Friday, August 28, 2026
Friday, August 28, 2026

ಕಮಾನು ಕಟ್ಟಿದೆ ಕಾಮನಬಿಲ್ಲು ಹವಾಯಿ ಅಗಸಕೆ

ಅಮೆರಿಕದ ಹವಾಯಿ ದ್ವೀಪಗಳು ‘ಜಗತ್ತಿನ ಕಾಮನಬಿಲ್ಲಿನ ರಾಜಧಾನಿʼಎಂದು ಪ್ರಸಿದ್ಧವಾಗಿವೆ. ಅಲ್ಲಿನ ಸ್ವಚ್ಛ ಆಕಾಶ, ತುಂತುರು ಮಳೆ, ಸಮುದ್ರದ ಗಾಳಿ ಮತ್ತು ಪರ್ವತಗಳ ಭೌಗೋಳಿಕ ವಿನ್ಯಾಸದಿಂದ ದಿನವೂ ಅನೇಕ ಕಾಮನಬಿಲ್ಲುಗಳು ಕಾಣಿಸಿಕೊಳ್ಳುತ್ತವೆ. ಪ್ರವಾಸಿಗರು ಕಾಮನಬಿಲ್ಲುಗಳನ್ನು ನೋಡಲೆಂದೇ ಅಲ್ಲಿಗೆ ತೆರಳುತ್ತಾರೆ. ಅಲ್ಲಿನ ವಾಹನಗಳ ಪರವಾನಗಿ ಫಲಕಗಳಿಂದ ಹಿಡಿದು ಶಾಲೆ, ಹೊಟೇಲ್‌ ಮತ್ತು ಕ್ರೀಡಾ ತಂಡಗಳ ಹೆಸರಿನಲ್ಲೂ ಕಾಮನಬಿಲ್ಲಿನ ಪ್ರಭಾವವಿದೆ.

  • ನಿರ್ಮಲ

ಪ್ರಪಂಚದ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಪ್ರಕೃತಿ ವೈಶಿಷ್ಟ್ಯವಿದೆ. ಆದರೆ ಆಕಾಶದಲ್ಲಿ ಮೂಡಿ ಮಾನವನ ಮನಸಿಗೆ ಆನಂದ ನೀಡುವ ಅದ್ಭುತವೆಂದರೆ ಕಾಮನಬಿಲ್ಲು. ಸಾಮಾನ್ಯವಾಗಿ ಮಳೆಯ ನಂತರ ಕಾಣಿಸಿಕೊಳ್ಳುವ ಏಳು ಬಣ್ಣಗಳ ಈ ಪ್ರಕೃತಿ ಲೀಲೆ ಜನರಲ್ಲಿ ಅಚ್ಚರಿಯನ್ನೂ ಸಂತಸವನ್ನೂ ಮೂಡಿಸುತ್ತದೆ. ಪ್ರಕೃತಿ ಮಾತೆ ತನ್ನ ಮಕ್ಕಳಿಗೆ ಕೊಡುವ ಅಮೂಲ್ಯ ಆಟಿಕೆಯಂತೆಯೇ ಕಾಮನಬಿಲ್ಲು ಕಾಣುತ್ತದೆ.

ಕಾಮನಬಿಲ್ಲಿನ ರಾಜಧಾನಿ

ಅಮೆರಿಕದ ಹವಾಯಿ ದ್ವೀಪಗಳು ‘ಜಗತ್ತಿನ ಕಾಮನಬಿಲ್ಲಿನ ರಾಜಧಾನಿʼಎಂದು ಪ್ರಸಿದ್ಧವಾಗಿವೆ. ಅಲ್ಲಿನ ಸ್ವಚ್ಛ ಆಕಾಶ, ತುಂತುರು ಮಳೆ, ಸಮುದ್ರದ ಗಾಳಿ ಮತ್ತು ಪರ್ವತಗಳ ಭೌಗೋಳಿಕ ವಿನ್ಯಾಸದಿಂದ ದಿನವೂ ಅನೇಕ ಕಾಮನಬಿಲ್ಲುಗಳು ಕಾಣಿಸಿಕೊಳ್ಳುತ್ತವೆ. ಪ್ರವಾಸಿಗರು ಕಾಮನಬಿಲ್ಲುಗಳನ್ನು ನೋಡಲೆಂದೇ ಅಲ್ಲಿಗೆ ತೆರಳುತ್ತಾರೆ. ಅಲ್ಲಿನ ವಾಹನಗಳ ಪರವಾನಗಿ ಫಲಕಗಳಿಂದ ಹಿಡಿದು ಶಾಲೆ, ಹೊಟೇಲ್‌ ಮತ್ತು ಕ್ರೀಡಾ ತಂಡಗಳ ಹೆಸರಿನಲ್ಲೂ ಕಾಮನಬಿಲ್ಲಿನ ಪ್ರಭಾವವಿದೆ. ಅಲ್ಲಿನ ಮೆನೋವಾ ಕಣಿವೆಯನ್ನು ʼಕಾಮನಬಿಲ್ಲಿನ ಅರಮನೆʼ ಎಂದು ಕರೆಯುತ್ತಾರೆ. ಅಲ್ಲಿನ ಜನರು ವಿವಿಧ ರೀತಿಯ ಕಾಮನಬಿಲ್ಲುಗಳಿಗೆ ವಿಭಿನ್ನ ಹೆಸರುಗಳನ್ನೂ ನೀಡಿದ್ದಾರೆ.

ಇದನ್ನೂ ಓದಿ: ವನ್ಯಜೀವಿ ಛಾಯಾಗ್ರಹಣ ಎಂಬ ವಂಡರ್‌ಫುಲ್‌ ಪಯಣ

ಪುರಾಣ ಮತ್ತು ಕಾವ್ಯಗಳಲ್ಲಿ

ಕಾಮನಬಿಲ್ಲುಗಳು ಕೇವಲ ವೈಜ್ಞಾನಿಕ ಅಚ್ಚರಿಯಷ್ಟೇ ಅಲ್ಲ; ಕಾವ್ಯ, ಪುರಾಣ ಮತ್ತು ಜನಪದಗಳಲ್ಲಿಯೂ ಅವುಗಳಿಗೆ ಮಹತ್ವದ ಸ್ಥಾನವಿದೆ. ಹವಾಯಿಯ ಪುರಾಣಗಳಲ್ಲಿ ಕಾಮನಬಿಲ್ಲನ್ನು ದೇವರುಗಳು ಸ್ವರ್ಗದಿಂದ ಭೂಮಿಗೆ ಇಳಿಯುವ ದಾರಿ ಎಂದು ಹೇಳಲಾಗುತ್ತದೆ. ಆತ್ಮಗಳು ಪರಲೋಕಕ್ಕೆ ತೆರಳುವ ಸೇತುವೆಯೆಂದೂ ನಂಬುತ್ತಾರೆ. ಪ್ರಪಂಚದ ಅನೇಕ ಪುರಾಣಗಳಲ್ಲಿ ಕಾಮನಬಿಲ್ಲು ಶುಭದ ಸಂಕೇತ. ಬೈಬಲ್‌ನಲ್ಲಿ ಅದು ದೇವರು ಮತ್ತು ಮನುಷ್ಯರ ನಡುವಿನ ಒಡಂಬಡಿಕೆಯ ಚಿಹ್ನೆ. ಭಾರತೀಯ ಪರಂಪರೆಯಲ್ಲಿ ಅದನ್ನು ‘ಇಂದ್ರಚಾಪʼ ಎಂದು ಕರೆಯುತ್ತಾರೆ. ಕನ್ನಡದ ಮಹಾಕವಿ ಕುವೆಂಪು ಕಾಮನಬಿಲ್ಲನ್ನು ಭೂಮಿ ಮತ್ತು ಬಾನಿನ ನಡುವೆ ಸೇತುವೆಯೆಂದು ಕಾವ್ಯಮಯವಾಗಿ ವರ್ಣಿಸಿದ್ದಾರೆ. ಇಂಗ್ಲಿಷ್ ಕವಿ ವರ್ಡ್ಸ್‌ವರ್ಥ್ ಕೂಡ ʼRainbow in the skyʼ ನೋಡಿದಾಗ ಮನಸು ಹರ್ಷದಿಂದ ತುಂಬುತ್ತದೆ ಎಂದು ಹೇಳಿದ್ದಾನೆ. ಒಟ್ಟಿನಲ್ಲಿ ಕಾಮನಬಿಲ್ಲು ಮಾನವನ ಮನಸಿನಲ್ಲಿ ಆಶೆ ಮತ್ತು ಶಾಂತಿಯ ಸಂಕೇತವಾಗಿದೆ.

Untitled design (30)

ಭಾರತದಲ್ಲಿಯೂ ಕಾಮನಬಿಲ್ಲು ಜನಮನ ಸೆಳೆದಿದೆ. ಶಿವಮೊಗ್ಗದಲ್ಲಿ 2018ರಲ್ಲಿ ಸೂರ್ಯನ ಸುತ್ತ ವೃತ್ತಾಕಾರದ ʼ220 ಹ್ಯಾಲೋʼ ಕಾಮನಬಿಲ್ಲು ಕಾಣಿಸಿಕೊಂಡು ಜನರನ್ನು ಬೆರಗುಗೊಳಿಸಿತ್ತು.

ವಿಜ್ಞಾನದ ದೃಷ್ಟಿಯಿಂದ

ಕಾಮನಬಿಲ್ಲು ಸೂರ್ಯನ ಬೆಳಕು ಮಳೆಹನಿಗಳಲ್ಲಿ ಪ್ರತಿಫಲನ ಮತ್ತು ವಕ್ರೀಭವನಗೊಳ್ಳುವುದರಿಂದ ಉಂಟಾಗುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಅರಿಸ್ಟಾಟಲ್‌ನಿಂದ ಆರಂಭಿಸಿ ಡೆಕಾರ್ಟೆವರೆಗೆ ಅನೇಕ ತತ್ತ್ವಜ್ಞರು ಇದರ ರಹಸ್ಯವನ್ನು ಅಧ್ಯಯನ ಮಾಡಿದ್ದಾರೆ. ಹದಿನೇಳನೆಯ ಶತಮಾನದಲ್ಲಿ ವಿಜ್ಞಾನಿ ರೇನೇ ಡೆಕಾರ್ಟೆ ಗಾಜಿನ ಗೋಳದಲ್ಲಿ ನೀರು ತುಂಬಿಸಿ ಬೆಳಕು ಹಾಯಿಸುವ ಮೂಲಕ ಕೃತಕ ಕಾಮನಬಿಲ್ಲನ್ನು ಸೃಷ್ಟಿಸಿ ವೈಜ್ಞಾನಿಕ ವಿವರಣೆ ನೀಡಿದ.

ಪ್ರತಿಯೊಂದು ಮಳೆಹನಿಯೂ ಸಣ್ಣ ಪ್ರಿಸಮ್‌ನಂತೆ ಕಾರ್ಯನಿರ್ವಹಿಸುತ್ತದೆ. ಬೆಳಕು ಅದರೊಳಗೆ ಪ್ರವೇಶಿಸಿ ವಕ್ರೀಭವನಗೊಂಡು ವಿಭಿನ್ನ ಬಣ್ಣಗಳಾಗಿ ವಿಭಜಿತವಾಗುತ್ತದೆ. ಲಕ್ಷಾಂತರ ಹನಿಗಳಿಂದ ಇದೇ ಪ್ರಕ್ರಿಯೆ ನಡೆದಾಗ ಆಕಾಶದಲ್ಲಿ ಸುಂದರ ಕಾಮನಬಿಲ್ಲು ಕಾಣುತ್ತದೆ.

ಒಂದಕ್ಕಿಂತ ಹೆಚ್ಚು ಕಾಮನಬಿಲ್ಲುಗಳು

ಒಮ್ಮೊಮ್ಮೆ ಅವಳಿ ಅಥವಾ ತ್ರಿವಳಿ ಕಾಮನಬಿಲ್ಲುಗಳೂ ಕಾಣಿಸುತ್ತವೆ. ಇದು ಕಣ್ಣಿನ ಭ್ರಮೆಯಲ್ಲ; ಮಳೆಹನಿಗಳೊಳಗಿನ ಆಂತರಿಕ ಪ್ರತಿಫಲನದಿಂದ ಉಂಟಾಗುವ ಘಟನೆ. ಮೊದಲ ಕಾಮನಬಿಲ್ಲಿನಲ್ಲಿ ಕೆಂಪು ಬಣ್ಣ ಮೇಲಿದ್ದರೆ, ಎರಡನೆಯದಲ್ಲಿ ನೇರಳೆ ಬಣ್ಣ ಮೇಲಿರುತ್ತದೆ. ಈ ಎರಡರ ನಡುವೆ ಕಾಣುವ ಗಾಢ ಪ್ರದೇಶವನ್ನು ʼಅಲೆಕ್ಸಾಂಡರ್ ಡಾರ್ಕ್ ಬ್ಯಾಂಡ್ʼ ಎಂದು ಕರೆಯುತ್ತಾರೆ.

Untitled design (29)

ಪರ್ವತಗಳೂ ಕಾರಣವಾಗಬಲ್ಲವು

ಹವಾಯಿಯಲ್ಲಿ ಕಾಮನಬಿಲ್ಲುಗಳು ಹೆಚ್ಚಾಗಿ ಕಾಣಿಸಿಕೊಳ್ಳಲು ಅಲ್ಲಿನ ಪರ್ವತಗಳೂ ಕಾರಣ. ಸಮುದ್ರದಿಂದ ಬರುವ ಮಾರುತಗಳನ್ನು ಪರ್ವತಗಳು ತಡೆದು ಮಳೆ ಸುರಿಯುವಂತೆ ಮಾಡುತ್ತವೆ. ಮಧ್ಯೆ ಸ್ವಚ್ಛ ನೀಲಾಕಾಶ ಕಾಣಿಸಿಕೊಂಡಾಗ ಕಾಮನಬಿಲ್ಲುಗಳು ಸ್ಪಷ್ಟವಾಗಿ ಮೂಡುತ್ತವೆ. ನವೆಂಬರ್‌ನಿಂದ ಮಾರ್ಚ್‌ವರೆಗೆ ಅಲ್ಲಿನ ಪರ್ವತಗಳು ಮಳೆಮೋಡಗಳನ್ನು ಹಿಡಿದುಕೊಂಡು ದೀರ್ಘಕಾಲ ಕಾಮನಬಿಲ್ಲುಗಳು ಕಾಣುವ ವಾತಾವರಣ ನಿರ್ಮಿಸುತ್ತವೆ.

2017ರಲ್ಲಿ ತೈವಾನ್‌ನಲ್ಲಿ ಒಂದು ಕಾಮನಬಿಲ್ಲು ಸುಮಾರು ಒಂಬತ್ತು ಗಂಟೆಗಳ ಕಾಲ ಕಾಣಿಸಿಕೊಂಡು ದಾಖಲೆ ನಿರ್ಮಿಸಿತು. ಅದಕ್ಕೂ ಮೊದಲು ಇಂಗ್ಲೆಂಡಿನ ದಾಖಲೆಯನ್ನು ಅದು ಮುರಿದಿತ್ತು. ಹವಾಯಿ ದ್ವೀಪಗಳ ಕಾಮನಬಿಲ್ಲುಗಳು ಈ ದಾಖಲೆಯನ್ನು ಮುರಿಯಬಹುದೇ ಎಂಬ ಕುತೂಹಲ ಇನ್ನೂ ಉಳಿದಿದೆ.

ಇಂದು ಕಾಮನಬಿಲ್ಲುಗಳನ್ನು ಹುಡುಕಲು ವಿಶೇಷ ಪ್ರವಾಸಗಳೂ, ಅವು ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ತಿಳಿಸುವ “RainbowChaseʼ ಎಂಬ ಮೊಬೈಲ್ ಆಪ್‌ಗಳೂ ಬಂದಿವೆ. ಏನೇ ಇರಲಿ ಮಳೆಯ ನಂತರ ಆಕಾಶದಲ್ಲಿ ಮೂಡುವ ಕಾಮನಬಿಲ್ಲು ಮಾನವನ ಮನಸಿನಲ್ಲಿ ಹುಟ್ಟಿಸುವ ವಿಸ್ಮಯ ಮಾತ್ರ ಎಂದಿಗೂ ಕಡಿಮೆಯಾಗದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...