ಸ್ಪೇನ್ ದೇಶದಲ್ಲೂ ಆಚರಿಸುತ್ತಾರೆ ದೀಪಾವಳಿ !
ಪ್ರತಿ ವರ್ಷ ಸೆಪ್ಟೆಂಬರ್ ಅಂತ್ಯದ ವೇಳೆಗೆ (18ರಿಂದ 24) ಬಾರ್ಸಿಲೋನಾದಲ್ಲಿ ಮೆರ್ಸೆ (merce ) ಎನ್ನುವ ಹಬ್ಬ ಐದು ದಿನಗಳ ಕಾಲ ನಡೆಯುತ್ತೆ. ಇದು ನಮ್ಮ ದೀಪಾವಳಿಯ ತಮ್ಮ. ಹೌದು ನಿಮ್ಮ ಊಹೆ ಸರಿ ಇದೆ. ಪಟಾಕಿ ಸಕತ್ ಹೊಡೆಯುತ್ತಾರೆ. ಹಬ್ಬಕ್ಕೆ ಮೂರ್ನಾಲ್ಕು ದಿನ ಮುಂಚೆಯೇ ಪಾರ್ಕ್ ನಲ್ಲಿ ಪಟಾಕಿ ಮಾರುವ ಅಂಗಡಿ ಠಿಕಾಣಿ ಹೂಡಿರುತ್ತೆ. ಮಕ್ಕಳು ಹೆತ್ತವರ ಕೈ ಹಿಡಿದು ಪಟಾಕಿ ಕೊಳ್ಳಲು ಹೋಗುವ ರೀತಿ ಎಲ್ಲೆಡೆ ಸೇಮ್!
- ರಂಗಸ್ವಾಮಿ ಮೂಕನಹಳ್ಳಿ
ಅವರು ಯುರೋಪಿಯನ್ನರು, ಬಹಳ ಮುಂದುವರಿದ ಜನ, ಅವರು ತಮ್ಮ ಪುರಾತನ ರೀತಿ ನೀತಿಗಳನ್ನು ಪಾಲಿಸುತ್ತಾರೆಯೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬಂದಿರುತ್ತದೆ. ನಿಮಗೆಲ್ಲಾ ತಿಳಿದಿರಲಿ, ಯೂರೋಪು ಇಂದಿಗೂ ತನ್ನತನವನ್ನು ಬಿಟ್ಟು ಕೊಡದ ಒಂದು ಪುಟಾಣಿ ಹಳ್ಳಿ. ಜಗತ್ತು ತಂತ್ರಜ್ಞಾನದ ಸಹಾಯದಿಂದ ಹೆಚ್ಚು ಮುಂದುವರಿದರೂ ಇವರು ಮಾತ್ರ ತಮ್ಮ ಹಳೆಯ ಕಾಲದ ಆಚರಣೆಗಳನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಎಲ್ಲಕ್ಕಿಂತ ಅತ್ಯಂತ ಖುಷಿ ಕೊಡುವ ವಿಷಯವೆಂದರೆ, ಹೊಸ ತಲೆಮಾರಿನ ಜನತೆ ಕೂಡ ಇಂಥ ಹಬ್ಬ, ಆಚರಣೆಗಳಲ್ಲಿ ಬಹಳ ಆಸ್ಥೆಯಿಂದ ಭಾಗವಹಿಸುವುದು. ಹೊಸತು ಬಂತೆಂದು ಹಳತನ್ನು ಬಿಡುವ, ಹಳತನ್ನು ಹೀಯಾಳಿಸುವ ಮನಸ್ಥಿತಿ ಇಲ್ಲಿಲ್ಲ. ಹಳೇ ಬೇರು, ಹೊಸ ಚಿಗುರು ಇದ್ದರೆ ಜೀವನ ಸೊಗಸು ಎನ್ನುವ ಮಂತ್ರವನ್ನು ಇವರು ಪಾಲಿಸುತ್ತಿದ್ದಾರೆ.
ಸ್ಪೇನ್ ಹಬ್ಬಗಳ ವಿಷಯದಲ್ಲಿ ಥೇಟ್ ಭಾರತವೇ ಸರಿ. ವರ್ಷದಲ್ಲಿ ಕಡಿಮೆಯೆಂದರೂ ಇಪ್ಪತ್ತೈದು ದಿನವನ್ನು ಒಂದಲ್ಲ ಒಂದು ಹಬ್ಬದ ಹೆಸರಲ್ಲಿ ರಜಾ ಎಂದು ಇಲ್ಲಿ ಘೋಷಿಸಲಾಗುತ್ತದೆ. ಅವರು ಕ್ರಿಶ್ಚಿಯನ್ನರು. ಅವರಿಗೆ ಕ್ರಿಸ್ ಮಸ್ ದೊಡ್ಡ ಮತ್ತು ಒಂದೇ ಹಬ್ಬ ಎಂದು ನೀವು ತಿಳಿದಿದ್ದರೆ ಅದು ತಪ್ಪು. ಇವರು ಕೂಡ ಹಬ್ಬಗಳಲ್ಲಿ ನಮ್ಮನ್ನು ಹೋಲುತ್ತಾರೆ. ಹಬ್ಬದ ದಿನಗಳಲ್ಲಿ ಊಟ ಹೆಚ್ಚಾಗಿ, ಅಯ್ಯೋ ತೂಕ ಹೆಚ್ಚಾಗುತ್ತದೆ ಎಂದು ಇಲ್ಲಿನ ಜನ ಕೂಡ ಗೊಣಗುವುದು ಸಾಮಾನ್ಯ.
 ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಇತಿಹಾಸ ಕೂಡ ಇದೆ. ಅಲ್ಲದೆ ಪ್ರತೀ ಹಬ್ಬದಲ್ಲೂ ನಮ್ಮಲ್ಲಿ ಇದ್ದಂತೆ ಹಲವಾರು ಆಚರಣೆಯಿದೆ. ಜಗತ್ತಿಗೆ ಮಾತ್ರ ಕ್ರಿಸ್ ಮಸ್ ಕಣ್ಣಿಗೆ ಕಾಣುತ್ತದೆ. ಇಲ್ಲಿನ ಜನರು ಕೂಡ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಾರೆ. ನಮ್ಮಲ್ಲಿ ಇದ್ದಂತೆ ಜಾತಕ ಇಲ್ಲದಿದ್ದರೂ ಭವಿಷ್ಯವನ್ನು ನಂಬುತ್ತಾರೆ. ಇಲ್ಲಿ ಕೂಡ ಅವರಿರುವ ಪರಿಸ್ಥಿತಿ ಕೆಲಸ ಮಾಡುತ್ತದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದರೆ ಯಾರೂ ಬೇಡ ಎನ್ನುವಂತೆ ಬದುಕುತ್ತಾರೆ. ಸಂಕಟ ಬಂದಾಗ ವೆಂಕಟರಮಣ ಎನ್ನುವುದು ಕೇವಲ ಭಾರತದಲ್ಲಿ ಮಾತ್ರವಲ್ಲ ಅದು ಜಾಗತಿಕ. ಭವಿಷ್ಯ, ಟಾರೋಟ್ ಹೀಗೆ ಎಲ್ಲವನ್ನೂ ನಂಬುತ್ತಾರೆ.

ಇನ್ನೊಂದು ಮುಖ್ಯ ವಿಷಯವೇನು ಗೊತ್ತೇ? ನಾವು ಹೇಗೆ ಪ್ರತಿಯೊಂದು ತಿಂಗಳಿಗೂ ನಮ್ಮದೇ ಆದ ಮಾಸಗಳ ಹೆಸರಿನಲ್ಲಿ ಕರೆಯುತ್ತೇವೆ , ನಮ್ಮದೇ ಆದ ಕ್ಯಾಲೆಂಡರ್ ಬಳಸುತ್ತೇವೆ ಹಾಗೆ ಇಲ್ಲಿ ಇವರು ಕೂಡ ಪ್ರತಿಯೊಂದು ತಿಂಗಳನ್ನೂ ತಮ್ಮದೇ ಆದ ಹೆಸರುಗಳಲ್ಲಿ ಕರೆಯುತ್ತಾರೆ. ಇಂಗ್ಲಿಷ್ ಕ್ಯಾಲೆಂಡರ್ ಅಥವಾ ಜಗತ್ತು ಒಪ್ಪಿಕೊಂಡಿರುವ ಜನವರಿಯಿಂದ ಡಿಸೆಂಬರ್ ಕ್ಯಾಲೆಂಡರ್ ಕೇವಲ ವ್ಯಾವಹಾರಿಕ ಬಳಕೆಗೆ ಉಳಿಸಿಕೊಂಡಿದ್ದಾರೆ. ಉಳಿದಂತೆ ತಮ್ಮದೇ ಆದ ಕ್ಯಾಲೆಂಡರ್ ಪ್ರಕಾರ ಕೆಲಸ ಕಾರ್ಯ ನಡೆಸುತ್ತಾರೆ. ಕೆಲವೊಂದು ಹಬ್ಬಗಳನ್ನು ವರ್ಷದ ಅದೇ ತಿಂಗಳು ಮತ್ತು ದಿನಗಳಲ್ಲಿ ಆಚರಿಸಿದರೆ, ಕೆಲವೊಂದು ಹಬ್ಬಗಳ ದಿನಾಂಕ ಬದಲಾಗುತ್ತದೆ. ಇವರು ಕೂಡ ನಕ್ಷತ್ರಗಳ ಚಲನೆಯ ಆಧಾರದ ಮೇಲೆ ತಮ್ಮ ಕ್ಯಾಲೆಂಡರ್ ತಯಾರಿಸಿರುವುದರಿಂದ ಹೀಗಾಗುತ್ತದೆ.
ಪ್ರತಿ ವರ್ಷ ಸೆಪ್ಟೆಂಬರ್ ಅಂತ್ಯದ ವೇಳೆಗೆ (18ರಿಂದ 24) ಬಾರ್ಸಿಲೋನಾದಲ್ಲಿ ಮೆರ್ಸೆ (merce ) ಎನ್ನುವ ಹಬ್ಬ ಐದು ದಿನಗಳ ಕಾಲ ನಡೆಯುತ್ತೆ. ಇದು ನಮ್ಮ ದೀಪಾವಳಿಯ ತಮ್ಮ. ಹೌದು ನಿಮ್ಮ ಊಹೆ ಸರಿ ಇದೆ. ಪಟಾಕಿ ಸಕತ್ ಹೊಡೆಯುತ್ತಾರೆ. ಹಬ್ಬಕ್ಕೆ ಮೂರ್ನಾಲ್ಕು ದಿನ ಮುಂಚೆಯೇ ಪಾರ್ಕ್ ನಲ್ಲಿ ಪಟಾಕಿ ಮಾರುವ ಅಂಗಡಿ ಠಿಕಾಣಿ ಹೂಡಿರುತ್ತೆ. ಮಕ್ಕಳು ಹೆತ್ತವರ ಕೈ ಹಿಡಿದು ಪಟಾಕಿ ಕೊಳ್ಳಲು ಹೋಗುವ ರೀತಿ ಎಲ್ಲೆಡೆ ಸೇಮ್! ನಮ್ಮಲ್ಲಿ ಆದಂತೆ ಮುಖ ಬೆಲೆಯ ಪಟಾಕಿಯನ್ನು ಐವತ್ತು, ಅರವತ್ತು ಪ್ರತಿಶತ ಡಿಸ್ಕೌಂಟ್ ನಲ್ಲಿ ಮಾರುತ್ತಾರೆ. ಜನರು ತಮ್ಮ ಜೇಬಿನ ತಾಕತ್ತಿನ ಪ್ರಕಾರ ಪಟಾಕಿಯನ್ನು ಕೊಳ್ಳುತ್ತಾರೆ. ನಮ್ಮಲ್ಲಿ ಆದಂತೆ ಅಲ್ಲಿಯೂ ಹಗಲು ಹೊತ್ತಲ್ಲೂ ಪಟಾಕಿ ಸದ್ದು ಕೇಳಿಬರುತ್ತದೆ. ಆದರೆ ರಾತ್ರಿಯಲ್ಲಿ ಹೆಚ್ಚು ಸದ್ದು. ಹಬ್ಬ ಹೆಚ್ಚು ಜೀವಂತಿಕೆ ಪಡೆದುಕೊಳ್ಳುತ್ತದೆ.
ನಮ್ಮಲ್ಲಿ ದೀಪಾವಳಿ ಸಮಯದಲ್ಲಿ ನರಕ ಚತುರ್ದಶಿ, ಬಲಿ ಪಾಡ್ಯಮಿ, ಲಕ್ಷ್ಮಿ ಪೂಜೆ ಹೀಗೆ ಆಚರಿಸುತ್ತೇವೆ ಅಲ್ಲವೇ? ಬಲಿ ಚಕ್ರವರ್ತಿ ತನ್ನ ನಾಗೀರೀಕರು ಹೇಗೆ ಜೀವಿಸುತ್ತಿದ್ದಾರೆ ಎಂದು ನೋಡಲು ಬರುತ್ತಾನೆ ಎನ್ನುವ ನಂಬಿಕೆ ಕೂಡ ಇದೆ. ಹಾಗೆಯೇ ಇಲ್ಲಿ Mare de Deu de la Mercè, ಎನ್ನುವ ಋಷಿ (ಸಂತ)ಯನ್ನು ಗೌರವಿಸುವ, ನೆನಪಿಸಿಕೊಳ್ಳುವ ಸಲುವಾಗಿ 1902ರಿಂದ ಈ ರಿವಾಜು ಶುರುವಾಗಿದೆ.

ನಮ್ಮಲ್ಲಿ ದೀಪಾವಳಿಯಲ್ಲಿ ಏನು ಮಾಡುತ್ತಾರೆ ಎನ್ನುವುದು ಗೊತ್ತಿದೆಯಷ್ಟೆ. ಮೆರ್ಸೆ ಹಬ್ಬದಲ್ಲಿ ಏನೇನು ಮಾಡ್ತಾರೆ? ಹಬ್ಬದ ಆಚರಣೆ ಏನು ಎನ್ನುವ ಕುತೂಹಲವಿದ್ದರೆ, ಅದಕ್ಕೆ ಮುಂದಿನ ಸಾಲುಗಳಲ್ಲಿ ವಿವರಣೆಯಿದೆ.
Correfoc - Fire Run
ಮಕ್ಕಳಿಗೆ ಹಾಗು ವಯಸ್ಕರರಿಗೆ ಹೀಗೆ ಎರಡು ರೀತಿಯಲ್ಲಿ ಇದನ್ನು ವಿಭಾಗಿಸಲಾಗುತ್ತದೆ. ಹೆಸರೇ ಹೇಳುವಂತೆ ರಸ್ತೆಯಲ್ಲಿ ಎಲ್ಲೆಂದರೆ ಅಲ್ಲಿ ಪಟಾಕಿ ಹಚ್ಚಿ ಇಟ್ಟಿರುತ್ತಾರೆ. ಅವುಗಳನ್ನು ಗಮನಿಸಿ ಹೆದರದೆ, ಬೆದರದೆ ಓಡಬೇಕು ಅಷ್ಟೇ. ಇನ್ನು ಕೆಲವು ಕಡೆಗಳಲ್ಲಿ ಪಟಾಕಿ ಜತೆಗೆ ರಸ್ತೆಯಲ್ಲಿ ಬೆಂಕಿಯನ್ನು ಸಹ ಹಾಕಿರುತ್ತಾರೆ. ಅಲ್ಲಲ್ಲಿ ಜಾಗ ಮಾಡಿಕೊಂಡು ಬೆಂಕಿಯಿಂದ ಬಚಾವಾಗುತ್ತ ಓಡಬೇಕಾಗುತ್ತದೆ. ವಯಸ್ಕರರ ಜತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನ ಕೂಡ ಫೈರ್ ವರ್ಕ್ ನಲ್ಲಿ ತೊಡಗಿರುತ್ತಾರೆ. ಹೀಗಾಗಿ ಇದು ಇನ್ನಷ್ಟು ಕಷ್ಟಕರ. ಇದರಲ್ಲಿ ಎಲ್ಲಾ ಜನರೂ ಭಾಗವಹಿಸಬೇಕು ಎನ್ನುವ ಕಡ್ಡಾಯವೇನಿಲ್ಲ. ಅವರವರ ದೈಹಿಕ ತಾಕತ್ತು ಇಚ್ಛೆಗೆ ಅನುಗುಣವಾಗಿ ಜನರು ಇದರಲ್ಲಿ ಪಾಲ್ಗೊಳ್ಳುತ್ತಾರೆ.
Castellers - Human Towers
ಹೆಸರೇ ಹೇಳುವಂತೆ ಒಬ್ಬರ ಮೇಲೊಬ್ಬರು ನಿಂತು ನಿಧಾನವಾಗಿ ದೊಡ್ಡ ಗೋಡೆ ಕಟ್ಟುತ್ತಾರೆ. ಕೆಳಗಿನ ಸಾಲಿನಲ್ಲಿ ಹತ್ತು ಜನರಿದ್ದರೆ ನಂತರದ ಹಂತದಲ್ಲಿ ಆ ಸಂಖ್ಯೆ ಕಡಿಮೆಯಾಗುತ್ತದೆ. ಹೀಗೆ ಕೊನೆಗೆ ಗುಂಪಿನ ಚಿಕ್ಕ ಹುಡುಗ ಎಲ್ಲರಿಗಿಂತ ಮೇಲೆ ನಿಂತು ಜನರಿಗೆ ಕೈ ಬೀಸುತ್ತಾನೆ. ಇದು ಅತ್ಯಂತ ಶ್ರಮದಾಯಕ. ಒಬ್ಬರ ನಿಗಾ ಕಡಿಮೆ ಆದರೂ ಎಲ್ಲರೂ ಬೀಳುವುದು ಖಂಡಿತ. ಹೀಗಾಗಿ ಇದು ದೈಹಿಕ ಶಕ್ತಿಯ ಜತೆಗೆ ಮಾನಸಿಕ ಸಿದ್ಧತೆಯನ್ನು ಕೂಡ ಬಯಸುತ್ತದೆ. ಸ್ಪೇನ್ ದೇಶದಲ್ಲಿ ಈ ಹಬ್ಬದ ಸಮಯದಲ್ಲಿ ಇದನ್ನು ಬಹಳಷ್ಟು ಕಡೆ ಏರ್ಪಡಿಸುತ್ತಾರೆ. ಈ ಹಬ್ಬದ ಹೊರತಾಗಿ ಕೂಡ ಹ್ಯೂಮನ್ ಟವರ್ ಕಟ್ಟುವುದು ಸ್ಪೇನ್‌ನಲ್ಲಿ ಸಾಮಾನ್ಯ.

Gigantes (Giants Parade)
ರಾಜ, ರಾಣಿಯರ ದೊಡ್ಡ ಪ್ರತಿಮೆಗಳ ಒಳಗೆ ಜನರು ಹೊಕ್ಕು ಅವುಗಳನ್ನು ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಾರೆ. ಇವರ ಹಿಂದೆ ಮುಂದೆ, ಡೋಲು ಬಾರಿಸುತ್ತ ಒಂದಷ್ಟು ಜನರ ಗುಂಪು ನಡೆದು ಹೋಗುತ್ತದೆ. ಸ್ಪೇನ್‌ನ ರಾಜ ರಾಣಿಯರ ಮುಖವನ್ನು ಹೋಲುವ ದೊಡ್ಡ ಬೊಂಬೆಗಳ ಜತೆಗೆ, ಇತರ ಪ್ರಸಿದ್ಧ ವ್ಯಕ್ತಿಗಳನ್ನು ಹೋಲುವ ಬೊಂಬೆಗಳನ್ನು ಕೂಡ ಇತ್ತೀಚೆಗೆ ಮೆರವಣಿಗೆಯಲ್ಲಿ ತರುತ್ತಿದ್ದಾರೆ.
ಇದಿಷ್ಟೇ ಅಲ್ಲ ಕಣ್ರೀ. ನಿಮಗೆ ಆಶ್ಚರ್ಯ ಅನಿಸುವ ವಿಷಯ ಕೂಡ ಇದೆ . ನಮ್ಮಲ್ಲಿ ಪ್ರಾಣಿದಯಾ ಸಂಘದವರು ಪಟಾಕಿ ಹೊಡೆಯುವುದರಿಂದ ನಾಯಿಗಳಿಗೆ ಭಯವಾಗುತ್ತದೆ , ಪರಿಸರ ಹಾಳಾಗುತ್ತದೆ ಎಂದಂತೆ, ಇಲ್ಲಿಯೂ ಪ್ರಾಣಿದಯಾ ಸಂಘದವರು ನಾಯಿಗಳು ಬೆಚ್ಚಿಬೀಳುತ್ತವೆ ಹೀಗಾಗಿ ಪಟಾಕಿ ಹೊಡೆಯಬೇಡಿ ಅಂತ ಫರ್ಮಾನು ಹೊರಡಿಸುತ್ತಾರೆ. ಇನ್ನಷ್ಟು ಮಂದಿ ಪರಿಸರ ಅಂತ ಶುರು ಮಾಡುತ್ತಾರೆ. ಕೆಲವೊಂದು ವಿಷಯಗಳು ಜಾಗತಿಕ. ಆದರೆ ಇಲ್ಲಿನ ಬಹುತೇಕ ಜನರು ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ. ಅಚ್ಚರಿ ಎನ್ನುವಂತೆ ಹಬ್ಬದ ಹಿಂದೆ ಮುಂದೆ ಶುರುವಾಗುವ ಇಂಥ ವರಾತಗಳು ಆ ನಂತರದ ದಿನಗಳಲ್ಲಿ ನಿಂತು ಹೋಗುತ್ತವೆ.
 
                         
                     
                                            
                                             
                                                
                                                