ಪ್ರವಾಸಿ ಕೇಂದ್ರಗಳಲ್ಲಿನ ಶೌಚಾಲಯಗಳ ವ್ಯಥೆಯ ಕಥೆ.!
ಕರ್ನಾಟಕದ ಅನೇಕ ಪ್ರವಾಸಿ ತಾಣಗಳಲ್ಲಿ ಶುಚಿಯಾದ ಶೌಚಾಲಯಗಳು ಹೋಗಲಿ, ಶೌಚಾಲಯಗಳೇ ಇಲ್ಲದ ಅನೇಕ ಪ್ರವಾಸಿ ತಾಣಗಳಿವೆ. ಹಾಗೂ ಹೀಗೂ ಕಿಲೋಮೀಟರ್ ಗಟ್ಟಲೆ ಪ್ರಯಾಣಿಸಿ ಪ್ರವಾಸಿ ತಾಣ ತಲುಪಿರುವ ಪ್ರವಾಸಿಗರು, ಒಮ್ಮೆ ವಾಷ್ ರೂಮ್ ತೆರಳಿ ದೇಹಭಾದೆ ತೀರಿಸಿಕೊಳ್ಳೋಣ ಎಂದು ಶೌಚಾಲಯ ಹುಡುಕಿದರೆ ಅಲ್ಲೆಲ್ಲಿದೆ ಶೌಚಾಲಯ? ಅಕಸ್ಮಾತ್ ಶೌಚಾಲಯ ಎಂಬ ಫಲಕ ಕಂಡು ಬಂದರೂ ಪ್ರವಾಸಿಗನ ಮುಖಕ್ಕೆ ಹೊಡೆದಂತೆ ಆ ಆಲಯಕ್ಕೆ ದೊಡ್ಡದೊಂದು ಬೀಗ ರಾರಾಜಿಸುತ್ತಿರುತ್ತದೆ.
- ಅನಿಲ್ ಹೆಚ್.ಟಿ.
ವಾಷ್ ರೂಮ್ ಹೇಗಿದೆ? ಬಹುತೇಕ ಪ್ರವಾಸಿಗರು ಯಾವುದೇ ಪ್ರವಾಸಿ ತಾಣಗಳಿಗೆ ತೆರಳಿದಾಗ ಪರಸ್ಪರ ಕೇಳುವ ಮುಖ್ಯ ಪ್ರಶ್ನೆಯಿದು. ಪ್ರವಾಸಿಗರ ಪಾಲಿಗೆ ಪ್ರವಾಸಿ ತಾಣಗಳು ಮಾತ್ರವಲ್ಲ, ಆ ತಾಣಗಳಲ್ಲಿರುವ ವಾಷ್ ರೂಮ್ ಕೂಡ ಮುಖ್ಯವಾಗಿರುತ್ತದೆ. ವಾಷ್ ರೂಮ್ ಶುಚಿಯಾಗಿದೆ ಎಂದರೆ ಆ ಪ್ರವಾಸಿ ತಾಣ ಕೂಡ ಶುಭ್ರವಾಗಿರುತ್ತದೆ. ಉತ್ತಮವಾಗಿ ನಿರ್ವಹಿಸಲ್ಪಡುತ್ತಿದೆ ಎಂದೇ ಅರ್ಥ.
ವಿಷಾದನೀಯ ಎಂದರೆ ನಮ್ಮಲ್ಲಿನ ಬಹುಪಾಲು ಪ್ರವಾಸಿ ತಾಣಗಳ ವಾಷ್ ರೂಮ್ ಗಳು ಶುಚಿಯಾಗಿಲ್ಲ. ಶೌಚಾಲಯದಲ್ಲಿಯೇ ಶುಚಿತ್ವ ಇಲ್ಲ ಎಂದಾದರೆ ಆ ಪ್ರವಾಸಿ ತಾಣದ ನಿರ್ವಾಹಕರು ಶುಚಿತ್ವಕ್ಕೆ ಎಷ್ಟರ ಮಟ್ಟಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬುದನ್ನು ಊಹಿಸಬಹುದು.
ಪಾನ್ ಪರಾಗ್ ಉಗಿದಿರುವ ಶೌಚಾಲಯದ ಕೋಣೆಗಳು, ಅಶ್ಲೀಲ ಚಿತ್ರ, ಅಸಭ್ಯ ಬರಹಗಳಿರುವ ಕತ್ತಲು ರೂಮ್ ಗಳು, ನೀರು ಕಾಣದೇ ದಿನಗಳೇ ಕಳೆದಿರುವ ಹೀನಾಯ ಪರಿಸ್ಥಿತಿಯ ಕಮೋಡ್, ಕಾಲಿಟ್ಟಲ್ಲೆಲ್ಲಾ ಗಲೀಜು, ಅಸಹ್ಯ ಹುಟ್ಟಿಸುವ ವಾತಾವರಣ.. ಧೂಮಪಾನಕ್ಕೆ ಹೆಚ್ಚು ಬಳಕೆಯಾಗಿರುವ ಕಾರಣದಿಂದ ವಾಷ್ ರೂಮ್ ಹೊಕ್ಕೊಡನೆ ಸಿಗರೇಟ್, ಬೀಡಿಯ ಗಬ್ಬು ನಾತ, ಮದ್ಯಪಾನ ಸೇವಿಸುವವರ ಅಡ್ಡೆ ಎಂಬುದಕ್ಕೆ ನಿದರ್ಶನ ಒದಗಿಸುವಂತೆ ವಾಷ್ ರೂಮ್ ಗಳಲ್ಲಿ ಎಸೆಯಲ್ಪಟ್ಟಿರುವ ಮದ್ಯದ ಬಾಟಲಿಗಳು.. ಮಹಿಳೆಯರ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಬಿಸಾಕಿ ಹೋಗಿ ನೀರು ಸರಾಗವಾಗಿ ಸಾಗುವುದಕ್ಕೆ ಅಡ್ಡಿಯಾಗಿರುವುದು.. ಶೌಚಾಲಯದ ನಲ್ಲಿಯಲ್ಲಿ ನೀರೇ ಬಾರದೇ ಒಳಹೋದವರು ನೀರಿಗಾಗಿ ಹಪಹಪಿಸುವುದು. ಅಲ್ಲಲ್ಲಿ ಕ್ಯಾಕರಿಸಿ ಉಗಿದು ಗಬ್ಬೆಬ್ಬೆಸಿರುವುದು.. ಇವೆಲ್ಲ ಕೆಟ್ಟ ವಾಷ್ ರೂಮ್ ಗಳ ಲಕ್ಷಣಗಳು..

ಕರ್ನಾಟಕದಲ್ಲಿಯೇ ಗಮನಿಸಿ ನೋಡುವುದಾದರೆ, ಅನೇಕ ಪ್ರವಾಸಿ ತಾಣಗಳಲ್ಲಿ ಶುಚಿಯಾದ ಶೌಚಾಲಯಗಳು ಹೋಗಲಿ, ಶೌಚಾಲಯಗಳೇ ಇಲ್ಲದ ಅನೇಕ ಪ್ರವಾಸಿ ತಾಣಗಳಿವೆ. ಹಾಗೂ ಹೀಗೂ ಕಿಲೋಮೀಟರ್ ಗಟ್ಟಲೆ ಪ್ರಯಾಣಿಸಿ ಪ್ರವಾಸಿ ತಾಣ ತಲುಪಿರುವ ಪ್ರವಾಸಿಗರು, ಒಮ್ಮೆ ವಾಷ್ ರೂಮ್ ತೆರಳಿ ದೇಹಭಾದೆ ತೀರಿಸಿಕೊಳ್ಳೋಣ ಎಂದು ಶೌಚಾಲಯ ಹುಡುಕಿದರೆ ಅಲ್ಲೆಲ್ಲಿದೆ ಶೌಚಾಲಯ? ಅಕಸ್ಮಾತ್ ಶೌಚಾಲಯ ಎಂಬ ಫಲಕ ಕಂಡು ಬಂದರೂ ಪ್ರವಾಸಿಗನ ಮುಖಕ್ಕೆ ಹೊಡೆದಂತೆ ಆ ಆಲಯಕ್ಕೆ ದೊಡ್ಡದೊಂದು ಬೀಗ ರಾರಾಜಿಸುತ್ತಿರುತ್ತದೆ.
ಪ್ರವಾಸಿ ತಾಣಗಳಲ್ಲಿ ಮಾತ್ರವಲ್ಲ. ಪ್ರವಾಸಿ ಕೇಂದ್ರಗಳಿರುವ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿಯೂ ಇದೇ ದುಸ್ಥಿತಿ. ಮೈಸೂರಿನಂಥ ಮೈಸೂರಿನ ಸರಕಾರಿ ಬಸ್ ಸ್ಟಾಂಡ್ ನಲ್ಲಿಯೇ ಶೌಚಾಲಯ ಗಬ್ಬು ನಾರುವಂತಿದೆ. ಮೂತ್ರ ಮಾಡಲು ಹಣ ನೀಡಬೇಕಾಗಿಲ್ಲ.ಎಂಬ ಬೋರ್ಡನ್ನು ಅಣಕಿಸುವಂತೆ ಶೌಚಾಲಯ ನಿರ್ವಹಣೆಯ ಗುತ್ತಿಗೆ ಪಡೆದಾತ ಟೇಬಲ್ ಗುದ್ದುತ್ತಾ ಹೊರಹೋಗುವವರಿಂದ ಹಣ ಪೀಕಿ ಎಂದು ಗದರುತ್ತಿರುತ್ತಾನೆ.
ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯದ ರೇಲ್ವೇ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಶುಚಿಯಾಗಿರುವ ವಾಷ್ ರೂಮ್ ಕಾಣಲು ಸಾಧ್ಯವಾಗಿರುವುದು ಸ್ವಲ್ಪ ಮಟ್ಟಿಗಿನ ಸಮಾಧಾನದ ವಿಚಾರ. ಅಂತೆಯೇ ವಿಮಾನ ನಿಲ್ದಾಣದಿಂದ ಪ್ರಮುಖ ನಗರಗಳಿಗೆ ತೆರಳುವ ಫ್ಲೈ ಬಸ್ ನಲ್ಲಿಯೂ ವಾಷ್ ರೂಮ್ ಇರುವುದು ಪ್ರವಾಸಿ ಪ್ರಯಾಣಿಕರಲ್ಲಿ ನೆಮ್ಮದಿ ತಂದಿದೆ.
ಹಾಗೆ ನೋಡಿದರೆ ಪ್ರವಾಸಿ ತಾಣಗಳಲ್ಲಿ ಶೌಚಾಲಯವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದು ಕಷ್ಟಕರ ವಿಚಾರವೇನಲ್ಲ. ದಿನಕ್ಕೆ ಸಾವಿರಾರು ಪ್ರವಾಸಿಗರು ಬರುವ ತಾಣಗಳಿಗೆ ಈ ಪ್ರವಾಸಿಗರು ನೀಡುವ ಪ್ರವೇಶ ಶುಲ್ಕದಿಂದಲೇ ಲಕ್ಷಾಂತರ ರುಪಾಯಿ ಸಂಗ್ರಹವಾಗುತ್ತದೆ. ಈ ಹಣದಲ್ಲಿ 3-4 ಕೋಣೆಗಳ ವಾಷ್ ರೂಮ್ ನಿರ್ವಹಣೆ ಖಂಡಿತ ಕಷ್ಟವೇನಲ್ಲ. ಆದರೆ, ಅನೇಕ ಪ್ರಕರಣಗಳಲ್ಲಿ ಇಂಥ ವಾಷ್ ರೂಮ್ ಗಳನ್ನು ವಾರ್ಷಿಕ ಗುತ್ತಿಗೆ ಪಡೆದಿರುವವರು ಗುತ್ತಿಗೆಯ ಕರಾರು ಆದ ಬಳಿಕ ಮತ್ತೊಬ್ಬರಿಗೆ ನಿರ್ವಹಣೆಗೊಪ್ಪಿಸಿ ತಾವು ಮಾಯವಾಗಿಬಿಟ್ಟಿರುತ್ತಾರೆ. ಹೀಗಾಗಿ ಕಾಟಾಚಾರಕ್ಕೆಬಂತೆ ವಾಷ್ ರೂಮ್ ಗಳು ಪ್ರವಾಸಿ ತಾಣಗಳಲ್ಲಿ ನಿರ್ವಹಿಸಲ್ಪಡುತ್ತವೆ.
ಯಾವಾಗ ವಾಷ್ ರೂಮ್ ಗಳು ಶುಭ್ರವಾಗಿರುವುದಿಲ್ಲವೇ ಆಗಲೇ ಪ್ರವಾಸಿಗರು ಕೂಡ ಇಂಥ ಪ್ರವಾಸಿ ತಾಣಗಳ ಬಗ್ಗೆ ಬೇಸರ ಹೊಂದುವಂತಾಗುತ್ತದೆ. ಮುಖ್ಯವಾಗಿ ಬಹಿರ್ದೆಸೆಗೆ ತೆರಳಲೇ ಸಾಧ್ಯವಾಗದಂಥ ಸ್ಥಿತಿಯಲ್ಲಿರುವ ವಾಷ್ ರೂಮ್ ಗಳು ಅಂಥ ಪ್ರವಾಸಿ ತಾಣಗಳ ಪಾಲಿಗೆ ಕಪ್ಪುಚುಕ್ಕೆಯೇ ಹೌದು.
ಯಾವ ಪ್ರವಾಸಿ ತಾಣಗಳಲ್ಲಿ, ಪ್ರವಾಸಿ ತಾಣಗಳಿರುವ ಊರುಗಳಲ್ಲಿ ವಾಷ್ ರೂಮ್ ಉತ್ತಮ ಸ್ಥಿತಿಯಲ್ಲಿ ನಿರ್ವಹಿಸಲ್ಪಡುತ್ತವೆಯೇ ಅಂಥ ಕೇಂದ್ರಗಳು ನಿಜಕ್ಕೂ ಪ್ರವಾಸಿಗನ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಇಲ್ಲಿ ವಾಷ್ ರೂಮ್ ಬಹಳ ಸುಂದರವಾಗಿ ನಿರ್ವಹಿಸಲ್ಪಟ್ಟಿವೆ. ಯಥಾ ಸ್ಥಿತಿ ಕಾಪಾಡಿ ಎಂಬ ಹೆಮ್ಮೆಯ ಅನಿಸಿಕೆಯನ್ನು ಕೆಲವೊಂದು ಕಡೆ ಇರಿಸಲ್ಪಟ್ಟಿರುವ ಸಂದರ್ಶಕರ ಅನಿಸಿಕೆ ಹೊಂದಿರುವ ದಾಖಲೆಯ ಪುಸ್ತಕಗಳಲ್ಲಿ ಸಂದರ್ಶಕರು ದಾಖಲಿಸಿರುವುದನ್ನು ಕಾಣಬಹುದು. ಶೌಚಾಲಯದ ಸುಖಾನುಭವ ಮನಸ್ಸಿಗೆ ಖುಷಿ ನೀಡಿದ್ದೇ ಆದಲ್ಲಿ ಪ್ರವಾಸಿ ತಾಣಕ್ಕಿಂತ ಮುಖ್ಯವಾಗಿ ಅಂಥ ಶೌಚಾಲಯವನ್ನೂ ಸಂದರ್ಶಕ ನೆನಪಿನಲ್ಲಿಟ್ಟುಕೊಳ್ಳುತ್ತಾನೆ ಎಂಬುದನ್ನು ಮರೆಯಬಾರದು.

ವಿದೇಶಗಳಲ್ಲಿ ವಾಷ್ ರೂಮ್ ಗಳ ನಿರ್ವಹಣೆಗೆ ಆಯಾ ಊರಿನ ಸ್ಥಳೀಯ ಸಂಸ್ಥೆಗಳು ಆದ್ಯತೆ ನೀಡಿರುತ್ತವೆ. ಘಮಘಮ ಪರಿಮಳ ಬರುವಂಥ ವಾತಾವರಣ ವಾಷ್ ರೂಮ್ ಗಳಲ್ಲಿದ್ದರೆ, ಬಹುತೇಕ ವಾಷ್ ರೂಮ್ ಗಳಲ್ಲಿ ಹವಾನಿಯಂತ್ರಿತವಾದ ಕಾಯುವ ಕೋಣೆಗಳಿರುತ್ತವೆ (ವೇಟಿಂಗ್ ರೂಮ್) . ಪ್ರವಾಸಿ ತಾಣಗಳ ನಿರ್ವಹಣೆಯಷ್ಟೇ ಪ್ರಾಮುಖ್ಯತೆಯನ್ನು ವಾಷ್ ರೂಮ್ ನ ನಿರ್ವಹಣೆಗೂ ನೀಡಲಾಗಿರುತ್ತದೆ.
ಬಹುತೇಕ ದೇಶಗಳಲ್ಲಿ ವಾಷ್ ರೂಮ್ ಗೆ ತೆರಳಬೇಕಾದರೆ ಪ್ರತ್ಯೇಕ ಶುಲ್ಕ ನೀಡಲೇಬೇಕು. ವಿಶೇಷವಾಗಿ ಐರೋಪ್ಯ ದೇಶಗಳಲ್ಲಿ ಶೌಚಾಲಯ ಬಳಕೆಗೆ ಕನಿಷ್ಟ 300 ರು. ತೆರಲೇಬೇಕು. ಅರ್ಥಾತ್ ಒಮ್ಮೆ ಸೂಸು ಮಾಡಲು ಸಂದರ್ಶಕ ಅಷ್ಟೊಂದು ಹಣ ತೆರಬೇಕಾಗುತ್ತದೆ. ಯಾವುದಾದರೂ ರೆಸ್ಟೋರೆಂಟ್ ಗೆ ಹೋಗಿ ಸಾವಿರಾರು ರುಪಾಯಿ ತೆತ್ತು ಊಟ ಮಾಡಿದಿರಿ ಎಂದಿಟ್ಟುಕೊಳ್ಳಿ. ಇಂಥ ಸಂದರ್ಭ ವಾಷ್ ರೂಮ್ ಗೆ ತೆರಳಬೇಕೆಂದಾದಲ್ಲಿ ಮತ್ತೆ ಪ್ರತ್ಯೇಕವಾದ ಶುಲ್ಕವನ್ನು ಕೊಡಲೇಬೇಕು. ಈಗಾಗಲೇ ಊಟಕ್ಕೆ ಹಣ ನೀಡಿಯಾಗಿದೆ. ಅದೇ ರೆಸ್ಟೋರೆಂಟ್ ನ ಶೌಚಾಲಯ ಬಳಸಲು ಮತ್ತೆ ಯಾಕೆ ಹಣ ತೆರಬೇಕು ಎಂದು ಪ್ರಶ್ನಿಸುವಂತಿಲ್ಲ. ರೆಸ್ಟೋರೆಂಟ್ ನ ಆಹಾರದ ಸರ್ವಿಸ್ಸೇ ಬೇರೆ, ಅಲ್ಲಿರು ಶೌಚಾಲಯದಲ್ಲಿನ ಬಳಕೆಯೇ ಬೇರೆ.
ವಿದೇಶದ ಪ್ರವಾಸಿ ತಾಣಗಳಲ್ಲಿ ಅತ್ಯಂತ ಶುಭ್ರವಾಗಿರುವ ಶೌಚಾಲಯ ಬಳಕೆಗೆ ಸರದಿ ಸಾಲಿನಲ್ಲಿ ಶಿಸ್ತಾಗಿ ಕಾಯಬೇಕು. ಏಯ್ ಬೇಗ ಬಾರೋ.. ಎಷ್ಟು ಹೊತ್ತು ಕೂರ್ತೀಯಾ.. ನಂಗೆ ಅರ್ಜೆಂಟ್ ಆಗಿದೆ.. ಒಮ್ಮೆ ಹೊರಕ್ಕೆ ಬಾ ಮಾರಾಯ ಎಂದು ಬೊಬ್ಬೆ ಹಾಕುವಂತಿಲ್ಲ. ಸರಿಯಾದ ಡಾಲರ್, ಪೌಂಡ್ ಇರಿಸಿಕೊಂಡು ವಾಷ್ ರೂಮ್ ಮುಂದಿನ ಡಬ್ಬದಲ್ಲಿ ಕಾಯಿನ್ ಹಾಕಿಯೇ ವಾಷ್ ರೂಮ್ ಪ್ರವೇಶಿಸಬೇಕು. ಸರಿಯಾದ ಚಿಲ್ಲರೆ ಇಲ್ಲವಾದಲ್ಲಿ ಅಲ್ಲಿಯೇ ಪ್ರತ್ಯೇಕವಾದ ಚಿಲ್ಲರೆ ನೀಡುವ ಕೌಂಟರ್ ಇರುತ್ತದೆ. ಹೀಗೆಲ್ಲಾ ಸರ್ಕಸ್ ಮಾಡಿ ವಾಷ್ ರೂಮ್ ಬಳಕೆ ಮಾಡಿ ಹೊರಬರಲು ಕನಿಷ್ಟ 30-40 ನಿಮಿಷವಾದರೂ ಬೇಕು. ಪ್ರವಾಸಿ ತಾಣ ವೀಕ್ಷಣೆಗೆ ಗೈಡ್ ಕೇವಲ 1 ಗಂಟೆ ಸಮಯ ನೀಡಿದ್ದರೆ ಈ ಪೈಕಿ ವಾಷ್ ರೂಮ್ ಗೆ ಹೋಗಿಬರಲೇ 30 ನಿಮಿಷ ವ್ಯಯವಾಗಿರುತ್ತದೆ. ಇದನ್ನೆಲ್ಲಾ ಯೋಚಿಸಿಯೇ ಟೂರ್ ಪ್ಲಾನ್ ಮಾಡಿಕೊಳ್ಳಬೇಕು. ವಿದೇಶಗಳಲ್ಲಿ ವಾಷ್ ರೂಮ್ ಅದ್ಭುತವಾಗಿರುತ್ತದೆಯಾದರೂ ಅದನ್ನು ಬಳಸಿ ಬರಲು ಬಹಳಷ್ಟು ಸಮಯ ವ್ಯಯವಾಗುವ ಹಿನ್ನೆಲೆಯಲ್ಲಿ ಪ್ರವಾಸಿಗರು ಶೌಚದ ಬಯಕೆಯನ್ನು ಆದಷ್ಟು ಅದುಮಿಟ್ಟುಕೊಂಡಲ್ಲಿ, ಸಮಯ, ಹಣ ಸಾಕಷ್ಟು ಉಳಿದೀತು.! ಆದರೆ ಇಂಥಲ್ಲಿ ವಾಷ್ ರೂಮ್ ನ ನೆನಪು ಮಾತ್ರ ಆ ಪ್ರವಾಸದಂತೆ ಬಹಳಷ್ಟು ಕಾಲ ಪ್ರವಾಸಿಯ ಮನದಲ್ಲಿ ಉಳಿದೀತು.
ಹಾಂ... ಭಾರತದಂತೆ ಅಲ್ಲೆಲ್ಲಾ ಶೌಚಾಲಯಗಳಲ್ಲಿ ನೀರು ಬಳಕೆ ಇಲ್ಲವೇ ಇಲ್ಲ. ಏನಿದ್ದರೂ ಕೆಲಸವಾದ ಮೇಲೆ ಅಲ್ಲಿರುವ ಟಿಶ್ಯೂ ಪೇಪರ್ ಗಳನ್ನೇ ಬಳಕೆ ಮಾಡಬೇಕು. ಇದರ ಅಭ್ಯಾಸವಿಲ್ಲದೇ ಭಾರತೀಯ ಪ್ರವಾಸಿಗರು ವಿದೇಶದ ಶೌಚಾಲಯಗಳಲ್ಲಿ ಪಡುವ ಪಾಡು ಆ ದೇವರಿಗೂ ಪ್ರಿಯವಾಗಲೊಲ್ಲದು! ಅನೇಕರು ಕುಡಿಯವ ನೀರಿನ ಬಾಟಲಿಗಳನ್ನು ಮತ್ತೊಂದಿಷ್ಟು ನೂರು ರುಪಾಯಿ ಹಣ ತೆತ್ತು ಶೌಚಾಲಯದೊಳಕ್ಕೆ ಕೊಂಡೊಯ್ದು ನೀರಿನ ಬಳಕೆ ಮಾಡುವುದು ಸಾಮಾನ್ಯ. ಹೀಗಾಗಿ ಯಾರು ನೀರು ಬಾಟಲಿಯೊಂದಿಗೆ ಶೌಚಾಲಯ ಪ್ರವೇಶಿಸುತ್ತಾರೆಯೋ ಅಂಥವರು ಭಾರತೀಯ ಪ್ರವಾಸಿಗರು ಎಂದು ವಿದೇಶದಲ್ಲಿ ಸುಲಭವಾಗಿ ಗುರುತಿಸಬಹುದು!
ಖಾಸಗೀಕರಣದ ಗಾಳಿ ಭಾರತದಲ್ಲಿ ಬಲವಾಗಿ ಬೀಸುತ್ತಿರುವಂತೆಯೇ ಅನೇಕ ಪ್ರವಾಸಿ ತಾಣಗಳಲ್ಲ ಅತ್ಯುತ್ತಮ ಗುಣಮಟ್ಟದ ಶೌಚಾಲಯಗಳು ಕಂಡುಬರುತ್ತಿದೆ. ಪರಿಮಳದೊಂದಿಗೆ, ಶುಭ್ರ ಪರಿಸರದ, ಶುಚಿಯಾದ ಮತ್ತು ಸಾಕಷ್ಟು ಸಿಬ್ಬಂದಿ ಇರುವ ವಾಷ್ ರೂಮ್ ಗಳು ಹೆಚ್ಚಾಗತೊಡಗಿವೆ. ಪ್ರವಾಸಿಗನ ಬೇಡಿಕೆಗೆ ತಕ್ಕಂತೆ ವಾಷ್ ರೂಮ್ ಗಳು ತಮ್ಮ ಬಣ್ಣ ಬದಲಾಯಿಸಿಕೊಳ್ಳುತ್ತಿವೆ. ಒಳಹೊಕ್ಕವರು ನೆಮ್ಮದಿಯ ನಿಟ್ಟುಸಿರು ಬಿಡುವಂಥ ರೂಮ್ ಗಳು ಕಂಡುಬರುತ್ತಿವೆ.
ಇನ್ನು ಬದಲಾಗಬೇಕಾಗಿರುವುದು.. ವಾಷ್ ರೂಮ್ ಬಳಸುವ ಪ್ರವಾಸಿಗನ ಮನಸ್ಥಿತಿ. ಶೌಚಾಲಯ ಇರುವುದೇ ಕ್ಯಾಕರಿಸಿ ಉಗುಳುವುದಕ್ಕೆ ಎಂಬಂತೆ ಥೂ ಎಂದು ಬಾಯೊಳಗಿರುವುದನ್ನೆಲ್ಲಾ ಕಕ್ಕಿ, ತನ್ನ ಹೇಸಿಗೆಯನ್ನೆಲ್ಲಾ ಅಲ್ಲಿಯೇ ಬಿಸುಟು ಹೊರಬರುವಂಥ ಮನಸ್ಥಿತಿ ಬದಲಾಗಲೇಬೇಕಾಗಿದೆ.
ಭಾರತಕ್ಕಿಂತ ವಿದೇಶ ಚಂದ, ಭಾರತಕ್ಕಿಂತ ವಿದೇಶದ ವಾಷ್ ರೂಮ್ ಗಳು ಅಂದ ಎಂದು ಹೊಗಳುವವರು, ವಿದೇಶಿಯರು ತಾವು ಬಳಸುವ ಶೌಚಾಲಯಗಳನ್ನು ಅಷ್ಟೊಂದು ಶಿಸ್ತಾಗಿ, ಅಷ್ಟೊಂದು ಶುಚಿಯಾಗಿ ಕಾಪಾಡಿಕೊಳ್ಳುತ್ತಾರೆ ಎಂಬುದನ್ನೂ ಕಲಿಯಬೇಕಾಗಿದೆ. ಪ್ರವಾಸದ ವಿಚಾರದಲ್ಲಿ ವಿದೇಶ ಮತ್ತು ವಿದೇಶಿಯರು ಹೇಗೆ ಆದರ್ಶವೋ ಅವರ ವಾಷ್ ರೂಮ್ ಗಳು ಕೂಡ ಭಾರತೀಯರಿಗೆ ಯಾಕೆ ಆದರ್ಶವಾಗಬಾರದು?

ಸುಂದರ, ಸ್ವಚ್ಚ ನಿರ್ವಹಣೆಯ ವಾಷ್ ರೂಮ್ ಗಳನ್ನು ಬಳಸಿದ ಪ್ರವಾಸಿಗ, ಆಹಾ ಎನ್ನಬೇಕೇ ವಿನಾ, ಕೆಟ್ಟ ಸ್ಥಿತಿ ನೋಡಿ ಅಯ್ಯೋ ಎಂದು ಕಿರುಚುವಂತಾಗಬಾರದು. ಪ್ರವಾಸಿ ತಾಣದಲ್ಲಿ ಶೌಚಾಲಯ ಚೆನ್ನಾಗಿದ್ದರೆ ಮತ್ತೊಮ್ಮೆ ಇಲ್ಲಿಗೆ ಬರೋಣ ಎಂಬ ಅಭಿಪ್ರಾಯ ಮನಸ್ಸಿಗೆ ಬರಬೇಕೇ ವಿನಾ ಕೆಟ್ಟ ಶೌಚಾಲಯಗಳಿಂದಾಗಿ ಒಳ್ಳೆಯ ಪ್ರವಾಸಿ ತಾಣಗಳಿಗೂ ಕೆಟ್ಟ ಹೆಸರು ಬರಬಾರದು. ಪ್ರವಾಸಿ ಕೇಂದ್ರಗಳಷ್ಟೇ ಅಲ್ಲಿನ ವಾಷ್ ರೂಮ್ ಗಳ ನಿರ್ವಹಣೆ ಕೂಡ ಮುಖ್ಯ ಎಂದು ಆಯಾ ತಾಣಗಳನ್ನು ನಿರ್ವಹಿಸುವವರಿಗೆ ಸ್ಪಷ್ಟವಾಗಿ ತಿಳಿದಿರಬೇಕು.
ಪ್ರವಾಸದ ಸಂದರ್ಭ ಎಲ್ಲವೂ ಪಾಷ್ ಆಗಿರಬೇಕು ಎಂದು ಬಯಸುವ ಪ್ರವಾಸಿಗನ ಮನಸ್ಸಿಗೆ ವಾಷ್ ರೂಮ್ ಗಳು ಕೂಡ ಪಾಷ್ ಆಗಿದ್ದರೆ ನಿಜವಾದ ಅಥ೯ದಲ್ಲಿಯೂ ಅದು ಸುಖ ಪ್ರವಾಸವಾಗುತ್ತದೆ!
ನಿಮಗಿದು ಗೊತ್ತಿರಲಿ !
ನೀವು ಎಲ್ಲಿಯೇ ಸಂಚರಿಸುತ್ತಿರಿ.. . ಭಾರತದಲ್ಲಿ ಯಾವುದೇ ರೆಸ್ಟೊರೆಂಟ್, ಹೋಟೇಲ್ ಗಳಲ್ಲಿನ ಶೌಚಾಲಯವನ್ನು ಉಚಿತವಾಗಿ ನೀವು ಬಳಸಬಹುದು ಭಾರತೀಯ ಸಾರಸ್ ಕಾಯ್ದೆ 1867 ಪ್ರಕಾರ ಜನರು ಹೊಟೇಲ್ ರೆಸ್ಟೋರೆಂಟ್ ಗಳಲ್ಲಿ ನೀವು ಗ್ರಾಹಕರಾಗಿ ಪ್ರವೇಶಿಸದೇ ಇದ್ದರೂ , ಉಚಿತವಾಗಿ ಅಲ್ಲಿನ ಶೌಚಾಲಯ ಬಳಕೆ ಮಾಡಬಹುದು. ಇದನ್ನು ಅಲ್ಲಿನ ಮಾಲೀಕರು, ಸಿಬ್ಬಂದಿ ಪ್ರಶ್ನಿಸುವಂತಿಲ್ಲ. ಈ ರೀತಿ ಶೌಚಾಲಯ ಬಳಕೆ ಜನರ ಅಗತ್ಯವಾದ ಹಕ್ಕಾಗಿ ಪರಿಗಣಿಸಲ್ಪಟ್ಟಿದೆ.
ಕೊನೆ ಹನಿ!
ಕೆಲವೇ ವರ್ಷಗಳ ಹಿಂದಿನವರೆಗೂ ಭಾರತಾದ್ಯಂತ ಬಯಲೇ ಶೌಚಾಲಯದಂತಿತ್ತು. ಅದರಲ್ಲಿಯೂ ರೈಲು ಹಳಿಗಳ ಪಕ್ಕದಲ್ಲಿ ಬೆಳ್ಳಂಬೆಳಗ್ಗೆ ಚೊಂಬು ಹಿಡಿದುಕೊಂಡು ನೂರಾರು ಮಂದಿ ಕುಳಿತಿರುವ ದೖಶ್ಯ ಸಾಮಾನ್ಯವಾಗಿತ್ತು. ಆದರೆ ಕೇಂದ್ರ ಸರ್ಕಾರದ ಬಯಲು ಮುಕ್ತ ಶೌಚಾಲಯದ ಅಭಿಯಾನದಿಂದಾಗಿ ಶೌಚಾಲಯಗಳು ಅಲ್ಲಲ್ಲಿ ನಿರ್ಮಿಸಲ್ಪಟ್ಟು ಜನರಿಗೆ ಸೂಕ್ತ ವ್ಯವಸ್ಥೆಯಾಗಿದೆ. ಅಂಕಿ ಅಂಶಗಳ ಪ್ರಕಾರ, ಭಾರತದಲ್ಲೀಗ 11 ಕೋಟಿ ಸಾರ್ವಜನಿಕ ಶೌಚಾಲಯಗಳಿದೆ. ಈ ಪೈಕಿ ಸ್ವಚ್ಚ ಭಾರತ ಗ್ರಾಮೀಣ ಮಿಷನ್ ನಡಿ 2.23 ಲಕ್ಷ ಶೌಚಾಲಯಗಳು ನಿರ್ಮಾಣವಾಗಿದೆ.