• ಆಶ್ರಿತಾ ಕಿರಣ್

ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ವಿಶೇಷ ತಾಣಗಳನ್ನು ನೋಡುವ ಕುತೂಹಲ ಎಷ್ಟಿರುತ್ತದೋ, ಅಲ್ಲಿನ ಜನ ಹೇಗಿರುತ್ತಾರೆ, ಅವರ ಬದುಕು ಹೇಗಿರುತ್ತದೆ ಎಂದು ತಿಳಿಯುವ ಆಸಕ್ತಿಯೂ ಅಷ್ಟೇ ಇರುತ್ತದೆ. ಪ್ರವಾಸದ ನಡುವೆ ಎದುರಾಗುವ ಸಣ್ಣಪುಟ್ಟ ಘಟನೆಗಳು ಕೆಲವೊಮ್ಮೆ ನಗು ತರಿಸಿದರೆ, ಇನ್ನೂ ಕೆಲವು ಘಟನೆಗಳು ಯೋಚಿಸುವಂತೆ ಮಾಡುತ್ತವೆ. ಇಂಥ ಅನುಭವಗಳನ್ನು ಹೊತ್ತು ಕಾಂಬೋಡಿಯಾ ಮತ್ತು ವಿಯೆಟ್ನಾಂ ಅನ್ನು ಪರಿಚಯಿಸುವ ಕೃತಿ ‘ಕಲ್ಲುಗಳು ಕಥೆ ಹೇಳುವ ಕಾಂಬೋಡಿಯಾ ಮತ್ತು ವಿಸ್ಮಯದ ವಿಯೆಟ್ನಾಂ’. ಇದು ಗೀತಾ ಕುಂದಾಪುರ ಅವರ ಪ್ರವಾಸ ಕಥನ.

ಪ್ರವಾಸಕ್ಕೆ ಹೋದವರು ಈ ಪುಸ್ತಕ ಯಾಕೆ ಬರೆದರು ಅನ್ನೋ ಪ್ರಶ್ನೆ ಮೂಡಿ ಬಹುಶಃ ಹೇಗೆ ಹೋಗಬೇಕು, ಏನು ನೋಡಿದರು ಎನ್ನುವುದರ ಬಗ್ಗೆ ಮಾತ್ರವಿರಬಹುದು ಎಂದು ಭಾವಿಸಿದ್ದರೆ ಅದು ಖಂಡಿತ ತಪ್ಪು. ಈ ಪ್ರವಾಸ ಕಥನದಲ್ಲಿ ಕೇವಲ ಅವರ ಅನುಭವವಿಲ್ಲ. ತಾವು ಭೇಟಿ ನೀಡಿದ ಸ್ಥಳದ ಇತಿಹಾಸ, ಪ್ರಸ್ತುತ ಜೀವನದ ರೀತಿ ನೀತಿ, ಆಚಾರ-ವಿಚಾರ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ. ಪ್ರತಿಯೊಂದನ್ನು ಹೆಕ್ಕಿ ಮುಖ್ಯವಾಗಿರುವ ಘಟನೆಗಳನ್ನು ಹೇಳಿದ್ದಾರೆ.

ಇದನ್ನೂ ಓದಿ: ಧಕ್‌ ಧಕ್‌, ತಮ್ಮನ್ನೇ ಕಂಡುಕೊಳ್ಳುವ ಸಾಹಸ!

ʼಕಲ್ಲುಗಳೂ ಕಥೆ ಹೇಳುವ ಕಾಂಬೋಡಿಯಾ’ ಎಂಬ ಶೀರ್ಷಿಕೆಯೇ ಕುತೂಹಲ ಮೂಡಿಸುತ್ತದೆ. ನಿಶ್ಚಲವಾಗಿ ನಿಂತಿರುವ ಕಲ್ಲುಗಳ ಹಿಂದೆ ಅಡಗಿರುವ ಇತಿಹಾಸ, ಅಲ್ಲಿನ ಜನರ ಬದುಕು ಮತ್ತು ಹೆಜ್ಜೆ ಗುರುತುಗಳನ್ನು ಅರಿಯುವ ಅವಕಾಶ ಈ ಪ್ರವಾಸ ಕಥನದ ಮೂಲಕ ಸಿಗುತ್ತದೆ. ಅದರ ಜತೆಗೆ ವಿಯೆಟ್ನಾಂನ ವಿಸ್ಮಯಗಳನ್ನೂ ಪರಿಚಯಿಸಿರುವ ರೀತಿ ಸ್ಥಳವನ್ನು ಭೇಟಿ ಮಾಡುವ ಕುತೂಹಲ ಮೂಡಿಸುತ್ತದೆ.

ಕಾಂಬೋಡಿಯಾದಲ್ಲಿ ದೇವಸ್ಥಾನವೊಂದಕ್ಕೆ ಹೋದವರು ಅಲ್ಲಿ ಬಂದಿದ್ದ ಯುವಜನತೆಯನ್ನು ನೋಡಿ ʼಯುವಕ-ಯುವತಿಯರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಪರೀಕ್ಷೆ ಹತ್ತಿರಬಂತೆ ಎನ್ನುವ ಅನುಮಾನ ಬಂತುʼ ಎಂದು ಹೇಳುವಾಗ ಸಣ್ಣ ನಗು ಮೂಡುತ್ತದೆ.

ಶಾಪಿಂಗ್ ಎಂದು ಹೋದವರು ಬ್ಯಾಗ್‌ಗಳನ್ನು ಖರೀದಿಸುವುದನ್ನು ನೋಡಿ ʼನಮ್ಮವರ ಬ್ಯಾಗಿನ ತುಂಬಾ ಬ್ಯಾಗುಗಳೇ ತುಂಬಿರಬೇಕೆನಿಸಿತುʼ ಎಂದಿರುವುದನ್ನು ಕಲ್ಪಿಸಿಕೊಂಡಾಗ ಮತ್ತೊಮ್ಮೆ ನಗು ಮೂಡುತ್ತದೆ. ಅಲ್ಲಿನ ಎರಡು ಡಾಲರ್ ಅಂದರೆ ಇಲ್ಲಿನ 200/- ರು ಬೈ ಟೂ ಕಾಫಿ ಕೇಳಿ ಕುಡಿದಿದ್ದು ಕಾಫಿಯೋ ಟೀ ಯೋ ಗೊತ್ತಾಗಲಿಲ್ಲ ಎಂದು ಬರೆದಿರುವುದನ್ನು ಓದುವಾಗ ತಿಳಿ ನಗುವೊಂದು ಮೂಡದಿರದು. ಹೀಗೆ ಅಲ್ಲಲ್ಲಿ ನಗಿಸುವ ಪಂಚ್‌ಗಳಿವೆ.

ʼಜೀವನವೆಂದರೆ ಅಷ್ಟೇ ತಾನೇ? ತಿರುವುಗಳಿಲ್ಲದ ಜೀವನ ಉಂಟೇ ?ʼ ಎಂದು ಒಂದು ಸನ್ನಿವೇಶದ ಜತೆಗೆ ಬಳಸುವ ಸಾಲು ಬದುಕಿನ ದೃಷ್ಟಿಕೋನವನ್ನು ಮುಂದಿಟ್ಟಂತಿದೆ. ʼಮೆಚ್ಚಿದವರಲ್ಲಿ ಭಗವಂತನನ್ನು ಕಾಣುವುದು ಪೂಜಿಸುವುದು ಸಾಮಾನ್ಯ ತಾನೆ ?ʼ ಎಂದು ಹೇಳುವಾಗ ಚಿಕ್ಕ ವ್ಯಂಗ್ಯ ಬೆಸೆದಂತಿಸುತ್ತದೆ.

ʼಛೇ ಇವನೊಡನೆ ಮಾತನಾಡಿ ಇವನ ಕಷ್ಟ ಸುಖ ವಿಚಾರಿಸಿ ಕೊಳ್ಳೋಣ ಇಲ್ಲಿನ ಜನಜೀವನದ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣವೆಂದರೆ ಅದೂ ಇಲ್ಲವಾಯಿತಲ್ಲʼ ಎಂದು ಗೊತ್ತಿಲ್ಲದ ಭಾಷೆ ಮಾತಾಡಲು ಬರದಿದ್ದಾಗ ಮನದಲ್ಲಿ ಮೂಡುವ ಮಾತು ಕೇಳಿ ತಿಳಿಯುವ ತವಕವನ್ನು ಹೇಳುತ್ತದೆ.

1975ರ ಕಾಂಬೋಡಿಯಾದಲ್ಲಿ ನಾಶವಾದ ಇತಿಹಾಸದ ಬಗ್ಗೆ ಇರುವ ಮಾಹಿತಿ ಓದುವಾಗ ಮನುಷ್ಯನ ಮನಸ್ಥಿತಿ, ಮೋಹ, ಆತಿಆಸೆಯ ಬಗ್ಗೆ ಅಸಹ್ಯ ಎನ್ನಿಸುತ್ತದೆ. ವಿಯೇಟ್ನಾಂನ ಸೌಂದರ್ಯ ಅಲ್ಲಿನ ಜೀವನ ಹುಬ್ಬೇರಿಸುವಂತಿದೆ.

ಕಾಂಬೋಡಿಯಾ ಹಾಗೂ ವೀಯೇಟ್ನಾಂನ ಅನುಭವದ ಲೇಖನ ಮುಗಿಯುತ್ತಿದ್ದಂತೆ ಎರಡೂ ಊರುಗಳಲ್ಲಿ ಮುಖ್ಯವಾದುದು ಏನು? ಅಲ್ಲಿನ ಇತಿಹಾಸ ಹಾಗು ಜೀವನದ ರೀತಿ ರಿವಾಜು ಎಲ್ಲವನ್ನು ಕಿರು ಟಿಪ್ಪಣಿಯನ್ನಾಗಿ ನೀಡಿರುವುದು ವಿಶೇಷವಾಗಿ ಗಮನಸೆಳೆಯುತ್ತದೆ. ಪುಸ್ತಕದ ಅಂತ್ಯದಲ್ಲಿ ಅಲ್ಲಿನ ಆಕರ್ಷಕ ಚಿತ್ರಗಳಿದ್ದು ಲೇಖನದ ಜತೆಗೆ ಇದಿದ್ದರೆ ಓದು ಮತ್ತಷ್ಟು ಖುಷಿ ನೀಡುತ್ತಿತ್ತು ಎಂದನಿಸದಿರದು.

ಹಾಸ್ಯ, ವ್ಯಂಗ್ಯ, ಕುತೂಹಲ, ಜನಜೀವನದ ಪರಿಚಯ, ಇತಿಹಾಸದ ನೋವು ಮತ್ತು ಬದುಕಿನ ಕುರಿತಾದ ಒಂದಷ್ಟು ಚಿಂತನೆಗಳನ್ನು ಒಳಗೊಂಡಿರುವ ಈ ಪ್ರವಾಸ ಕಥನ ಓದುಗರ ಪಾಲಿಗೃ ಕೇವಲ ಸ್ಥಳ ಪರಿಚಯವಾಗಿ ಉಳಿಯದೆ, ಒಂದು ಅನುಭವ ನೀಡುವುದರಲ್ಲಿ ಸಂಶಯವಿಲ್ಲ. ಕಾಂಬೋಡಿಯಾ ಮತ್ತು ವಿಯೆಟ್ನಾಂ ಪ್ರವಾಸಕ್ಕೆ ಹೋಗದವರನ್ನು ಅಲ್ಲಿಗೆ ಒಮ್ಮೆ ಹೋಗಬೇಕು ಎನ್ನಿಸುವಂತೆ ಮಾಡುವ ಅಚ್ಚುಕಟ್ಟಾದ ಸರಳ ಭಾಷೆಯ ಸ್ಪಷ್ಟ ನಿರೂಪಣೆಯನ್ನು ಈ ಕೃತಿ ಹೊಂದಿದೆ.

ಕೃತಿ ವಿವರ:

ಪುಸ್ತಕ : ಕಲ್ಲುಗಳೂ ಕಥೆ ಹೇಳುವ ಕಾಂಬೋಡಿಯಾ ಮತ್ತು ವಿಸ್ಮಯದ ವಿಯೆಟ್ನಾಂ

ಲೇಖಕರು : ಗೀತಾ ಕುಂದಾಪುರ

ಪ್ರಥಮ ಮುದ್ರಣ : 2025

ಪ್ರಕಾಶಕರು : ತೇಜೋ ಪಬ್ಲಿಕೇಶನ್

ಪುಟಗಳು : 120+4

ಬೆಲೆ : 150/-