• ಅಂಜಲಿ ರಾಮಣ್ಣ

ಜಗತ್ತಿನ ಯಾವುದೇ ಮೂಲೆಯಲ್ಲಿ ತಮ್ಮ ಧರ್ಮದವರು ಇದ್ದರೆ ಅವರನ್ನೆಲ್ಲಾ ತಮ್ಮಂತೆ ಎಂದು ಭಾವಿಸುವುದು ನಿಜವಾದ ಧಾರ್ಮಿಕ ತಳಹದಿಯಾದರೂ ಆಚಾರ ಮತ್ತು ಪದ್ಧತಿಗಳು ಆಯಾ ಭೌಗೋಳಿಕ ಹಿನ್ನೆಲೆ ಹಾಗೂ ಸುತ್ತಮುತ್ತಲಿನ ಪರಿಸರದಿಂದ ಅದೆಷ್ಟು ಪ್ರಭಾವಗೊಂಡಿರುತ್ತದೆ ಎನ್ನುವ ಕಲಿಕೆ ಆಗಬೇಕು ಎಂದರೆ ಪ್ರವಾಸ ಹೋದೆಡೆಯಲ್ಲಿ ಅದನ್ನು ಗಮನಪೂರ್ವಕವಾಗಿ ನೋಡಬೇಕು. ಶ್ರೀಲಂಕ ಮತ್ತು ಭಾರತದ ಹಲವು ರಾಜ್ಯಗಳಲ್ಲಿ ಬೌದ್ಧಧರ್ಮವನ್ನು ಪಾಲಿಸಿದರೂ ಎರಡೂ ಕಡೆಯ ಆಚರಣೆಗಳಿಗೆ ಸಂಬಂಧವೇ ಇಲ್ಲ. ಹಾಗೆಯೇ ಜಪಾನಿನ ಮೂಲ ಧರ್ಮವಾದ ಶಿಂಟೋ ಇವತ್ತು ನವಬೌದ್ಧ ಧರ್ಮದ ಆಚರಣೆಯನ್ನು ತಾನು ಸ್ವಲ್ಪ ತೆಗೆದುಕೊಂಡು ತನ್ನ ಹೆಚ್ಚಿನ ಪಾಲನ್ನು ಆ ಧರ್ಮಕ್ಕೆ ಕೊಟ್ಟಿದೆ. ಟಿಬೆಟಿನ ಬೌದ್ಧಧರ್ಮದ ಅನುಸರಣೆಗೂ ಭೂತಾನಿನ ಪದ್ಧತಿಗೂ ಹೊಂದಾಣಿಕೆಯೇ ಇಲ್ಲ. ಇದು ಹಿಂದೂ ಧರ್ಮಕ್ಕೂ ಅನ್ವಯ ಎನ್ನುವುದನ್ನು ಜಾಗಜಾಗಕ್ಕೆ ಹೋದಾಗ ತಿಳಿಯುತ್ತದೆ.

ಇದನ್ನೂ ಓದಿ: ಗ್ರಹಣದಿಂದ ನಕ್ಷತ್ರಗಳವರೆಗೆ ಆಕಾಶವೇ ಪ್ರವಾಸದ ತಾಣ

ನೇಪಾಳ ತನ್ನನ್ನು ಹಿಂದೂ ಧಾರ್ಮಿಕ ದೇಶ ಎಂದು ಘೋಷಿಸಿಕೊಂಡಿದ್ದರೂ ಭಾರತದ ಹಿಂದುಗಳ ಪದ್ಧತಿಯನ್ನು ಅವರು ಅನುಕರಿಸುವುದಿಲ್ಲ. ಧರ್ಮಧರ್ಮಗಳ ಅಭ್ಯಾಸ ಆಚಾರಗಳು, ಕಾಲಾನುಕಾಲದಲ್ಲಿ ವಿಚಾರಗಳು ಕೂಡ ಒಂದರ ಮೇಲೊಂದು ಪ್ರಭಾವ ಬೀರುವ ವಿಷಯ ಬಹಳ ಆಸಕ್ತಿದಾಯಕ.

Untitled design (28)

ಹಿಮಾಲಯದ ತೋಳ್ತೆಕ್ಕೆಯ ಸುಂದರ ನಾಡು ಭೂತಾನ್. Drukpa ಅಂದರೆ ಗುಡುಗುವ ಡ್ರ್ಯಾಗನ್‍ಗಳ ನಾಡು. ಇಲ್ಲಿನ ಪ್ರತಿ ಕಣಿವೆಯಲ್ಲೂ ದರ್ಚಿನಿ (ಬೌದ್ಧರ ಪ್ರಾರ್ಥನಾ ಧ್ವಜ) ಗಾಳಿಯಲ್ಲಿ ತೇಲುತ್ತಿರುತ್ತವೆ. ಪ್ರತಿಯೊಂದು ಬೆಟ್ಟದ ತಗ್ಗು ಉಬ್ಬಿನಲ್ಲೂ ಅಸಂಖ್ಯಾತ ಲಖಾಂಗ್‍ಗಳು (ಬೌದ್ಧ ಮಂದಿರಗಳು) ಮೌನವನ್ನು ಹಾಸಿಕೊಂಡಿರುತ್ತವೆ. ಇದೇ ಶಾಂತ ಬೌದ್ಧ ಭೂಮಿಯ ದಕ್ಷಿಣದಲ್ಲಿ ಬೇರೊಂದು ಮಂತ್ರವೂ ಶೃತಿಯಾಗುತ್ತಿದೆ. ಅದು ತುಳಸಿಯ ಪರಿಮಳದ ನಡುವೆ ಶಂಖದ ನಾದದ ಏರಿನಲ್ಲಿ ಹೊಳೆಯುತ್ತದೆ ದುರ್ಗಾ ದೇವಿಯ ಆರತಿಯ ಬೆಳಕಾಗಿ.

ಹಿಂದು ಧರ್ಮಾನುಯಾಯಿಗಳು ಭೂತಾನ್‌ನ ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟು ಇದ್ದಾರೆ. ಇವರು ನೇಪಾಳದ Lhotshampa ಸಮುದಾಯಕ್ಕೆ ಸೇರಿದವರು. ನೇಪಾಳದ ತಪ್ಪಲಿನಿಂದ ನೂರಾರು ವರ್ಷಗಳ ಹಿಂದೆ ಕೃಷಿಗಾಗಿ, ಬದುಕಿಗಾಗಿ ಈ ಫಲವತ್ತಾದ ದಕ್ಷಿಣ ಭೂತಾನ್ ಭೂಮಿಗೆ ಬಂದವರು. ಅವರೊಂದಿಗೆ ಬಂದದ್ದು ರಾಮಾಯಣದ ಕಥೆಗಳು, ಗೀತೆಯ ಶ್ಲೋಕಗಳು ಮತ್ತು ನವರಾತ್ರಿಯ ದುರ್ಗಾ ಪೂಜೆ. ಬೌದ್ಧಧರ್ಮವನ್ನು ತನ್ನ ಆಧ್ಯಾತ್ಮಿಕ ಪರಂಪರೆ ಎಂದು ಭೂತಾನ್‍ನ ಸಂವಿಧಾನ ಮಾನ್ಯ ಮಾಡಿದ್ದರೂ ಇಲ್ಲಿ ಹಿಂದು ಧರ್ಮವನ್ನು ಅನುಸರಿಸಲು ಅನುವು ಮಾಡಿಕೊಡಲಾಗಿದೆ. ಇದನ್ನುಳಿದು ಮತ್ತ್ಯಾವ ಧರ್ಮವನ್ನು ಇಲ್ಲಿ ಪಾಲಿಸುವಂತಿಲ್ಲ ಹಾಗಾಗಿ ಅಲ್ಲಿ ಇರುವುದು ಇವೆರಡೇ ಧರ್ಮಗಳು. 2015ರಲ್ಲಿ ಅಲ್ಲಿನ ರಾಜ ʼದಶಾಇನ್ʼ ಎನ್ನುವ ಹಿಂದೂ ಹಬ್ಬಕ್ಕೆ ರಾಷ್ಟ್ರೀಯ ರಜೆ ಘೋಷಿಸಿ ಹಿಂದೂ ಧರ್ಮಕ್ಕೆ ಭೂತಾನಿನ ಗೌರವ ನೀಡಿದ್ದಾರೆ.

ಭೂತಾನ್‌ನಲ್ಲಿ ಈಗ 14 ದೇವಸ್ಥಾನಗಳಿವೆ. ಅದರಲ್ಲಿ 4 ಮಂದಿರಗಳನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಅಲ್ಲಿನ ದೇವಸ್ಥಾನಗಳಿಗೆ ಇಲ್ಲಿರುವಂತೆ ಎತ್ತರದ ಗೋಪುರ ಇರುವುದಿಲ್ಲ. ಗರ್ಭಗುಡಿ ಎನ್ನುವ ಅಂತರವೂ ಇಲ್ಲ. ಸಾಮಾನ್ಯ ಜನರ ಮನೆಗಳಂತೆ ಸರಳವಾಗಿವೆ. ರಾಜಧಾನಿ ಥಿಂಪುವಿನಲ್ಲಿ Kuensel Phodrang ಎನ್ನುವ ಜಾಗದಲ್ಲಿ ಸರಕಾರವು ಸ್ಥಳ ನೀಡಿದಾಗ ಹಿಂದೂ ಧರ್ಮ ಸಮುದಾಯ ಸಂಘಟನೆಯು ಜನರ ದುಡ್ಡಿನಿಂದ ಅಲ್ಲಿ ದೇವಸ್ಥಾನವನ್ನು ಕಟ್ಟಿದೆ. ಇಲ್ಲಿನ ದುರ್ಗೆಯ ದೇವಸ್ಥಾನ ಭೂತಾನ್ ಹಿಂದೂಗಳ ಸಂಗಮಸ್ಥಳವಾಗಿದೆ. ಗಡಿಭಾಗದಲ್ಲಿ ಇರುವ Phuentsholing ನಗರದಲ್ಲಿ ಇರುವ ಕಾಳಿ ಮಂದಿರಕ್ಕೆ ನೇಪಾಳದಿಂದ ಹಿಂದೂಗಳು ತೀರ್ಥಯಾತ್ರೆ ಬರುತ್ತಾರೆ. ನವರಾತ್ರಿಯ ದುರ್ಗಾ ಪೂಜೆಯ ದಿವಸ ಇಲ್ಲಿ ಸಾವಿರಾರು ಜನರು ಸೇರುತ್ತಾರೆ.

Untitled design (30)

ಭೂತಾನಿನ ಅಷ್ಟೂ ಹಿಂದೂ ದೇವಾಲಯಗಳನ್ನು ವ್ಯಾಪರಸ್ಥರು, ಸರಕಾರಿ ನೌಕರರು, ಕಾರ್ಮಿಕರು, ರೈತರು ಮತ್ತು ಸೈನಿಕರಂಥ ಸಾಮಾನ್ಯ ಜನರು ಕಟ್ಟಿರುವುದು. ಶಿವ ಮತ್ತು ದುರ್ಗೆಯರ ದೇವಸ್ಥಾನಗಳೇ ಇರುವ ಇಲ್ಲಿನ ಹಿಂದು ಸಂಪ್ರದಾಯದಲ್ಲಿ ಅಲ್ಲಿನ ಜನರ ಹಬ್ಬ, ಮದುವೆ ಇತರೆ ಸಂಸ್ಕಾರಗಳಿಗೆ ಈ ದೇವಸ್ಥಾನಗಳು ಸಮುದಾಯದ ಹೃದಯದಂತೆ ಜೀವಂತಿಕೆ ಒದಗಿಸಿಕೊಟ್ಟಿದೆ. ದೇವಸ್ಥಾನಗಳನ್ನು ಸರಕಾರ ನಡೆಸುವುದಿಲ್ಲ. ಹಿಂದೂ ಧರ್ಮ ಸಂಘಟನೆ ಎನ್ನುವ ಖಾಸಗಿ ಸಂಸ್ಥೆ ಎಲ್ಲ ದೇವಸ್ಥಾನಗಳ ಆಗುಹೋಗುಗಳನ್ನು ನೋಡಿಕೊಂಡು ದೇಣಿಗೆಯಿಂದ ಅಲ್ಲಿನ ಖರ್ಚುವೆಚ್ಚವನ್ನು ತೂಗಿಸುತ್ತದೆ. ಭೂತಾನಿನ ಹಿಂದೂಗಳನ್ನು ಈ ಸಂಘಟನೆ ಸಂಸ್ಕೃತವನ್ನು ಕಲಿಯಲು ಭಾರತಕ್ಕೆ ಕಳುಹಿಸಿಕೊಡುತ್ತಿದೆ.

ಇಲ್ಲಿನ ಹಿಂದೂ ಧರ್ಮವು ನೇಪಾಳಿ ಬೇರಿನಿಂದ ಬೆಳೆದಿದ್ದಾಗಿದೆ. Dzongkha ಎನ್ನುವುದು ಭೂತಾನಿನ ರಾಷ್ಟ್ರೀಯ ಭಾಷೆ. ಅಲ್ಲಿನ ಹಿಂದೂಗಳು ಮನೆಯಲ್ಲಿ ನೇಪಾಳಿ ಭಾಷೆಯನ್ನು ಮಾತನಾಡುತ್ತಾರೆ. ನಮ್ಮ ನವರಾತ್ರಿಯ ಸಮಯದಲ್ಲಿ ಅವರು ದೇವಿ ಹಬ್ಬ ದಶಾಇನ್ ಆಚರಿಸಿದರೂ ಅದು ನಮ್ಮಂತೆ ಅಲ್ಲ. ಅವರ ಹಬ್ಬ15 ದಿನಗಳ ಕಾಲದ್ದು. ಮೊದಲನೆಯ ದಿನ ಘಟಸ್ಥಾಪನೆ ಆಚರಣೆಯಲ್ಲಿ ಬಾರ್ಲಿಯ ಬೀಜಗಳನ್ನು ನೆಟ್ಟು ಚಿಗುರೊಡೆದು ಜಮಾರ (ತೆನೆ) ಕಟ್ಟುವವರೆಗೂ ಅದನ್ನು ಪೂಜಿಸುತ್ತಾರೆ. ಅಷ್ಟೂ ದಿನವೂ ದೇವಿಯನ್ನು ಬೇರೆಬೇರೆ ಶಕ್ತಿಯ ರೂಪದಲ್ಲಿ ಆರಾಧಿಸಿ ಹತ್ತನೆಯ ದಿನದಂದು ಮೇಕೆಯ ಮಾಂಸದಿಂದ ಮಾಡಿದ ಅಡುಗೆಯನ್ನು ನೇವೇದ್ಯ ಮಾಡುತ್ತಾರೆ. ಭೂತಾನಿನಲ್ಲಿ ಪ್ರಾಣಿವಧೆಯನ್ನು ನಿಷೇಧಿಸಲಾಗಿದೆ. ಅಲ್ಲಿನ ಬೌದ್ಧ ಧರ್ಮಕ್ಕೆ ಮಾಂಸಾಹಾರ ವರ್ಜ್ಯ. ಅದಕ್ಕೇ ಅಲ್ಲಿನ ಮಾಂಸಾಹಾರಿಗಳಿಗೆ ಅನುಕೂಲ ಮಾಡಿಕೊಡಲು ಸರಕಾರ ಭಾರತದಿಂದ ಮಾಂಸವನ್ನು ಆಮದು ಮಾಡಿಕೊಳ್ಳುತ್ತದೆ.

ಹಬ್ಬದ ಕೊನೆಯ ದಿನ ಮನೆಯ ಹಿರಿಯರು ಕಿರಿಯರ ಹಣೆಗೆ ಅಕ್ಕಿ, ಮೊಸರು, ಕುಂಕುಮ ಬೆರೆಸಿದ ತಿಲಕ ಇಟ್ಟು ಜಮಾರವನ್ನು (ಬಾರ್ಲಿ ತೆನೆಯನ್ನು) ಕಿವಿಗೆ ಸಿಕ್ಕಿಸುತ್ತಾರೆ. ಇದನ್ನು ಪೂರ್ವಿಕರ ಆಶೀರ್ವಾದ ಎಂದು ನಂಬುತ್ತಾರೆ. ಯಾವಾಗ ಅಲ್ಲಿನ ರಾಜನೇ ಈ ಆಚರಣೆಯಲ್ಲಿ ಭಾಗವಹಿಸಿದರೋ ಆಗಿನಿಂದ ಇದು ಕೇವಲ ಅಲ್ಲಿನ ಹಿಂದುಗಳ ಹಬ್ಬವಾಗಿ ಉಳಿದಿಲ್ಲ, ಇದೊಂದು ರಾಷ್ಟ್ರೀಯ ಹಬ್ಬವಾಗಿದೆ. ಈಗೀಗ ದೀಪಾವಳಿ, ಉಪಾಕರ್ಮ (ಹೌದು, ಅಲ್ಲಿನ ಹಿಂದೂಗಳು ಜನಿವಾರ ಹಾಕಿಕೊಳ್ಳುತ್ತಾರೆ), ಶಿವರಾತ್ರಿ, ಜನ್ಮಾಷ್ಟಮಿಗಳನ್ನೂ ಆಚರಿಸಲಾಗುತ್ತಿದೆ. ಆ ದೇಶದ ಹಿಂದೂ ಧರ್ಮದಲ್ಲಿ ಜಾತಿ ವಿಭಾಗಗಳು ಇಲ್ಲ. ಇರುವುದು ನಂಬಿಕೆ ಮತ್ತು ಸಮುದಾಯದ ಒಗ್ಗಟ್ಟು ಹಾಗೂ ಪ್ರತೀ ದೇವಸ್ಥಾನದಲ್ಲಿನ ಹುಂಡಿ.

ಭೂತಾನ್‍ನಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಇರುವುದರಿಂದ, ವಿದ್ಯಾಭ್ಯಾಸ ಮತ್ತು ಕೆಲಸಕ್ಕೆ ಮನೆಯ ಮಕ್ಕಳು ಹೊರ ದೇಶಗಳಿಗೆ ಹೋಗಿಬಿಟ್ಟಾಗ ಧರ್ಮ ಮತ್ತು ಸಂಸ್ಕೃತಿ ನಶಿಸಿ ಹೋಗುವ ಭಯದಿಂದ ಅಲ್ಲಿನ ಸಂಘಟನೆಗಳು ದಶಾಇನ್ ಹಬ್ಬದಲ್ಲಿ ಮನೆಗೆ ಮಕ್ಕಳು ಹಿಂದಿರುಗಿ ಬರಲು ಧನ ಸಹಾಯ ಮಾಡುತ್ತಾರೆ. ಬೌದ್ಧ ಲಖಾಂಗ್‍ಗಳ ನಡುವೆ ನಿಂತಿರುವ ಈ ಹಿಂದು ದೇವಸ್ಥಾನಗಳು ಭೂತಾನ್ ದೇಶದ ಸಂದೇಶವಾಹಕಗಳಾಗಿವೆ. ಈ ದೇಶದ ಸೌಂದರ್ಯವು ಒಂದೇ ಬಣ್ಣದಲ್ಲಿಲ್ಲ. ಒಂದು ಕಡೆ ಬೌದ್ಧರ ಪ್ರಾರ್ಥನಾ ಧ್ವಜಗಳು ಐದು ಮೂಲಬಣ್ಣಗಳಲ್ಲಿ ಗಾಳಿಗೆ ಹಾರುತ್ತಿದ್ದರೆ ಇನ್ನೊಂದು ಕಡೆ ಹಿಂದುಗಳ ಹಸಿರು ಕೆಂಪಿನ ತೋರಣ ರಾರಾಜಿಸುತ್ತಿರುತ್ತವೆ. ಒಂದೆಡೆ ತುಳಸಿ ಮಾಲೆಯ ಜಪ ಮಾರ್ದನಿಸುತ್ತಿದ್ದರೆ ಅಲ್ಲೇ ಸ್ವಲ್ಪ ದೂರದಲ್ಲಿ ಮೊನಾಸ್ಟ್ರಿಯ ಗಂಟೆ ನಾದವಾಗುತ್ತಿರುತ್ತದೆ. ಹಬ್ಬಗಳಲ್ಲಿ ಶಂಖದ ಧ್ವನಿ ಧರ್ಮಾತೀತವಾಗಿ ಸಂತಸವನ್ನು ಮೊಳಗಿಸುತ್ತಿರುತ್ತದೆ.

Drukpa ದೇಶದ ತಪ್ಪಲಿನಲ್ಲಿ ಬೌದ್ದರು ಹಚ್ಚಿಡುವ ಹಣತೆಯಲ್ಲಿ ಹಿಂದುಗಳ ಜಮಾರದ ಹಸಿರು ತಲೆಮಾರುಗಳ ನಂಬಿಕೆಯನ್ನು ಉರಿಸುತ್ತಾ ಜನನಾಡಿಯಲ್ಲಿ ಬೆಳಕಾಗಿದೆ. ಅಲ್ಲಿನ ಹಿಂದುಗಳು ಮೊದಲು ನಾವು ಭೂತಾನಿಯರು ನಂತರ ಹಿಂದುಗಳು ಎಂದು ಎಲ್ಲೆಲ್ಲೂ ಹೇಳುತ್ತಾರೆ ಮತ್ತು ಹಾಗೇ ನಡೆದುಕೊಳ್ಳುತ್ತಾರೆ. ಅದಕ್ಕೇ ಭೂತಾನ್ ಮೂರ್ತಿ ಚಿಕ್ಕದಾದರೂ ಭೂಪಟದಲ್ಲಿ ವಿಷೇಶವಾದ ಸ್ಥಾನವನ್ನು ಉಳಿಸಿಕೊಂಡಿದೆ ಮತ್ತು ಜಾಗತಿಕ ಭಾವನೆಯಲ್ಲಿ ಗೌರವವನ್ನು ಗಳಿಸಿಕೊಂಡಿದೆ.