Monday, June 15, 2026
Monday, June 15, 2026

ಪ್ರಕೃತಿ ವಿನಾಶದ ಪ್ರವಾಸೋದ್ಯಮ ನಮಗೆ ಬೇಕೇ?

ಸಮುದ್ರ ಮಟ್ಟದಿಂದ ಆರೂವರೆ ಸಾವಿರ ಅಡಿಗಳ ಎತ್ತರದಲ್ಲಿನ ಮಸ್ಸೂರಿಯನ್ನು ನಾನು 50 ವರ್ಷಗಳ ಹಿಂದೆ ತಲುಪಿದಾಗ ಅಲ್ಲಿಯ ಗಾಳಿ ಎಷ್ಟು ಪ್ಯೂರ್ ಆಗಿತ್ತೆಂದರೆ ಒಂದು ದೀರ್ಘ ಉಸಿರನ್ನು ಎಳೆದುಕೊಂಡರೆ ಮೈಮನಗಳೆರಡೂ ಪುಳಕಿತಗೊಳ್ಳುತ್ತಿದ್ದವು. ಅದೇ ಈ ಬಾರಿ ಮಸ್ಸೂರಿಯ ಮಹಾತ್ಮ ಗಾಂಧಿ ಚೌಕ ಅಥವಾ ಲೈಬ್ರರಿ ಪಾಯಿಂಟ್ ಅನ್ನು ತಲುಪಿದಾಗ ನಾನು ಕೆಮ್ಮತೊಡಗಿದೆ. ಏಕೆಂದರೆ ಅಲ್ಲಿ ಆಗಲೇ ಜಮಾಯಿಸಿದ್ದ ಹಲವು ಕಾರುಗಳಿಂದ ಬರುತ್ತಿದ್ದ ಹೊಗೆ ಇಡೀ ವಾತಾವರಣವನ್ನು ಕಲುಷಿತಗೊಳಿಸಿವೆ.

  • ಡಾ. ಡಿ. ವಿ. ಗುರುಪ್ರಸಾದ್.

ಕ್ವೀನ್ ಆಫ್ ಹಿಲ್ಸ್ ಎಂದು ಕರೆಯಲ್ಪಡುವ ಮಸ್ಸೂರಿ ಗಿರಿಧಾಮಕ್ಕೆ ಹೋಗಲು ಒಂದು ವಾರದ ಹಿಂದೆ ನಾನು ಪತ್ನಿಯೊಡನೆ ಬೆಂಗಳೂರಿನಿಂದ ವಿಮಾನದಲ್ಲಿ ಡೆಹ್ರಾಡೂನ್ ತಲುಪಿದೆ. ಈ ಪ್ರವಾಸದ ಉದ್ದೇಶವು ಪ್ರಕೃತಿಯ ಅಸ್ವಾದಕ್ಕಾಗಲೀ ರಿಲಾಕ್ಸ್ ಮಾಡುವುದಕ್ಕಾಗಲೀ ಆಗಿರಲಿಲ್ಲ. 1976ರಲ್ಲಿ ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ, ಭಾರತದ ವಿವಿಧ ಹಿರಿಯ ಸೇವೆಗಳ ಅಧಿಕಾರಿಗಳ 50 ವರ್ಷಗಳ ಪುನರ್ಮಿಲನದ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿತ್ತು. ನಾನು ಐಪಿಎಸ್ ಸೇವೆಗೆ ವರದಿ ಮಾಡಿಕೊಂಡಿದ್ದೇ ಮಸ್ಸೂರಿಯಲ್ಲಿ ಆಗಿದ್ದರಿಂದಲೂ, ಕಳೆದ 50 ವರ್ಷಗಳಲ್ಲಿ ನಾನು ಅಲ್ಲಿಗೆ ಹೋಗದೇ ಇದ್ದುದ್ದರಿಂದಲೂ, ಎಲ್ಲಕ್ಕಿಂತ ಮಿಗಿಲಾಗಿ ನನ್ನ ಸಹೋದ್ಯೋಗಿಗಳಾಗಿದ್ದವರನ್ನು ಭೇಟಿ ಮಾಡುವ ಉದ್ದೇಶದಿಂದಲೂ, ಈ ಟ್ರಿಪ್ ಕೈಗೊಂಡಿದ್ದೆ.

ಇದನ್ನೂ ಓದಿ: ವಿಸ್ಮಯಗಳ ಮಾಯಾ ನಗರಿ ಪಟಿಯಾಲಾ ಪೆಗ್

50 ವರ್ಷಗಳ ಹಿಂದೆ, ಮಸ್ಸೂರಿ ಮತ್ತು ಚಾರ್‌ಧಾಮ್‌ಗಳ ಹೆಬ್ಬಾಗಿಲಾದ ಡೆಹ್ರಾಡೂನ್‌ಗೆ ವಿಮಾನ ಸಂಪರ್ಕವೇ ಇರಲಿಲ್ಲ. ಹೀಗಾಗಿ ಅಲ್ಲಿಗೆ ಹೋಗುವವರ ಸಂಖ್ಯೆ ಕಡಿಮೆಯಿತ್ತು. ಆಗ ನಾವು ದೆಹಲಿಯಿಂದ ಮೀಟರ್ ಗೇಜ್ ರೈಲಿನಲ್ಲಿ ಇಡೀ ರಾತ್ರಿ ಪಯಣಿಸಿ ಬೆಳಗ್ಗೆ ಡೂನ್ ತಲುಪಿದ್ದೆವು. ಈಗ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಪ್ರತಿದಿನವೂ 36 ವಿಮಾನಗಳು ಬರುತ್ತವೆ. ಬೆಂಗಳೂರಿನಿಂದಲೇ 4 ಫ್ಲೈಟ್‌ಗಳಿವೆ. ಇವುಗಳಲ್ಲಿ ಕಡಿಮೆಯೆಂದರೆ 2000 ಪ್ರಯಾಣಿಕರು ಡೂನ್ ಕಣಿವೆಗೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಏರಬಹುದು.

Untitled design (84)

ಈಗಲೂ ಹಿಂದಿನಂತೆ ಡೆಹರಾಡೂನ್‌ನಿಂದ 35 ಕಿಮೀ ದೂರದಲ್ಲಿರುವ ಮಸ್ಸೂರಿಗೆ ರಸ್ತೆಯ ಮೂಲಕವೇ ಹೋಗಬೇಕು. ಹಾಗಾಗಿ ನಾವು ಡೆಹ್ರಾಡೂನ್ ವಿಮಾನ ನಿಲ್ದಾಣದಿಂದಲೇ ಮಸ್ಸೂರಿಗೆ ಟ್ಯಾಕ್ಸಿಯಲ್ಲಿ ಹೊರಟೆವು. ಈ ಪ್ರಯಾಣದಲ್ಲಿ ನಾನು ಮೊದಲಿಗೆ ಗಮನಿಸಿದ್ದು ಬೆಟ್ಟದ ರಸ್ತೆಯಲ್ಲಿನ ವಾಹನ ದಟ್ಟಣೆ. ಆ ಬಗ್ಗೆ ಟ್ಯಾಕ್ಸಿ ಚಾಲಕನನ್ನು ಕೇಳಿದಾಗ ಆತ ʻಸರ್, ಕಳೆದ ಹತ್ತು ವರ್ಷಗಳಲ್ಲಿ ಮಸ್ಸೂರಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಮಿತಿಮೀರಿದೆ. ಆರಂಭದಲ್ಲಿ ಡೆಹ್ರಾಡೂನ್‌ನಿಂದ ಮಸ್ಸೂರಿಯ ಬಸ್ ಸ್ಟಾಂಡ್ ತಲುಪಲು ಒಂದು ಗಂಟೆಗಿಂತ ಹೆಚ್ಚು ಸಮಯ ಬೇಕಾಗಿರಲಿಲ್ಲ. ಈಗ ಮಿನಿಮಮ್ ಒಂದೂವರೆ ಗಂಟೆ ಬೇಕು. ವಾರಾಂತ್ಯಗಳಲ್ಲಿ ಬೆಟ್ಟದ ಮೇಲೆ ಹೋಗಲು ಮೂರರಿಂದ ನಾಲ್ಕು ಗಂಟೆ ಬೇಕಾದರೆ ಕೆಳಕ್ಕೆ ಬರಲು ಇನ್ನೂ ಹೆಚ್ಚು ಸಮಯ ತಗಲುತ್ತದೆ. ಮಸ್ಸೂರಿಯಲ್ಲಿ ಒಂದು ಕಿಮೀ ಕ್ರಮಿಸಲು 15 ನಿಮಿಷಗಳಿಂದ ಅರ್ಧ ಗಂಟೆ ಬೇಕು. ಹೀಗಾಗಿ ನಾನು ವಾರಾಂತ್ಯದಲ್ಲಿ ಮಸ್ಸೂರಿಗೆ ಬಾಡಿಗೆಗೆ ಹೋಗುವುದೇ ಇಲ್ಲʼ ಎಂದ.

ಬೆಟ್ಟದ ರಸ್ತೆಯಾಗಿರುವುದರಿಂದ ಮಸ್ಸೂರಿ ರಸ್ತೆಯನ್ನು ಅಗಲಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ರಸ್ತೆ ಅಗಲ ಮಾಡಲು ಹೋದರೆ ಗುಡ್ಡ ಕುಸಿಯುತ್ತದೆ. ಕಳೆದ ಒಂದು ದಶಕದಲ್ಲಿ ಗುಡ್ಡ ಕುಸಿತದ ಪ್ರಮಾಣ ಅಧಿಕವಾಗಿದೆ. ಎರಡು ವರ್ಷಗಳ ಹಿಂದೆ ಈ ಭಾಗದಲ್ಲಾದ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿ ನಾಲ್ಕು ದಿನಗಳ ಕಾಲ ರಸ್ತೆಯೇ ಬಂದ್ ಆಗಿತ್ತು ಎಂದು ನಮ್ಮ ಚಾಲಕ ಹೇಳಿದಾಗ, ʻಆ ಸಮಯದಲ್ಲಿ ಮಸ್ಸೂರಿಗೆ ಹೋಗಿದ್ದ ಪ್ರವಾಸಿಗರ ಪರಿಸ್ಥಿತಿ ಏನಾಗಿತ್ತು?ʼ ಎಂದು ಅವನನ್ನು ಪ್ರಶ್ನಿಸಿದೆ. ʻಅವರು ಪಟ್ಟ ಪಾಡು ಆ ದೇವರೇ ಬಲ್ಲ ಸರ್. ಬಹಳ ಜನರಿಗೆ ಆಹಾರ ಸಿಗುವುದೂ ಕಠಿಣವಾಗಿತ್ತುʼ ಎಂದ ಆತ.

ʻವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ದೆಹಲಿ, ಹರಿಯಾಣ, ಯುಪಿಗಳಿಂದ ಮಸ್ಸೂರಿಗೆ ಬರುತ್ತಾರೆ. ಕಳೆದ ಕೆಲವೇ ವರ್ಷಗಳಲ್ಲಿ ಅವರಿಗಾಗಿ ನೂರಾರು ಹೊಟೇಲ್‌ಗಳು, ಹೋಮ್‌ ಸ್ಟೇಗಳು, ರೆಸಾರ್ಟ್‌ಗಳು ನಿರ್ಮಾಣಗೊಂಡಿವೆ. ರೆಸ್ಟೊರೆಂಟ್‌ಗಳು ಲೆಕ್ಕವಿಲ್ಲದಷ್ಟಾಗಿವೆ. ನೂರು ಜನ ವಾಸಿಸುತ್ತಿದ್ದ ಪ್ರದೇಶದಲ್ಲಿ 500 ಜನರು ತಂಗುತ್ತಿದ್ದಾರೆʼ ಎಂದೂ ತಿಳಿಸಿದ. ನಾನಲ್ಲಿದ್ದ ಕಾಲದಲ್ಲಿ ಮಸ್ಸೂರಿಯ ರಸ್ತೆಗಳಲ್ಲಿ ಬೆರಳೆಣಿಕೆಯಷ್ಟೇ ವಾಹನಗಳಿದ್ದವು. ಅಬ್ಬಬ್ಬಾ ಎಂದರೆ ಆ ಸಮಯದಲ್ಲಿ ಒಂದು ದಿನಕ್ಕೆ ಸುಮಾರು 100 ವಾಹನಗಳು ಮಸ್ಸೂರಿಯ ರಸ್ತೆಗಳಲ್ಲಿ ಓಡಾಡುತ್ತಿರಬಹುದು. ಎರಡೋ ಮೂರೋ ಉತ್ತಮ ರೆಸ್ಟೊರೆಂಟ್‌ಗಳು ಹಾಗೂ ಒಂದು ಡಜನ್‌ನಷ್ಟು ಹೊಟೇಲ್‌ಗಳಿದ್ದವು. ಡೆಹ್ರಾಡೂನ್ ಚೆಕ್‌ಪಾಯಿಂಟ್‌ನಿಂದ ಮಸ್ಸೂರಿಯ ಚೆಕ್‌ಪಾಯಿಂಟ್‌ವರೆಗೆ ಸಂಪೂರ್ಣವಾಗಿ ಅರಣ್ಯಗಳೇ ಕಾಣುತ್ತಿದ್ದವು. ರಸ್ತೆಯ ಬದಿಯಲ್ಲಿ ಹಲವಾರು ಸಣ್ಣ ಸಣ್ಣ ಜಲಪಾತಗಳು ಕಾಣುತ್ತಿದ್ದವು. ಹಾದಿಯಲ್ಲಿ ಬರುವ ಭಟ್ ಎನ್ನುವ ಗ್ರಾಮದಲ್ಲಿ ಒಂದೈದಾರು ಚಹದಂಗಡಿಗಳು ಇದ್ದವು. ಅಲ್ಲಿಂದ ಸ್ವಲ್ಪ ಮುಂದೆ ಹೋದರೆ ಒಂದು ದೇವಸ್ಥಾನ ಬರುತ್ತಿತ್ತು. ಎಲ್ಲ ವಾಹನ ಸವಾರರು ಅಲ್ಲಿ ಒಂದು ಕ್ಷಣ ವಾಹನ ನಿಲ್ಲಿಸಿ ನಮಸ್ಕರಿಸಿ ಮುಂದಕ್ಕೆ ಹೋಗುತ್ತಿದ್ದರು. ಈಗಂತೂ ಮರಗಳು ವಿರಳವಾಗಿವೆ. ಜಲಪಾತಗಳು ಕಣ್ಮರೆಯಾಗಿವೆ. ರಸ್ತೆಯ ಬದಿಯಲ್ಲಿ ಎಲ್ಲಿ ನೋಡಿದರೂ ಮ್ಯಾಗಿ, ಕಾಫಿ, ಐಸ್‌ಕ್ರೀಮ್‌, ಚಹಾದ ಅಂಗಡಿಗಳು ಇವೆ. ಪ್ರವಾಸಿಗಳು ಅಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್‌ ಆಗುತ್ತಿದೆ.

ಸಮುದ್ರ ಮಟ್ಟದಿಂದ ಆರೂವರೆ ಸಾವಿರ ಅಡಿಗಳ ಎತ್ತರದಲ್ಲಿನ ಮಸ್ಸೂರಿಯನ್ನು ನಾನು 50 ವರ್ಷಗಳ ಹಿಂದೆ ತಲುಪಿದಾಗ ಅಲ್ಲಿಯ ಗಾಳಿ ಎಷ್ಟು ಪ್ಯೂರ್ ಆಗಿತ್ತೆಂದರೆ ಒಂದು ದೀರ್ಘ ಉಸಿರನ್ನು ಎಳೆದುಕೊಂಡರೆ ಮೈಮನಗಳೆರಡೂ ಪುಳಕಿತಗೊಳ್ಳುತ್ತಿದ್ದವು. ಅದೇ ಈ ಬಾರಿ ಮಸ್ಸೂರಿಯ ಮಹಾತ್ಮ ಗಾಂಧಿ ಚೌಕ ಅಥವಾ ಲೈಬ್ರರಿ ಪಾಯಿಂಟ್ ಅನ್ನು ತಲುಪಿದಾಗ ನಾನು ಕೆಮ್ಮತೊಡಗಿದೆ. ಏಕೆಂದರೆ ಅಲ್ಲಿ ಆಗಲೇ ಜಮಾಯಿಸಿದ್ದ ಹಲವು ಕಾರುಗಳಿಂದ ಬರುತ್ತಿದ್ದ ಹೊಗೆ ಇಡೀ ವಾತಾವರಣವನ್ನು ಕಲುಷಿತಗೊಳಿಸಿವೆ. ʻಇಲ್ಲಿಗೆ ವಾರಾಂತ್ಯದಲ್ಲಿ ಸಾವಿರ ಗಟ್ಟಲೆ ಪ್ರವಾಸಿಗರು ನೂರಾರು ವಾಹನಗಳಲ್ಲಿ ಬರುತ್ತಾರೆ. ಅವರಿಗಾಗಿ ಹೊಟೇಲ್‌ಗಳು, ರೆಸ್ಟೊರೆಂಟ್‌ಗಳು ಮತ್ತು ಮನರಂಜನಾ ಸ್ಥಳಗಳನ್ನು ನಿರ್ಮಿಸಿರುವುದರಿಂದ ಇಲ್ಲಿ ಎಲ್ಲ ಬಗೆಯ ಮಾಲಿನ್ಯವೂ ಇದೆʼ ಎಂದ ನಮ್ಮ ಚಾಲಕ.

ನಾವು ಅಲ್ಲಿಂದ ಮುಂದೆ 3 ಕಿಮೀ ದೂರದಲ್ಲಿರುವ ನಮ್ಮ ತರಬೇತಿ ಶಾಲೆಯನ್ನು ತಲುಪಿದೆವು. ಆಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ನಾನು ಪ್ರಶಿಕ್ಷಣಾರ್ಥಿಯಾಗಿದ್ದಾಗ ಇದ್ದ ಲೇಡೀಸ್ ಹಾಸ್ಟೆಲ್ ಮತ್ತು ಪಂತ್ ಹಾಸ್ಟೆಲ್‌ಗಳು ಕಣ್ಮರೆಯಾಗಿದ್ದವು. 1991ರಲ್ಲಿ ಮಸ್ಸೂರಿ ಪಟ್ಟಣದಲ್ಲಿ ಭೀಕರ ಭೂಕಂಪವಾಯಿತು. ಆಗ ಇವೆರಡೇ ಹಾಸ್ಟೆಲ್‌ಗಳಲ್ಲದೆ ನಾನು ವಾಸವಾಗಿದ್ದ ವ್ಯಾಲಿ ವ್ಯೂ ಹಾಸ್ಟೆಲ್ ಸಹಾ ನೆಲಕಚ್ಚಿತು ಎಂದು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಹೇಳಿದ. ನಮ್ಮನ್ನು ಎದುರುಗೊಳ್ಳಲು ಬಂದ ತರಬೇತಿ ಶಾಲೆಯ ಸಿಬ್ಬಂದಿಯೊಬ್ಬರು, ʻನೋಡಿ ಸರ್, ಮಸ್ಸೂರಿ ಸೂಕ್ಷ್ಮವಾದ ಹಿಮಾಲಯ ಭೂಪ್ರದೇಶಕ್ಕೆ ಸೇರಿದೆ. ಇಲ್ಲಿ ಭೂಕಂಪದ ಸಾಧ್ಯತೆಗಳು ಹೆಚ್ಚು. ಇದು ತಿಳಿದಿದ್ದರೂ ಹೆಚ್ಚು ಹೆಚ್ಚು ಕಟ್ಟಡಗಳನ್ನು ಕಟ್ಟಲು ಬಿಡುತ್ತಿದ್ದಾರೆ. ಭೂಮಿತಾಯಿ ಎಷ್ಟು ಭಾರವನ್ನು ತಾನೇ ಸಹಿಸಬಲ್ಲಳು? ಜೋರಾಗಿ ಅಲುಗಾಡಿ ಕೆಲವು ಕಟ್ಟಡಗಳನ್ನೇ ಕೆಳಗುರುಳಿಸಿದಳು. ಮಸ್ಸೂರಿಯ ಹತ್ತು ಹಲವು ಕಟ್ಟಡಗಳು ನಾಶವಾದವು, ಪ್ರಾಣಗಳೂ ಹೋದವುʼ ಎಂದು ನಿಟ್ಟುಸಿರುಬಿಟ್ಟರು.

ಆ ಸಂಜೆ ವಾಯುವಿಹಾರಕ್ಕೆಂದು ಮಾಲ್ ರಸ್ತೆಗೆ ನಾನು ಹೋದಾಗ ಆ ರಸ್ತೆಯಲ್ಲಿ ಸಂಜೆ ಮತ್ತು ಬೆಳಗಿನ ಜಾವ ವಾಹನಗಳ ಓಡಾಟ ನಿಷಿದ್ಧ ಎಂದು ತಿಳಿಯಿತು. ಆದರೂ ನಮಗೆ ಆ ರಸ್ತೆಯಲ್ಲಿ ಬಿಡುಬೀಸಾಗಿ ನಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಅಷ್ಟೊಂದು ಜನಸಂದಣಿ ಅಲ್ಲಿ ನೆರೆದಿತ್ತು. ಅವರುಗಳ ಮಧ್ಯವೂ ಸ್ಥಳೀಯರು ತಮ್ಮ ಸ್ಕೂಟರ್‌ಗಳು ಮತ್ತು ಕಾರುಗಳಲ್ಲಿ (ಅವರಿಗೆ ರಸ್ತೆ ನಿಷೇಧವಿಲ್ಲ) ಸ್ಪೀಡಾಗಿ ಓಡಾಡುತ್ತ ನನ್ನಂಥವರಲ್ಲಿ ಆತಂಕವನ್ನು ಮೂಡಿಸುತ್ತಿದ್ದರು.

Untitled design (82)

ʻಈ ಹಿಂದೆ ಏಪ್ರಿಲ್-ಮೇ ತಿಂಗಳಲ್ಲಿ ಮಸ್ಸೂರಿಯಲ್ಲಿ ಮಳೆ ಬರುತ್ತಿರಲಿಲ್ಲ. ಈಗ ಯಾವಾಗ ಮಳೆ ಬರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಅನಿಯಂತ್ರಿತ ಟೂರಿಸಂನಿಂದಾಗಿ ಮಸ್ಸೂರಿಯ ಹವಾಮಾನವೇ ಬದಲಾಗಿದೆ. ನೀವು ಇಲ್ಲಿದ್ದಾಗ ನಿಮಗೆ ಹಿಮಾಲಯ ಪರ್ವತಶ್ರೇಣಿಗಳು ಗೋಚರಿಸುತ್ತಿದ್ದವು. ಈಗ ನೋಡಿ ಹಿಮಾಚ್ಛಾದಿತ ಪರ್ವತಗಳೇ ಕಾಣುವುದಿಲ್ಲʼ ಎಂದು ಹೇಳಿದರು ಅಂಗಡಿಯೊಂದರ ಹಿರಿಯ ಮಾಲೀಕರು.

ಕೇವಲ ಅರ್ಧ ಶತಮಾನದಲ್ಲಿ ಪ್ರವಾಸೋದ್ಯಮವು ಒಂದು ಜಾಗವನ್ನು ಇಷ್ಟು ಬದಲಾಯಿಸಿದರೆ ಇನ್ನು ಇಪ್ಪತ್ತು ವರ್ಷಗಳಲ್ಲಿ ಮಸ್ಸೂರಿಯೇ ಇಲ್ಲದಂತಾಗುತ್ತದೆ ಎಂದು ನನಗೆ ಅನಿಸಿತು. ಭಾರತದಲ್ಲಿ ಅನಿಯಂತ್ರಿತ ಪ್ರವಾಸೋದ್ಯಮದಿಂದ ಹತ್ತು ಹಲವು ತೊಂದರೆಗಳು ಉದ್ಭವಿಸಿವೆ. ಪರಿಸರ ನಾಶವಾಗಿದೆ, ಹವಾಮಾನ ಬದಲಾಗಿದೆ, ಅರಣ್ಯಗಳು ಮಾಯವಾಗುತ್ತಿವೆ, ಮೂಲಭೂತ ಸೌಕರ್ಯಗಳ ಮೇಲೆ ಹೊರೆಯಾಗಿದ್ದು, ಕುಡಿಯುವ ನೀರಿನ ಅಲಭ್ಯತೆ ಆಗುತ್ತಿದೆ. ವಿದ್ಯುತ್ ದೊರೆಯುತ್ತಿಲ್ಲ, ಮತ್ತು ದಿನಬಳಕೆಯ ವಸ್ತುಗಳ ಬೆಲೆಗಳು ದುಬಾರಿಯಾಗಿವೆ.

ಅತಿಯಾದ ಪ್ರವಾಸೋದ್ಯಮದಿಂದ ಜಗತ್ತಿನ ಹಲವು ಪ್ರಸಿದ್ಧ ಪ್ರವಾಸಿ ತಾಣಗಳು ತೊಂದರೆಗೀಡಾಗಿವೆ. ಮುಂದಾಗುವ ಅನಾಹುತಗಳನ್ನು ತಪ್ಪಿಸಲು ವಿವಿಧ ದೇಶಗಳು ಕ್ರಮಗಳನ್ನು ತೆಗೆದುಕೊಂಡಿವೆ. ಅವುಗಳಲ್ಲಿ ಕೆಲವು,

  • ಪ್ರತಿ ಪ್ರವಾಸಿ ತಾಣವೂ ಹೊಂದಬಹುದಾದ ಪ್ರವಾಸಿಗಳ ಸಂಖ್ಯೆಯನ್ನು ನಿರ್ಧರಿಸಿ ನಂತರ ಪ್ರತಿದಿನವೂ ಅಲ್ಲಿಗೆ ಆಗಮಿಸುವ ಪ್ರಯಾಣಿಕರ ಗರಿಷ್ಟ ಸಂಖ್ಯೆಯನ್ನು ನಿಗದಿ ಮಾಡುವುದು.
  • ಹೊಟೇಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಮ್‌ ಸ್ಟೇಗಳಲ್ಲಿ ಪ್ರವಾಸಿಗಳು ತಂಗಬಹುದಾದ ದಿನಗಳಿಗೆ ಮಿತಿ ಹಾಕುವುದು.
  • ಪ್ರವಾಸಿ ತಾಣಗಳಿಗೆ ಬಂದು ಹೋಗುವ ವಾಹನಗಳ ಮೇಲೆ ಮಿತಿ ವಿಧಿಸುವುದು ಇಲ್ಲವೇ ದುಬಾರಿ ಕರವನ್ನು ಹಾಕುವುದು.
  • ಹೊಟೇಲ್, ರೆಸ್ಟೊರೆಂಟ್, ಸಾಹಸ ಕ್ರೀಡೆಗಳು ಮುಂತಾದವುಗಳನ್ನು ಆರಂಭಿಸುವುದನ್ನು ನಿಷೇಧಿಸುವುದು.
  • ನೀರಿನ ಸಮಸ್ಯೆ ಉಂಟಾದಾಗ ಪ್ರವಾಸಿಗಳ ಎಂಟ್ರಿಯನ್ನು ನಿಲ್ಲಿಸುವುದು.
  • ಕಡಿಮೆ ಪ್ರವಾಸಿಗರು ಹೋಗುವ ತಾಣಗಳಿಗೆ ಪ್ರೋತ್ಸಾಹವನ್ನು ನೀಡುವುದು.
  • ಸಾರ್ವಜನಿಕರು ವಾಸಮಾಡುವ ಬಡಾವಣೆಗಳಲ್ಲಿ ಯಾವುದೇ ಪ್ರವಾಸಿ ಸಂಬಂಧಿ ಚಟುವಟಿಕೆಗಳನ್ನು ನಿಷೇಧಿಸುವುದು.
  • ಸ್ಥಳೀಯರು ಬೇರೆ ಪ್ರದೇಶಗಳಿಗೆ ವಲಸೆ ಹೋಗದಂತೆ ತಡೆಯಲು ಅವರಿಗೆ ಪರ್ಯಾಯ ಸೌಲಭ್ಯಗಳನ್ನು ಒದಗಿಸುವುದು ಇತ್ಯಾದಿ.

ಇಂಥ ಕೆಲವು ಕ್ರಮಗಳನ್ನು ಮಸ್ಸೂರಿ, ಮನಾಲಿ, ಶಿಮ್ಲಾ, ಡಾರ್ಜಿಲಿಂಗ್, ಜೀರೋ ವ್ಯಾಲಿ, ಊಟಿ ಹಾಗೂ ಗೋವಾಗಳಲ್ಲಿ ಬೇಗನೇ ತೆಗೆದುಕೊಳ್ಳಬೇಕಾಗಿದೆ. ಇದಕ್ಕಾಗಿ ಸೂಕ್ತವಾದ ಕಾನೂನು ಕ್ರಮಗಳನ್ನು ರಚಿಸಬೇಕಿದೆ. ಇಂಥ ಕ್ರಮಗಳಿಗೆ ರಾಜಕೀಯ ಇಚ್ಛಾಶಕ್ತಿ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಅದು ಇರದೇ ಹೋದರೆ ಮಸ್ಸೂರಿಯ ಪರಿಸ್ಥಿತಿ ಬೇರೆ ಪ್ರವಾಸಿ ತಾಣಗಳಿಗೂ ಬರಬಹುದು!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?