ಕಾಳಿ ರಾಫ್ಟಿಂಗ್ – ಸಾಹಸಕ್ಕಿಲ್ಲಿ ಸಾಕಷ್ಟು ಅವಕಾಶ
ರಾಫ್ಟಿಂಗ್ ಜಲಕ್ರೀಡೆಗಾಗಿ ವೀಕೆಂಡ್ ಹಾಗೂ ರಜಾ ದಿನಗಳಲ್ಲಿ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಾಲು ಸಾಲು ರಜೆಗಳು ಬಂತೆಂದರೆ ದಾಂಡೇಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಇಲ್ಲಿರುವ ಸಾಕಷ್ಟು ರೆಸಾರ್ಟ್‌ಗಳು ಸಹ ರಾಫ್ಟಿಂಗ್‌ನಿಂದಲೇ ಎಲ್ಲ ಪ್ರವಾಸಿಗರನ್ನು ಸೆಳೆಯುತ್ತಿವೆ ಎಂದರೆ ತಪ್ಪಾಗಲಾರದು.
- ದಿನೇಶ ಆಡ್ಕಾರ
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿಸ್ತಾರವಾಗಿ ಹರಡಿರುವ ಜೋಯಿಡಾ- ದಾಂಡೇಲಿ ನೈಸರ್ಗಿಕ ಸೌಂದರ್ಯದ ಕಣಜ. ಅನೇಕ ಜೀವ ವೈವಿಧ್ಯತೆಗಳ ತಾಣವಾಗಿರುವ ದಾಂಡೇಲಿ ಪರಿಸರ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಸೌಮ್ಯವಾಗಿ ಉಗಮಗೊಂಡ ನದಿ ನಂತರ ರಭಸವಾಗಿ ಬಂಡೆಗಳ ಸುತ್ತ ಹಾದು ಹರಿಯುವ ಕಾಳಿ ನದಿ ಮನುಷ್ಯನ ಜೀವನದ ಏರಿಳಿತವನ್ನು ನೆನಪಿಸುತ್ತದೆ. ಇದೇ ಭೋರ್ಗರೆಯುವ ಏರಿಳಿತದಲ್ಲಿ ನಡೆಸಲಾಗುವ ರಾಫ್ಟಿಂಗ್ ಸಾಹಸ ಜಲಕ್ರೀಡೆ ಯುವ ಸಮುದಾಯವನ್ನು ಸಾಹಸಿಗರನ್ನು ಆಕರ್ಷಿಸುತ್ತದೆ.
ಇದನ್ನೂ ಓದಿ: ರಿವರ್ ಎಡ್ಜ್ ಕಯಾಕಿಂಗ್‌ನಲ್ಲಿ ಕಾಂಡ್ಲಾ ಸುತ್ತಿ ಬಂದೆ
ಜೀವನದಲ್ಲಿ ಒಮ್ಮೆಯಾದರೂ ರಾಫ್ಟಿಂಗ್ ಅನುಭವದ ರುಚಿಯನ್ನು ಸವೆಯದಿದ್ದರೆ ಏನೋ ಕಳೆದುಕೊಂಡಂತೆ ಭಾಸವಾಗುವುದಂತೂ ಸತ್ಯ. ಇದನ್ನು ಖಂಡಿತವಾಗಿಯೂ ಪದಗಳಿಂದ ವರ್ಣಿಸಲಾಗದು. ನಿಗದಿತ ಸಮಯಾವಕಾಶಗಳಿಗೆ ತಕ್ಕಂತೆ ನಡೆಯುವ ರಾಫ್ಟಿಂಗ್ ಜಲಕ್ರೀಡೆಗಾಗಿ ವೀಕೆಂಡ್ ಹಾಗೂ ರಜಾ ದಿನಗಳಲ್ಲಿ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಾಲು ಸಾಲು ರಜೆಗಳು ಬಂತೆಂದರೆ ದಾಂಡೇಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಇಲ್ಲಿರುವ ಸಾಕಷ್ಟು ರೆಸಾರ್ಟ್‌ಗಳು ಸಹ ರಾಫ್ಟಿಂಗ್‌ನಿಂದಲೇ ಎಲ್ಲ ಪ್ರವಾಸಿಗರನ್ನು ಸೆಳೆಯುತ್ತಿವೆ ಎಂದರೆ ತಪ್ಪಾಗಲಾರದು.

ಇಲ್ಲಿ ಒಟ್ಟು ಎರಡು ಮಾರ್ಗಗಳಲ್ಲಿ ರಾಫ್ಟಿಂಗ್ ಮಾಡಿಸಲಾಗುತ್ತದೆ. ಗಣೇಶನಗರದಿಂದ ದಾಂಡೇಲಿಯವರೆಗೆ ಸುಮಾರು 9 ಕಿಮೀ ವ್ಯಾಪ್ತಿಯವರೆಗೆ ನಡೆಯುವ ದೀರ್ಘ ಅಂತರದ ರಾಫ್ಟಿಂಗ್ ಒಂದಾದರೆ ಇನ್ನೊಂದು ಕಡಿಮೆ ಅಂತರದ ರಾಫ್ಟಿಂಗ್. ಬೆಲೆ ಕಡಿಮೆ ಇರುವುದರಿಂದ ಹೆಚ್ಚಿನ ಪ್ರವಾಸಿಗರು ಅಲ್ಪ ಅಂತರದ ರಾಪ್ಟಿಂಗನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಸುರಕ್ಷತೆಗೆ ಹೆಚ್ಚಿನ ಆದ್ಯತೆ
ರಾಪ್ಟಿಂಗ್ ಗೈಡ್ ಮತ್ತು ಅದರಲ್ಲಿ ಭಾಗವಹಿಸುವ ಎಲ್ಲರೂ ಲೈಫ್ ಜಾಕೆಟ್ ಹಾಗೂ ಹೆಲ್ಮೆಟ್ ಅನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಗಾತ್ರಕ್ಕೆ ತಕ್ಕಂತೆ ಆರರಿಂದ ಹತ್ತು ಜನರನ್ನೂ ಹೊತ್ತು ತೇಲುವ ಬೊಟುಗಳು ಇಲ್ಲಿವೆ. ರಾಫ್ಟಿಂಗ್ ಕರೆದೊಯ್ಯುವ ಮಾರ್ಗದರ್ಶಿ (ಗೈಡ್) ಪ್ರಾರಂಭದಲ್ಲಿ ನೀರಿನ ಏರಿಳಿತದ ನಡುವೆ ಕೈಗೊಳ್ಳಲಾಗುವ ಸುರಕ್ಷತಾ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತಾನೆ. ಆತ ನಮ್ಮೊಂದಿಗೆ ಆತ್ಮೀಯತೆಯೊಂದಿಗೆ ಮಾತನಾಡಿ ಸುರಕ್ಷತೆಯ ಭರವಸೆಯನ್ನು ನಮ್ಮೊಳಗೆ ತುಂಬುವುದು ವಿಶೇಷ.

ಮೊದಲಿಗೆ ನಮ್ಮನ್ನು ನೀರಲ್ಲಿ ಇಳಿಸಿ ಫೊಟೋಗ್ರಫಿಗಾಗಿ ವಿವಿಧ ಚಟುವಟಿಕೆಗಳನ್ನು ಮಾಡಿಸುತ್ತಾನೆ. ಇದು ಪ್ರವಾಸಿಗರನ್ನು ಆಕರ್ಷಿಸಲು ಅವರ ತಂತ್ರವೂ ಹೌದು. ನೀರಿನ ಏರಿಳಿತಕ್ಕೆ ತಕ್ಕಂತೆ ಯಾವ ಥರ ಪ್ಯಾಡ್ಲಿಂಗ್ ಮಾಡಬೇಕು ಎಂಬುದನ್ನು ಅಭ್ಯಾಸ ಕೂಡ ಮಾಡಿಸುವುದು ವಿಶೇಷ. ಒಂದು ಕ್ಷಣ ಮೈಮರೆತು ನೀರಿನಲ್ಲಿ ಬಿದ್ದರೂ ಯಾವ ಸುರಕ್ಷತೆ ವಹಿಸಬೇಕು ಎನ್ನುವುದನ್ನು ಹೇಳುವುದರಿಂದ ಈಜು ಬರದಿದ್ದರೂ ಯಾವುದೇ ಹೆದರಿಕೆಯ ಅಗತ್ಯ ಇಲ್ಲ. ಬಂಡೆಗಳ ನಡುವೆ ದೋಣಿಯನ್ನು ಸಾಗಿಸುತ್ತ ರಭಸದಿಂದ ಹರಿಯುತ್ತಿರುವ ನೀರಿನಲ್ಲಿ ಬೋಟು ಮೇಲೆ ಕೆಳಗೆ ಆದಂತೆ ನೀರಿನ ಸಿಂಚನ ದೊಂದಿಗೆ ಮೈಮನಗಳೆರಡೂ ರೋಮಾಂಚನಗೊಳ್ಳುತ್ತವೆ. ನೀರಿನ ಭೋರ್ಗರೆಯುವ ಸದ್ದು, ರಾಫ್ಟಿಂಗ್ ಮಾಡುತ್ತಿರುವವರ ಖುಷಿಯ ಜೋರು ಚೀರಾಟ ಖಂಡಿತವಾಗಿಯೂ ಮರೆಯಲಾರದ ಅನುಭವ ನೀಡುತ್ತದೆ. ಇಲ್ಲಿ ಕೊಟ್ಟ ಕಾಸಿನ ಕೊಂಚ ಅಳುಕೂ ನಮ್ಮಲ್ಲಿ ಕಡೆಯವರೆಗೆ ಉಳಿಯುವುದಿಲ್ಲ. ಇದಲ್ಲದೆ ಅನೇಕ ಜಲ ಕ್ರೀಡೆಗಳು ಇಲ್ಲಿ ಇದ್ದು, ವಾರದ ತಲೆಬಿಸಿಗಳೆಲ್ಲವನ್ನು ಕಳೆಯಲು ಇದು ಹೇಳಿ ಮಾಡಿಸಿದ ತಾಣ.