Saturday, July 11, 2026
Saturday, July 11, 2026

ಲಾವಾ ಹರಿದು ಇಡೀ ನಗರ ಕಲ್ಲಾಯಿತು

ಕ್ರಿಶ 79ರಲ್ಲಿ ಮೌಂಟ್ ವೆಸುವಿಯಸ್ ಸ್ಫೋಟಗೊಂಡ ನಂತರ, ಪೊಂಪೈ ಜೀವನವು ಸಂಪೂರ್ಣ ಸ್ಥಗಿತಗೊಂಡಿತು. ಒಂದು ಕಾಲದಲ್ಲಿ ಅತ್ಯಂತ ಕಾರ್ಯನಿರತವಾಗಿದ್ದ ಈ ನಗರದ ಉತ್ಖನನಗಳು ಪ್ರಾಚೀನ ರೋಮನ್ ಜೀವನದ ಅತ್ಯುತ್ತಮ ನೋಟವನ್ನು ಇಂದು ನೀಡುತ್ತಿವೆ. ಪೊಂಪೈನ ಪ್ರಮುಖ ಆಕರ್ಷಣೆಗಳಲ್ಲಿ ಮೇಲ್ಚಾವಣಿ ಇಲ್ಲದೆ ಕುಸಿದುಬಿದ್ದಿರುವ ಆದರೆ ಉಳಿದಂತೆ ಸುಸ್ಥಿತಿಯಲ್ಲಿರುವ ರೋಮನ್ ಕಟ್ಟಡಗಳು, ಬಲಿಪಶುಗಳಾಗಿ ಸತ್ತ ಜನರ ಪ್ಲ್ಯಾಸ್ಟರ್ ಮಾದರಿಗಳು, ಕೆಲವು ಉತ್ಕೃಷ್ಟ ವರ್ಣಚಿತ್ರಗಳಿವೆ.

  • ಜಯ ನಾಗೇಂದ್ರ

ನಮ್ಮ ಪೊಂಪೈ ಪ್ರವಾಸವು ಒಂದು ಮರೆಯಲಾಗದ ಮತ್ತು ಮನಕರಗಿಸುವ ಅನುಭವವಾಗಿತ್ತು. ಪ್ರಾಚೀನ ರೋಮ್ ದೇಶವು ಇಡೀ ಮೆಡಿಟರೇನಿಯನ್ ಸಮುದ್ರವನ್ನು ಆಳುತ್ತಿದ್ದಾಗ, ಪೊಂಪೈ ಒಂದು ಪ್ರಮುಖ ಬಂದರು ಪಟ್ಟಣವಾಗಿತ್ತು. ಕ್ರಿಶ 79ರಲ್ಲಿ ಮೌಂಟ್ ವೆಸುವಿಯಸ್ ಪರ್ವತದ ಜ್ವಾಲಾಮುಖಿ ಸ್ಫೋಟಗೊಂಡಿತು. ಆಗ ಪೊಂಪೈ ನಗರವು 23 ಅಡಿಯಷ್ಟು ಜ್ವಾಲಾಮುಖಿ ಬೂದಿ ಮತ್ತು ಕಲ್ಲಿನ ತುಂಡುಗಳ ಪದರದ ಅಡಿಯಲ್ಲಿ ಹೂತುಹೋಗಿತ್ತು. ಇದನ್ನು 1700 ವರ್ಷಗಳ ನಂತರ ಉತ್ಖನನ ಮಾಡಿ ಹೊರತೆಗೆಯಲಾಯಿತು. ಈ ನಗರದ ಉತ್ಖನನ ಪ್ರಾಚೀನ ರೋಮನ್ನರ ಜೀವನಶೈಲಿಯನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ:ಪೊಂಪೈ ಪಟ್ಟಣ ಕಲ್ಲಾದ ಕಥೆ

ಮೌಂಟ್ ವೆಸುವಿಯಸ್

ಮೌಂಟ್ ವೆಸುವಿಯಸ್ ಜ್ವಾಲಾಮುಖಿಯು ಕ್ರಿಶ 79ರಲ್ಲಿ ಸ್ಫೋಟಿಸಿ ಆಕಾಶದಲ್ಲಿ 12 ಮೈಲಿ ಎತ್ತರದವರೆಗೆ ಬೆಂಕಿಯ ಲಾವಾರಸ ಮತ್ತು ಬೂದಿಯ ಕಿಡಿಗಳನ್ನು ಚಿಮ್ಮಿಸಿತು ಎನ್ನಲಾಗಿದೆ. ಇದು 18 ಗಂಟೆಗಳ ಕಾಲ ಸತತವಾಗಿ ಸ್ಫೋಟಗೊಳ್ಳುತ್ತಾ, ಪರ್ವತದ ಸುತ್ತಲೂ ಗಂಟೆಗೆ ಸುಮಾರು 100 ಮೈಲಿ ವೇಗದಲ್ಲಿ ಬಿಸಿಯಾದ ಬಿರುಗಾಳಿಯನ್ನು ಸೃಷ್ಟಿಸಿತು. ನಗರವನ್ನು 25 ಅಡಿಗಳ ಕುದಿಯುವ ಲಾವಾದ ಅಡಿಯಲ್ಲಿ ಹೂತುಹಾಕಿತು.

Untitled design (46)

ಪೊಂಪೈ ನಗರದ ಹಿನ್ನೆಲೆ

ಕ್ರಿಶ 79ರಲ್ಲಿ ಮೌಂಟ್ ವೆಸುವಿಯಸ್ ಸ್ಫೋಟಗೊಂಡ ನಂತರ, ಪೊಂಪೈ ಜೀವನವು ಸಂಪೂರ್ಣ ಸ್ಥಗಿತಗೊಂಡಿತು. ಒಂದು ಕಾಲದಲ್ಲಿ ಅತ್ಯಂತ ಕಾರ್ಯನಿರತವಾಗಿದ್ದ ಈ ನಗರದ ಉತ್ಖನನಗಳು ಪ್ರಾಚೀನ ರೋಮನ್ ಜೀವನದ ಅತ್ಯುತ್ತಮ ನೋಟವನ್ನು ಇಂದು ನೀಡುತ್ತಿವೆ. ಪೊಂಪೈನ ಪ್ರಮುಖ ಆಕರ್ಷಣೆಗಳಲ್ಲಿ ಮೇಲ್ಚಾವಣಿ ಇಲ್ಲದೆ ಕುಸಿದುಬಿದ್ದಿರುವ ಆದರೆ ಉಳಿದಂತೆ ಸುಸ್ಥಿತಿಯಲ್ಲಿರುವ ರೋಮನ್ ಕಟ್ಟಡಗಳು, ಬಲಿಪಶುಗಳಾಗಿ ಸತ್ತ ಜನರ ಪ್ಲ್ಯಾಸ್ಟರ್ ಮಾದರಿಗಳು, ಕೆಲವು ಉತ್ಕೃಷ್ಟ ವರ್ಣಚಿತ್ರಗಳಿವೆ.

ಪೊಂಪೈನ ರಸ್ತೆಗಳು ಮತ್ತು ಮುಖ್ಯ ಚೌಕ

ಇಲ್ಲಿನ ಮುಖ್ಯ ಚೌಕವು ಪೊಂಪೈನ ವಾಣಿಜ್ಯ, ಧಾರ್ಮಿಕ ಮತ್ತು ರಾಜಕೀಯ ಕೇಂದ್ರವಾಗಿತ್ತು. ಅಸೆಂಬ್ಲಿ ಹಾಲ್ (ಕ್ಯೂರಿಯಾ) ಹೊಂದಿತ್ತು. ಇದು ಇಟ್ಟಿಗೆ ಮತ್ತು ರೋಮನ್ನರ ಆವಿಷ್ಕಾರವಾದ ಗಾರೆಯಿಂದ ನಿರ್ಮಿಸಿದ, ಹೊಳೆಯುವ ಅಮೃತಶಿಲೆಯಿಂದ (ಮಾರ್ಬಲ್) ಅಲಂಕರಿಸಿದ ಕಟ್ಟಡವಾಗಿತ್ತು.

Untitled design (43)

ಪೊಂಪೈನ ಸ್ನಾನಗೃಹಗಳು ಮತ್ತು ನಗರ ಜೀವನ

ಪೊಂಪೈನ ಭವ್ಯವಾದ ಸಾರ್ವಜನಿಕ ಸ್ನಾನಗೃಹಗಳು ಜಿಮ್ನಾಸಿಯಂನಂತೆ ಇದ್ದವು. ಜಿಮ್ನಾಸಿಯಂನ ಕ್ರೀಡೆಗಳಲ್ಲಿ ಪಾಲ್ಗೊಂಡು ಬರುತ್ತಿದ್ದ ಜನರಿಗೆ ಅಲ್ಲಿನ ಗುಲಾಮರು ಮಸಾಜ್ ಮಾಡುತ್ತಿದ್ದರು. ಸ್ನಾನಗೃಹದ ಒಳಗೆ, ದೇಹದ ಮಸಾಜ್‌ಗಾಗಿ ಎಲ್ಲಾ ಕಡೆ ಎಣ್ಣೆಗಳು, ಕ್ರೀಮ್‌ಗಳು ಮತ್ತು ಸುಗಂಧ ದ್ರವ್ಯಗಳನ್ನು ಇಡಲಾಗಿರುತ್ತಿತ್ತು. ʻಸೌನಾ ಬಾತ್‌ʼಗೆ ಹೋಗುವ ಮುನ್ನ ಗುಲಾಮರು ಅವರಿಗೆ 25 -30 ನಿಮಿಷಗಳ ಕಾಲ ಮಸಾಜ್ ಮಾಡುತ್ತಿದ್ದರು ಎಂದು ದಾಖಲಿಸಲಾಗಿದೆ.

ಸೌನಾಬಾತ್‌ ಸೌಲಭ್ಯ

ಇಲ್ಲಿ ಗುಲಾಮರು ಹಬೆ ತಯಾರಿಸಲು ಬೆಂಕಿ ಹಾಕುತ್ತಿದ್ದ ಪ್ರತ್ಯೇಕ ಕೊಠಡಿಗಳಿದ್ದವು. ಈ ಕೊಠಡಿಯಿಂದ ಬಿಸಿಯಾದ ಗಾಳಿಯು ಎರಡು ಹಂತದ ನೆಲದ ಕೆಳಭಾಗದಲ್ಲಿ ಹಾದುಹೋಗುತ್ತಿತ್ತು. ಏಕೆಂದರೆ ಈ ನೆಲವನ್ನು ಸಣ್ಣ ಕಂಬಗಳ ಆಧಾರದ ಮೇಲೆ ನಿರ್ಮಿಸಲಾಗಿತ್ತು ಮತ್ತು ಬಿಸಿ ಗಾಳಿಯು ಎರಡು ಗೋಡೆಗಳ ನಡುವೆ ಚಲಿಸುತ್ತಿತ್ತು. ಈ ರೀತಿ ಬಿಸಿ ಗಾಳಿಯ ಪರಿಚಲನೆಯಾಗಿ ಸಂಪೂರ್ಣ ಬಿಸಿಯಾದಾಗ, ಅವರು ಅಲ್ಲಿದ್ದ ನೀರಿನ ಕಾರಂಜಿಯನ್ನು ತೆರೆಯುತ್ತಿದ್ದರು. ನೀರು ನಿಧಾನವಾಗಿ ಬಿಸಿ ನೆಲದ ಮೇಲೆ ಬಿದ್ದಾಗ ಹಬೆ ಉತ್ಪತ್ತಿಯಾಗುತ್ತಿತ್ತು. ಈ ಹಬೆ ಸ್ನಾನದ ನಂತರ ಕೊನೆಗೆ 'ಫ್ರಿಜಿಡೇರಿಯಮ್', ಅಂದರೆ ತಣ್ಣೀರಿನ ಸ್ನಾನ. ಬಿಸಿ ನೀರಿನ ಸ್ನಾನದ ನಂತರ ಸ್ನಾಯುಗಳನ್ನು ಗಟ್ಟಿಗೊಳಿಸಲು ಮತ್ತು ದೇಹದ ರಕ್ತ ಚಲನೆಗಾಗಿ ಅವರು ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದರು. ಈ ಪದ್ಧತಿಯು ಇಂದಿಗೂ ರೂಢಿಯಲ್ಲಿದೆ.

ದಿ ಹೌಸ್ ಆಫ್ ವೆಟ್ಟಿ

'ದಿ ಹೌಸ್ ಆಫ್ ವೆಟ್ಟಿ' ಒಬ್ಬ ಶ್ರೀಮಂತ ವ್ಯಾಪಾರಿಯ ಮನೆ. ಇದು ಪೊಂಪೈನ ಐಷಾರಾಮಿ ಬಂಗಲೆಗಳ ಸಾಂಪ್ರದಾಯಿಕ ವಿನ್ಯಾಸವನ್ನು ತೋರಿಸುತ್ತದೆ. ಕಂಬಗಳಿಂದ ಕೂಡಿದ ವಿಶಾಲ ಸಭಾಂಗಣ, ಪೂಜಾ ಸ್ಥಳ, ಸುಂದರ ತೋಟವನ್ನು ಇದು ಒಳಗೊಂಡಿತ್ತು. ರೋಮನ್ನರ ಊಟದ ಕೋಣೆಯ ಗೋಡೆಯ ಮೇಲಿನ ಒಂದು ಚಿತ್ರವಿದೆ. ಅದರಲ್ಲಿ ಸಣ್ಣ ಕ್ಯುಪಿಡ್‌ಗಳು (ದೇವದೂತರಂಥ ಪುಟ್ಟ ಮಕ್ಕಳು), ನಗರದ ವ್ಯಾಪಾರ ಚಟುವಟಿಕೆಗಳಾದ ಹೂವುಗಳನ್ನು ಸಂಗ್ರಹಿಸುವುದು, ರಥದ ಮೇಲೆ ಸರಕುಗಳನ್ನು ಸಾಗಿಸುವುದು ಮತ್ತು ಸ್ಥಳೀಯ ವೈನ್ ಅನ್ನು ಆಸ್ವಾದಿಸುವುದನ್ನು ಚಿತ್ರಿಸುತ್ತದೆ.

ನಾವು ಪೊಂಪೈನ ಒಂದು ಮನೆಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಅಮೃತಶಿಲೆಯ ತುಂಡುಗಳಿಂದ ಅಲಂಕೃತ ಭವ್ಯ ನೆಲವನ್ನು ನೋಡಿದೆವು. ಇದು ಅಲೆಕ್ಸಾಂಡರ್‌ನ ರೋಚಕ ಯುದ್ಧದ ದೃಶ್ಯವನ್ನು ಪ್ರದರ್ಶಿಸುತ್ತಿತ್ತು. ಈ ಯುದ್ಧದಲ್ಲಿ, ಅಲೆಕ್ಸಾಂಡರ್ ಡೇರಿಯಸ್ ಮತ್ತು ಪರ್ಷಿಯನ್ನರನ್ನು ಸೋಲಿಸುತ್ತಾನೆ. ಇಲ್ಲಿ ಪರ್ಷಿಯನ್ನರ ಕಣ್ಣುಗಳಲ್ಲಿನ ಭಯ ಮತ್ತು ಅಲೆಕ್ಸಾಂಡರ್‌ನ ಏಕಾಗ್ರತೆ ಹಾಗೂ ದೃಢಸಂಕಲ್ಪವನ್ನು ಸ್ಪಷ್ಟವಾಗಿ ಕಾಣಬಹುದು. ನೆಲದ ಮೇಲಿನ ಈ ಕಲಾಕೃತಿಯ ಚಲನಶೀಲತೆ, ನೆರಳು-ಬೆಳಕಿನ ವಿನ್ಯಾಸ ಮತ್ತು ಪ್ರಮಾಣಬದ್ಧತೆ ಗಮನಾರ್ಹ. ಈ ಕಲೆಯನ್ನು 1500 ವರ್ಷಗಳ ನಂತರ ನವೋದಯ ಕಾಲದ ಕಲಾವಿದರು ಪುನಃ ಕಲಿತರು.

Untitled design (44)

ದುರಂತದ ನೆನಪಿನ ಕಲಾಕೃತಿಗಳು

ಕ್ರಿಶ 79ರ ಪೊಂಪೈನ ಆ ದಿನದ ಭೀಕರತೆ ಊಹಿಸಲೂ ಕಷ್ಟ. ಉತ್ಖನನದ ಸಮಯದಲ್ಲಿ ಪುರಾತತ್ವಶಾಸ್ತ್ರಜ್ಞರಿಗೆ ಜ್ವಾಲಾಮುಖಿ ಅವಶೇಷಗಳ ಅಡಿಯಲ್ಲಿ ಮಾನವರ ದೇಹಗಳು ಕೊಳೆತು ಸೃಷ್ಟಿಯಾಗಿದ್ದ ಕೆಲವು ಖಾಲಿ ಜಾಗಗಳು ಕಂಡುಬಂದವು. ಅವರು ಆ ಖಾಲಿ ಜಾಗಗಳಿಗೆ ದ್ರವ ಪ್ಲ್ಯಾಸ್ಟರ್ ಲೇಪಿಸಿದರು. ಅದು ಸತ್ತವರ ದೇಹದ ಆಕಾರವನ್ನು ಪಡೆಯಿತು. ನಂತರ, ಪುರಾತತ್ವಶಾಸ್ತ್ರಜ್ಞರು ಸುತ್ತಲಿದ್ದ ಎಲ್ಲಾ ಬೂದಿಯನ್ನು ಸ್ವಚ್ಛಗೊಳಿಸಿದಾಗ 2,000 ವರ್ಷಗಳ ಹಿಂದೆ ನಡೆದ ಈ ಘಟನೆ ಬಯಲಿಗೆ ಬಂದಿತು.

ಕ್ಯಾಪ್ರಿ

ಕ್ಯಾಪ್ರಿ ಎಂಬುದು ಸೊರೆಂಟೊ ಬಳಿ ಇರುವ ಸುಂದರ ಪ್ರವಾಸಿ ತಾಣ. ಇಲ್ಲಿನ 'ಬ್ಲೂ ಗ್ರಾಟೊ' ಎಂಬುದು ಸುಮಾರು 60 ಗಜ ಉದ್ದದ ಒಂದು ಗುಹೆಯಾಗಿದೆ. ಜೆಟ್ ಬೋಟ್ ನಮ್ಮನ್ನು ಈ ಸ್ಥಳಕ್ಕೆ ಕರೆದೊಯ್ಯಿತು. ಅದೊಂದು ಮರೆಯಲಾಗದ ಪ್ರಯಾಣ. ಸುಣ್ಣದಕಲ್ಲಿನ ಕಡಿದಾದ ಬಂಡೆಗಳ ನಡುವೆ, ಅಲ್ಲಿಗೆ ತಲುಪಿ, ಗುಹೆಯ ಒಳಗೆ ಹೋಗುವುದು ಮತ್ತು ಹಿಂತಿರುಗುವುದು ಅದ್ಭುತ ನೈಸರ್ಗಿಕ ದೃಶ್ಯ ವೈಭವವನ್ನು ನಮ್ಮ ಕಣ್ಣಮುಂದೆ ತೆರೆದಿಟ್ಟಿತ್ತು.

ದೋಣಿ ನಡೆಸುವವರು ನಮ್ಮನ್ನು ಆ ಪುಟ್ಟ ರಂಧ್ರದ ಮೂಲಕ ಗುಹೆಯೊಳಗೆ ಕರೆದೊಯ್ದರು. ಗುಹೆಯ ಪ್ರವೇಶದ್ವಾರವು ತುಂಬಾ ಚಿಕ್ಕದಾಗಿದೆ. ನಾವು ಸುರಕ್ಷಿತವಾಗಿ ದೋಣಿಯಲ್ಲಿ ತಲೆಬಾಗಿಸಿ ಕುಳಿತುಕೊಂಡೆವು. ಗುಹೆಯ ಒಳಗೆ, ಸೂರ್ಯನ ಕಿರಣಗಳು ಕೆಳಗಿನ ಸುಣ್ಣದಕಲ್ಲಿನ ನೆಲದ ಮೇಲೆ ಪ್ರತಿಫಲಿಸಿ ಇಡೀ ಗುಹೆಗೆ ಗಾಢವಾದ ನೀಲಿ ಬಣ್ಣವನ್ನು ನೀಡುತ್ತವೆ. ದೋಣಿ ನಡೆಸುವವರು ದೋಣಿಯನ್ನು ಮುನ್ನಡೆಸುತ್ತಾ. ‘ಓ ಸೋಲೆ ಮಿಯೋ’ (ಓ ನನ್ನ ಸೂರ್ಯನ ಬೆಳಕೇ) ಎಂಬ ಹಾಡನ್ನು ಹಾಡುತ್ತಿದ್ದರು. ಅದು ನಿಜಕ್ಕೂ ಪ್ರವಾಸಿಯನ್ನು ನೇಸರಕ್ಕೆ ಬೆಸೆಯುವ ಸಮಯ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...