Tuesday, February 24, 2026
Tuesday, February 24, 2026

ಪ್ಯಾರಿಸಿನ ಸೀನ್ ನದಿಯ ದಂಡೆಯ ಮೇಲೆ ಸಾಹಿತ್ಯದ ಧರ್ಮಛತ್ರ!

ನನಗಂತೂ ಐಫೆಲ್ ಟವರ್ ಮೇಲೆ ನಿಂತು ಪ್ಯಾರಿಸ್ ನೋಡುವುದಕ್ಕಿಂತ, 'ಶೇಕ್ಸ್‌ಪಿಯರ್ ಅಂಡ್ ಕಂಪನಿ'ಯ ಕಿಟಕಿಯಿಂದ ಸೀನ್ ನದಿಯ ಅಲೆಗಳನ್ನು ನೋಡುವುದರಲ್ಲೇ ಪರಮ ಸುಖ. ಅಲ್ಲಿ ಪುಸ್ತಕ ಕೊಳ್ಳುವುದೆಂದರೆ ಅದೊಂದು ಜೀವನ ಪ್ರೀತಿಯ ಒಪ್ಪಂದ. ಅಲ್ಲಿನ ಲೋಗೋ ಇರುವ ಆ ಹಸಿರು ಚೀಲ ಹಿಡಿದು ಹೊರಗೆ ಬರುವಾಗ ಒದಗಿಬರುವ ಆ ಗತ್ತು ಇದೆಯಲ್ಲ, ಅದು ಯಾವ ಐಫೆಲ್ ಟವರ್ ಹತ್ತಿದರೂ ಸಿಗುವುದಿಲ್ಲ. ಅದಕ್ಕೇ ಹೇಳುವುದು, ಜನ ಐಫೆಲ್ ಟವರ್ ನೋಡಿ ವಾಪಸ್ ಬರ್ತಾರೆ, ಆದ್ರೆ ನಾನು ಅಲ್ಲಿಂದ ಬರುವಾಗ ನನ್ನ ಆತ್ಮವನ್ನೇ ಆ ಪುಸ್ತಕದ ರಾಶಿಗಳ ಮಧ್ಯೆ ಬಿಟ್ಟು ಬರುತ್ತೇನೆ!

'ಶೇಕ್ಸ್‌ಪಿಯರ್ ಅಂಡ್ ಕಂಪನಿ' ಎಂಬ ಒಂದು ಅನನ್ಯ ಪುಸ್ತಕ ಲೋಕ !

ಪ್ಯಾರಿಸ್‌ಗೆ ಹೋದವರೆಲ್ಲ, ಜಗತ್ತಿನ ಪ್ರೇಮಿಗಳ ಪಾಲಿನ ಮಿನುಗುವ ಕನಸು ಮತ್ತು ನರಮಂಡಲದಂತೆ ಹಬ್ಬಿರುವ ಕಬ್ಬಿಣದ ಸಲಾಕೆಗಳ ಕೋಶವಾದ 'ಐಫೆಲ್ ಟವರ್' ಹತ್ತದೇ ಬರುವುದಿಲ್ಲ. ನಾನು ಪ್ಯಾರಿಸಿಗೆ ಹೋದಾಗಲೆಲ್ಲ ಐಫೆಲ್ ಟವರ್‌ಗೆ ಹೋಗದೇ ಬಂದಿದ್ದುಂಟು. ಆದರೆ ಒಮ್ಮೆಯೂ 'ಶೇಕ್ಸ್‌ಪಿಯರ್ ಅಂಡ್ ಕಂಪನಿ' ಎಂಬ ಪುಸ್ತಕದ ಅಂಗಡಿಗೆ ಹೋಗದೇ ಬಂದಿದ್ದಿಲ್ಲ. ಈ ಅಕ್ಷರಗಳ ದೇಗುಲಕ್ಕೆ ಹೋಗದಿದ್ದರೆ ನನ್ನ ಪ್ಯಾರಿಸ್ ಪ್ರವಾಸವೇ ಅಪೂರ್ಣ, ಏನೋ ಕಳೆದುಕೊಂಡ ಭಾವ!

ಪ್ಯಾರಿಸ್‌ನ ಬೀದಿಗಳಲ್ಲಿ ಅಡ್ಡಾಡುವುದೆಂದರೆ ಅದು ಬರೀ ಪ್ರವಾಸವಲ್ಲ, ಅದೊಂದು ಮಾದಕ ವ್ಯಸನ. ಸೀನ್ ನದಿಯ ತಣ್ಣನೆಯ ಗಾಳಿ ಮೈ ಸೋಕುತ್ತಿರುವಾಗ, ಕಣ್ಣೆದುರು ಐಫೆಲ್ ಟವರ್ ಮಿನುಗುತ್ತಿರುವಾಗ, ನಮ್ಮ ಕಾಲುಗಳು ತಾನಾಗಿಯೇ ಎಳೆದುಕೊಂಡು ಹೋಗಿ ನಿಲ್ಲುವ ಒಂದು ಜಾಗವಿದೆ. ಅದುವೇ 'ಶೇಕ್ಸ್‌ಪಿಯರ್ ಅಂಡ್ ಕಂಪನಿ'. ಹೆಸರೇನೋ ಇಂಗ್ಲಿಷ್ ಮಹಾಕವಿಯದ್ದು, ಆದರೆ ಇದರ ಉಸಿರು ಮಾತ್ರ ಅಪ್ಪಟ ಪ್ಯಾರಿಸ್‌ನದ್ದು. ಹಳೆಯ ಮರದ ಹಲಗೆಗಳು, ತುಕ್ಕು ಹಿಡಿದ ಕಬ್ಬಿಣದ ಕಂಬಗಳು ಮತ್ತು ಕೋಟಿ ಕೋಟಿ ಪದಗಳ ಭಾರ ಹೊತ್ತ ಈ ಪುಸ್ತಕದ ಅಂಗಡಿ, ಬರೀ ಪುಸ್ತಕ ವ್ಯಾಪಾರದ ಅಂಗಡಿಯಲ್ಲ, ಅದೊಂದು ಸಾಹಿತ್ಯದ ತೀರ್ಥಕ್ಷೇತ್ರ!

ಇದನ್ನೂ ಓದಿ: ಟೂರಿಸಂನಲ್ಲಿ ನಮಗಿಂತ 15 ವರ್ಷ ಮುಂದಿರುವ ಕೇರಳದಿಂದ ಕಲಿಯುವುದೇನು?

ಅಲ್ಲಿಗೆ ಹೋದರೆ ನಿಮಗೆ ಮೊದಲು ಸ್ವಾಗತ ಕೋರುವುದು ಹಳೆಯ ಕಾಗದಗಳ ಘಾಟು ವಾಸನೆ. ಆ ವಾಸನೆ ಇದೆಯಲ್ಲ, ಅದು ಯಾವುದೋ ಲೈಬ್ರರಿಯನ್ನು ನೆನಪಿಸಬಹುದು ಅಥವಾ ಪ್ರೀತಿಸಿದ ಹುಡುಗಿ ಬರೆದ ಮೊದಲ ಪತ್ರದ ವಾಸನೆಯಂತೆ ಕಾಡಬಹುದು. ಅಂಗಡಿಯೊಳಗೆ ಇಕ್ಕಟ್ಟಾದ ಕಿರುಓಣಿಗಳು, ನೆಲದಿಂದ ಚಾವಣಿ‌ವರೆಗೆ ಚಾಚಿದ ಪುಸ್ತಕಗಳು, ಎಲ್ಲೆಡೆಯೂ ಹರಡಿಕೊಂಡ ಪುಸ್ತಕಗಳ ರಾಶಿಗಳು... ಅಂದ ಹಾಗೆ, ಕಾಲಿಡಲೂ ಜಾಗವಿಲ್ಲ... ಅಲ್ಲಿ ಪುಸ್ತಕಗಳಿಲ್ಲದ ಜಾಗವೇ ಇಲ್ಲ. ಮೆಟ್ಟಿಲುಗಳ ಮೇಲೆ ಪುಸ್ತಕ, ಕಿಟಕಿಯ ಅಂಚಿನಲ್ಲಿ ಪುಸ್ತಕ, ನೆಲದ ಮೇಲೆ ಪುಸ್ತಕ, ಮೇಜಿನ ಮೇಲೆ-ಕೆಳಗೆ ಪುಸ್ತಕ, ಮಹಡಿಯ ಮೇಲೂ ಪುಸ್ತಕ, ಗೋಡೆಗಳಿಗೂ ಪುಸ್ತಕ.. ಅಷ್ಟೇ ಯಾಕೆ, ಅಲ್ಲಿನ ಗಾಳಿಯಲ್ಲೂ ಅಕ್ಷರಗಳದೇ ತೇಲಾಟ, ಹಾರಾಟ...!

Untitled design (70)

ನನಗಂತೂ ಐಫೆಲ್ ಟವರ್ ಮೇಲೆ ನಿಂತು ಪ್ಯಾರಿಸ್ ನೋಡುವುದಕ್ಕಿಂತ, 'ಶೇಕ್ಸ್‌ಪಿಯರ್ ಅಂಡ್ ಕಂಪನಿ'ಯ ಕಿಟಕಿಯಿಂದ ಸೀನ್ ನದಿಯ ಅಲೆಗಳನ್ನು ನೋಡುವುದರಲ್ಲೇ ಪರಮ ಸುಖ. ಅಲ್ಲಿ ಪುಸ್ತಕ ಕೊಳ್ಳುವುದೆಂದರೆ ಅದೊಂದು ಜೀವನ ಪ್ರೀತಿಯ ಒಪ್ಪಂದ. ಅಲ್ಲಿನ ಲೋಗೋ ಇರುವ ಆ ಹಸಿರು ಚೀಲ ಹಿಡಿದು ಹೊರಗೆ ಬರುವಾಗ ಒದಗಿಬರುವ ಆ ಗತ್ತು ಇದೆಯಲ್ಲ, ಅದು ಯಾವ ಐಫೆಲ್ ಟವರ್ ಹತ್ತಿದರೂ ಸಿಗುವುದಿಲ್ಲ. ಅದಕ್ಕೇ ಹೇಳುವುದು, ಜನ ಐಫೆಲ್ ಟವರ್ ನೋಡಿ ವಾಪಸ್ ಬರ್ತಾರೆ, ಆದ್ರೆ ನಾನು ಅಲ್ಲಿಂದ ಬರುವಾಗ ನನ್ನ ಆತ್ಮವನ್ನೇ ಆ ಪುಸ್ತಕದ ರಾಶಿಗಳ ಮಧ್ಯೆ ಬಿಟ್ಟು ಬರುತ್ತೇನೆ!

ಆ ಪುಸ್ತಕ ಅಂಗಡಿಯಲ್ಲಿ ಜಾಗವಿರುವಲ್ಲೆಲ್ಲ ಪುಸ್ತಕಗಳೇ ಆಕ್ರಮಿಸಿಕೊಂಡು ಬಿಟ್ಟಿವೆ. ಅಲ್ಲಿ ದಾರಿಯೇ ಇಲ್ಲ. ಆ ಇಕ್ಕಟ್ಟಾದ ಓಣಿಗಳಲ್ಲಿ ನೀವು ನಡೆಯುವಾಗ ನಿಮ್ಮ ಮೈಗೆ ಯಾವುದೋ ಮಹಾನ್ ಸಾಹಿತಿಯ ಆತ್ಮ ಸೋಕಿದ ಅನುಭವವಾಗಬಹುದು. ಇಲ್ಲಿ ಹೆಮಿಂಗ್ವೇ ಕುಳಿತಿದ್ದ, ಇಲ್ಲಿ ಜೇಮ್ಸ್ ಜಾಯ್ಸ್ ಬಿಕ್ಕಳಿಸಿದ್ದ, ಎಜ್ರಾ ಪೌಂಡ್ ಗಲ್ಲಕ್ಕೆ ಕೈಹಚ್ಚಿ ಕೂತು ಓದಿದ್ದ, ಟಿ.ಎಸ್.ಎಲಿಯಟ್ ತೂಕಡಿಸಿದ್ದ, ಶೆರ್ವುಡ್ ಆಂಡೆರ್ಸನ್ ಮೌನದಲ್ಲಿ ಕಳೆದುಹೋಗಿದ್ದ. ಇಲ್ಲಿ ಸಿಲ್ವಿಯಾ ಬೀಚ್ ಎಂಬ ಕೆಚ್ಚೆದೆಯ ಹೆಣ್ಣುಮಗಳು ಅಕ್ಷರಗಳಿಗಾಗಿ ಯುದ್ಧ ಮಾಡಿದ್ದಳು ಎಂಬ ನೆನಪುಗಳೇ ಮೈಯಲ್ಲಿ ವಿದ್ಯುತ್ ಸಂಚರಿಸುವಂತೆ ಮಾಡುತ್ತವೆ.

ಆ ಹಳೆಯ ಮರದ ಮೆಟ್ಟಿಲುಗಳ ಮೇಲೆ ನೀವು ಕಾಲಿಡುತ್ತಿದ್ದಂತೆ ಒಂದು ವಿಚಿತ್ರ ಸದ್ದು ಕೇಳಿಸುತ್ತದೆ ನೋಡಿ, ಅದು ಬರೀ ಸದ್ದಲ್ಲ; ಈ ಅಂಗಡಿಯ ಒಡಲಲ್ಲಿ ಹೂತು ಹೋಗಿರುವ ಸಾವಿರಾರು ಸಾಹಿತಿಗಳ ಪಿಸುಮಾತುಗಳು. ಅಲ್ಲಿನ ಗೋಡೆಗಳ ಮೇಲೆ ತೂಗು ಹಾಕಿರುವ ಕಪ್ಪು-ಬಿಳುಪು ಫೊಟೋಗಳನ್ನು ದಿಟ್ಟಿಸಿ ನೋಡಿದರೆ, ಅರ್ನೆಸ್ಟ್ ಹೆಮಿಂಗ್ವೇ ತನ್ನ ಹಳೆಯ ಕೋಟ್ ಧರಿಸಿ ಯಾವುದೋ ಯುದ್ಧದ ಕಥೆ ಬರೆಯುತ್ತಾ ಪಕ್ಕದಲ್ಲೇ ಇಟ್ಟಿದ್ದ ವೈನ್ ಗ್ಲಾಸ್‌ಗೆ ಕೈ ಚಾಚುತ್ತಿರುವಂತೆ ಭಾಸವಾಗುತ್ತದೆ. ಆ ಜಾಗವೇ ಹಾಗಿದೆ, ಅಲ್ಲಿನ ಧೂಳಿನ ಕಣಕಣದಲ್ಲೂ ಕಥೆಗಳಿವೆ, ಪ್ರತಿಯೊಂದು ಹಳೆಯ ಪುಸ್ತಕದ ಹಳದಿ ಪುಟಗಳಲ್ಲೂ ಯಾವುದೋ ಕವಿಯ ಬಿಕ್ಕಳಿಕೆ ಅಡಗಿ ಕುಳಿತಿದೆಯೇನೋ ಎಂದೆನಿಸುತ್ತದೆ.

ಈ ಅಂಗಡಿಯ ಒಳಗೆ ಹೋದರೆ ಗಡಿಯಾರ ಸ್ತಬ್ಧವಾಗುವುದು ನಿಜ. ಅಲ್ಲಿರುವ ಪುಟ್ಟ ಪುಟ್ಟ ಗೂಡುಗಳಂಥ ಕೋಣೆಗಳಲ್ಲಿ ಅಲೆಮಾರಿಗಳು ಮಲಗುತ್ತಾರೆ, ಓದುತ್ತಾರೆ ಮತ್ತು ಕನಸು ಕಾಣುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಆ ಗೂಡುಗಳಿಂದ ಹೊರಬರುವ ಆ ಅಲೆಮಾರಿಗಳು ಪ್ಯಾರಿಸ್‌ನ ಗಾಳಿಯಲ್ಲಿ ಸಾಹಿತ್ಯದ ಸುಗಂಧವನ್ನು ಹರಡುತ್ತಾರೆ. ಜಗತ್ತಿನ ಎಷ್ಟೋ ದೊಡ್ಡ ದೊಡ್ಡ ಕಾದಂಬರಿಗಳಿಗೆ ಮೊದಲ ಸ್ಫೂರ್ತಿ ಸಿಕ್ಕಿದ್ದೇ ಈ ಇಕ್ಕಟ್ಟಾದ, ಪುಸ್ತಕದ ರಾಶಿಗಳ ನಡುವೆ. ಇಲ್ಲಿ ಮನುಷ್ಯರಿಗಿಂತ ಹೆಚ್ಚಾಗಿ ಪುಸ್ತಕಗಳೇ ಮಾತಾಡುತ್ತವೆ, ನೀವು ಸುಮ್ಮನೆ ಕಿವಿಗೊಟ್ಟು ಕೇಳಿಸಿಕೊಳ್ಳಬೇಕಷ್ಟೇ.

'ಶೇಕ್ಸ್‌ಪಿಯರ್ ಅಂಡ್ ಕಂಪನಿ'ಯ ಒಳಗೆ ಹೋದರೆ ಕಾಲ ಯಂತ್ರದಲ್ಲಿ ಹಿಂದಕ್ಕೆ ಸರಿದ ಅನುಭವವಾಗುತ್ತದೆ. ಅಲ್ಲಿರುವ ಪುರಾತನ ಟೈಪ್‌ರೈಟರ್‌ಗಳು ಇಂದಿಗೂ ಟಕ್-ಟಕ್ ಅಂತ ಸದ್ದು ಮಾಡಿದಂತೆ, ಯಾವುದೋ ಕವಿತೆಯ ಸಾಲುಗಳನ್ನು ನೆನಪಿಸುವಂತೆ ಭಾಸವಾಗುತ್ತದೆ. ಪ್ರತಿ ಪುಸ್ತಕದ ಮೇಲೂ ಆ ಅಂಗಡಿಯ ವಿಶೇಷ ಮುದ್ರೆ ಒತ್ತಿರುತ್ತದೆ. ಪ್ಯಾರಿಸ್‌ಗೆ ಹೋದ ಸಾವಿರಾರು ಪ್ರವಾಸಿಗರು ಐಫೆಲ್ ಟವರ್ ಮುಂದೆ ಫೊಟೋ ತೆಗೆಸಿಕೊಂಡು ಬಂದರೆ, ಅಪ್ಪಟ ಪುಸ್ತಕ ಪ್ರೇಮಿ ಮಾತ್ರ ಈ ಅಂಗಡಿಯ ಒಂದು ಮೂಲೆ ಹಿಡಿದು ಕೂತು 'ಬದುಕು ಅಂದ್ರೆ ಇದೇ ಅಲ್ವಾ?' ಅಂತ ನಿಟ್ಟುಸಿರು ಬಿಡುತ್ತಾನೆ. ಪ್ಯಾರಿಸ್ ಎಂಬುದು ಸುಂದರಿಯರ ನಗರ ಮಾತ್ರವಲ್ಲ, ಅದು ಸಂವೇದನಾಶೀಲ ಬರಹಗಾರರ ಅಡ್ಡೆ ಕೂಡ.

ಆ ಅಡ್ಡೆಯ ಮಹಾದ್ವಾರವೇ ಈ 'ಶೇಕ್ಸ್‌ಪಿಯರ್ ಅಂಡ್ ಕಂಪನಿ'. ಇಲ್ಲಿ ಪುಸ್ತಕ ಕೊಳ್ಳುವವನು ಮನೆಗೆ ಕೇವಲ ಕಾಗದದ ಕಟ್ಟುಗಳನ್ನು ಒಯ್ಯುವುದಿಲ್ಲ, ಬದಲಾಗಿ ಪ್ಯಾರಿಸ್‌ನ ಒಂದು ತುಣುಕು ಇತಿಹಾಸವನ್ನು ತನ್ನ ಬ್ಯಾಗಿಗೆ ತುಂಬಿಕೊಂಡು ಹೋಗುತ್ತಾನೆ. ಆ ಪುಸ್ತಕದ ಅಂಗಡಿಯ ಗೋಡೆಗೊರಗಿ ನಾಲ್ಕು ಹಾಳೆಗಳನ್ನು ಮಗುಚಿ ಹಾಕಿದರೆ ಅವೆಷ್ಟೋ ಸಾಹಿತಿಗಳು ಕಳೆದ ಕ್ಷಣಗಳಲ್ಲಿ ಮಿಂದೆದ್ದ ಹಿತಾನುಭವ. ನೀವು ಆ ಕ್ಷಣವೇ ಪ್ಯಾರಿಸ್‌ನ ಸಾಹಿತ್ಯ ಲೋಕದ ಸದಸ್ಯರಾಗಿಬಿಡುತ್ತೀರಿ! ಪಕ್ಕದಲ್ಲಿ ಹರಿಯುವ ಸೀನ್ ನದಿಯ ದಡದಲ್ಲಿ, ಪ್ರಸಿದ್ಧ ನಾಟ್ರೆ ಡೇಮ್ ಕ್ಯಾಥೆಡ್ರಲ್ ಎದುರಿನಲ್ಲಿರುವ ಈ ಅಂಗಡಿ ಕೇವಲ ಪುಸ್ತಕಗಳನ್ನು ಮಾರುವ ಜಾಗವಲ್ಲ ಎಂದು ನನಗೆ ಪ್ರತಿ ಬಾರಿ ಅಲ್ಲಿಂದ ಬರುವಾಗಲೂ ಅನಿಸಿದೆ. ಅದು ಪ್ರತಿ ಸಾಹಿತಿಗಳ ಪಾಲಿಗೆ ಕರುಳಬಳ್ಳಿ ಹೂತ ಜಾಗ, ಅಕ್ಷರಗಳನ್ನೇ ನಂಬಿ ಬದುಕುವವರ ಪಾಲಿನ ಕಾಶಿ!

Untitled design (71)

ಪ್ಯಾರಿಸ್‌ನ 'ಶೇಕ್ಸ್‌ಪಿಯರ್ ಅಂಡ್ ಕಂಪನಿ' ಎಂಬ ಈ ಅಕ್ಷರಗಳ ಗೂಡು ಜಗತ್ತಿನಲ್ಲೇ ಅತ್ಯಂತ ವಿಶಿಷ್ಟವಾದ 'ಧರ್ಮಛತ್ರ'. ಇಲ್ಲಿನ ಮಾಲೀಕರಾಗಿದ್ದ ಜಾರ್ಜ್ ವಿಟ್‌ಮನ್ ಈ ಅಂಗಡಿಯನ್ನು ಬರೀ ವ್ಯಾಪಾರದ ಮಳಿಗೆಯಾಗಿ ನೋಡಲಿಲ್ಲ, ಬದಲಾಗಿ ಅದನ್ನು ಅಲೆಮಾರಿ ಸಾಹಿತಿಗಳ ಆಶ್ರಯತಾಣವನ್ನಾಗಿ ಮಾಡಿದ. ಪ್ಯಾರಿಸಿಗೆ ಬರುವ ಸಾಹಿತಿಗಳಿಗೆ ಅಲ್ಲಿ ಉಳಿದುಕೊಳ್ಳುವುದು ದುಬಾರಿಯಾಗಿತ್ತು. ಬಡ ಸಾಹಿತಿಗಳಿಗೆ ಅಲ್ಲಿ ವಾರಕ್ಕಿಂತ ಹೆಚ್ಚು ದಿನ ವಾಸಿಸುವುದು ಸಾಧ್ಯವೇ ಇರಲಿಲ್ಲ. ಇದನ್ನು ಗಮನಿಸಿದ ವಿಟ್‌ಮನ್, ಸಾಹಿತಿಗಳ ವಸತಿಗೆ ಒಂದು ಐಡಿಯಾ ಹೊಸೆದ. ಅದೇ 'ಟಂಬಲ್‌ವೀಡ್ಸ್' (Tumbleweeds) ಎಂಬ ವಸತಿ ವ್ಯವಸ್ಥೆ. ಗಾಳಿಗೆ ತೂರಿ ಬರುವ ಒಣ ಗಿಡಗಳಂತೆ, ಜಗತ್ತಿನ ಯಾವುದೋ ಮೂಲೆಯಿಂದ ಸಾಹಿತ್ಯದ ಹಸಿವಿನೊಂದಿಗೆ ಬರುವ ಲೇಖಕರು, ಕಲಾವಿದರು ಮತ್ತು ಬುದ್ಧಿಜೀವಿಗಳಿಗೆ ತನ್ನ ಪುಸ್ತಕದಂಗಡಿಯಲ್ಲಿ ಉಚಿತವಾಗಿ ಉಳಿದುಕೊಳ್ಳುವ ಅವಕಾಶ ಒದಗಿಸಿದ.

ಆದರೆ, ಈ ಉಚಿತ ವಸತಿಗೆ ವಿಟ್‌ಮನ್ ವಿಧಿಸಿರುವ ಮೂರು ಷರತ್ತುಗಳು ಆತನ ಸಾಹಿತ್ಯ ಪ್ರೇಮಕ್ಕೆ ಸಾಕ್ಷಿಯಾಗಿವೆ. ಇಲ್ಲಿ ಉಳಿಯುವವರು ದಿನಕ್ಕೊಂದು ಪುಸ್ತಕವನ್ನು ಕಡ್ಡಾಯವಾಗಿ ಓದಲೇಬೇಕು. ಓದುವುದಷ್ಟೇ ಅಲ್ಲ, ದಿನದ ಎರಡು ಗಂಟೆಗಳ ಕಾಲ ಅಂಗಡಿಯ ಕೆಲಸಗಳಲ್ಲಿ ಅಂದರೆ ಪುಸ್ತಕಗಳನ್ನು ಜೋಡಿಸುವುದು ಅಥವಾ ಗ್ರಾಹಕರಿಗೆ ನೆರವಾಗುವುದರಲ್ಲಿ ಕಳೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಇಲ್ಲಿಂದ ಹೊರಡುವಾಗ ಪ್ರತಿಯೊಬ್ಬರೂ ತಮ್ಮ ಜೀವನದ ಬಗ್ಗೆ ಒಂದು ಪುಟದ ಆತ್ಮಚರಿತ್ರೆಯನ್ನು ಬರೆದುಕೊಡಬೇಕು.

ಈ ಪುಟಗಳನ್ನು ಆತ ಅಲ್ಲಿನ ಸಂಗ್ರಹಾಲಯದಲ್ಲಿ ಜೋಪಾನವಾಗಿ ಕಾಪಿಟ್ಟ. ಇಂದಿನವರೆಗೆ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಜನರು 'ಟಂಬಲ್‌ವೀಡ್ಸ್' (ಗಾಳಿಗೆ ತೂರಿ ಬರುವ ಒಣ ಗಿಡಗಳು) ನಲ್ಲಿ ಆಶ್ರಯ ಪಡೆದಿದ್ದಾರೆ ಎಂಬುದು ನಂಬಲಸಾಧ್ಯವಾದರೂ ಹಸಿಬಿಸಿ ಸತ್ಯ! ಅಂಗಡಿಯ ಕಿಕ್ಕಿರಿದ ಪುಸ್ತಕದ ರಾಶಿಗಳ ಮಧ್ಯೆ ಸಣ್ಣ ಹಾಸಿಗೆಗಳನ್ನು ಹಾಸಿ, ಅಕ್ಷರಗಳ ನಡುವೆಯೇ ಕನಸು ಕಾಣುವ ಈ ಅಲೆಮಾರಿಗಳು ಪ್ಯಾರಿಸ್‌ನ ಸಾಹಿತ್ಯ ಲೋಕಕ್ಕೆ ಜೀವ ತುಂಬಿದ್ದಾರೆ, ತುಂಬುತ್ತಿದ್ದಾರೆ. ಅನಾಥ ಸಾಹಿತಿಗಳ ಪಾಲಿಗೆ ಇದೊಂದು ಆಶ್ರಯತಾಣದಂತಿದೆ. ಇಲ್ಲಿ ಮಲಗುವ ಪ್ರತಿಯೊಬ್ಬ ಅಲೆಮಾರಿಯೂ ತನ್ನ ಬೆವರಿನ ಹನಿ ಮತ್ತು ಬರವಣಿಗೆಯ ಮೂಲಕ ಈ ಅಂಗಡಿಯ ಇತಿಹಾಸದ ಭಾಗವಾಗುತ್ತಾನೆ. ಇಂಥ ಅದ್ಭುತ ಸಂಪ್ರದಾಯ ಇಡೀ ಜಗತ್ತಿನ ಬೇರಾವ ಪುಸ್ತಕದ ಅಂಗಡಿಯಲ್ಲೂ ಕಾಣಸಿಗುವುದಿಲ್ಲ.

'ಶೇಕ್ಸ್‌ಪಿಯರ್ ಅಂಡ್ ಕಂಪನಿ' ಸಾವಿರಾರು ಅಲೆಮಾರಿಗಳ ಕನಸುಗಳ ಉದ್ಯಾನ ಮತ್ತು ಪುನರ್ಜನ್ಮದ ತಾಣ. ವಿಟ್‌ಮನ್ ಅಂದು ಹಾಕಿಕೊಟ್ಟ ಆ 'ಟಂಬಲ್‌ವೀಡ್ಸ್' ಸಂಪ್ರದಾಯದ ಅಡಿಯಲ್ಲಿ ಉಳಿದುಕೊಂಡವರ ಕಥೆಗಳು ಯಾವುದೋ ರೋಚಕ ಕಾದಂಬರಿಗಳಿಗಿಂತ ಕಡಿಮೆ ಇಲ್ಲ.

ವಿಟ್‌ಮನ್ ಹಾಕಿದ್ದ ನಿಯಮದಂತೆ ಪ್ರತಿಯೊಬ್ಬರೂ ತಮ್ಮ ಒಂದು ಪುಟದ ಆತ್ಮಚರಿತ್ರೆ ಬರೆದುಕೊಡಬೇಕಿತ್ತಲ್ಲ, ಅದರಂತೆ ಒಮ್ಮೆ ಸೈಮನ್ ಎಂಬ ಯುವಕ ಅಲ್ಲಿ ಉಳಿದುಕೊಂಡಿದ್ದ. ಆತ ತನ್ನ ಆತ್ಮಚರಿತ್ರೆಯಲ್ಲಿ ಏನನ್ನೂ ಬರೆಯದೇ ಕೇವಲ ತನ್ನ ಕೈಬೆರಳಿನ ರಕ್ತದಲ್ಲಿ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿ ಹೋಗಿದ್ದ! ವಿಟ್‌ಮನ್ ಅದನ್ನು ನೋಡಿ 'ಇವನು ನಿಜವಾದ ಸಾಹಿತಿ, ತನ್ನ ಬದುಕಿನ ಶೂನ್ಯವನ್ನೇ ಇಲ್ಲಿ ಬರೆದಿಟ್ಟಿದ್ದಾನೆ' ಎಂದು ಶ್ಲಾಘಿಸಿದ್ದ. ಇಂದಿಗೂ ಆ ಸಾವಿರಾರು ಪುಟಗಳ ಆತ್ಮಚರಿತ್ರೆಯ ಸಂಗ್ರಹದಲ್ಲಿ ಇಂಥ ವಿಚಿತ್ರ ಮತ್ತು ಭಾವನಾತ್ಮಕ ಪುಟಗಳು ಸಿಗುತ್ತವೆ.

ಇಂದು ಜಗತ್ಪ್ರಸಿದ್ಧ ಹಾಲಿವುಡ್ ನಟನಾಗಿರುವ ಎಥೆನ್ ಹಾಕ್, ಪ್ರಸಿದ್ಧನಾಗುವ ಮೊದಲು ಇದೇ ಅಂಗಡಿಯಲ್ಲಿ 'ಟಂಬಲ್‌ವೀಡ್ಸ್' ಆಗಿ ಉಳಿದುಕೊಂಡಿದ್ದ ಎಂಬುದು ಅನೇಕರಿಗೆ ತಿಳಿದಿಲ್ಲ. ಆತ ಅಲ್ಲಿನ ಪುಸ್ತಕ ರಾಶಿಗಳ ನಡುವೆ ಮಲಗುತ್ತಾ, ದಿನಕ್ಕೆ ಎರಡು ಗಂಟೆ ಪುಸ್ತಕ ಜೋಡಿಸುತ್ತಾ ಕಾಲ ಕಳೆದಿದ್ದ. ನಂತರದ ದಿನಗಳಲ್ಲಿ ಅವನ ಪ್ರಸಿದ್ಧ ಸಿನಿಮಾ 'Before Sunset' ನ ಆರಂಭಿಕ ದೃಶ್ಯಗಳನ್ನು ಇದೇ ಅಂಗಡಿಯಲ್ಲಿ ಚಿತ್ರೀಕರಿಸಲಾಯಿತು. ಅದು ತಾನು ಬೆಳೆದು ಬಂದ ಜಾಗಕ್ಕೆ ಸಲ್ಲಿಸಿದ ಗೌರವವಾಗಿತ್ತು. ಅರವತ್ತರ ದಶಕದಲ್ಲಿ ಅನೇಕ ಬರಹಗಾರರು ಇಲ್ಲಿಗೆ ಬರುವಾಗ ಜೇಬಿನಲ್ಲಿ ಒಂದು ರುಪಾಯಿ ಕೂಡ ಇರುತ್ತಿರಲಿಲ್ಲ. ವಿಟ್‌ಮನ್ ಅವರಿಗೆ ಮಲಗಲು ಜಾಗ ಮಾತ್ರವಲ್ಲದೇ, ಕೆಲವೊಮ್ಮೆ ಸೂಪ್, ಬಿಸಿಬಿಸಿ ಕಾಫಿ ನೀಡುತ್ತಿದ್ದ. 'ಯಾರೂ ಇಲ್ಲಿ ಹಸಿದು ಮಲಗಬಾರದು' ಎಂಬುದು ಅವನ ತತ್ತ್ವವಾಗಿತ್ತು. ಅಲೆನ್ ಗಿನ್ಸ್‌ಬರ್ಗ್ ಮತ್ತು ಗ್ರೆಗೊರಿ ಕೊರ್ಸೊ ಅಂಥ ದೊಡ್ಡ ಕವಿಗಳು ಇಲ್ಲಿನ ಧೂಳು ಹಿಡಿದ ಪುಸ್ತಕಗಳ ಮಧ್ಯೆ ಕುಳಿತು ಅಮೆರಿಕನ್ ಸಾಹಿತ್ಯದ ದಿಕ್ಕನ್ನೇ ಬದಲಿಸುವ ಕವಿತೆಗಳನ್ನು ಬರೆದಿದ್ದು.

Untitled design (68)

ಇಲ್ಲಿ ಉಳಿಯುವ ಟಂಬಲ್‌ವೀಡ್ಸ್‌ಗಳಿಗೆ ಪುಸ್ತಕ ಓದುವುದು ಕಡ್ಡಾಯವಾಗಿತ್ತು. ಅನೇಕ ಅಲೆಮಾರಿಗಳು ತಾವು ಓದಿದ ಪುಸ್ತಕದ ಯಾವುದೋ ಪುಟದ ಮಧ್ಯೆ ತಮ್ಮ ಪ್ರಿಯತಮೆಯ ಹೆಸರನ್ನೋ ಅಥವಾ ಯಾರೂ ಓದಬಾರದೆಂದು ಬರೆದ ರಹಸ್ಯ ಸಾಲುಗಳನ್ನೋ ಬರೆದು ಬಿಟ್ಟು ಹೋಗುತ್ತಿದ್ದರು. ಇಂದಿಗೂ ಈ ಅಂಗಡಿಯಲ್ಲಿ ಹಳೆಯ ಪುಸ್ತಕ ಕೊಳ್ಳುವವರಿಗೆ ಅನಿರೀಕ್ಷಿತವಾಗಿ ಇಂಥ 'ಅಪರಿಚಿತರ ಪ್ರೇಮ ಕಥೆಗಳು' ಚೀಟಿಗಳ ರೂಪದಲ್ಲಿ ಸಿಗುವುದುಂಟು! ಅಂಗಡಿಯ ಬಾಗಿಲು ಹಾಕಿದ ನಂತರ, ಟಂಬಲ್‌ವೀಡ್ಸ್‌ಗಳ ನಿಜವಾದ ಸಂಭ್ರಮ ಶುರುವಾಗುತ್ತದೆ. ಯಾರೋ ಒಬ್ಬ ಪಿಯಾನೋ ನುಡಿಸಿದರೆ, ಇನ್ನೊಬ್ಬ ತಾನು ಅಂದು ಬರೆದ ಕವಿತೆಯನ್ನು ಓದುತ್ತಾನೆ. ಜಗತ್ತಿನ ವಿವಿಧ ಮೂಲೆಗಳಿಂದ ಬಂದ ಈ ಅಲೆಮಾರಿಗಳು ಭಾಷೆಯ ಹಂಗಿಲ್ಲದೇ ಸಾಹಿತ್ಯದ ಮೂಲಕ ಒಂದಾಗುತ್ತಾರೆ. ಇಂದಿಗೂ ಅಂಗಡಿಯ ಮೆಟ್ಟಿಲುಗಳ ಮೇಲೆ ಕುಳಿತು ಈ 'ಟಂಬಲ್‌ವೀಡ್ಸ್‌'ಗಳು ಹರಟೆ ಹೊಡೆಯುವುದನ್ನು ನೋಡಬಹುದು.

'ಶೇಕ್ಸ್‌ಪಿಯರ್ ಅಂಡ್ ಕಂಪನಿ' ಹೊಸ್ತಿಲು ದಾಟುವುದೆಂದರೆ ಮಾಂತ್ರಿಕ ಲೋಕದೊಳಗೆ ಹೆಜ್ಜೆ ಇಟ್ಟಂತೆ. ಇಲ್ಲಿನ ಒಳಾಂಗಣ ವಿನ್ಯಾಸವು ಆಧುನಿಕ ಶೋರೂಂಗಳ ಅಚ್ಚುಕಟ್ಟುತನವನ್ನು ಅಣಕಿಸುವಂತಿದೆ. ಇಲ್ಲಿ ಪುಸ್ತಕಗಳನ್ನು ಕೇವಲ ಮಾರಾಟದ ವಸ್ತುಗಳಾಗಿ ಜೋಡಿಸಿಲ್ಲ, ಬದಲಾಗಿ ಅಕ್ಷರಗಳೇ ಆ ಕಟ್ಟಡಕ್ಕೆ ರಕ್ತಮಾಂಸಗಳಾಗಿವೆ. ನೆಲದಿಂದ ಆರಂಭವಾಗಿ ಚಾವಣಿಯವರೆಗೂ ಹರಡಿಕೊಂಡಿರುವ ಪುಸ್ತಕದ ರಾಶಿಗಳು ಸುಂದರವಾದ ಅವ್ಯವಸ್ಥೆಯಂತೆ (Beautiful Chaos) ಕಂಡರೂ, ಅದರಲ್ಲಿ ಒಂದು ವಿಶಿಷ್ಟವಾದ ಕಾವ್ಯಾತ್ಮಕತೆಯಿದೆ.

ಅಲ್ಲಿನ ಕಿರಿದಾದ ಮೆಟ್ಟಿಲುಗಳು ಮತ್ತು ಹಳೆಯ ಮರದ ಕಪಾಟುಗಳು ನೂರಾರು ವರ್ಷಗಳ ಇತಿಹಾಸವನ್ನು ಪಿಸುಗುಟ್ಟುತ್ತವೆ. ಪ್ರತಿ ಮೆಟ್ಟಿಲನ್ನು ಹತ್ತುವಾಗಲೂ ಸಾಹಿತ್ಯದ ಒಂದೊಂದು ಮೈಲಿಗಲ್ಲನ್ನು ದಾಟಿದ ಅನುಭವ. ವಿಶೇಷವಾಗಿ, ಮೆಟ್ಟಿಲುಗಳ ಮೇಲೆ ಬರೆದಿರುವ ಸ್ಫೂರ್ತಿದಾಯಕ ಸಾಲುಗಳು ಓದುಗರನ್ನು ಪ್ರೀತಿಯಿಂದ ಸ್ವಾಗತಿಸುತ್ತಾ, ಅವರನ್ನು ಅಕ್ಷರಗಳ ಆಳಕ್ಕೆ ಎಳೆದುಕೊಂಡು ಹೋಗುತ್ತವೆ. ಓದುಗರಿಗಾಗಿ ಅಲ್ಲಲ್ಲಿ ಇರಿಸಲಾದ ಮೃದುವಾದ ಹಳೆಯ ಕಾಲದ ಆಸನಗಳು, 'ಇಲ್ಲಿ ಪುಸ್ತಕ ಕೊಳ್ಳುವುದು ಮುಖ್ಯವಲ್ಲ, ಓದುವುದು ಮುಖ್ಯ' ಎಂಬ ಸಂದೇಶವನ್ನು ನೀಡುತ್ತವೆ. ಆ ಸೋಫಾಗಳ ಮೇಲೆ ಕುಳಿತರೆ ಸಾಕು, ಕಾಲಚಕ್ರದ ಅರಿವೇ ಇಲ್ಲದಂತೆ ಗಂಟೆಗಟ್ಟಲೆ ಓದಿನಲ್ಲಿ ಮಗ್ನರಾಗಬಹುದು.

ಇನ್ನು ಅಲ್ಲಿನ ಪಿಯಾನೋ ಮತ್ತೊಂದು ಆಕರ್ಷಣೆ. ಯಾರೋ ಅಪರಿಚಿತ ಅಲೆಮಾರಿ ಅಥವಾ ಗ್ರಾಹಕ ಅಲ್ಲಿ ಕುಳಿತು ಸುಂದರ ರಾಗವೊಂದನ್ನು ನುಡಿಸುತ್ತಿದ್ದರೆ, ಆ ಸಂಗೀತದ ಅಲೆಗಳು ಪುಸ್ತಕದ ಕಪಾಟುಗಳ ನಡುವೆ ತೂರಿಬಂದು ವಾತಾವರಣವನ್ನು ಮತ್ತಷ್ಟು ಹಿತವಾಗಿಸುತ್ತವೆ. ಇದು ಕೇವಲ ಪುಸ್ತಕದ ಅಂಗಡಿಯಾಗಿ ಉಳಿಯದೇ, ಕಲೆ ಮತ್ತು ಸಂಸ್ಕೃತಿಯ ಸಂಗಮ ತಾಣವಾಗಿ ಬದಲಾಗುತ್ತದೆ. ಇಲ್ಲಿನ ಗಾಳಿಯಲ್ಲಿ ಹಳೆಯ ಕಾಗದದ ಸುಗಂಧ ಮತ್ತು ಮಧುರವಾದ ಸಂಗೀತ ಮೇಳೈಸಿರುತ್ತವೆ.

ಎಲ್ಲಕ್ಕಿಂತ ಕುತೂಹಲ ಸಂಗತಿಯೆಂದರೆ ಅಂಗಡಿಯ ಮೇಲಂತಸ್ತಿನಲ್ಲಿರುವ ಆ ಹಳೆಯ 'ಟೈಪ್‌ರೈಟರ್'. ಇಂದಿನ ಡಿಜಿಟಲ್ ಯುಗದಲ್ಲೂ ಆ ಟೈಪ್‌ರೈಟರ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಅಲ್ಲಿ ಯಾರು ಬೇಕಾದರೂ ಕುಳಿತು ತಮ್ಮ ಮನದಾಳದ ಕವಿತೆ ಅಥವಾ ಕಥೆಗಳನ್ನು ಟೈಪ್ ಮಾಡಬಹುದು. ಆ ಟೈಪ್‌ರೈಟರ್‌ನ 'ಟಕ್-ಟಕ್' ಸದ್ದು ಸಾವಿರಾರು ಬರಹಗಾರರ ಕನಸುಗಳಿಗೆ ಧ್ವನಿಯಾದಂತಿದೆ. ಅನೇಕ ಯುವ ಸಾಹಿತಿಗಳು ತಮ್ಮ ಮೊದಲ ಸಾಲುಗಳನ್ನು ಬರೆದಿದ್ದೇ ಈ ಟೈಪ್‌ರೈಟರ್ ಮೇಲೆ ಎಂಬುದು ವಿಶೇಷ. ಈ ಅಂಗಡಿಯ ಒಳಾಂಗಣವು ಒಬ್ಬ ಪುಸ್ತಕ ಪ್ರೇಮಿಗೆ ಬೇಕಾದ ಎಲ್ಲ ಭಾವನಾತ್ಮಕ ಅಂಶಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ. ಇದು ಇಟ್ಟಿಗೆ-ಮಣ್ಣಿನ ಗೋಡೆಗಳಲ್ಲ, ಬದಲಾಗಿ ಅಕ್ಷರಗಳಿಗಾಗಿ ಕಟ್ಟಿದ ಒಂದು ಸುಂದರ ದೇವಾಲಯ.

ವಿಟ್‌ಮನ್ ತನ್ನ ಪ್ರೀತಿಯ ಪುಸ್ತಕದ ಅಂಗಡಿಯನ್ನು 'ಸಮಾಜವಾದಿ ಸೋಗಿನಲ್ಲಿರುವ ಯುಟೋಪಿಯಾ' (Socialist Utopia masquerading as a bookstore) ಎಂದು ಹೆಮ್ಮೆಯಿಂದ ಕರೆಯುತ್ತಿದ್ದ. ಈ ಒಂದು ವಾಕ್ಯದ ಹಿಂದೆ ಅವನ ಬದುಕಿನ ದೊಡ್ಡ ಸಿದ್ಧಾಂತ ಮತ್ತು ಮಾನವೀಯ ದೃಷ್ಟಿಕೋನ ಅಡಗಿದೆ. ಅವನ ಪಾಲಿಗೆ ಈ ಅಂಗಡಿ ಕೇವಲ ಲಾಭ ಗಳಿಸುವ ವ್ಯಾಪಾರ ಕೇಂದ್ರವಾಗಿರಲಿಲ್ಲ; ಬದಲಾಗಿ ಅದು ಹಣದ ಹಂಗಿಲ್ಲದ, ಸಮಾನತೆಯ ತಳಹದಿಯ ಮೇಲೆ ನಿಂತ ಒಂದು ಕಾಲ್ಪನಿಕ ಆದರ್ಶ ಲೋಕವಾಗಿತ್ತು.

ಯುಟೋಪಿಯಾ ಎಂದರೆ ಏನು? ಎಲ್ಲವೂ ಪರಿಪೂರ್ಣವಾಗಿರುವ, ಬಡವ-ಬಲ್ಲಿದ ಎಂಬ ಭೇದವಿಲ್ಲದ ಒಂದು ಆದರ್ಶ ಸಮಾಜ. ವಿಟ್‌ಮನ್ ಪ್ಯಾರಿಸ್‌ನ ಹೃದಯಭಾಗದಲ್ಲಿ ಅಂಥದ್ದೊಂದು ಜಗತ್ತನ್ನು ಸೃಷ್ಟಿಸಿದ್ದ. ಇಲ್ಲಿ ಪುಸ್ತಕಗಳನ್ನು ಕೊಳ್ಳುವ ಸಾಮರ್ಥ್ಯ ಇಲ್ಲದವನಿಗೂ, ದೊಡ್ಡ ಶ್ರೀಮಂತನಿಗೂ ಸಮಾನವಾದ ಗೌರವವಿತ್ತು. ಅಕ್ಷರಗಳನ್ನು ಪ್ರೀತಿಸುವ ಯಾರು ಬೇಕಾದರೂ ಇಲ್ಲಿ ಬಂದು ಕುಳಿತು ಓದಬಹುದಿತ್ತು.

ವಿಟ್‌ಮನ್ ನ ಸಮಾಜವಾದಿ ಆಲೋಚನೆಗಳು 'ಟಂಬಲ್‌ವೀಡ್ಸ್' ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಕಾಣಬಹುದಿತ್ತು. ಇಲ್ಲಿ ಉಳಿಯುವ ಅಲೆಮಾರಿ ಸಾಹಿತಿಗಳಿಗೆ ವಸತಿ ಅಥವಾ ಊಟಕ್ಕೆ ಹಣ ಕೇಳುತ್ತಿರಲಿಲ್ಲ. ಬದಲಾಗಿ, 'ನಿನ್ನಿಂದ ಸಾಧ್ಯವಾದಷ್ಟು ಕೆಲಸ ಮಾಡು, ನಿನಗೆ ಬೇಕಾದಷ್ಟನ್ನು ಪಡೆದುಕೋ' ಎಂಬ ಸಮಾಜವಾದಿ ತತ್ತ್ವವನ್ನು ಅವರು ಪಾಲಿಸುತ್ತಿದ್ದರು. ದಿನಕ್ಕೆ ಎರಡು ಗಂಟೆ ಅಂಗಡಿಯ ಕೆಲಸ ಮಾಡುವುದು ಮತ್ತು ದಿನಕ್ಕೊಂದು ಪುಸ್ತಕ ಓದುವ ಮೂಲಕ ಒಂದು ಸ್ವಾವಲಂಬಿ ಸಮುದಾಯವನ್ನು ಕಟ್ಟಿದ್ದ.

ಈ 'ಯುಟೋಪಿಯಾ'ದಲ್ಲಿ ಹಣಕ್ಕಿಂತ ಜ್ಞಾನಕ್ಕೆ ಹೆಚ್ಚಿನ ಮೌಲ್ಯವಿತ್ತು. ಜಗತ್ತಿನ ಯಾವುದೋ ಮೂಲೆಯಿಂದ ಬಂದ ಅಪರಿಚಿತ ಬರಹಗಾರನಿಗೆ ಇಲ್ಲಿ ಆಶ್ರಯ ನೀಡುವಾಗ ವಿಟ್‌ಮನ್, ಅವನ ಬ್ಯಾಂಕ್ ಬ್ಯಾಲೆನ್ಸ್ ನೋಡುತ್ತಿರಲಿಲ್ಲ, ಬದಲಾಗಿ ಅವನ ಕಣ್ಣಲ್ಲಿರುವ ಸಾಹಿತ್ಯದ ಹೊಳಪನ್ನು ನೋಡುತ್ತಿದ್ದ. ಬಂಡವಾಳಶಾಹಿ ಜಗತ್ತಿನ ಮಧ್ಯೆ, ಪ್ಯಾರಿಸ್‌ನಂಥ ದುಬಾರಿ ನಗರದಲ್ಲಿ, ಪುಸ್ತಕದ ಅಂಗಡಿಯ ಹೆಸರಿನಲ್ಲಿ ಇಂಥದ್ದೊಂದು ಮಾನವೀಯ ಪ್ರಯೋಗ ಮಾಡುವುದು ಸುಲಭದ ಮಾತಲ್ಲ. ಆದರೆ ವಿಟ್‌ಮನ್ ಅದನ್ನು ದಶಕಗಳ ಕಾಲ ಯಶಸ್ವಿಯಾಗಿ ನಡೆಸಿದ. ಅವನ ಪಾಲಿಗೆ ಪುಸ್ತಕಗಳು ಮನುಷ್ಯರನ್ನು ಬೆಸೆಯುವ ಮತ್ತು ಸಮಾನತೆಯನ್ನು ತರುವ ಅಸ್ತ್ರಗಳಾಗಿದ್ದವು. ಅದಕ್ಕಾಗಿಯೇ ಆತ ಇದನ್ನು 'ಪುಸ್ತಕದ ಅಂಗಡಿಯ ಮುಖವಾಡ ಧರಿಸಿದ ಸಮಾಜವಾದಿ ಸ್ವರ್ಗ' ಎಂದು ಕರೆದ. ಇಲ್ಲಿ ಪುಸ್ತಕ ಕೊಳ್ಳುವುದೆಂದರೆ ಅದೊಂದು ಆತ್ಮದ ಜತೆಗಿನ ಒಪ್ಪಂದ.

2011ರಲ್ಲಿ ವಿಟ್‌ಮನ್ ನಿಧನನಾದಾಗ, ಪ್ಯಾರಿಸ್‌ನ ಆ ಅಕ್ಷರಗಳ ದೇಗುಲ ಅನಾಥವಾಗುತ್ತದೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅವನ ಮಗಳು ಸಿಲ್ವಿಯಾ ವಿಟ್‌ಮನ್ ಈ ಐತಿಹಾಸಿಕ ಪರಂಪರೆಯನ್ನು ಅತ್ಯಂತ ಸಮರ್ಥವಾಗಿ ಹೆಗಲಿಗೆ ಹೊತ್ತುಕೊಂಡಳು. ವಿಶೇಷವೆಂದರೆ, ವಿಟ್‌ಮನ್ ತನ್ನ ಮಗಳಿಗೆ ಈ ಅಂಗಡಿಯ ಮೂಲ ಸ್ಥಾಪಕಿ ಸಿಲ್ವಿಯಾ ಬೀಚ್ ಹೆಸರನ್ನೇ ಇಟ್ಟಿದ್ದ. ಇಂದು ಸಿಲ್ವಿಯಾ ವಿಟ್‌ಮನ್ ತನ್ನ ತಂದೆ ಕಟ್ಟಿಕೊಟ್ಟ 'ಸಮಾಜವಾದಿ ಯುಟೋಪಿಯಾ' ಸಿದ್ಧಾಂತಕ್ಕೆ ಆಧುನಿಕತೆಯ ಸ್ಪರ್ಶ ನೀಡಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾಳೆ.

ಸಿಲ್ವಿಯಾ ನೇತೃತ್ವದಲ್ಲಿ 'ಶೇಕ್ಸ್‌ಪಿಯರ್ ಅಂಡ್ ಕಂಪನಿ' ಹೊಸ ತಲೆಮಾರಿನ ಸಾಹಿತ್ಯಿಕ ಚಟುವಟಿಕೆಗಳ ಕೇಂದ್ರವಾಗಿ ಮರುಜನ್ಮ ಪಡೆದಿದೆ. ಆಕೆ ಹಳೆಯ ಸಂಪ್ರದಾಯಗಳಿಗೆ ಧಕ್ಕೆ ಬರದಂತೆ ಎಚ್ಚರ ವಹಿಸಿದ್ದಾಳೆ. ಇಂದಿಗೂ ಅಲ್ಲಿ 'ಟಂಬಲ್‌ವೀಡ್ಸ್'ಗಳು ಅಕ್ಷರಗಳ ಮಧ್ಯೆ ಮಲಗುತ್ತಾರೆ, ಇಂದಿಗೂ ಆ ಹಳೆಯ ಟೈಪ್‌ರೈಟರ್ ಸದ್ದು ಮಾಡುತ್ತದೆ. ಈ ಪುರಾತನ ಸಂಪ್ರದಾಯದ ಜತೆಗೆ ಸಿಲ್ವಿಯಾ 'ಫೆಸ್ಟಿವಲ್ ಲ್ಯಾಂಡ್ ಅಂಡ್ ಪರ್ಪಿಚುಯಲ್' ನಂಥ ಅಂತಾರಾಷ್ಟ್ರೀಯ ಸಾಹಿತ್ಯ ಉತ್ಸವಗಳನ್ನು ಆಯೋಜಿಸುವ ಮೂಲಕ ಜಗತ್ತಿನ ಶ್ರೇಷ್ಠ ಬರಹಗಾರರನ್ನು ಒಂದೆಡೆ ಸೇರಿಸುತ್ತಿದ್ದಾಳೆ.

ಆಧುನಿಕ ಕಾಲಘಟ್ಟದ ಸವಾಲುಗಳನ್ನು ಎದುರಿಸಲು ಆಕೆ ಅಂಗಡಿಯ ಪಕ್ಕದಲ್ಲೇ ಒಂದು ಸುಂದರವಾದ ಕೆಫೆಯನ್ನು (Shakespeare and Company Café) ಪ್ರಾರಂಭಿಸಿದ್ದಾಳೆ. ಇಲ್ಲಿ ಬರುವ ಪ್ರವಾಸಿಗರು ಪುಸ್ತಕ ಓದುತ್ತಾ ಬಿಸಿ ಕಾಫಿ ಸವಿಯಬಹುದು. ತಂದೆಯ ಕಾಲದ 'ಅವ್ಯವಸ್ಥಿತ ಸುಂದರ' ಶೈಲಿಯನ್ನು ಹಾಗೆಯೇ ಉಳಿಸಿಕೊಂಡು, ಡಿಜಿಟಲ್ ಯುಗದ ಓದುಗರಿಗೂ ಇಷ್ಟವಾಗುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಂಗಡಿಯ ಕಥೆಗಳನ್ನು ಆಕೆ ಜಗತ್ತಿಗೆ ತಲುಪಿಸುತ್ತಿದ್ದಾಳೆ.

ಹೊಸ ತಲೆಮಾರಿನ ಬರಹಗಾರರಿಗೆ ಸಿಲ್ವಿಯಾ ದೊಡ್ಡ ಸ್ಫೂರ್ತಿಯಾಗಿದ್ದಾಳೆ . ಅಕ್ಷರಗಳ ಲೋಕದ ಈ ಪರಂಪರೆ ಎಷ್ಟೇ ಕಷ್ಟ ಬಂದರೂ ಅಳಿಯಬಾರದು ಎಂಬ ಹಠ ಅವರಲ್ಲಿದೆ. ಜಾರ್ಜ್ ವಿಟ್‌ಮನ್ ಮಾನವೀಯ ಮೌಲ್ಯಗಳು ಮತ್ತು ಸಿಲ್ವಿಯಾ ಬೀಚ್ ಅವರ ಸಾಹಸ ಮನೋಭಾವ ಇವೆರಡನ್ನೂ ಮೈಗೂಡಿಸಿಕೊಂಡಿರುವ ಸಿಲ್ವಿಯಾ ವಿಟ್‌ಮನ್, ಈ ಅಂಗಡಿಯನ್ನು ಇಂದಿಗೂ ಅಲೆಮಾರಿ ಸಾಹಿತಿಗಳ ಪಾಲಿನ 'ಪವಿತ್ರ ತಾಣ'ವಾಗಿ ಉಳಿಸಿಕೊಂಡಿದ್ದಾರೆ.

Untitled design (69)

ಪ್ಯಾರಿಸ್‌ನ ಆ ಮಾಂತ್ರಿಕ ಗೂಡಿನಿಂದ ಹೊರಬರುವಾಗ ನಿಮ್ಮ ಕೈಲಿರುವ ಪುಸ್ತಕದ ಚೀಲಕ್ಕಿಂತಲೂ ಭಾರವಾಗಿರುವುದು ನಿಮ್ಮ ಎದೆಯೊಳಗಿನ ಭಾವನೆಗಳು. ಸೀನ್ ನದಿಯ ದಂಡೆಯ ಮೇಲೆ ನಿಂತು ತಿರುಗಿ ನೋಡಿದರೆ, ಐಫೆಲ್ ಟವರ್‌ನ ಮಿನುಗುವ ದೀಪಗಳಿಗಿಂತಲೂ ಈ ಹಳೆಯ ಪುಸ್ತಕದ ಅಂಗಡಿಯ ಕಿಟಕಿಯಿಂದ ಬರುವ ಮಂದ ಬೆಳಕು ಹೆಚ್ಚು ಆಪ್ತವೆನಿಸುತ್ತದೆ. ಯಾಕೆಂದರೆ ಐಫೆಲ್ ಟವರ್ ನಮ್ಮ ಕಣ್ಣು ಕೋರೈಸಬಹುದು, ಆದರೆ ಈ 'ಶೇಕ್ಸ್‌ಪಿಯರ್ ಅಂಡ್ ಕಂಪನಿ' ಎಂಬ ಅಕ್ಷರಗಳ ಗುಡಿ ನಮ್ಮ ಆತ್ಮವನ್ನು ಕಲಕುತ್ತದೆ. ಜಾರ್ಜ್ ವಿಟ್‌ಮನ್ ಬದುಕಿರಲಿ ಅಥವಾ ಬಿಡಲಿ, ಅಲ್ಲಿನ ಪ್ರತಿ ಪುಸ್ತಕದ ಪುಟದಲ್ಲೂ ಆತನ ಉಸಿರಿದೆ, ಪ್ರತಿ ಟಂಬಲ್‌ವೀಡ್‌ನ ಬಿಕ್ಕಳಿಕೆಯಲ್ಲೂ ಸಾಹಿತ್ಯದ ಹಸಿವಿದೆ. ಇದು ಬರೀ ಅಕ್ಷರಗಳನ್ನೇ ಪ್ರೀತಿಸಿದವರ ಪಾಲಿನ ಚಿರಂತನ ಸ್ವರ್ಗ. ನೀವು ಅಲ್ಲಿಂದ ವಾಪಸ್ ಬರುವಾಗ ಕೇವಲ ಪ್ರವಾಸಿಯನ್ನಲ್ಲ, ಬದಲಾಗಿ ಪ್ಯಾರಿಸ್‌ನ ಒಂದು ಸಣ್ಣ ಇತಿಹಾಸವನ್ನು ನಿಮ್ಮ ಹೃದಯದ ಕಪಾಟಿನಲ್ಲಿ ಅಚ್ಚೊತ್ತಿಸಿಕೊಂಡು ಬರುತ್ತೀರಿ. ಅಕ್ಷರಗಳ ಈ ಮಾಯಾಲೋಕಕ್ಕೆ ಸಾವು ಅನ್ನೋದೇ ಇಲ್ಲ, ಯಾಕೆಂದರೆ ಇಲ್ಲಿ ಬರೆಯುವ ಪ್ರತಿ ಪದವೂ ಅಮರ!

*

ಇದನ್ನೂ ಓದಿ: ಛಲ, ಸಾಹಸವೇ ಆಕೆಯ ಇಂಧನ: ಡೆರ್ವ್ಲಾ ಮರ್ಫಿ ಎಂಬ ಅದಮ್ಯ ಚೇತನ

ಲಕ್ಕಿ ಚಾರ್ಮ್ಸ್ ಎಂಬ ಆಕರ್ಷಣೆಗಳು

ಪ್ಯಾರಿಸ್‌ನ 'ಶೇಕ್ಸ್‌ಪಿಯರ್ ಅಂಡ್ ಕಂಪನಿ'ಯಲ್ಲಿ ಪ್ರತಿಯೊಂದು ಮೂಲೆಯಲ್ಲೂ ಕೆಲವು 'ಲಕ್ಕಿ ಚಾರ್ಮ್ಸ್' ಅಥವಾ ಅದೃಷ್ಟದ ಸಂಕೇತಗಳಂತೆ ಕೆಲಸ ಮಾಡುವ ವಿಶಿಷ್ಟ ವಸ್ತುಗಳಿವೆ. ಇವು ಈ ಅಂಗಡಿಯ ಮಾಂತ್ರಿಕತೆಯನ್ನು ಹೆಚ್ಚಿಸಿವೆ.

* ಅಂಗಡಿಯ ಮೇಲಿನ ಮಹಡಿಗೆ ಹತ್ತುವ ಮರದ ಮೆಟ್ಟಿಲುಗಳ ಮೇಲೆ ಬರೆದಿರುವ ಸಾಲುಗಳೇ ಅಲ್ಲಿನ ಮೊದಲ 'ಲಕ್ಕಿ ಚಾರ್ಮ್'. ಅಲ್ಲಿನ ಒಂದು ಪ್ರಸಿದ್ಧ ವಾಕ್ಯ - Be not inhospitable to strangers lest they be angels in disguise (ಅಪರಿಚಿತರಿಗೆ ಆತಿಥ್ಯ ನೀಡಲು ಹಿಂಜರಿಯಬೇಡಿ, ಏಕೆಂದರೆ ಅವರು ವೇಷ ಮರೆಸಿಕೊಂಡ ದೇವದೂತರಾಗಿರಬಹುದು). ಇದನ್ನು ಓದುತ್ತಾ ಮೆಟ್ಟಿಲು ಹತ್ತುವ ಅದೆಷ್ಟೋ ಬರಹಗಾರರಿಗೆ ತಾವು ಮಾಡುತ್ತಿರುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ಗಾಢವಾದ ನಂಬಿಕೆಯಿದೆ.

* ಅಂಗಡಿಯ ಮೇಲಂತಸ್ತಿನಲ್ಲಿರುವ ಹಳೆಯ ಟೈಪ್‌ರೈಟರ್ ಅನ್ನು ಅನೇಕರು ತಮ್ಮ 'ಲಕ್ಕಿ ಚಾರ್ಮ್' ಎಂದು ಭಾವಿಸುತ್ತಾರೆ. ಹೊಸದಾಗಿ ಕಥೆ ಅಥವಾ ಕವಿತೆ ಬರೆಯಲು ಆರಂಭಿಸುವವರು, ಆ ಟೈಪ್‌ರೈಟರ್ ಮೇಲೆ ಕನಿಷ್ಠ ಒಂದು ಸಾಲನ್ನಾದರೂ ಬರೆದರೆ ತಮ್ಮ ಕೃತಿ ಜಗತ್ಪ್ರಸಿದ್ಧವಾಗುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಎಷ್ಟೋ ಬರಹಗಾರರು ತಮ್ಮ ಮೊದಲ ಪುಸ್ತಕದ ಮೊದಲ ಪುಟವನ್ನು ಇಲ್ಲಿಯೇ ಟೈಪ್ ಮಾಡಿ ಶುಭಾರಂಭ ಮಾಡಿದ್ದಾರೆ.

* ನೀವು ಈ ಅಂಗಡಿಯಲ್ಲಿ ಯಾವುದೇ ಪುಸ್ತಕ ಕೊಂಡರೂ, ಅದರ ಮೊದಲ ಪುಟದ ಮೇಲೆ ಅಂಗಡಿಯ ಅಧಿಕೃತ ಮುದ್ರೆಯನ್ನು ಒತ್ತುತ್ತಾರೆ. ಈ ಮುದ್ರೆ ಇರುವ ಪುಸ್ತಕವನ್ನು ಮನೆಯಲ್ಲಿ ಇಟ್ಟುಕೊಂಡರೆ ಅದು ಸಾಹಿತ್ಯಿಕ ಜ್ಞಾನ ಮತ್ತು ಅದೃಷ್ಟವನ್ನು ತರುತ್ತದೆ ಎಂಬುದು ಪುಸ್ತಕ ಪ್ರೇಮಿಗಳ ಭಾವನೆ. ಪ್ಯಾರಿಸ್ ಪ್ರವಾಸದ ಅತ್ಯಂತ ಬೆಲೆಬಾಳುವ 'ಸ್ಮರಣಿಕೆ' ಅಥವಾ 'ಲಕ್ಕಿ ಚಾರ್ಮ್' ಎಂದರೆ ಈ ಮುದ್ರೆ ಇರುವ ಪುಸ್ತಕವೇ!

* ಅಂಗಡಿಯ ಒಳಗೆ ಜಾರ್ಜ್ ವಿಟ್‌ಮನ್ ಅವರ ಹಳೆಯ ಫೊಟೋ ಮತ್ತು ಅವರು ಕುಳಿತುಕೊಳ್ಳುತ್ತಿದ್ದ ಜಾಗವಿದೆ. ಅಲ್ಲಿಗೆ ಬರುವ ಬರಹಗಾರರು ಆ ಜಾಗವನ್ನು ಅತ್ಯಂತ ಗೌರವದಿಂದ ನೋಡುತ್ತಾರೆ. ಅವರ ಸಿದ್ಧಾಂತ ಮತ್ತು ಆಶೀರ್ವಾದ ತಮ್ಮ ಮೇಲಿರಲಿ ಎಂದು ಆಶಿಸುತ್ತಾರೆ. ಅಕ್ಷರಗಳಿಗಾಗಿ ಬದುಕಿದ ಆ ಮಹಾನ್ ಚೇತನದ ನೆರಳು ಇಂದಿಗೂ ಅಲ್ಲಿನ 'ಟಂಬಲ್‌ವೀಡ್ಸ್'ಗಳಿಗೆ ಅದೃಷ್ಟದ ನೆರಳಿನಂತಿದೆ.

* ಇಲ್ಲಿನ ಲೈಬ್ರರಿಯಲ್ಲಿ ಅಥವಾ ಹಳೆಯ ಪುಸ್ತಕಗಳ ನಡುವೆ ಅನಿರೀಕ್ಷಿತವಾಗಿ ಸಿಗುವ ಹಳೆಯ ಪ್ರೇಮ ಪತ್ರಗಳು, ಹೂವಿನ ಒಣಗಿದ ಎಸಳುಗಳು ಅಥವಾ ಹಳೆಯ ಟಿಕೆಟ್‌ಗಳನ್ನು ಕೂಡ ಅಲ್ಲಿಗೆ ಬರುವವರು ಅದೃಷ್ಟ ಎಂದು ಭಾವಿಸುತ್ತಾರೆ. ಯಾರೋ ಅಪರಿಚಿತರು ಬಿಟ್ಟುಹೋದ ಆ ನೆನಪಿನ ತುಣುಕು ತಮಗೆ ಸಿಕ್ಕರೆ, ಅದು ಯಾವುದೋ ಒಂದು ಹೊಸ ಕಥೆಯ ಸ್ಫೂರ್ತಿಯಾಗಬಲ್ಲದು ಎಂದು ನಂಬುತ್ತಾರೆ.

**

* ಜಾರ್ಜ್ ವಿಟ್‌ಮನ್ ತನ್ನ 98ನೆಯ ವಯಸ್ಸಿನಲ್ಲಿ ನಿಧನರಾಗುವವರೆಗೂ ಅಂಗಡಿಯ ಮೇಲಿನ ಅಪಾರ್ಟ್‌ಮೆಂಟ್‌ನಲ್ಲೇ ವಾಸಿಸುತ್ತಿದ್ದ ಮತ್ತು ಪ್ರತಿದಿನ ಅಂಗಡಿಗೆ ಬರುತ್ತಿದ್ದ!

* 1941 ರಲ್ಲಿ ಪ್ಯಾರಿಸ್ ನಾಜಿಗಳ ವಶದಲ್ಲಿದ್ದಾಗ, ಒಬ್ಬ ಜರ್ಮನ್ ಅಧಿಕಾರಿ ಸಿಲ್ವಿಯಾ ಬೀಚ್ ಅವರ ಅಂಗಡಿಗೆ ಬಂದು ಜೇಮ್ಸ್ ಜಾಯ್ಸ್ ಬರೆದ 'ಫಿನೆಗನ್ಸ್ ವೇಕ್' ಪುಸ್ತಕದ ಕೊನೆಯ ಪ್ರತಿಯನ್ನು ಕೇಳಿದ. ಸಿಲ್ವಿಯಾ ಅದನ್ನು ಕೊಡಲು ನಿರಾಕರಿಸಿದಳು. ಆ ಅಧಿಕಾರಿ 'ನೀನು ಕೊಡದಿದ್ದರೆ ನಿನ್ನ ಅಂಗಡಿಯ ಎಲ್ಲವನ್ನೂ ವಶಪಡಿಸಿಕೊಳ್ಳುತ್ತೇವೆ' ಎಂದು ಬೆದರಿಕೆ ಹಾಕಿದ. ಸಿಲ್ವಿಯಾ ಹೆದರಲಿಲ್ಲ. ಕೇವಲ ಎರಡೇ ಗಂಟೆಗಳಲ್ಲಿ ತನ್ನಲ್ಲಿದ್ದ ಎಲ್ಲ ಪುಸ್ತಕಗಳನ್ನು ಸದ್ದಿಲ್ಲದೇ ಮೇಲಿನ ಮಹಡಿಯ ಫ್ಲಾಟ್‌ಗೆ ಸಾಗಿಸಿದಳು. ಅಂಗಡಿಯ ಬೋರ್ಡ್ ಕಿತ್ತು ಹಾಕಿ, ಗೋಡೆಗಳಿಗೆ ಬಣ್ಣ ಬಳಿದು ಅಂಗಡಿಯೇ ಇಲ್ಲದಂತೆ ಮಾಡಿದಳು! ನಾಜಿಗಳು ವಾಪಸ್ ಬಂದಾಗ ಅಲ್ಲಿ ಅವರಿಗೆ ಬರಿ ಗೋಡೆಗಳು ಮಾತ್ರ ಕಂಡವು.

* ಜೇಮ್ಸ್ ಜಾಯ್ಸ್ ಬರೆದ ವಿಶ್ವವಿಖ್ಯಾತ ಕಾದಂಬರಿ 'ಯುಲಿಸಿಸ್' ಅನ್ನು ಪ್ರಕಟಿಸಲು ಜಗತ್ತಿನ ಯಾವುದೇ ಪ್ರಕಾಶಕರು ಮುಂದೆ ಬರಲಿಲ್ಲ. ಅದರಲ್ಲಿದ್ದ ಲೈಂಗಿಕ ಅಂಶಗಳ ಕಾರಣಕ್ಕೆ ಅದನ್ನು ನಿಷೇಧಿಸಲಾಗಿತ್ತು. ಆಗ ಈ ಪುಟ್ಟ ಪುಸ್ತಕದ ಅಂಗಡಿಯ ಮುಖ್ಯಸ್ಥೆ ಸಿಲ್ವಿಯಾ ಬೀಚ್ ತಾನೇ ಪ್ರಕಾಶಕಿಯಾಗಿ ಮುಂದೆ ಬಂದು ಆ ಪುಸ್ತಕವನ್ನು ಹೊರತಂದಳು. ಸಾಹಿತ್ಯ ಚರಿತ್ರೆಯ ಅತಿ ದೊಡ್ಡ ಕ್ರಾಂತಿಗೆ ಈ ಪುಟ್ಟ ಅಂಗಡಿ ಕಾರಣವಾಯಿತು.

* ಹಳೆಯ ಕಾಲದಲ್ಲಿ ಅನೇಕ ಸಾಹಿತಿಗಳಿಗೆ ಸ್ವಂತ ವಿಳಾಸವಿರುತ್ತಿರಲಿಲ್ಲ. ಅಂಥವರಿಗೆ ಈ ಅಂಗಡಿಯೇ ಅಧಿಕೃತ ವಿಳಾಸವಾಗಿತ್ತು. ಅರ್ನೆಸ್ಟ್ ಹೆಮಿಂಗ್ವೇ ಅವರಂಥ ಲೇಖಕರಿಗೆ ಬರುವ ಪತ್ರಗಳು ಇಲ್ಲಿಗೆ ಬರುತ್ತಿದ್ದವು. ಇಲ್ಲಿ ಪುಸ್ತಕಗಳನ್ನು ಕೇವಲ ಮಾರುತ್ತಿರಲಿಲ್ಲ, ಯಾರು ಬೇಕಾದರೂ ಕುಳಿತು ಓದಬಹುದಾದ ಲೈಬ್ರರಿ ಕೂಡ ಇತ್ತು.

Vishweshwar Bhat

Vishweshwar Bhat

Editor in Chief

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...