ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಪ್ರವಾಸೋದ್ಯಮವನ್ನು ಉತ್ತಮ ಗುಣಮಟ್ಟದಲ್ಲಿ, ಜವಾಬ್ದಾರಿಯುತವಾಗಿ ನಡೆಸಬೇಕಾದ ಮೂಲ ಉದ್ದೇಶ ಕೆಲವು ಕಡೆಗಳಲ್ಲಿ ಮಸುಕಾಗುತ್ತಿರುವುದು ವಿಷಾದನೀಯ.

ಪ್ರವಾಸೋದ್ಯಮದ ಸಾರ ಮನಸ್ಸಿಗೆ ಶಾಂತಿ ನೀಡುವುದು — ಇತರರ ಶಾಂತಿಗೆ ಭಂಗ ತರುವುದು ಎಂದಿಗೂ ಅಲ್ಲ. ಆದರೆ ಸಾರ್ವಜನಿಕ ಸ್ಥಳಗಳು, ರಾಷ್ಟ್ರೀಯ ಸಂರಕ್ಷಿತ ಅರಣ್ಯ ಪ್ರದೇಶಗಳು ಮತ್ತು ಪಕ್ಷಿಧಾಮಗಳಲ್ಲಿ ಶಬ್ದ ಮಾಲಿನ್ಯ, ಅಸಭ್ಯ ವರ್ತನೆ, ಜೋರಾದ ಡಿಜೆ ಸಂಗೀತ ಸೇರಿದಂತೆ ಹಲವಾರು ಅಸಮಂಜಸ ಚಟುವಟಿಕೆಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಪ್ರವಾಸಿಗರು, ಕಾರ್ಯಕ್ರಮ ಆಯೋಜಕರು, ಹೊಟೇಲ್ ಮತ್ತು ರೆಸಾರ್ಟ್ ನಿರ್ವಾಹಕರು ತಮ್ಮ ಗ್ರಾಹಕರಿಗೆ ಉತ್ತಮ ಅನುಭವ ಒದಗಿಸುವ ಜವಾಬ್ದಾರಿಯೊಂದಿಗೆ, ಸುತ್ತಮುತ್ತಲಿನವರಿಗೂ ಅಸೌಕರ್ಯವಾಗದಂತೆ ನಿಯಮಗಳನ್ನು ಪಾಲಿಸಿ ಶಾಂತ ಹಾಗೂ ಸ್ವಚ್ಛ ವಾತಾವರಣವನ್ನು ಕಾಪಾಡುವುದು ಅತ್ಯಗತ್ಯ. ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಗೆ ಗೌರವ ನೀಡುವುದು ಪ್ರವಾಸೋದ್ಯಮದ ಮೂಲ ಉದ್ದೇಶ.

ಇದನ್ನೂ ಓದಿ: ಸಾರ್ವಜನಿಕ ಸಾರಿಗೆಯ ಜೀವನಾಡಿ

ಕೆಲವು ದಿನಗಳ ಹಿಂದಷ್ಟೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅಭಯಾರಣ್ಯದ ವಾಹನದ ಹತ್ತಿರ ಪ್ರವಾಸಿಗರು ಕೂಗಾಡುತ್ತಾ, ಚೀರಾಡುತ್ತಾ ಇದ್ದ ಘಟನೆಯೊಂದು ಭಾರೀ ವೈರಲ್‌ ಆಗಿತ್ತು. ಇಂಥ ಸನ್ನಿವೇಶಗಳಿಂದಾಗಿ ಉಳಿದ ಪ್ರವಾಸಿಗರಿಗಷ್ಟೇ ಅಲ್ಲದೆ ಅಲ್ಲಿನ ಪ್ರಾಣಿಗಳಿಗೂ ಭೀತಿ ಮತ್ತು ಗೊಂದಲ ಉಂಟುಮಾಡುತ್ತದೆ. ಅದರಂತೆಯೇ ಚಿಕ್ಕಮಗಳೂರು, ಸಕಲೇಶಪುರ, ಮಡಿಕೇರಿ, ದಾಂಡೇಲಿ ಹಾಗೂ ಕರಾವಳಿ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯ, ಅಸಭ್ಯ ವರ್ತನೆ, ಮನರಂಜನೆಯ ಹೆಸರಿನಲ್ಲಿ ನಡೆಯುವ ಅತಿಯಾದ ಸಾಹಸ ಕ್ರೀಡೆಗಳು ಹಾಗೂ ‘ಆಫ್-ರೋಡ್’ ಚಟುವಟಿಕೆಗಳ ಬಗ್ಗೆ ದೂರುಗಳು ಹೆಚ್ಚುತ್ತಿವೆ.

ಕೇರಳ ಸೇರಿದಂತೆ ಕೆಲವು ಸ್ಥಳಗಳಿಂದ ಪ್ರವಾಸಕ್ಕೆ ಬಂದ ವಾಹನಗಳು ಸಾರ್ವಜನಿಕ ರಸ್ತೆಗಳ ಮಧ್ಯೆ, ಬಸ್‌ ನಿಲ್ದಾಣಗಳ ಬಳಿ ಜೋರಾಗಿ ಮ್ಯೂಸಿಕ್ ಹಾಕಿ ನೃತ್ಯ ಮಾಡುವ ಘಟನೆಗಳು ಸ್ಥಳೀಯರಲ್ಲಿ ಕಿರಿಕಿರಿ ಮತ್ತು ಅಸಮಾಧಾನವನ್ನು ಉಂಟುಮಾಡುತ್ತಿವೆ. ಇಂಥ ವರ್ತನೆಗಳು ಸಮುದಾಯದ ಶಿಸ್ತಿಗೂ, ಪ್ರವಾಸೋದ್ಯಮದ ಮಾನ್ಯತೆಗೂ ಹಾನಿಕಾರಕ.

karnataka tour organizers 11

ಸಾರ್ವಜನಿಕ ಸ್ಥಳಗಳಲ್ಲಿ ಗದ್ದಲ ಸೃಷ್ಟಿಸುವುದು ಸ್ಥಳೀಯ ಕಾನೂನುಗಳು, ಸಂಪ್ರದಾಯಗಳು ಹಾಗೂ ‘ಅತಿಥಿ ದೇವೋ ಭವ’ ಎಂಬ ಮೌಲ್ಯಗಳಿಗೆ ವಿರುದ್ಧ. ಪ್ರವಾಸೋದ್ಯಮ ಕ್ಷೇತ್ರದ ಉದ್ಯಮಿಗಳು, ಆಯೋಜಕರು ಮತ್ತು ಪ್ರಯಾಣಸೇವಾ ಸಂಸ್ಥೆಗಳು ಈ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೋರಿಸಬೇಕು.

ನಾವು ಸದಾ ಹೇಳುವಂತೆ, “ಪ್ರವಾಸೋದ್ಯಮ ಸಾಮಾಜಿಕ ಅಶಾಂತಿಗಳನ್ನು ಅತ್ಯಂತ ವೇಗವಾಗಿ ತನ್ನೊಳಗೆಳೆದುಕೊಳ್ಳುತ್ತದೆ. ಅವು ಪ್ರವಾಸಿಗರ ಮನಸ್ಸಿನಲ್ಲಿ ಬೇರು ಬಿಡುತ್ತವೆ. ಇದರಿಂದ ಪ್ರವಾಸಿಗರ ಸುರಕ್ಷತೆಗೆ ತೀವ್ರ ಪರಿಣಾಮ ಬೀಳಬಹುದು. ಆದ್ದರಿಂದ ಪ್ರವಾಸೋದ್ಯಮವು ಸದಾ ಶಾಂತಿಯ ಸಾಧನವಾಗಿರಬೇಕು.”

ಪ್ರವಾಸೋದ್ಯಮ ಕ್ಷೇತ್ರವನ್ನು ಗೌರವಪೂರ್ಣವಾಗಿ, ಜವಾಬ್ದಾರಿಯುತವಾಗಿ ಮತ್ತು sustainable ರೀತಿಯಲ್ಲಿ ಮುಂದುವರಿಸುವುದು ಪ್ರವಾಸಿಗರಿಗಷ್ಟೇ ಅಲ್ಲ; ಸಾರಿಗೆ, ಅತಿಥ್ಯ, ಜನಪದ, ತೀರ್ಥಯಾತ್ರೆ ಮತ್ತು ಸಂಬಂಧಿತ ಅನೇಕ ಉದ್ಯಮಗಳಿಗೆ ದೀರ್ಘಾವಧಿಯಲ್ಲಿ ಲಾಭದಾಯಕ. ಸ್ಥಳೀಯರ ಭಾವನೆಗಳನ್ನು ಗೌರವಿಸುವುದು ಮತ್ತು ಪ್ರಕೃತಿ–ಸಂಸ್ಕೃತಿಗಳನ್ನು ಕಾಪಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆ. ಸಂವೇದನಾಶೀಲ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವು ಪ್ರವಾಸಿಗರ ಪ್ರಯಾಣವನ್ನೂ ಸುಗಮ, ಸುರಕ್ಷಿತ ಹಾಗೂ ಸಂತೋಷಕರವಾಗಿಸುತ್ತದೆ.