ಇಡೀ ಜಗತ್ತು ಪ್ರವಾಸಕ್ಕೆ ಹೊರಟಂತೆ ಭಾಸವಾಗುತ್ತಿದೆ. ವಿಮಾನ ನಿಲ್ದಾಣವಿರಬಹುದು, ರೈಲು ನಿಲ್ದಾಣವಿರಬಹುದು, ಪ್ರೇಕ್ಷಣೀಯ ಸ್ಥಳಗಳಿರಬಹುದು, ದೇಶ-ವಿದೇಶಗಳ ಸುಂದರ ತಾಣಗಳಿರಬಹುದು, ಎಲ್ಲಿಯೇ ಹೋದರೂ ಪ್ರವಾಸಿಗರ ದಂಡು. ಏಕಾಂತ ಅರಸಿ ಬೆಟ್ಟ-ಗುಡ್ಡಗಳಿಗೆ, ಕಡಲ ಕಿನಾರೆಗಳಿಗೆ ಹೋದರೆ, ಅಲ್ಲೆಲ್ಲ ಜನಜಂಗುಳಿಯೋ ಜಂಗುಳಿ! ಈ ಆಧುನಿಕ ಯುಗದಲ್ಲಿ, ಇಡೀ ಜಗತ್ತೇ ಯಾವುದೋ ಒಂದು ಮಹಾ ಪಯಣಕ್ಕೆ ಹೊರಟಂತಿದೆ.

ಮಾನವ ಮನಸ್ಸು ತನ್ನ ಸಹಜ ಕುತೂಹಲದಿಂದ ಪ್ರೇರಿತವಾಗಿ, ಮನೆ, ಗಡಿ ಮತ್ತು ಭೌಗೋಳಿಕ ಮಿತಿಗಳನ್ನು ಮೀರಿ ಹೊಸತನ್ನು ಅನ್ವೇಷಿಸಲು ಹೊರಟಿದೆ. ಹಿಂದೆ ಬಾನಂಚಿನಲ್ಲಿ ಅಪರೂಪವಾಗಿದ್ದ ವಿಮಾನಗಳ ಬಿಳಿಯ ಗೆರೆಗಳು ಇಂದು ನಿರಂತರವಾಗಿ ಹೆಣೆದಿರುವ ದಾರಗಳಂತೆ ಗೋಚರಿಸುತ್ತವೆ. ಪ್ರತಿ ಗೆರೆಯೂ ಒಂದು ಕನಸು ಹೊತ್ತು ಸಾಗುವ ಪಯಣಿಗನ ಕಥೆ ಹೇಳುತ್ತದೆ. ಒಬ್ಬನು ತನ್ನ ಕಡಲ ತೀರದ ಹಳೆಯ ನೆನಪುಗಳನ್ನು ನವೀಕರಿಸಲು ಹೊರಟಿದ್ದರೆ, ಮತ್ತೊಬ್ಬನು ಪರ್ವತಗಳ ಮೌನದಲ್ಲಿ ತನ್ನ ಆತ್ಮವನ್ನು ಹುಡುಕಲು ಹೊರಟಿದ್ದಾನೆ.

ನಗರಗಳು ಕೇವಲ ವಾಸಸ್ಥಳಗಳಾಗಿ ಉಳಿದಿಲ್ಲ. ಅವು ಆಗಮನ ಮತ್ತು ನಿರ್ಗಮನಗಳ ನಿರಂತರ ಕೇಂದ್ರಗಳಾಗಿವೆ. ರೈಲು ನಿಲ್ದಾಣಗಳ ಗದ್ದಲ, ವಿಮಾನ ನಿಲ್ದಾಣಗಳ ತರಾತುರಿ ಮತ್ತು ಬಂದರುಗಳಲ್ಲಿ ಹಡಗುಗಳ ಇಳಿದಾಣ – ಇವೆಲ್ಲವೂ ಮಾನವನ ಚಲನೆಯ ಮಹಾ ಲಯಕ್ಕೆ ಸಾಕ್ಷಿಯಾಗಿವೆ. ಬೆಳಗಿನ ಇಬ್ಬನಿಯಂತೆ, ಪ್ರವಾಸಿಗರು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಪಸರಿಸುತ್ತಿದ್ದಾರೆ, ಸ್ಥಳೀಯರೊಂದಿಗೆ ಬೆರೆತು, ಹೊಸ ಭಾಷೆಗಳ ತುಣುಕುಗಳನ್ನು ಕಲಿಯುತ್ತಾ ಮತ್ತು ಅನ್ಯ ಸಂಸ್ಕೃತಿಗಳ ಸುಗಂಧವನ್ನು ಅನುಭವಿಸುತ್ತಿದ್ದಾರೆ. ಪ್ರಾಚೀನ ನಗರಗಳ ಬೀದಿಗಳು ಈಗ ಹೊಸ ಹೆಜ್ಜೆಗುರುತುಗಳಿಂದ ತುಂಬಿ ಹೋಗಿವೆ.

ಗ್ರೀಸ್‌ನ ಅಕ್ರೊಪೊಲಿಸ್‌ನಲ್ಲಿ ನಿಂತು ಇತಿಹಾಸದ ಸಾರವನ್ನು ಆಸ್ವಾದಿಸುವ ಉತ್ಸಾಹವಿರಬಹುದು, ಗ್ರೀಸಿನ ಸಂಟೋರಿನಿಯ ಕಡುನೀಲಿ ಕಟ್ಟಡದಲ್ಲಿ ಕುಳಿತು ಸಾಗರ ವೀಕ್ಷಣೆಯಿದ್ದಿರಬಹುದು, ಹುಟು ಮತ್ತು ಟುಟ್ಸಿ ಜನರ ನಡುವಿನ ಜನಾಂಗೀಯ ಹತ್ಯಾಕಾಂಡಕ್ಕೆ ಸಾಕ್ಷಿಯಾದ ರವಾಂಡದ ಶಾಪಭೂಮಿಯಾಗಿರಬಹುದು ಅಥವಾ ಅಮೆಜಾನ್‌ನ ನಿಗೂಢ ಕಾಡುಗಳಲ್ಲಿ ಜೀವವೈವಿಧ್ಯದ ಮೌನವನ್ನು ಆಲಿಸುವ ಹಂಬಲವಿರಬಹುದು, ಈ ಚಲನೆಯು ಜಾಗತಿಕ ಏಕತೆಯ ಒಂದು ಸುಂದರ ದೃಷ್ಟಾಂತವಾಗಿದೆ. ಪ್ರತಿಯೊಬ್ಬ ಪ್ರಯಾಣಿಕನು ತನ್ನೊಂದಿಗೆ ತನ್ನ ಸಂಸ್ಕೃತಿಯ ಒಂದು ಸಣ್ಣ ಭಾಗವನ್ನು ತೆಗೆದುಕೊಂಡು ಹೋಗುತ್ತಾನೆ ಮತ್ತು ಹಿಂದಿರುಗುವಾಗ ಹೊಸ ಜ್ಞಾನದ ಒಂದು ಸಂಪೂರ್ಣ ಜಗತ್ತನ್ನು ತರುತ್ತಾನೆ.

Sustainable Tour

ಇಡೀ ಜಗತ್ತು ಪ್ರವಾಸಕ್ಕೆ ಹೊರಟಿದೆಯೇನೋ ಎಂಬ ಕಲ್ಪನೆಯಿದೆಯಲ್ಲ, ಅದು ಮಾನವ ಚೈತನ್ಯದ ಅನಿಯಮಿತ ಬಯಕೆ, ಅನ್ವೇಷಣೆಯ ಹಂಬಲ ಮತ್ತು ಜೀವನದ ವಿಸ್ಮಯಗಳನ್ನು ಸ್ವತಃ ಅನುಭವಿಸುವ ಆಶಯವನ್ನು ಪ್ರತಿಬಿಂಬಿಸುವ ಒಂದು ಸುಂದರ ಕಾವ್ಯವೇ. ಈ ನಿರಂತರ ಪಯಣದಲ್ಲಿ, ನಾವು ಹೊಸ ಸ್ಥಳಗಳನ್ನು ನೋಡುವ ಜತೆಗೆ, ನಮ್ಮೊಳಗಿನ ಜಗತ್ತನ್ನೂ ಮರು-ಪರಿಶೋಧಿಸುತ್ತೇವೆ. ಹೊಸ ಸಂಸ್ಕೃತಿಗಳನ್ನು ಅನ್ವೇಷಿಸುವುದು, ಇತಿಹಾಸದ ಕುರುಹುಗಳನ್ನು ನೋಡುವುದು ಮತ್ತು ಪ್ರಕೃತಿಯ ವೈಭವದಲ್ಲಿ ಕಳೆದುಹೋಗುವುದು ನಮ್ಮ ಜೀವನದ ದೃಷ್ಟಿಕೋನವನ್ನು ವಿಸ್ತರಿಸುತ್ತದೆ.

ಹೀಗಾಗಿ ಕಳೆದ ಕೆಲವು ದಶಕಗಳಿಂದ, ಜಾಗತಿಕ ಪ್ರವಾಸೋದ್ಯಮವು ಅನಿರೀಕ್ಷಿತವಾಗಿ ಬೆಳೆದಿದೆ. ಇದರ ಜತೆಗೇ ಪರಿಸರದ ಮೇಲೆ ಮತ್ತು ಸ್ಥಳೀಯ ಸಮುದಾಯಗಳ ಮೇಲೆ ನಕಾರಾತ್ಮಕ ಪರಿಣಾಮಗಳೂ ಹೆಚ್ಚುತ್ತಿವೆ. ಹೀಗಾಗಿ, ಇಂದು ನಾವು ಒಂದು ನಿರ್ಣಾಯಕ ಘಟ್ಟದಲ್ಲಿದ್ದೇವೆ. 'ಸುಸ್ಥಿರವಾಗಿ ಪ್ರಯಾಣಿಸಲು ಇದೇ ಸೂಕ್ತ ಸಮಯ' ಎನ್ನುವ ಅಪಾಯದ ಗಂಟೆ ನಮ್ಮನ್ನು ಎಚ್ಚರಿಸುತ್ತಲೇ ಇದೆ. ನಾವು ಹೇಗೆ ಪ್ರಯಾಣಿಸುತ್ತೇವೆ ಎಂಬುದನ್ನು ಬದಲಾಯಿಸದಿದ್ದರೆ, ನಾವು ಪ್ರೀತಿಸುವ ಸ್ಥಳಗಳು ನಾಶವಾಗಬಹುದು ಮತ್ತು ಭವಿಷ್ಯದ ಪೀಳಿಗೆಗೆ ಅವು ಕೇವಲ ನೆನಪುಗಳ ಸ್ಮಾರಕ ಅಥವಾ ಸ್ಮಾರಕಗಳಾಗಿ ಉಳಿಯಬಹುದು.

waterfall tour

ಸುಸ್ಥಿರ ಪ್ರವಾಸೋದ್ಯಮ ಎಂದರೆ, ಪ್ರವಾಸಿಗರು ಸಮುದಾಯಗಳ ಅಗತ್ಯಗಳನ್ನು ಅರಿತುಕೊಂಡು, ಆತಿಥೇಯ ಪ್ರದೇಶಗಳಲ್ಲಿ ಜವಾಬ್ದಾರಿಯುತವಾಗಿ ಪ್ರಯಾಣಿಸುವುದು. ಇದರ ಮುಖ್ಯ ಉದ್ದೇಶವೆಂದರೆ, ಪರಿಸರ ಸಂರಕ್ಷಣೆ. ಪರಿಸರದ ಮೇಲೆ ಉಂಟಾಗುವ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವುದು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು. ಸ್ಥಳೀಯ ಜನರ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆ, ಮೌಲ್ಯಗಳು ಮತ್ತು ಆರ್ಥಿಕತೆಯನ್ನು ಗೌರವಿಸುವುದು ಮತ್ತು ಬೆಂಬಲಿಸುವುದು. ಪ್ರವಾಸೋದ್ಯಮದಿಂದ ಬರುವ ಆರ್ಥಿಕ ಲಾಭಗಳು ಸಮುದಾಯದ ಎಲ್ಲ ಭಾಗಗಳಿಗೆ ಸಮಾನವಾಗಿ ತಲುಪುವುದನ್ನು ಖಚಿತಪಡಿಸುವುದು. ಸರಳವಾಗಿ ಹೇಳುವುದಾದರೆ, ಸುಸ್ಥಿರ ಪ್ರಯಾಣವು ಪ್ರವಾಸದ ಸಂತೋಷವನ್ನು ಪಡೆಯುವ ಜತೆಗೆ, ನಾವು ಭೇಟಿ ನೀಡುವ ಸ್ಥಳಗಳನ್ನು ನಾವು ಹೊರಡುವಾಗ ಇನ್ನೂ ಉತ್ತಮ ಸ್ಥಿತಿಯಲ್ಲಿ ಬಿಟ್ಟು ಬರುವ ಜವಾಬ್ದಾರಿಯನ್ನು ಒಳಗೊಂಡಿರುತ್ತದೆ.

ಜಾಗತಿಕ ತಾಪಮಾನ ಏರಿಕೆ, ಮಾಲಿನ್ಯ ಮತ್ತು ಜೀವವೈವಿಧ್ಯದ ನಷ್ಟದ ಈ ಯುಗದಲ್ಲಿ, ಪ್ರವಾಸೋದ್ಯಮ ಉದ್ಯಮವು ತನ್ನ ಪಾಲಿನ ಜವಾಬ್ದಾರಿಯನ್ನು ಹೊರಲೇಬೇಕಿದೆ. ಇಲ್ಲದಿದ್ದರೆ ನಮ್ಮ ಮಕ್ಕಳಿಗೆ ನಾವು ಸ್ಮಾರಕ, ಸಮಾಧಿಯನ್ನಷ್ಟೇ ಬಿಟ್ಟು ಹೋಗಬೇಕಾದೀತು. ವಿಮಾನ ಪ್ರಯಾಣವು ಪ್ರವಾಸೋದ್ಯಮದ ಅತಿದೊಡ್ಡ ಇಂಗಾಲದ ಮೂಲಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತದ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯಲ್ಲಿ ಪ್ರವಾಸೋದ್ಯಮವು ಗಮನಾರ್ಹ ಪಾಲನ್ನು ಹೊಂದಿದೆ. ವಿಮಾನಗಳು ಹೆಚ್ಚಿನ ದೂರ ಪ್ರಯಾಣಿಸಲು ಮತ್ತು ಬೃಹತ್ ಪ್ರಮಾಣದಲ್ಲಿ ಶಕ್ತಿಯನ್ನು ಉತ್ಪಾದಿಸಲು ಮುಖ್ಯವಾಗಿ ಜೆಟ್ ಇಂಧನದ ಮೇಲೆ ಅವಲಂಬಿತವಾಗಿವೆ.

ಇದು ಸಾಕಷ್ಟು ಇಂಧನವನ್ನು ಸುಡುವುದರಿಂದ ದೊಡ್ಡ ಪ್ರಮಾಣದ ಇಂಗಾಲದಡೈ ಆಕ್ಸೈಡ್ ಮತ್ತು ಇತರ ಗ್ರೀನ್ ಹೌಸ್ ಅನಿಲಗಳು ಹೊರಬರುತ್ತವೆ. ಪ್ರವಾಸೋದ್ಯಮದಲ್ಲಿ ಅಂತಾರಾಷ್ಟ್ರೀಯ ಪ್ರಯಾಣವು ಸಾಮಾನ್ಯ. ವಿಮಾನಗಳು ಸಾವಿರಾರು ಕಿಮೀ‌ಗಳಷ್ಟು ದೂರವನ್ನು ಕ್ರಮಿಸುವುದರಿಂದ, ಇಂಧನದ ಬಳಕೆ ಮತ್ತು ಅದರಿಂದಾಗುವ ಹೊರಸೂಸುವಿಕೆಯ ಪ್ರಮಾಣವು ರೈಲು ಅಥವಾ ಕಾರುಗಳಿಗಿಂತ ಹೆಚ್ಚು. ಇನ್ನು ಐಷಾರಾಮಿ ಹೊಟೇಲ್‌ಗಳು ಮತ್ತು ರೆಸಾರ್ಟ್‌ಗಳು ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಮತ್ತು ನೀರನ್ನು ಬಳಸುತ್ತವೆ. ಜನಪ್ರಿಯ ತಾಣಗಳಲ್ಲಿ ಅತಿಯಾದ ಪ್ರವಾಸಿಗರ ಸಂಖ್ಯೆಯಿಂದಾಗಿ ಸ್ಥಳೀಯ ಮೂಲಸೌಕರ್ಯಗಳ ಮೇಲೆ ಒತ್ತಡ, ಬೆಲೆ ಏರಿಕೆ, ಸಂಸ್ಕೃತಿಯ ನಾಶ ಮತ್ತು ನೈಸರ್ಗಿಕ ತಾಣಗಳ ಅವನತಿ ಉಂಟಾಗುತ್ತಿದೆ. ವೆನಿಸ್, ಬಾರ್ಸಿಲೋನಾ ಅಥವಾ ಹಿಮಾಲಯದ ಕೆಲವು ಟ್ರೆಕ್ಕಿಂಗ್ ಮಾರ್ಗಗಳು ಇದಕ್ಕೆ ಉತ್ತಮ ಉದಾಹರಣೆಗಳು. ಬಿಸಾಡುವ ಪ್ಲಾಸ್ಟಿಕ್ ಬಾಟಲಿ‌ಗಳು, ಆಹಾರ ತ್ಯಾಜ್ಯ ಮತ್ತು ಅನುಚಿತ ತ್ಯಾಜ್ಯ ನಿರ್ವಹಣೆಯಿಂದಾಗಿ ಕಡಲತೀರಗಳು, ಪರ್ವತಗಳು ಮತ್ತು ಪವಿತ್ರ ಸ್ಥಳಗಳು ಮಲಿನವಾಗುತ್ತಿವೆ.

ಒಂದು ಪ್ರೇಕ್ಷಣೀಯ ತಾಣವನ್ನು ಕಂಡಾಗ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಹೇಳುತ್ತೇವೆ. ಉದಾಹರಣೆಗೆ, ಉತ್ತರ ಕನ್ನಡ ಜಿಲ್ಲೆಯನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ, ಸಾಧ್ಯತೆಗಳಿವೆ. ಆದರೆ ಯಾವ ಸರಕಾರವೂ ಈ ನಿಟ್ಟಿನಲ್ಲಿ ಗಮನಹರಿಸದಿರುವುದರಿಂದ ಅದು ಹಿಂದುಳಿದಿದೆ ಎಂದು ಅನೇಕರು ಹೇಳುವುದನ್ನು ಕೇಳಿರಬಹುದು. ಒಂದು ದೃಷ್ಟಿಯಿಂದ ಆ ಜಿಲ್ಲೆ ಹೀಗೆ ಹಿಂದುಳಿದಿರುವುದೇ ವಾಸಿ. ಒಂದು ವೇಳೆ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಿದ್ದೇ ಆದರೆ, ಅದು ನಾಲ್ಕೈದು ವರ್ಷಗಳಲ್ಲಿ ಸತ್ಯಾನಾಶವಾಗುವುದರಲ್ಲಿ ಅನುಮಾನವೇ ಇಲ್ಲ.

ಯಾವ ಪ್ರದೇಶ ಪ್ರವಾಸೋದ್ಯಮದ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಿದರೆ, ಅದು ಕೈತಪ್ಪಿ ಹೋದಂತೆ. ಪ್ರವಾಸಿಗರು ಕಿತ್ತೆದ್ದು ಬರಲಾರಂಭಿಸಿದರೆ, ಆ ತಾಣ ಕಿತ್ತು ಹೋಯಿತು ಎಂದೇ ಅರ್ಥ. ನೋಡನೋಡುತ್ತಿದ್ದಂತೆ, ಆ ತಾಣದ ಚಹರೆಯೇ ಬದಲಾಗಿಬಿಡುತ್ತದೆ. ಪ್ರವಾಸಿಗರು ಬಂದು ನೋಡಿ ಹೋದರೆ, ಸಮಸ್ಯೆ ಇಲ್ಲ. ಆದರೆ ಪ್ರವಾಸಿಗರು ದಂಡೆತ್ತಿ ಬಂದು ದಾಳಿ ಮಾಡಿಬಿಡುತ್ತಾರೆ. ಆ ಪ್ರೇಕ್ಷಣೀಯ ತಾಣವನ್ನು ಲೂಟಿ ಮಾಡಲು ಬರುತ್ತಿರುವಂತೆ ದಾಂಗುಡಿಯಿಡುತ್ತಾರೆ. ಒಂದೆರಡು ವರ್ಷಗಳಲ್ಲಿ ಸುತ್ತಮುತ್ತಲ ಪ್ರದೇಶ ಕಿತ್ತು ಕಿಲುಸಾರೆದ್ದು ಹೋಗುತ್ತದೆ. ಇದಕ್ಕೆ ಯಾರೋ ಕೆಲವು ಜನರಷ್ಟೇ ಕಾರಣ ಎನ್ನುವಂತಿಲ್ಲ. ಇದಕ್ಕೆ ಎಲ್ಲರೂ ಕಾರಣರು. ಎಲ್ಲರೂ ತಮ್ಮ ತಮ್ಮ ಕೈಲಾದಷ್ಟು, ತಮ್ಮ ತಮ್ಮ ಮಿತಿಯೊಳಗೆ ಒಂದು ಪ್ರವಾಸಿತಾಣವನ್ನು ಕುಲಗೆಡಿಸಲು ಯೋಗದಾನ ನೀಡುತ್ತಾರೆ ಎಂಬುದು ವಾಸ್ತವ.

Responsible Tourist

ಸುಸ್ಥಿರ ಪ್ರವಾಸೋದ್ಯಮ ಎಷ್ಟು ಮುಖ್ಯವೋ, ಜವಾಬ್ದಾರಿಯುತ ಪ್ರವಾಸೋದ್ಯಮವು ಅಷ್ಟೇ ಮುಖ್ಯ. ಪ್ರವಾಸಿತಾಣವನ್ನು ಬರಿಗಣ್ಣಿನಲ್ಲಿ ನೋಡಿದ ಮಾತ್ರಕ್ಕೆ ಅದು ಹಾಳಾಗುವುದಿಲ್ಲ ಅಥವಾ ಸವೆದು ಹೋಗುವುದಿಲ್ಲ. ದುರ್ದೈವವೆಂದರೆ, ಯಾರೂ ಸುಮ್ಮನೆ ನೋಡಿ ಬರುವುದಿಲ್ಲ. ಆ ಜಾಗವನ್ನು ಯಥಾಶಕ್ತಿ ವಿರೂಪಗೊಳಿಸದೇ ಹಿಂದಿರುಗುವುದಿಲ್ಲ. ಪ್ರವಾಸಿಗರು, ಪ್ರವಾಸೋದ್ಯಮ ಸಂಸ್ಥೆಗಳು ಮತ್ತು ಸರಕಾರಗಳು ಒಂದು ನಿರ್ದಿಷ್ಟ ಸ್ಥಳದ ಮೇಲೆ ತಮ್ಮ ಪ್ರವಾಸದ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಧನಾತ್ಮಕ ಪರಿಣಾಮಗಳನ್ನು ಹೆಚ್ಚಿಸಲು ಉದ್ದೇಶಪೂರ್ವಕವಾಗಿ ಮತ್ತು ಸಕ್ರಿಯವಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಒಂದು ವಿಧಾನವಾಗಿ ಜವಾಬ್ದಾರಿಯುತ ವರ್ತಿಸಬೇಕಾದ ಅಗತ್ಯವಿದೆ. ಪ್ರವಾಸಿಗರು ವಾಸಿಸಲು, ವೀಕ್ಷಿಸಲು ಮತ್ತು ಗರಿಷ್ಠ ಅನುಭವ ಪಡೆಯಲು ಭೇಟಿ ನೀಡುವ ಸ್ಥಳವನ್ನು ಉತ್ತಮವಾಗಿ ನಿರ್ಮಿಸುವುದು ಹಾಗೂ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ. Respect the places you visit as if you were a guest in someone's home ಎಂಬ ಮಾತನ್ನು ನಾವೆಲ್ಲ ಅರಿಯಬೇಕಿದೆ. ನಮ್ಮ ಪ್ರತಿಯೊಂದು ಪ್ರಯಾಣವೂ ಉತ್ತಮ ಜಗತ್ತನ್ನು ನಿರ್ಮಿಸುವ ನಿಟ್ಟಿನಲ್ಲಿ ಇಡುವ ಒಂದು ದಿಟ್ಟ ಹೆಜ್ಜೆಯಾಗಿರಬೇಕು.

ಯಾವುದಾದರೂ ಪ್ರವಾಸಿ ತಾಣಕ್ಕೆ ಹೋದಾಗ Take nothing but pictures, leave nothing but footprints, kill nothing but time ಎಂಬುದನ್ನು ನೆನಪಿಸಿಕೊಂಡರೆ ಸಾಕು. ನಮಗೆ ಆ ಜಾಗವನ್ನು ಸುಧಾರಿಸಲು ಆಗದಿದ್ದರೆ, ಹಾಳು ಮಾಡುವ ಅಧಿಕಾರವೂ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.