ಕರ್ನಾಟಕಕ್ಕೂ ಬೇಕಾಗಿದೆ 'ಹಸಿರು ಸೇತುವೆ' ಮಾದರಿ
ಕರ್ನಾಟಕದಲ್ಲಿ ʻಗ್ರೀನ್ ಪಾತ್ ಕಾರಿಡಾರ್ʼ ಅಥವಾ ʻಹಸಿರು ಪರಿಸರ ಸಂಪರ್ಕ ಮಾರ್ಗʼ ಯೋಜನೆಗಳನ್ನು ರೂಪಿಸುವ ಅಗತ್ಯ ಈಗ ಸ್ಪಷ್ಟವಾಗಿದೆ. ವಿಶೇಷವಾಗಿ ಬಂಡಿಪುರ–ವಯನಾಡು–ಊಟಿ ಮಾರ್ಗ, ನಾಗರಹೊಳೆ–ಕೊಡಗು ಭಾಗ, ದಾಂಡೇಲಿ–ಗೋವಾ ಗಡಿ ಪ್ರದೇಶ ಮತ್ತು ಆಗುಂಬೆ–ಮಲೆನಾಡು ಕಾಡಂಚಿನ ಭಾಗಗಳಲ್ಲಿ ಹಸಿರು ಮೇಲು ಸೇತುವೆಗಳು, ವನ್ಯಜೀವಿ ಅಡಿಪಾಲುಗಳು ಹಾಗೂ ಪರಿಸರ ಸ್ನೇಹಿ ಬೈಪಾಸ್ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ.
ಕೆ. ರಾಧಾಕೃಷ್ಣ ಹೊಳ್ಳ
ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ (ರಿ.)
ನಿರ್ದೇಶಕರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಯ ಮಹಾಸಂಸ್ಥೆ.
--
ಇಂದು ವಿಶ್ವದ ಅನೇಕ ಮುಂದುವರಿದ ರಾಷ್ಟ್ರಗಳು ಅಭಿವೃದ್ಧಿಯ ಅರ್ಥವನ್ನು ಹೊಸದಾಗಿ ವ್ಯಾಖ್ಯಾನಿಸುತ್ತಿವೆ. ಕೇವಲ ಕಾಂಕ್ರೀಟ್ ರಸ್ತೆಗಳು, ಅತಿವೇಗದ ಹೆದ್ದಾರಿಗಳು ಮತ್ತು ದೊಡ್ಡ ಕಟ್ಟಡಗಳ ನಿರ್ಮಾಣವನ್ನೇ ಅಭಿವೃದ್ಧಿ ಎಂದು ಪರಿಗಣಿಸುವ ಕಾಲ ನಿಧಾನವಾಗಿ ಬದಲಾಗುತ್ತಿದೆ. ಅದರ ಬದಲು ಪ್ರಕೃತಿ, ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯನ್ನು ಒಳಗೊಂಡ ʻಇಕೋ ಸೆನ್ಸಿಟಿವ್ ಡೆವಲಪ್ಮೆಂಟ್ʼ ಮಾದರಿಗಳು ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆಯುತ್ತಿವೆ.
ಇದನ್ನೂ ಓದಿ: ಮಧ್ಯಪ್ರಾಚ್ಯ ಉದ್ವಿಗ್ನತೆ: ಟೂರಿಸ್ಟ್ ಟ್ಯಾಕ್ಸಿ ಆಪರೇಟರ್‌ಗಳ ಬದುಕಿನ ಮೇಲೆ ಕಾರ್ಮೋಡ
ಈ ಹಿನ್ನೆಲೆಯಲ್ಲಿ ಕೆನಡಾದ ಬ್ಯಾನ್ಫ್ ರಾಷ್ಟ್ರೀಯ ಉದ್ಯಾನವನದಲ್ಲಿ ನಿರ್ಮಿಸಲಾದ ʻವೈಲ್ಡ್‌ಲೈಫ್ ಇಕೋ ಬ್ರಿಡ್ಜ್ʼ ಅಥವಾ ʻವನ್ಯಜೀವಿ ಹಸಿರು ಸೇತುವೆʼಗಳು ಜಗತ್ತಿನ ಗಮನ ಸೆಳೆದಿವೆ. ರಸ್ತೆ ನಿರ್ಮಾಣವು ಕಾಡುಪ್ರಾಣಿಗಳ ಸಹಜ ಸಂಚಾರಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ, ಹೆದ್ದಾರಿಗಳ ಮೇಲ್ಭಾಗದಲ್ಲಿ ಕಾಡಿನಂತೆಯೇ ಹಸಿರು ವಾತಾವರಣ ನಿರ್ಮಿಸಿ, ವನ್ಯಜೀವಿಗಳು ಸುರಕ್ಷಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಪರಿಣಾಮವಾಗಿ ರಸ್ತೆ ಅಪಘಾತಗಳು ಕಡಿಮೆಯಾಗಿದ್ದು, ಪ್ರಾಣಿಗಳ ಜೀವ ರಕ್ಷಣೆ ಸಾಧ್ಯವಾಗಿದೆ. ಜತೆಗೆ ಇದು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೂ ಹೊಸ ಆಕರ್ಷಣೆಯಾಗಿದೆ.
ಇಂಥ ಮಾದರಿಗಳ ಅವಶ್ಯಕತೆ ಕರ್ನಾಟಕದಲ್ಲೂ ತೀವ್ರವಾಗಿ ಕಾಣುತ್ತಿದೆ. ಪಶ್ಚಿಮ ಘಟ್ಟಗಳಂತಹ ವಿಶ್ವದ ಮಹತ್ವದ ಜೈವ ವೈವಿಧ್ಯ ಪ್ರದೇಶಗಳನ್ನು ಹೊಂದಿರುವ ಕರ್ನಾಟಕದಲ್ಲಿ ಬಂಡಿಪುರ, ನಾಗರಹೊಳೆ, ದಾಂಡೇಲಿ, ಆಗುಂಬೆ, ಭದ್ರಾ, ಕುದ್ರೆಮುಖ, ಕೊಡಗು ಹಾಗೂ ಮಲೆನಾಡು ಪ್ರದೇಶಗಳು ಪ್ರಕೃತಿ ಸಂಪತ್ತಿನ ಮಹತ್ವದ ಕೇಂದ್ರಗಳಾಗಿವೆ. ರಾಜ್ಯದ ಸುಮಾರು ಐದನೇ ಭಾಗ ಕಾಡು ಪ್ರದೇಶಗಳಿಂದ ಆವರಿಸಲ್ಪಟ್ಟಿದೆ. ಸಾವಿರಾರು ಪ್ರವಾಸಿಗರು ಪ್ರತಿವರ್ಷ ಈ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ.
ಇತ್ತೀಚೆಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಸೊಸೈಟಿಯ ಮಾಸಿಕ ಕಾರ್ಯಕಾರಿಸಮಿತಿಯ ಸಭೆ ನಾಗರಹೊಳೆ ಅರಣ್ಯದ ಮಧ್ಯದಲ್ಲಿರುವ ಖಾಸಗಿ ರಿಸಾರ್ಟ್ ಒಂದರಲ್ಲಿ ನಡೆಸಲಾಗಿತ್ತು. ಸಭೆಯ ಬಳಿಕ ಪ್ರಕೃತಿಯ ಮಧ್ಯೆ ನಾಗರಹೊಳೆ ಅರಣ್ಯದ ಸೌಂದರ್ಯವನ್ನು ಸಮೀಪದಿಂದ ವೀಕ್ಷಿಸುವ ಅವಕಾಶವೂ ನಮ್ಮ ತಂಡಕ್ಕೆ ಸಿಕ್ಕಿತು. ಆ ಸಂದರ್ಭದಲ್ಲಿ ಮನಸ್ಸಿನಲ್ಲಿ ಮೂಡಿದ ಪ್ರಮುಖ ಪ್ರಶ್ನೆಯೇ — ಇಷ್ಟೊಂದು ಅಪಾರ ಹಸಿರು ಸಂಪತ್ತು, ವನ್ಯಜೀವಿ ಸಂಪನ್ಮೂಲ ಮತ್ತು ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ನಮ್ಮ ರಾಜ್ಯದಲ್ಲಿ, ಈ ಹಸಿರು ವಲಯಗಳನ್ನು ಇನ್ನಷ್ಟು ಸುರಕ್ಷಿತವಾಗಿ, ವೈಜ್ಞಾನಿಕವಾಗಿ ಮತ್ತು ವಿಶ್ವಮಟ್ಟದ ಪರಿಸರ ಸ್ನೇಹಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯಾಕೆ ನಾವು ಮುಂದಾಗಿಲ್ಲ ಎಂಬುದು.
ಆದರೆ ಇದೇ ಸಮಯದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ರಸ್ತೆ ಜಾಲ, ಅತಿವೇಗದ ವಾಹನ ಸಂಚಾರ, ರಾತ್ರಿ ಪ್ರಯಾಣ, ಶಬ್ದ ಮಾಲಿನ್ಯ ಮತ್ತು ನಿಯಂತ್ರಣವಿಲ್ಲದ ಪ್ರವಾಸೋದ್ಯಮ ಚಟುವಟಿಕೆಗಳಿಂದ ವನ್ಯಜೀವಿಗಳ ಸಹಜ ವಾಸಸ್ಥಳ ಮತ್ತು ಸಂಚಾರ ಮಾರ್ಗಗಳಿಗೆ ತೊಂದರೆ ಉಂಟಾಗುತ್ತಿದೆ. ಅನೇಕ ಬಾರಿ ಆನೆ, ಚಿರತೆ, ಜಿಂಕೆ ಸೇರಿದಂತೆ ಹಲವು ಪ್ರಾಣಿಗಳು ರಸ್ತೆ ದಾಟುವಾಗ ಅಪಘಾತಗಳಿಗೆ ಒಳಗಾಗುತ್ತಿವೆ. ಮಾನವ–ವನ್ಯಜೀವಿ ಸಂಘರ್ಷವೂ ಹೆಚ್ಚುತ್ತಿದೆ.

ದುರದೃಷ್ಟವಶಾತ್, ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ಅನೇಕ ಬಾರಿ ತಾತ್ಕಾಲಿಕ ನಿರ್ಬಂಧಗಳು ಮತ್ತು ಆಡಳಿತಾತ್ಮಕ ಆದೇಶಗಳ ಮೂಲಕ ಪರಿಸ್ಥಿತಿಯನ್ನು ನಿರ್ವಹಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ದೀರ್ಘಕಾಲೀನ ದೃಷ್ಟಿಯಿಂದ ನೋಡಿದರೆ, ಪರಿಸರ ಸಂರಕ್ಷಣೆ ಮತ್ತು ಜನಸೌಕರ್ಯ ಎರಡನ್ನೂ ಸಮತೋಲನದಲ್ಲಿ ಉಳಿಸುವ ವೈಜ್ಞಾನಿಕ ಮೂಲಸೌಕರ್ಯ ನಿರ್ಮಾಣವೇ ನಿಜವಾದ ಪರಿಹಾರವಾಗಬೇಕು.
ಕರ್ನಾಟಕದಲ್ಲಿ ʻಗ್ರೀನ್ ಪಾತ್ ಕಾರಿಡಾರ್ʼ ಅಥವಾ ʻಹಸಿರು ಪರಿಸರ ಸಂಪರ್ಕ ಮಾರ್ಗʼ ಯೋಜನೆಗಳನ್ನು ರೂಪಿಸುವ ಅಗತ್ಯ ಈಗ ಸ್ಪಷ್ಟವಾಗಿದೆ. ವಿಶೇಷವಾಗಿ ಬಂಡಿಪುರ–ವಯನಾಡು–ಊಟಿ ಮಾರ್ಗ, ನಾಗರಹೊಳೆ–ಕೊಡಗು ಭಾಗ, ದಾಂಡೇಲಿ–ಗೋವಾ ಗಡಿ ಪ್ರದೇಶ ಮತ್ತು ಆಗುಂಬೆ–ಮಲೆನಾಡು ಕಾಡಂಚಿನ ಭಾಗಗಳಲ್ಲಿ ಹಸಿರು ಮೇಲು ಸೇತುವೆಗಳು, ವನ್ಯಜೀವಿ ಅಡಿಪಾಲುಗಳು ಹಾಗೂ ಪರಿಸರ ಸ್ನೇಹಿ ಬೈಪಾಸ್ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ.
ಇಂಥ ಯೋಜನೆಗಳಿಂದ ವನ್ಯಜೀವಿಗಳ ಜೀವ ರಕ್ಷಣೆ ಸಾಧ್ಯವಾಗುತ್ತದೆ. ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ. ಮಾನವ–ವನ್ಯಜೀವಿ ಸಂಘರ್ಷ ಇಳಿಮುಖವಾಗುತ್ತದೆ. ಪರಿಸರ ಸ್ನೇಹಿ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮ ಬೆಳೆಯುತ್ತದೆ. ಮಲೆನಾಡು ಮತ್ತು ಗಡಿ ಭಾಗಗಳಿಗೆ ಉತ್ತಮ ಸಂಪರ್ಕವೂ ದೊರೆಯುತ್ತದೆ.
ಅಭಿವೃದ್ಧಿ ಮತ್ತು ಪ್ರಕೃತಿ ಒಂದಕ್ಕೊಂದು ವಿರುದ್ಧವಲ್ಲ; ಅವು ಪರಸ್ಪರ ಪೂರಕವಾಗಬಹುದು ಎಂಬುದನ್ನು ಜಗತ್ತು ಈಗ ಅರ್ಥಮಾಡಿಕೊಳ್ಳುತ್ತಿದೆ. ಕರ್ನಾಟಕವೂ ಇದೇ ದಿಕ್ಕಿನಲ್ಲಿ ದೂರದೃಷ್ಟಿಯ ಹೆಜ್ಜೆ ಇಡುವ ಅಗತ್ಯವಿದೆ. ಕೆನಡಾದ ಬ್ಯಾನ್ಫ್ ಮಾದರಿಯ ʻವನ್ಯಜೀವಿ ಹಸಿರು ಸೇತುವೆʼ ಯೋಜನೆಗಳನ್ನು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಜಾರಿಗೊಳಿಸಿದರೆ, ಅದು ಕೇವಲ ಪರಿಸರ ಸಂರಕ್ಷಣೆಯ ಹೆಜ್ಜೆಯಾಗುವುದಲ್ಲ; ದೇಶಕ್ಕೇ ಮಾದರಿಯಾಗುವ ಪರಿಸರ ಸ್ನೇಹಿ ಅಭಿವೃದ್ಧಿಯ ಹೊಸ ಅಧ್ಯಾಯವಾಗಬಹುದು.