- ರಂಗಸ್ವಾಮಿ ಮೂಕನಹಳ್ಳಿ


ಜಗತ್ತಿನಲ್ಲಿ ಇಷ್ಟೊಂದು ಜನರಿದ್ದೇವೆ. ಒಬ್ಬಬ್ಬರ ಬದುಕು ಒಂದೊಂದು ಥರವಿದೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಮಕ್ಕಳಲ್ಲಿ, ಅವರ ಬದುಕಲ್ಲಿ ಬಹಳಷ್ಟು ಅಂತರವಿರುತ್ತದೆ. ಹೀಗೇಕೆ? ಅವರು ಬೆಳೆದ ವಾತಾವರಣ, ನೀಡಿದ ಶಿಕ್ಷಣ, ಪ್ರೀತಿ, ಸುರಕ್ಷತಾ ಭಾವ ಎಲ್ಲವೂ ಒಂದೇ ಇದ್ದೂ ಬೆಳೆಯುತ್ತಾ ಅವರ ಜೀವನದಲ್ಲಿ ಬಹಳಷ್ಟು ಅಂತರ ಸೃಷ್ಟಿಯಾಗುತ್ತದೆ ಹೀಗೇಕೆ? ಇಲ್ಲಿ ಏಕೆ ಎನ್ನುವುದಕ್ಕೆ ನಿಖರವಾಗಿ ಉತ್ತರ ನೀಡಲು ಸಾಧ್ಯವಿಲ್ಲದ ಸಮಯದಲ್ಲಿ 'ಹಣೆಬರಹ, ಪೂರ್ವ ಜನ್ಮದ ಕರ್ಮ ಅಥವಾ ಡೆಸ್ಟಿನಿ' ಎನ್ನುವ ಪದಗಳು ಸೃಷ್ಟಿಯಾಗಿರಬಹುದು. ಅಲ್ಲದೆ ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಕೆಲವೊಂದು ವಿಷಯಗಳಿಗೆ ನಿಖರ ಉತ್ತರ ಹುಡುಕುವುದು ಅಥವಾ ಕಾರಣ ಕೊಡುವುದು ಕಷ್ಟಸಾಧ್ಯ. ನಾವು ನಂಬಲಿ ಅಥವಾ ಬಿಡಲಿ ಕೆಲವೊಂದು ವಿಷಯಗಳನ್ನು ಇದ್ದಹಾಗೆ ಒಪ್ಪಿಕೊಳ್ಳುವುದನ್ನು ಬಿಟ್ಟು ಹೆಚ್ಚಿನದೇನೂ ನಾವು ಮಾಡಲು ಸಾಧ್ಯವಿಲ್ಲ.

ಇದನ್ನೂ ಓದಿ: ಯುರೋಪ್ ಅಂದರೆ ಅದೇನು ಸುಖದ ಸುಪ್ಪತ್ತಿಗೆಯಲ್ಲ!

ಜೀವನದಲ್ಲಿ ಎಲ್ಲಾ ಥರದ ಸೋಲು, ನೋವು ತಿಂದ ವ್ಯಕ್ತಿಯೊಬ್ಬ ಇನ್ನು ಈ ಜೀವನ ನನಗೆ ಸಾಕು ಎಂದು ತನ್ನ ಜೀವನವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಾನೆ. ಅಲ್ಲಿಯೂ ಹಲವು ವೈಫಲ್ಯ ಕಂಡು ಕೊನೆಗೆ ಸಮುದ್ರದಲ್ಲಿ ಮುಳುಗಿ ಸಾಯುವ ನಿರ್ಧಾರಕ್ಕೆ ಬರುತ್ತಾನೆ. ಹೀಗೆ ಸಮುದ್ರ ಹೊಕ್ಕಾಗ ಅಲ್ಲಿನ ನೀರು ಕೂಡ ಬತ್ತಿ ಹೋಗಿ ಕೇವಲ ಮೊಳಕಾಲವರೆಗೆ ಮಾತ್ರ ನೀರು ಇರುತ್ತದೆ. ಕೊನೆಗೆ ಅವನ ಸಾಯುವ ಪ್ರಯತ್ನಕ್ಕೆ ಸಮುದ್ರ ಹೊಕ್ಕರೂ ಜಯ ಸಿಗುವುದಿಲ್ಲ. ಇಲ್ಲಿ ಋಣಾತ್ಮಕ ಉದಾಹರಣೆ ಕೊಡಲಾಗಿದೆ. ಆದರೆ ಇದನ್ನು ಬದುಕಿನ ಎಲ್ಲಾ ಮಜಲುಗಳಲ್ಲೂ ಅನ್ವಯಿಸಬಹುದು. ಅರ್ಥ ಬಹಳ ಸರಳ. ಕೆಲವೊಮ್ಮೆ ಮನುಷ್ಯ ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಅದರಲ್ಲಿ ಜಯ ಸಿಗದೇ ಹೋಗಬಹುದು. ಏಕೆಂದರೆ ಅವರ ಹಣೆಬರಹದಲ್ಲಿ ಅದು ಇರುವುದಿಲ್ಲ. ಕೆಲವೊಮ್ಮೆ ಆ ವಸ್ತು ಅಥವಾ ವಿಷಯದ ಪ್ರಾಪ್ತಿ ಇರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಮಗಿಂತ ಹೆಚ್ಚಿನ ಬಲವುಳ್ಳ ಕಣ್ಣಿಗೆ ಕಾಣದ ಶಕ್ತಿಯ ಬಗ್ಗೆ ಜತೆಗೆ ನಮ್ಮ ಡೆಸ್ಟಿನಿ ಬಗ್ಗೆ ನಂಬಿಕೆ ಹೆಚ್ಚಿಸುವ ಮಾತನಾಡುತ್ತದೆ. ನಾವೆಲ್ಲಾ ನಮ್ಮ ಹಣೆಬರಹವನ್ನು ಹೊತ್ತು ಬಂದಿರುತ್ತೇವೆ ಎನ್ನುವುದು ಸಾಮಾನ್ಯ ಅರ್ಥ.

myth

ಇದೆಲ್ಲ ಭಾರತೀಯರ ಕಥೆಯಾಯ್ತು, ಯುರೋಪಿಯನ್ನರು ಇಂಥ ವಿಷಯಗಳನ್ನು ನಂಬುತ್ತಾರೆಯೇ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಈಗಾಗಲೇ ಮೂಡಿರುತ್ತದೆ. ಖಂಡಿತ ನಂಬುತ್ತಾರೆ. ಯೂರೋಪು ತನ್ನತನವನ್ನು ಉಳಿಸಿಕೊಂಡು ಹೊಸತನ್ನು ಕೂಡ ಅಪ್ಪಿಕೊಂಡಿರುವ ಭೂಭಾಗ. ಒಂದು ಉದಾಹರಣೆ ನಿಮ್ಮ ಸಂದೇಹವನ್ನು ನಿವಾರಿಸಬಲ್ಲದು. ಹೀಗಾಗಿ ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ತಮಾಲ್ ಎನ್ನುವುದು ಲ್ಯಾಟಿನ್ ಭಾಷಿಕರು ಮಾಡುವ ಒಂದು ಖಾದ್ಯ. ಜೋಳ ಮತ್ತು ಮಾಂಸವನ್ನು ಸೇರಿಸಿ ಬೇಯಿಸಿ ಮಾಡುವ ಒಂದು ಆಹಾರ ಪದಾರ್ಥ. ಸ್ಪಾನಿಷರಲ್ಲಿ ಈ ತಮಾಲ್ ಕುರಿತು ಒಂದು ಆಡು ಮಾತಿದೆ 'ಎಲ್ ಕೆ ನಾಸೆ ಪರ ತಮಾಲ್, ದೆಲ್ ಸಿಯಲೋ ಕಾಯೆನ್ ಲಾಸ್ ಹೋಹಾಸ್' ಅಂದರೆ ಕೆಲವರು ತಮಾಲ್ ಖಾದ್ಯವನ್ನು ಮಾಡಲೆಂದೇ ಹುಟ್ಟಿರುತ್ತಾರೆ ಅಂಥವರಿಗೆ ಎಲೆಯಲ್ಲಿ ಕಟ್ಟಿದ ಮಾಂಸ ಮತ್ತು ಜೋಳ ಆಕಾಶದಿಂದ ಬೀಳುತ್ತದೆ ಎಂದರ್ಥ. ಯಾರಿಗೆ ಯೋಗವಿರುತ್ತದೆಯೋ, ಹಣಬರಹವಿರುತ್ತದೆಯೋ ಅಂಥವರಿಗೆ ಯಾವುದಾದರೊಂದು ರೀತಿಯಲ್ಲಿ ಆಕಾಶದಿಂದ ಯಾರೋ ಎಲೆಯಲ್ಲಿ ಕಟ್ಟಿ ಎಸೆಯುತ್ತಾರೆ, ಅವರಿಗೆ ಸಿಗುತ್ತದೆ, ಅವರು ಖಾದ್ಯವನ್ನು ತಯಾರಿಸುತ್ತಾರೆ. ಇನ್ನು ಕೆಲವರು ಎಷ್ಟೇ ಕಷ್ಟ ಪಟ್ಟರೂ, ಮಾಂಸವನ್ನು ತಂದಿಟ್ಟುಕೊಂಡಿದ್ದರೂ ಕೊನೆ ಘಳಿಗೆಯಲ್ಲಿ ಅದನ್ನು ಬೇರೆ ಯಾರೋ ಲಪಟಾಯಿಸಿಬಿಡುತ್ತಾರೆ. ಇವೆಲ್ಲ ಕೇಳಲು ಕಥೆಯಂತೆ ಕಾಣಬಹುದು. ಆದರೆ ಮನುಷ್ಯನ ಉನ್ನತಿ ಮತ್ತು ಅವನತಿಗೆ ಕೇವಲ ಮತ್ತು ಕೇವಲ ಪ್ರಯತ್ನ, ಪರಿಶ್ರಮ ಮಾತ್ರವಿದ್ದರೆ ಸಾಲದು, ಜತೆಗೆ ಹಣೆಬರಹ ಕೂಡ ಮುಖ್ಯ ಎನ್ನುವುದು ಮನುಷ್ಯನಿರುವ ಸಕಲ ಭೂಭಾಗದಲ್ಲಿ ನಂಬುವ ಮಾತು.

ಲ್ಯಾಟಿನ್ ದೇಶಗಳು ಮಾತ್ರವಲ್ಲ ಬ್ರಿಟಿಷರು ಕೂಡ ಈ ಡೆಸ್ಟಿನಿ, ಹಣೆಬರಹ, ಅದೃಷ್ಟವನ್ನು ಬಹಳವಾಗಿ ನಂಬುತ್ತಾರೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಬ್ಲ್ಯಾಕ್ ಮ್ಯಾಜಿಕ್ ಅಂದರೆ ಮಾಟ, ಮಂತ್ರದಲ್ಲಿ ಕೂಡ ವಿಶ್ವಾಸವನ್ನು ಇಟ್ಟಿದ್ದಾರೆ. ನಮ್ಮಲ್ಲಿ ಕೆಲವರು ಹಣೆಬರಹ ಎಲ್ಲಾ ಏನಿಲ್ಲ, ನಮ್ಮ ಪರಿಶ್ರಮ ಬಹಳ ಮುಖ್ಯ ಎನ್ನುವ ಮಾತನ್ನು ಕೂಡ ಆಡುತ್ತಾರೆ. ಆದರೆ ಅವರ ಕಣ್ಣೆದುರೇ ಎಲ್ಲಾ ಕೋನದಲ್ಲೂ ಕಡಿಮೆ ಎನಿಸಿಕೊಂಡ ವ್ಯಕ್ತಿ ಅವರ ಮುಂದೆಯೇ ಅವರನ್ನೇ ಮೀರಿ ಬೆಳೆದಾಗ, ಅದೃಷ್ಟ, ಹಣೆಬರಹ ಮತ್ತೆ ಮುಂಚೂಣಿಗೆ ಬರುತ್ತವೆ.

ಹೀಗೆ ಒಮ್ಮೆ ನಾವಂದುಕೊಂಡದ್ದು ಆಗಲಿಲ್ಲ ಎಂದ ಮಾತ್ರಕ್ಕೆ ನಿರಾಶರಾಗಬೇಕಿಲ್ಲ. ಕತ್ತಲ ನಂತರ ಬೆಳಕಾಗಲೇಬೇಕಲ್ಲವೇ? ಹಾಗೆಯೇ ಬದುಕಿನಲ್ಲಿ ಏರಿಳಿತಗಳು ಕೂಡ! ಇಂದಿನ ದಿನದ ಸ್ಥಿತಿ ಸದಾ ಇರುವುದಿಲ್ಲ. ಬದುಕಿನಲ್ಲಿ ಬದಲಾವಣೆಯೊಂದೇ ನಿರಂತರ. ಬದುಕಿನ ಹಾದಿಯಲ್ಲಿ ನಮಗೆ ತೀರಾ ಬೇಕಾದವರನ್ನು ಕಳೆದುಕೊಳ್ಳುತ್ತೇವೆ. ಅಂದಿನ ದಿನದ ದುಃಖ ಸದಾ ಇದ್ದಿದ್ದರೆ? ನಾವು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲಾಗದೆ ಅದೇ ದುಃಖದಲ್ಲಿ ನಮ್ಮ ಜೀವನ ಪಯಣವನ್ನೂ ಮುಗಿಸಬೇಕಿತ್ತು ಅಲ್ಲವೇ? ಆದರೆ ಬದುಕು ಜೀವನ್ಮುಖಿ. ಹಾಗೆ ಆಗಲು ಬಿಡುವುದಿಲ್ಲ. ನೋವಿನ ನಂತರ ಏನಾದರೊಂದು ವಿಚಾರ ಬದುಕಿಗೆ ಆಶಾಭಾವನೆಯನ್ನು ನೀಡುತ್ತದೆ. ನಾವು ಬದುಕಲೇಬೇಕು ಎನ್ನುವುದಕ್ಕೊಂದು ಕಾರಣವನ್ನೂ ಕೊಡುತ್ತದೆ. ಸುಖವೇ ಇರಲಿ ದುಃಖವೇ ಇರಲಿ ಯಾವುದೂ ಈ ಬದುಕಿನಲ್ಲಿ ಶಾಶ್ವತವಲ್ಲ.

Destiny

ಸೋಲು ಎನ್ನುವುದು ಮನುಷ್ಯನನ್ನು ಹತಾಶೆಗೆ ದೂಡುತ್ತದೆ. ಆದರೆ ಸೋಲಿನ ಹಿಂದೆಯೇ ನೆರಳಿನಂತೆ ಗೆಲುವು ಕೂಡ ಇರುತ್ತದೆ. ಗೆಲುವು ಸೋಲು ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನೊಂದು ನೆರಳಿನಂತೆ ಹಿಂಬಾಲಿಸುತ್ತಲೇ ಇರುವಂಥವು. ಈ ಮಾತನ್ನು ಸದಾ ನೆನಪಲ್ಲಿಟ್ಟುಕೊಂಡರೆ ಉತ್ತಮ. ಇದನ್ನು ಸ್ಪಾನಿಷರು ದಿಸ್ಪೊಯೆಸ್ ದೆ ಲ ತೊರ್ಮೆಂತ ಸಿಯಂಪ್ರೇ ಯೇಗ ಲ ಕಾಲ್ಮಾ ಎನ್ನುತ್ತಾರೆ. ಅಂದರೆ ಚಂಡಮಾರುತದ ನಂತರ ಖಂಡಿತ ಶಾಂತಿ ನೆಲೆಸುತ್ತದೆ ಎಂದರ್ಥ.

ಇನ್ನು ಇಟಲಿಯಲ್ಲಿ ಎಲ್ಲಿಗಾದರೂ ಹೊರಟಾಗ, ಯೋಗಿಣಿಯರು (ನನ್) ಮತ್ತು ಆಂಬುಲೆನ್ಸ್ ಎದುರಾದರೆ ಅದನ್ನು ಅಪಶಕುನ ಎಂದು ಭಾವಿಸಲಾಗುತ್ತದೆ. ಒಂದಷ್ಟು ಹೊತ್ತು ನಿಂತು ನಂತರ ಉಪಕ್ರಮಿಸುವುದು ಇಲ್ಲಿನ ಪದ್ಧತಿ. ನಮ್ಮಲ್ಲಿ ಬೆಕ್ಕು ರಸ್ತೆಯಲ್ಲಿ ಬಂದರೆ ನಾವು ಇದನ್ನೇ ತಾನೇ ಮಾಡುವುದು. ಬೆಂಕಿಯ ಕೆಂಡದ ಮೇಲೆ ನಡೆಯುವುದು, ಓಡುವುದು, ಮಕ್ಕಳನ್ನು ಅಂದರೆ ವರ್ಷದ ಕೆಳಗಿನ ಮಗುವನ್ನು ಮೂರ್ನಾಲ್ಕು ಎತ್ತರದ ಮಹಡಿಯಿಂದ ನೆಲಕ್ಕೆ ಎಸೆಯುವುದು ಹೀಗೆ ಇಲ್ಲಿಯೂ ಅನೇಕ ನಂಬಿಕೆಗಳಿವೆ. ಮಹಡಿಯಿಂದ ಮಗುವನ್ನು ಕೆಳಕ್ಕೆ ಬಿಸಾಕುತ್ತಾರೆ. ಕೆಳಗೆ ದೊಡ್ಡ ಬಟ್ಟೆಯನ್ನು ಹಿಡಿದ ಜನ ಮಗುವನ್ನು ಸುರಕ್ಷಿತವಾಗಿ ಕಾಪಾಡುತ್ತಾರೆ. ಹೀಗೆ ಮಗುವನ್ನು ಎಸೆಯುವ ಉದ್ದೇಶ ಮಗು ತನ್ನ ಮುಂದಿನ ದಿನಗಳಲ್ಲಿ ಭಯವಿಲ್ಲದ ಜೀವನವನ್ನು ನಡೆಸುತ್ತದೆ ಎನ್ನುವ ನಂಬಿಕೆ. ಹೀಗೆ ಇಂಥ ವಿಷಯಗಳ ಒಂದು ದೊಡ್ಡ ಪಟ್ಟಿಯನ್ನೇ ತಯಾರಿಸಬಹುದು. ಇರಲಿ.

ಇವತ್ತು ದೇಶ, ಭಾಷೆ ಗಡಿಗಳನ್ನು ಮೀರಿ ಜಗತ್ತು ಎದುರಿಸುತ್ತಿರುವ ಮಹಾನ್ ಸಮಸ್ಯೆ ವಿಷಯ ಪರಿಣಿತರ ಅಥವಾ ವಿಷಯದಲ್ಲಿ ಆಸಕ್ತಿ ಇರುವವರ ಕೊರತೆ. ಹೇಳಿಕೊಳ್ಳಲು ಜಗತ್ತಿನಲ್ಲಿ 800 ಕೋಟಿಗೂ ಮೀರಿದ ಜನಸಂಖ್ಯೆಯಿದೆ. ಆದರೇನು; ಕೆಲವೊಂದು ಹುದ್ದೆ ನಿರ್ವಹಿಸಲು ಜನರ ಕೊರತೆಯಿದೆ. ತತ್ಕಾಲಕ್ಕೆ ಯಾರನ್ನೋ ಆ ಜಾಗಕ್ಕೆ ತುಂಬಬಹುದು, ಆದರೆ ಅಲ್ಲಿಗೆ ಬೇಕಾದ ನಿಖರತೆ, ನೈಪುಣ್ಯದ ಕೊರತೆ ಇದ್ದೇ ಇರುತ್ತದೆ. ಇವತ್ತು ನಮಗೇನು ಬೇಕು ಅದಾಗಲು ಯಾರ ಅಡ್ಡಿಯೂ ಇಲ್ಲ, ಹಿಂದಿನಂತೆ ನೂರಾರು ಕಷ್ಟಗಳು ಕೂಡ ಇಲ್ಲ. ಹೀಗಿದ್ದೂ ನಾವು ಒಕ್ಕಣ್ಣ ರಾಜರಾಗಬೇಕೇ? ಹಾಗೆ ನೋಡಲು ಹೋದರೆ ಕುರುಡರ ಸಾಮ್ರಾಜ್ಯವೂ ಇರಬಾರದು.

ಬಾರ್ಸಿಲೋನಾ ನಗರದಲ್ಲಿ ಆಗಲೇ ಹತ್ತು ವರ್ಷ ಕಳೆದು ಅಲ್ಲಿನ ಭಾಷೆ ಕಲಿತು, ಅಲ್ಲಿನ ಜನರೊಂದಿಗೆ ಬೆರೆತು ಅಲ್ಲಿನ ಗಾದೆಗಳ ಸಂಗ್ರಹಣೆಯಲ್ಲಿ ತೊಡಗಿದ್ದ ದಿನಗಳವು. ನಿತ್ಯವೂ ಒಂದಲ್ಲ ಒಂದು ಹೊಸತು ಕಲಿಯಲು ಸಿಗುತ್ತಿತ್ತು. ಭಾಷೆ ಎನ್ನುವುದು ಹಾಗೆಯೇ, ನನಗೆ ಪೂರ್ಣ ಗೊತ್ತು ಎಂದು ಎದೆ ಉಬ್ಬಿಸಿ ಹೇಳುವ ಹಾಗಿಲ್ಲ! ಒಂದಲ್ಲ ಒಂದು ಹೊಸ ಪದ ಕಲಿಯಲು ಸಿಗುತ್ತದೆ. ಮಾತೃ ಭಾಷೆಯ ವಿಷಯ ಹೊರತು ಪಡಿಸಿ ನಾವು ಕಲಿಯುವ, ಕಲಿತ ಎನ್ನುವುದಕ್ಕಿಂತ ಕಲಿಯುತ್ತಲೇ ಇರುವ ಭಾಷೆಗಳ ವಿಷಯದಲ್ಲಿ ಇದು ಸತ್ಯ. ಗಾದೆಯ ವಿಷಯದಲ್ಲೂ!!.