಿಯರು, ಕೈಯಲ್ಲಿ ಬಿಯರ್ ಮಗ್ ಹಿಡಿದು ಹರಟೆ ಹೊಡೆಯುವ ಮುದುಕರು... ಇಲ್ಲಿ ವಯಸ್ಸು ಅನ್ನೋದು ಬರೀ ನಂಬರ್ ಅಷ್ಟೇ.

ಇವರ ಈ ಹುಚ್ಚುತನಕ್ಕೆ ಒಂದು ಬಲವಾದ ಕಾರಣವಿದೆ. ಟೆಲ್ ಅವಿವ್ ಜನ Work hard, play hard (ಕಠಿಣವಾಗಿ ದುಡಿ, ಸಕತ್ತಾಗಿ ಆನಂದಿಸು) ಎಂಬ ಮಂತ್ರವನ್ನು ಚಾಚೂ ತಪ್ಪದೆ ಪಾಲಿಸುವವರು. ಹಗಲಿನಲ್ಲಿ ಇವರಷ್ಟು ಶ್ರದ್ಧೆಯಿಂದ ಕೆಲಸ ಮಾಡುವವರು ಬೇರಾರೂ ಇಲ್ಲ; ಇಸ್ರೇಲ್‌ನ ಆರ್ಥಿಕತೆಯನ್ನು ಹೆಗಲ ಮೇಲೆ ಹೊತ್ತು ನಡೆಸುವವರೇ ಇವರು. ಆದರೆ ಲ್ಯಾಪ್‌ಟಾಪ್ ಮುಚ್ಚಿದ ತಕ್ಷಣ, ಆ ಒತ್ತಡವನ್ನೆಲ್ಲ ಕಸದ ಬುಟ್ಟಿಗೆ ಹಾಕಿ, 'ನಾಳೆ ಏನಾಗುತ್ತೋ ನೋಡಿಕೊಳ್ಳೋಣ, ಇವತ್ತಿನ ರಾತ್ರಿ ನಮ್ಮದು' ಎಂದು ಅಬ್ಬರಿಸುತ್ತಾರೆ. ಸುತ್ತಲೂ ಏನೇ ರಾಜಕೀಯ ಬಿಸಿ ಇರಲಿ, ಯುದ್ಧದ ಕಾರ್ಮೋಡವಿರಲಿ, ಟೆಲ್ ಅವಿವ್‌ನ ಈ ರಸ್ತೆಗಳಲ್ಲಿ ಅದ್ಯಾವುದೂ ಸುಳಿಯುವುದಿಲ್ಲ. ಇಲ್ಲಿ ಇರುವುದು ಕೇವಲ ಸಂಗೀತ, ನಗು ಮತ್ತು ಮುಗಿಯದ ಸಂಭ್ರಮ. ಬದುಕಿರುವ ಪ್ರತಿ ಕ್ಷಣವನ್ನೂ ಹಿಂಡಿ ರಸ ಮಾಡಿಕೊಂಡು ಕುಡಿದುಬಿಡಬೇಕು ಎಂಬ ಹಪಾಹಪಿ ಈ ನಗರದ ರಾತ್ರಿಗಳಲ್ಲಿದೆ.

Tel Aviv (1)

ಮರಳಿನ ನಾಡಲ್ಲಿ ಮೆದುಳಿನ ಜಾತ್ರೆ

ಟೆಲ್ ಅವಿವ್ ಅಂದ ಕೂಡಲೇ ಕಣ್ಣ ಮುಂದೆ ಬರೋದು ಬರೀ ಬೀಚ್, ಪಾರ್ಟಿ ಮತ್ತು ಮೈಮರೆತು ಕುಣಿಯುವ ಮಂದಿ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಈ ನಗರದ ಮೇಲ್ಪದರದಲ್ಲಿ ಮೋಜು ಮಸ್ತಿ ಇರಬಹುದು, ಆದರೆ ಅದರ ಅಂತರಾಳದಲ್ಲಿ ಇರುವುದು ಪ್ರಖರ ಬುದ್ಧಿವಂತಿಕೆ! ಅಮೆರಿಕದಲ್ಲಿ 'ಸಿಲಿಕಾನ್ ವ್ಯಾಲಿ' ಇದ್ದರೆ, ಇಲ್ಲಿ ಇರುವುದು 'ಸಿಲಿಕಾನ್ ವಾಡಿ'. ಜಗತ್ತಿನ ಭೂಪಟದಲ್ಲಿ ಇಸ್ರೇಲ್ ಒಂದು ಪುಟ್ಟ ಚುಕ್ಕೆ, ಆದರೆ ತಲಾವಾರು ಲೆಕ್ಕ ಹಾಕಿದರೆ, ಜಗತ್ತಿನಲ್ಲೇ ಅತಿ ಹೆಚ್ಚು ಸ್ಟಾರ್ಟ್-ಅಪ್‌ಗಳು ಹುಟ್ಟೋದು ಇಲ್ಲೇ. ಜನಸಂಖ್ಯೆ ಕಮ್ಮಿ ಇರಬಹುದು, ಆದರೆ ಐಡಿಯಾಗಳಿಗೆ ಇಲ್ಲಿ ಬರಗಾಲವಿಲ್ಲ.

ನೀವು ದಿನನಿತ್ಯ ಟ್ರಾಫಿಕ್‌ನಿಂದ ಪಾರಾಗಲು ಬಳಸುವ 'ವೇಸ್' (Waze) ಆ್ಯಪ್ ಹುಟ್ಟಿದ್ದು ಇದೇ ಮಣ್ಣಿನಲ್ಲಿ. ಇಂಟೆಲ್ ಪ್ರೊಸೆಸರ್‌ಗಳು ಚುರುಕಾಗಿದ್ದು ಇಲ್ಲೇ. ಗೂಗಲ್, ಮೈಕ್ರೋಸಾಫ್ಟ್, ಆಪಲ್‌ನಂಥ ಜಗತ್ತಿನ ದೈತ್ಯ ಕಂಪನಿಗಳು ಟೆಲ್ ಅವಿವ್‌ನಲ್ಲಿ ತಮ್ಮ ಸಂಶೋಧನಾ ಕೇಂದ್ರಗಳನ್ನು (R&D Centres) ತೆರೆದು ಕೂತಿವೆ ಅಂದರೆ ಸುಮ್ಮನೆ ಅಲ್ಲ. ಇಲ್ಲಿನ ಯುವಕರ ತಲೆಯಲ್ಲಿ ಹೊಳೆಯುವ ಐಡಿಯಾಗಳಿಗಾಗಿ ಈ ಕಂಪನಿಗಳು ಕ್ಯೂ ನಿಲ್ಲುತ್ತವೆ. ಇಲ್ಲಿನ ಮಣ್ಣಿನಲ್ಲೇ ಒಂದು ಥರದ ಚುರುಕುತನವಿದೆ. ಇವರಿಗೆ ನೈಸರ್ಗಿಕ ಸಂಪನ್ಮೂಲಗಳಿಲ್ಲ, ಹೀಗಾಗಿ ಇವರು ನಂಬಿಕೊಂಡಿರೋದು ತಮ್ಮ ತಲೆಯಲ್ಲಿರುವ ಮೆದುಳನ್ನು ಮಾತ್ರ!

ಇಲ್ಲಿನ ಬ್ಯುಸಿನೆಸ್ ನಡೆಯೋದು ಎಸಿ ರೂಮುಗಳಲ್ಲಲ್ಲ, ಬದಲಾಗಿ ರಸ್ತೆ ಬದಿಯ ಕೆಫೆಗಳಲ್ಲಿ! ಟೆಲ್ ಅವಿವ್‌ನ ಯಾವುದಾದ್ರೂ ಒಂದು ಕೆಫೆಗೆ ಹೋಗಿ ನೋಡಿ; ಒಂದು ಕೈಯಲ್ಲಿ ಎಸ್ಪ್ರೆಸೊ ಕಾಫಿ, ಇನ್ನೊಂದು ಕೈಯಲ್ಲಿ ಲ್ಯಾಪ್‌ಟಾಪ್ ಹಿಡಿದು ಕುಳಿತಿರುವ ಹುಡುಗರು ನಿಮಗೆ ಸಿಗುತ್ತಾರೆ. ಅವರು ಸುಮ್ಮನೆ ಫೇಸ್‌ಬುಕ್ ನೋಡುತ್ತಿಲ್ಲ, ಪಕ್ಕದ ಟೇಬಲ್‌ನವನ ಜತೆ ಚರ್ಚೆ ಮಾಡುತ್ತಾ, ಜಗತ್ತನ್ನೇ ಬದಲಾಯಿಸುವ ಮುಂದಿನ ದೊಡ್ಡ ಟೆಕ್ ಆವಿಷ್ಕಾರಕ್ಕೆ ಕೋಡಿಂಗ್ ಬರೆಯುತ್ತಿರುತ್ತಾರೆ. ಚಪ್ಪಲಿ, ಶಾರ್ಟ್ಸ್ ಹಾಕಿಕೊಂಡು ಅಡ್ಡಾಡುವ ಇವರೇ ನಾಳೆ ಕೋಟ್ಯಂತರ ಡಾಲರ್ ಒಡೆಯರಾಗುತ್ತಾರೆ. ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಇವರಿಗೆ ರಕ್ತಗತವಾಗಿ ಬಂದಿದೆ. ಮೋಜು ಎಷ್ಟಿದೆಯೋ, ಅದಕ್ಕಿಂತ ಡಬಲ್ ಕೆಲಸ ಮತ್ತು ಕ್ರಿಯೇಟಿವಿಟಿ ಈ ಸಿಲಿಕಾನ್ ವಾಡಿಯಲ್ಲಿದೆ.

Tel Aviv_ Where the City Never Stops Smiling

ಅಲೆಗಳ ಮಡಿಲಲ್ಲಿ ಅರಳುವ ಬದುಕು

ಟೆಲ್ ಅವಿವ್ ನಗರಕ್ಕೆ ಉಸಿರು ಇರುವುದೇ ಅದರ ಪಶ್ಚಿಮಕ್ಕೆ ಚಾಚಿಕೊಂಡಿರುವ ಆ ವಿಶಾಲವಾದ ನೀಲಿ ಸಮುದ್ರದಲ್ಲಿ. ಬರೋಬ್ಬರಿ ಹದಿನಾಲ್ಕು ಕಿಮೀ ಉದ್ದಕ್ಕೂ ಮೈಚಾಚಿಕೊಂಡಿರುವ ಈ ಕಡಲತೀರ ಇದೆಯಲ್ಲ, ಅದು ಅಲ್ಲಿನ ಜನರಿಗೆ ಅವರ ಮನೆಯ 'ಲಿವಿಂಗ್ ರೂಮ್' ಇದ್ದ ಹಾಗೆ! ಸಂಜೆಯಾದರೆ ಸಾಕು, ಆಫೀಸಿನ ಟೆನ್ಷನ್, ಮನೆಯ ರಗಳೆ ಎಲ್ಲವನ್ನೂ ಮೂಟೆ ಕಟ್ಟಿ ಮೂಲೆಗಿಟ್ಟು ಬಂದು ಇಲ್ಲಿ ಮರಳು ದಿಬ್ಬದ ಮೇಲೆ ಒರಗುತ್ತಾರೆ. ಇಲ್ಲಿ ಶ್ರೀಮಂತ, ಬಡವ, ಟೂರಿಸ್ಟ್ ಎಂಬ ಭೇದವಿಲ್ಲ; ಎಲ್ಲರೂ ಸಮುದ್ರದ ಮಕ್ಕಳೇ.

ನೀವು ಕಣ್ಣು ಮುಚ್ಚಿಕೊಂಡು ಈ ಬೀಚ್‌ಗೆ ಹೋದರೂ, ಒಂದು ಶಬ್ದ ನಿಮ್ಮನ್ನು ಸ್ವಾಗತಿಸುತ್ತದೆ. "ಟಕ್... ಟಕ್... ಟಕ್..."! ಎಲ್ಲಿ ನೋಡಿದರೂ ಕೈಯಲ್ಲೊಂದು ಮರದ ಬ್ಯಾಟ್ ಹಿಡಿದು ಚೆಂಡನ್ನು ಬಾರಿಸುವ ಹುಚ್ಚು ಮಂದಿ. ಅದೇ ಇಸ್ರೇಲಿನ ಅನಧಿಕೃತ ರಾಷ್ಟ್ರೀಯ ಕ್ರೀಡೆ 'ಮ್ಯಾಟ್ಕೋಟ್'. ಇದೊಂದು ವಿಚಿತ್ರ ಆಟ. ಇಲ್ಲಿ ಎದುರಾಳಿ ಅನ್ನೋರಿಲ್ಲ, ಗೆಲುವು-ಸೋಲು ಅನ್ನೋದಿಲ್ಲ. ಇಬ್ಬರೂ ಸೇರಿ ಆ ಪುಟ್ಟ ಚೆಂಡು ಕೆಳಗೆ ಬೀಳದಂತೆ ಆದಷ್ಟು ಹೊತ್ತು ಗಾಳಿಯಲ್ಲೇ ಇರಿಸುವುದು ಈ ಆಟದ ನಿಯಮ. 'ನಾನು ಗೆಲ್ಲೋದಲ್ಲ, ನಾವು ಆಡೋದು ಮುಖ್ಯ' ಅನ್ನೋ ಫಿಲಾಸಫಿ ಈ ಟಕ್-ಟಕ್ ಶಬ್ದದಲ್ಲೇ ಅಡಗಿದೆ.

ಇನ್ನು ಶುಕ್ರವಾರ ಸಂಜೆಯ ಕಥೆ ಕೇಳಿ. ಸೂರ್ಯ ಸಮುದ್ರದ ಒಡಲು ಸೇರಲು ತಯಾರಿ ನಡೆಸುವಾಗ, ಡಾಲ್ಫಿನೇರಿಯಂ ಬೀಚ್ ಕಡೆಯಿಂದ ಡ್ರಮ್ಸ್ ಸದ್ದು ಕೇಳಲು ಶುರುವಾಗುತ್ತದೆ. ಅದೇ ಪ್ರಸಿದ್ಧ 'ಡ್ರಮ್ಮರ್ಸ್ ಬೀಚ್'. ನೂರಾರು ಜನ ಡ್ರಮ್ಸ್ ಹಿಡಿದು ಹುಚ್ಚು ಹಿಡಿದವರಂತೆ ಬಾರಿಸುತ್ತಿದ್ದರೆ, ಸುತ್ತಲೂ ನಿಂತ ಜನ ಆ ಲಯಕ್ಕೆ ತಕ್ಕಂತೆ ಮೈಮರೆತು ಕುಣಿಯುತ್ತಾರೆ. ಅಲ್ಲಿ ಜಾತಿ ಇಲ್ಲ, ಭಾಷೆ ಇಲ್ಲ, ಇರುವುದು ಕೇವಲ ಆ ಲಯದ ನಶೆ. ಕಣ್ಣೆದುರು ಕೆಂಪಾದ ಸೂರ್ಯಾಸ್ತ, ಕಿವಿಯಲ್ಲಿ ಡ್ರಮ್ಸ್‌ನ ಏರಿಳಿತ... ಆ ಕ್ಷಣದಲ್ಲಿ ಜಗತ್ತೇ ಸ್ತಬ್ಧವಾದಂತೆ ಭಾಸವಾಗುತ್ತದೆ. ಆ ಮರಳಿನ ಮೇಲೆ ಕುಳಿತು ಆ ಮಾಯಾಲೋಕವನ್ನು ನೋಡಬೇಕು, ಅದೊಂದು ಮೋಡಿ!

Tel aviv freedom parade

ಸ್ವಾತಂತ್ರ್ಯದ ಸ್ವರ್ಗ, ಪ್ರೀತಿಗೆ ಮಣೆ

ಇಸ್ರೇಲ್ ಅಂದರೆ ಸಾಕು, ನಮ್ಮ ಕಣ್ಣ ಮುಂದೆ ಬರುವುದು ಜೆರುಸಲೇಮ್, ಕಟ್ಟುನಿಟ್ಟಿನ ಸಂಪ್ರದಾಯ ಮತ್ತು ಧಾರ್ಮಿಕ ನಿಯಮಗಳು. ಆದರೆ, ಟೆಲ್ ಅವಿವ್ ವಿಷಯಕ್ಕೆ ಬಂದರೆ ಆ ರೂಲ್ಸ್ ಎಲ್ಲವೂ ಬಾಗಿಲ ಆಚೆಗೇ ನಿಲ್ಲುತ್ತವೆ! ಇದೊಂದು ದೇಶದೊಳಗಿನ ಮತ್ತೊಂದು ದೇಶ; ಒಂದು ಅದ್ಭುತವಾದ 'ಬಬಲ್'. ಸುತ್ತಲೂ ಸಂಪ್ರದಾಯದ ಸಂಕೋಲೆಗಳಿದ್ದರೂ, ಈ ನಗರ ಮಾತ್ರ ಅಪ್ಪಟ ಉದಾರವಾದಿ. ಇಲ್ಲಿ ಧರ್ಮಕ್ಕಿಂತ ಮಾನವೀಯತೆಗೆ ಬೆಲೆ ಜಾಸ್ತಿ, ದೇವರ ಭಯಕ್ಕಿಂತ ಸ್ವಾತಂತ್ರ್ಯದ ಅಮಲು ಜಾಸ್ತಿ.

ಇಡೀ ಮಧ್ಯಪ್ರಾಚ್ಯದಲ್ಲೇ ಊಹಿಸಿಕೊಳ್ಳಲೂ ಸಾಧ್ಯವಾಗದ ದೃಶ್ಯಗಳು ಇಲ್ಲಿ ಸರ್ವೇ ಸಾಮಾನ್ಯ. ಇಲ್ಲಿ ಯಾರು ಯಾರನ್ನು ಬೇಕಾದರೂ ಪ್ರೀತಿಸಬಹುದು, ಕೈ ಹಿಡಿದು ಅಡ್ಡಾಡಬಹುದು. ಯಾರೂ ನಿಮ್ಮನ್ನು ಕೆಕ್ಕರಿಸಿ ನೋಡುವುದಿಲ್ಲ, ಬೆರಳು ಮಾಡಿ ತೋರಿಸುವುದಿಲ್ಲ. ಇದಕ್ಕೇ ಸಾಕ್ಷಿ ಇಲ್ಲಿ ನಡೆಯುವ ಅದ್ದೂರಿ 'ಪ್ರೈಡ್ ಪೆರೇಡ್' (Pride Parade). ಲಕ್ಷಾಂತರ ಜನ ಬೀದಿಗಿಳಿದು, ಕಾಮನಬಿಲ್ಲಿನ ಬಾವುಟ ಹಿಡಿದು, 'ಪ್ರೀತಿ ಅಂದ್ರೆ ಪ್ರೀತಿ ಅಷ್ಟೇ, ಅದಕ್ಕೆ ಲಿಂಗದ ಹಂಗಿಲ್ಲ' ಎಂದು ಸಾರುವಾಗ ಇಡೀ ನಗರವೇ ಬಣ್ಣದೋಕುಳಿಯಲ್ಲಿ ಮಿಂದೆದ್ದಂತೆ ಕಾಣುತ್ತದೆ. ಅಮೆರಿಕ ಬಿಟ್ಟರೆ ಇಷ್ಟೊಂದು ದೊಡ್ಡ ಮಟ್ಟದ ಪೆರೇಡ್ ನಡೆಯೋದು ಇಲ್ಲೇ ನೋಡಿ.

ಇಲ್ಲಿನ ರಸ್ತೆಗಳಲ್ಲಿ ನಡೆಯುವಾಗ ನೀವು ಏನನ್ನು ಧರಿಸಿದ್ದೀರಿ, ನಿಮ್ಮ ಚರ್ಮದ ಬಣ್ಣ ಯಾವುದು ಎಂದು ಅಳೆಯುವ ಸಣ್ಣ ಮನಸ್ಸುಗಳು ನಿಮಗೆ ಸಿಗುವುದಿಲ್ಲ. 'ನೀವು ಹೇಗಿದ್ದೀರೋ ಹಾಗೇ ಬನ್ನಿ, ನಿಮ್ಮತನವನ್ನು ನಾವು ಗೌರವಿಸುತ್ತೇವೆ' ಎನ್ನುವ ದೊಡ್ಡ ಗುಣ ಈ ಮಣ್ಣಿನಲ್ಲಿದೆ. ಪಕ್ಕದ ಮನೆಯವನು ಏನು ಮಾಡುತ್ತಾನೆ ಎಂದು ಕಿಟಕಿ ಮೂಲಕ ಇಣುಕಿ ನೋಡುವ ಚಾಳಿ ಇಲ್ಲಿನವರಿಗಿಲ್ಲ. ಬದುಕು ಇರುವುದು ಬದುಕುವುದಕ್ಕಾಗಿ, ಬೇರೆಯವರ ಬಗ್ಗೆ ತೀರ್ಪು ಕೊಡುವುದಕ್ಕಲ್ಲ ಎಂಬ ಸತ್ಯವನ್ನು ಟೆಲ್ ಅವಿವ್ ಜಗತ್ತಿಗೆ ಸಾರಿ ಹೇಳುತ್ತಿದೆ. ಉಸಿರುಗಟ್ಟಿಸುವ ವಾತಾವರಣದ ನಡುವೆಯೂ, ಮುಕ್ತವಾಗಿ ಉಸಿರಾಡಲು ಇಂಥದ್ದೊಂದು ಜಾಗ ಇದೆಯಲ್ಲ, ಅದೇ ಗ್ರೇಟ್!

ಟೆಲ್ ಅವಿವ್‌ನ 'ಅದ್ಭುತ ಜೀವಂತಿಕೆ'ಗೆ ಇಲ್ಲಿನ ಭಾಷೆಯಲ್ಲಿ ಒಂದು ಪದವಿದೆ -'ಬಾಲಗನ್'. ಇದರ ಅರ್ಥ ಅಸ್ತವ್ಯಸ್ತ ಅಥವಾ ಗೊಂದಲ. ಮೇಲ್ನೋಟಕ್ಕೆ ಇದು ಜೀಜಾ ಅಂತ ಕಂಡರೂ, ಟೆಲ್ ಅವಿವ್‌ನಲ್ಲಿ 'ನಿಯಂತ್ರಿತ ಹುಚ್ಚುತನ' ಕಾಣುತ್ತದೆ. ಟ್ರಾಫಿಕ್ ಹಾರ್ನ್ ಶಬ್ದ, ಮಾರುಕಟ್ಟೆಯ ಕೂಗು, ಬೀಚ್‌ನ ಸಂಗೀತ, ಮತ್ತು ಜನರ ನಗು - ಇವೆಲ್ಲವೂ ಸೇರಿ ಒಂದು ವಿಶಿಷ್ಟವಾದ ರಾಗವನ್ನು ಸೃಷ್ಟಿಸುತ್ತವೆ. ಬಹುಶಃ ಇಸ್ರೇಲಿನ ರಾಜಕೀಯ ಅನಿಶ್ಚಿತತೆಗಳೇ ಜನರಿಗೆ 'ಇಂದೇ ಬದುಕು' (Live for today) ಎಂಬ ಪಾಠ ಕಲಿಸಿರಬಹುದು.

ನಾನು ಹನ್ನೆರಡು ಬಾರಿ ಈ ನಗರಕ್ಕೆ ಭೇಟಿ ನೀಡಿದರೂ ಬೇಸರವಾಗದಿರಲು ಕಾರಣ, ಟೆಲ್ ಅವಿವ್ ಎಂದಿಗೂ ಒಂದೇ ರೀತಿ ಇರುವುದಿಲ್ಲ. ಪ್ರತಿ ಬಾರಿ ಹೋದಾಗಲೂ ಅದು ಹೊಸದಾಗಿ ಕಾಣುತ್ತದೆ. ಅದು ನೆವೆಟ್ಜೆಡೆಕ್‌ನ ಸುಂದರ ರಸ್ತೆಗಳಿರಲಿ ಅಥವಾ ಸರೋನಾ ಮಾರುಕಟ್ಟೆಯ ಆಧುನಿಕತೆಯಿರಲಿ, ಟೆಲ್ ಅವಿವ್ ಹಳೆಯದನ್ನು ಗೌರವಿಸುತ್ತಲೇ ಹೊಸದನ್ನು ಅಪ್ಪಿಕೊಳ್ಳುತ್ತದೆ. ನಾನು ಮತ್ತೊಮ್ಮೆ ಆ ನಗರಕ್ಕೆ ಹೋದರೆ, ಅದರ ಮತ್ತೊಂದು ಹೊಸ ಮುಖವನ್ನು ಪರಿಚಯ ಮಾಡಿಕೊಳ್ಳುವುದು ಖಂಡಿತ. ಏಕೆಂದರೆ, ಟೆಲ್ ಅವಿವ್ ಕೇವಲ ಒಂದು ನಗರವಲ್ಲ, ಅದೊಂದು ಭಾವನೆ.

ಕೊನೆಯದಾಗಿ ಒಂದು ಮಾತು. ಟೆಲ್ ಅವಿವ್ ಅನ್ನೋದು ಕೇವಲ ಕಾಂಕ್ರೀಟ್ ಕಟ್ಟಡಗಳ, ಸುಂದರ ಬೀಚ್‌ಗಳ ಸಮುಚ್ಚಯ ಅಷ್ಟೇ ಅಲ್ಲ. ಅದೊಂದು ಬದುಕುವ ಪಾಠಶಾಲೆ. ಸುತ್ತಲೂ ಬೆಂಕಿಯ ಉಂಗುರವಿದ್ದರೂ, ತಲೆ ಮೇಲೆ ಯಾವ ಕ್ಷಣದಲ್ಲಿ ಅಪಾಯ ಎರಗುತ್ತದೋ ಎಂಬ ಅನಿಶ್ಚಿತತೆ ಇದ್ದರೂ, 'ಈ ಕ್ಷಣ ಸತ್ಯ, ಉಳಿದಿದ್ದೆಲ್ಲ ಮಿಥ್ಯ' ಎಂದು ನಗುತ್ತಾ ಬದುಕುವುದಿದೆಯಲ್ಲ, ಆ ಧೈರ್ಯವನ್ನು ಕಲಿಯಲು ನೀವು ಇಲ್ಲಿಗೊಮ್ಮೆ ಬರಲೇಬೇಕು. ಇಲ್ಲಿನ ಗದ್ದಲದಲ್ಲಿ ಒಂದು ಸಂಗೀತವಿದೆ, ಇಲ್ಲಿನ ಅವಸರದಲ್ಲಿ ಒಂದು ಶಿಸ್ತಿದೆ. ಎಷ್ಟೋ ಸಲ ಅನ್ನಿಸುತ್ತೆ, ಇಸ್ರೇಲಿನ ಮಂದಿ ಬದುಕನ್ನು ಪ್ರೀತಿಸಿದಷ್ಟು ತೀವ್ರವಾಗಿ ಜಗತ್ತಿನ ಮತ್ಯಾರೂ ಪ್ರೀತಿಸುವುದಿಲ್ಲವೇನೋ ಎಂದು. ಸಾವಿನ ಕಣ್ಣಲ್ಲಿ ಕಣ್ಣಿಟ್ಟು, ಬದುಕನ್ನು ಗೆಲ್ಲುವ ಪರಿಯನ್ನು ಈ ನಗರ ಪ್ರತಿ ಕ್ಷಣವೂ ಜಗತ್ತಿಗೆ ಸಾರಿ ಹೇಳುತ್ತಲೇ ಇರುತ್ತದೆ.

ಹನ್ನೆರಡು ಬಾರಿ ಹೋಗಿ ಬಂದ ಮೇಲೂ, 'ಸಾಕಪ್ಪಾ ಆ ಊರು' ಅಂತ ನನಗನ್ನಿಸಿಲ್ಲ. ಬದಲಾಗಿ, ಪಾಸ್‌ಪೋರ್ಟ್‌ನಲ್ಲಿ ಬಿದ್ದಿರುವ ಆ ಹನ್ನೆರಡು ಸೀಲುಗಳನ್ನು ನೋಡಿದಾಗಲೆಲ್ಲ, ಹದಿಮೂರನೇ ಬಾರಿಯ ಟಿಕೆಟ್ ಬುಕ್ ಮಾಡಲು ಕೈ ತವಕಿಸುತ್ತದೆ. ಯಾಕೆಂದರೆ, ಟೆಲ್ ಅವಿವ್ ಒಂದು ಮುಗಿಯದ ಕಾದಂಬರಿ. ಪ್ರತಿ ಸಲ ಹೋದಾಗಲೂ ಅದು ಹೊಸ ಪುಟವೊಂದನ್ನು ತೆರೆದಿಟ್ಟು ಸ್ವಾಗತಿಸುತ್ತದೆ. ಆ ಸಮುದ್ರದ ಉಪ್ಪುಗಾಳಿ, ಆ ಹಳೆಯ ಜಾಫಾದ ಕಲ್ಲುಗಳು ಮತ್ತು ಅಲ್ಲಿನ ಜನರ ಆ ಅಮಾಯಕ ನಗು... ಇವೆಲ್ಲವೂ ಸೇರಿ ನನ್ನನ್ನು ಮತ್ತೆ ಮತ್ತೆ ಅಯಸ್ಕಾಂತದಂತೆ ಸೆಳೆಯುತ್ತಲೇ ಇರುತ್ತವೆ. ಒಮ್ಮೆ ಹೋಗಿ ಬನ್ನಿ, ಆಗ ಅರ್ಥವಾಗುತ್ತದೆ— ಈ ನಗರಕ್ಕೆ ಒಮ್ಮೆ ಹೋದವರು ಯಾಕೆ ಪದೇಪದೆ ಅಲ್ಲಿಗೇ ಹೋಗುತ್ತಾರೆಂದು!

ಸೈಕಲ್ ಕಳ್ಳರ ಕಾಟ

ಟೆಲ್ ಅವಿವ್ ಸೇಫ್ ಸಿಟಿ ಹೌದು, ಆದರೆ ಇಲ್ಲಿ ನಿಮ್ಮ ಸೈಕಲ್ ಸೇಫ್ ಅಲ್ಲ! ಇಲ್ಲಿ ಅತಿ ಹೆಚ್ಚು ಕಳ್ಳತನವಾಗುವ ವಸ್ತು ಎಂದರೆ ಬೈಸಿಕಲ್. ನೀವು ಎಷ್ಟೇ ದಪ್ಪ ಸರಪಳಿ ಹಾಕಿ ಬೀಗ ಹಾಕಿದರೂ, ಕಳ್ಳರು ಅದನ್ನು ಎಗರಿಸಿಕೊಂಡು ಹೋಗುತ್ತಾರೆ. ಹೀಗಾಗಿಯೇ ಇಲ್ಲಿನ ಜನ ಹಳೆ ಮತ್ತು ತುಕ್ಕು ಹಿಡಿದ ಸೈಕಲ್ ಬಳಸಲು ಇಷ್ಟಪಡುತ್ತಾರೆ (ಕಳ್ಳರಿಗೆ ಬೇಡವಾಗಲಿ ಎಂದು!).

ಡೊಮಿನೋಸ್ ಪಿಜ್ಜಾದ ಮೊದಲ ಪ್ರಯೋಗಶಾಲೆ

ನಾವು ಆಗಲೇ ಟೆಲ್ ಅವಿವ್ 'ವೀಗನ್ ಕ್ಯಾಪಿಟಲ್' ಎಂದು ಮಾತನಾಡಿದೆವು. ಅದರ ಪ್ರಭಾವ ಎಷ್ಟಿದೆ ಗೊತ್ತಾ? ಜಗತ್ತಿನ ದೈತ್ಯ ಪಿಜ್ಜಾ ಕಂಪನಿ 'ಡೊಮಿನೋಸ್', ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ 'ವೀಗನ್ ಪಿಜ್ಜಾ' (ಚೀಸ್ ಬಳಸದ ಪಿಜ್ಜಾ) ಪರಿಚಯಿಸಿದ್ದು ಟೆಲ್ ಅವಿವ್‌ನಲ್ಲಿ! ಇಲ್ಲಿನ ಡಿಮ್ಯಾಂಡ್ ನೋಡಿ ನಂತರ ಬೇರೆ ದೇಶಗಳಿಗೆ ವಿಸ್ತರಿಸಿದರು.