ಕೆಲವು ತಿಂಗಳ ಹಿಂದೆ, ಸ್ವೀಡನ್ ಪ್ರವಾಸಿಯೊಬ್ಬ ಬಾದಾಮಿಗೆ ಹೋಗಿದ್ದ. ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟ ಆತ ಬಾದಾಮಿ ಬಸ್ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ, ಕೋತಿಯೊಂದು ಆತನ ಕ್ಯಾಮೆರಾವನ್ನು ಎಗರಿಸಿಕೊಂಡು ಹೋಯಿತು. ಆತ ಅದನ್ನು ಬೆನ್ನಟ್ಟಿ ಹೋಗುವಾಗ ಬಿದ್ದು ತರಚಿದ ಗಾಯಗಳಾದವು. ಬಹಳ ಪ್ರಯಾಸಪಟ್ಟ ನಂತರ ಆತನ ಕ್ಯಾಮೆರಾವೇನೋ ಸಿಕ್ಕಿತು. ಆದರೆ ಅದು ಬಳಸುವಂತಿರದೇ ನುಜ್ಜುಗುಜ್ಜಾಗಿತ್ತು. ಆತ ಇಡೀ ದೇಶದ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿ ತನ್ನ ತಾಯ್ನಾಡಿನ ಪತ್ರಿಕೆಯೊಂದರಲ್ಲಿ ಲೇಖನ ಬರೆದ. ಆತನ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿ ಸಾವಿರಾರು ಜನ ಕಾಮೆಂಟ್ ಬರೆದರು. ಭಾರತ ಪ್ರವಾಸೋದ್ಯಮಕ್ಕೆ ಸಮರ್ಪಕ ದೇಶ ಅಲ್ಲ ಎನ್ನುವ ಧಾಟಿಯ ಬರಹಗಳು ಒಂದು ವಾರ ಕಾಲ ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿತ್ತು.

ಸುಮಾರು ಆರು ತಿಂಗಳ ಹಿಂದೆ, ಸೋಲೋ ಪ್ರವಾಸಿಗನಾಗಿ ಬೆಂಗಳೂರಿಗೆ ಬಂದ ಸ್ಪೇನಿನ ಪ್ರಜೆಯೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ. ಅಲ್ಲಿನ ಪತ್ರಿಕೆಗಳು ಕರ್ನಾಟಕವನ್ನು ಅತ್ಯಂತ ಕೆಟ್ಟದಾಗಿ ಚಿತ್ರಿಸಿ ವರದಿಗಳನ್ನು ಪ್ರಕಟಿಸಿದವು. ನಮ್ಮ ಪತ್ರಿಕೆಗಳು ಸಿಂಗಲ್ ಕಾಲಂ ಸುದ್ದಿ ಮಾಡಿದರೆ, ಅಲ್ಲಿನ ಪತ್ರಿಕೆಗಳು "ಕರ್ನಾಟಕಕ್ಕೆ ಹೋಗುವ ಪ್ರವಾಸಿಗರೇ ಎಚ್ಚರ" ಎಂದು ಲೇಖನಗಳನ್ನು ಪ್ರಕಟಿಸಿ, ಕರ್ನಾಟಕದ ಮಾನ ಹರಾಜು ಹಾಕಿದವು.

ವಿದೇಶಿ ಪ್ರಜೆಯೊಬ್ಬ ಪರ್ಸ್ ಕಳೆದುಕೊಂಡರೆ, ವಿದೇಶಿ ಪ್ರವಾಸಿಗ ಮೋಸ ಹೋದರೆ, ಆಟೋ ಚಾಲಕರಿಂದ ವಂಚನೆಗೊಳಗಾದರೆ, ನಮ್ಮ ಮಾಧ್ಯಮಗಳಲ್ಲಿ ವರದಿಯಾಗದೇ ಹೋಗಬಹುದು. ಆದರೆ ವಿದೇಶಿ ಮಾಧ್ಯಮಗಳಲ್ಲಿ ನಮ್ಮ ರಾಜ್ಯದ ಮಾನ ಹರಾಜಾಗಿರುತ್ತದೆ. ಅದರಲ್ಲೂ ವಿದೇಶಿ ಪ್ರವಾಸಿಗನೊಬ್ಬ ಹಣಕ್ಕಾಗಿ ಮರ್ಡರ್ ಆದರೆ, ವಿದೇಶಿ ಯುವತಿ ಅತ್ಯಾಚಾರಕ್ಕೊಳಗಾದರೆ, ನಿಜವಾದ ಮಾನಹರಣವಾಗುವುದು ರಾಜ್ಯದ್ದು. ಇಂಥ ಘಟನೆ ಆಯಾ ದೇಶಗಳಲ್ಲಿ ದೊಡ್ಡ ಅಲ್ಲೋಲಕಲ್ಲೋಲವನ್ನೇ ಎಬ್ಬಿಸಿಬಿಡುತ್ತವೆ ಎಂಬ ಸಣ್ಣ ಕಲ್ಪನೆಯೂ ನಮಗಿರುವುದಿಲ್ಲ. ಒಬ್ಬ ಕ್ಯಾಬ್ ಡ್ರೈವರ್, ಆಟೋ ಚಾಲಕ, ಹೊಟೇಲ್ ವೇಟರ್, ಪೊಲೀಸ್ ಸಿಬ್ಬಂದಿ, ರೈಲು ಅಥವಾ ವಿಮಾನ ನಿಲ್ದಾಣದಲ್ಲಿರುವ ಕೂಲಿ ಕಾರ್ಮಿಕ ಅಥವಾ ಪೋರ್ಟರ್ ಕೂಡ ಒಂದು ದೇಶದ ಪ್ರವಾಸೋದ್ಯಮ ಅಭಿವೃದ್ಧಿ, ಉತ್ತೇಜನಕ್ಕೆ ಅತ್ಯಂತ ಮಹತ್ವದ ಕೊಂಡಿಯಾಗಬಲ್ಲರು. ಒಂದು ದೇಶದ ಪ್ರವಾಸೋದ್ಯಮದ ಅಭಿವೃದ್ಧಿಯು ಕೇವಲ ದೊಡ್ಡ ಯೋಜನೆಗಳು ಅಥವಾ ಜಾಹೀರಾತುಗಳಿಂದ ಮಾತ್ರ ಆಗುವುದಿಲ್ಲ, ಅದು ಪ್ರತಿಯೊಬ್ಬ ನಾಗರಿಕನ ನಡವಳಿಕೆ, ಸಣ್ಣ ಸೇವೆಗಳು ಮತ್ತು ಪ್ರವಾಸಿಗರೊಂದಿಗೆ ಅವರು ವರ್ತಿಸುವ ಸೂಕ್ಷ್ಮ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಪ್ರವಾಸೋದ್ಯಮದ ಯಶಸ್ಸಿನಲ್ಲಿ ಇವರೆಲ್ಲ ಮಹತ್ವದ ಪಾತ್ರ ವಹಿಸುತ್ತಾರೆ.

ಪ್ರವಾಸೋದ್ಯಮವು ಒಂದು ದೇಶದ ಆರ್ಥಿಕತೆಯ ಬೆನ್ನೆಲುಬು. ಆದರೆ ಈ ಪ್ರವಾಸೋದ್ಯಮದ ಯಶಸ್ಸು ಮತ್ತು ವರ್ಚಸ್ಸು ನಿರ್ಮಾಣವಾಗುವುದು ಅಲ್ಲಿನ ಐತಿಹಾಸಿಕ ಸ್ಥಳಗಳು ಅಥವಾ ನೈಸರ್ಗಿಕ ಸೌಂದರ್ಯದಿಂದ ಮಾತ್ರವಲ್ಲ; ಪ್ರವಾಸಿಗರು ಸ್ಥಳೀಯರೊಂದಿಗೆ ನಡೆಸುವ ಪ್ರತಿ ಸಣ್ಣ ಸಂವಾದ, ಅವರ ನಡವಳಿಕೆ, ಹಾವ-ಭಾವ, ವರ್ತನೆ ಮತ್ತು ಅವರು ಪಡೆಯುವ ಪ್ರತಿ ಅನುಭವದಿಂದ. ಒಬ್ಬ ಪ್ರವಾಸಿಗನು ಒಂದು ದೇಶದ ಬಗ್ಗೆ ಏನು ಯೋಚಿಸುತ್ತಾನೆ ಎಂಬುದನ್ನು ನಿರ್ಧರಿಸುವಲ್ಲಿ ಸರ್ಕಾರದ ನೀತಿಗಳಿಗಿಂತ, ಸಾಮಾನ್ಯ ಜನರೇ ಹೆಚ್ಚು ಪ್ರಭಾವ ಬೀರುತ್ತಾರೆ. ಟ್ಯಾಕ್ಸಿ ಚಾಲಕನು ಪ್ರವಾಸಿಗರಿಗೆ ಒಂದು ದೇಶದ ಮೊದಲ ಮುಖ ಮತ್ತು ಕೊನೆಯ ನೆನಪು ಆಗಿರುತ್ತಾನೆ. ವಿಮಾನ ನಿಲ್ದಾಣದಲ್ಲಿ ಪ್ರವಾಸಿಗನು ಮೊದಲು ಸಂಪರ್ಕಿಸುವುದು ಟ್ಯಾಕ್ಸಿ ಚಾಲಕನನ್ನೇ. ಅವರ ನಡವಳಿಕೆ, ವೃತ್ತಿಪರತೆ ಮತ್ತು ಪ್ರಾಮಾಣಿಕತೆ ದೇಶದ ಇಮೇಜ್‌ ಅನ್ನು ತಕ್ಷಣವೇ ರೂಪಿಸುತ್ತದೆ.

Taxi drivers are ambassadors of tourism

ಕೆಲವು ವರ್ಷಗಳ ಹಿಂದೆ, ನಾನು ಸಿಂಗಾಪುರದ ಪತ್ರಿಕೆಯೊಂದರಲ್ಲಿ ಓದಿದ ಲೇಖನದ ಸಾರಾಂಶವನ್ನು ಹೇಳಬೇಕು. ಒಬ್ಬ ಅಮೆರಿಕನ್ ಪ್ರವಾಸಿಗ ಸಿಂಗಾಪುರಕ್ಕೆ ಬಂದಿಳಿದ. ಟ್ಯಾಕ್ಸಿ ಚಾಲಕ ಆ ಪ್ರವಾಸಿಗ ಹೋಗುವ ಸ್ಥಳವನ್ನು ಅತ್ಯಂತ ವೇಗದ ಮತ್ತು ಕಡಿಮೆ ಟ್ರಾಫಿಕ್ ಇರುವ ಮತ್ತು ಸನಿಹದ ಮಾರ್ಗವನ್ನು ಆರಿಸಿಕೊಂಡ. ತಾನೇಕೆ ಈ ಮಾರ್ಗದಲ್ಲಿ ಹೋಗುತ್ತಿದ್ದೇನೆ ಎಂಬುದನ್ನು ನಕ್ಷೆ ಇಟ್ಟು ವಿವರಿಸಿದ. ನಂತರ ಮೀಟರ್ ದರ ಮಾತ್ರವಲ್ಲದೇ, ಚಾಲಕ ಟಿಕೆಟ್‌ನಲ್ಲಿ ವಿಧಿಸಲಾದ ಎಲ್ಲ ಶುಲ್ಕಗಳನ್ನು (ಟೋಲ್, ಏರ್‌ಪೋರ್ಟ್ ಸರ್‌ಚಾರ್ಜ್) ಸ್ಪಷ್ಟವಾಗಿ ವಿವರಿಸಿದ. ಚಾಲಕನ ಈ ಗುಣ ಅಮೆರಿಕನ್ ಪ್ರವಾಸಿಗನಿಗೆ ಬಹಳ ಇಷ್ಟವಾಯಿತು. ಆತ ಸಾಮಾನ್ಯ ಪ್ರವಾಸಿಗನಾಗಿರಲಿಲ್ಲ, 'ದಿ ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯ ಖ್ಯಾತ ಅಂಕಣಕಾರನಾಗಿದ್ದ. ಆತನ ಹೆಸರು ಥಾಮಸ್ ಫ್ರೀಡಮನ್. ತನ್ನ ಅಂಕಣವೊಂದರಲ್ಲಿ ಫ್ರೀಡಮನ್ ಚಾಲಕನ ಪ್ರಾಮಾಣಿಕತೆ ತಮ್ಮಲ್ಲಿ ಸಿಂಗಾಪುರದ ಬಗ್ಗೆ ಸಕಾರಾತ್ಮಕ ಭಾವನೆ ಮೂಡಿಸಿದ್ದನ್ನು ಪ್ರಸ್ತಾಪಿಸಿದ್ದರು.

ಪ್ರವಾಸಿಗರಿಗೆ ಪಾರದರ್ಶಕತೆ ಮತ್ತು ನ್ಯಾಯಯುತ ದರ ಮುಖ್ಯ. ಟ್ಯಾಕ್ಸಿ ಚಾಲಕರು ಹೆಚ್ಚು ಹಣ ಪಡೆಯಲು ಉದ್ದೇಶಪೂರ್ವಕವಾಗಿ ದೂರದ ಮಾರ್ಗವನ್ನು ಆರಿಸಿದರೆ, ಅದು ಆ ದೇಶದ ಬಗ್ಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ತಕ್ಷಣವೇ ಹಾಳುಮಾಡುತ್ತದೆ. ಒಬ್ಬ ಚಾಲಕ ವಿದೇಶಿ ಪ್ರವಾಸಿಗನ ಕಣ್ಣಲ್ಲಿ ಇಡೀ ದೇಶದ ಗೌರವ ಎತ್ತಿ ಹಿಡಿಯುವ ಅಥವಾ ಘನತೆ ಮಣ್ಣುಪಾಲು ಮಾಡುವಷ್ಟು ಶಕ್ತ. ತನ್ನ ದೇಶವನ್ನು ಶೋಕೇಸ್ ಮಾಡಲು ಪ್ರಧಾನಿ ಎಷ್ಟೇ ಪ್ರಯತ್ನಿಸಿಬಹುದು, ಆದರೆ ಒಬ್ಬ ಟ್ಯಾಕ್ಸಿ ಚಾಲಕ ತನ್ನ ನಡೆಯಿಂದ ಅರೆಕ್ಷಣದಲ್ಲಿ ದೇಶದ ಮಾನವನ್ನು ಹರಾಜಿಗಿಡಬಲ್ಲ. ಒಬ್ಬ ಟ್ಯಾಕ್ಸಿ ಚಾಲಕ ಸಾಮಾನ್ಯ ವ್ಯಕ್ತಿಯಲ್ಲ. ಆತ ಆ ಪ್ರದೇಶದ ಗೈಡ್ ಮತ್ತು ಆ ದೇಶದ ರಾಯಭಾರಿ ಎಂಬುದನ್ನು ಮರೆಯಬಾರದು. ಆತನ ವರ್ತನೆ ಮತ್ತು ವ್ಯಕ್ತಿತ್ವ ಪ್ರವಾಸಿಗನ ಕಣ್ಣಲ್ಲಿ ದೇಶದ ಬಗ್ಗೆ ಒಳ್ಳೆಯ ಅಥವಾ ಕೆಟ್ಟ ಅಭಿಪ್ರಾಯವನ್ನು ಮೂಡಿಸಬಲ್ಲದು. ಆತನ ಒಂದು ಚಿಲ್ಲರೆ ವರ್ತನೆಯಿಂದ ದೇಶದ ಬಗ್ಗೆಯೇ ಕೆಟ್ಟ ಭಾವನೆ ಮೂಡಬಹುದು.

ಕೆಲ ವರ್ಷಗಳ ಹಿಂದೆ, ನಾನು ಪ್ಯಾರಿಸ್‌ಗೆ ಹೋದಾಗ ಸಂಜೆಯಾಗಿತ್ತು. ಹೊಟೇಲ್‌ಗೆ ಹೋಗುವಾಗ ಟ್ಯಾಕ್ಸಿ ಚಾಲಕನನ್ನು 'ಇಂದು ಸಂಜೆ ಎಲ್ಲಿಗೆ ಊಟಕ್ಕೆ ಹೋಗುವುದು ಉತ್ತಮ?' ಎಂದು ಕೇಳಿದೆ. ಅದಕ್ಕೆ ಆತ ಕೇವಲ ಜನಪ್ರಿಯ ರೆಸ್ಟೋರೆಂಟ್ ಹೆಸರುಗಳನ್ನು ಹೇಳುವ ಬದಲು, ಒಂದು ಸಣ್ಣ ಕುಟುಂಬ ನಡೆಸುವ ಕೆಫೆಯನ್ನು ಪರಿಚಯಿಸಿದ. 'ಅಲ್ಲಿ ಸ್ಥಳೀಯರು ತಿನ್ನುತ್ತಾರೆ, ದರ ಅಗ್ಗವಾಗಿದೆ ಮತ್ತು ಆಹಾರದ ಗುಣಮಟ್ಟ ಉತ್ತಮವಾಗಿದೆ. ಅಷ್ಟೇ ಅಲ್ಲ, ಅಲ್ಲಿ ನೀವು ನೈಜ ಸ್ಥಳೀಯ ಆಹಾರವನ್ನು ಸವಿಯಬಹುದು' ಎಂದು ತಿಳಿಸಿದ. ಆತನ ಸಲಹೆಯಂತೆ, ನಾನು ಆತ ಹೇಳಿದ ಕೆಫೆಗೆ ಹೋದೆ. ನಾನು ನಿರೀಕ್ಷಿಸಿದ್ದಕ್ಕಿಂತ ಅದು ಉತ್ತಮವಾಗಿತ್ತು. ಬಹಳ ವರ್ಷಗಳ ನಂತರ ನೆಂಟರ ಮನೆಗೆ ಹೋದ ಆತ್ಮೀಯತೆಯನ್ನು ಆ ದಂಪತಿಗಳು ತೋರಿದರಲ್ಲದೇ, ನಿಜವಾದ,ಅಪರೂಪದ ಫ್ರೆಂಚ್ ಆಹಾರಗಳನ್ನು ಬಡಿಸಿದರು. ನಾನು ಎಣಿಸಿದ್ದಕ್ಕಿಂತ ಬಿಲ್ ಕಡಿಮೆ ಇತ್ತು. ಟ್ಯಾಕ್ಸಿ ಚಾಲಕನ ಈ ಸಣ್ಣ ಸಲಹೆ ನನಗೆ ಆಳವಾದ ಮತ್ತು ಅಧಿಕೃತ ಸಾಂಸ್ಕೃತಿಕ ಅನುಭವವನ್ನು ನೀಡಿತು.

well treatment by hotel staff

ಆದರೆ ಯಾವ ಸರಕಾರವೂ ಇಂಥ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಯೋಚಿಸುವುದಿಲ್ಲ. ಟ್ಯಾಕ್ಸಿ ಚಾಲಕ, ಪೊಲೀಸ್ ಸಿಬ್ಬಂದಿ, ಪೋರ್ಟರ್ ನಮ್ಮ ಸಾಂಸ್ಕೃತಿಕ ರಾಯಭಾರಿಗಳಾಗಬಲ್ಲರು ಎಂದು ಪ್ರವಾಸೋದ್ಯಮ ಇಲಾಖೆಯೂ ಯೋಚಿಸುವುದಿಲ್ಲ. ಅವರನ್ನು ಹುರಿದುಂಬಿಸುವ, ಕನಿಷ್ಠ ಮಾತಾಡಿಸುವ ಕೆಲಸವನ್ನು ಮಾಡುವುದಿಲ್ಲ. ಟ್ಯಾಕ್ಸಿ ಚಾಲಕರು ಮೀಟರ್ ಬಳಸದೆ ಮನಬಂದಂತೆ ಹಣ ವಸೂಲಿ ಮಾಡಿದರೆ, ಪ್ರವಾಸಿಗರು ತಕ್ಷಣವೇ ವಂಚನೆಗೆ ಒಳಗಾದ ಭಾವನೆಗೆ ಒಳಗಾಗುತ್ತಾರೆ. ಇದು ಆ ದೇಶದ ಪ್ರವಾಸೋದ್ಯಮಕ್ಕೆ ಗಂಭೀರವಾದ ಕಳಂಕ ತರುತ್ತದೆ. ಅಷ್ಟೇ ಅಲ್ಲ, ಆ ದೇಶದ ಘನತೆಗೆ ಪೆಟ್ಟು ಬೀಳುತ್ತದೆ. ಪ್ರವಾಸಿಗನ ಮನಸ್ಸಿನಲ್ಲಿ ಇಡೀ ದೇಶವೇ ಕೆಟ್ಟದ್ದು ಎಂಬ ಭಾವನೆ ಮೂಡುತ್ತದೆ. ಒಂದು ವೇಳೆ ನಮಗೆ ಬೇರೆ ದೇಶಗಳಲ್ಲಿ ಇದೇ ರೀತಿ ಅನುಭವವಾದರೆ, ನಾವು ಆ ದೇಶದ ಬಗ್ಗೆ ಏನು ಅಂದುಕೊಳ್ಳುತ್ತೇವೆ? ನಾವು ಸಣ್ಣ ಸಣ್ಣ ವಿಷಯಗಳ ಬಗ್ಗೆ ಗಮನ ಹರಿಸುವುದಿಲ್ಲ. ಉದಾಹರಣೆಗೆ, ಟ್ಯಾಕ್ಸಿ ಚಾಲಕರಿಗೆ ಕನಿಷ್ಠ ಮೂಲಭೂತ ಆಂಗ್ಲ ಭಾಷೆ ಅಥವಾ ಅನುವಾದಕ ಆ್ಯಪ್ ಬಳಸುವ ಜ್ಞಾನ ಇಲ್ಲದಿದ್ದರೆ, ಸಂವಹನ ಸಮಸ್ಯೆ ಉಂಟಾಗಿ ಪ್ರವಾಸಿಗರಿಗೆ ಕಿರಿಕಿರಿ ಮತ್ತು ಅಸುರಕ್ಷತೆಯ ಭಾವನೆ ಉಂಟಾಗುತ್ತದೆ. ಪ್ರವಾಸೋದ್ಯಮ ರಂಗದ ಭಾಗೀದಾರರು ಯಾರು ಎಂಬ ಕನಿಷ್ಠ ಪ್ರಜ್ಞೆ ಇಲ್ಲದಿದ್ದರೆ, ಅಂಥವರೇ ಪ್ರವಾಸೋದ್ಯಮ ರಂಗಕ್ಕೆ ಕುತ್ತು ತರುತ್ತಾರೆ.

ಒಂದು ಹೊಟೇಲ್‌ನ ರೂಮ್ ಬಾಯ್, ಅಲ್ಲಿ ತಂಗಿದ್ದ ಅತಿಥಿಯು ಪ್ರತಿದಿನ ಬೆಳಗ್ಗೆ ಮೂರ್ನಾಲ್ಕು ಕಪ್ ಚಹಾ ಕುಡಿಯುವುದನ್ನು ಗಮನಿಸಿದ. ಮರುದಿನ, ಆತ ಕೋಣೆಯನ್ನು ಸ್ವಚ್ಛಗೊಳಿಸುವಾಗ, ರೂಮಿನಲ್ಲಿರುವ ಮಿನಿ-ಬಾರ್‌ಗೆ ಒಂದು ವಿಶೇಷ ಬಗೆಯ ಹಣ್ಣಿನ ಚಹಾ ಪುಡಿಯನ್ನು ಉಚಿತವಾಗಿ ಇಟ್ಟ. ಜತೆಗೆ ಸ್ಥಳೀಯ ಭಾಷೆಯಲ್ಲಿ 'ಶುಭೋದಯ, ಹೊಸ ಚಹಾವನ್ನು ಅನುಭವಿಸಿ' ಎಂದು ಬರೆದ ಸಣ್ಣ ಟಿಪ್ಪಣಿಯನ್ನು ಇರಿಸಿದ್ದ. ಇದು ಕೇವಲ ಉಚಿತ ಚಹಾ ಸೇವೆ ಅಲ್ಲ, ಇದು ಪ್ರವಾಸಿಗರ ಅಗತ್ಯವನ್ನು ಸೂಕ್ಷ್ಮವಾಗಿ ಗಮನಿಸಿ ನೀಡಿದ ವೈಯಕ್ತಿಕ ಸೇವೆ. ಈ ಸಣ್ಣ ಕ್ರಿಯೆ ಹೊಟೇಲ್‌ನ ಅಥವಾ ಇಡೀ ದೇಶದ ಅತಿಥಿ ಸತ್ಕಾರದ (Hospitality) ಗುಣಮಟ್ಟವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಪ್ರವಾಸಿಗರು ಇಂಥ ನೆನಪುಗಳನ್ನು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳುತ್ತಾರೆ. ಎರಡು ವರ್ಷಗಳ ಹಿಂದೆ, ನಾನು ದುಬೈನ 'ಅಡ್ರೆಸ್' ಹೊಟೇಲಿನಲ್ಲಿ ಉಳಿದುಕೊಂಡಾಗ, ಟೇಬಲ್ ಮೇಲಿನ ನನ್ನ ಐಪ್ಯಾಡ್ ನೋಡಿ, ಅದಕ್ಕೊಂದು ರೇಷ್ಮೆ ಬಟ್ಟೆಯ ಕವರ್ ತಂದಿಟ್ಟಿದ್ದನ್ನು ಈಗಲೂ ನಾನು ಮರೆತಿಲ್ಲ.

ಇತ್ತೀಚೆಗೆ ಬರ್ಲಿನ್‌ಗೆ ಭೇಟಿ ನೀಡಿದ್ದ ನನ್ನ ಸ್ನೇಹಿತರೊಬ್ಬರೂ ಹಾಗೂ ಅವರ ಕುಟುಂಬದವರು ರಾತ್ರಿ ಸಮಯದಲ್ಲಿ ದಾರಿ ತಪ್ಪಿಸಿಕೊಂಡರು. ಅವರು ಅಲ್ಲಿನ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದಾಗ, ಅಧಿಕಾರಿ ತಾಳ್ಮೆಯಿಂದ ಅವರ ಸಮಸ್ಯೆಯನ್ನು ಆಲಿಸಿದ. ಅಲ್ಲಿಂದಲೇ ಆಫೀಸರ್ ಕೇವಲ ದಿಕ್ಕು ಹೇಳುವ ಬದಲು, ಅವರ ಸುರಕ್ಷತೆಗಾಗಿ ಅವರನ್ನು ಮುಂದಿನ ಬಸ್ ನಿಲ್ದಾಣದವರೆಗೆ ಜತೆಯಲ್ಲಿ ಕರೆದುಕೊಂಡು ಹೋಗಿ, ಸರಿಯಾದ ಬಸ್ ಹತ್ತಲು ಸಹಾಯ ಮಾಡಿದ. ಪ್ರವಾಸಿಗರು ಅಪರಿಚಿತ ಸ್ಥಳಗಳಲ್ಲಿ ಯಾವಾಗಲೂ ಆತಂಕದಲ್ಲಿರುತ್ತಾರೆ. ಪೊಲೀಸರು ಅವರಿಗೆ ತಕ್ಷಣದ ಮತ್ತು ಮಾನವೀಯ ಸಹಾಯ ನೀಡಿದಾಗ, ಅದು ಆ ದೇಶದ ಕಾನೂನು ಜಾರಿ ವ್ಯವಸ್ಥೆ ಮತ್ತು ಸರಕಾರದ ಮೇಲೆ ಅವರಿಗೆ ಅಪಾರ ವಿಶ್ವಾಸ ಮೂಡಿಸುತ್ತದೆ. ಇದು ಆ ದೇಶದ ಭದ್ರತೆಯ ಭಾವನೆಯನ್ನು ಹೆಚ್ಚಿಸುತ್ತದೆ. ನನ್ನ ಸ್ನೇಹಿತರು ಈ ಪ್ರಸಂಗವನ್ನು ಕನಿಷ್ಠ ಹತ್ತು ಜನರ ಮುಂದೆ ಹೇಳಿದ್ದಲ್ಲದೇ, ಭಾಷಣಗಳಲ್ಲಿ ಪ್ರಸ್ತಾಪಿಸಿದ್ದಲ್ಲದೇ, ಪತ್ರಿಕೆಗಳಲ್ಲೂ ಲೇಖನ ಬರೆದು ಬರ್ಲಿನ್ ಪೊಲೀಸರು ಮತ್ತು ಜರ್ಮನ್ನರ ಆತಿಥ್ಯವನ್ನು ಮನಸಾರೆ ಹೊಗಳಿದ್ದರು.

Indian police trating foreigners well

ಒಂದು ಜನದಟ್ಟಣೆಯ ಪ್ರದೇಶದಲ್ಲಿ, ಸ್ಥಳೀಯ ಪೊಲೀಸರು ಪ್ರವಾಸಿಗರನ್ನು ತಪಾಸಣೆ ಮಾಡುವಾಗ ಹೇಗೆ ವರ್ತಿಸುತ್ತಾರೆ ಎಂಬುದು ಬಹಳ ಮುಖ್ಯ. ಅವರಿಗೆ ಯಾವುದೇ ತೊಂದರೆಯಾಗದಂತೆ ನಗುಮೊಗದಿಂದ, ಸೌಜನ್ಯದಿಂದ ಮಾತನಾಡುವುದಕ್ಕೂ, ಕಿರಿಕಿರಿ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಪ್ರವಾಸಿಗರು ದೇಶದ ಕಾನೂನನ್ನು ಗೌರವಿಸಿದರೂ, ತಪಾಸಣೆ ಅವರಿಗೆ ಕಿರಿಕಿರಿ ಉಂಟುಮಾಡಬಹುದು. ಪೊಲೀಸರ ವೃತ್ತಿಪರತೆ ಮತ್ತು ಸೌಜನ್ಯವು, ಪ್ರವಾಸಿಗರಿಗೆ 'ತಮ್ಮನ್ನು ಗೌರವಿಸಲಾಗುತ್ತಿದೆ' ಎಂಬ ಭಾವನೆ ಮೂಡಿಸುತ್ತದೆ. ಇದು 'ಪೊಲೀಸ್ ದೌರ್ಜನ್ಯವಿಲ್ಲದ' ಮತ್ತು ನಾಗರಿಕ ಹಕ್ಕುಗಳನ್ನು ಗೌರವಿಸುವ ದೇಶ ಎಂಬ ಸಂದೇಶವನ್ನು ರವಾನಿಸುತ್ತದೆ. ಪೊಲೀಸರು ಪ್ರವಾಸಿಗರೊಂದಿಗೆ ಅಸಭ್ಯವಾಗಿ ಅಥವಾ ರೌಡಿತನದಿಂದ ವರ್ತಿಸಿದರೆ ಅಥವಾ ಲಂಚಕ್ಕಾಗಿ ಒತ್ತಾಯಿಸಿದರೆ, ಅದು ಆ ದೇಶದ ಪ್ರವಾಸೋದ್ಯಮಕ್ಕೆ ಮಾರಕ. ಪ್ರವಾಸಿಗರು ಕಳ್ಳತನ ಅಥವಾ ಇತರೆ ಸಂಕಷ್ಟಕ್ಕೆ ಒಳಗಾದಾಗ ಪೊಲೀಸರು ಸೂಕ್ತವಾಗಿ ಪ್ರತಿಕ್ರಿಯಿಸದಿದ್ದರೆ, ಆ ಪ್ರವಾಸಿಗರು ಆ ದೇಶಕ್ಕೆ ಮರಳಿ ಬರುವುದಿಲ್ಲ ಮತ್ತು ಇತರರಿಗೂ ಅಲ್ಲಿಗೆ ಹೋಗದಂತೆ ಸಲಹೆ ನೀಡುತ್ತಾರೆ.

ಅಷ್ಟಕ್ಕೂ ಪ್ರವಾಸೋದ್ಯಮ ಎನ್ನುವುದು ಮನೆಗೆ ಬಂದ ಅತಿಥಿಯನ್ನು ಸತ್ಕರಿಸಿದಂತೆ ಒಂದು 'ಸಂಪೂರ್ಣ ಅನುಭವ' (Holistic Experience). ಮನೆಗೆ ಬಂದ ಅತಿಥಿಗೆ ಹೋಗುವಾಗ ಕೈತುಂಬ ಉಡುಗೊರೆ ಕೊಟ್ಟು ಸತ್ಕರಿಸಿದರೂ, ಯಾವುದೋ ಹಂತದಲ್ಲಿ ಕೆಟ್ಟದಾಗಿ ನಡೆಸಿಕೊಂಡರೆ, ಆ ಲೋಪವೇ ಎದ್ದು ಕಾಣುವಂತೆ, ದೇಶಕ್ಕೆ ಬಂದ ಪ್ರವಾಸಿಗನಿಗೆ ಎಲ್ಲೂ ಲೋಪವಾಗದಂತೆ ಕಳಿಸಿಕೊಡುವುದು ನಿಜವಾದ ಆತಿಥ್ಯ. ಈ ಸಂಪೂರ್ಣ ಅನುಭವದ ಯಶಸ್ಸು ಟ್ಯಾಕ್ಸಿ ಚಾಲಕ, ವೇಟರ್ ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಅನೇಕ ಸಾಮಾನ್ಯರನ್ನು ಒಳಗೊಂಡಿರುತ್ತದೆ. ಪ್ರವಾಸಿಗರನ್ನು ಭೇಟಿ ಮಾಡುವ ಪ್ರತಿ ಕ್ಷಣವನ್ನು 'ಮೊಮೆಂಟ್ ಆಫ್ ಟ್ರೂತ್' ಎಂದು ಕರೆಯಲಾಗುತ್ತದೆ. ಆ ಸಣ್ಣ ಕ್ಷಣದಲ್ಲಿ ಪ್ರವಾಸಿಗರಿಗೆ ಒದಗಿಸಿದ ಸೇವೆಯ ಗುಣಮಟ್ಟವು ಇಡೀ ದೇಶದ ಬ್ರಾಂಡ್ ಅನ್ನು ನಿರ್ಧರಿಸುತ್ತದೆ. ಟ್ಯಾಕ್ಸಿ ಚಾಲಕನು ಕೇವಲ 15 ನಿಮಿಷಗಳಲ್ಲಿ, ವೇಟರ್ ಕೇವಲ 5 ನಿಮಿಷಗಳಲ್ಲಿ, ಮತ್ತು ಪೊಲೀಸ್ 2 ನಿಮಿಷಗಳ ಸಂವಾದದಲ್ಲಿ ಆ ದೇಶದ ಬಗ್ಗೆ ಧನಾತ್ಮಕ ಅಥವಾ ಋಣಾತ್ಮಕ ಅಭಿಪ್ರಾಯವನ್ನು ರೂಪಿಸಬಹುದು.

ಪ್ರವಾಸಿಗರು ಯಾವುದೇ ಜಾಹೀರಾತು ಕಂಪನಿಗಿಂತ ಹೆಚ್ಚು ಪ್ರಭಾವಶಾಲಿ ಮಾರ್ಕೆಟಿಂಗ್ ಏಜೆಂಟ್. ಪ್ರವಾಸಿಗರು ತಮ್ಮ ಪ್ರವಾಸದ ಕುರಿತು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುವಾಗ, ಅವರು ಐತಿಹಾಸಿಕ ಕಟ್ಟಡಗಳ ಬಗ್ಗೆ ಮಾತನಾಡದೇ, 'ಆ ಹೊಟೇಲ್‌ನಲ್ಲಿನ ವೇಟರ್ ನಮಗೆ ಎಷ್ಟು ಸಹಾಯ ಮಾಡಿದ' ಅಥವಾ 'ಟ್ಯಾಕ್ಸಿ ಚಾಲಕ ಎಷ್ಟು ಪ್ರಾಮಾಣಿಕನಾಗಿದ್ದ' ಎಂಬುದರ ಕುರಿತು ಹೆಚ್ಚಾಗಿ ಹೇಳುತ್ತಾರೆ. ಸಣ್ಣ ಸೇವೆಗಳ ಈ ಸಕಾರಾತ್ಮಕ ಮಾತುಗಳು ಕೋಟ್ಯಂತರ ರುಪಾಯಿಗಳ ಜಾಹೀರಾತಿಗಿಂತ ಹೆಚ್ಚು ಪರಿಣಾಮಕಾರಿ. ಟ್ಯಾಕ್ಸಿ ಒಳಭಾಗದ ಸ್ವಚ್ಛತೆ, ರೆಸ್ಟೋರೆಂಟ್‌ನ ವೇಟರ್‌ನ ಸಮವಸ್ತ್ರದ ಸ್ವಚ್ಛತೆ ಮತ್ತು ಸಾರ್ವಜನಿಕ ಸ್ಥಳಗಳ ನೈರ್ಮಲ್ಯ ಪ್ರವಾಸಿಗರಿಗೆ ಸೌಕರ್ಯ ಮತ್ತು ಗುಣಮಟ್ಟದ ಭಾವನೆ ಮೂಡಿಸುತ್ತದೆ.

ಪ್ರವಾಸೋದ್ಯಮದ ಅಭಿವೃದ್ಧಿಯು ಒಂದು ಪಿರಾಮಿಡ್‌ನಂತೆ. ಅತ್ಯಂತ ಮೇಲಿನ ಶಿಖರದಲ್ಲಿ ಸರಕಾರ ಮತ್ತು ಬೃಹತ್ ನೀತಿಗಳಿದ್ದರೆ, ಕೆಳಗೆ ಸ್ಥಳೀಯ ನಾಗರಿಕರ ಮತ್ತು ಸೇವೆ ಒದಗಿಸುವವರ ವರ್ತನೆ ಇರುತ್ತದೆ. ಟ್ಯಾಕ್ಸಿ ಚಾಲಕರು, ವೇಟರ್‌ಗಳು ಮತ್ತು ಪೊಲೀಸರು ಇಡೀ ದೇಶದ ನಿಜವಾದ ರಾಯಭಾರಿಗಳು. ಅವರು ಪ್ರವಾಸಿಗರಿಗೆ ನೀಡುವ ಪ್ರತಿಯೊಂದು ಸಣ್ಣ ಸಕಾರಾತ್ಮಕ ಅನುಭವವು ಆ ದೇಶದ ಪ್ರವಾಸೋದ್ಯಮಕ್ಕೆ ದೀರ್ಘಾವಧಿಯ ಲಾಭ ತರುತ್ತದೆ ಮತ್ತು ಪ್ರವಾಸಿಗರನ್ನು ಮತ್ತೆ ಮತ್ತೆ ಅದೇ ಸ್ಥಳಕ್ಕೆ ಭೇಟಿ ನೀಡಲು ಪ್ರೇರೇಪಿಸುತ್ತದೆ.