Wednesday, November 19, 2025
Wednesday, November 19, 2025

ಯುರೋಪ್ ಅಂದರೆ ಅದೇನು ಸುಖದ ಸುಪ್ಪತ್ತಿಗೆಯಲ್ಲ!

ಪಾಕಿಸ್ತಾನದಿಂದ ಬಾರ್ಸಿಲೋನಾಗೆ ಕರೆ ತರಲು ಬರೋಬ್ಬರಿ ಎಂಟು ಲಕ್ಷ ಪಾಕಿಸ್ತಾನಿ ರುಪಾಯಿಯನ್ನು ಅವರು ಏಜೆಂಟ್‌ಗೆ ನೀಡಬೇಕಿತ್ತು. ಇಂಥ ಏಜೆಂಟ್‌ಗಳು ಅವರನ್ನು ರಷ್ಯಾಗೆ ಕರೆತಂದು ಅಲ್ಲಿ ಮೂರ್ನಾಲ್ಕು ತಿಂಗಳು ಇರಿಸುತ್ತಿದ್ದರಂತೆ. ಆನಂತರ ಸಮಯ ನೋಡಿ ಉಕ್ರೇನ್ ಮೂಲಕ ಹಂಗೇರಿ ದೇಶವನ್ನು ತಲುಪಿಸಿ ಅಲ್ಲಿಂದ ಆಸ್ಟ್ರಿಯಾ, ಇಟಲಿ ನಂತರ ಫ್ರಾನ್ಸ್ ಕೊನೆಗೆ ಸ್ಪೇನ್ ತಲುಪಿಸುತ್ತಿದ್ದರು. ಸ್ಪೇನ್ ತಲುಪುವುದಕ್ಕೆ ಕೆಲವೊಬ್ಬ ವಲಸಿಗರು ಎರಡು ವರ್ಷ ತೆಗೆದುಕೊಂಡಿದ್ದಾರೆ.

- ರಂಗಸ್ವಾಮಿ ಮೂಕನಹಳ್ಳಿ


ಸುಮಾರು 2003ನೆಯ ಇಸವಿಯಿಂದ ಬಾರ್ಸಿಲೋನಾಗೆ ಬರುವ ವಲಸಿಗರ ಸಂಖ್ಯೆಯಲ್ಲಿ ಬಹಳ ಹೆಚ್ಚಳ ಕಂಡು ಬರಲು ಶುರುವಾಯ್ತು. ಲ್ಯಾಟಿನ್ ಅಮೆರಿಕದಿಂದ ಬಂದ ವಲಸಿಗರಿಗೆ ಭಾಷೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಬಾಂಗ್ಲಾ ಮತ್ತು ಪಾಕಿಸ್ತಾನದಿಂದ ಬಹಳಷ್ಟು ಜನ ವಲಸೆ ಬರಲು ಶುರು ಮಾಡಿದರು. ಹೀಗೆ ಬಂದ ವಲಸಿಗರಲ್ಲಿ ಒಂದು ಪ್ರತಿಶತ ಕೂಡ ವಿಮಾನದ ಮೂಲಕ, ಕಾನೂನು ರೀತಿ ಬಂದವರಲ್ಲ. ಪ್ರತಿಯೊಬ್ಬ ವಲಸಿಗನದು ಒಂದೊಂದು ಕಥೆ.

ಪಾಕಿಸ್ತಾನದಿಂದ ಬಾರ್ಸಿಲೋನಾಗೆ ಕರೆ ತರಲು ಬರೋಬ್ಬರಿ ಎಂಟು ಲಕ್ಷ ಪಾಕಿಸ್ತಾನಿ ರುಪಾಯಿಯನ್ನು ಅವರು ಏಜೆಂಟ್‌ಗೆ ನೀಡಬೇಕಿತ್ತು. ಇಂಥ ಏಜೆಂಟ್‌ಗಳು ಅವರನ್ನು ರಷ್ಯಾಗೆ ಕರೆತಂದು ಅಲ್ಲಿ ಮೂರ್ನಾಲ್ಕು ತಿಂಗಳು ಇರಿಸುತ್ತಿದ್ದರಂತೆ. ಆನಂತರ ಸಮಯ ನೋಡಿ ಉಕ್ರೇನ್ ಮೂಲಕ ಹಂಗೇರಿ ದೇಶವನ್ನು ತಲುಪಿಸಿ ಅಲ್ಲಿಂದ ಆಸ್ಟ್ರಿಯಾ, ಇಟಲಿ ನಂತರ ಫ್ರಾನ್ಸ್ ಕೊನೆಗೆ ಸ್ಪೇನ್ ತಲುಪಿಸುತ್ತಿದ್ದರು. ಸ್ಪೇನ್ ತಲುಪುವುದಕ್ಕೆ ಕೆಲವೊಬ್ಬ ವಲಸಿಗರು ಎರಡು ವರ್ಷ ತೆಗೆದುಕೊಂಡಿದ್ದಾರೆ. ಯುರೋಪಿನಲ್ಲಿ ಇಟಲಿ, ಗ್ರೀಸ್, ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳು ಮಾನವತೆಯ ಆಧಾರದ ಮೇಲೆ ಒಂದಷ್ಟು ವಲಸಿಗರಿಗೆ ಬಾಗಿಲು ತೆರೆಯುತ್ತಿದ್ದವು. ವರ್ಷ ಅಥವಾ ಎರಡು ವರ್ಷದಲ್ಲಿ ಒಂದಷ್ಟು ಸಮಯ ಇಂಥ ಒಂದು ಅವಕಾಶವನ್ನು ಕಲ್ಪಿಸುತ್ತಿದ್ದರು. ಎಲ್ಲಾ ದೇಶಗಳು ಒಟ್ಟಿಗೆ ಇಂಥ ಅವಕಾಶವನ್ನು ನೀಡುತ್ತಿರಲಿಲ್ಲ. ಬದಲಿಗೆ ಎಲ್ಲ ದೇಶಗಳೂ ಬೇರೆ ಬೇರೆ ಸಮಯದಲ್ಲಿ ಇಂಥ ಒಂದು ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದವು. ಹೀಗಾಗಿ ಯಾವ ದೇಶ ವರ್ಷದ ಯಾವ ತಿಂಗಳಲ್ಲಿ ಬಾಗಿಲು ತೆರೆದಿದೆ ಎನ್ನುವುದನ್ನು ಅವಲಂಬಿಸಿ ವಲಸಿಗರು ಸಾಗುವ ದೇಶಗಳ ಪಟ್ಟಿ ಬದಲಾಗುತ್ತದೆ.

barcelona

ಆಲಿ ಎಂಬ ಬಾಂಗ್ಲಾದೇಶಿ. ವಯಸ್ಸು ಐವತ್ತರ ಆಸುಪಾಸು ಅನಿಸುತ್ತದೆ. ಅವನಿಗೆ ತನ್ನ ನಿಖರ ವಯಸ್ಸೆಷ್ಟು ಎನ್ನುವುದು ಕೂಡ ಗೊತ್ತಿರಲಿಲ್ಲ. ಡಾಕ್ಯುಮೆಂಟ್‌ನಲ್ಲಿ ಇದ್ದ ದಿನಾಂಕ ಸರಿಯೇ ತಪ್ಪೇ ಎನ್ನುವುದು ಕೂಡ ಅವನಿಗೆ ತಿಳಿದಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅದು ಅವನಿಗೆ ಬೇಕಿರಲೂ ಇಲ್ಲ. ಆಲಿ ಬಾಂಗ್ಲಾದೇಶ ಬಿಟ್ಟವನು ಬಾರ್ಸಿಲೋನಾ ತಲುಪುವಷ್ಟರಲ್ಲಿ ಎರಡು ವರ್ಷ ಹಿಡಿಯಿತಂತೆ! ಆಮೇಲೆ ಮೂರು ವರ್ಷ ಅವನಿಗೆ ಇಲ್ಲಿನ ರೆಸಿಡೆನ್ಸಿ ಪರ್ಮಿಟ್ ಪಡೆದುಕೊಳ್ಳುವುದರಲ್ಲಿ ಕಳೆದು ಹೋಯ್ತು. ಕೆಲಸ ಮಾಡಿ ಮನೆಗೆ ಮತ್ತು ಬಾರ್ಸಿಲೋನಾಗೆ ಬರಲು ಮಾಡಿದ ಸಾಲ ಎಂಟು ಲಕ್ಷ ತೀರಿಸುವ ವೇಳೆಗೆ ಎಂಟು ವರ್ಷವಾಗಿತ್ತು. ಎಂಟು ವರ್ಷದ ನಂತರ ಆಲಿ ಬಾಂಗ್ಲಾದೇಶಕ್ಕೆ ಹೊರಟಾಗ ಅದೇನೋ ಯುದ್ಧ ಗೆದ್ದ ಸಾರ್ಥಕತೆ ಅವನ ಮುಖದಲ್ಲಿತ್ತು. ಆಲಿ ಬಹಳ ನಿಯತ್ತಿನ ಮನುಷ್ಯ. ಬಹಳವೇ ಧಾರ್ಮಿಕ ವ್ಯಕ್ತಿ. 2005ರಿಂದ 2014ರವರೆಗೆ ನಮ್ಮ ಮನೆಗೆ ಬೇಕಾದ ಎಲ್ಲ ಪದಾರ್ಥಗಳನ್ನು ಆಲಿ ತಂದು ಕೊಡುತ್ತಿದ್ದ. ನಾನು ರಮ್ಯ ಸೂಪರ್ ಮಾರ್ಕೆಟ್‌ನಲ್ಲಿ ಮನೆಗೆ ಬೇಕಾದ ವಸ್ತುಗಳನ್ನು ವಾರಕ್ಕೊಮ್ಮೆ ತರುತ್ತಿದ್ದೆವು. ಅಕ್ಕಿ, ಬೇಳೆ, ಜತೆಗೆ ಹಸಿರು ಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ, ಸಾಸಿವೆಯಂಥ ಭಾರತೀಯ ಅಡುಗೆಯಲ್ಲಿ ಬಳಸುವ ಪದಾರ್ಥಗಳನ್ನು ಆಲಿ ತಂದುಕೊಡುತ್ತಿದ್ದ. ನಾವಿದ್ದ ಕಡೆ ಇದ್ದ ಬಹುತೇಕ ಏಷ್ಯನ್ ಸ್ಟೋರ್‌ಗಳನ್ನು ನಡೆಸುತ್ತಿದ್ದದ್ದು ಪಾಕಿಸ್ತಾನಿಗಳು ಅಥವಾ ಬಾಂಗ್ಲಾದೇಶಿಗಳು. ಅಲ್ಲೊಂದು ಇಲ್ಲೊಂದು ಭಾರತೀಯ ಪಂಜಾಬಿ ಅಂಗಡಿಗಳು ಕೂಡ ಇದ್ದವು.

ಆಲಿ ಬಾಂಗ್ಲಾದೇಶಕ್ಕೆ ಹೋಗುವ ಮುನ್ನ ಒಂದು ದಿನ ರಂಗ ಭಾಯ್ ನಮ್ಮ ಜೀವನ ನಮ್ಮ ಶತ್ರುವಿಗೂ ಬೇಡ ಎಂದ. ಏನಾಯ್ತು ಆಲಿ ಎಂದದ್ದಕ್ಕೆ ನನ್ನ ಮಗ ನನ್ನ ಗುರುತು ಹಿಡಿಯಲಿಲ್ಲ ಎಂದು ಬಹಳ ವೇದನೆ ಪಟ್ಟುಕೊಂಡ. ಆಲಿ ತಾನು ಸವೆದು ತನ್ನ ಕುಟುಂಬಕ್ಕೆ ಅನ್ನ, ಆಶ್ರಯ ನೀಡಿದ. ಮಗಳನ್ನು ಮೆಡಿಕಲ್ ಓದಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡು ತಿರುಗುತ್ತಿದ್ದ. 2014ರಲ್ಲಿ ಬಾಂಗ್ಲಾಗೆ ಹೋದವನು ಮತ್ತೆ ವಾಪಸ್ ಬರಲಿಲ್ಲ. ನಾಲ್ಕೈದು ತಿಂಗಳ ನಂತರ ಬಾಂಗ್ಲಾದೇಶಿ ಅಂಗಡಿಗಳಲ್ಲಿ ಅವನ ಬಗ್ಗೆ ವಿಚಾರಿಸಲು ಶುರು ಮಾಡಿದೆ. ಕೊನೆಗೊಂದು ಅಂಗಡಿಯಲ್ಲಿ ಅವನ ಮನೆಯನ್ನು ಶೇರ್ ಮಾಡುತ್ತಿದ್ದ ಇನ್ನೊಬ್ಬ ಬಾಂಗ್ಲಾದೇಶಿಯ ನಂಬರ್ ಸಿಕ್ಕಿತು. ಆಲಿ ಬಾಂಗ್ಲಾದೇಶಕ್ಕೆ ಹೋದವನು ಪಾರ್ಶ್ವವಾಯುವಿಗೆ ತುತ್ತಾಗಿದ್ದಾನೆ ಎನ್ನುವ ವಿಷಯ ತಿಳಿಯಿತು. ಅವನನ್ನು ಬಲ್ಲವರಿಂದ ಮತ್ತು ಇತರ ಮೂಲಗಳಿಂದ ಒಂದಷ್ಟು ಹಣ ಸಂಗ್ರಹಿಸಿ (ಸಾವಿರ ಯುರೋ ಎಂದು ನೆನಪು ) ಆಲಿಗೆ ಕಳಿಸಿದೆವು. ಒಂದೆರಡು ಬಾರಿ ಫೋನ್‌ನಲ್ಲಿ ಅವನೊಂದಿಗೆ ಮಾತನಾಡಿದೆ. 'ರಂಗ ಭಾಯ್, ಮನುಷ್ಯ ದುಡಿಯುತ್ತಿರಬೇಕು, ಹಣ ಗಳಿಸುತ್ತಿರಬೇಕು ಇಲ್ಲದಿದ್ದರೆ ಅವನಿಗೆ ಇಜ್ಜತ್ ಇರುವುದಿಲ್ಲ' ಎನ್ನುತ್ತಿದ್ದ. ಆಲಿ ಅವನ ಕುಟುಂಬಕ್ಕೆ ಎಟಿಎಂ ಮಷಿನ್ ಆಗಿದ್ದನಷ್ಟೆ. ಮಷಿನ್‌ನಲ್ಲಿ ಹಣ ಬರುವುದು ನಿಂತ ಮೇಲೆ ಮಷಿನ್‌ಗೆ ಬೆಲೆ ಎಲ್ಲಿದೆ?

'ನೀನು ಇದ್ದರೆ ವಾಸಿ ಕಣೋ, ನೀನಿಲ್ಲ ಅಂದರೆ, ಆಲಿ ಬಾಯ್ ಅಂದರ್ ಆವೋ ಪಾನಿ ಪೀಕೇತು ಜಾವೋ' ಅಂದರೂ ನೈ ಬಾಬಿ ಎನ್ನುವುದು ಬಿಟ್ಟು ಇನ್ನೇನೂ ಹೇಳುವುದಿಲ್ಲ. ಕತ್ತೆತ್ತಿ ಕೂಡ ನೋಡುವುದಿಲ್ಲ. ಅಯ್ಯೋ ಪಾಪ ಆಲಿಗೆ ಹೀಗಾಗಬಾರದಿತ್ತು ಎಂದು ರಮ್ಯ ನೊಂದುಕೊಂಡಳು. 2015ರ ವೇಳೆಗೆ ಆಲಿ ಸತ್ತು ಹೋದ ಎನ್ನುವ ಸುದ್ದಿ ಕೂಡ ತಲುಪಿತು. ಬಾಂಗ್ಲಾದೇಶದ ಯಾವುದೋ ಊರಲ್ಲಿ ಸರಿಯಾಗಿ ದಿನಾಂಕ ಕೂಡ ತಿಳಿಯದ ದಿನದಲ್ಲಿ ಹುಟ್ಟಿದ ಆಲಿಗೂ ನನಗೂ ಎಲ್ಲಿಯ ಋಣಾನುಬಂಧ? ಅಷ್ಟಕ್ಕೂ ನಾನೇನು ಅವನಿಗೆ ನೂರಾರು ಯುರೋ ಕೊಡುತ್ತಿರಲಿಲ್ಲ. ತಿಂಗಳಿಗೆ 20 ಅಥವಾ 50 ಯುರೋ ಮನೆಗೆ ಸಾಮಾನು ತಂದುಕೊಡುತ್ತಿದ್ದಕ್ಕೆ ಭಕ್ಷೀಸ್ ರೂಪದಲ್ಲಿ ನೀಡುತ್ತಿದ್ದೆ ಅಷ್ಟೆ. ಸಂಕೋಚದ ಮುದ್ದೆಯಾದ ಅವನು ಅದನ್ನು ಬೇಡ ಎಂದು ನಿರಾಕರಿಸುತ್ತಿದ್ದ.

ಇಂಥ 'ಆಲಿ' ಗಳ ಸಂಖ್ಯೆ ಯುರೋಪ್‌ನಲ್ಲಿ ಅಸಂಖ್ಯ. ಇಂಥ ಜನರ ಜತೆಗೆ ಗೊತ್ತಿಲ್ಲದೇ ಒಂದಷ್ಟು ಸಂಖ್ಯೆಯಲ್ಲಿ ಉಗ್ರರು ಕೂಡ ನುಸುಳುತ್ತಾರೆ. ಯಾರು ಒಳ್ಳೆಯವರು? ಯಾರು ಕೆಟ್ಟವರು? ಇಂಥ ಸ್ಥಿತಿಯನ್ನು ನಿರ್ಮಿಸಿದವರು ಯಾರು? ಇಷ್ಟೆಲ್ಲಾ ನೋವಿಗೆ ಕಾರಣರಾರು?

ಇದನ್ನೂ ಓದಿ: ಸ್ಪೇನ್ ದೇಶದಲ್ಲೂ ಆಚರಿಸುತ್ತಾರೆ ದೀಪಾವಳಿ !

ಒಂದು ದಿನ ಬಾದಲೂನಾ ನಗರದಲ್ಲಿರುವ ಲಾಲಜಿ ಇಂಡಿಯನ್ ಮತ್ತು ಪಾಕಿಸ್ತಾನಿ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡಲು ಕುಳಿತಿದ್ದೆವು. ಇಲ್ಲಿ ಒಂದು ವಿಷಯ ಹೇಳಿ ಮುಂದುವರಿಸುತ್ತೇನೆ. ಸಾಮಾನ್ಯವಾಗಿ ಯುರೋಪಿನಲ್ಲಿ ಭಾರತೀಯರು ನಡೆಸುವ ಹೊಟೇಲ್‌ಗಳ ಸಂಖ್ಯೆ ಕಡಿಮೆ. ಇಂದಿಗೆ ಒಂದಷ್ಟು ಬದಲಾವಣೆಯಾಗಿದೆ. ಆದರೂ ಬಹುತೇಕ ಹೊಟೇಲ್ ಅಥವಾ ರೆಸ್ಟೋರೆಂಟ್ ಗಳು ನಡೆಸುವುದು ಪಾಕಿಸ್ತಾನಿ ಅಥವಾ ಬಾಂಗ್ಲಾದೇಶಿಗಳು. ಅವರ ಹೊಟೇಲ್ ಮುಂದೆ ಪಾಕಿಸ್ತಾನಿ ಎಂದು ಹಾಕಿದರೆ ಲೋಕಲ್‌ನಿಂದ ಹಿಡಿದು ಟೂರಿಸ್ಟ್‌ಗಳು ಹೊಟೇಲ್ ಒಳಗೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಇಂಡಿಯನ್ ಕ್ಯೂಸಿನ್ ಎಂದು ಹಾಕುತ್ತಾರೆ. ಇದ್ದುದರಲ್ಲಿ ನೇಪಾಳಿಗಳು ವಾಸಿ. ಧೈರ್ಯವಾಗಿ ನೇಪಾಳಿ ರೆಸ್ಟೋರೆಂಟ್ ಎಂದು ಹಾಕಿಕೊಳ್ಳುತ್ತಾರೆ. ಹೀಗೆ ಪಾಕಿಸ್ತಾನಿ ಮಾಲೀಕನ ಹೊಟೇಲ್ ಒಂದರಲ್ಲಿ ಊಟಕ್ಕೆ ಕುಳಿತಿದ್ದೆವು. ಒಬ್ಬ ವ್ಯಕ್ತಿ ಒಂದು ಪಿಜ್ಜಾ ಡೆಲಿವರಿಗೆ ಬಳಸುವ ಬ್ಯಾಗ್ ಹಿಡಿದು ಒಳಬಂದ. ನಂತರ ಹೊಟೇಲ್ ಮಾಲೀಕನಿಗೆ ಒಂದಷ್ಟು ದುಡ್ಡು ನೀಡಿ, ಟೇಬಲ್ ಒಂದರಲ್ಲಿ ಕುಳಿತು ನಮ್ಮನ್ನು ನೋಡಲು ಶುರು ಮಾಡಿದ. ಮೊದಮೊದಲು ನಾವಷ್ಟು ಗಮನವನ್ನು ಕೊಡಲಿಲ್ಲ. 'ಅವನಿಗೆ ಹಸಿವಾದಂತಿದೆ, ಒಮ್ಮೆ ವಿಚಾರಿಸಿ ನೋಡು' ಎಂದಳು ರಮ್ಯ. ಅವನನ್ನು ಮಾತನಾಡಿಸಿದಾಗ ತಿಳಿದದ್ದು ಅವನು ಇನ್ನೂ ಕಾನೂನು ಬಾಹಿರವಾಗಿ ನೆಲೆ ನಿಂತಿರುವ ವಲಸಿಗ. ಮೂಲತಃ ಪಾಕಿಸ್ತಾನಿ. ಲಾಲಾಜಿ ಹೊಟೇಲ್‌ನಲ್ಲಿ ನಿತ್ಯವೂ 20/30 ಸಮೋಸ ತೆಗೆದುಕೊಂಡು ಹೋಗಿ ಅದನ್ನು ಪಾಕಿಸ್ತಾನಿ, ಬಾಂಗ್ಲಾದೇಶೀಯರು ಹೆಚ್ಚಾಗಿ ಇರುವ ಜಾಗದಲ್ಲಿ ಮಾರಿಕೊಂಡು ಬರುವ ಕೆಲಸ ಮಾಡುತ್ತಾ ದಿನ ಕಳೆಯುತ್ತಿದ್ದ. 10/15 ಯುರೋ ಅವನ ದಿನದ ಸಂಪಾದನೆ! ಇದರಲ್ಲಿ ಅವನ ಜೀವನ ನಡೆಯಬೇಕು. ಹೀಗೆ ರೆಸಿಡೆನ್ಸಿ ಪರ್ಮಿಟ್ ಇಲ್ಲದೆ ಎಂಟು ವರ್ಷದಿಂದ ಅಲೆಮಾರಿ ಬದುಕು ಸವೆಸುತ್ತಿದ್ದ ಅವನು ಅನ್ನ ತಿಂದು ಆರು ತಿಂಗಳಾಗಿತ್ತಂತೆ. ’ಭಾಯ್ ಮಾಫ್ ಕರ್ನಾ. ಆಪ್ ಲೋಗ್ ಬಿರಿಯಾನಿ ಖಾ ರಹೆ ಥೆ ಇಸ್ ಲಿಯೇ ದೇಖಾ... ಮಾಫ್ ಕರ್ನಾ' ಎಂದನಾತ. ಇಂದಿಗೆ ಅವನ ಹೆಸರು ಮರೆತು ಹೋಗಿದೆ. ಅವನಿಗೆ ಒಂದು ಪ್ಲೇಟು ಚಿಕನ್ ಬಿರಿಯಾನಿ ಕೊಡಿಸಿದೆ. ಆರು ತಿಂಗಳಿಂದ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಒಂದು ಅಥವಾ ಎರಡು ಸಮೋಸ ತಿಂದು ನೀರು ಕುಡಿದು ಮಲಗುವುದು ಮಾಮೂಲಾಗಿ ಬಿಟ್ಟಿದೆ. ಸಮೋಸ ಎಂದರೆ ವಾಕರಿಕೆ, ವಾಂತಿ ಬರುತ್ತದೆ ಎಂದವನ ಕಣ್ಣಲ್ಲಿ ಬಿರಿಯಾನಿ ತಿನ್ನುವಾಗ ಒಂದಷ್ಟು ಹೊಳಪು ಕಂಡಿತು.

ಯುರೋಪು ಎಂದರೆ ಅಥವಾ ಅಮೆರಿಕ ಎಂದಾಕ್ಷಣ ಅಲ್ಲಿ ಎಲ್ಲವೂ ಸುಂದರ ಎನ್ನುವ ಭಾವನೆಯಿಂದ ಸಾಕಷ್ಟು ಜನ ವಲಸೆ ಹೋಗುತ್ತಾರೆ. ಅಲ್ಲಿನ ನೆಲದ ಬಗ್ಗೆ ಅರಿವಿಲ್ಲದ, ವಿದ್ಯಾಭ್ಯಾಸವಿಲ್ಲದ ಮುಕ್ಕಾಲು ಪಾಲು ವಲಸಿಗರ ಕಥೆಯಿದು. ಇಲ್ಲಿ ನೋವುಂಡವರು ಊರಿಗೆ ಹೋದಾಗ ಸುಣ್ಣ ಬಣ್ಣ ಹಚ್ಚಿ ಸುಖವನ್ನು ವರ್ಣಿಸುತ್ತಾರೆ. ಹೀಗಾಗಿ ಯುರೋಪಿನಲ್ಲಿ ದೊಡ್ಡ ಮಟ್ಟದಲ್ಲಿ ಬಾಂಗ್ಲಾ, ಪಾಕಿಸ್ತಾನ ಮತ್ತು ನಮ್ಮ ಪಂಜಾಬಿಗಳನ್ನು ಹೀಗೆ ವರ್ಷಾನುಗಟ್ಟಲೆ ಅಲ್ಲಿಯೂ ಇಲ್ಲದ, ಇಲ್ಲಿಯೂ ಇಲ್ಲದ ತ್ರಿಶಂಕು ಬದುಕು ಬದುಕುವುದನ್ನು ಕಾಣಬಹುದು.

ಹೆಗ್ಗಣ ದೇಶಾಂತರ ಹೋದರೂ ನೆಲ ಕೊರೆಯುವುದು ತಪ್ಪುವುದಿಲ್ಲ ಎನ್ನುವ ಮಾತು, ಪಾಪಿ ಸಮುದ್ರ ಹೊಕ್ಕರೆ ಮೊಣಕಾಲುದ್ದ ನೀರು ಎನ್ನುವ ಗಾದೆ ಮಾತು, ಇಂಥ ಸನ್ನಿವೇಶಕ್ಕೆ ತಕ್ಕಹಾಗಿವೆ. ಕೊನೆಗೂ ನಾವು ಪಡೆದು ಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆಯಿಲ್ಲಿ?

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?