Friday, March 13, 2026
Friday, March 13, 2026

ಅವಳಿಗಳ ಅಮ್ಮನ ಮೀ ಟೈಮ್

ಒಬ್ಬ ತಾಯಿ ದಿನಕ್ಕೆ ಸಾವಿರಾರು ಸಣ್ಣ-ಪುಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ʻಮಕ್ಕಳಿಗೆ ಯಾವ ಬಟ್ಟೆ ಹಾಕಬೇಕು? ಅವರು ಯಾಕೆ ಅಳುತ್ತಿದ್ದಾರೆ? ಮನೆಗೆ ಬೇಕಾದ ಸಾಮಗ್ರಿ ತಂದಿದ್ದೇವಾ?ʼ ಈ ನಿರಂತರ 'ಡಿಸಿಷನ್ ಮೇಕಿಂಗ್' ಪ್ರಕ್ರಿಯೆ ಮೆದುಳನ್ನು ದಣಿಸಿರುತ್ತದೆ. ಪ್ರವಾಸದ ಈ ಎರಡು ದಿನಗಳಲ್ಲಿ ನಾನು ಆ ಸುಳಿಯಿಂದ ಹೊರಬಂದಿದ್ದೆ. ಇಲ್ಲಿ ನಾನು ಯಾರಿಗೂ ಉತ್ತರ ನೀಡಬೇಕಿರಲ್ಲಿಲ್ಲ. ʻಈಗ ಏನು ಮಾಡಬೇಕು?ʼ ಎಂಬ ಪ್ರಶ್ನೆಗೆ, ʻನನಗೇನು ಇಷ್ಟವೋ ಅದನ್ನು ಮಾಡಬೇಕುʼ ಎಂಬುದೇ ಉತ್ತರವಾಗಿತ್ತು.

- ಮೇಘನಾ ಸುಧೀಂದ್ರ

ತಾಯ್ತನ ಅನ್ನುವುದು ಬಹಳ ಜವಾಬ್ದಾರಿಯುತವಾದ ಕೆಲಸ. ಒಂದು ಮಗುವಿನ ಪಾಲನೆ ಪೋಷಣೆಗೆ 24 ಗಂಟೆ ಸಾಕಾಗೋದಿಲ್ಲ. ಆ ಜಾಗದಲ್ಲಿ ಇಬ್ಬಿಬ್ಬರು ಮಕ್ಕಳಿದ್ದರಂತೂ ಮನೆ ಬಿಟ್ಟು ಹೋಗೋದೇ ಕಷ್ಟ ಆಗಿಬಿಡುತ್ತದೆ. ಒಬ್ಬರಾದ ಮೇಲೆ ಒಬ್ಬರಿಗೆ ತಿನ್ನಿಸೋದು, ಸ್ನಾನ ಮಾಡಿಸೋದು, ಮಲಗಿಸೋದು, ಆಟ ಆಡಿಸೋದು ಹೀಗೆ ಎಲ್ಲವೂ ಮೆಷೀನ್ ಕೆಲಸದ ಹಾಗೆ ನಡೆಯುತ್ತಿರುತ್ತದೆ. ಇದನ್ನು ಬೇರೆಯವರಿಗೆ ವರ್ಗಾಯಿಸಿ ಮನೆಯಲ್ಲಿ ಅಮ್ಮಂದಿರು ಹಾಯಾಗಿರಬಹುದು. ಆದರೆ, ಕನ್ಸಿಸ್ಟೆಂಟ್ ಆಗಿ ಯಾರೂ ಅದನ್ನು ಮಾಡುವುದಕ್ಕೆ ಸಾಧ್ಯವಿಲ್ಲ. ಇದನ್ನೆಲ್ಲಾ ಅರಿತ ಮೇಲೆ ಅವಳಿ ಅಮ್ಮನಾದ ನನಗೆ ಮನೆ ಬಿಟ್ಟು ಎಲ್ಲದರೂ ಹೋಗೋದು ಕಷ್ಟದ ಮಾತೇ ಆಗಿತ್ತು. ಸುಮಾರು 3 ವರ್ಷಗಳ ಕಾಲ ನಾನು ಎಲ್ಲಾದರೂ ಪ್ರವಾಸ ಹೋಗಿದ್ದೇ ಇರಲ್ಲಿಲ್ಲ.

ಇದನ್ನೂ ಓದಿ: ಸೌರಾಷ್ಟ್ರ ಸುತ್ತಲು ಸಪ್ತ ದಿನಗಳ ಪ್ರವಾಸ

ನಮ್ಮ ಕಥೆಕೂಟದ 10ನೆಯ ವರ್ಷದ ವಾರ್ಷಿಕೋತ್ಸವ ಮತ್ತು ಆನ್ಯುಯಲ್ ಸಮಾವೇಶ ತುಮರಿಯಲ್ಲಿ ನಿಶ್ಚಯವಾಗಿತ್ತು. 2 ವರ್ಷದಿಂದ ನೆಪ ಹೇಳಿಕೊಂಡು ತಪ್ಪಿಸಿಕೊಳ್ಳುತ್ತಿದ್ದೆ. ಮಕ್ಕಳು ಚಿಕ್ಕವರು ಎಂಬುದು ನನ್ನ ಸ್ಟಾಂಡರ್ಡ್ ಡೈಲಾಗ್ ಆಗಿತ್ತು. ಆದರೆ, ಈ ಸಲ ಮಕ್ಕಳಿಗೂ ಮತ್ತು ನನಗೂ ಸ್ವಲ್ಪ ಅಭ್ಯಾಸ ಆಗಲಿ ಎಂದು ಎರಡು ದಿನ ಬಿಟ್ಟು ಹೋಗುವ ನಿರ್ಧಾರ ಮಾಡಿದೆ. ಹಗಲಿನಲ್ಲಿ ಹೇಗಾದರೂ ಮಕ್ಕಳನ್ನು ಯಾಮಾರಿಸಬಹುದಾಗಿತ್ತು. ಆದರೆ ರಾತ್ರಿ ಮಲಗೋದಕ್ಕೆ ಅಮ್ಮನ ಲಾಲಿ ಹಾಡು, ಕಥೆ ಬೇಕೇ ಬೇಕಾಗಿತ್ತು. ಒಂದು ರಾತ್ರಿ ಅವಳಿಗಳು ನಿದ್ದೆ ಮಾಡದಿದ್ದರೆ ನಾಳೆ ಬೆಳಗಿನ ಪರಿಸ್ಥಿತಿ ಏನು ಎಂಬುದು ನನಗೆ ಗೊತ್ತಿತ್ತು. ಹಾಗಾಗಿ ಹಿಂಜರಿಕೆಯಿಂದಲೇ ಹೋಗಲೊಪ್ಪಿದೆ. ನನ್ನ ಗೆಳತಿ ಒಬ್ಬಳು ನನಗೆ ʻಮಕ್ಕಳಿಗೂ ಸ್ವಲ್ಪ ಆಭ್ಯಾಸ ಆಗಲಿ ಹೋಗುʼ ಎಂದು ರೇಗಿ ಹೇಳಿದ್ದರಿಂದ ಹೊರಡಲು ಅಣಿಯಾದೆ.

Untitled design (21)

ತುಮರಿ, ಸಾಗರ ತಾಲೂಕಿನಲ್ಲಿರುವ ಒಂದು ಪುಟ್ಟ ಹಳ್ಳಿ. 6 ವರ್ಷಗಳ ಹಿಂದೆ ಸಾಹಿತ್ಯದ ಕಾರ್ಯಕ್ರಮಕ್ಕೆ ಅಲ್ಲಿಗೆ ಹೋಗಿದ್ದೆ. ಆಗ ಊರಿಗೆ ಹೋಗೋದಕ್ಕೆ ಲಾಂಚ್‌ನಲ್ಲೇ ಹೋಗಬೇಕಾಗಿತ್ತು. ನನಗೆ ಆ ಅನುಭವ ಹೊಸದು. ಬೆರಗುಗಣ್ಣಿನಿಂದಲೇ ನೋಡುತ್ತಿದ್ದೆ. ಆದರೆ, ಈಗ ಅಲ್ಲಿ ಹೊಳೆಬಾಗಿಲು ಸೇತುವೆ ನಿರ್ಮಾಣವಾಗಿದೆ.

ತುಮರಿಗೆ ಹೋಗಲು ಮಿನಿಮಲಿಸ್ಟಿಕ್‌ ಆಗಿ ಬ್ಯಾಗ್‌ ಪ್ಯಾಕ್‌ ಮಾಡಿಟ್ಟಿದ್ದೆ. ಮಕ್ಕಳಿಗೆ ರಾತ್ರಿ ಗುಡ್‌ನೈಟ್‌ ಹೇಳಿ, ಮರುದಿನ ಬೆಳಗ್ಗೆದ್ದು ಹೊರಟರೆ ನನ್ನದೊಂದೇ ಬ್ಯಾಗ್, ಆರಾಮಾಗಿ ಕೈ ಬೀಸಿಕೊಂಡು ಹೋಗಬಹುದು ಎಂಬುದೇ ನನ್ನ ತಲೆಯಲ್ಲಿದ್ದ ವಿಚಾರ. ಕಾರು ಹತ್ತುವವರೆಗೂ ಮಕ್ಕಳ ಬಗ್ಗೆ ಅಷ್ಟೇನೂ ಯೋಚನೆ ಬರಲ್ಲಿಲ್ಲ. ಊರು ಬಿಡುವ ಸಮಯಕ್ಕೇ ಮಕ್ಕಳೇನು ಮಾಡುತ್ತಿದ್ದಾರೆ ಎಂಬ ಯೋಚನೆ ಶುರುವಾಗಿದ್ದು. ಅವರು ಎದ್ದರಾ, ಎದ್ದಾಗ ಅತ್ತಿದುಂಟಾ? ಹಾಲು ಕುಡಿದರೋ ಅಥವಾ ಹಠ ಮಾಡಿದರೋ? ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡುತ್ತಿದ್ದವು. ಜತೆಗಿದ್ದ ಸ್ನೇಹಿತರೂ ಸಂಸಾರಸ್ಥರು. ಆದರೆ, ಅವರಲ್ಲಿ ಯಾರೂ ಮಕ್ಕಳ ಬಗ್ಗೆ ತಲೆಕೆಡಿಸಿಕೊಂಡಿರಲ್ಲಿಲ್ಲ. ಅದು ಅವರಿಗೆ ಹಲವು ಬಾರಿ ಒದಗಿ ಬಂದಿದ್ದ ಪ್ರಮೇಯ ಆಗಿದ್ದರಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿಯಾಗಿದ್ದರು. ಆದರೂ ನಾನು ಕಡೆಗೆ ತಡೆಯಲಾಗದೆ ಮನೆಗೆ ಫೊನಾಯಿಸಿದೆ. ಮಕ್ಕಳು ಆರಾಮಾಗಿಯೇ ಇದ್ದರು. ʻಅಮ್ಮ ಬೊಬ್ಬ ಹೋಗಿ 2 ಡೇಸ್ ನಂತರ ಮರಳಿ ಬರುತ್ತಾರೆʼ ಎಂದು ಅಲ್ಲಿದ್ದವರಿಗೆ ಕಥೆ ಹೇಳುತ್ತಿದ್ದರು. ಅವರ ಎಲ್ಲಾ ಮಾತುಗಳನ್ನು ಕೇಳಲು ಮತ್ತು ಆಟ ಆಡಿಸಲು ನನ್ನ ಆತ್ತೆಯ ಮನೆಯವರು ಟೊಂಕಕಟ್ಟಿ ನಿಂತಿದ್ದರು. ಹಾಗಾಗಿ ಇದು ಸಾಧ್ಯವಾಗಿತ್ತು.

ಇದನ್ನೂ ಓದಿ: ಸ್ಪಿಟಿ ವ್ಯಾಲಿಯ ಬೆಳ್ಳಿ ಬೆಟ್ಟಗಳ ನಡುವೆ

ತುಮರಿಯಲ್ಲಿ ಸುಮಾರು 36 ಗಂಟೆಗಳ ಕಾಲ ಗೋಷ್ಠಿಗಳು, ಸೇತುವೆ ಮೇಲೆ ನಡಿಗೆ, ಹರಟೆಯಲ್ಲಿಯೇ ಕಳೆದದ್ದು ಒಂದು ರೀತಿಯ ಹೊಸ ಅನುಭವ ಕಟ್ಟಿಕೊಟ್ಟಿತ್ತು. ಮುಂಚೆ ಆಫೀಸಿನ ಕೆಲಸ, ಪುಸ್ತಕ ಬಿಡುಗಡೆ, ಭಾಷಣ ಬರಹ ಎಂದು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿದ್ದ ನನಗೆ, ಮೂರು ವರ್ಷಗಳ ಹಿಂದೆ ಗರ್ಭಿಣಿ ಎಂದು ಗೊತ್ತಾಗಿ, ಒಡಾಟಗಳಿಗೆ ದೊಡ್ಡ ಬ್ರೇಕ್ ಬಿದ್ದುತು. ಈಗ ಮತ್ತೆ ಹಳೇ ರೊಟೀನ್‌ಗೆ ಬರಲು ಸಜ್ಜಾಗಿದ್ದೇನೆ.

ಒಬ್ಬ ತಾಯಿ ದಿನಕ್ಕೆ ಸಾವಿರಾರು ಸಣ್ಣ-ಪುಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ʻಮಕ್ಕಳಿಗೆ ಯಾವ ಬಟ್ಟೆ ಹಾಕಬೇಕು? ಅವರು ಯಾಕೆ ಅಳುತ್ತಿದ್ದಾರೆ? ಮನೆಗೆ ಬೇಕಾದ ಸಾಮಗ್ರಿ ತಂದಿದ್ದೇವಾ?ʼ ಈ ನಿರಂತರ 'ಡಿಸಿಷನ್ ಮೇಕಿಂಗ್' ಪ್ರಕ್ರಿಯೆ ಮೆದುಳನ್ನು ದಣಿಸಿರುತ್ತದೆ. ಪ್ರವಾಸದ ಈ ಎರಡು ದಿನಗಳಲ್ಲಿ ನಾನು ಆ ಸುಳಿಯಿಂದ ಹೊರಬಂದಿದ್ದೆ. ಇಲ್ಲಿ ನಾನು ಯಾರಿಗೂ ಉತ್ತರ ನೀಡಬೇಕಿರಲ್ಲಿಲ್ಲ. ʻಈಗ ಏನು ಮಾಡಬೇಕು?ʼ ಎಂಬ ಪ್ರಶ್ನೆಗೆ, ʻನನಗೇನು ಇಷ್ಟವೋ ಅದನ್ನು ಮಾಡಬೇಕುʼ ಎಂಬುದೇ ಉತ್ತರವಾಗಿತ್ತು.

Untitled design (23)

ಹೆಚ್ಚಿನ ತಾಯಂದಿರು ಮಕ್ಕಳನ್ನು ಬಿಟ್ಟು ಒಂದು ಗಂಟೆ ಹೊರಗೆ ಹೋದರೂ ʻನಾನು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೇ?ʼ ಎಂಬ ಅಪರಾಧಿ ಭಾವನೆಗೆ ಒಳಗಾಗುತ್ತಾರೆ. ನನಗೂ ಹಾಗೆ ಆಸಿಸಿದ್ದುಂಟು. ಆಗ ನನಗೆ ಅರಿವಾಗಿದ್ದು ʻದಣಿದಿರುವ, ಕಿರಿಕಿರಿ ಮಾಡಿಕೊಳ್ಳುವ ತಾಯಿಗಿಂತ, ಹಸನ್ಮುಖಿಯಾದ ಮತ್ತು ನೆಮ್ಮದಿಯಿಂದಿರುವ ತಾಯಿ ಮಕ್ಕಳಿಗೆ ಹೆಚ್ಚು ಶಕ್ತಿ ನೀಡಬಲ್ಲಳುʼ ಎಂಬುದು. ಆದರಿಂದ ಈ ಬಿಡುವು ನನಗೆ ಸ್ವಲ್ಪ ನೆಮ್ಮದಿ ಕೊಟ್ಟಿತ್ತು.

ಅಮ್ಮ ಇಲ್ಲದ ಈ ಎರಡು ದಿನಗಳು ಮಕ್ಕಳಿಗೆ, ತಂದೆ ಅಥವಾ ಕುಟುಂಬದ ಇತರ ಸದಸ್ಯರೊಂದಿಗೆ ಬೆರೆಯಲು ಅವಕಾಶ ನೀಡಿದೆ. ಅಮ್ಮ ಸದಾ ಇರಬೇಕು ಎಂಬ ಅವಲಂಬನೆಯಿಂದ ಮಕ್ಕಳು ಸ್ವಲ್ಪ ಹೊರಬಂದು, ಅಮ್ಮನ ಬೆಲೆ ಏನೆಂದು ಅರ್ಥಮಾಡಿಕೊಳ್ಳಲು ಇದು ಸಹಕಾರಿಯಾಗಿದೆ.

ಪ್ರವಾಸ ಮುಗಿಸಿ ಮನೆಗೆ ಮರಳುವಾಗ ನನ್ನ ಮುಖದಲ್ಲಿ ಬಳಲಿಕೆ ಇರಲ್ಲಿಲ್ಲ, ಬದಲಿಗೆ ಒಂದು ಕಾಂತಿ ಇತ್ತು. ಮಕ್ಕಳನ್ನು ಹೆಚ್ಚು ಪ್ರೀತಿಯಿಂದ ಅಪ್ಪಿಕೊಳ್ಳಲು, ಅವರ ಗದ್ದಲವನ್ನು ನಗುನಗುತ್ತಾ ಸ್ವೀಕರಿಸಲು ಸಿದ್ಧಳಾದೆ ಎಂದರೂ ತಪ್ಪಿಲ್ಲ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!