'ವೈರಲ್ ಸಂಸ್ಕೃತಿ'ಯಲ್ಲಿ ನಲುಗುತ್ತಿರುವ ಪ್ರವಾಸೋದ್ಯಮ ತಾಣಗಳು
ಸಾಮಾಜಿಕ ಜಾಲತಾಣಗಳು ಇಂದು ಪ್ರವಾಸೋದ್ಯಮದ ಅತಿದೊಡ್ಡ ಶತ್ರುಗಳಾಗಿವೆ. ಯಾರೋ ಒಬ್ಬ ಪ್ರಭಾವಿ ವ್ಯಕ್ತಿ (Influencer) ಯಾವುದೋ ಒಂದು ರಹಸ್ಯ ತಾಣದ ಲೊಕೇಶನ್ ಹಾಕಿದ ತಕ್ಷಣ, ಮರುದಿನವೇ ಅಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಫೋಟೋ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ನೀಲಿ ನೀರಿನ ಕೆರೆಗೆ ಕಲ್ಲು ಎಸೆಯುವುದು, ಹೂವುಗಳನ್ನು ಕೀಳುವುದು ಅಥವಾ ಬಂಡೆಗಳ ಮೇಲೆ ಹೆಸರು ಕೆತ್ತುವುದು—ಇವೆಲ್ಲವೂ ಪ್ರವಾಸಿಗರು ಆ ತಾಣಕ್ಕೆ ನೀಡುವ ‘ಉಡುಗೊರೆ’ಗಳಾಗಿವೆ. ಧಾರ್ಮಿಕ ಕೇಂದ್ರಗಳ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಶಾಂತಿ ಮತ್ತು ಭಕ್ತಿಯನ್ನು ಅರಸಿ ಹೋಗಬೇಕಾದ ಧಾರ್ಮಿಕ ತಾಣಗಳು ಇಂದು ‘ಪಿಕ್ನಿಕ್ ಸ್ಪಾಟ್’ಗಳಾಗಿ ಬದಲಾಗಿವೆ.
ಒಂದು ಕಡೆ, ಯಾವುದಾದರೂ ಸುಂದರವಾದ ತಾಣಗಳನ್ನು ನೋಡಿದಾಗ, ‘ಈ ಜಾಗವನ್ನು ಪ್ರವಾಸೋದ್ಯಮ ಅಥವಾ ಪ್ರೇಕ್ಷಣೀಯ ತಾಣಗಳಾಗಿ ಅಭಿವೃದ್ಧಿಪಡಿಸಬಾರದಿತ್ತಾ? ಎಷ್ಟೆಲ್ಲ ಅವಕಾಶ, potential ಇದ್ದವು’ ಎಂದೆನಿಸುತ್ತದೆ. ಇನ್ನೊಂದು ಕಡೆ, ಹಾಗೆ ಅಭಿವೃದ್ಧಿಪಡಿಸಿದ ಪ್ರೇಕ್ಷಣೀಯ ತಾಣಗಳನ್ನು ನೋಡಿ, ‘ಯಾಕಾದರೂ ಈ ತಾಣವನ್ನು ಪ್ರವಾಸೋದ್ಯಮಕ್ಕೆ ತೆರೆದೆವೋ, ಪ್ರವಾಸಿಗರಿಗೆ ಅವಕಾಶ ನೀಡಿದ್ದೇ ತಪ್ಪಾಯಿತು, ಈಗ ನೋಡಿ ಈ ತಾಣವನ್ನು ಹಾಳು ಮಾಡಿಬಿಟ್ಟಿದ್ದಾರೆ’ ಎಂದು ಹೇಳುವವರು ನಾವೇ. ಒಂದು ಸುಂದರ ತಾಣವನ್ನು ಕೈಯಾರ ಹಾಳು ಮಾಡಬೇಕು ಎಂದೆನಿಸಿದರೆ ಅದನ್ನು ಪ್ರವಾಸೋದ್ಯಮ ತಾಣ ಎಂದು ಘೋಷಿಸಬೇಕು ಎಂಬುದು ಮೇಲ್ನೋಟಕ್ಕೆ ವ್ಯಂಗ್ಯವಾಗಿ ಕಂಡರೂ, ಇದು ಇಂದಿನ ಅತಿರೇಕದ ಪ್ರವಾಸೋದ್ಯಮದ (Overtourism) ಕಹಿ ಸತ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಕೃತಿಯ ಮಡಿಲಲ್ಲಿರುವ ಶಾಂತಿಯುತ ತಾಣವೊಂದು ‘ಪ್ರವಾಸಿ ತಾಣ’ವಾಗಿ ಬದಲಾದಾಗ ಅಲ್ಲಿ ಸೌಂದರ್ಯಕ್ಕಿಂತ ಹೆಚ್ಚಾಗಿ ವಿನಾಶವೇ ಎದ್ದು ಕಾಣತೊಡಗುತ್ತದೆ.
ಇದನ್ನೂ ಓದಿ: ಹೈಡಿ ಎಂಬ ಹೆಸರಿಲ್ಲದೆ ಜರ್ಮನಿ ಅಸ್ತಿತ್ವವೇ ಅಪೂರ್ಣ!
ಯಾವುದೇ ಒಂದು ಸ್ಥಳ ಪ್ರವಾಸಿ ನಕ್ಷೆಯಲ್ಲಿ ಕಾಣಿಸಿಕೊಂಡ ತಕ್ಷಣ, ಅಲ್ಲಿನ ನೈಸರ್ಗಿಕ ನಿಶ್ಯಬ್ದ ಮಾಯವಾಗುತ್ತದೆ. ಮನುಷ್ಯನ ಪಾದದ ಗುರುತು ಬೀಳದ ಜಾಗಗಳಲ್ಲಿ ಈಗ ಒಡೆದ ಬಿಯರ್ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಚಿಪ್ಸ್ ಪ್ಯಾಕೆಟ್‌ಗಳು ರಾರಾಜಿಸುತ್ತವೆ. ರೆಸಾರ್ಟ್‌ಗಳಿಗಾಗಿ ಕಾಡು ಕಡಿಯುವುದು, ಪಾರ್ಕಿಂಗ್‌ಗಾಗಿ ಗುಡ್ಡಗಳನ್ನು ಅಗೆಯುವುದು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಸಿಮೆಂಟ್ ರಸ್ತೆಗಳನ್ನು ನಿರ್ಮಿಸುವುದು ಆ ತಾಣದ ಮೂಲ ‘ಆತ್ಮ’ವನ್ನೇ ಕೊಲ್ಲುತ್ತದೆ. ಹಕ್ಕಿಗಳ ಕಲರವ, ಚಿಲಿಪಿಲಿ ಕೇಳಬೇಕಾದ ಜಾಗದಲ್ಲಿ ಡಿಜೆ ಸೌಂಡ್ ಮತ್ತು ಪ್ರವಾಸಿಗರ ಗದ್ದಲ ತುಂಬಿಕೊಳ್ಳುತ್ತದೆ.
ಇಂದಿನ ದಿನಗಳಲ್ಲಿ ಒಂದು ಸುಂದರ ತಾಣ ‘ವೈರಲ್’ ಆಯಿತೆಂದರೆ ಅದರ ಅಂತ್ಯಕಾಲ ಹತ್ತಿರವಾಯಿತು ಎಂದೇ ಅರ್ಥ. ಜನರು ಪ್ರಕೃತಿಯನ್ನು ಅನುಭವಿಸಲು ಹೋಗುವುದಕ್ಕಿಂತ ಹೆಚ್ಚಾಗಿ, ಅಲ್ಲಿ ಒಂದು ‘ರೀಲ್’ ಅಥವಾ ‘ಸೆಲ್ಫಿ’ ತೆಗೆಯಲು ಮುಗಿಬೀಳುತ್ತಾರೆ. ಈ ಓಟದಲ್ಲಿ ಆ ತಾಣದ ಶಾಂತಿ ಮತ್ತು ಪಾವಿತ್ರ್ಯ ಎರಡೂ ಮಣ್ಣುಪಾಲಾಗುತ್ತವೆ. ಕೇವಲ ಒಂದು ಫೋಟೋಗಾಗಿ ಪ್ರವಾಸಿಗರು ನಿರ್ಬಂಧಿತ ಪ್ರದೇಶಗಳಿಗೆ ನುಗ್ಗುತ್ತಾರೆ, ಅಪರೂಪದ ಗಿಡಮೂಲಿಕೆಗಳನ್ನು ತುಳಿಯುತ್ತಾರೆ ಮತ್ತು ಪ್ರಾಣಿ-ಪಕ್ಷಿಗಳ ಆವಾಸಸ್ಥಾನಕ್ಕೆ ಧಕ್ಕೆ ತರುತ್ತಾರೆ. ಒಂದು ಸ್ಥಳವನ್ನು ‘ಪ್ರವಾಸಿ ತಾಣ’ ಎಂದು ಘೋಷಿಸಿದ ಕೂಡಲೇ ಅಲ್ಲಿನ ಭೂಮಿಯ ಬೆಲೆ ಗಗನಕ್ಕೇರುತ್ತದೆ. ಸ್ಥಳೀಯ ಕಲ್ಲು, ಮಣ್ಣು ಮತ್ತು ಮರದ ಮನೆಗಳ ಬದಲಿಗೆ, ಪ್ರಕೃತಿಗೆ ಒಪ್ಪದ ಬೃಹತ್ ಸಿಮೆಂಟ್ ಕಟ್ಟಡಗಳು ತಲೆ ಎತ್ತುತ್ತವೆ. ಕೊಡಗಿನಂಥ ಪ್ರದೇಶಗಳಲ್ಲಿ ಇಂಥ ರೆಸಾರ್ಟ್‌ಗಳ ನಿರ್ಮಾಣದಿಂದಾಗಿ ಗುಡ್ಡಗಳು ಕುಸಿದಿದ್ದು. ಮಳೆ ನೀರು ಹರಿದು ಹೋಗುವ ನೈಸರ್ಗಿಕ ಹಳ್ಳಗಳನ್ನು ಮುಚ್ಚಿ ಕಟ್ಟಡ ಕಟ್ಟುವುದರಿಂದ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿ ತಾಣಗಳಲ್ಲಿ ಪ್ರವಾಹ ಮತ್ತು ಭೂಕುಸಿತಗಳು ಹೆಚ್ಚಾಗುತ್ತಿವೆ.

ಪ್ರವಾಸೋದ್ಯಮ ಹೋದ ಕಡೆಯಲ್ಲೆಲ್ಲ ಪ್ಲಾಸ್ಟಿಕ್ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗುತ್ತದೆ. ನದಿ ಮುಖಜ ಭೂಮಿಗಳು ಮತ್ತು ಸಮುದ್ರ ತೀರಗಳಲ್ಲಿ ಪ್ರವಾಸಿಗರು ಎಸೆಯುವ ಪ್ಲಾಸ್ಟಿಕ್ ಬಾಟಲಿಗಳು ಅಲ್ಲಿನ ಜಲಚರಗಳ ಮಾರಣಹೋಮಕ್ಕೆ ಕಾರಣವಾಗುತ್ತಿವೆ. ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುವ ಪ್ರವಾಸಿಗರು ಎಸೆಯುವ ಆಹಾರದ ಪೊಟ್ಟಣಗಳನ್ನು ತಿಂದು ಕಾಡುಪ್ರಾಣಿಗಳು ಅನಾರೋಗ್ಯಕ್ಕೆ ಈಡಾಗುತ್ತಿವೆ. ಅವುಗಳ ಸಂತತಿ ನಶಿಸಲಾರಂಭಿಸಿವೆ. ಯಾವುದೇ ಒಂದು ಸುಂದರ ತಾಣಕ್ಕೆ ಎಷ್ಟು ಜನರನ್ನು ಭರಿಸುವ ಶಕ್ತಿ ಇದೆ ಎಂಬ ಲೆಕ್ಕಾಚಾರವೇ ನಮ್ಮಲ್ಲಿಲ್ಲ. ಒಂದು ಸಣ್ಣ ಗುಡ್ಡದ ಮೇಲೆ ಸಾವಿರಾರು ವಾಹನಗಳು ಏರಿದಾಗ ಆ ಬೆಟ್ಟದ ಸ್ಥಿರತೆ ತಪ್ಪುತ್ತದೆ. ಹಿಮಾಲಯದ ತಪ್ಪಲಿನಿಂದ ಹಿಡಿದು ನಮ್ಮ ಪಶ್ಚಿಮ ಘಟ್ಟಗಳವರೆಗೆ ಇಂದು ನಾವು ಕಾಣುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಈ ‘ಅತಿಯಾದ ಪ್ರವಾಸೋದ್ಯಮ’ವೇ ನೇರ ಕಾರಣ. ಒಂದು ತಾಣವನ್ನು ಪ್ರವಾಸಿ ಕೇಂದ್ರವನ್ನಾಗಿ ಘೋಷಿಸುವುದು ಎಂದರೆ ಅದನ್ನು ಅಭಿವೃದ್ಧಿಪಡಿಸುವುದು, ಇನ್ನಷ್ಟು ಅಂದಗೊಳಿಸುವುದು ಎಂದಾಗಬೇಕೇ ಹೊರತು, ಅದನ್ನು ‘ನಾಶ’ ಮಾಡುವುದು ಎಂದಾಗಬಾರದು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ನಾವು ಕೇವಲ ಕೃತಕ ಪಾರ್ಕ್ಗಳನ್ನು ಮಾತ್ರ ನೋಡಬೇಕಾಗುತ್ತದೆ, ನೈಜ ಪ್ರಕೃತಿಯನ್ನಲ್ಲ!
ಒಂದು ಕಾಲದಲ್ಲಿ ಪ್ರವಾಸೋದ್ಯಮ ಎಂದರೆ ಪ್ರಕೃತಿಯ ಅಡಗುತಾಣಗಳನ್ನು ಅನ್ವೇಷಿಸುವುದಾಗಿತ್ತು. ಆದರೆ ಇಂದು ಅದು ‘ಸವಲತ್ತುಗಳ ಪ್ರದರ್ಶನ’ವಾಗಿ ಬದಲಾಗಿದೆ. ಜನರಿಗೆ ಎಲ್ಲವನ್ನೂ ಅವರು ಕುಳಿತಿರುವ ಜಾಗದಲ್ಲಿಯೇ ತೋರಿಸುವುದಾಗಿದೆ. ನೈಸರ್ಗಿಕ ಜಲಪಾತಗಳ ಪಕ್ಕದಲ್ಲಿ ಗಾಜಿನ ಸೇತುವೆ ಕಟ್ಟುವುದು ಅಥವಾ ಕಾಡಿನ ನಡುವೆ ಸ್ವಿಮ್ಮಿಂಗ್ ಪೂಲ್ ನಿರ್ಮಿಸುವುದು ಪ್ರಕೃತಿಯನ್ನು ಸುಂದರಗೊಳಿಸುವ ಪ್ರಯತ್ನವಲ್ಲ, ಬದಲಾಗಿ ಅದನ್ನು ವಿರೂಪಗೊಳಿಸುವ ಪ್ರಯತ್ನ. ಬೆಟ್ಟದ ತಪ್ಪಲುಗಳಲ್ಲಿ ರಾತ್ರಿ ಇಡೀ ಬೆಳಗುವ ಹೈ-ವೋಲ್ಟೇಜ್ ದೀಪಗಳು ಅಲ್ಲಿನ ಪ್ರಾಣಿ-ಪಕ್ಷಿಗಳ ನಿದ್ರೆಯನ್ನು ಮತ್ತು ನೈಸರ್ಗಿಕ ಜೀವನಕ್ರಮವನ್ನು ಕೆಡಿಸುತ್ತಿವೆ. ನಕ್ಷತ್ರಗಳನ್ನು ನೋಡಬೇಕಾದ ಜಾಗದಲ್ಲಿ ಇಂದು ನಾವು ಮನುಷ್ಯ ನಿರ್ಮಿತ ಲೇಸರ್ ಕಿರಣಗಳನ್ನು ನೋಡುತ್ತಿದ್ದೇವೆ.
ಪ್ರವಾಸೋದ್ಯಮದಿಂದ ಸ್ಥಳೀಯರಿಗೆ ಕೆಲಸ ಸಿಗುತ್ತದೆ ಎಂಬುದು ಒಂದು ವಾದ. ಆದರೆ ಇದರ ಹಿಂದೆ ಒಂದು ಕರಾಳ ಮುಖವಿದೆ. ದೊಡ್ಡ ದೊಡ್ಡ ರೆಸಾರ್ಟ್‌ಗಳ ಮಾಲೀಕರು ಅತಿ ಹೆಚ್ಚು ಲಾಭವನ್ನು ನಗರಗಳಿಗೆ ಕೊಂಡೊಯ್ಯುತ್ತಾರೆ. ಸ್ಥಳೀಯರು ಕೇವಲ ಅಲ್ಪ ವೇತನದ ಕಾರ್ಮಿಕರಾಗಿ ಅಥವಾ ಪಾರ್ಕಿಂಗ್ ಸಹಾಯಕರಾಗಿ ಉಳಿಯುತ್ತಾರೆ. ಪ್ರವಾಸಿಗರು ಬರುವುದರಿಂದ ಹಣ್ಣು, ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರುತ್ತದೆ. ಇದರಿಂದ ಸಾಮಾನ್ಯ ಸ್ಥಳೀಯ ನಿವಾಸಿ ತಾನು ಹುಟ್ಟಿ ಬೆಳೆದ ಜಾಗದಲ್ಲೇ ಬದುಕು ನಡೆಸುವುದು ದುಸ್ತರವಾಗುತ್ತದೆ.
ಸಾಮಾಜಿಕ ಜಾಲತಾಣಗಳು ಇಂದು ಪ್ರವಾಸೋದ್ಯಮದ ಅತಿದೊಡ್ಡ ಶತ್ರುಗಳಾಗಿವೆ. ಯಾರೋ ಒಬ್ಬ ಪ್ರಭಾವಿ ವ್ಯಕ್ತಿ (Influencer) ಯಾವುದೋ ಒಂದು ರಹಸ್ಯ ತಾಣದ ಲೊಕೇಶನ್ ಹಾಕಿದ ತಕ್ಷಣ, ಮರುದಿನವೇ ಅಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಫೋಟೋ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ನೀಲಿ ನೀರಿನ ಕೆರೆಗೆ ಕಲ್ಲು ಎಸೆಯುವುದು, ಹೂವುಗಳನ್ನು ಕೀಳುವುದು ಅಥವಾ ಬಂಡೆಗಳ ಮೇಲೆ ಹೆಸರು ಕೆತ್ತುವುದು—ಇವೆಲ್ಲವೂ ಪ್ರವಾಸಿಗರು ಆ ತಾಣಕ್ಕೆ ನೀಡುವ ‘ಉಡುಗೊರೆ’ಗಳಾಗಿವೆ. ಧಾರ್ಮಿಕ ಕೇಂದ್ರಗಳ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಶಾಂತಿ ಮತ್ತು ಭಕ್ತಿಯನ್ನು ಅರಸಿ ಹೋಗಬೇಕಾದ ಧಾರ್ಮಿಕ ತಾಣಗಳು ಇಂದು ‘ಪಿಕ್ನಿಕ್ ಸ್ಪಾಟ್’ಗಳಾಗಿ ಬದಲಾಗಿವೆ. ಅಲ್ಲಿನ ಮೌನವನ್ನು ಸೆಲ್ಫಿ ಸ್ಟಿಕ್‌ಗಳು ಮತ್ತು ಗದ್ದಲದ ಪ್ರವಾಸಿಗರು ನುಂಗಿ ಹಾಕಿದ್ದಾರೆ. ಧಾರ್ಮಿಕ ತಾಣಗಳು ಕೇವಲ ಇಟ್ಟಿಗೆ-ಮಣ್ಣಿನ ಕಟ್ಟಡಗಳಲ್ಲ, ಅವು ಶತಮಾನಗಳ ನಂಬಿಕೆ, ಮೌನ ಮತ್ತು ಆಧ್ಯಾತ್ಮಿಕ ಶಕ್ತಿಯ ಕೇಂದ್ರಗಳು. ಆದರೆ ಇಂದು ಪ್ರವಾಸೋದ್ಯಮ ಎಂಬ ಅಬ್ಬರದ ಅಡಿಯಲ್ಲಿ ಈ ಪವಿತ್ರ ಕೇಂದ್ರಗಳು ತಮ್ಮ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ.
ಹಿಂದೆ ಜನರು ದೇವಸ್ಥಾನಕ್ಕೆ ಹೋಗುತ್ತಿದ್ದುದು ಮನಸ್ಸಿನ ನೆಮ್ಮದಿಗಾಗಿ ಮತ್ತು ದೇವರ ದರ್ಶನಕ್ಕಾಗಿ. ಆದರೆ ಇಂದು ದರ್ಶನಕ್ಕಿಂತ ಹೆಚ್ಚಾಗಿ ‘ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಜಗತ್ತಿಗೆ ತೋರಿಸುವ ಹಪಾಹಪಿ ಹೆಚ್ಚಾಗಿದೆ. ಗರ್ಭಗುಡಿಯ ಮುಂದೆ ನಿಂತು ಭಕ್ತಿಯಿಂದ ಕೈಮುಗಿಯುವ ಬದಲು, ಸೆಲ್ಫಿ ಸ್ಟಿಕ್ ಹಿಡಿದು ವಿಚಿತ್ರ ಭಂಗಿಗಳಲ್ಲಿ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದ ದರ್ಶನಕ್ಕೆ ಸಾಲಿನಲ್ಲಿ ನಿಂತ ಇತರ ಭಕ್ತರಿಗೆ ತೊಂದರೆಯಾಗುವುದಲ್ಲದೇ, ಆ ಜಾಗದ ಗಾಂಭೀರ್ಯವೂ ಹಾಳಾಗುತ್ತದೆ. ಪವಿತ್ರ ಆವರಣಗಳಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿ ‘ರೀಲ್ಸ್’ ಮಾಡುವುದು ತಾಣದ ಪಾವಿತ್ರ್ಯಕ್ಕೆ ಎಸಗುವ ಅಪಚಾರ. ದೇವಸ್ಥಾನಗಳ ಸುತ್ತಮುತ್ತ ಬೆಳೆಯುತ್ತಿರುವ ಅತಿಯಾದ ವ್ಯಾಪಾರೀಕರಣವೂ ಶಾಂತಿಯನ್ನು ಕಸಿದುಕೊಂಡಿದೆ. ಹೂವು, ಹಣ್ಣು ಮತ್ತು ಪ್ರಸಾದದ ಹೆಸರಿನಲ್ಲಿ ಬರುವ ಪ್ಲಾಸ್ಟಿಕ್ ಕಸ ಇಡೀ ಪರಿಸರವನ್ನು ಹಾಳು ಮಾಡುತ್ತಿದೆ. ಪವಿತ್ರ ನದಿಗಳು ಮತ್ತು ಪುಷ್ಕರಣಿಗಳು ಇಂದು ಪ್ರವಾಸಿಗರು ಎಸೆಯುವ ಕಸದ ತೊಟ್ಟಿಗಳಾಗುತ್ತಿವೆ.
ಇತ್ತೀಚೆಗೆ ಕರ್ನಾಟಕ ಮಂದಿರ ಮಹಾಸಂಘದ ಪದಾಧಿಕಾರಿಗಳು ಧಾರ್ಮಿಕ ದತ್ತಿ ಖಾತೆ ಸಚಿವ ರಾಮಲಿಂಗ ರೆಡ್ಡಿಯವರನ್ನು ಭೇಟಿ ಮಾಡಿ, ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಿ-ವೆಡ್ಡಿಂಗ್ ಶೂಟಿಂಗ್ ಗಳನ್ನು ನಿಷೇದಿಸಿ ಕಾನೂನು ರೂಪಿಸಬೇಕೆಂದು ವಿನಂತಿಸಿಕೊಂಡಿದ್ದಾರೆ. ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಸ್ಥಾನದಲ್ಲಿ ಕೆಲವರು ದೇವಸ್ಥಾನದ ಒಳಭಾಗದಲ್ಲಿ ಚಪ್ಪಲಿ ಧರಿಸಿ ಅಸಭ್ಯ ಭಂಗಿಯಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟಿಂಗ್ ನಡೆಸಿದ ಘಟನೆ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರೆ. ದೇವಸ್ಥಾನಗಳ ಪ್ರಾಂಗಣದಲ್ಲಿ ಯಾವುದೇ ಅನುಮತಿ ಇಲ್ಲದೆ ಆಶ್ಲೀಲ, ಅಸಭ್ಯ ಅಥವಾ ಸಂಪ್ರದಾಯ ವಿರುದ್ಧ ಉಡುಪುಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟಿಂಗ್, ರೀಲ್ಸ್ ನಿರ್ಮಾಣ ಇತ್ಯಾದಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ದೇವಸ್ಥಾನಗಳನ್ನು ವೈಯಕ್ತಿಕ ಪ್ರಚಾರ, ಸಾಮಾಜಿಕ ಜಾಲತಾಣದ ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ಬಳಸುವುದು ಧಾರ್ಮಿಕ ಸ್ಥಳಗಳ ಗೌರವಕ್ಕೆ ಧಕ್ಕೆ ತರುತ್ತಿದೆ.
ಧರ್ಮ ಮತ್ತು ಪ್ರವಾಸೋದ್ಯಮ ಜತೆಜತೆಯಾಗಿ ಸಾಗಬಹುದು, ಆದರೆ ‘ಪ್ರವಾಸೋದ್ಯಮ’ವು ‘ಧರ್ಮ’ವನ್ನು ನುಂಗಿ ಹಾಕಬಾರದು. ನಾವು ದೇವಸ್ಥಾನಕ್ಕೆ ಹೋಗುವುದು ನಮ್ಮ ಒಳಗಿನ ಗದ್ದಲವನ್ನು ಶಾಂತಗೊಳಿಸಲು ಹೊರತು, ದೇವಸ್ಥಾನದ ಶಾಂತಿಗೆ ಭಂಗಗೊಳಿಸುವುದಕ್ಕಲ್ಲ. ಈ ಅರಿವು ಪ್ರತಿಯೊಬ್ಬ ಪ್ರವಾಸಿಯಲ್ಲೂ ಮೂಡಿದಾಗ ಮಾತ್ರ ನಮ್ಮ ಧಾರ್ಮಿಕ ತಾಣಗಳು ‘ಪಿಕ್ನಿಕ್ ಸ್ಪಾಟ್’ ಆಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯ. ಹಾಗೆಯೇ ನಾವು ಪ್ರಕೃತಿಯನ್ನು ನೋಡಲು ಹೋಗುವಾಗ ‘ಯಜಮಾನ’ನಂತೆ ಹೋಗದೇ ಒಬ್ಬ ‘ಅತಿಥಿ’ಯಂತೆ ಹೋಗುವುದನ್ನು ಕಲಿಯಬೇಕಿದೆ. ಇಲ್ಲವಾದರೆ, ‘ಪ್ರವಾಸೋದ್ಯಮ ತಾಣ’ ಎಂಬ ಹಣೆಪಟ್ಟಿ ಆ ಸುಂದರ ಜಾಗಕ್ಕೆ ಅಂಟಿದ ‘ಮರಣ ಶಾಸನ’ವಾಗುವುದರಲ್ಲಿ ಸಂಶಯವಿಲ್ಲ.
ಪ್ರವಾಸೋದ್ಯಮವು ಒಂದು ಶಾಪವಾಗಬಾರದು ಎನ್ನುವ ಮಾತು ಇಂದಿನ ಕಾಲಘಟ್ಟದ ಅತ್ಯಂತ ದೊಡ್ಡ ಎಚ್ಚರಿಕೆಯಾಗಿದೆ. ಪ್ರಕೃತಿಯು ನಮಗೆ ನೀಡಿದ ಸುಂದರ ಕೊಡುಗೆಗಳನ್ನು ನಾವು ಕೇವಲ ಬಳಕೆದಾರರಾಗಿ ನೋಡುತ್ತಿದ್ದೇವೆಯೇ ಹೊರತು, ಅದರ ಪಾಲಕರಾಗಿ ಅಲ್ಲ. ಒಂದು ಸುಂದರ ತಾಣವನ್ನು ಕೈಯಾರೆ ಹಾಳು ಮಾಡುವುದು ಎಂದರೆ ಅದು ಕೇವಲ ಮಣ್ಣು, ನೀರು ಅಥವಾ ಮರಗಳಿಗೆ ಮಾಡುವ ದ್ರೋಹವಲ್ಲ. ಅದು ನಮ್ಮ ಮುಂದಿನ ಪೀಳಿಗೆಯ ಬದುಕುವ ಹಕ್ಕನ್ನು ಕಿತ್ತುಕೊಳ್ಳುವ ಕ್ರೂರ ನಡೆ. ಪ್ರವಾಸೋದ್ಯಮವು ಮೂಲತಃ ಜ್ಞಾನಾರ್ಜನೆ, ಸಾಂಸ್ಕೃತಿಕ ವಿನಿಮಯ ಮತ್ತು ಆರ್ಥಿಕ ಪ್ರಗತಿಯ ವರವಾಗಬೇಕಿತ್ತು. ಆದರೆ ಇಂದು ಅದು ‘ಮಾಸ್ ಟೂರಿಸಂ’ (Mass Tourism) ಎಂಬ ಹೆಸರಿನಲ್ಲಿ ಪ್ರಕೃತಿಯ ಮೇಲೆ ದಂಡೆತ್ತಿ ಹೋಗುತ್ತಿದೆ. ಶಾಂತವಾಗಿರಬೇಕಾದ ಪಶ್ಚಿಮ ಘಟ್ಟಗಳಿರಲಿ ಅಥವಾ ನೀಲಿ ಸಮುದ್ರ ತೀರಗಳಿರಲಿ, ಮನುಷ್ಯನ ಅತಿಯಾದ ಹಸ್ತಕ್ಷೇಪದಿಂದಾಗಿ ಅಲ್ಲಿನ ಜೀವವೈವಿಧ್ಯ ನಾಶವಾಗುತ್ತಿದೆ.
ನಾನು ಕೆಲ ದಿನಗಳ ಹಿಂದೆ ಉತ್ತರ ಕನ್ನಡದ ಹೊನ್ನಾವರದ ಮ್ಯಾಂಗ್ರೋವ್ ಕಾಡಿಗೆ ಹೋಗಿದ್ದೆ. ಕಳೆದ ಹತ್ತು ವರ್ಷಗಳಲ್ಲಿ ಆ ಪ್ರದೇಶಗಳಲ್ಲಿ ಅತಿಯಾದ ಬೋಟಿಂಗ್ ಮತ್ತು ಸಫಾರಿಗಳು ಅಲ್ಲಿನ ಪ್ರಾಣಿ-ಪಕ್ಷಿಗಳ ಆವಾಸಸ್ಥಾನವನ್ನೇ ಗಾಳುಮೇಳು ಮಾಡಿವೆ. ಇದು ಕೇವಲ ಒಂದು ಸ್ಥಳದ ನಾಶವಲ್ಲ, ಇಡೀ ಪರಿಸರ ವ್ಯವಸ್ಥೆಯ ಕೊಂಡಿಯನ್ನು ಕಡಿದಂತೆ. ಕುಂದಾಪುರ, ಹೊನ್ನಾವರ ಅಥವಾ ಕಾರವಾರದಂಥ ನದಿ ಮುಖಜ ಭೂಮಿಗಳಲ್ಲಿ ಮ್ಯಾಂಗ್ರೋವ್‌ಗಳು ಜಲಚರಗಳ ‘ನರ್ಸರಿ’ಗಳಂತೆ ಕಾರ್ಯನಿರ್ವಹಿಸುತ್ತವೆ. ಮೋಟಾರ್ ಬೋಟ್‌ಗಳು ವೇಗವಾಗಿ ಚಲಿಸಿದಾಗ ಉಂಟಾಗುವ ಕೃತಕ ಅಲೆಗಳು ಮ್ಯಾಂಗ್ರೋವ್‌ಗಳ ಮೃದುವಾದ ಬೇರುಗಳನ್ನು ಸಡಿಲಗೊಳಿಸುತ್ತವೆ. ಇದು ಹೊಸದಾಗಿ ಚಿಗುರುತ್ತಿರುವ ಸಸಿಗಳನ್ನು ಬುಡಸಮೇತ ಕಿತ್ತೆಸೆಯುತ್ತವೆ. ಬೋಟ್‌ಗಳಿಂದ ಸೋರುವ ಇಂಧನ ಮತ್ತು ಗ್ರೀಸ್ ನೀರಿನ ಮೇಲ್ಪದರದಲ್ಲಿ ತೆಳುವಾದ ಪದರವನ್ನು ನಿರ್ಮಿಸುತ್ತದೆ. ಇದರಿಂದ ಮ್ಯಾಂಗ್ರೋವ್ ಬೇರುಗಳಿಗೆ ಅಗತ್ಯವಿರುವ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡು, ಗಿಡಗಳು ಉಸಿರುಗಟ್ಟಿ ಸಾಯುತ್ತವೆ. ಮೀನುಗಳು ಮತ್ತು ಏಡಿಗಳು ತಮ್ಮ ಮೊಟ್ಟೆಗಳನ್ನು ಮ್ಯಾಂಗ್ರೋವ್ ಬೇರುಗಳ ನಡುವೆ ಇಡುತ್ತವೆ. ಬೋಟ್‌ಗಳ ಸತತ ಓಡಾಟ ಮತ್ತು ಶಬ್ದದಿಂದ ಈ ಮೊಟ್ಟೆಗಳು ನಾಶವಾಗಿ, ಮೀನುಗಾರಿಕೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಕಾಡು ಎನ್ನುವುದು ಪ್ರಾಣಿಗಳ ಮನೆ. ಅಲ್ಲಿ ನಾವು ಮಾಡುವ ಸಫಾರಿಗಳು ಅವುಗಳ ಖಾಸಗಿತನಕ್ಕೆ ಧಕ್ಕೆ ತರುತ್ತವೆ ಎಂಬ ಸೂಕ್ಷ್ಮ ಪ್ರಜ್ಞೆ ನಮ್ಮಲ್ಲಿರಬೇಕು.
ಇದನ್ನೂ ಓದಿ: 'ದಿ ಟ್ರಾವೆಲ್ಸ್ ಆಫ್ ಮಾರ್ಕೊ ಪೋಲೋ' : ಪ್ರತಿ ಪ್ರವಾಸಿಯೂ ಓದಲೇಬೇಕಾದ ಕೃತಿ
ಪರಿಸರ ಎನ್ನುವುದು ಒಂದು ಸರಪಳಿಯಂತೆ. ಒಂದು ಕೊಂಡಿ ಕಡಿದರೆ ಇಡೀ ವ್ಯವಸ್ಥೆ ಕುಸಿಯುತ್ತದೆ. ಮ್ಯಾಂಗ್ರೋವ್‌ಗಳು ನಾಶವಾದರೆ ಅಲ್ಲಿ ಆಶ್ರಯ ಪಡೆಯುವ ಸಣ್ಣ ಮೀನುಗಳು ಇಲ್ಲವಾಗುತ್ತವೆ. ಸಣ್ಣ ಮೀನುಗಳಿಲ್ಲದಿದ್ದರೆ ಅವುಗಳನ್ನು ಅವಲಂಬಿಸಿರುವ ದೊಡ್ಡ ಮೀನುಗಳು ಮತ್ತು ಹಕ್ಕಿಗಳು ನಾಶವಾಗುತ್ತವೆ. ಮ್ಯಾಂಗ್ರೋವ್‌ಗಳು ಕಾರ್ಬನ್ ಡೈಯಾಕ್ಸೈಡ್ ಅನ್ನು ಅತಿ ಹೆಚ್ಚು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಇವುಗಳನ್ನು ನಾವು ಪ್ರವಾಸೋದ್ಯಮದ ಹೆಸರಿನಲ್ಲಿ ಹಾಳು ಮಾಡಿದರೆ, ಜಾಗತಿಕ ತಾಪಮಾನ ಏರಿಕೆಗೆ ನಾವೇ ನೇರ ಕಾರಣವಾಗುತ್ತೇವೆ. ಸುನಾಮಿ ಅಥವಾ ಚಂಡಮಾರುತ ಬಂದಾಗ ಈ ಕಾಡುಗಳೇ ನಮಗೆ ರಕ್ಷಣೆ ನೀಡುತ್ತವೆ. ಈ ‘ಹಸಿರು ಗೋಡೆ’ಗಳನ್ನು ನಾವು ಬೋಟಿಂಗ್ ಮತ್ತು ಸಫಾರಿಗಳ ಮೋಜಿನಿಂದ ಕಳೆದುಕೊಂಡರೆ, ಕರಾವಳಿ ಹಳ್ಳಿಗಳು ಅಸಹಾಯಕವಾಗುತ್ತವೆ. ಪ್ರಕೃತಿಯನ್ನು ರಕ್ಷಿಸುವುದು ಎಂದರೆ ನಮ್ಮ ಅಸ್ತಿತ್ವವನ್ನು ರಕ್ಷಿಸುವುದು. ನಾವು ಮಾಡುವ ಒಂದು ಸಣ್ಣ ಮೋಜು ಇಡೀ ಪರಿಸರ ವ್ಯವಸ್ಥೆಯನ್ನೇ ಬಲಿ ತೆಗೆದುಕೊಳ್ಳದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪ್ರವಾಸಿಯ ಮತ್ತು ಆಡಳಿತದ ಜವಾಬ್ದಾರಿಯಾಗಿದೆ.
ಪ್ರಕೃತಿಯು ಒಂದು ಸುಂದರ ಗ್ರಂಥಾಲಯವಿದ್ದಂತೆ. ನಾವು ಅದನ್ನು ಓದಬೇಕೇ ಹೊರತು ಅದರ ಪುಟಗಳನ್ನು ಹರಿಯಬಾರದು. ನಾವು ಪ್ರಕೃತಿಯನ್ನು ನೋಡಲು ಹೋಗೋಣ, ಆದರೆ ಅಲ್ಲಿ ನಮ್ಮ ಹೆಜ್ಜೆಗುರುತುಗಳನ್ನು ಹೊರತುಪಡಿಸಿ ಏನನ್ನೂ ಬಿಟ್ಟು ಬರುವುದು ಬೇಡ. ನೆನಪುಗಳನ್ನು ಹೊರತುಪಡಿಸಿ ಏನನ್ನೂ ತರುವುದು ಬೇಡ. ಪ್ರವಾಸೋದ್ಯಮವು ಪ್ರಕೃತಿಯನ್ನು ಆಸ್ವಾದಿಸುವ ಸಾಧನವಾಗಬೇಕೇ ಹೊರತು ಅದನ್ನು ಅಳಿಸುವ ಆಯುಧವಾಗಬಾರದು. ಮುಂದಿನ ಪೀಳಿಗೆಗೆ ನಾವು ಒಂದು ಸುಂದರ ಹಸಿರು ಪ್ರಪಂಚವನ್ನು ಬಿಟ್ಟು ಹೋಗಬೇಕಾದರೆ ಇಂದು ನಾವು ನಮ್ಮ ಮೋಜಿನ ಮಿತಿಯನ್ನು ಅರಿಯುವುದು ಅತ್ಯಗತ್ಯ.