ಚಂದಾ ಮಾಮನನ್ನು ಹುಡುಕುತ್ತಾ…
ಬಾಲ್ಯದಲ್ಲಿ ‘ಚಂದಾ ಮಾಮ ಓಡಿ ಬಾ’ ಎಂದು ಚಂದಿರನನ್ನು ಕರೆಯುತ್ತಿದ್ದ ನಾವು, ಒಂದು ದಿನ ಅದೇ ಚಂದಮಾಮನ ಅಂಗಳದಲ್ಲಿ ಮನುಷ್ಯ ಹೆಜ್ಜೆಯಿಡುತ್ತಾನೆಂದು ಊಹಿಸಿರಲಿಲ್ಲ. ಭೂಮಿಯಿಂದ ಚಂದ್ರನವರೆಗೆ ಸಾಗಿದ ಆ ರೋಚಕ ಸಾಹಸಯಾನದ ಹಿಂದಿನ ಕಥೆಯೇ ನೀಲ್ ಆರ್ಮ್‌ಸ್ಟ್ರಾಂಗ್ ಅವರ ಐತಿಹಾಸಿಕ ಪಯಣ!
- ನಂದಿನಿ ಪಟೇಲ್
ಎಲ್ಲಿಗೆ ಹೋದರು ಬರ್ತೀಯ
ಅಲ್ಲೇ ದೂರದಲಿ ಇರ್ತೀಯ
ಮೆಲ್ಲಗೆ ಸಣ್ಣಗೆ ಆಗ್ತೀಯಾ
ಹಿಂದೆ ಮುಂದೆ ಹೋಗ್ತೀಯ
ಚಂದಾ ಮಾಮ ಓಡಿ ಬಾ
ಚಂದದಿಂದ ಆಡು ಬಾ…
ಬಾಲ್ಯದಲ್ಲಿ ಚಂದಿರನನ್ನು ನೋಡುತ್ತಾ ಈ ಸಾಲುಗಳನ್ನು ಗುನುಗದವರೇ ವಿರಳ. ರಾತ್ರಿ ಆಕಾಶದಲ್ಲಿ ಮೂಡುವ ಬೆಳ್ಳಿಯ ಚೆಂಡು, ದಿನದಿಂದ ದಿನಕ್ಕೆ ರೂಪ ಬದಲಿಸುವ ಅದರ ಮೋಹಕತೆ, ಮೋಡಗಳ ನಡುವೆ ಮರೆಯಾಗುವ ಅದರ ಆಟ ಇವೆಲ್ಲವೂ ಮಕ್ಕಳ ಕಲ್ಪನಾಲೋಕದಲ್ಲಿ ಅಚ್ಚಳಿಯದ ನೆನಪುಗಳಾಗಿ ಉಳಿಯುತ್ತವೆ. ಅಂದು ಅಮ್ಮನ ಮಡಿಲಲ್ಲಿ ಕುಳಿತು ಚಂದಮಾಮನನ್ನು ಕರೆಯುತ್ತಿದ್ದ ನಮಗೆ, ಆಕಾಶದಲ್ಲಿರುವ ಚಂದ್ರನನ್ನು ಒಮ್ಮೆ ಹತ್ತಿರದಿಂದ ನೋಡುವ ಅವಕಾಶ ಸಿಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಆದರೆ, ಕನಸುಗಳಿಗೆ ಗಡಿಗಳಿಲ್ಲ. ಭೂಮಿಯಿಂದ ನೋಡಿದಾಗ ದೂರದ ಬೆಳ್ಳಿಯ ಗೋಳದಂತೆ ಕಾಣುತ್ತಿದ್ದ ಚಂದ್ರನ ಅಂಗಳಕ್ಕೆ ಮನುಷ್ಯನೇ ಕಾಲಿಟ್ಟ! ಬಾಲ್ಯದ ಕಲ್ಪನೆಯನ್ನು ವಿಜ್ಞಾನದ ವಾಸ್ತವವಾಗಿಸಿದ ಆ ಮಹಾಸಾಹಸದಲ್ಲಿ ಇತಿಹಾಸ ಬರೆದವರು ನೀಲ್ ಆರ್ಮ್‌ಸ್ಟ್ರಾಂಗ್. ಭೂಮಿಯ ಮಡಿಲಿನಿಂದ ಚಂದಮಾಮನ ಅಂಗಳದವರೆಗೆ ಸಾಗಿದ ಈ ಪಯಣ, ಮಾನವನ ಕುತೂಹಲ, ಸಾಹಸ ಮತ್ತು ಅಸಾಧ್ಯವನ್ನೂ ಸಾಧ್ಯವಾಗಿಸುವ ಛಲದ ಅದ್ಭುತ ಕಥೆ.
ಇದನ್ನೂ ಓದಿ: ಪ್ರತಿಯೊಬ್ಬನ ಮೊದಲ ಕನಸಿನ ತಾಣ ಈ ಚಂದಿರ
ಕನಸಿನಿಂದ ಶುರುವಾದ ಪಯಣ
1930ರ ಆಗಸ್ಟ್ 5ರಂದು ಅಮೆರಿಕದ ಓಹಿಯೋ ರಾಜ್ಯದ ವಾಪಕೋನೆಟಾದಲ್ಲಿ ಜನಿಸಿದ ನೀಲ್ ಆರ್ಮ್‌ಸ್ಟ್ರಾಂಗ್ ಬಾಲ್ಯದಿಂದಲೇ ವಿಮಾನಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಹದಿನಾರನೆಯ ವಯಸ್ಸಿನಲ್ಲಿ ಪೈಲಟ್ ಪರವಾನಗಿ ಪಡೆದ ಅವರು, ಮುಂದೆ ನೌಕಾಪಡೆಯ ಪೈಲಟ್ ಹಾಗೂ ಪರೀಕ್ಷಾರ್ಥ ವಿಮಾನ ಚಾಲಕರಾಗಿ ಅನುಭವ ಗಳಿಸಿದರು. ಅಪಾಯಕಾರಿ ವಿಮಾನಗಳನ್ನು ಹಾರಿಸಿದ ಅನುಭವ ಮತ್ತು ತಾಂತ್ರಿಕ ಜ್ಞಾನ ಅವರನ್ನು ಬಾಹ್ಯಾಕಾಶ ಯಾನಕ್ಕೆ ಸಿದ್ಧಗೊಳಿಸಿದವು. 1962ರಲ್ಲಿ ನಾಸಾದ ಗಗನಯಾನಿಗಳ ತಂಡಕ್ಕೆ ಆಯ್ಕೆಯಾದಾಗ, ಅವರ ಬದುಕು ಭೂಮಿಯ ಗಡಿಗಳನ್ನು ಮೀರಿ ಸಾಗುವ ಹೊಸ ದಿಕ್ಕನ್ನು ಕಂಡುಕೊಂಡಿತು.
ಚಂದ್ರನತ್ತ ಹೊರಟ ಸಾಹಸಿಗಳು
1969ರ ಜುಲೈ 16ರಂದು ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಪೋಲೊ–11 ನೌಕೆ ಆಕಾಶದತ್ತ ಚಿಮ್ಮಿತು. ನೀಲ್ ಆರ್ಮ್‌ಸ್ಟ್ರಾಂಗ್, ಬಜ್ ಆಲ್ಡ್ರಿನ್ ಮತ್ತು ಮೈಕೆಲ್ ಕಾಲಿನ್ಸ್ ಎಂಬ ಮೂವರು ಗಗನಯಾನಿಗಳು ಈ ಐತಿಹಾಸಿಕ ಪ್ರವಾಸದ ಪಯಣಿಗರು. ಬೃಹತ್ ಸ್ಯಾಟರ್ನ್–V ರಾಕೆಟ್ ಹೊತ್ತೊಯ್ದ ನೌಕೆ ಸುಮಾರು ನಾಲ್ಕು ದಿನಗಳ ಪ್ರಯಾಣದ ಬಳಿಕ ಚಂದ್ರನ ಕಕ್ಷೆಯನ್ನು ತಲುಪಿತು.
ಕಿಟಕಿಯಿಂದ ನೋಡಿದಾಗ ನೀಲಿ ಭೂಮಿ ಕ್ರಮೇಣ ದೂರವಾಗುತ್ತಿತ್ತು. ಸಮುದ್ರಗಳು, ಪರ್ವತಗಳು, ನಗರಗಳು ಎಲ್ಲವೂ ಒಂದೇ ಸುಂದರ ಗೋಳದಂತೆ ಕಾಣುತ್ತಿದ್ದವು. ಎದುರಿನಲ್ಲಿ ಕಲ್ಲುಗಳಿಂದ ಕೂಡಿದ ಬೂದುಬಣ್ಣದ ಚಂದ್ರನ ಮೇಲ್ಮೈ! ಪ್ರವಾಸವೆಂದರೆ ಹೊಸ ಸ್ಥಳಗಳನ್ನು ನೋಡುವುದಷ್ಟೇ ಅಲ್ಲ, ನಾವು ತಿಳಿದಿರುವ ಜಗತ್ತಿನಾಚೆ ಏನಿದೆ ಎಂಬುದನ್ನು ಅರಿಯುವ ಪ್ರಯತ್ನವೂ ಹೌದು ಎನ್ನುವುದಕ್ಕೆ ಈ ಯಾನವೇ ಸಾಕ್ಷಿ.

'ಈಗಲ್' ಇಳಿದ ಐತಿಹಾಸಿಕ ಕ್ಷಣ
ಜುಲೈ 20ರಂದು ಆರ್ಮ್‌ಸ್ಟ್ರಾಂಗ್ ಮತ್ತು ಆಲ್ಡ್ರಿನ್ 'ಈಗಲ್' ಎಂಬ ಚಂದ್ರಯಾನ ಘಟಕದಲ್ಲಿ ಚಂದ್ರನ ಮೇಲ್ಮೈಗೆ ಇಳಿಯಲು ಮುಂದಾದರು. ಇಳಿಯುವಾಗ ಕಂಪ್ಯೂಟರ್ ಎಚ್ಚರಿಕೆಗಳು ಕಾಣಿಸಿಕೊಂಡವು. ನಿಗದಿತ ಪ್ರದೇಶದಲ್ಲಿ ದೊಡ್ಡ ಕಲ್ಲುಗಳೂ ಇದ್ದವು. ಇಂಧನದ ಮಿತಿಯ ನಡುವೆಯೂ ಆರ್ಮ್‌ಸ್ಟ್ರಾಂಗ್ ನೌಕೆಯನ್ನು ಎಚ್ಚರಿಕೆಯಿಂದ ನಿಯಂತ್ರಿಸಿ ಸುರಕ್ಷಿತ ಸ್ಥಳದಲ್ಲಿ ಇಳಿಸಿದರು. ಚಂದ್ರನ 'ಸೀ ಆಫ್ ಟ್ರ್ಯಾಂಕ್ವಿಲಿಟಿ' ಪ್ರದೇಶದಲ್ಲಿ ನೌಕೆ ಇಳಿದಾಗ, ಭೂಮಿಯಲ್ಲಿದ್ದ ಕೋಟ್ಯಂತರ ಜನರ ಕುತೂಹಲಕ್ಕೆ ಉತ್ತರ ದೊರೆತಿತ್ತು.
ಕೆಲವೇ ಕ್ಷಣಗಳಲ್ಲಿ ಆರ್ಮ್‌ಸ್ಟ್ರಾಂಗ್ ಮೆಟ್ಟಿಲುಗಳ ಮೂಲಕ ಚಂದ್ರನ ನೆಲಕ್ಕೆ ಇಳಿದರು. ʼಒಬ್ಬ ಮನುಷ್ಯನಿಗೆ ಇದು ಒಂದು ಸಣ್ಣ ಹೆಜ್ಜೆ, ಮಾನವಕುಲಕ್ಕೆ ಇದು ಒಂದು ಮಹಾ ಜಿಗಿತʼ ಎಂಬ ಅವರ ಮಾತು ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಿತು. ಬಳಿಕ ಆಲ್ಡ್ರಿನ್ ಕೂಡ ಚಂದ್ರನ ಮೇಲ್ಮೈಗೆ ಬಂದು, ಇಬ್ಬರೂ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದರು. ಮೈಕೆಲ್ ಕಾಲಿನ್ಸ್ ಮುಖ್ಯ ನೌಕೆಯಲ್ಲಿ ಚಂದ್ರನ ಕಕ್ಷೆಯಲ್ಲಿ ಕಾಯುತ್ತಿದ್ದರು. ಜುಲೈ 24ರಂದು ಮೂವರೂ ಸುರಕ್ಷಿತವಾಗಿ ಭೂಮಿಗೆ ಮರಳಿದರು.
ಒಂದೇ ಹೆಜ್ಜೆ, ಅನಂತ ಸಾಧ್ಯತೆ!
ಚಂದ್ರನ ಮೇಲೆ ಮೂಡಿದ ಆ ಹೆಜ್ಜೆಗುರುತುಗಳು ಕೇವಲ ಒಬ್ಬ ಗಗನಯಾನಿಯ ಸಾಧನೆಯಲ್ಲ, ಮಾನವನ ಪರಿಶೋಧನಾ ಮನೋಭಾವದ ಸಂಕೇತ. ಪರ್ವತಗಳ ಶಿಖರದಿಂದ ಸಾಗರಗಳ ಆಳದವರೆಗೆ, ಹಿಮಪ್ರದೇಶಗಳಿಂದ ಬಾಹ್ಯಾಕಾಶದವರೆಗೆ ಮನುಷ್ಯನ ಪಯಣದ ಹಿಂದೆ ಒಂದೇ ಹಂಬಲವಿದೆ, ಹೊಸದನ್ನು ತಿಳಿಯಬೇಕು, ಕಾಣದ ಜಗತ್ತನ್ನು ಅನ್ವೇಷಿಸಬೇಕು.
ಬಾಲ್ಯದಲ್ಲಿ ಚಂದಮಾಮನನ್ನು ಓಡಿಬಾ ಎಂದು ಕರೆದಿದ್ದ ಮನುಷ್ಯ, ಒಂದು ದಿನ ಅವನ ಅಂಗಳದಲ್ಲೇ ಹೆಜ್ಜೆಗುರುತು ಮೂಡಿಸಿದ. ನೀಲ್ ಆರ್ಮ್‌ಸ್ಟ್ರಾಂಗ್ ಅವರ ಚಂದ್ರಯಾನ ಪ್ರವಾಸದ ನಿಜವಾದ ಅರ್ಥವನ್ನು ವಿಸ್ತರಿಸುತ್ತದೆ, ಗಮ್ಯಸ್ಥಾನ ಎಷ್ಟು ದೂರವಿದ್ದರೂ, ಕುತೂಹಲವೇ ಮೊದಲ ಹೆಜ್ಜೆ. ಜ್ಞಾನ ಮತ್ತು ಧೈರ್ಯವೇ ಅದನ್ನು ತಲುಪಿಸುವ ದಾರಿದೀಪಗಳು.