Saturday, March 14, 2026
Saturday, March 14, 2026

ರಾಮೇಶ್ವರಂನ ಪವಿತ್ರ ಪರಿಸರದಲ್ಲಿ ಅಂತಾರಾಷ್ಟೀಯ ಮಹಿಳೆಯರ ದಿನ

ಮನೆಯಿಂದ ದೂರವಿರುವಾಗಲೇ ಹೆಣ್ಣೊಬ್ಬಳ ನಿಜವಾದ ಪರಿಚಯವಾಗುತ್ತದೆ. ಸದಾ ಪರಿಚಿತವಾದ ಮಗಳು, ಪತ್ನಿ, ತಾಯಿ, ಉದ್ಯೋಗಸ್ಥೆಯ ಪಾತ್ರಗಳಿಂದ ದೂರವಾಗಿದ್ದಾಗ ಅವಳಿಗೆ ತನ್ನ ಅಸ್ತಿತ್ವವೇನು ಅನ್ನುವ ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಇಂಥ ಸನ್ನಿವೇಶಗಳಲ್ಲಿ ಹೆಣ್ಣಿಗೆ ಪ್ರವಾಸವೂ ಒಂದು ಚಿಕ್ಕ ಪ್ರತಿಭಟನೆ, ಪ್ರತಿರೋಧದಂತೆ ಭಾಸವಾಗುತ್ತದೆ. ಅವಳು ಪಯಣಿಸುವಾಗ ಹೊಸ ಜಾಗವೊಂದನ್ನು ಭೇಟಿ ಮಾಡುವುದಷ್ಟೇ ಅಲ್ಲ. ಹೆಚ್ಚು ಜಾಗರೂಕಳಾದ, ದಿಟ್ಟತನದ, ಕುತೂಹಲದ, ಸಿಡಿದೇಳುವ ತನ್ನದೇ ಮತ್ತೊಂದು ಅವತಾರವನ್ನು ಕಾಣುತ್ತಾಳೆ.

  • ಸುಚಿತ್ರಾ ಹೆಗಡೆ

ಆ ದಿನ ನನಗೆ ಚೆನ್ನಾಗಿ ನೆನಪಿದೆ. ಮಾರ್ಚ್ ಎಂಟು. ನಾನು ರಾಮೇಶ್ವರಂನ ಪಂಬನ್ ಸೇತುವೆ ದಾಟುವಾಗ ಮಧ್ಯದ ಕಿರಿದಾದ ಭೂಮಿ ಬೈತಲೆಗೆ ಎರಡೂ ಕಡೆಯಿಂದ ಕಡಲಲೆಗಳ ಕಡು ನೀಲಿ ಕೂದಲರಾಶಿ ಲಾಸ್ಯವಾಡುತ್ತ ಮುತ್ತಿಡುತ್ತಿತ್ತು. ಯಾರೂ ಕೇಳುವವರಿಲ್ಲದಿದ್ದರೂ ಅಬ್ಬರದ ದನಿಯಲ್ಲಿ ಮಾತಾಡುತ್ತಿತ್ತು. ಕಟ್ಟಿ ಹಾಕಿದ್ದ ಬೆಸ್ತರ ಪಾತಿ ದೋಣಿಗಳು ಚಿಕ್ಕ ಮಕ್ಕಳಂತೆ ಸಮುದ್ರದ ನೀರಿಗಿಳಿಯಲು ಹಟ ಮಾಡುತ್ತಿದ್ದವು. ಅಂದು ಅಂತಾರಾಷ್ಟ್ರೀಯ ಮಹಿಳಾ ದಿನ. ನಾನು ಯಾವ ಸಭೆ ಸಮಾರಂಭಗಳಲ್ಲೂ ಭಾಗವಹಿಸದೇ ಭಾರತದಂಚಿನ ಪಂಬನ್ ದ್ವೀಪದ ರಾಮೇಶ್ವರಂನತ್ತ ಮುಖ ಮಾಡಿದ್ದೆ. ಉಕ್ಕಿನಲ್ಲಿ ಬರೆದ ಕವಿತೆಯಂತೆ ಕಂಡ ಪಂಬನ್ ಸೇತುವೆ ನಮ್ಮ ಹೆಣ್ಣು ಮಕ್ಕಳು ಜೀವನದುದ್ದಕ್ಕೂ ಕಟ್ಟುತ್ತಲೇ ಇರಬೇಕಾದ ಕಾಣದ ಸೇತುವೆಗಳ ಕುರಿತು ಹೇಳುವಂತಿತ್ತು. ಸಾಧ್ಯ ಅಸಾಧ್ಯಗಳ ನಡುವೆ, ಪೀಳಿಗೆಯಿಂದ ಪೀಳಿಗೆಗೆ, ಸಂಪ್ರದಾಯಗಳಿಂದ ಆಶೋತ್ತರಗಳಿಗೆ, ಕಿಚನ್ನಿನಿಂದ ಕ್ಲಾಸುರೂಮಿಗೆ ಹಾಗೂ ಮಾತು ಮತ್ತು ಮೌನದ ನಡುವೆ ಅದೆಷ್ಟು ಸೇತುವೆಗಳು!

ಇದನ್ನೂ ಓದಿ: ಅವಳಿಗಳ ಅಮ್ಮನ ಮೀ ಟೈಮ್

ಹೆಣ್ಣಿಗೆ ಪ್ರವಾಸವೆನ್ನುವುದು ಸುಮ್ಮನೆ ಒಂದೆಡೆಯಿಂದ ಇನ್ನೊಂದೆಡೆಗೆ ಸುತ್ತುವುದಲ್ಲ. ಅದು ಹೊರಗಿನ ಇರಿಯುವ ನೋಟಗಳ, ಒಳಗಿನ ಅಳಕುವ ಮನದ ಜತೆಗೆ ಕಟ್ಟೆಚ್ಚರದಲ್ಲಿ ನೆನಪುಗಳನ್ನು ಪೋಣಿಸಿಕೊಳ್ಳುವ ಪ್ರಕ್ರಿಯೆ. ಶತಮಾನಗಳಿಂದ ಹೆಣ್ಣಿನ ತಿರುಗಾಟವನ್ನು ಕುಟುಂಬ, ರೀತಿ ರಿವಾಜುಗಳು, ಭಯ ಮುಂತಾದವುಗಳು ನಿಯಂತ್ರಿಸಿವೆ. ಈಗಲೂ ಕೂಡ ಸಮಾಜ ಹೆಣ್ಣಿಗೆ ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬಂಟಿಯಾಗಿ ತಲೆಯೆತ್ತಿ ಓಡಾಡಲು, ಸಾಂಪ್ರದಾಯಿಕವಾಗಿ ತನಗೆ ವಹಿಸಿದ ಪಾತ್ರಗಳನ್ನು ಹೊರತುಪಡಿಸಿದ ಅಸ್ತಿತ್ವವನ್ನು ಹೊಂದಲು, ಎಲ್ಲಕ್ಕಿಂತ ಮಿಗಿಲಾಗಿ ತಾನು ಮುಖ್ಯ ವಾಹಿನಿಗೆ ಸೇರಿದವಳೆಂದು ಸಾರಲು ಪದೇ ಪದೇ ರುಜುವಾತು ಕೇಳುತ್ತದೆ.

Untitled design (31)

ಹೀಗೆ ಯೋಚಿಸುತ್ತ ಮುಂದೆ ಧನುಷ್ಕೋಡಿಯೆಂಬ ಭೂಮಿಯಂಚಿಗೆ ಬರುವಾಗ ಬಿಳಿಯ ಮರಳಿನ ಮೇಲೆ ಉಳಿದ ಕಟ್ಟಡಗಳ ಅವಶೇಷಗಳು ಕಾಲನ ಮಹಿಮೆಯನ್ನು ಮೌನವಾಗಿ ಸಾರುತ್ತಿದ್ದವು. ಬಂಗಾಳ ಕೊಲ್ಲಿ ಮತ್ತು ಹಿಂದು ಮಹಾಸಾಗರಗಳ ನೀರು ಸೇರಿಯೂ ಸೇರದಂತೆ ತಮ್ಮ ವಿಭಿನ್ನ ವರ್ಣಛಾಯೆಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದವು. ಧನುಷ್ಕೋಡಿಯ ಕಿಕ್ಕಿರಿದ ರಸ್ತೆಯಲ್ಲಿ ಹೆಣ್ಣು ಮಕ್ಕಳು ಬೇಯಿಸಿದ ಕಡಲೆಕಾಯಿ, ಶಂಖ ಚಿಪ್ಪುಗಳ ಸರ, ಬಳೆ ಮುಂತಾದವುಗಳನ್ನು ಮಾರುತ್ತಿದ್ದರು. ಸಮುದ್ರದಂಚಿಗೆ ಬಂದು ಕುಳಿತಾಗ ಪಕ್ಕದಲ್ಲಿ ಕುಳಿತ ಬೆಸ್ತರ ಹೆಣ್ಣು ಮಗಳು ಮೀನಿನ ಬಲೆಯನ್ನು ಹೊಲಿಯುತ್ತಿದ್ದಳು. ಸಮುದ್ರವನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ನನಗೆ ‘ಕಡಲು ಸಹನೆಯ ಪರೀಕ್ಷೆ ಮಾಡುತ್ತದೆ ಹಾಗೆಯೇ ಹೊಟ್ಟೆಯನ್ನೂ ತುಂಬಿಸುತ್ತದೆ’ ಅಂದು ನಕ್ಕಳು. ಅವಳು ಬರೀ ನೀರಿನ ಕುರಿತಾಗಿ ಹೇಳಿರಬಹುದೇ ಎನ್ನುವ ಸಂಶಯ ಮನದಲ್ಲಿ ಕಾಡಿತ್ತು.

ರಾಮೇಶ್ವರಂನಲ್ಲಿ ಭಕ್ತಿ, ನಂಬಿಕೆ, ವಿಶ್ವಾಸಗಳು ಬರಿಗಾಲಲ್ಲಿ ನಡೆದಾಡುತ್ತವೆ. ದೇಗುಲದ ಗಂಟೆ, ಫಿಲ್ಟರ್ ಕಾಫಿಯ ಘಮ ಮತ್ತು ಮಲ್ಲಿಗೆಯ ಪರಿಮಳಕ್ಕೆ ಇಲ್ಲಿಯ ಗಲ್ಲಿಗಳು ಬಲು ಬೇಗ ಎಚ್ಚರಗೊಳ್ಳುತ್ತವೆ. ಕರ್ಪೂರದ ಘಾಟು ಹೊತ್ತ ಪೂಜಾ ಸಾಮಗ್ರಿಗಳ ಅಂಗಡಿಗಳಲ್ಲಿ ಹೆಂಗಸರೇ ಹೆಚ್ಚಿದ್ದರು. ರಾಮನಾಥಸ್ವಾಮಿಯ ಮೈಲುದ್ದದ ಪ್ರಾಂಗಣಗಳನ್ನು ತಾಳ್ಮೆಯಿಂದ ಹೊತ್ತು ಸಾಲಾಗಿ ನಿಂತಿರುವ ಶಿಲಾಸ್ತಂಭಗಳು ತೋರಿಸುವ ಅಲೌಕಿಕ ಸೌಂದರ್ಯದ ದಾರಿಯಲ್ಲಿ ಕಂಡ ಕಲಶ ಹೊತ್ತ, ಸೆರಗು ಹೊದ್ದ, ಮಕ್ಕಳನ್ನು ಎತ್ತಿಕೊಂಡ, ಒದ್ದೆಯಾದ ಕೂದಲು ಮತ್ತು ಕಣ್ಣುಗಳ ಹೆಂಗಳೆಯರ ಭಕ್ತಿ ಭಾವದಲ್ಲಿ ಆಡಂಬರವಿರಲಿಲ್ಲ. ಉಸಿರಾಡುವಷ್ಟು ಸಹಜವಾದ ಲಯ ಗತಿಯಿತ್ತು. ಸ್ಪಟಿಕ ಲಿಂಗದ ಕಣ್ಣು ಕೋರೈಸುವ ಬೆಳಕು ಎಲ್ಲರನ್ನು ಸಮ್ಮೋಹಿನಿಗೊಳಿಸುವಂತಿತ್ತು.

ದೇವಾಲಯದ ಹಿಂದಿನ ಸಂದು ಗೊಂದಿನ ದಾರಿಯಲ್ಲಿ ಚಿಕ್ಕದೊಂದು ಇಡ್ಲಿ ದೋಸಾ ಹೋಟೆಲ್ಲು. ಒಲೆಯಿಂದ ಗಲ್ಲಾವರೆಗೂ ತಟ್ಟೆ ಲೋಟಗಳಿಂದ ಟೇಬಲ್ಲು ಶುಚಿಗೊಳಿಸುವವರೆಗೂ ಅಕ್ಕ ತಂಗಿಯರಿಬ್ಬರೇ ನಿರ್ವಹಿಸುತ್ತಿದ್ದರು. ಮಕ್ಕಳನ್ನು ಓದಿಸುವ, ಹೊಟೇಲನ್ನು ಬೆಳೆಸುವ ಕನಸುಗಳು ಅವರ ನಗುವಿನೊಂದಿಗೆ ದ್ವೀಪದಾಚೆಗೂ ವಿಸ್ತರಿಸಿದಂತಿತ್ತು. ಅಲ್ಲಿದ್ದ ಮಹಾತ್ವಾಕಾಂಕ್ಷೆಗಳು ಸಂಪ್ರದಾಯಗಳನ್ನು ತಿರಸ್ಕರಿಸಿರಲಿಲ್ಲ. ಆಕಾರ ಬದಲಾಗಿತ್ತು ಅಷ್ಟೇ. ಯಾವುದೇ ಪೊಳ್ಳುಮಾತುಗಳ ಕೃತಕತೆಯಿಲ್ಲದ ಸಾಮಾನ್ಯ ಬದುಕಿನ ಸಹಜ ಸಬಲೀಕರಣದ ಉದಾಹರಣೆ ಅಲ್ಲಿತ್ತು.

Untitled design (34)

ಮತ್ತೊಮ್ಮೆ ಸಂಜೆಯ ಹೊತ್ತಿಗೆ ಕಡಲತೀರಕ್ಕೆ ಬಂದೆ. ಆಗಸ ಹವಳ ಮುತ್ತುಗಳನ್ನು ಒಟ್ಟಿಗೆ ಅರೆದು ಚೆಲ್ಲಿತ್ತು. ಸುತ್ತಲಿನ ಮೆಟ್ಟಿಲುಗಳನ್ನು ಅಲೆಗಳು ಬೇಸರವಿಲ್ಲದೇ ಬಾರಿ ಬಾರಿಗೂ ತೋಯಿಸುತ್ತಿದ್ದವು. ಗಾಳಿ, ಉಪ್ಪು, ಕಾಲ ಎಲ್ಲ ಪ್ರತಿರೋಧಗಳ ನಡುವೆಯೂ ಮತ್ತಷ್ಟು ಹುಮ್ಮಸ್ಸಿನಿಂದ ಮರಳುತ್ತಿದ್ದವು. ನಮಗೆ ಬೇಕಿರುವುದು ಇದೇ. ಏಕಾಗ್ರಚಿತ್ತ, ಕೆಚ್ಚು ಮತ್ತು ದಣಿವರಿಯದ ಹುರುಪು. ಬಿದ್ದರೂ ಎದ್ದು ನಿಲ್ಲುವ ಛಲ ಬಲ. ಕಲ್ಲುಗಳನ್ನು ಕೂಡ ಮಣಿಸುವ ಕಡಲ ಅಲೆಗಳ ಯಶಸ್ಸು ಅವುಗಳ ಶಕ್ತಿಗಿಂತ ಮತ್ತೆ ಮರಳುವ ಸಹನೆಯಲ್ಲಿದೆ ಅನ್ನಿಸಿತು.

ಸೂರ್ಯ ಬಾನಂಚಿನ ಇನ್ಫಿನಿಟಿ ಈಜುಗೊಳದಲ್ಲಿ ಮುಳುಗುತ್ತಿದ್ದಂತೆ ನನ್ನದೇ ಪಯಣಗಳು ನೆನಪಾದವು. ಒಂಟಿಯಾಗಿ ಹತ್ತಿದ ಮೊದಲ ರೈಲು, ಮಣಭಾರದ ಲಗೇಜಿನ ಜೊತೆಗೆ ಒಬ್ಬಳೇ ಓಡಾಡುವ ಭಯವನ್ನೂ ಹೊತ್ತುಕೊಂಡು ಓಡಾಡಿದ ವಿಮಾನ ನಿಲ್ದಾಣ, ತಪ್ಪಿ ಹೋದ ಕೊನೆಯ ಬಸ್ಸು, ರದ್ದಾದ ವಿಮಾನ, ಕಳೆದು ಹೋದ ಪರ್ಸು, ಕತ್ತಲಲ್ಲಿ ತಪ್ಪಿದ ದಾರಿ, ಕೈ ಕೊಟ್ಟ ಆರೋಗ್ಯ ಏನೇ ಎದುರಾದರೂ ತಿರುಗಾಟದ ಅಲೆಗಳು ಮತ್ತೆ ಮತ್ತೆ ನನ್ನ ತೀರಕ್ಕೆ ಮರಳಿ ಬರುತ್ತಿರುವುದನ್ನು ನೆನೆದು ನಸುನಗು ಮೂಡಿತು.

ರಾಮೇಶ್ವರಂ ನ ಪವಿತ್ರ ಪರಿಸರದಲ್ಲಿ ಕಳೆದ ಅಂತಾರಾಷ್ಟೀಯ ಮಹಿಳೆಯರ ದಿನ ವಿಭಿನ್ನವಾಗಿ ಕಂಡಿತು. ಬ್ಯಾನರುಗಳು, ಮೈಕು, ಸಭೆ, ಘೋಷಣೆಗಳ್ಯಾವುದೂ ಇಲ್ಲದೇ ಇಡೀ ಪಟ್ಟಣವೇ ಮೌನವಾಗಿ ಮಾತಾಡುವಂತೆ ಅನಿಸಿತು. ಬೀಸುವ ಗಾಳಿಗೂ ಉಪ್ಪಿನ ರುಚಿ.

ಮನೆಯಿಂದ ದೂರವಿರುವಾಗಲೇ ಹೆಣ್ಣೊಬ್ಬಳ ನಿಜವಾದ ಪರಿಚಯವಾಗುತ್ತದೆ. ಸದಾ ಪರಿಚಿತವಾದ ಮಗಳು, ಪತ್ನಿ, ತಾಯಿ, ಉದ್ಯೋಗಸ್ಥೆಯ ಪಾತ್ರಗಳಿಂದ ದೂರವಾಗಿದ್ದಾಗ ಅವಳಿಗೆ ತನ್ನ ಅಸ್ತಿತ್ವವೇನು ಅನ್ನುವ ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಇಂಥ ಸನ್ನಿವೇಶಗಳಲ್ಲಿ ಹೆಣ್ಣಿಗೆ ಪ್ರವಾಸವೂ ಒಂದು ಚಿಕ್ಕ ಪ್ರತಿಭಟನೆ, ಪ್ರತಿರೋಧದಂತೆ ಭಾಸವಾಗುತ್ತದೆ. ಅವಳು ಪಯಣಿಸುವಾಗ ಹೊಸ ಜಾಗವೊಂದನ್ನು ಭೇಟಿ ಮಾಡುವುದಷ್ಟೇ ಅಲ್ಲ. ಹೆಚ್ಚು ಜಾಗರೂಕಳಾದ, ದಿಟ್ಟತನದ, ಕುತೂಹಲದ, ಸಿಡಿದೇಳುವ ತನ್ನದೇ ಮತ್ತೊಂದು ಅವತಾರವನ್ನು ಕಾಣುತ್ತಾಳೆ. ಪ್ರತಿ ಬಾರಿ ಒಬ್ಬಳೇ ರೈಲನ್ನೇರಿದಾಗ, ಹೊಟೇಲಿನ ರೂಮಿನಲ್ಲಿ ಚೆಕಿನ್ ಆಗುವಾಗ ಬೇರೆಯವರು ನಿರ್ಧರಿಸಿದ ಸುರಕ್ಷೆ, ನಡವಳಿಕೆ, ದಿರಿಸು, ಸಮಯಗಳ ಮಿತಿಯ ಅದೃಶ್ಯ ರೇಖೆಗಳನ್ನು ಅಳಿಸಿ ಮತ್ತೆ ಹೊಸದಾಗಿ ಬರೆಯುತ್ತಾಳೆ.

Untitled design (32)

ವಿಭಿನ್ನ ಸಂಸ್ಕೃತಿ, ಜನಜೀವನದ ಅನುಭವಗಳು ಅವಳ ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತವೆ.

ಪ್ರವಾಸ ಹೆಣ್ಣು ಮಕ್ಕಳ ಕಠಿಣ ಪರಿಶ್ರಮದ ಬದುಕಿಗೆ, ಜವಾಬ್ದಾರಿಗಳ ಸರಮಾಲೆಗೆ, ತನ್ನದೇ ಆದ ಸಮಯ ಮತ್ತು ವಿಶ್ರಾಂತಿಗೆ ವರವಾಗಿ ಪರಿಣಮಿಸುತ್ತದೆ. ಅದು ಬರಿಯ ಅನ್ವೇಷಣೆಯ, ಹುಡುಕಾಟದ ಮಾರ್ಗವಾಗಿರದೇ ಬಿಡುಗಡೆಯ ರಹದಾರಿಯಾಗಿರುತ್ತದೆ. ಭಯ ಮತ್ತು ಸ್ವಾತಂತ್ರ್ಯ ಒಟ್ಟಿಗೆ ಇರಬಹುದೆನ್ನುವ ಅನುಭವವನ್ನು ಕೊಡುತ್ತದೆ.

ಗಡಿಗಳು ಕೇವಲ ಊಹಾರೇಖೆಗಳಾಗಿ ಕಾಣಿಸುವುದು ಪ್ರವಾಸ ಕಲಿಸುವ ಪಾಠ. ಹಾಗೆಯೇ ನಮ್ಮ ಮಿತಿಗಳು ಕೂಡ. ನಾವು ಹೆಣ್ಣುಮಕ್ಕಳಿಗೆ ಸಾರ್ಥಕವಾದ ಪಯಣವೆಂದರೆ ಸಪ್ತ ಸಾಗರಗಳನ್ನು ದಾಟುವುದಲ್ಲ. ಅದಕ್ಕೂ ಮೊದಲು ನಮಗೆ ಸೇರಿದ, ನಮ್ಮ ಹಕ್ಕಿನ ಕ್ಷಿತಿಜಗಳನ್ನು ಯಾವ ಅಳುಕಿಲ್ಲದೇ ನಮ್ಮದಾಗಿಸಿಕೊಳ್ಳೋಣ. ಅಂತರಾಷ್ಟೀಯ ಮಹಿಳಾ ದಿವಸದ ಶುಭಾಶಯಗಳು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!