Monday, February 23, 2026
Monday, February 23, 2026

ರಿವರ್ ಎಡ್ಜ್ ಕಯಾಕಿಂಗ್‌ನಲ್ಲಿ ಕಾಂಡ್ಲಾ ಸುತ್ತಿ ಬಂದೆ

ಮುಂದೆ ಹೋಗುತ್ತಿದ್ದಂತೆ ಕಾಂಡ್ಲಾ ಕಾಡಿನ ಮಹತ್ವ, ಹೇಗೆ ಅದು ಸುನಾಮಿಯನ್ನು ಕೂಡಾ ತಡೆಯಬಲ್ಲುದು ಎಂಬುದನ್ನು ನಮ್ಮ ಜತೆಗೆ ಬಂದಿದ್ದ ಸಿಬ್ಬಂದಿ ವಿವರಿಸುತ್ತಾ ಸಾಗಿದರು. ನಡು-ನಡುವೆ ಕಾಣುವ ಹಕ್ಕಿಗಳನ್ನು ನೋಡುತ್ತಾ, ನೀರಿನ ಮೇಲೆ ಸಾಗುತ್ತಿದ್ದರೆ ಈ ಸೃಷ್ಟಿಯ ಅದ್ಭುತಕ್ಕೆ ಬೆರಗಾಗದೇ ಇರಲು ಸಾಧ್ಯವಿಲ್ಲ ಬಿಡಿ.

  • ರವಿಶಂಕರ್ ಶಾಸ್ತ್ರಿ

ಕಾಂಡ್ಲಾ ಕಾಡಿನ ನಡುವೆ ದೋಣಿ ಸವಾರಿ. ನಿಧಾನಕ್ಕೆ ಉಟ್ಟು ಹಾಕುತ್ತಾ ಹೋದಂತೆ ಅದೊಂದು ಮಾಯಾಲೋಕ. ಸುತ್ತಲೂ ನೀರು, ಹಸಿರು ಕಾಂಡ್ಲಾ ಕಾಡು, ನೀವು ಮತ್ತು ನಿಮ್ಮೊಳಗಿನ ಮೌನ. ನೀವೇ ಉಟ್ಟು ಹಾಕುವಿರಾದರೆ ಸರಿ, ಇಲ್ಲವಾದರೆ ನಿಮ್ಮ ಜತೆಗೆ ಸಹಯಾಕ್ಕಾಗಿ ಸಿಬ್ಬಂದಿ ಬರುತ್ತಾರೆ. ಕಾಂಡ್ಲಾ ಕಾಡಿನ ಹಿಂದಿರುವ ಕಥೆಗಳನ್ನೂ ಬಿಚ್ಚಿಡುತ್ತಾರೆ. ಮರೆಯಲಾಗದ ಈ ಅನುಭವಕ್ಕೆ ಸಾಕ್ಷಿಯಾಗಲು ಉಡುಪಿಯ ಸಾಲಿಗ್ರಾಮದ ಬಳಿಯಿರುವ ಪಡುಕೆರೆ-ಪರಂಪಳ್ಳಿ ರಸ್ತೆಯಲ್ಲಿರುವ ರಿವರ್ ಎಡ್ಜ್ ಕಯಾಕಿಂಗ್ ಕೇಂದ್ರಕ್ಕೆ ಬನ್ನಿ.

ಇದನ್ನೂ ಓದಿ: ಭಾರತದ ಕಟ್ಟಕಡೆಯ ಗ್ರಾಮದಲ್ಲಿ ಸೌತ್ ಇಂಡಿಯನ್ ಸಾಂಬಾರು..!

ನಮಗೆ ಕಯಾಕಿಂಗ್ ಹೋಗಬೇಕೆಂದು ಅವರನ್ನು ಸಂಪರ್ಕಿಸಿದಾಗ, ಯಾವ ಸಮಯದ ಸೂಕ್ತವೆಂದು ಹೇಳಿದರು. ನಾವಿರುವಲ್ಲಿಗೇ ಬಂದು ನಮ್ಮನ್ನು ಕರೆದುಕೊಂಡೂ ಹೋದರು. ಲೈಫ್ ಜಾಕೆಟ್ ಹಾಕಿಕೊಳ್ಳುವಂತೆ ಹೇಳುವುದನ್ನು ಅವರು ಮರೆಯಲಿಲ್ಲ. ಕಾರ್ ಕೀಯನ್ನು ಜೇಬಿನಲ್ಲಿಟ್ಟುಕೊಳ್ಳದೆ ಬ್ಯಾಗಿನೊಳಗೆ ಇಡಿ. ಹೀಗೆ ಹಲವು ಸಲಹೆಗಳನ್ನು ಅವರು ನಮಗೆ ನೀಡಿದರು.

Untitled design (49)

ನಮಗೂ ಇದು ಜೀವನದಲ್ಲಿ ಮೊದಲ ದೋಣಿ ಪ್ರಯಾಣ. ಆದರೆ, ನಮ್ಮೊಂದಿಗೆ ಬಂದ ಸಿಬ್ಬಂದಿ ನಮಗೆ ದೋಣಿ ನಡೆಸುವುದು ಹೇಗೆ, ಎಡ-ಬಲಗಳಿಗೆ ತಿರುಗಿಸುವುದು ಹೇಗೆ ಎಂಬುದನ್ನು ಸರಳ ಮತ್ತು ಸ್ಟಷ್ಟವಾಗಿ ಹೇಳಿಕೊಟ್ಟರು. ನಾನು ನನ್ನ ಮಗನ ಜತೆ ದೋಣಿಯಲ್ಲಿ ಹೊರಟೆ. ಅತ್ತೆ, ಮಾವ, ಪತ್ನಿಯ ಜತೆಗೆ ರಿವರ್ ಎಡ್ಜ್ ಕಯಾಕಿಂಗ್ನ ಸಿಬ್ಬಂದಿಯೂ ಇನ್ನೊಂದು ದೋಣಿಯಲ್ಲಿ ನಮ್ಮನ್ನು ಹಿಂಬಾಲಿಸಿದರು. ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದನ್ನು ಆಗಾಗ ಗೈಡ್ ಮಾಡುತ್ತಿದ್ದ ಕಾರಣ ಯಾವುದೇ ಗೊಂದಲಕ್ಕೆ ಆಸ್ಪದವಿರಲಿಲ್ಲ.

ಮುಂದೆ ಹೋಗುತ್ತಿದ್ದಂತೆ ಕಾಂಡ್ಲಾ ಕಾಡಿನ ಮಹತ್ವ, ಹೇಗೆ ಅದು ಸುನಾಮಿಯನ್ನು ಕೂಡಾ ತಡೆಯಬಲ್ಲುದು ಎಂಬುದನ್ನು ನಮ್ಮ ಜತೆಗೆ ಬಂದಿದ್ದ ಸಿಬ್ಬಂದಿ ವಿವರಿಸುತ್ತಾ ಸಾಗಿದರು. ನಡು-ನಡುವೆ ಕಾಣುವ ಹಕ್ಕಿಗಳನ್ನು ನೋಡುತ್ತಾ, ನೀರಿನ ಮೇಲೆ ಸಾಗುತ್ತಿದ್ದರೆ ಈ ಸೃಷ್ಟಿಯ ಅದ್ಭುತಕ್ಕೆ ಬೆರಗಾಗದೇ ಇರಲು ಸಾಧ್ಯವಿಲ್ಲ ಬಿಡಿ. ಕಾಂಡ್ಲಾ ಗಿಡಗಳ ನಡುವೆ ನುಸುಳಿ ಹೋಗುತ್ತಿದ್ದಂತೆ ಕೆಲವೆಡೆ ನಮ್ಮ ದೋಣಿ ಮರಗಳ ಬೇರುಗಳ ಎಡೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿತ್ತು. ಅದರಿಂದ ಬಿಡಿಸಿಕೊಂಡು ಮತ್ತೆ ಮುಂದುವರಿದರೆ, ಸುತ್ತಲೂ ನೀರು, ಹಸಿರು ಕಾಂಡ್ಲಾ ಕಾಡು. ಆ ದೃಶ್ಯ ವೈಭವವನ್ನು ನಾನಂತೂ ಎಂದೂ ಮರೆಯಲಾಗದು.

ಮುಂದೆ ಹೋಗುತ್ತಿದ್ದಂತೆ ಒಂದೆಡೆ ಕಾಂಡ್ಲಾ ಗಿಡಗಳ ನಡುವೆ ಸಾಮಾನ್ಯವಾಗಿ ಗುರುತಿಸಲಾಗದ ಜಾಗದಲ್ಲಿ ಮುನ್ನಡೆಸಿ, 'ಈಗಿರುವ ಪ್ರದೇಶ ಕರ್ನಾಟಕ ಮ್ಯಾಪಿನ ಹಾಗೆ ಕಾಣುತ್ತದೆ' ಎಂದರು. ಬರಿಕಣ್ಣಿಗೆ ನಮಗೆ ಸ್ಪಷ್ಟವಾಗಿ ಕಾಣದಿದ್ದರೂ, ಡ್ರೋನ್ ಕಣ್ಣಿನಲ್ಲಿ ನೋಡಿದರೆ ಕರ್ನಾಟಕದಂತೆ ಈ ಪ್ರದೇಶ ಕಾಣುತ್ತದೆ.

ಮುಂದುವರಿದಂತೆ ಒಂದೆಡೆ ಸಣ್ಣ ದ್ವೀಪವಿತ್ತು. ಅಲ್ಲಿ ನಾವು ದೋಣಿಯಿಂದ ಇಳಿಯಬಹುದಾದ ಜಾಗಕ್ಕೆ ಕರೆದುಕೊಂಡು ಹೋದರು. ಮೊಣಕಾಲೆತ್ತರಕ್ಕಿದ್ದ ನೀರಿನಲ್ಲಿ ಇಳಿದು ಬೇಕಾದಷ್ಟು ಫೊಟೋ, ವಿಡಿಯೋ ತೆಗೆದುಕೊಳ್ಳಲು ಅಲ್ಲಿ ಅವಕಾಶವಿತ್ತು. ಅಲ್ಲಿನ ಬಿಳಿಯಾದ ಮರಳು ತುಂಬಾ ನುಣ್ಣಗಿದ್ದು, ಅದನ್ನು ಗಾಜಿನ ತಯಾರಿಕೆಯಲ್ಲಿ ಬಳಸುತ್ತಾರಂತೆ. ಆದರೆ, ಅಲ್ಲಿ ಕಡ್ಡಾಯವಾಗಿ ಮರಳುಗಾರಿಕೆ ಮಾಡದಂತೆ ನಿಷೇಧವಿರುವ ಕಾರಣ ಅದಿನ್ನೂ ಉಳಿದುಕೊಂಡಿದೆ! ಇಲ್ಲವಾದರೆ ಅದು ಇಷ್ಟೊತ್ತಿಗೆ ಯಾವ ಗಾಜಿನ ತುಣುಕಾಗಿರುತ್ತಿತ್ತೋ, ಇಲ್ಲಿ ಅದಿನ್ನೆಷ್ಟು ಕುಳಿಗಳಾಗಿರುತ್ತಿದ್ದವೋ ಏನೋ.

Untitled design (50)

ಮತ್ತೆ ವಾಪಸ್ ನೀರಿನಲ್ಲಿ ಬರುವಾಗ ಅಚಾನಕ್ಕಾಗಿ 'ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು' ಹಾಡು ಕೇಳಿ ಬಂತು. ಇದೆಲ್ಲಿಂದ ಎಂದು ನಾವು ಅಚ್ಚರಿಪಟ್ಟರೆ, ನಮ್ಮ ಜತೆಗಿದ್ದ ಲೋಕೇಶ್ ನಗುತ್ತಿದ್ದರು. ದೋಣಿಯಲ್ಲಿದ್ದ ಸ್ಪೀಕರ್‌ನಲ್ಲಿ ಅವರೇ ಮೊಬೈಲ್ ಮೂಲಕ ಹಾಡು ಹಾಕಿದ್ದರು. ಪ್ರವಾಸಿಗನಿಗೆ ಖುಷಿ ಮತ್ತು ಮರೆಯಲಾಗದ ಕ್ಷಣಗಳನ್ನು ಕಟ್ಟಿಕೊಡಬೇಕು ಎನ್ನುವ ಅವರ ಪ್ರಯತ್ನಕ್ಕೆ ಮನಸೋಲಲೇಬೇಕು.

ಒಂದು ಗಂಟೆಗೂ ಹೆಚ್ಚುಕಾಲ ಸುತ್ತಾಡಿ ಕೊನೆಗೆ ಮರಳಿ ಬರುವಾಗ ಆಯಾಸದ ಸುಳಿವೂ ಇರಲಿಲ್ಲ. ಅಷ್ಟೊಂದು ಸುದೀರ್ಘವಾಗಿ ಉಟ್ಟು ಹಾಕಿದರೂ ಆಯಾಸವೇನೂ ಆಗಿರಲಿಲ್ಲ. ಮತ್ತೆ ದಡಕ್ಕೆ ಬಂದಾಗ ಕೆಳಗಿಳಿಯಲು ಮನಸೇ ಬರಲಿಲ್ಲ. ಮತ್ತೆ ಬರಲೇಬೇಕು ಎನ್ನುವ ಆಶಯದೊಂದಿಗೆ ನಮ್ಮ ಮುಂದಿನ ಗಮ್ಯದೆಡೆಗೆ ಸಾಗಿದೆವು.

ಇಲ್ಲಿಗೆ ಬರುವ ಮೊದಲು ಬುಕ್ ಮಾಡುವುದು ಒಳ್ಳೆಯದು. ಮೊದಲೇ ಅವರನ್ನು ಸಂಪರ್ಕಿಸಿದರೆ ಯಾವ ಸಮಯ ಸೂಕ್ತ ಎನ್ನುವುದನ್ನು ಅವರೇ ತಿಳಿಸಿಕೊಡುತ್ತಾರೆ. ಇದರಿಂದಾಗಿ ನಿಮ್ಮ ಕಯಾಕಿಂಗ್ ಅನುಭವ ಸ್ಮರಣೀಯವಾಗುವುದರಲ್ಲಿ ಸಂದೇಹವಿಲ್ಲ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..