ಪ್ರವಾಸಿಗರಿಗೆ ಹೊಸ ಯುದ್ಧಸ್ಮಾರಕ ನೋಡುವ ಸಂಕಟ ಬಾರದಿರಲಿ
ಯುದ್ಧದ ಹೆಸರಿನಲ್ಲಿ ದೇಶಕ್ಕಾಗಿ ಯಥಾಶಕ್ತಿ ಹೋರಾಡಿ ಪ್ರಾಣ ತೆತ್ತವರೂ ಪುಸ್ತಕಗಳಲ್ಲಿ ಬಹುಪಾಲು ಗಂಡಸರೇ. ಆದರೆ ಎಲ್ಲಿಯೇ ಯುದ್ಧ ಯಾವ ಕಾರಣಕ್ಕೇ ನಡೆದರೂ ಬೇರನ್ನು ಕಳೆದುಕೊಂಡು ನೋಯುವವರು ಹೆಚ್ಚಿನವರು ಹೆಂಗಸರು. ಅದಕ್ಕೆ ಸಾಕ್ಷಿಯಾಗಿ ಬೆರಳೆಣಿಕೆಯಷ್ಟು ದೇಶಗಳಲ್ಲಿ ಮಾತ್ರ ತಲೆ ಎತ್ತಿ ನಿಂತಿದೆ ಮಹಿಳಾ ಯುದ್ಧ ಸ್ಮಾರಕಗಳು.
- ಅಂಜಲಿ ರಾಮಣ್ಣ
ಸಂಪೂರ್ಣ ಪ್ರಪಂಚವೇ ಒಬ್ಬರಿಗೊಬ್ಬರು ಬಾಗಿಲು ಮುಚ್ಚಿ ಕುಳಿತಿರುವಾಗ, ಮನುಷ್ಯ ಮನುಷ್ಯರ ನಡುವೆ ಮಾತಿಗಿಂತ ಮೊದಲು ಮಿಸೈಲ್ ಮುನ್ನುಗ್ಗುತ್ತಿರುವಾಗ, ಒಂದು ಹೊತ್ತಿನ ಊಟಕ್ಕೂ ಮಕ್ಕಳು, ಅಮ್ಮಂದಿರು ಪರದಾಟ ಅನುಭವಿಸುತ್ತಿರುವಾಗ ಪ್ರವಾಸ ಎನ್ನುವ ಪದವೇ ಕುಚೋದ್ಯ ಅನಿಸದೆ ಇರಲಾರದು. ಹಾಗೆಂದು ಹತಾಶೆ ಎನ್ನುವ ಬೂದಿಯಲ್ಲಿ ಉರಿದು ಹೋಗಲಾದೀತೆ? ಯುದ್ಧವನ್ನು ಓದಿ ತಿಳಿದುಕೊಂಡವರು, ಚಲನಚಿತ್ರದಲ್ಲಿ ನೋಡಿದವರು, ಕೇಳಿಸಿಕೊಂಡು ಮಾಹಿತಿ ಹೊಂದಿರುವವರು ಮೂಲಭೂತ ಮಾನವೀಯತೆಯ ಗುಣದಿಂದ ನೊಂದವರೆಡೆಗೆ ಮರುಗಬಹುದು. ಆದರೆ ಪ್ರವಾಸವನ್ನೇ ತನ್ನ ಪರಮಾಪ್ತ ಸ್ನೇಹಿತನನ್ನಾಗಿ ಮಾಡಿಕೊಂಡ ಪ್ರವಾಸಿಯೊಬ್ಬ ಮಾತ್ರ ಮನಸಿನಿಂದ ನೊಂದವರ ಜತೆಗೆ ಅವರಷ್ಟೇ ಮಿಡಿಯಬಲ್ಲ, ಎಲ್ಲರ ನೋವು ಶಮನಕ್ಕಾಗಿ ಪ್ರಾರ್ಥಿಸಬಲ್ಲ. ಭರವಸೆಯ ಪ್ರವಾದಿ ಆಗಬಲ್ಲ.
ಇದನ್ನೂ ಓದಿ: ಚಿಟ್ಟೀ ಆಯೀ ಹೈ ಆಯೀ ಹೈ.. ಚಿಟ್ಟಿ ಆಯೀ ಹೈ...!
ರಾತ್ರಿ ಬೆಳಗಾಗುವುದರಲ್ಲಿ ಒಂದೊಂದು ದೇಶವೂ ಯುದ್ಧಕ್ಕೆ ಸಜ್ಜಾಗಿ ನಿಂತಿರುವಾಗ, ಇತಿಹಾಸ ಬರೆಯುತ್ತೇವೆ ಎನ್ನುವ ಹಮ್ಮಿನಲ್ಲಿ ತೊಡೆತಟ್ಟುವಾಗ ಯುದ್ಧವನ್ನು ಘೋಷಿಸುವುದು ಎಂದಿಗೂ ಗಂಡಸರೇ ಎನ್ನುವುದು ವಿಶ್ವಾದ್ಯಂತ ದಾಖಲಾಗಿದೆ. ಅದಕ್ಕೇ ಇರಬೇಕು ಯಾವ ದೇಶಕ್ಕೆ ಹೋದರೂ ಜಾಗದ ಸಾಮರ್ಥ್ಯಕ್ಕೆ ತಕ್ಕಂತೆ ಮಡಿದ ವೀರರಿಗೆ ಸ್ಮಾರಕಗಳನ್ನು ನಿರ್ಮಿಸಲಾಗಿರುತ್ತದೆ. ಯುದ್ಧದ ಹೆಸರಿನಲ್ಲಿ ದೇಶಕ್ಕಾಗಿ ಯಥಾಶಕ್ತಿ ಹೋರಾಡಿ ಪ್ರಾಣ ತೆತ್ತವರೂ ಪುಸ್ತಕಗಳಲ್ಲಿ ಬಹುಪಾಲು ಗಂಡಸರೇ. ಆದರೆ ಎಲ್ಲಿಯೇ ಯುದ್ಧ ಯಾವ ಕಾರಣಕ್ಕೇ ನಡೆದರೂ ಬೇರನ್ನು ಕಳೆದುಕೊಂಡು ನೋಯುವವರು ಹೆಚ್ಚಿನವರು ಹೆಂಗಸರು. ಅದಕ್ಕೆ ಸಾಕ್ಷಿಯಾಗಿ ಬೆರಳೆಣಿಕೆಯಷ್ಟು ದೇಶಗಳಲ್ಲಿ ಮಾತ್ರ ತಲೆ ಎತ್ತಿ ನಿಂತಿದೆ ಮಹಿಳಾ ಯುದ್ಧ ಸ್ಮಾರಕಗಳು.

ಒಮ್ಮೆ ಅಮೆರಿಕದ ಸ್ಮಾರಕಗಳ ನಗರ ಎಂದೇ ಹೆಸರುವಾಸಿಯಾದ ವಾಷಿಂಗ್ಟನ್ ಡಿಸಿ ನಗರದ ಆರ್ಲಿಂಗ್ಟನ್ ರಾಷ್ಟ್ರೀಯ ರುದ್ರಭೂಮಿಯಲ್ಲಿ ನಡೆದುಹೋಗುತ್ತಿದ್ದಾಗ ಗಮನ ಸೆಳೆದದ್ದು ಎರಡನೇ ಮಹಾಯುದ್ಧದಲ್ಲಿದ್ದ ಮಹಿಳೆಯರ ಸ್ಮಾರಕ ಎನ್ನುವ ಫಲಕ. ಅಲ್ಲಿಯತನಕ ಸೈನಿಕರಿಗಾಗಿ ಇರಿಸಲಾಗಿದ್ದ ಅದೆಷ್ಟೋ ಸ್ಮಾರಕಗಳನ್ನು ನೋಡಿದ್ದವಳಿಗೆ, ಮೊದಲ ಬಾರಿಗೆ ಮಹಿಳೆಯರಿಗಾಗಿ ಮೀಸಲಾಗಿಟ್ಟಿದ್ದ ಸ್ಮರಣಾ ಸ್ಥಳ ಸಿಕ್ಕಿತ್ತು. ನಾಲ್ಕು ಎಕರೆ ಜಾಗದಲ್ಲಿ ಸಂಗ್ರಹಾಲಯ, ವಿವರಗಳನ್ನು ಕೆತ್ತಿದ ಗೋಡೆಗಳು, ಮೂವತ್ತು ಅಡಿ ಎತ್ತರದ ಕರಿ ಕಂಚಿನ ಮಹಿಳಾ ಸೈನಿಕರ ಪ್ರತಿಮೆಗಳು, ಹುರಿದುಂಬಿಸುವ ಮಾತಗಳನ್ನು ಹೇಳುವ ವಿಡಿಯೋಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ಇಟ್ಟಿದ್ದರು. 1997ರಲ್ಲಷ್ಟೇ ಸ್ಥಾಪಿತವಾದ ಈ ಜಾಗಕ್ಕೆ ವರ್ಷವೊಂದಕ್ಕೆ ಇಪ್ಪತ್ತು ಸಾವಿರ ಜನರು ಭೇಟಿ ನೀಡುತ್ತಾರಂತೆ. ಹೊರ ಬಂದ ಮೇಲೆ ಮನಸಿನಲ್ಲಿ ತೊಳಲಾಡುತ್ತಿದ್ದದ್ದು ಅಲ್ಲಿ ಓದಿದ ಈ ವಾಕ್ಯ- “ಹಿಂದೆ ಇಂದು ಮತ್ತು ಮುಂದು ಯುದ್ಧದಲ್ಲಿ ಮಡಿದ ಮಡಿಯಲಿರುವ ಎಲ್ಲಾ ಮಹಿಳೆಯರ ಗೌರವಾರ್ಥ”. ಅವ್ಯಕ್ತ ದುಗುಡದ ಜೊತೆಯಲ್ಲಿಯೇ ಅಂದಿನಿಂದ ಭಾರತದಲ್ಲಿ, ವಿದೇಶದಲ್ಲಿ ಮಹಿಳೆಯರಿಗಾಗಿ ಮೀಸಲಾದ ಸ್ಮಾರಕ ಇದೆಯೇ ಎಂದು ಹುಡುಕಲು ತೊಡಗಿದೆ.
ವಿಯೆಟ್ನಾಂ ದೇಶದಲ್ಲಿ ಇರುವ ವಿಷಯ ತಿಳಿಯಿತು. ಒಮ್ಮೆ ಲಂಡನ್‍ನಲ್ಲಿ ಸಿಕ್ಕಿತು ನೋಡಿ ಮತ್ತೊಂದು ವಿಚಿತ್ರ ರೀತಿಯಲ್ಲಿ ಸ್ಮರಣೆಗೆ ತೊಡಗಿಕೊಂಡಿರುವ ಸ್ಮಾರಕ. ವೆಸ್ಟ್ ಮಿನ್ಸ್ಟರ್ ಎನ್ನುವ ಮುಖ್ಯವಾದ ಸ್ಥಳದಲ್ಲಿ ವೈಟ್‍ಹಾಲ್ ಎಂಬ ರಸ್ತೆ. ಪಾರ್ಲಿಮೆಂಟ್ ಕಡೆಯಿಂದ ಈ ರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ. ಎಡಗಡೆಗೆ ಧುತ್ತನೆ ಎದುರಾಯಿತು ಇಪ್ಪತ್ತೆರಡು ಅಡಿ ಉದ್ದದ ಈ ಕಪ್ಪು ಶಿಲೆ. ಮಿರಮಿರ ಮಿಂಚುತ್ತಿದ್ದ ಇದರ ಬಳಿ ಹೋಗಿ ನೋಡಿದಾಗ ತಿಳಿದದ್ದು ಇದು ಎರಡನೆಯ ಮಹಾಯುದ್ಧದಲ್ಲಿ ಭಾಗವಹಿಸಿದ ಮಹಿಳೆಯರ ಸ್ಮರಣಾರ್ಥದ ಸ್ಮಾರಕ ಎಂದು. ಈ ಶಿಲೆಯ ಮೇಲೆ ಯಾವ ಮಹಿಳಾ ಸೇನಾನಿಯ ಮುಖವಿರುವ ಮೂರ್ತಿಯಾಗಲೀ, ಚಿತ್ರವಾಗಲೀ, ಹೆಸರಾಗಲೀ ಇಲ್ಲ. ಬದಲಿಗೆ ಮಹಿಳಾ ಸೈನಿಕರು ಬಳಸುತ್ತಿದ್ದರು ಎನ್ನಲಾದ ಹದಿನೇಳು ರೀತಿಯ ಬಟ್ಟೆಗಳು, ಟೊಪ್ಪಿಗೆಗಳು, ಕೈ ಚೀಲಗಳು ಮತ್ತು ಬೂಟುಗಳನ್ನು ಕಂಚಿನಲ್ಲಿ ಮಾಡಿ ಮೇಲ್ಭಾಗದಲ್ಲಿ ನೇತು ಬಿಡಲಾಗಿದೆ. ಅದರ ಕೆಳಗೆ “ದೇಶ ಸೇವೆಯಲ್ಲಿ ಪ್ರಾಣ ತೆತ್ತ ಮಹಿಳೆಯರ ಗೌರವಾರ್ಥ” ಎಂದು ಕೆತ್ತಲಾಗಿದೆ. ಎಲ್ಲಾ ಸರಿ ಆದರೆ ಮುಖ, ಹೆಸರು ಏನೂ ಇಲ್ಲದ ಈ ಸ್ಮಾರಕ ತೋರಿಸುತ್ತಿರುವುದಕ್ಕಿಂತ ಹೆಚ್ಚಿನದೇನನ್ನೋ ಬಚ್ಚಿಟ್ಟುಕೊಳ್ಳುತ್ತಿದೆ ಎಂದೆನಿಸುತ್ತಿತ್ತು. ಹಟ ಬಿಡದೆ ಅದರ ಇತಿಹಾಸ ಕೆದಕುತ್ತಾ ಹೋದೆ.
ಬೇರೆ ದೇಶಗಳಲ್ಲಿ ಮಹಿಳೆಯರಿಗಾಗಿಯೇ ಸ್ಮಾರಕವಿದೆ ಆದರೆ ಪ್ರಭಾವಿ ಲಂಡನ್‍ನಲ್ಲಿ ಇಲ್ಲದಿರುವುದನ್ನು ಗಮನಿಸಿದ ನಿವೃತ್ತ ಮೇಜರ್ ಡೇವಿಡ್ ಮೆಕೆನ್ಲೇ ರಾಬರ್ಟ್‍ಸನ್ ಸರ್ಕಾರಕ್ಕೆ 1997ರಲ್ಲಿ ಮನವಿ ಸಲ್ಲಿಸುತ್ತಾರೆ. ಸಾಕಷ್ಟು ವಾದ, ವಿವಾದ, ಚರ್ಚೆಗಳು ನಡೆದು, ಅದರ ಅವಶ್ಯಕತೆ ಇಲ್ಲ ಎನ್ನುವವರ ನಡುವೆಯೂ 2005ನೆಯ ಇಸವಿಯಲ್ಲಿ ಮಹಾರಾಣಿ ಎಲಿಜಬೆತ್ ತಮ್ಮ ಅರವತ್ತನೆಯ ಹುಟ್ಟು ಹಬ್ಬದ ಸಂದರ್ಭದಲ್ಲಿ ಈ ಸ್ಮಾರಕವನ್ನು ಉದ್ಘಾಟಿಸಿದ್ದಾರೆ. ಹಿಂದಿರುಗಿ ಬಂದಮೇಲೆ ಪ್ರವಾಸಿ ಗೈಡ್ ಇಯಾನ್‍ನನ್ನು ಕೇಳಿದೆ, ಆತ ಬ್ರಿಟಿಷ್ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವನಾಗಿದ್ದ. “ಆ ಸ್ಮಾರಕದಲ್ಲಿ ಕೇವಲ ಪರಿಕರಗಳನ್ನು ತೂಗು ಬಿಟ್ಟಿದ್ದೀರಿ, ಯಾರದೇ ಮುಖಗಳನ್ನಾಗಲೀ ಹೆಸರನ್ನಾಗಲೀ ಕಾಣಿಸಿಲ್ಲ ಯಾಕೆ?” ಅಂತ ಕೇಳಿದೆ. ಆತನಿಗೆ ಅದೊಂದು ಅದ್ಭುತವಾದ ಪ್ರಶ್ನೆಯಾಗಿ ಕಂಡಿತ್ತು.
ಈ ಸ್ಮಾರಕ ನಿರ್ಮಿಸುವ ಚರ್ಚೆ ನಡೆಯುವಾಗ ಹೆಚ್ಚಿನ ಸಂಸದರು ಮತ್ತು ಪ್ರಜೆಗಳು ಮಹಿಳೆಯರಿಗೆ ಸ್ಮಾರಕದ ಅವಶ್ಯಕತೆ ಇಲ್ಲ ಎಂದೇ ಅಭಿಪ್ರಾಯ ಪಟ್ಟಿದ್ದರಂತೆ. ಅಲ್ಲದೆ ಒಂದಷ್ಟು ಜನರ ಮುಖಗಳನ್ನು ಹಾಕಿದರೆ ಉಳಿದವರಿಗೆ ನ್ಯಾಯ ಸಲ್ಲಿಸಿದಂತೆ ಆಗುವುದಿಲ್ಲ ಎಂದರಂತೆ. ಅದಕ್ಕಾಗಿ ಹೀಗೆ ಮಹಿಳಾ ಪ್ರತೀಕವನ್ನು ಮಾತ್ರ ಮಾಡಲಾಯಿತಂತೆ.
ಅಮೆರಿಕದಲ್ಲಿ ನೋಡಿದರೆ, ಮುಂದೆಯೂ ಯುದ್ಧ ಮಾಡುತ್ತೆ ಈ ಸಮಾಜ ಎನ್ನುವುದನ್ನು ಮಹಿಳೆಯರ ಮೂಲಕ ಪರೋಕ್ಷವಾಗಿ ಘೋಷಿಸಿ ಮುಂದೆ ಮಡಿಯಲಿರುವವರಿಗೂ ನಮನ ಸಲ್ಲಿಸಲಾಗಿದೆ. ಇಲ್ಲಿ ನೋಡಿದರೆ ದುಡಿದು, ದಣಿದು ಮಡಿದ ಮಹಿಳೆಯರನ್ನು ಅನಾಮಿಕರನ್ನಾಗಿಸಲಾಗಿದೆ.
ಇದನ್ನೂ ಓದಿ: ಪ್ರವಾಸಿಯಾಗಿ ಹೋಗಿ ರೈತರಾಗಿ ಬನ್ನಿ!
ಅಸಹನೀಯ ಮೌನದೊಂದಿಗೆ ಸ್ಕಾಟ್ ಲೆಂಡಿನ ಎಡಿನ್‍ಬರೋ ಪ್ರವೇಶಿಸಿದ್ದೆ. ಸ್ಕಾಟ್ ಲೆಂಡ್ ಲೆಂಡ್ ಜನರ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಟಾಮ್ ಎಂಬ ಪ್ರವಾಸಿ ಮಾರ್ಗದರ್ಶಕ ಕರೆದುಕೊಂಡು ಹೋಗಿದ್ದು ಎಡಿನ್‍ಬರ್ಗ್ ದುರ್ಗಕ್ಕೆ. ಅಲ್ಲಿ ಕಣ್ಣಿಗೆ ಬಿತ್ತು ‘ಸ್ಕಾಟಿಶ್ ನ್ಯಾಷನಲ್ ವಾರ್ ಮೆಮೊರಿಯಲ್’ ಎನ್ನುವ ಫಲಕ. ಸಂಗ್ರಹಾಲಯವನ್ನು ನೋಡುತ್ತಿದ್ದಾಗ ‘ಹಾಲ್ ಆಫ್ ಆನರ್’ ಎನ್ನುವ ಇಪ್ಪತ್ತು ಅಡಿ ಉದ್ದ ಅಗಲವಿದ್ದ ಕೋಣೆಯಲ್ಲಿ ಕೆಂಪು ಬಣ್ಣದ ಲೆದರ್ ಬೈಂಡಿಂಗ್ ಹೊಂದಿದ್ದ ವಿಪರೀತ ದಪ್ಪವಾದ ಒಂದು ಪುಸ್ತಕ ಮತ್ತು ಅದರ ಹಿಂದೆಯೇ ಅದಕ್ಕೇ ಆತುಕೊಂಡಿದ್ದಂತೆ ನಿಂತಿದ್ದ ಗಾಜಿನ ಗೋಡೆ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದರೆ ಅದರಲ್ಲೇನಿತ್ತು? “ಈ ದೇಶ ಯುದ್ಧ ಎನ್ನುವ ಒತ್ತಡವನ್ನು ಎದುರಿಸುತ್ತಿದ್ದಾಗ ತಮ್ಮ ಕರುಣೆ, ಪ್ರಾರ್ಥನೆ ಮತ್ತು ಮೌನದಲ್ಲಿ ಈ ದೇಶಕ್ಕೆ ಶಾಂತಿಯನ್ನು ಹೊಂದಲು ಸಾಧ್ಯವಾಗಿಸಿಕೊಟ್ಟ ಎಲ್ಲಾ ಮಹಿಳೆಯರ ಗೌರವಾರ್ಥ” ಎನ್ನುವ ಸಾಲುಗಳು. ಅಬ್ಬಾ, ಕಣ್ಣಿಗೆ ಕಾಣುವಂತೆ ಭಾಗವಹಿಸುವವರನ್ನು ಗುರುತಿಸುವುದು ಸಮಾಜದ ಸಹಜ ಗುಣ. ಆದರೆ ಹಿನ್ನೆಲೆಯಲ್ಲಿ ಜೀವ ತೇಯ್ದವರನ್ನು ಸಾರ್ವಜನಿಕವಾಗಿ ಗುರುತಿಸಿ ಗೌರವಿಸಿದ ಮೊದಲ ದೇಶ ಸ್ಕಾಟ್ ಲೆಂಡ್, ಇದೋ ನಿನಗೊಂದು ಸಲಾಂ ಎಂದುಕೊಂಡೆ.
ಯುದ್ಧ ಬೇಕೇಕೆ? ಯುದ್ಧ ಯಾಕಾಗಿ? ಇಂಥ ಹಲವು ಭಾವ, ಪ್ರಶ್ನೆಗಳು ಎಲ್ಲರ ಮನಸ್ಸಿನ ಮೂಲೆಯಲ್ಲೂ ಜಗಳಕ್ಕೆ ಬಿದ್ದಿರುವುದು ಖಂಡಿತ. ಆದರೆ ಏನಾಗುತ್ತಿದೆಯೋ ಅದನ್ನು ತಪ್ಪಿಸಲು ನಾವು ಶಕ್ಯರಲ್ಲವಲ್ಲ. ಪಯಣ ಮುಂದುವರಿಯಲೇ ಬೇಕು. ಹೊಸಹೊಸ ಯುದ್ಧ ಸ್ಮಾರಕಗಳು ನಿರ್ಮಾಣವಾಗದಿರಲಿ. ಅದನ್ನು ಸುತ್ತಿಬರುವ ತವಕ ಯಾವ ಪ್ರವಾಸಿಗನಿಗೂ ಮೂಡದಿರಲಿ ಎನ್ನುವುದೇ ಈ ಹೊತ್ತಿನ ಆಶಯ.