'ಕೊಡಲಿಯ ಕಾವು ಕುಲಕ್ಕೆ ಮೃತ್ಯು' ಎಂಬ ಗಾದೆ ಮಾತು ಪ್ರಕೃತಿಯಿಂದಲೇ ಬಂದ ಕೊಡಲಿಯ ಕಾವು ಹೇಗೆ ತನ್ನದೇ ಕುಲದ ಮರಗಳನ್ನು ಕತ್ತರಿಸಲು ಕಾರಣವಾಗುತ್ತದೆಯೋ, ಹಾಗೆಯೇ ಒಂದು ವ್ಯವಸ್ಥೆಯು ತನ್ನ ಸ್ವಂತ ನಾಶಕ್ಕೆ ತಾನೇ ಕಾರಣವಾಗುವುದನ್ನು ಸೂಚಿಸುತ್ತದೆ. ಇಂದು ಜಾಗತಿಕ ಪ್ರವಾಸೋದ್ಯಮದ ಸ್ಥಿತಿಯೂ ಇದೇ ಆಗಿದೆ. ಅತಿಯಾದ ಪ್ರವಾಸೋದ್ಯಮ ಅಥವಾ ‘ಓವರ್‌ಟೂರಿಸಂ’ ಇವತ್ತು ಎಷ್ಟು ಮಿತಿಮೀರಿದೆಯೆಂದರೆ, 'ಪ್ರವಾಸೋದ್ಯಮಕ್ಕೆ ಪ್ರವಾಸೋದ್ಯಮವೇ ವೈರಿ'ಯಾಗಿ ಪರಿಣಮಿಸಿದೆ. ಯಾವ ಸುಂದರ ಪ್ರಕೃತಿ, ಶಾಂತಿ, ಐತಿಹಾಸಿಕ ಶ್ರೀಮಂತಿಕೆ ಮತ್ತು ವಿಶಿಷ್ಟ ಸಾಂಸ್ಕೃತಿಕ ಬೇರುಗಳನ್ನು ಹುಡುಕಿಕೊಂಡು ಪ್ರವಾಸಿಗರು ಒಂದು ಜಾಗಕ್ಕೆ ಧಾವಿಸುತ್ತಾರೋ, ಅದೇ ಪ್ರವಾಸಿಗರ ಅತಿಯಾದ ಒಳಹರಿವು ಆ ಜಾಗದ ಮೂಲ ಸೌಂದರ್ಯವನ್ನೇ ನಾಶಮಾಡುತ್ತಿದೆ. ಅತಿಯಾದ ಪ್ರವಾಸೋದ್ಯಮ ಎನ್ನುವುದು ತೀವ್ರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರ ಬಿಕ್ಕಟ್ಟಾಗಿ ಮಾರ್ಪಟ್ಟಿದೆ. ಸಾಮಾಜಿಕ ಮಾಧ್ಯಮಗಳ, ವಿಶೇಷವಾಗಿ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಫೊಟೋಗಳ ವ್ಯಾಮೋಹದಿಂದಾಗಿ ಜಗತ್ತಿನ ಪ್ರಸಿದ್ಧ ತಾಣಗಳು ಇಂದು ಪ್ರವಾಸಿಗರಿಂದ ಉಸಿರುಗಟ್ಟುತ್ತಿವೆ. ಇದರಿಂದ ಬೇಸತ್ತ ಸ್ಥಳೀಯ ನಿವಾಸಿಗಳು 'ಪ್ರವಾಸಿಗರೇ, ಸಾಕು ನಿಲ್ಲಿಸಿ! ಇದು ನಾವು ಬದುಕುವ ಜಾಗ, ನಿಮ್ಮ ಸ್ಟುಡಿಯೋ ಅಲ್ಲ' ಎಂದು ಬೀದಿಗಿಳಿದು ಆಕ್ರೋಶ ಹೊರಹಾಕುತ್ತಿದ್ದಾರೆ. ಸ್ಥಳೀಯ ನಿವಾಸಿಗಳು ಪ್ರವಾಸೋದ್ಯಮದ ಈ ಅನಿಯಂತ್ರಿತ ಬೆಳವಣಿಗೆಯನ್ನು ಮೌನವಾಗಿ ಸಹಿಸಿಕೊಳ್ಳುವ ಕಾಲ ಮುಗಿದಿದೆ. ಪ್ರವಾಸೋದ್ಯಮವು ದೇಶದ ಆರ್ಥಿಕತೆಗೆ ಲಾಭ ತರುತ್ತದೆ ನಿಜ, ಆದರೆ ಅದು ಸ್ಥಳೀಯರ ನೆಮ್ಮದಿಯನ್ನೇ ಕಸಿದುಕೊಂಡಾಗ, ಅದು ಆಶೀರ್ವಾದವಾಗುವ ಬದಲು ಶಾಪವಾಗಿ ಪರಿಣಮಿಸುತ್ತದೆ.

ಇದನ್ನೂ ಓದಿ: ನೂತನ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌ಗೆ ಸವಿನಯ ಪತ್ರ

ಸ್ಪೇನ್ ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧ ಪ್ರವಾಸಿ ರಾಷ್ಟ್ರಗಳಲ್ಲಿ ಒಂದು. ಆದರೆ ಇಂದು ಆ ದೇಶದ ಬಾರ್ಸಿಲೋನಾ ಮತ್ತು ಮಲ್ಲೋರ್ಕಾದಂಥ ಪ್ರಮುಖ ನಗರಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿದೆ. ಪ್ರವಾಸೋದ್ಯಮದ ಅತಿಯಾದ ಬೆಳವಣಿಗೆಯು ಅಲ್ಲಿನ ಸ್ಥಳೀಯ ನಿವಾಸಿಗಳ ದೈನಂದಿನ ಬದುಕನ್ನು ನರಕವಾಗಿಸಿದೆ. ಇದಕ್ಕೆ ಮುಖ್ಯ ಕಾರಣ 'Airbnb'ಯಂಥ ಅಲ್ಪಾವಧಿ ಹೋಮ್‌ಸ್ಟೇಗಳ ವಿಪರೀತ ಹಾವಳಿ. ಸ್ಥಳೀಯ ಮನೆ ಮಾಲೀಕರು ಸಾಮಾನ್ಯ ಜನರಿಗೆ ತಿಂಗಳ ಬಾಡಿಗೆಗೆ ಮನೆ ಕೊಡುವ ಬದಲು, ಪ್ರವಾಸಿಗರಿಗೆ ಹೆಚ್ಚಿನ ಹಣಕ್ಕೆ ದಿನದ ಲೆಕ್ಕದಲ್ಲಿ ಬಾಡಿಗೆಗೆ ನೀಡಲು ಆರಂಭಿಸಿದ್ದಾರೆ. ಇದರಿಂದಾಗಿ ಸ್ಥಳೀಯ ಮಧ್ಯಮ ವರ್ಗದ ಜನರಿಗೆ, ವಿದ್ಯಾರ್ಥಿಗಳಿಗೆ ಮತ್ತು ಕಾರ್ಮಿಕರಿಗೆ ನಗರಗಳಲ್ಲಿ ಬಾಡಿಗೆ ಮನೆಗಳೇ ಸಿಗದಂತಾಗಿವೆ. ಲಭ್ಯವಿರುವ ಕೆಲವೇ ಮನೆಗಳ ಬಾಡಿಗೆ ಮತ್ತು ಆಸ್ತಿ ಬೆಲೆ ಗಗನಕ್ಕೇರಿದೆ. ತಮ್ಮದೇ ಆದ ಹಳೆಯ ನೆರೆಹೊರೆಯಿಂದ ಸ್ಥಳೀಯರು ಬಲವಂತವಾಗಿ ದೂರ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Untitled design (52)

ನಗರವು ಕೇವಲ ಪ್ರವಾಸಿಗರ ತಾಣವಾಗಿ ಮಾರ್ಪಟ್ಟು, ತಮ್ಮ ಬದುಕು ಮೂಲೆಗುಂಪಾಗುತ್ತಿರುವುದನ್ನು ಕಂಡು ಬೇಸತ್ತ ಬಾರ್ಸಿಲೋನಾದ ಸ್ಥಳೀಯ ನಿವಾಸಿಗಳು ಬೀದಿಗಿಳಿದು ವಿಶಿಷ್ಟವಾಗಿ ಪ್ರತಿಭಟಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಬೃಹತ್ ರ‍್ಯಾಲಿಗಳಲ್ಲಿ ಸಾವಿರಾರು ಜನ 'Tourists go home' (ಪ್ರವಾಸಿಗರೇ ಮನೆಗೆ ಮರಳಿ) ಮತ್ತು 'Barcelona is not for sale' (ಬಾರ್ಸಿಲೋನಾ ಮಾರಾಟಕ್ಕಿಲ್ಲ) ಎಂಬ ಫಲಕಗಳನ್ನು ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ರೆಸ್ಟೋರೆಂಟ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕುಳಿತಿದ್ದ ಪ್ರವಾಸಿಗರ ಮೇಲೆ ಸ್ಥಳೀಯರು ಆಟದ ನೀರಿನ ಗನ್‌ಗಳಿಂದ (Water Guns) ನೀರು ಚಿಮುಕಿಸಿ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದು ಕೇವಲ ಸಾಂಕೇತಿಕ ಆಕ್ರೋಶವಲ್ಲ, ಬದಲಿಗೆ ಪ್ರವಾಸಿಗರ ಅತಿರೇಕದ ವಿರುದ್ಧ ಸ್ಥಳೀಯರ ತಾಳ್ಮೆ ಕೆಟ್ಟಿದೆ ಎಂಬುದರ ಸ್ಪಷ್ಟ ಮುನ್ಸೂಚನೆ. ಈ ತೀವ್ರ ಪ್ರತಿಭಟನೆಗಳಿಗೆ ಮಣಿದಿರುವ ಬಾರ್ಸಿಲೋನ ಸ್ಥಳೀಯ ಆಡಳಿತವು ಒಂದು ದಿಟ್ಟ ನಿರ್ಧಾರ ಪ್ರಕಟಿಸಿದೆ. ಮುಂದಿನ ಕೆಲವು ವರ್ಷಗಳಲ್ಲಿ ನಗರದಲ್ಲಿರುವ ಎಲ್ಲ ಅಲ್ಪಾವಧಿ ಪ್ರವಾಸಿ ಹೋಮ್‌ಸ್ಟೇಗಳ (Airbnb) ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಮತ್ತು ಆ ಮನೆಗಳನ್ನು ಮರಳಿ ಸ್ಥಳೀಯರ ವಸತಿಗಾಗಿ ಬಳಸುವುದಾಗಿ ಘೋಷಿಸಿದೆ. ಪ್ರವಾಸೋದ್ಯಮವು ದೇಶದ ಆರ್ಥಿಕತೆಗೆ ಮುಖ್ಯವಾದರೂ, ಅದು ಸ್ಥಳೀಯ ನಾಗರಿಕರ ಮೂಲಭೂತ ಹಕ್ಕಾದ 'ವಸತಿ'ಯನ್ನು ಕಸಿದುಕೊಳ್ಳಬಾರದು ಎಂಬುದಕ್ಕೆ ಸ್ಪೇನ್‌ನ ಈ ಬಿಕ್ಕಟ್ಟು ಒಂದು ಜಾಗತಿಕ ಎಚ್ಚರಿಕೆ ಗಂಟೆಯಾಗಿದೆ.

ಇಟಲಿಯ ವೆನಿಸ್ ನಗರವು ತನ್ನ ಪ್ರಶಾಂತ ನೀರಿನ ಕಾಲುವೆಗಳು ಮತ್ತು ಐತಿಹಾಸಿಕ ಕಟ್ಟಡಗಳಿಗೆ ಜಗತ್ಪ್ರಸಿದ್ಧವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಲ್ಲಿಗೆ ಬರುವ ಬೃಹತ್ ಕ್ರೂಸ್ ಹಡಗುಗಳು ನಗರದ ಅಸ್ತಿತ್ವಕ್ಕೇ ಕಂಟಕವಾಗಿ ಪರಿಣಮಿಸಿವೆ. ಈ ಐಷಾರಾಮಿ ಹಡಗುಗಳು ತರುವ ಅತಿಯಾದ ಪ್ರವಾಸೋದ್ಯಮ ಮತ್ತು ಪರಿಸರ ಮಾಲಿನ್ಯವು ವೆನಿಸ್ ನಗರವನ್ನು ವಿನಾಶದ ಅಂಚಿಗೆ ತಳ್ಳಿದೆ. ಹತ್ತಾರು ಅಂತಸ್ತುಗಳಷ್ಟು ಎತ್ತರವಿರುವ ಈ ಬೃಹತ್ ಹಡಗುಗಳು ವೆನಿಸ್‌ನ ಕಿರಿದಾದ ಗಿಡೆಕ್ಕಾ ಕಾಲುವೆಯ (Giudecca Canal) ಮೂಲಕ ಹಾದುಹೋಗುವಾಗ ಭಾರಿ ಪ್ರಮಾಣದ ನೀರನ್ನು ಸ್ಥಳಾಂತರಿಸುತ್ತಿದ್ದವು. ಈ ಹಡಗುಗಳು ಸೃಷ್ಟಿಸುವ ಶಕ್ತಿಯುತ ಅಲೆಗಳು ವೆನಿಸ್‌ನ ಶತಮಾನಗಳಷ್ಟು ಹಳೆಯದಾದ ಮತ್ತು ಮರದ ಕಂಬಗಳ ಮೇಲೆ ನಿಂತಿರುವ ಕಟ್ಟಡಗಳ ಅಡಿಪಾಯವನ್ನು ನಡುಗಿಸುತ್ತಿದ್ದವು. ಜತೆಗೆ, ಇವು ಹೊರಸೂಸುವ ಹೊಗೆಯಿಂದ ವಾಯು ಮಾಲಿನ್ಯ ಮತ್ತು ಜಲಚರಗಳ ನಾಶ ನಿರಂತರವಾಗಿ ನಡೆಯುತ್ತಿತ್ತು. ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ತಮ್ಮ ನಗರವನ್ನು ರಕ್ಷಿಸಿಕೊಳ್ಳಲು 'NO GRANDI NAVI' (ಬೃಹತ್ ಹಡಗುಗಳು ಬೇಡ) ಎಂಬ ಬೃಹತ್ ನಾಗರಿಕ ಚಳವಳಿಯನ್ನು ಆರಂಭಿಸಿದರು.

ಸ್ಥಳೀಯರ ತೀವ್ರ ಪ್ರತಿಭಟನೆ ಮತ್ತು ಯುನೆಸ್ಕೋ ಎಚ್ಚರಿಕೆಯ ನಂತರ ಇಟಲಿ ಸರಕಾರವು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು. ಮೊದಲನೆಯದು, 25 ಸಾವಿರ ಟನ್‌ಗಿಂತ ಹೆಚ್ಚು ತೂಕವಿರುವ ದೊಡ್ಡ ಹಡಗುಗಳು ವೆನಿಸ್‌ನ ಐತಿಹಾಸಿಕ ಕೇಂದ್ರ ಮತ್ತು ಕಾಲುವೆಗಳನ್ನು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಇವುಗಳನ್ನು ನಗರದಿಂದ ದೂರವಿರುವ ಕೈಗಾರಿಕಾ ಬಂದರಿನ ಕಡೆಗೆ ತಿರುಗಿಸಲಾಯಿತು ಹಾಗೂ ಎರಡನೆಯದು, ಕೇವಲ ಒಂದೇ ದಿನದ ಪ್ರವಾಸಕ್ಕಾಗಿ ಬಂದು ನಗರವನ್ನು ಕಿಕ್ಕಿರಿದು ತುಂಬಿಸುವ ಪ್ರವಾಸಿಗರಿಗೆ ಕಡಿವಾಣ ಹಾಕಲು ಸರಕಾರ 'ಪ್ರವೇಶ ಶುಲ್ಕ' ಪದ್ಧತಿಯನ್ನು ಜಾರಿಗೆ ತಂದಿತು. ನಿರ್ದಿಷ್ಟ ಗರಿಷ್ಠ ದಟ್ಟಣೆಯ ದಿನಗಳಲ್ಲಿ ನಗರವನ್ನು ಪ್ರವೇಶಿಸಲು ಪ್ರವಾಸಿಗರು ಆನ್‌ಲೈನ್‌ನಲ್ಲಿ ಬುಕ್ ಮಾಡಿ ಶುಲ್ಕ ಪಾವತಿಸುವುದನ್ನು ಕಡ್ಡಾಯಗೊಳಿಸಲಾಯಿತು. ಪ್ರವಾಸೋದ್ಯಮದ ಆರ್ಥಿಕ ಲಾಭಕ್ಕಿಂತ ಒಂದು ಐತಿಹಾಸಿಕ ನಗರದ ಪರಿಸರ ಮತ್ತು ಜನರ ನೆಮ್ಮದಿ ಮುಖ್ಯ ಎಂಬುದನ್ನು ವೆನಿಸ್ ಜಗತ್ತಿಗೆ ತೋರಿಸಿಕೊಟ್ಟಿದೆ. ಅನಿಯಂತ್ರಿತ ಪ್ರವಾಸೋದ್ಯಮಕ್ಕೆ ಕಟ್ಟುನಿಟ್ಟಾದ ನೀತಿ ನಿಯಮಗಳೇ ಏಕೈಕ ಪರಿಹಾರ ಎಂಬುದಕ್ಕೆ ವೆನಿಸ್‌ನ ಈ ಹೋರಾಟ ಪ್ರಮುಖ ಉದಾಹರಣೆಯಾಗಿದೆ.

ನೆದರ್ಲ್ಯಾಂಡ್ಸ್‌ನ ರಾಜಧಾನಿ ಆಮ್‌ಸ್ಟರ್‌ಡಮ್ ತನ್ನ ಸುಂದರ ಕಾಲುವೆಗಳು ಮತ್ತು ಐತಿಹಾಸಿಕ ಕಲೆಗೆ ಜಗತ್ಪ್ರಸಿದ್ಧ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ನಗರವು ಕೇವಲ ಮೋಜು-ಮಸ್ತಿ, ರಾತ್ರಿ ಪಾರ್ಟಿಗಳು, ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಮುಕ್ತ ಸೇವನೆಗಾಗಿ ಬರುವ ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಈ 'ಪಾರ್ಟಿ ಪ್ರವಾಸೋದ್ಯಮ' (Party Tourism) ನಗರದ ಕಾನೂನು ಸುವ್ಯವಸ್ಥೆ ಮತ್ತು ಸ್ಥಳೀಯ ನಿವಾಸಿಗಳ ನೆಮ್ಮದಿಯನ್ನೇ ಸಂಪೂರ್ಣವಾಗಿ ಹಾಳುಗೆಡವಿತ್ತು. ವಿಶೇಷವಾಗಿ ಬ್ರಿಟನ್ ಮತ್ತು ಇತರ ಐರೋಪ್ಯ ದೇಶಗಳಿಂದ ಕೇವಲ ವೀಕೆಂಡ್ ಪಾರ್ಟಿ ಮಾಡಲೆಂದೇ ಬರುವ ಯುವ ಪ್ರವಾಸಿಗರ ಗುಂಪುಗಳು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವುದು, ಗಲಾಟೆ ಮಾಡುವುದು, ರಸ್ತೆಗಳಲ್ಲೇ ವಾಂತಿ ಮಾಡುವುದು ಮತ್ತು ಕಸ ಹಾಕುವುದನ್ನು ವಾಡಿಕೆಯಾಗಿಸಿಕೊಂಡಿದ್ದರು. ನಗರದ ಪ್ರಸಿದ್ಧ ‘ರೆಡ್ ಲೈಟ್ ಡಿಸ್ಟ್ರಿಕ್ಟ್’ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿ, ಅಲ್ಲಿನ ನಿವಾಸಿಗಳು ಕನಿಷ್ಠ ನೆಮ್ಮದಿಯಿಂದ ನಿದ್ರಿಸಲೂ ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರ ತೀವ್ರ ಆಕ್ರೋಶದ ನಂತರ ಆಮ್‌ಸ್ಟರ್‌ಡಮ್ ನಗರ ಆಡಳಿತವು ಈ ಅಶಿಸ್ತಿನ ಪ್ರವಾಸಿಗರನ್ನು ನಿಯಂತ್ರಿಸಲು ಅತ್ಯಂತ ಕಠಿಣ ಕ್ರಮಗಳನ್ನು ಜಾರಿಗೆ ತಂದಿತು. ಸ್ಥಳೀಯ ಆಡಳಿತವು ಅಂತರ್ಜಾಲದಲ್ಲಿ ವಿಶೇಷ ಜಾಹೀರಾತು ಅಭಿಯಾನವನ್ನು ಆರಂಭಿಸಿತು.

ಕೇವಲ ಮಾದಕ ದ್ರವ್ಯ ಮತ್ತು ಮೋಜು-ಮಸ್ತಿಗಾಗಿ ಆಮ್‌ಸ್ಟರ್‌ಡಮ್‌ಗೆ ಬರಲು ಬಯಸುವ ಪ್ರವಾಸಿಗರಿಗೆ 'ನೀವು ಇಲ್ಲಿಗೆ ಬರುವುದು ಬೇಡ, ದೂರವಿರಿ' ಎಂಬ ನೇರ ಎಚ್ಚರಿಕೆಯನ್ನು ನೀಡಿತು. ರೆಡ್ ಲೈಟ್ ಡಿಸ್ಟ್ರಿಕ್ಟ್‌ನ ಸಾರ್ವಜನಿಕ ರಸ್ತೆಗಳಲ್ಲಿ ಗಾಂಜಾ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿತು. ರಾತ್ರಿ ಕ್ಲಬ್‌ಗಳು, ಬಾರ್‌ಗಳು ಮತ್ತು ವೇಶ್ಯಾಗೃಹಗಳು ಕಡ್ಡಾಯವಾಗಿ ಮುಂಜಾನೆ ಬೇಗನೇ ವ್ಯಾಪಾರ ಮುಚ್ಚಬೇಕು ಎಂಬ ನಿಯಮ ತರಲಾಯಿತು. ಜತೆಗೆ ವಾರಾಂತ್ಯದಲ್ಲಿ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮದ್ಯ ಮಾರಾಟವನ್ನು ನಿಯಂತ್ರಿಸಲಾಯಿತು. ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಲು ನಗರದಲ್ಲಿ ಹೊಸ ಹೊಟೇಲ್ ಕಟ್ಟಡಗಳ ನಿರ್ಮಾಣಕ್ಕೆ ಸರಕಾರ ಬ್ರೇಕ್ ಹಾಕಿದೆ. ಆಮ್‌ಸ್ಟರ್‌ಡಮ್ ತೆಗೆದುಕೊಂಡಿರುವ ಈ ಕಠಿಣ ನಿರ್ಧಾರಗಳು ಜಾಗತಿಕ ಪ್ರವಾಸೋದ್ಯಮಕ್ಕೆ ಹೊಸ ದಾರಿಯನ್ನು ತೋರಿಸಿವೆ. ಕೇವಲ ಹಣ ಗಳಿಸುವುದಕ್ಕಾಗಿ ನಗರದ ಗೌರವ ಮತ್ತು ಸ್ಥಳೀಯ ಜನರ ನೆಮ್ಮದಿಯನ್ನು ಬಲಿ ಕೊಡುವುದು ಸರಿಯಲ್ಲ ಎಂಬುದನ್ನು ಆಮ್‌ಸ್ಟರ್‌ಡಮ್ ಸಾಬೀತುಪಡಿಸಿದೆ. ಪ್ರವಾಸಿಗರು ನಗರದ ಸಂಸ್ಕೃತಿಯನ್ನು ಗೌರವಿಸಬೇಕೇ ಹೊರತು, ಅದನ್ನು ತಮ್ಮ ವೈಯಕ್ತಿಕ ಮೋಜಿನ ಅಖಾಡವನ್ನಾಗಿ ಮಾಡಿಕೊಳ್ಳಬಾರದು ಎಂಬುದು ಇಲ್ಲಿನ ಮುಖ್ಯ ಸಂದೇಶವಾಗಿದೆ.

ಜಪಾನಿನ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುವ ಕ್ಯೋಟೋ ನಗರವು ತನ್ನ ಪ್ರಾಚೀನ ಬೌದ್ಧ ದೇವಾಲಯಗಳು, ಸುಂದರ ತೋಟಗಳು ಮತ್ತು ಸಾಂಪ್ರದಾಯಿಕ ಸಂಸ್ಕೃತಿಗೆ ಜಗತ್ಪ್ರಸಿದ್ಧ. ಈ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಆಕರ್ಷಣೆಯೇ ಅಲ್ಲಿನ ಸಾಂಪ್ರದಾಯಿಕ ಕಲಾಕಾರರಾದ 'ಗೀಷಾ' ಮತ್ತು ಅವರ ಶಿಷ್ಯರಾದ 'ಮೈಕೋ'. ಜಪಾನಿನ ಸಾಂಪ್ರದಾಯಿಕ ನೃತ್ಯ, ಸಂಗೀತ ಮತ್ತು ಕರಕುಶಲ ಕಲೆಗಳನ್ನು ಜೀವಂತವಾಗಿಟ್ಟಿರುವ ಈ ಕಲಾಕಾರರನ್ನು ನೋಡಲು ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾಸಿಗರು ಕ್ಯೋಟೋದ ಗಿಯೋನ್ ಜಿಲ್ಲೆಗೆ ಧಾವಿಸುತ್ತಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳ ವ್ಯಾಮೋಹದಿಂದಾಗಿ ಇಲ್ಲಿನ ಪರಿಸ್ಥಿತಿ ತೀವ್ರ ಬಿಕ್ಕಟ್ಟಿಗೆ ತಲುಪಿದೆ. ಪ್ರವಾಸಿಗರು ಗೀಷಾ ಕಲಾಕಾರರನ್ನು ದಾರಿಯುದ್ದಕ್ಕೂ ಬೆನ್ನಟ್ಟುವುದು, ಅವರ ಅನುಮತಿಯಿಲ್ಲದೇ ಅತ್ಯಂತ ಹತ್ತಿರ ಹೋಗಿ ಫೊಟೋ ಮತ್ತು ಸೆಲ್ಫೀಗಳನ್ನು ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಇಷ್ಟೇ ಅಲ್ಲ, ಕೆಲವರು ಅವರ ಬೆಲೆಬಾಳುವ ಸಾಂಪ್ರದಾಯಿಕ ರೇಷ್ಮೆ ಉಡುಪುಗಳನ್ನು (ಕಿಮೋನೋ) ಎಳೆಯುವುದು, ಕಸ ಹಾಕುವುದು ಮತ್ತು ಅವರ ಖಾಸಗಿ ಗಲ್ಲಿಗಳಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ಮಾಡುತ್ತಿದ್ದರು. ಸ್ಥಳೀಯ ಮಾಧ್ಯಮಗಳು ಇಂಥ ಬೇಜವಾಬ್ದಾರಿ ಪ್ರವಾಸಿಗರನ್ನು 'ಗೀಷಾ ಪಾಪರಾಜಿ' ಎಂದು ಕರೆದವು.

Untitled design (54)

ಸ್ಥಳೀಯ ನಿವಾಸಿಗಳು ಮತ್ತು ಕಲಾಕಾರರ ಖಾಸಗಿತನ ಹಾಗೂ ಸುರಕ್ಷತೆಗೆ ತೀವ್ರ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ, ಕ್ಯೋಟೋ ನಗರ ಆಡಳಿತ ಮತ್ತು ಗಿಯೋನ್‌ನ ಸ್ಥಳೀಯ ಮಂಡಳಿಯು ಅತ್ಯಂತ ಕಠಿಣವಾದ ನಿರ್ಧಾರವನ್ನು ಕೈಗೊಂಡಿತು. ಗಿಯೋನ್ ಜಿಲ್ಲೆಯ ಕಿರಿದಾದ ಖಾಸಗಿ ರಸ್ತೆಗಳು ಮತ್ತು ಗಲ್ಲಿಗಳಿಗೆ ಪ್ರವಾಸಿಗರು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇವಲ ಸಾರ್ವಜನಿಕ ರಸ್ತೆಗಳಲ್ಲಿ ಮಾತ್ರ ಪ್ರವಾಸಿಗರು ಓಡಾಡಲು ಅವಕಾಶವಿದೆ. ನಿಷೇಧಿತ ಖಾಸಗಿ ರಸ್ತೆಗಳಿಗೆ ಪ್ರವೇಶಿಸುವ ಅಥವಾ ಗೀಷಾ ಕಲಾಕಾರರ ಅನುಮತಿಯಿಲ್ಲದೇ ಫೊಟೋ ತೆಗೆಯುವ ಪ್ರವಾಸಿಗರಿಗೆ ಹತ್ತು ಸಾವಿರ ಯೆನ್ ವರೆಗೆ ಭಾರಿ ದಂಡ ವಿಧಿಸುವ ನಿಯಮವನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ ರಸ್ತೆಗಳಲ್ಲಿ 'ಪ್ರವಾಸಿಗರಿಗೆ ಪ್ರವೇಶವಿಲ್ಲ' ಮತ್ತು 'ಫೊಟೋ ತೆಗೆದರೆ ದಂಡ' ಎಂಬ ಬೋರ್ಡ್‌ಗಳನ್ನು ವಿವಿಧ ಭಾಷೆಗಳಲ್ಲಿ ಹಾಕಲಾಗಿದೆ. ಕ್ಯೋಟೋ ನಗರದ ಈ ನಿರ್ಧಾರವು ಪ್ರವಾಸೋದ್ಯಮದ ಹೆಸರಿನಲ್ಲಿ ಸ್ಥಳೀಯ ಸಾಂಸ್ಕೃತಿಕ ಕಲಾಕಾರರನ್ನು ಕೇವಲ ಒಂದು 'ಪ್ರದರ್ಶನದ ವಸ್ತು'ವನ್ನಾಗಿ ನೋಡುವುದಕ್ಕೆ ಹಾಕಿದ ಬ್ರೇಕ್ ಆಗಿದೆ. ಯಾವುದೇ ದೇಶದ ಸಾಂಪ್ರದಾಯಿಕ ಕಲೆ ಮತ್ತು ಕಲಾಕಾರರ ಖಾಸಗಿತನವನ್ನು ಗೌರವಿಸುವುದು ಒಬ್ಬ ಪ್ರವಾಸಿಯ ಕನಿಷ್ಠ ಕರ್ತವ್ಯ. ಪ್ರವಾಸೋದ್ಯಮದ ಆರ್ಥಿಕ ಲಾಭಕ್ಕಿಂತ ತಮ್ಮ ದೇಶದ ಸಂಸ್ಕೃತಿ ಮತ್ತು ಕಲಾಕಾರರ ಘನತೆ ಮುಖ್ಯ ಎಂಬುದನ್ನು ಜಪಾನ್ ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಮಾತ್ರವಲ್ಲ, ನಮ್ಮ ದೇಶದಲ್ಲೂ ಅತಿಯಾದ ಪ್ರವಾಸೋದ್ಯಮ ಸ್ಥಳೀಯರ ನೆಮ್ಮದಿಯನ್ನು ಕದಡುತ್ತಿದೆ. ಇದಕ್ಕೆ ಅತ್ಯುತ್ತಮ ಮತ್ತು ಕಣ್ಣಿಗೆ ಕಟ್ಟುವ ಉದಾಹರಣೆ ಗೋವಾದ ಫಾಂಟೈನ್‌ಹಾಸ್. ಇದು ಏಷ್ಯಾದ ಏಕೈಕ ಮತ್ತು ಅತ್ಯಂತ ಹಳೆಯ ‘ಲ್ಯಾಟಿನ್ ಕ್ವಾರ್ಟರ್’ ಆಗಿದೆ. ಇಲ್ಲಿನ ಕಿರಿದಾದ ರಸ್ತೆಗಳು, ಪೋರ್ಚುಗೀಸ್ ಆಳ್ವಿಕೆಯ ಕಾಲದ ಹಳದಿ, ನೀಲಿ ಹಾಗೂ ಕೆಂಪು ಬಣ್ಣದ ಸುಂದರ ಮನೆಗಳು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತವೆ. ದುರದೃಷ್ಟವಶಾತ್, ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳ, ವಿಶೇಷವಾಗಿ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಪ್ರಭಾವಿಗಳ ಹಾವಳಿಯಿಂದಾಗಿ ಈ ಸುಂದರ ಶಾಂತಿಯುತ ವಸತಿ ಪ್ರದೇಶ ಇಂದು ಸ್ಥಳೀಯರಿಗೆ ನರಕವಾಗಿ ಮಾರ್ಪಟ್ಟಿದೆ. ಕೇವಲ ಒಂದು ‘ಪರ್‌ಫೆಕ್ಟ್’ ಫೊಟೋಗಾಗಿ ಪ್ರವಾಸಿಗರು ನಾಗರಿಕ ಪ್ರಜ್ಞೆಯನ್ನೇ ಮರೆಯುತ್ತಿದ್ದಾರೆ. ಪ್ರವಾಸಿಗರು ಸ್ಥಳೀಯರ ಮನೆಗಳ ಮುಂಭಾಗದ ಮೆಟ್ಟಿಲುಗಳು ಮತ್ತು ಪಡಸಾಲೆಗಳ ಮೇಲೆ ಗುಂಪು ಗುಂಪಾಗಿ ಕುಳಿತು ಗಂಟೆಗಟ್ಟಲೆ ಫೊಟೋಶೂಟ್ ನಡೆಸುತ್ತಾರೆ. ಇದರಿಂದ ಮನೆಯವರು ಹೊರಗೆ ಬರಲು ಅಥವಾ ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅತ್ಯಂತ ಬೇಜವಾಬ್ದಾರಿಯಿಂದ ಜನರ ಮನೆಗಳ ಕಿಟಕಿ ಮತ್ತು ಬಾಗಿಲುಗಳ ಒಳಗೆ ಕ್ಯಾಮೆರಾ ಇಟ್ಟು, ಅಲ್ಲಿನ ನಿವಾಸಿಗಳ ದೈನಂದಿನ ಬದುಕನ್ನು ಫೊಟೋ ತೆಗೆಯುತ್ತಾರೆ. ಕಿರಿದಾದ ರಸ್ತೆಗಳಲ್ಲೇ ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ, ಸ್ಥಳೀಯರ ಖಾಸಗಿ ವಾಹನಗಳ ಸಂಚಾರಕ್ಕೆ ಮತ್ತು ನಿಲುಗಡೆಗೆ ತೀವ್ರ ಅಡ್ಡಿಪಡಿಸುತ್ತಾರೆ.

ಪ್ರವಾಸಿಗರ ಈ ನಿರಂತರ ಕಿರಿಕಿರಿಯಿಂದ ಬೇಸತ್ತ ಫಾಂಟೈನ್‌ಹಾಸ್‌ನ ನಿವಾಸಿಗಳು ತಮ್ಮ ಮನೆಗಳ ಮುಂದೆ 'No Photography', 'Private Property, Respect our Privacy' (ಛಾಯಾಗ್ರಹಣ ನಿಷೇಧಿಸಲಾಗಿದೆ, ನಮ್ಮ ಖಾಸಗಿತನವನ್ನು ಗೌರವಿಸಿ) ಎಂಬ ಬೋರ್ಡ್‌ಗಳನ್ನು ಹಾಕಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದು ಕೇವಲ ಗೋವಾಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಮಾಚಲ ಪ್ರದೇಶದ ಶಿಮ್ಲಾ, ಮನಾಲಿ ಗಿರಿಧಾಮಗಳು ಪರಿಸರ ಮಾಲಿನ್ಯ ಮತ್ತು ಟ್ರಾಫಿಕ್‌ನಿಂದ ನಲುಗುತ್ತಿದ್ದರೆ, ಕರ್ನಾಟಕದ ಕೊಡಗು (ಕಾಫಿ ತೋಟಗಳ ಧ್ವಂಸ) ಮತ್ತು ಗೋಕರ್ಣದಂಥ ಪವಿತ್ರ ಕಡಲತೀರಗಳು ವಾಣಿಜ್ಯೀಕರಣದ ಅತಿಯಾದ ಒತ್ತಡದಿಂದ ಇಂಥದೇ ಬಿಕ್ಕಟ್ಟನ್ನು ಎದುರಿಸುತ್ತಿವೆ. ನಾವು ಭೇಟಿ ನೀಡುವ ಸುಂದರ ತಾಣಗಳು ಕೇವಲ ನಮ್ಮ ಇನ್‌ಸ್ಟಾಗ್ರಾಮ್ ಫೀಡ್ ಅನ್ನು ಅಲಂಕರಿಸುವ ಬಣ್ಣದ ಸ್ಟುಡಿಯೋಗಳಲ್ಲ, ಬದಲಿಗೆ ಅವು ಜೀವಂತ ಮನುಷ್ಯರು ವಾಸಿಸುವ ನೆಲೆಗಳು ಎಂಬುದನ್ನು ಪ್ರತಿಯೊಬ್ಬ ಪ್ರವಾಸಿಯೂ ಅರಿಯಬೇಕಿದೆ. ಪ್ರವಾಸೋದ್ಯಮ ದೇಶಕ್ಕೆ ಆದಾಯ ತರಬಹುದು, ಆದರೆ ಅದು ನಾಗರಿಕರ ನೆಮ್ಮದಿಯ ಸಮಾಧಿಯ ಮೇಲೆ ನಿರ್ಮಾಣವಾಗಬಾರದು. ಸ್ಥಳೀಯರ ಸಂಸ್ಕೃತಿ ಮತ್ತು ಖಾಸಗಿತನವನ್ನು ಗೌರವಿಸುವುದೇ ಪ್ರಕೃತಿಯನ್ನು ಪ್ರೀತಿಸುವ ನಿಜವಾದ ಲಕ್ಷಣವಾಗಿದೆ.

1-40

ಪ್ರವಾಸೋದ್ಯಮದ ಹೆಸರಿನಲ್ಲಿ ಜಗತ್ತಿನಾದ್ಯಂತ ನಡೆಯುತ್ತಿರುವ ಅತಿರೇಕಗಳು ಮತ್ತು ಅದಕ್ಕೆ ಪ್ರತಿಯಾಗಿ ವ್ಯಕ್ತವಾಗುತ್ತಿರುವ ನಾಗರಿಕ ಆಕ್ರೋಶಗಳು ಇಂದು ಸರಕಾರಗಳನ್ನು ಎಚ್ಚರಿಸುತ್ತಿವೆ. ಪ್ರವಾಸೋದ್ಯಮವನ್ನು ಕೇವಲ 'ಲಾಭ ಗಳಿಸುವ ಉದ್ಯಮ' ಎಂದು ನೋಡದೇ, 'ನಾಗರಿಕ ಜವಾಬ್ದಾರಿ' (Civic Tourism) ಎಂದು ಮರು ವ್ಯಾಖ್ಯಾನಿಸುವ ಸಮಯ ಬಂದಿದೆ. ಈ ಬಿಕ್ಕಟ್ಟನ್ನು ನಿಯಂತ್ರಿಸಲು ಸರಕಾರ ಮತ್ತು ನೀತಿ ನಿರೂಪಕರು ತುರ್ತಾಗಿ ಕೆಲ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಒಂದು ಪ್ರವಾಸಿ ತಾಣಕ್ಕೆ ಅಲ್ಲಿನ ಪರಿಸರ ಮತ್ತು ಮೂಲಸೌಕರ್ಯಗಳು ಭರಿಸಬಹುದಾದ ನಿಶ್ಚಿತ ಸಾಮರ್ಥ್ಯ ಇರುತ್ತದೆ. ಇದನ್ನು ಮೀರಿ ಪ್ರವಾಸಿಗರು ಬಂದಾಗ ಆ ಜಾಗ ಧ್ವಂಸಗೊಳ್ಳುತ್ತದೆ. ಆದ್ದರಿಂದ, ಸೂಕ್ಷ್ಮ ಪರಿಸರ ಇರುವ ಗಿರಿಧಾಮಗಳು, ಐತಿಹಾಸಿಕ ತಾಣಗಳು ಅಥವಾ ವಸತಿ ಪ್ರದೇಶಗಳಿಗೆ ದಿನಕ್ಕೆ ಇಷ್ಟೇ ಪ್ರವಾಸಿಗರು ಬರಬೇಕು ಎಂಬ ಕಟ್ಟುನಿಟ್ಟಿನ ನಿಯಮ ತರಬೇಕು. ಉದಾಹರಣೆಗೆ, ವೆನಿಸ್ ಮತ್ತು ಭೂತಾನ್ ದೇಶಗಳು ಈಗಾಗಲೇ ದಿನದ ಲೆಕ್ಕದಲ್ಲಿ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಲು ಆನ್‌ಲೈನ್ ಬುಕಿಂಗ್ ಮತ್ತು ಪ್ರವೇಶ ಶುಲ್ಕವನ್ನು ಕಡ್ಡಾಯಗೊಳಿಸಿವೆ. ಇದೇ ಮಾದರಿಯನ್ನು ಭಾರತದ ಸೂಕ್ಷ್ಮ ತಾಣಗಳಿಗೂ ಅನ್ವಯಿಸಬೇಕು. ಪ್ರವಾಸಿಗರೆಲ್ಲರೂ ಕೇವಲ ಒಂದೇ ಒಂದು ಪ್ರಸಿದ್ಧ ಜಾಗಕ್ಕೆ ಮುಗಿಬೀಳುವುದರಿಂದ ಅಲ್ಲಿನ ಸಂಪನ್ಮೂಲಗಳ ಮೇಲೆ ಭಾರಿ ಒತ್ತಡ ಬೀಳುತ್ತದೆ.

ಇದನ್ನು ತಪ್ಪಿಸಲು ಸರಕಾರಗಳು ಪ್ರವಾಸೋದ್ಯಮವನ್ನು ವಿಕೇಂದ್ರೀಕರಣಗೊಳಿಸಬೇಕು. ಪ್ರಸಿದ್ಧ ತಾಣಗಳ ಸುತ್ತಮುತ್ತಲಿನ ಇತರ ಅಪರಿಚಿತ, ಸುಂದರ ಹಳ್ಳಿಗಳು ಅಥವಾ ಐತಿಹಾಸಿಕ ಜಾಗಗಳನ್ನು ಗುರುತಿಸಿ, ಅಲ್ಲಿ ಹೋಮ್‌ಸ್ಟೇ ಮತ್ತು ರಸ್ತೆ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ಪ್ರವಾಸಿಗರು ಹಂಚಿಹೋಗುತ್ತಾರೆ ಮತ್ತು ಸ್ಥಳೀಯ ಆರ್ಥಿಕ ಲಾಭ ಎಲ್ಲರಿಗೂ ಸಮನಾಗಿ ಸಿಗುತ್ತದೆ. ಕೇವಲ ಮನವಿಗಳಿಂದ ಪ್ರವಾಸಿಗರ ವರ್ತನೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಸ್ಥಳೀಯ ನಿವಾಸಿಗಳ ಖಾಸಗಿತನಕ್ಕೆ ಧಕ್ಕೆ ತರುವ, ಅನುಮತಿಯಿಲ್ಲದೇ ಫೊಟೋ ತೆಗೆಯುವ, ಎಲ್ಲೆಂದರಲ್ಲಿ ಕಸ ಹಾಕುವ ಅಥವಾ ಪ್ಲಾಸ್ಟಿಕ್ ಬಳಸುವ ಬೇಜವಾಬ್ದಾರಿ ಪ್ರವಾಸಿಗರಿಗೆ ಭಾರಿ ಪ್ರಮಾಣದ ದಂಡ ವಿಧಿಸಬೇಕು. ಜಪಾನಿನ ಕ್ಯೋಟೋ ನಗರವು ಗೀಷಾ ಕಲಾಕಾರರ ಫೊಟೋ ತೆಗೆಯುವವರಿಗೆ ಮತ್ತು ಖಾಸಗಿ ರಸ್ತೆ ಪ್ರವೇಶಿಸುವವರಿಗೆ ಭಾರಿ ದಂಡ ವಿಧಿಸುವ ಮೂಲಕ ಶಿಸ್ತು ತಂದಿದೆ. ಭಾರತದಲ್ಲೂ ಇಂಥದ್ದೇ ಕಠಿಣ ಕಾಯ್ದೆಗಳ ಜಾರಿ ಅತ್ಯಗತ್ಯವಾಗಿದೆ. ಪ್ರವಾಸೋದ್ಯಮದ ಯಶಸ್ಸನ್ನು ಕೇವಲ ಅಲ್ಲಿಗೆ ಬರುವ 'ಪ್ರವಾಸಿಗರ ಸಂಖ್ಯೆ'ಯಿಂದ ಅಳೆಯಬಾರದು. ಬದಲಿಗೆ ಅದರಿಂದ ಸ್ಥಳೀಯರ 'ಬದುಕಿನ ಗುಣಮಟ್ಟ' ಎಷ್ಟು ಸುಧಾರಿಸಿದೆ ಎಂಬುದರ ಆಧಾರದ ಮೇಲೆ ಅಳೆಯಬೇಕು. ಸರಕಾರಗಳು ಕಠಿಣ ನೀತಿಗಳನ್ನು ರೂಪಿಸಿ, ಪ್ರಕೃತಿ ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸಿದಾಗ ಮಾತ್ರ ಪ್ರವಾಸೋದ್ಯಮವು ಸುಸ್ಥಿರವಾಗಿ ಉಳಿಯಲು ಸಾಧ್ಯ.