Saturday, July 11, 2026
Saturday, July 11, 2026

ವೆಲ್‌ಕಮ್‌ ಟು ಸಿಂಗಾಪುರ

ಕರುಮಾರಿಯಮ್ಮನ್ ದೇವಾಲಯದಿಂದ‌ ಹೊರಬಂದು ಹತ್ತಿರದ ಚೈನಾ ಟೌನ್‌ನತ್ತ ‌ಹೊರಟೆವು. ಶಿಸ್ತುಬದ್ಧ ಟ್ರಾಫಿಕ್. ಒಂದಿಷ್ಟೂ ಹಾರನ್‌ಗಳ ಸದ್ದಿಲ್ಲ. ಕೆಲವು ಕಡೆಯ ಫುಟ್‌ಪಾತ್‌ಗಳಂತೂ‌ ಪಾರ್ಕ್‌ಗನ ವಾಕಿಂಗ್‌ ಪಾತ್‌ಗಳಂತಿವೆ. ಇಕ್ಕೆಲಗಳಲ್ಲಿ ಗಿಡ-ಮರಗಳನ್ನು ಬೆಳೆಸಿದ್ದಾರೆ. ಪಕ್ಕದ ರಸ್ತೆಯಲ್ಲಿ‌ ವಾಹನಗಳು ಹೋಗುತ್ತಿದ್ದರೂ ಗೊತ್ತಾಗದು.

  • ಡಾ. ಶೈಲಜಾಸುರೇಶ್

ʻಸಿಂಗಾಪುರದಿಂದ ಬಂದೆ.. ಬಂಗಾರ ಹೊತ್ತು ತಂದೆ..ʼ ಅಂತಾ ದ್ವಾರಕೀಶ್ ಮತ್ತು ಜ್ಯೋತಿಲಕ್ಷ್ಮಿ ಗೊಂಬೆಗಳಂತೆ ಕುಣಿಯುವುದನ್ನು ನೋಡಿದಾಗಿಂದ, ಸಿಂಗಾಪುರದಲ್ಲಿ ರಾಜಾ ಕುಳ್ಳ ಸಿನಿಮಾ ನೋಡಿದಾಗಿಂದ, ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎಂದು ನಮ್ಮ ದಿ.ಎಸ್‌ಎಮ್‌ ಕೃಷ್ಣ ಹೇಳಿದಾಗಿಂದ ಒಂಥರದ ವಿಚಿತ್ರ ಕುತೂಹಲ - ನಮ್ಮ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ಈ ಪುಟ್ಟ ದೇಶದ ಬಗ್ಗೆ ಗರಿಗೆದರಿತ್ತು.

ಇದನ್ನೂ ಓದಿ:ಸಿಂಗಾಪುರ ‘ಗಾರ್ಡನ್ ಸಿಟಿ’ಯಿಂದ 'ಸಿಟಿ ಇನ್ ಗಾರ್ಡನ್' ಆದದ್ದು!

ʻಅಮ್ಮ ಒಂದು ವಾರ ಸಿಂಗಾಪುರ ಪ್ರವಾಸ ಹೋಗಿ ಬರೋಣಾ ಬನ್ನಿ ಅಂತ ಮಗಳು ಕರೆದಳು. ಮೊದಲು ಕೊಂಚ ಹಿಂಜರಿದೆವು. ಆದರೆ ಮಗಳು ʻಟೈಮ್ ಬಂದಾಗ ಹೋಗಿ‌ಬರಬೇಕು. ಒಂದು ವಾರ ತಾನೇ, ನಾನೇ ಆಫೀಸ್‌ಗೆ ರಜೆ ಹಾಕಿದ್ದೇನೆ, ಮಕ್ಕಳಿಗೂ ಸ್ಕೂಲ್‌ಗೆ ರಜೆ ಹಾಕಿಸಿದ್ದೇನೆ, ನೀವೂ ಈಗ ಫ್ರೀಯಾಗಿ ಇದ್ದೀರಿ, ಪ್ರವಾಸ ಹೋಗೋಣ ಎಂದು ಒತ್ತಾಯಿಸಿದಳು. ಮೊಮ್ಮಕ್ಕಳೂ ʻಬನ್ನಿ ಅಮ್ಮಮ್ಮʼ ಅಂದಾಗ ವಿದೇಶ ಪ್ರವಾಸದ ಆಸೆಯ ರೆಕ್ಕೆ ಬಲಿಯಿತು. ಓಕೆ ಹೇಳಿದೆವು.

ಈ ದೇಶ ಚಿಕ್ಕದಾದರೂ ಕಟ್ಟುನಿಟ್ಟಾದ ಕಾನೂನು ಮತ್ತು ಭ್ರಷ್ಟಾಚಾರ ಮುಕ್ತ ದೇಶವಾಗಿ ಪ್ರಸಿದ್ಧಿ ಪಡೆದಿದೆ. 1965ರಲ್ಲಿ ಸ್ವಾತಂತ್ರ್ಯ ಪಡೆದ ಸಿಂಗಾಪುರ ಪ್ರವಾಸೋದ್ಯಮ, ವ್ಯಾಪಾರ ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿದೆ. ಹಚ್ಚ ಹಸಿರು ವಲಯವಾಗಿ ಗ್ರೀನ್‌ಲ್ಯಾಂಡ್ ಎಂದು ಹೆಸರು ಪಡೆದಿದೆ. ಸ್ವಚ್ಛವಾದ ಬೀದಿಗಳು, ಅತ್ಯಾಧುನಿಕ ಗಗನ ಚುಂಬಿ‌ ಕಟ್ಟಡಗಳು, ಆಕರ್ಷಕ ಉದ್ಯಾನಗಳು, ವೈವಿಧ್ಯಮಯ ಸಂಸ್ಕೃತಿ, ಪ್ರವಾಸಿಗರ ಸುರಕ್ಷತೆ ಮುಂತಾದ ಕಾರಣಗಳಿಂದಾಗಿ ಸಿಂಗಾಪುರವನ್ನು ಪ್ರವಾಸಿಗರ ಸ್ವರ್ಗ ಎಂದು ಬಣ್ಣಿಸಲಾಗುತ್ತದೆ.

Untitled design (56)

ಸಿಂಗಾಪುರದ ಚಾಂಗಿ ಏರ್‌ಪೋರ್ಟ್‌ ವಿಶ್ವದಲ್ಲೇ ಅತ್ಯಂತ ದೊಡ್ಡದು. ಟರ್ಮಿನಲ್‌ಗಳಿಂದ ಟರ್ಮಿನಲ್‌ಗೆ ಓಡಾಡಲು ಉಚಿತ ಮೆಟ್ರೋ‌ ಸಂಪರ್ಕವಿದೆ. ಅತ್ಯಂತ ಸುಂದರವಾಗಿರುವ ಈ ಚಾಂಗಿ ಏರ್ಪೋರ್ಟ್ನ ಅತಿದೊಡ್ಡ ಪ್ರೊಜೆಕ್ಟರ್‌ನಲ್ಲಿ ಎತ್ತರದಿಂದ ಭೋರ್ಗರೆಯುತ್ತ ದುಮ್ಮಿಕ್ಕುವ ಜಲಪಾತದ ದೃಶ್ಯ ನಮ್ಮನ್ನು ಆಕರ್ಷಿಸಿತು. ಕಣ್ಮನ ತುಂಬಿಕೊಂಡು ಅಲ್ಲಿಂದ ಇನ್ನೊಂದು ಟರ್ಮಿನಲ್‌ನತ್ತ ಇನ್ನೊಂದು ಜಲಪಾತ ನೋಡಲು ಹೊರಟೆವು. ‌ಎರಡು ಬೋಗಿಗಳ ಮೆಟ್ರೋ ನಮ್ಮನ್ನು ಇನ್ನೊಂದು ಟರ್ಮಿನಲ್‌ಗೆ ಕರೆದೊಯ್ದಿತು. ಇಲ್ಲಿ ನೈಜ ಮತ್ತು ವೃತ್ತಾಕಾರದ ಜಲಪಾತ ಇತ್ತು.

ಸಿಂಗಾಪುರ ಎನ್ನುವ ಪುಟ್ಟ ದೇಶ - ತನ್ನನ್ನು ಎಷ್ಟು ಅದ್ಭುತವಾಗಿ ರೂಪಿಸಿಕೊಂಡಿದೆ ಎಂಬುದೇ ದೊಡ್ಡ ಅಚ್ಚರಿ. ಸ್ವಚ್ಛ ರಸ್ತೆಗಳು. ಒಂದೆ ಒಂದು ಕಸದ ಚೂರಿಲ್ಲ. ಒಂದೇ ಒಂದು ‌ಬೀದಿ‌ನಾಯಿ- ಬೀಡಾಡಿ ದನವೂ ಕಾಣದು. ರಸ್ತೆಗಳಲ್ಲಿ ಟ್ರಾಫಿಕ್ ಪೋಲಿಸ್ ಇಲ್ಲ, ಫ್ಲೆಕ್ಸ್‌ಗಳಂತೂ‌ ಇಲ್ಲವೇ ಇಲ್ಲ. ಆದರೂ ಎಲ್ಲ ಕಾರ್ಯಗಳು ನಿಯಮ‌ಬದ್ಧವಾಗಿ‌‌ ನಡೆಯುತ್ತವೆ.‌

ಸಿಂಗಾಪುರ ಬಹಳ‌ ದುಬಾರಿ ದೇಶ. ಇಲ್ಲಿ ಊಟದ್ದೇ ಒಂದು ಸಮಸ್ಯೆ. ಚೈನೀಸ್ ರೆಸ್ಟೋರೆಂಟ್‌ಗಳತ್ತ ಹೋದರೆ ಕಟುವಾದ ವಿನಿಗರ್ - ಸೋಯಾ - ಸೀ ಫುಡ್ ಮಿಶ್ರಿತ ವಾಸನೆ ಬರುತ್ತದೆ. ಅವರಿಗೆ ಅದು ಹಿತವಾಗಿರುತ್ತದೆ. ನಮ್ಮ ಹೊಟೇಲ್‌ನಲ್ಲಿ ಬೆಳಗಿನ ಬ್ರೇಕ್‌ಫಾಸ್ಟ್ ಫ್ರೀ ಇತ್ತು. ಅಲ್ಲೂ ಬೀಫ್ - ಫೋರ್ಕ್ ಅನ್ನುವ ಲೇಬಲ್‌ಗಳ ಕೌಂಟರ್ ಇದ್ದವು. ಆದರೆ ಕಟುವಾದ ವಾಸನೆ ಇರಲಿಲ್ಲ. ನಾವು ಹುಡುಕಿ ವೀಟ್ ಬ್ರೆಡ್- ಬಟರ್- ಪ್ಯಾನ್ ಕೇಕ್- ಹಣ್ಣಿನ ರಸದಲ್ಲಿ ಹೊಟ್ಟೆ ತುಂಬಿಸಿಕೊಂಡೆವು. ರೋಟಿ- ಚನ್ನಾ- ಕೊಕೊನಟ್ ರೈಸ್ ಕೂಡಾ ಇತ್ತು. ಹೊಟೇಲ್‌ ಬಳಿ ಒಂದು ಸಣ್ಣ ಮಲೇಷಿಯನ್ ಹೊಟೇಲ್‌ ಇತ್ತು. ಅಲ್ಲಿ ತಮಿಳಿಗರ ಮಾಲೀಕತ್ವ. ದೋಸೆ-ಚಟ್ನಿ, ಮೊಸರು- ಚಪಾತಿ- ಪಲ್ಯ, ಅನ್ನ- ಸಾಂಬರ್‌ ಎಲ್ಲವೂ ಇದ್ದವು. ಹಾಗಾಗಿ ನಮಗೆ ಊಟದ ವ್ಯವಸ್ಥೆಯೂ ಆಗುತ್ತಿತ್ತು.

Untitled design (54)

ಮಗನ ಹುಟ್ಟುಹಬ್ಬಕ್ಕೆ ದೇವಾಲಯಕ್ಕೆ ಹೋಗಿ ಅರ್ಚನೆ ಮಾಡಿಸಬೇಕು ಎಂಬ ಆಸೆ ನನಗಿತ್ತು. ಹಾಗಾಗಿ ಎಲ್ಲರೂ ಮಾರಿಯಮ್ಮನ್ ಟೆಂಪಲ್‌ಗೆ ‌ಹೊರಟೆವು. ಕ್ಯಾಬ್ ಬುಕ್ ಮಾಡಿಕೊಂಡು ಹೊರಟೆವು. ಡ್ರೈವರ್‌ ಹಸನ್ಮುಖಿ. ಹೆಚ್ಚೂಕಮ್ಮಿ 60 ವರ್ಷ ದಾಟಿದವ. ಇಂಡೋನೇಷ್ಯಾ ಮೂಲದವನು. ಸಿಂಗಾಪುರ ಮೊದಲು ಇಂಡೋನೇಷ್ಯಾ ರಾಜನ ಆಡಳಿತದಲ್ಲಿತ್ತು. ನಂತರ ಬ್ರಿಟಿಷರ ಆಡಳಿತಕ್ಕೆ ಬಂದಿತು. ಬ್ರಿಟಿಷರು ‌ಕೆಲಸಕ್ಕಾಗಿ ಇಂಡೋನೇಷ್ಯಾ- ಶ್ರೀಲಂಕಾ- ತಮಿಳುನಾಡು ಮೂಲಗಳ ಜನರನ್ನು ಕರೆ ತಂದರು, ಎಂದು ಆತ ವಿವರಿಸಿದ. ಆತನಿಗೆ ಇಬ್ಬರು ಹೆಂಡತಿಯರು- ಹತ್ತು ಮಕ್ಕಳು ಮತ್ತು ಹದಿನೇಳು ಮೊಮ್ಮಕ್ಕಳಿದ್ದಾರಂತೆ. ಎಲ್ಲರೂ ಒಟ್ಟಾಗಿಲ್ಲ. ಅವರ ಪಾಡಿಗೆ ಅವರಿದ್ದಾರೆ. ಹೆಂಡತಿಗೆ ಅವಳದೇ ದುಡಿಮೆ. ತನಗೆ ತನ್ನದೇ ದುಡಿಮೆ. ಪ್ರತಿಯೊಬ್ಬರೂ ತಮ್ಮ ತಮ್ಮ ದುಡಿಮೆಯಲ್ಲೇ ಬದುಕ‌ಬೇಕು. 60 ವಯಸ್ಸು ದಾಟಿದವರಿಗೆ ವೈದ್ಯಕೀಯ ವೆಚ್ಚ 50% ಕಡಿಮೆ ಇರುತ್ತದೆ, ಎಂದು ಆತ ವಿವರಿಸಿದ. ʻಐ ಲವ್ ಇಂಡಿಯಾʼ ಎಂದ. ಫ್ಯಾಮಿಲಿ ಸಮೇತ ನೀವು ನಮ್ಮ ದೇಶ ನೋಡಲು ಬಂದಿರುವುದು ಬಹಳ ಖುಷಿ ನೀಡಿದೆ ಎಂದು ಹೇಳಿದಾಗ ಆತನ ದನಿಯಲ್ಲಿ ಸಣ್ಣ ವಿಷಾದವಿತ್ತು.

ಕರುಮಾರಿಯಮ್ಮನ್‌

ಕರುಮಾರಿಯಮ್ಮನ್ ದೇವಲಾಯ ವಿಶಾಲವಾಗಿದೆ. ಮಾರಿಯಮ್ಮನ್‌ ಪ್ರಧಾನ ದೆವತೆ. ಗಣೇಶನ ಪುಟ್ಟ ಗುಡಿಯೂ ಇತ್ತು. ವಿಶಾಲ ಪ್ರಾಂಗಣದಲ್ಲಿ ಪುಟ್ಟ ಪುಟ್ಟ ದೇವಿಯರ ಗುಡಿಗಳಿದ್ದವು. ಹಿಂಭಾಗದಲ್ಲಿ ಶೌಚಾಲಯ ಮತ್ತು ಊಟದ ಕೊಠಡಿಗಳಿದ್ದವು. ಅರ್ಚನೆಗೆ 70 ಸೆಂಟ್ಸ್ ನೀಡಿ ಟಿಕೆಟ್ ಕೊಂಡೆವು. ಅರ್ಚಕರು ಬೆಂಗಳೂರಿನಲ್ಲಿ ಎರಡು ತಿಂಗಳು ಕೆಲಸ ಮಾಡಿರುವುದಾಗಿ ತಿಳಿಸಿದರು. ಸಂಸ್ಕೃತದಲ್ಲಿ ಅರ್ಚನೆ ಮಾಡಿ ಹೂ ಮತ್ತು ಪ್ರಸಾದ ಕೊಟ್ಟರು. ನಮಗೆ ಆ ಕ್ಷಣದಲ್ಲಿ ಇಂಡಿಯಾದಲ್ಲೇ ಇದ್ದೇವೆ ಅನಿಸಿತ್ತು. ಪ್ರದಕ್ಷಿಣೆ ಹಾಕುವಾಗ ಹಿಂಭಾಗದಲ್ಲಿ ಭೋಜನ ಕೊಠಡಿಯಲ್ಲಿ ಉಪ್ಪಿಟ್ಟು- ಕೇಸರಿಬಾತ್ ಇಡ್ಲಿ- ಸಾಂಬಾರ್ ಕೊಟ್ಟರು. ಮಲೇಷಿಯಾದ ಭಕ್ತರೊಬ್ಬರ ಪ್ರಸಾದ ಸೇವೆ ಅದಾಗಿತ್ತು. ಕಾಫಿ- ಟೀ- ಹಣ್ಣಿನ ರಸ ಕೂಡಾ ಇತ್ತು. ನಾವು ಅದನ್ನು ಪಡೆದು ʻಗಾಡ್ ಬ್ಲೆಸ್ ಯುʼ ಅಂದಾಗ ಅವರಿಗೆ ಹಿಗ್ಗೋ ಹಿಗ್ಗು.

Untitled design (55)

ಚೈನಾ ಟೌನ್‌

ಕರುಮಾರಿಯಮ್ಮನ್ ದೇವಾಲಯದಿಂದ‌ ಹೊರಬಂದು ಹತ್ತಿರದ ಚೈನಾ ಟೌನ್‌ನತ್ತ ‌ಹೊರಟೆವು. ಶಿಸ್ತುಬದ್ಧ ಟ್ರಾಫಿಕ್. ಒಂದಿಷ್ಟೂ ಹಾರನ್‌ಗಳ ಸದ್ದಿಲ್ಲ. ವಾಹನ ಚಾಲಕರು ನಿಗದಿತ ವೇಗದಲ್ಲಿ ಸಂಯಮದಿಂದ‌ ಚಲಿಸುತ್ತಾರೆ. ನಾಗರಿಕರು ಸಿಗ್ನಲ್‌ಗಳನ್ನು ಅನುಸರಿಸಿ ರಸ್ತೆ ದಾಟುತ್ತಾರೆ. ಸೈಕಲ್ ಸವಾರರು ಸಾವಧಾನವಾಗಿ ಚಲಿಸುತ್ತಾರೆ. ಕೆಲವು ಕಡೆಯ ಫುಟ್‌ಪಾತ್‌ಗಳಂತೂ‌ ಪಾರ್ಕ್‌ಗನ ವಾಕಿಂಗ್‌ ಪಾತ್‌ಗಳಂತಿವೆ. ಇಕ್ಕೆಲಗಳಲ್ಲಿ ಗಿಡ-ಮರಗಳ ಹಸಿರು. ಪಕ್ಕದ ರಸ್ತೆಯಲ್ಲಿ‌ ವಾಹನಗಳು ಹೋಗುತ್ತಿದ್ದರೂ ಗೊತ್ತಾಗದು.‌ ಚೀನಿ ಸಂಗೀತ ಕೇಳುತ್ತಾ ಅಲ್ಲಿನ ಫುಟ್‌ಪಾತ್‌ಗಳ ಮೇಲೆ ಓಡಾಡುವಾಗ ಚೀನಾದಲ್ಲೇ ಇರುವಂತೆ ಭಾಸವಾಗುತ್ತದೆ. ಸಣ್ಣಪುಟ್ಟ ಖರೀದಿ ಮಾಡಿದೆವು. ಇಲ್ಲಿ ಬೆಂಗಳೂರಿನ‌ ಚಿಕ್ಕಪೇಟೆಯ ಬಳೆಪೇಟೆ, ರಾಜಾ ಮಾರ್ಕೆಟ್‌ನಲ್ಲಿನಂತೆ ಪುಟ್ಟ ಅಂಗಡಿಗಳಿದ್ದವು. ಚೀನಿ ಹೆಂಗಸರದೇ ಮಾಲೀಕತ್ವ.

ಚೈನಾ ಟೌನ್‌ ಅಡ್ಡಾಡಿ, ಲಿಟಲ್ ಇಂಡಿಯಾಕ್ಕೆ ಮ್ಯಾಪ್ ನೋಡುತ್ತಾ ನಡೆದೆವು. ನಡೆಯಲು ಬಹಳ ದೂರ. ಹಾಗಾಗಿ ಶುರುವಿನಲ್ಲಿ ಸಿಕ್ಕಿದ ಹೊಟೇಲ್‌ ಡಿಲಕ್ಸ್ ಒಳಗೆ ಹೆಜ್ಜೆ ಹಾಕಿದೆವು. ಆಂಧ್ರ ಶೈಲಿಯ ಊಟ ಚೆನ್ನಾಗಿತ್ತು. ಅನ್ನ ಸಾರು ರಸಂ ಮೊಸರು ಪಲ್ಯ ಎಲ್ಲವೂ ಹಸಿದ‌ ಹೊಟ್ಟೆಗೆ ಬಹಳ ರುಚಿಯೆನಿಸಿತು. ಹೊಟ್ಟೆ ತುಂಬಿದ‌ ನಂತರ ಲಿಟಲ್ ಇಂಡಿಯಾ ನೋಡುವ ಯೋಜನೆ ಮುಂದೂಡಿ ಕ್ಯಾಬ್ ಹತ್ತಿ ರೂಮ್‌ಗೆ ‌ಬಂದು ಮಲಗಿ‌ಬಿಟ್ಟೆವು. ಈ ಪ್ರವಾಸದಲ್ಲಿ ನಾವು ನೋಡಿದ್ದು ಇಷ್ಟು. ಈ ದೇಶದಲ್ಲಿ ನೋಡಬೇಕಾದ ಸಾಕಷ್ಟು ಸಂಗತಿಗಳಿವೆ. ಮುಂದಿನ ಸಿಂಗಾಪುರ ಪ್ರವಾಸ ಅವುಗಳಿಗೆ ಮೀಸಲು. ಅವಕಾಶ ಸಿಕ್ಕಾಗ ನೀವು ಹೋಗಿಬನ್ನಿ.

ಮಾಹಿತಿ ಪೆಟ್ಟಿಗೆ:

ಸಿಂಗಾಪುರದಲ್ಲಿ ಮ್ಯಾಂಡರಿನ್, ಮಲಯ್, ತಮಿಳು ಮತ್ತು ಇಂಗ್ಲಿಷ್‌ ಭಾಷೆಗಳನ್ನು ಮಾತನಾಡುತ್ತಾರೆ. ಇಲ್ಲಿನ ಅಧಿಕೃತ ಭಾಷೆ ಮಲಯ್. ಇಲ್ಲಿ ವರ್ಷವಿಡಿ ಬಿಸಿಯಾದ ಮತ್ತು ಆರ್ದ್ರ ವಾತಾವರಣ ಇರುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...